ಮಂಗಳವಾರ, ಸೆಪ್ಟೆಂಬರ್ 21, 2010

ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಮಾನ್ಯತೆ ರದ್ದು

ಅರಕಲಗೂಡು: ಪಟ್ಟಣದ ಪ್ರತಿಷ್ಟಿತ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮಾನ್ಯತೆಯನ್ನು ರದ್ದು ಪಡಿಸಲಾಗಿದ್ದು ಮುಂದಿನ ಪರ್ಯಾಯ ಕ್ರಮಗಳಿಗಾಗಿ ಪೋಷಕರ ತುರ್ತು ಸಭೆಯನ್ನು ಸೆ.23ರಂದೆಉ ಕರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಸೀತಾ ರಾಘವ ಎಜುಕೇಶನ್ ಸೊಸೈಟಿ(ರಿ) ವತಿಯಿಂದ ನಡೆಯುತ್ತಿರುವ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆಯನ್ನು ಇಲಾಖೆಯ ಅನುಮತಿಯಿಲ್ಲದೇ ಬೇರೆಡೆಗೆ ಸ್ಥಳಾಂತರಿಸಿರುವುದರಿಂದ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ತಕ್ಷಣದಿಂದ ಶಾಲೆಯ ಮಾನ್ಯತೆಯನ್ನು ಹಿಂಪಡೆದಿದ್ದಾರೆ. ಆದ್ದರಿಂದ ಸದರಿ ಶಾಲೆಯನ್ನ ತಕ್ಷಣದಿಂದ ಜಾರಿಗೆ ಬ ರುವಂತೆ ಮುಚ್ಚಲಾಗುತ್ತದೆ. ಶಾಲೆಯಲ್ಲಿ 8,9,10ನೇ ತರಗತಿ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಹತ್ತಿರದ ಬೇರೆ ಶಾಲೆಗಳಿಗೆ ದಾಖಲಿಸುವಂತೆ ಸೂಚಿಸಲಾಗಿದೆ, ಹಾಗೂ ಈ ಬಗ್ಗೆ ಕ್ರಮ ವಹಿಸಲು ಸೆ.23 ರಂದು ಬೆಳಿಗ್ಗೆ 10ಗಂಟೆಗೆ ಮಕ್ಕಳ ಪೋಷ ಕರಸಭೆಯನ್ನು ಶಾಲೆಯ ಸಭಾಂಗಣದಲ್ಲಿ ಕರೆಯಲಾಗಿದ್ದು ತಪ್ಪದೇ ಸಭೆಗೆ ಹಾಜರಾಗಲು ಪೋಷಕರನ್ನು ಕೋರಲಾಗಿದೆ.
ಆಕ್ಷೇಪ: ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಫಣೀಶ್ ಶಿಸ್ತಿನ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ, ಆದರೆ ಅವರನ್ನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮವೆಸಗಿದ್ದಾರೆಂದು ಅಮಾನತುಗೊಳಿಸಿರುವುದು ವಿಷಾಧನೀಯಕರ ಸಂಗತಿ ಎಂದು ನೌಕರ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ.

ಭಾನುವಾರ, ಸೆಪ್ಟೆಂಬರ್ 19, 2010

ಉದ್ಯೋಗ ಖಾತ್ರಿ ಕೂಲಿ ಬಿಡುಗಡೆಗೆ ಎಟಿಆರ್ ಆಗ್ರಹ

ಅರಕಲಗೂಡು/ಕೊಣನೂರು: ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ ಉದ್ಯೋಗ ಖಾತ್ರಿ ಕಾಮಗಾರಿ ಕೂಲಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಗ್ರಹಿಸಿದ್ದಾರೆ.
ಕೊಣನೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ತಾಲೂಕಿನಲ್ಲಿ 150ಕೋಟಿ ರೂಪಾಯಿಗಳಿಗೆ ಅಕ್ರಮವಾಗಿ ಎಂಬಿ ಬರೆದು ಕ್ರಿಯಾ ಯೋಜನೆ ಅನುಮೋದನೆ ಪಡೆಯದೇ ಸಪ್ಲೈ ಬಿಲ್ ಪಡೆದಿರುವ ಅಧಿಕಾರಿಗಳು ಮಸ್ಟರ್ ರೋಲ್ ತಯಾರಿಸಲು ಹಿಂದೇಟು ಹಾಕುತ್ತಿದ್ದಾರೆ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿರುವ ಕೂಲಿಕಾರರಿಗೆ ಕಳೆದ 6-7ತಿಂಗಳಿನಿಂದ ಕೂಲಿ ಪಾವತಿಯಾಗದೇ ಪರದಾಡುವಂತಾಗಿದೆ.ಅಧಿಕಾರಿಗಳು ಎಂಬಿ ಬರೆದು ಸಪ್ಲೈ ಬಿಲ್ ಪಡೆದುಕೊಂಡ ಮೇಲೆ ಕೂಲಿಕಾರರ ವೇತನವೂ ಪಾವತಿಯಾಗ ಬೇಕಲ್ಲವೇ ? ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳು ತಕ್ಷಣವೇ 150ಕೋಟಿಗೆ ಎಂಬಿ ಬರೆದಂತೆ ಮಸ್ಟರ್ ರೋಲ್ ಕೂಡ ತಯಾರಿಸಿ ಕೂಲಿಕಾರರಿಗೆ ಹಣ ಕೊಡಿಸಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದರು. ಜಾಬ್ ಕಾರ್ಡಿಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಿದಲ್ಲಿ ಕೇವಲ 22.80ಕೋಟಿ ವೆಚ್ಚ ಮಾಡಲು ಸಾಧ್ಯ. ಹೀಗಿರುವಾಗ 150ಕೋಟಿ ಅಂದಾಜ ಪಟ್ಟಿ ತಯಾರಿಸಿರುವ ಅಧಿಕಾರಿಗಳು 'ಅಭಿವೃದ್ದಿ' ಯನ್ನು ಚೆನ್ನಾಗಿಯೇ ಮಾಡಿದ್ದಾರೆ, ಕೆಲಸ ನಿರ್ವಹಿಸಿರುವ ಕೂಲಿ ಕಾರ್ಮಿಕರು ಮಾತ್ರ ಕೂಲಿ ಇಲ್ಲದೇ ನಿರಾಶರಾಗಿದ್ದಾರೆ ಎಂದು ಕಟಕಿಯಾಡಿದರು. ಅದಿಕಾರಿಗಳು ಮಾಡಿರುವ ತಪ್ಪಿನಿಂದ ಉದ್ಯೋಗ ಖಾತ್ರಿ ಹಣ ನಿಂತಿದೆ ಎಂಬ ಆರೋಪ ಕೇಳಿ ಬರುತ್ತಿದೆ, ಹಣ ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು ಕಳೆದ ಡಿಸೆಂಬರ್ ನಲ್ಲೆ ಕೇಂದ್ರ ಸರ್ಕಾರ ನಿಗದಿತ ಸಂಖ್ಯೆಗಿಂತ ದುಪ್ಪಟ್ಟಾಗಿದ್ದ ಉದ್ಯೋಗ ಚೀಟಿ ಹಾಗೂ ಅನಿಯಂತ್ರಿತ ವೆಚ್ಚ ಕುರಿತು ಅಧಿಕಾರಿಗಳಿಗೆ 2ಬಾರಿ ನೋಟೀಸ್ ನೀಡಿದೆ, ಅಕ್ರಮ ಮನದಟ್ಟಾಗುತ್ತಿದ್ದಂತೆ ಜನವರಿಯಿಂದ ಹಣ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರವೂ ಸೂಚಿಸಿದೆ ಆದರೂ ಸ್ವೇಚ್ಚಾಚಾರದಿಂದ ವರ್ತಿಸಿರುವ ಅಧಿಕಾರಿಗಳು ಹಣ ನಿಲುಗಡೆಗೆ ಕಾರಣರಾಗಿದ್ದಾರೆ ಈ ಕುರಿತು ಪ್ರತೀ ಹೋಬಳಿಗಳಲ್ಲೂ ಸಭೆ ನಡೆಸಿ ಜನರನ್ನು ಜಾಗೃತಗೊಳಿಸಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಶಾಸಕರಿಗೆ ಹೊಲ ಉತ್ತಿದ್ದರೆ ಕೂಲಿ ಕಾರರ ಕಷ್ಟ ತಿಳಿಯುತ್ತಿತ್ತು, ಸುಮ್ಮನೆ ಚಂಗಲು ಹೊಡೆದುಕೊಂಡು ಎಂಎಲ್ ಎ ಆಗಿದ್ರೆ ಏನು ಪ್ರಯೋಜನ? ಜೆಡಿಎಸ್ ಮುಖಂಡರ ವಿರುದ್ದ ಕರಪತ್ರ ಹೊರಡಿಸುವ ಮೂಲಕ ಷಂಡತನದ ರಾಜಕೀಯ ಮಾಡುತ್ತಿದ್ದಾರೆ, ಎಟಿಆರ್ ತಮ್ಮ ಆಸ್ತಿ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡುತ್ತಿದ್ದಾರೆ ಇದೀಗ ಸಾರ್ವಜನಿಕವಾಗಿಯೂ ನೀಡುತ್ತಿದ್ದಾರೆ ಎಂದು. ಹಿರಿಯ ರಾಜಕಾರಣಿ ಎ. ಮಂಜು ಭಾವ ಎಚ್ ಎನ್ ನಂಜೇಗೌಡರೇ, ಎ ಟಿ ರಾಮಸ್ವಾಮಿಯವರ ಪ್ರಾಮಾಣಿಕತೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಹೀಗಿರುವಾಗ ಶಾಸಕರು ಅನಗತ್ಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ, ಉದ್ಯೋ ಗಖಾತ್ರಿ ಅನುಷ್ಠಾನ ಮಾಡುವಾಗ ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸಿದ್ದಾರೆ ಆದರೆ ದುಡ್ಡುಕೊಡಿಸುವ ಯೋಗ್ಯತೆ ಇವರಿಗಿಲ್ಲ ಎಂದು ಕಿಡಿಕಾರಿದರು. ಕಾಮಗಾರಿ ನಿರ್ವಹಿಸಿದವರಿಗೆ ಕೆಲಸ ಕೊಡಬೇಡಿ ಅಂತ ಹೇಳಿಲ್ಲ, ಕರಪತ್ರ ಹಂಚಿದವರು ಏನು ಮಾಡಿದ್ದಾರೆ ಎಂಬುದು ತಿಳಿದಿದೆ ಸಾರ್ವತ್ರಿಕ ಚುನಾವಣೆ ಯನಂತರ ಪಕ್ಷದ ಬಲವರ್ಧನೆಗೊಂಡಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹೇಳಿದರು. ಮುಖಂಡ ಬೊಮ್ಮೇಗೌಡ ಮಾತನಾಡಿ ಸಾರ್ವಜನಿಕರ ಸಮಸ್ಯೆ ಕುರಿತು ಜನಸಾಮಾನ್ಯರ ಅಭಿಪ್ರಾಯಕ್ಕೆ ಮಾದ್ಯಮಗಳ ಸ್ಪಂದನೆಯಿಲ್ಲ, ಮುಖಂಡರುಗಳು ಮಾತನಾಡಿದರೆ ಮಾತ್ರ ಸುದ್ದಿ ಆಗುತ್ತಿದೆ ಇದು ಶೋಚನೀಯ ಎಂದರು. ಮುತ್ತಿಗೆ ರಾಜೇಗೌಡ ಮಾತನಾಡಿ ಎಟಿಆರ್ ಅನಾಮಧೇಯ ಪತ್ರಕ್ಕೆ ಬೆಲೆ ಕೊಡಬೇಕಾದ ಅಗತ್ಯ ಇರಲಿಲ್ಲ, ಎಟಿಆರ್ ಛಲದಿಂದಾಗಿ ಉದ್ಯೋಗ ಖಾತ್ರಿ ಯ ಅಕ್ರಮ ಬಯಲಿಗೆ ಬಂದಿದೆ ಎಂದರಲ್ಲದೇ ನೈಜವಾಗಿ ಕೆಲಸವಾಗಿದ್ದರೆ ಕೂಲಿಕಾರರ ವೇತ ನಬಿಡುಗಡೆ ಮಾಡಲಿ ಎಂದರು. ಮುಖಂಡರಾದ ಸಾದಿಕ್ ಸಾಬ್ ಮಾತನಾಡಿ ತಾಲೂಕಿನಲ್ಲಿ ಕೆಲವು ದಿನಗಳಿಂದ ಪಟ್ಟಭದ್ರ ಹಿತಾಸಕ್ತಿಯೊಂದು ಕಾರ್ಯನಿರ್ವಹಿಸುತ್ತಿದೆ, ಅಕ್ರಮವಾಗಿ ಸಂಪತ್ತು ಕ್ರೋಢೀಕರಿಸಿಕೊಂಡ ವ್ಯಕ್ತಿಯೋರ್ವ ರೈತರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಅಂತಹವರ ಕುಯುಕ್ತಿಗೆ ಯಾರೂ ಬಲಿಯಾಗಬಾರದು ಎಂದರು.

ಶನಿವಾರ, ಸೆಪ್ಟೆಂಬರ್ 18, 2010

ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿದರೆ ಅದು ಅಭಿವೃದ್ದಿ ವಿರೋಧ ಹೇಗೆ? -ಎಟಿಆರ್





'ನಾನು ಜನರ ಕೂಲಿ ದುಡ್ಡು ನಿಲ್ಲಿಸಿ ಎಂದು ಹೇಳುತ್ತಿಲ್ಲ,ಅಭಿವೃದ್ದಿಗೆ ಅಡ್ಡಗಾಲಾಗುತ್ತಿಲ್ಲ ಆದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರ ದುಡ್ಡು ಲೂಟಿ ಮಾಡಿದ ಇಂಜಿನಿಯರುಗಳಿಗೆ ಬುದ್ದಿಕಲಿಸಿ, ತಿಂದ ಹಣ ವಸೂಲಿ ಮಾಡಿ ಎಂದು ಹೇಳುತ್ತಿದ್ದೇನೆ ಹೀಗೆ ಕೇಳುವುದು ತಪ್ಪಾ? ಜನರ ದುಡ್ಡು ಕೋಟಿ ಕೋಟಿಗಳಲ್ಲಿ ಲೂಟಿಯಾಗುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಬೇಕಾ?ಎಂದು ಪ್ರಶ್ನಿಸಿದ್ದು ಮಾಜಿ ಶಾಸಕ ಹಾಗೂ ಅಕ್ರಮ ಭೂ ಒತ್ತುವರಿ ಜಂಟಿ ಸದನ ಸಮಿತಿಯ ಮಾಜಿ ಅಧ್ಯಕ್ಷ ಎ ಟಿ ರಾಮಸ್ವಾಮಿ. ತಾಲೂಕಿನ ಕೊಣನೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ದಿಗೆ-ಶಿಕ್ಷಣಕ್ಕೆ-ಮೂಲಭೂತ ಸೌಕರ್ಯಾಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು ಅಂದು ಮಂಜೂರಾದ ಕಾಮಗಾರಿಗಳು ಈಗಲೂ ನಡೆಯುತ್ತಿವೆ. ಪ್ರಸಕ್ತ ಸಂಧರ್ಭದಲ್ಲಿ ನಾವು ವಿರೋಧ ಪಕ್ಷವಾಗಿದ್ದೇವೆ, ಇಂತಹ ಸನ್ನಿವೇಶದಲ್ಲಿ ನಮ್ಮ ಜವಾಬ್ದಾರಿ ಏನು?ಬಡವರ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಗಮನ ನೀಡಬೇಕಾಗಿದೆ ಜನರಿಗೆ ನ್ಯಾಯ ಒದಗಿಸಬೇಕಾಗಿದೆ ಅದಕ್ಕಾಗಿ ಪಕ್ಷದ ಸಂಘಟನೆಯನ್ನು ಭದ್ರ ಪಡಿಸುವ ಕೆಲಸ ಮಾಡಬೇಕಾಗಿದೆ ಆ ಮೂಲಕ ಸಾರ್ವನಿಕರ ಹಿತ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಹೀಗಿರುವಾಗ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡವರ-ಕೂಲಿ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಅನುಷ್ಟಾನ ವಾಗಬೇಕಾಗಿದೆ ಆದರೆ ಸದರಿ ಯೋಜನೆಯನ್ನು ಅಧಿಕಾರಿಗಳು ಹಳ್ಳ ಹಿಡಿಸಿದ್ದಾರೆ ಕೆಲಸ ಮಾಡಿದ ಕೂಲಿ ಕಾರ್ಮಿಕರನ್ನು ವ್ಯವಸ್ಥಿತವಾಗಿ ವಂಚಿಸಿದ್ದಾರೆ ಇದನ್ನು ಪ್ರಶ್ನಿಸಿದರೆ ಭ್ರಷ್ಟಾಚಾರವನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳು ಕೂಲಿ ಕಾರರ ಹೆಸರಿನಲ್ಲಿ ನಮ್ಮ ವಿರುದ್ದ ಅಪಪ್ರಚಾರದ ಕರಪತ್ರ ಹೊರಡಿಸುವ ನೀಚ ಕೆಲಸ ಮಾಡುತ್ತಾರೆ, ಒಂದು ರೀತಿಯಲ್ಲಿ ಇದು ನನಗೆ ಒಳ್ಳೆಯದೇ ಆಗಿದೆ. ವ್ಯಕ್ತಿಗತವಾಗಿ ನನ್ನ ವಿರುದ್ದ ಮಾಡಿರುವ ಆರೋಪಗಳಿಗೆ ನಾನು ಸ್ಪಷ್ಟ ಉತ್ತರವನ್ನು ಹೇಳುತ್ತೇನೆ, ನಾನು ರಾಜಕೀಯ ಪ್ರವೇಶಿಸುವ ಮುನ್ನವೇ ನನ್ನ ಸಾರ್ವಜನಿಕ ವ್ಯವಹಾರ-ವಹಿವಾಟುಗೆ ತಿಲಾಂಜಲಿ ಹೇಳಿ ಪ್ರಾಮಾಣಿಕವಾಗಿ ಜನಸೇವೆ ಮಾಡುವ ಬದ್ದತೆ ಇಟ್ಟುಕೊಂಡಿದ್ದೇನೆ. ಅಕ್ರಮವಾಗಿ ಆಸ್ತಿಪಾಸ್ತಿ ಮಾಡುವ, ಸ್ವಜನ ಪಕ್ಷಪಾತ ಮಾಡುವ ದರ್ದು ನನಗಿಲ್ಲ, ಪಾಪದ ಅನ್ನ ಉಂಡು ನನ್ನ ರಕ್ತದಲ್ಲಿ ಸೇರಿಲ್ಲ, ನನಗೆ ನೈತಿಕತೆ ಇದೆ ಎಂದು ನುಡಿದ ಅವರು ವಿರೋಧಿಗಳು ಆಪಾದಿಸುವಂತೆ ನಾನು ಯಾವುದೇ ತೋಟ ಮಾಡುವುದರಲ್ಲಿ ಬೇರೆಯವರೊಂದಿಗೆ ಪಾಲುದಾರಿಕೆ ಹೊಂದಿಲ್ಲ, ರಸ್ತೆ ಕೆಲಸದ ಕಂಟ್ರಾಕ್ಟಿನಲ್ಲಿ ಪಾಲಿಲ್ಲ, ಬೆಂಗಳೂರಿನಲ್ಲಿ ಯಾವುದೇ ಅಕ್ರಮ ಲೇಔಟ್ ವ್ಯವಹಾರದಲ್ಲಿ ಶಾಮೀಲಾಗಿಲ್ಲ ಆದರೆ ರಾಜಕೀಯ ದ್ವೇಷ, ಅಸೂಯೆ ಹೊಟ್ಟೆಕಿಚ್ಚಿನಿಂದ ನನ್ನ ವಿರುದ್ದ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದರು. ಉದ್ಯೋಗ ಖಾತ್ರಿಯಲ್ಲಿ ಜನ ಕೆಲಸ ಮಾಡಿ ದುಡ್ಡು ತಿಂದಿದ್ದರೆ ನಾನು ಕೇಳುತ್ತಿರಲಿಲ್ಲ ಆದರೆ ಜನರ ಹೆಸರಿನಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ವ್ಯವಸ್ಥೆಯನ್ನೆ ಕತ್ತಲಲ್ಲಿಟ್ಟು ದುಡ್ಡು ಹೊಡೆದಿದ್ದಾರಲ್ಲ ಅಧಿಕಾರಿಗಳು ಅವರನ್ನೇನು ಮಾಡಬೇಕ್ರಿ ? 50ಕೋಟಿಗೂ ಹೆಚ್ಚು ವೆಚ್ಚವನ್ನು ಮಣ್ಣಿಗೆ ಹಾಕಿದ್ದೇವೆಂದು ಹೇಳುತ್ತಾರಲ್ಲ ಯಾವ ಮಣ್ಣಿಗೆ ದುಡ್ಡು ಕೊಟ್ಟಿದ್ದಾರೆ ಅಧಿಕಾರಿಗಳು, ಒಂದೆ ಕೆಲಸಕ್ಕೆ 3-4ಬಿಲ್ಲುಗಳನ್ನು ಮಾಡಿಕೊಂಡು ಲೂಟಿ ಹೊಡೆದಿದ್ದಾರಲ್ಲ ಅವರನ್ನ ಕೇಳೋದು ಬೇಡವೇನ್ರಿ ?100ಮಂದಿಯ ಜಾಬ್ ಕಾರ್ಡಿಗೆ 10ಲಕ್ಷ ವೆಚ್ಚ ಮಾಡಲು ಸಾಧ್ಯ ಆದರೆ 1.50ಕೋಟಿಯ ಬಿಲ್ ತೋರಿಸುತ್ತಾರೆ ಇದು ಹೇಗೆ ಸಾಧ್ಯ?ಕೆಲಸವೇ ಆಗದೆ ಬಿಲ್ಲುಗಳನ್ನು ನೀಡಿದ್ದಾರೆ, 23ಕೋಟಿ ನಿಗದಿಯಾಗಿದ್ದರೂ ಅಕ್ರಮವಾಗಿ 150ಕೋಟಿಗೆ ಎಷ್ಟಿಮೇಟ್ ತಯಾರಿಸಿ ಸಪ್ಲೈ ಬಿಲ್ಲು ಪಡೆದಿದ್ದಾರೆ ಹೀಗಿರುವಾಗ ತಪ್ಪು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೇ ಕೂತಿದ್ದರೆ ಅದನ್ನು ತಪ್ಪು ಎನ್ನುತ್ತೀರಿ ತಪ್ಪನ್ನು ಎತ್ತಿ ತೋರಿಸಿದರೆ ರಾಮಸ್ವಾಮಿಯಿಂದ ುದ್ಯೋಗ ಖಾತ್ರಿ ದುಡ್ಡು ನಿಂತಿದೆ ಎನ್ನುತ್ತೀರಿ ಹಾಗಾದರೆ ನಾನು ಏನು ಮಾಡಬೇಕು ನೀವೆ ಹೇಳಿ ಎಂದು ಪ್ರಶ್ನಿಸಿದ ಅವರು ತಪ್ಪನ್ನು ಪ್ರಶ್ನಿಸಲು ಹತಾಶ ಪರಿಸ್ಥಿತಿ ನಿರ್ಮಾಣವಾಗಬಾರದು ಹಾಗಾದರೆ ಅದು ಪ್ರಜಾತಾಂತ್ರಿಕ ವ್ಯವಸ್ಥೆಯ ಕಗ್ಗೊಲೆ ಆಗುತ್ತದೆ ಆದ್ದರಿಂದ ಜನರು ಜಾಗೃತರಾಗಬೇಕು ಪಕ್ಷದ ಕಾರ್ಯ ಕರ್ತರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಈ ಬೃಹತ್ ಆಂಧೋಲನ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮ ನಡೆಸಿದ ಖದೀಮರುಗಳು ಒಟ್ಟಾಗಿ ತಮ್ಮ ವಿರುದ್ದ ಅಪ್ಪ-ಅಮ್ಮ ಇಲ್ಲದ ಕರಪತ್ರ ಹೊರಡಸಿದ್ದಾರೆ, ಅಂತಹವರು ತಾಯಿಯ ಎದೆ ಹಾಲು ಕುಡಿದು ಜನಿಸಿದ್ದರೆ ಎದುರಿಗೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದ ಅವರು ಉದ್ಯೋಗ ಖಾತ್ರಿ ಅಕ್ರಮ ಪ್ರಶ್ನಿಸಿದ್ದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ ಎಂದರು. ತಮ್ಮ ವಿರುದ್ದ ಮಾಡಲಾಗಿರುವ ಆರೋಪ ಹುರುಳಿಲ್ಲದ್ದು ಜೈಲಿಗೆ ಹೋಗಿ ಬಂದವನ್ನನ್ನು ತಾ.ಪಂ. ಅಧ್ಯಕ್ಷನನ್ನಾಗಿ ಮಾಡಲಾಗಿದೆ ಎಂದು ದೂರಲಾಗಿದೆ. ನಾನು ಪ್ರಕರಣವೊಂದರಲ್ಲಿ ವ್ಯವಸ್ಥೆಯ ತಪ್ಪು ತಿಳುವಳಿಕೆಯಿಂದ ಜೈಲಿಗೆ ಹೋಗಿದ್ದು ನಿಜ, ಸದರಿ ವಿಚಾರವಾಗಿ ವಿಚಾರಣೆ ನಡೆದು ನ್ಯಾಯಾಲಯ ನನ್ನನ್ನು ದೋಷ ಮುಕ್ತ ಗೊಳಿಸಿದೆ ಆದರೆ ರಾಜಕೀಯ ದುರುದ್ದೇಶದಿಂದ ತಿಳಿಗೇಡಿಗಳು ಅಪಪ್ರಚಾರ ನಡೆಸಿದ್ದಾರೆ ಇಂತಹ ಅಪ ಪ್ರಚಾರಗಳಿಗೆ ನಾನು ಅಂಜುವುದಿಲ್ಲ ಭ್ರಷ್ಠಾಚಾರದ ವಿರುದ್ದ ನನ್ನ ಹೋರಾಟ ಮುಂದುವರೆಸುತ್ತೇನೆ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಿ ಲೂಟಿಆಗಿರುವ ಸಾರ್ವಜನಿಕರ ಹಣ ಕಕ್ಕಿಸುವವರೆಗೂ ವಿಶ್ರಮಿಸುವುದಿಲ್ಲ ಎಂದರು. ಭ್ರಷ್ಟಾಚಾರ ಪ್ರಶ್ನಿಸಿದರೆ ಅಭಿವೃದ್ದಿಗೆ ಅಡ್ಡಗಾಲಾಗಿದ್ದಾರೆ ಎಂದು ಆರೋಪಿಸುವ ಕ್ಷೇತ್ರದ ಶಾಸಕರು ತಾಲೂಕಿನ ಜನ ಸಾಂಕ್ರಾಮಿಕ ರೋಗಕ್ಕೆ ಸಿಲುಕಿದಾಗ ಜನರ ಕಷ್ಟಸುಖ ಕೇಳಲು ಬರಲಿಲ್ಲ ಬದಲಿಗೆ ಯಾವ ಯಾವ ಯೋಜನೆಯಲ್ಲಿ ಎಷ್ಟು ಹಣ ಬಂದಿದೆ ? ಹಣ ಬಂದ ವಿಚಾರ ನನಗೇಕೆ ತಿಳಿಸಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾ ಬಳ್ಳಾರಿಗೆ ಪಾದಯಾತ್ರೆ ಹೋಗಿದ್ದರು ಇಂತಹವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಹೊನ್ನವಳ್ಳಿ ಸತೀಶ್, ಕುಮಾರಸ್ವಾಮಿ ಜಿ.ಪಂ ಸದಸ್ಯರಾದ ಶಂಕರ್, ಮುಖಂಡರಾದ ಬೊಮ್ಮೇಗೌಡ, ಮುತ್ತಿಗೆ ರಾಜೇಗೌಡ, ದೊಡ್ಡೇಗೌಡ, ಸಾದಿಕ್ ಸಾಬ್ ಮಾತನಾಡಿದರು.

ಧೃಢೀಕೃತ ಬಿತ್ತನೆ ಬೀಜ ದಿಂದ ರೋಗಮುಕ್ತ ಬಂಪರ್ ಬೆಳೆ:ಪೊಟ್ಯಾಟೋ ಕ್ಲಬ್
ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ತಾಲೂಕಿನ ವಿವಿದೆಡೆ ವಿತರಿಸಲಾಗಿರುವ ಧೃಡೀಕೃತ ಬಿತ್ತನೆ ಬೀಜದಿಂದ ಬೆಳೆಯಲಾಗಿರುವ ಆಲೂಗಡ್ಡೆ ಜಮೀನುಗಳಿಗೆ ಭೇಟಿ ನೀಡಿದ ತೋಟಗಾರಿಕೆ ಅಧಿಕಾರಿಗಳು ಅತ್ಯುತ್ತಮ ಬೆಳೆ ಬಂದಿರುವುದನ್ನು ಧೃಢೀಕರಿಸಿದ್ದಾರೆ.
ಕ್ಲಬ್ ವತಿಯಿಂದ ಸುಮಾರು 600ಟನ್ ಗಳಷ್ಟು ಧೃಢೀಕೃತ ಾಲೂ ಬಿತ್ತನೆ ಬೀಜವನ್ನು ಪಂಜಾಬ್ ನಿಂದ ತರಿಸಿ ರೈತರಿಗೆ ನೀಡಲಾಗಿತ್ತು ಹಾಗೂ ಅವುಗಳ ಕೃಷಿ ಪದ್ದತಿಯನ್ನು ಕಾಲಾನುಕಾಲಕ್ಕೆ ಗಮನಿಸಲಾಗಿತ್ತು ಅಗತ್ಯ ಸಂಧರ್ಭದಲ್ಲಿ ಉಚಿತವಾಗಿ ಔಷಧಿಗಳನ್ನು ಸಹಾ ನೀಡಲಾಗಿತ್ತು. ಪರಿಣಾಮವಾಗಿ ತಾಲೂಕಿನ ಕಸಬಾ ಹೋಬಳಿಯ ಕಳ್ಳಿಮುದ್ದನಹಳ್ಳಿ, ದೇವೀಪುರ ಮತ್ತಿತರೆಡೆಗಳಲ್ಲಿ ಪ್ರತೀ ಎಕರೆಗೆ 14-15ಟನ್ ಆಲೂಗಡ್ಡೆ ದೊರೆತಿದೆ. ಪ್ರತೀ ಗಿಡದಲ್ಲೂ 8-10ಆಲೂಗಡ್ಡೆ ಫಸಲು ಬಿಟ್ಟಿದೆ ಅಷ್ಟೆ ಅಲ್ಲ ಯಾವುದೇ ರೋಗವು ಬೆಳೆಯನ್ನು ಭಾದಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಅಧಿಕಾರಿ ನವೀನ್ ಹಾಗೂ ದೊಡ್ಡೇಗೌಡ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕಿನಾದ್ಯಂತ ಈ ಭಾರಿ ಒಟ್ಟಾರೆಯಾಗಿ 1500ಹೆಕ್ಟೇರುಗಳಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ, ಕಳೆದ ವರ್ಷಕ್ಕಿಂತ 300ಹೆಕ್ಟೇರು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ಇದೆ. ಆದರೆ ರೈತರ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಶೇ.70ರಷ್ಟು ಬೆಳೆ ಕಾಯಿಲೆಯಿಂದ ಹಾಳಾಗಿದೆ, ಇಲಾಖೆಯಿಂದ ಸೂಚಿಸಿದ ಮಾರ್ಗಸೂಚಿಯನ್ವಯ ಕೃಷಿ ಕೆಲಸ ನಿರ್ವಹಿಸಿಲ್ಲ ಎಂದರು. ಸಾಧಾರಣವಾಗಿ ಪ್ರತಿ ಹೆಕ್ಟೇರಿಗೆ 10ಟನ್ ಆಲೂಗಡ್ಡೆ ಸಿಗುತ್ತದೆ ಆದರೆ ಕ್ಲಬ್ ವತಿಯಿಂದ ನಿರ್ವಹಿಸಿರುವ ಪ್ರದೇಶದಲ್ಲಿ ಉತ್ತಮ ಫಸಲು ಇಳುವರಿ ದೊರೆತಿದೆ ಎಂದರು. ತಾಲೂಕಿನಲ್ಲಿ ಈ ಭಾರಿ ಪೆಪ್ಸಿ ಆಲೂಬೀಜ ಬಿತ್ತನೆ ಆಗಿಲ್ಲ ಬದಲಿಗೆ ಉತ್ತಮ ಇಳುವರಿ ನೀಡುವ ಕುಫ್ರಿ ಜ್ಯೋತಿ ತಳಿ ಬಿತ್ತನೆ ಮಾಡಲಾಗಿದೆ ಇದು ಇಲ್ಲಿನ ಹವಾಗುಣ ಮತ್ತು ಮಣ್ನಿಗೆ ಹೊಂದಾಣಿಕೆಯಾಗಿದೆ ಎಂದರು. ಕಳ್ಳಿಮುದ್ದನಹಳ್ಳಿ ಲೋಕೇಶ್ ಅವರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿದ ಸಂಧರ್ಭದಲ್ಲಿ ಪೊಟ್ಯಾಟೋ ಕ್ಲಬ್ ಉಪಾಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.


ಶುಕ್ರವಾರ, ಸೆಪ್ಟೆಂಬರ್ 10, 2010

ಉದ್ಯೋಗ ಖಾತ್ರಿ ಅಕ್ರಮ: ಅಧಿಕಾರಿಗಳ ಅಮಾನತ್ತಿಗೆ ಸ್ವಾಗತ

ಸೋಮನಹಳ್ಳಿಗೆ ನೂತನ ಸಾರಿಗೆ ಮಾರ್ಗಕ್ಕೆ ನಿಶಾನೆ
ಅರಕಲಗೂಡು: ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ನೂತನ ಸಾರಿಗೆ ಸಂಪರ್ಕ ವ್ಯವಸ್ಥೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಶನಿವಾರ ಚಾಲನೆ ನೀಡಿದರು.ಸೋಮನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಭಾಗದ ಅಭಿವೃದ್ದಿಗೆ ಸಂಪರ್ಕ ವ್ಯವಸ್ಥೆ ಅತ್ಯವಶ್ಯಕವಾಗಿದೆ, ಸರ್ಕಾರ ಹಲವು ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳ ಮೂಲಬೂತ ಸೌಕರ್ಯಾಭಿವೃದ್ದಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕೈಗೊಂಡಿದೆ, ಈ ಹಿಂದಿನ ದಶಕಗಳಿಗಿಂತ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ ಆದ್ದರಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಹಾಯವಾಗಿದೆ ಮುಖ್ಯವಾಗಿ ರೈತರು, ವಿದ್ಯಾರ್ಥಿಗಳಿಗೆ ಈ ಮಾರ್ಗದ ಪ್ರಯೋಜನವಾಗಲಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅರಕಲಗೂಡು ಡಿಪೋ ವ್ಯವಸ್ಥಾಪಕ ರವೀಂದ್ರ ಮಾತನಾಡಿ ಅರಕಲಗೂಡಿನಿಂದ ಸೋಮನಹಳ್ಳಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಬೆಳಿಗ್ಗೆ 8-30ಕ್ಕೆ ಅರಕಲಗೂಡಿನಿಂದ ಹೊರಡಲಿದೆ, ಅದೇ ರೀತಿ ಸಂಜೆ 4-30ಕ್ಕೆ ಮತ್ತೆ ಅದೇ ಮಾರ್ಗವಾಗಿ ಸಂಚರಿಸಲಿದೆ ಎಂದರು. ಈ ಮಾರ್ಗದ ಸಾರಿಗೆ ಸಂಪರ್ಕಕ್ಕಾಗಿ ಕರವೇ ಮುಖಂಡ ತಾಜೀಂ ಪಾಶ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲೆಯ ಹಿರಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸದ್ದರು, ಇದನ್ನು ಪುರಸ್ಕರಿಸಿದ ಅಧಿಕಾರಿಗಳು ಗೌರಿ-ಗಣೇಶ ಹಬ್ಬದಂದೇ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ.ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಸಾರಿಗೆ ಸೌಲಭ್ಯದ ಸ್ವಾಗತ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಈರೇಗೌಡ, ಸದಸ್ಯರಾದ ಸುರೇಶ್, ಅನ್ವರ್, ತಾಲೂಕು ಕರವೇ ಗೌರವಾಧ್ಯಕ್ಷ ಕೃಷ್ಣೇಗೌಡ,ಮುಖಂಡರಾದ ಅಜೀಂ ಸಾಬ್, ಸಾದಿಕ್ ಸಾಬ್, ಸಂಚಾರ ನಿಯಂತ್ರಕ ನಿತ್ಯಾನಂದ ಹಾಜರಿದ್ದರು.
ಉದ್ಯೋಗ ಖಾತ್ರಿ ಅಮಾನತ್ತು ಸ್ವಾಗತ
ಅರಕಲಗೂಡು: 'ಉದ್ಯೋಗ ಖಾತ್ರಿ' ಅಕ್ರಮದಲ್ಲಿ ಭಾಗಿಯಾಗಿರುವ ಜಿಲ್ಲಾ ಪಂಚಾಯ್ತಿ ಇಂಜಿನಿಯರುಗಳು ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಅಮಾನತ್ತು ಮಾಡಿರುವ ಸರ್ಕಾರದ ಕ್ರಮವನ್ನು ಭಾರತೀಯ ಜನತಾ ಪಕ್ಷದ ರೈತ ಘಟಕದ ಅಧ್ಯಕ್ಷ ವಸಂತಕುಮಾರ್ ಸ್ವಾಗತಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಿಗಳು ಸ್ವೇಚ್ಚಾಚಾರದಿಂದ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಿದ್ದು ಕೂಲಿಕಾರರಿಗೆ ವಂಚನೆ ಮಾಡಿದ್ದಾರೆ, ನಕಲಿ ಜಾಬ್ ಕಾರ್ಡು, ಎಸ್ಟಿಮೇಟು ಹಾಗೂ ಬಿಲ್ಲುಗಳನ್ನು ತಯಾರಿಸಿ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಈ ನಿಟ್ಟಿನಲ್ಲಿ ಇಲಾಖೆಯ ಸಚಿವರಾದ ಜಗದೀಶ್ ಶೆಟ್ಟರ್ ಅಕ್ರಮ ಸಾಬಿತಾಗಿರುವುದರಿಂದ ಅಧಿಕಾರಿಗಳನ್ನು ಅಮಾನತ್ತು ಪಡಿಸಿದ್ದಾರೆ, ಇನ್ನೂ ಹಲವು ಮಂದಿ ಇಂಜಿನಿಯರುಗಳು ಮತ್ತು ಪಂಚಾಯ್ತಿ ಕಾರ್ಯದರ್ಶಿಗಳು ಉದ್ಯೋಗ ಖಾತ್ರಿ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಅವರುಗಳನ್ನು ಸಹಾ ಅಮಾನತ್ತು ಗೊಳಿಸಿ ಯೋಜನೆಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯ ಬೇಕೆಂದು ಮನವಿ ಮಾಡಿರುವ ಅವರು ರಾಜ್ಯ ಸರ್ಕಾರ ಬಡಜನರ ಹಿತಾಸಕ್ತಿಯಿಂದ ಇಂತಹ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.






ಸೋಮವಾರ, ಸೆಪ್ಟೆಂಬರ್ 6, 2010

ಉದ್ಯೋಗ 'ಅಕ್ರಮ' ಖಾತ್ರಿ,ಮೂವರು ಅಧಿಕಾರಿಗಳು ಅಮಾನತ್ತು

ಹಾಸನ/ಅರಕಲಗೂಡು: ಜಿಲ್ಲೆಯಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮಕ್ಕಾಗಿ ತಾಲೂಕಿನ ಮೂವ್ವರು ಅಧಿಕಾರಿಗಳು ಮೊದಲ ಬಾರಿಗೆ ಅಮಾನತ್ತಾಗಿದ್ದಾರೆ. ಆ ಮೂಲಕ ಉದ್ಯೋಗ ಖಾತ್ರಿ ಅಕ್ರಮದ ಖಾತೆ ತೆರೆದಂತಾಗಿದ್ದು ಇನ್ನೂ ಹಲವು ಮಂದಿ ಅಧಿಕಾರಿಗಳು ಹಾಗೂ ನೌಕರರು ಅಮಾನತ್ತಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ತಾಲ್ಲೂಕಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ತಾಲೂಕುಗಳಲ್ಲು ಉದ್ಯೋಗ 'ಅಕ್ರಮ' ಖಾತ್ರಿ ಇದೆ ಆದ್ದರಿಂದ ಇಡೀ ಯೋಜನೆಗೆ ಕೇಂದ್ರದ ಸ್ವಾಮ್ಯದ ಸ್ವತಂತ್ರ ಸಂಸ್ಥೆ ಸಮಗ್ರ ತನಿಖೆ ನಡೆಸದಲ್ಲಿ ಹಲವು ಮಂದಿ ನೌಕರರು/ಅಧಿಕಾರಿಗಳು ಮನೆಗೆ ಹೋಗುವುದು ಗ್ಯಾರಂಟಿಯಾಗಲಿದೆ. ಕೆಲ ವರ್ಷಗಳ ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿನ ಅಕ್ರಮದಿಂದ 39ಮಂದಿ ಗೆಜೆಟೆಡ್ ದರ್ಜೆಯ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ ಮುದ್ದೆ ಮುರಿಯುತ್ತಾ 3ದಿಂಗಳ ಕಾರಾಗೃಹ ವಾಸ ಕಂಡಿದ್ದರು, ಈಗ ಅದು ಪುನರಾವರ್ತನೆಯಾಗಲಿದೆಯೇ ಕಾದು ನೋಡಬೇಕು.
ಪತ್ರಿಕೆಗೆ ಈ ಮಾಹಿತಿ ನೀಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ನಮ್ಮ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು. ಸೆ.1 ರಿಂದಲೇ ಅನ್ವಯವಾಗುವಂತೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಫಣೀಶ್, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಮತ್ತು ಕಿರಿಯ ಅಭಿಯಂತರ ನಿಂಗೇಗೌಡ ಮೊದಲ ಹಂತದಲ್ಲಿ ಅಮಾನತ್ತಾದ ಅಧಿಕಾರಿಗಳಾಗಿದ್ದಾರೆ ಎಂದು ಅವರು ತಿಳಿಸಿದರು. ಇಂದು ಜಿ.ಪಂ. ನಲ್ಲಿ ನಡೆದ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಇಡೀ ಜಿಲ್ಲೆಗೆ 150ಕೋಟಿ ರೂಗಳ ಕ್ರಿಯಾ ಯೋಜನೆಯನ್ನು ಅನುಮೋದನೆ ನೀಡಲಾಗಿದೆ, ಸದರಿ ಕ್ರಿಯಾ ಯೋಜನೆಯ ಕೆಲಸ ಜನವರಿಯಲ್ಲೇ ಮುಗಿದಿದೆ ಎಂದು ನುಡಿದ ಅವರು ಅರಕಲಗೂಡಿನಲ್ಲಿ ಕಳೆದ ವರ್ಷ 22.80ಕೋಟಿ ರೂಗೆ ಕ್ರಿಯಾ ಯೋಜನೆ ವೆಚ್ಚ ನಿಗದಿ ಯಾಗಿತ್ತಾದರೂ ಅಧಿಕಾರಿಗಳು 150ಕೋಟಿ ರೂಗಳ ಕ್ರಿಯಾ ಯೋಜನೆ ತಯಾರಿಸಿದ್ದಲ್ಲದೇ ಜಿಲ್ಲಾ ಪಂಚಾಯ್ತಿಯ ಇಂಜಿನಿಯರುಗಳು ಶೇ.40 ಸಪ್ಲೈ ಬಿಲ್ ಗಳನ್ನು ಪಡೆದಿದ್ದರು ಆದರೆ ಕೂಲಿ ಕಾರರ ಹಣ ಬಿಡುಗಡೆ ಆಗಿರಲಿಲ್ಲ, ನಕಲಿ ಜಾಬ್ ಕಾರ್ಡು, ನಕಲಿ ಎಸ್ಟಿಮೇಟ್, ಸುಳ್ಳು ಎಂಬಿಗಳನ್ನು ವ್ಯಾಪಕವಾಗಿ ಬರೆಯಲಾಗಿದೆ ಇದನ್ನೆಲ್ಲ ಗಮನಿಸಿದ ಕೇಂದ್ರದ ಅಧಿಕಾರಿಗಳು ಡಿಸೆಂಬರ್ ನಲ್ಲೇ ವ್ಯತ್ಯಾಸದ ಕುರಿತು ನೋಟೀಸ್ ನೀಡಿ ವಿವರ ಕೇಳಿದ್ದರು ಆದರೆ ತಪ್ಪಿಗೆ ಸಿಕ್ಕಿ ಬಿದ್ದ ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡಿ ತಾಲ್ಲೂಕಿನಿಂದಲೇ ತರಾತುರಿಯಲ್ಲಿ ವರ್ಗಾವಣೆ ಮಾಡಿಸಿ ಕೊಂಡಿದ್ದರು, ಈ ಹಂತದಲ್ಲಿ ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಧಾನ ಸೌಧದಲ್ಲಿ ಪ್ರತಿಭಟನೆ ನಡೆಸಿ ಇಲಾಖೆಗೆ ದೂರು ನೀಡಿದ ಪರಿಣಾಮ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಅಕ್ರಮ ಧೃಢವಾಗುತ್ತಿದ್ದಂತೆ ಮುಂದಿನ ತನಿಖೆ ಕಾಯ್ದಿರಿಸಿ ತಾ.ಪಂ. ಇ ಓ , ಇಂಜಿನಿಯರುಗಳನ್ನು ಅಮಾನತ್ತು ಗೊಳಿಸಿದ್ದಾರೆ ಈ ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಸಹಾ ಪಾಲ್ಗೊಂಡಿರುವುದರಿಂದ ಅವರ ಮೇಲೂ ಕ್ರಮವನ್ನು ನಿರೀಕ್ಷಿಸಲಾಗುತ್ತಿದೆ ಎಂದರು. ಇಡೀ ಪ್ರಕರಣ ಸಮಗ್ರವಾಗಿ ತನಿಖೆಯಾಗಬೇಕು ತಪ್ಪಿತಸ್ಥರೆನಿಸಿದ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಮತ್ತು ಕೂಲಿಕಾರರನ್ನು ವಂಚಿಸಿದ ಹಣವನ್ನು ಅವರಿಂದ ಕಕ್ಕಿಸಬೇಕು ಎಂದರು ಮಾದೇಶ್ ನುಡಿದರು. ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೇತೃತ್ವದಲ್ಲಿ ನಡೆಸಿ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ತೆಗೆದುಕೊಂಡಿದೆ ಮುಂದೆಯೂ ಹೀಗೆ ಕಾರ್ಯ ನಿರ್ವಹಿಸಿ ತಪ್ಪಿತಸ್ಥರನ್ನು ಬಲಿಹಾಕಲಿ, ಇದು ಅಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ ಎಂದು ಹೇಳಿದ ಅವರು ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.

ಶನಿವಾರ, ಸೆಪ್ಟೆಂಬರ್ 4, 2010

ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ

ಅರಕಲಗೂಡು: ಸರ್ಕಾರದ ಸಂವಿದಾನ ಬದ್ದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಭ್ರಷ್ಟಾಚಾರದಿಂದಾಗಿ ಸಾರ್ವಜನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಷಾಧಿಸಿದ್ದಾರೆ. ಪಟ್ಟಣದಲ್ಲಿ ಏರ್ಪಾಡಾಗಿದ್ದ ಜೆಡಿಎಸ್ ಪಕ್ಷದ ಸಭೆ ಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ನಿಯಂತ್ರಿಸಲಾಗದಷ್ಟು ಮಟ್ಟಿಗೆ ವ್ಯಾಪಿಸಿದೆ, ಈ ವ್ಯವಸ್ಥೆಯ ಸುಧಾರಣೆಗೆ ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತೇನೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು, ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಕ್ಷದ ಬಲ ವೃದ್ದಿಸಿದೆ, ಗ್ರಾ.ಪಂ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸುವ ಸಲುವಾಗಿ ಇಂದು ಕಾರ್ಯಕ್ರಮ ನಡೆಸುತ್ತಿದ್ದೇವೆ 15ದಿನಗಳ ಮುಂಚೆಯೇ ಕಾರ್ಯಕ್ರಮಕ್ಕಾಗಿ ಶಿಕ್ಷಕರ ಭವನವನ್ನು ಅಧಿಕೃತವಾಗಿ ಪಡೆಯಲಾಗಿದೆ ಆದರೆ ಇಂತಹ ಕಾರ್ಯಕ್ರಮಕ್ಕೂ ಅಧಿಕಾರ ಶಾಹಿ ಅಡ್ಡಿ ಪಡಿಸಿತು ಎಂದರು. ಶಿಕ್ಷಕ ಸಮುದಾಯದ ಸಹಕಾರದಿಂದ ಅಡ್ಡಿ ನಿವಾರಣೆಯಾಗಿದೆ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದು ನುಡಿದರು.
ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳ ಕುರಿತು ಮಾತನಾಡಿದ ಅವರು ತಾಲೂಕಿನಲ್ಲಿ ನನ್ನಿಂದಾಗಿ ಕೂಲಿಕಾರರ ಹಣ ನಿಂತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಇದು ಸರಿಯಲ್ಲ, ಕಣ್ಣೆದುರಿಗೆ ಅಕ್ರಮ ನಡೆಯುತ್ತಿದ್ದರೆ ನೋಡಿಕೊಂಡು ಕುಳಿತಿರಲು ಸಾಧ್ಯವಿಲ್ಲ. ಜನರ ತೆರಿಗೆ ದುಡ್ಡನ್ನು ಇಂಜಿನಿಯರುಗಳು ಲೂಟಿ ಮಾಡುತ್ತಿದ್ದರೆ ಸಹಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು ಇಂಜಿನಿಯರುಗಳಿಗೆ ಅನ್ನ ತಿನ್ನಿ ಎಂದರೆ ಭ್ರಷ್ಟಾಚಾರ ನಡೆಸುವ ಮೂಲಕ ಮಣ್ಣುತಿನ್ನುವ ಕೆಲಸ ಮಾಡಿದ್ದಾರೆ, ಇಂತಹದ್ದನ್ನು ಪ್ರಶ್ನೆ ಮಾಡಲು ಹತಾಶ ಸ್ಥಿತಿ ಬರಬಾರದು, ಅಂತಹ ಸ್ಥಿತಿ ಎದುರಾದರೆ ಪ್ರಜಾಪ್ರಭುತ್ವದ ಕಗ್ಗೊಲೆ ಆದಂತೆ ಆಗುತ್ತದೆ ಇದಕ್ಕೆ ಅವಕಾಶ ಮಾಡಬೇಡಿ ಎಂದು ಮನವಿ ಮಾಡಿದರು.ಉದ್ಯೋಗ ಖಾತ್ರಿ ಯೋಜನೆಗೆ ಯಾವ ಪುಣ್ಯಾತ್ಮ ಮಹಾತ್ಮ ಗಾಂಧಿ ಹೆಸರಿಟ್ಟನೋ ಗೊತ್ತಿಲ್ಲ ಇದಕ್ಕೆ ಚಂಬಲ್ ಕಣಿವೆಯ ಡಕಾಯಿತರ ಹೆಸರನ್ನು ಇಲ್ಲವೇ ವೀರಪ್ಪನ್ ಹೆಸರನ್ನಿಟ್ಟಿದ್ದರೆ ಚೆನ್ನಾಗಿತ್ತು, ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನಿಟ್ಟು ಅಪಮಾನವೆಸಗಲಾಗಿದೆ, ವ್ಯಾಪಕ ಅಕ್ರಮದ ತವರು ಉದ್ಯೋಗ ಖಾತ್ರಿ ಯೋಜನೆಯಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತು ಇಂಜಿನಿಯರುಗಳು ಇಡೀ ತಾಲೂಕಿನ ಜನಸಾಮಾನ್ಯರಿಗೆ ಮಣ್ಣುತಿನ್ನಿಸಿದ್ದಾರೆ, ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆಗಳು ತಯಾರಾಗಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆಗೊಳ್ಳಬೇಕು ಆದರೆ ಆ ಪ್ರಕ್ರಿಯೆಗಳು ನಡೆದಿಲ್ಲ, ಇಡೀ ಯೋಜನೆಯಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮದ ಸಾಕ್ಷ್ಯ ಇದೆ ಪ್ರಜಾ ರಾಜ್ಯದಲ್ಲಿ ಇಂಜಿನಿಯರುಗಳು ಮನಸ್ಸೊ ಇಚ್ಚೆ ವರ್ತಿಸುವ ಮೂಲಕ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಎಂದರು. ತಾಲೂಕಿಗೆ ನಿಗದಿಯಾದ ಅನುದಾನಕ್ಕಿಂತ ಹೆಚ್ಚಿಗೆ ಅಂದರೆ 150ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ 3ಕೋಟಿ ಸಪ್ಲೈ ಬಿಲ್ ಗಳನ್ನು ಡ್ರಾ ಮಾಡಲಾಗಿದೆ, ಕೆರೆ-ಕಟ್ಟೆಗಳ ಕೆಲಸವನ್ನು ಪೂರ್ಣಗೊಳಿಸದೇ ಎಂಬಿ ಬರೆಯಲಾಗಿದೆ, ನಕಲಿ ಜಾಬ್ ಕಾರ್ಡುಗಳನ್ನು ಸೃಷ್ಟಿಸಲಾಗಿದೆ ಆ ಮೂಲಕ ಅಮಾಯಕ ಜನರನ್ನು ವಂಚಿಸಲಾಗಿದೆ ಇದನ್ನು ಪ್ರಶ್ನಿಸಿದ್ದು ತಪ್ಪೇ? ಪ್ರಶ್ನಿಸಿದರೆ ಅಭಿವೃದ್ದಿ ನಿಂತು ಹೋಗುತ್ತಾ? ವಿಧಾನ ಸಭೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡಿದರಲ್ಲ, ಆಗ ಅಭಿವೃದ್ದಿ ನಿಂತು ಹೋಗಿತ್ತಾ ಎಂದು ಹಾಲಿ ಶಾಸಕರನ್ನು ಪರೋಕ್ಷವಾಗಿ ಚುಚ್ಚಿದ ಎಟಿಆರ್ ನನ್ನ ಹೋರಾಟದ ಉದ್ದೇಶ ಹಾಗೂ ಕಳಕಳಿಯನ್ನು ಅರಿಯಿರಿ ಎಂದರು. ನನ್ನ ಅಣ್ಣನ ಮಗನೇ ಬನ್ನೂರಿನಲ್ಲಿ ಅಧ್ಯಕ್ಷನಾಗಿದ್ದಾನೆ ಅಲ್ಲಿಂದಲೇ ಅಕ್ರಮಗಳ ತನಿಖೆ ಆರಂಭವಾಗಲಿ ಸಂತೋಷಿಸುತ್ತೇನೆ, ಪಟ್ಟಾಭಿರಾಮ ಶಾಲೆಯ ುದ್ಯೋಗ ಖಾತ್ರಿ ಕೆಲಸದ ಬಗ್ಗೆ ಕೇಳಬೇಕಿತ್ತು ಎಂದು ಹೇಳುವವರು ತಾವೇ ಅ ಬಗ್ಗೆ ಪ್ರಶ್ನಿಸಬಹುದಿತ್ತಲ್ಲವೇ ? ತಪ್ಪು ಯಾರು ಮಾಡಿದರೂ ತಪ್ಪೇ, ನಾನು ಆ ಪಾರ್ಟಿ ಈ ಪಾರ್ಟಿ ಎಂದು ಎಲ್ಲೂ ಹೇಳಿಲ್ಲ ಆದರು ನನ್ನ ಬಗ್ಗೆ ಸಣ್ಣತನದ ಆರೋಪ ಮಾಡಲಾಗಿದೆ ಸಣ್ಣತನ ನನ್ನ ಜಾಯಮಾನದಲ್ಲೇ ಇಲ್ಲ ನೈತಿಕತೆ ಇದ್ದರೆ ಅದನ್ನು ಅರಿತುಕೊಳ್ಳಲಿ ಎಂದರು. ಮಾನವೀಯತೆ ದೃಷ್ಟಿಯಿಂದ ತಾಳಿಬಾಳಿ ಹೋಗುತ್ತಿದ್ದೇನೆ, ಇತ್ತೀಚೆಗೆ ರಾಮನಾಥಪುರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ದೇಶದ್ರೋಹಿಯನ್ನು ಜೊತೆಗಿಟ್ಟುಕೊಂಡು ಓಡಾಡುವ ಇವರಿಂದ ನಾನು ಕಲಿಯಬೇಕಾದುದೇನಿಲ್ಲ, ನನ್ನಲ್ಲಿ ಪಾಪದ ರಕ್ತವಿಲ್ಲ ಶುದ್ಧ ರಕ್ತವಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಅಕ್ರಮದ ತೀವ್ರತೆ ಎಷ್ಟಿದೆ ಎಂದರೇ ಗ್ರಾಮ ಪಂಚಾಯ್ತಿಯೊಂದರ ಮಹಿಳಾ ಕಾರ್ಯದರ್ಶಿಯೋರ್ವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರಿಶೀಲನೆಗೆ ಬಂದಿದ್ದಾಗ ಖಾತ್ರಿ ಯೋಜನೆಯಲ್ಲಿ ಶೇ.1ರಷ್ಟು ಕೆಲಸವೂ ಆಗಿಲ್ಲ, ನಾನು ಆತ್ಮಹತ್ಯೆ ಮಾಡ್ಕೋತೀನಿ ಎಂದರು ಇದಕ್ಕಿಂತ ಹೆಚ್ಚಿಗೆ ಬೇರೇನೂ ಹೇಳಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಮಾತನಾಡಿದ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಬಾಲಕೃಷ್ಣ ತಾಲೂಕಿನ ಅಧಿಕಾರಿಗಳಿಗೆ ಟೋಪಿ ಹಾಕಿದ್ದಾರೆ ಆ ಮೂಲಕ ಜನತೆಯನ್ನು ವಂಚಿಸಿದ್ದಾರೆ ಎಂದರು. ತಾಲೂಕಿನಲ್ಲಿ ಕಳೆದ ವರ್ಷಕ್ಕೆ 22.80ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಮಾಡಬೇಕಿತ್ತು ಆದರೆ ಬಾಲಕೃಷ್ಣರ ಕುಮ್ಮಕ್ಕಿನಿಂದ 300ಕೋಟಿಗೆ ಬೇಕಾಬಿಟ್ಟಿ ಕ್ರಿಯಾ ಯೋಜನೆ ಮಾಡಲಾಗಿದೆ 15ಒಕೋಟಿಗೆ ಅನುಮೋದನೆ ನೀಡಿ 3ಕೋಟಿ ಸಪ್ಲೈ ಬಿಲ್ ಪಡೆಯಲಾಗಿದೆ ಈ ಕುರಿತು ಕೇಂದ್ರ ಸರ್ಕಾರ ಡಿಸೆಂಬರ್ ಅಂತ್ಯದಲ್ಲೇ ನೋಟೀಸ್ ನೀಡಿ ಉದ್ಯೋಗ ಚೀಟಿ 1:6 ಆಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಯೋಜನೆಯನ್ನು ಸ್ಥಗಿತಗೊಳಿಸಿತ್ತು ಆದರೆ ಇದನ್ನು ಸರಿಪಡಿಸಲಾಗದ ಅಧಿಕಾರಿಗಳು ಸಾಮೂಹಿಕ ವರ್ಗಾವಣೆಗೆ ಸಂಚು ರೂಪಿಸಿದ್ದರು ಈ ಮಾಹಿತಿ ತಿಳಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಜುಲೈ ತಿಂಗಳಿನಲ್ಲಿ ದೂರು ನೀಡಿದರು ಆಗ ಇಂಜಿನಿಯರುಗಳ ಅಕ್ರಮ ಬೆಳಕಿಗೆ ಬಂದಿದೆ ಎಂದರು. ಆದರೆ ರಾಮಸ್ವಾಮಿ ಯೋಜನೆಯ ದುಡ್ಡು ನಿಲ್ಲಿಸಿದ್ದಾರೆ ಎಂಬ ಆರೋಪ ಸರಿಯಾದುದಲ್ಲ ಜನರಿಗೆ ದಕ್ಕಬೇಕಾಗಿದ್ದ ಯೋಜನೆಯಲ್ಲಿ ಹಣ ಲೂಟಿ ಆಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯವೇ ಇಲ್ಲ ಇಂಜಿನಿಯರುಗಳಿಂದ ಜನರ ಕೂಲಿ ಹಣ ನಿಂತಿದೆ ಅವರನ್ನು ಶಿಕ್ಷಿಸಬೇಕು ಮತ್ತು ಹಣ ವಸೂಲು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ, ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ,ಮತ್ತಿತರ ಮುಖಂಡರು ಮಾತನಾಡಿದರು.
ಆರೋಪ: ತಾಲೂಕು ಕಛೇರಿ ಆವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಭಾಗವಹಿಸದೇ ಸ್ಥಳೀಯ ಸಂಸ್ಥೆಯ ಜೆಡಿಎಸ್ ಪ್ರತಿನಿಧಿಗಳು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಪ.ಪಂ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ. ಜೆಡಿಎಸ್ ಸದಸ್ಯರುಗಳಿಗೆ ಜನರ ಸಮಸ್ಯೆಗಳಿಗಿಂತ ಪಕ್ಷದ ಸಭೆ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.

ಶುಕ್ರವಾರ, ಸೆಪ್ಟೆಂಬರ್ 3, 2010

ನೈಮತುಲ್ಲಾ ಷರೀಫ್ ಗೆ ಅಮೇರಿಕಾ ವಿ.ವಿ ಪಿಎಚ್ ಡಿ


ಅರಕಲಗೂಡು: ಇಲ್ಲಿಗೆ ಸಮೀಪದ ಗೊರೂರು ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ನೈಮತುಲ್ಲಾ ಷರೀಫ್ ಗೆ ಅಮೇರಿಕ ದೇಶದ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.
ನೈಮತುಲ್ಲಾ ಷರೀಫ್ ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕರಾಗಿದ್ದು "ಇಂಡೋ ಪರ್ಶಿಯನ್ ಸಿಂಥಸಿಸ್ ಡ್ಯೂರಿಂಗ್ ಮೆಡೀವಲ್ ಪೀರಿಯಡ್(1206 ಎಡಿ ನಿಂದ 1707 ಎಡಿ) ಎ ಕ್ರಿಟಿಕಲ್ ಸ್ಟಡಿ" ಎಂಬ ಮಹಾ ಪ್ರಬಂಧವನ್ನು ಅಮೇರಿಕಾ ದೇಶದ ಗೋಲ್ಡನ್ ಗೇಟ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ವಿಶ್ವ ವಿದ್ಯಾಲಯವು ಅವರ ಪ್ರಬಂಧಕ್ಕೆ ಮಾನ್ಯತೆ ನೀಡಿ ಪಿಎಚ್ ಡಿ ಪದವಿ ನೀಡಿದೆ. ಡಾಡಬ್ಲ್ಯೂ.ಪಿ. ಮಾರ್ಟಿನ್ ಪ್ರಬಂದ ರಚನೆಗೆ ಮಾರ್ಗದರ್ಶನ ನೀಡಿದ್ದರು.
ಶ್ರಾವಣ ಪೂಜೆ: ಪಟ್ಟಣದ ವಾಸವಿ ವನಿತಾ ಸಂಘದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಛತ್ರದಲ್ಲಿ ಲಕ್ಷ್ಮೀ ವೆಂಕಟೇಶ್ವರಮಣ ಸ್ವಾಮಿ ಹಾಗೂ 7ಬೆಟ್ಟದ ಪೂಜೆಯನ್ನು ಲೋಕಕಲ್ಯಾಣಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಪಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆ: ತಾಲೂಕಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಎಲ್ಲಾ ಶಿಕ್ಷಕರೂ ಕಡ್ಡಾಯವಾಗಿ ಹಾಜರಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮನವಿ ಮಾಡಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಖ್ಯಾತ ರಂಗಕರ್ಮಿ ಹಾಗೂ ಚಿತ್ರನಟ ಪ್ರೊಪೆಸರ್ ಪಿ.ಎಸ್. ಲೋಹಿತಾಶ್ವ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಎ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಜನಸಂಪರ್ಕ ಸಭೆ : ತಾಲೂಕು ಕಸಬಾ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಸೆ.4 ರಂದು ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆಯಲಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ತಹಸೀಲ್ದಾರ್ ಸವಿತಾ ಜನಸ್ಪಂದನ ಸಭೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸ ಬೇಕೆಂದು ಮನವಿ ಮಾಡಿದ್ದಾರೆ.
ನೂತನ ಕಟ್ಟಡ ನಿರ್ಮಾಣದ ಭರವಸೆ
ಅರಕಲಗೂಡು: ಗೊರೂರು ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡವನ್ನು ತಮ್ಮ ಅವಧಿಯಲ್ಲೆ ನಿರ್ಮಿಸುವ ಬದ್ದತೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದ್ಯಾವೇಗೌಡ ಹೇಳಿದ್ದಾರೆ. ಇಂದು ಗೊರೂರು ಗ್ರಾಮಕ್ಕೆ ಅಧಿಕೃತ ಭೇಟಿ ನೀಡಿದ್ದ ಅವರು ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ದಿಯನ್ನು ಪರಿಶೀಲಿಸಿದರು, ಇದೇ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸಲು ಅತ್ಯಂತ ಕಿರಿದಾಗಿದ್ದ ಪಂಚಾಯ್ತಿ ಕಟ್ಟಡವನ್ನು ಗಮನಿಸಿ ತಮ್ಮ ಅವಧಿಯಲ್ಲಿಯೇ ಗೊರೂರು ಗ್ರಾಮ ಪಂಚಾಯ್ತಿಗೆ ನೂತನ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದರು. ಉಪಾಧ್ಯಕ್ಷರ ಜೊತೆ ಹಾಸನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅನಂತರಾಜು, ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಪ್ರಶಾಂತ್ ಮತ್ತು ಪಂಚಾಯ್ತಿ ಸದಸ್ಯರುಗಳು ಹಾಗೂ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮಣಿ ಇದ್ದರು.

ಗುರುವಾರ, ಸೆಪ್ಟೆಂಬರ್ 2, 2010

ಅರಕಲಗೂಡಿನಲ್ಲಿ ರಾಧಾ-ಕೃಷ್ಣರ ಸಮಾವೇಶ



ಅರಕಲಗೂಡು: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದಲ್ಲಿ ರಾಧಾ-ಕೃಷ್ಣ ವೇಷದಾರಿಗಳ ಸಮಾವೇಶ ನಿವೇದಿತಾ ಶಾಲೆಯ ಆಶ್ರಯದಲ್ಲಿ ಏರ್ಪಾಟಾಗಿತ್ತು. ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಸಮಾವೇಶದಲ್ಲಿ 100ಕ್ಕೂ ಅಧಿಕ ರಾಧಾ-ಕೃಷ್ಣರ ವೇಷಧಾರಿ ಮಕ್ಕಳು ಪಾಲ್ಗೊಂಡಿದ್ದರು. 1ರಿಂದ 7ನೇ ತರಗತಿಯವರೆಗಿನ ಮಕ್ಕಳು ವಿವಿಧ ರೀತಿಯ ಉಡುಗೆ ಧರಿಸಿ ರಾಧ-ಕೃಷ್ಣರಾಗಿ ಕಂಗೊಳಿಸಿದರು, ಮುಸಲ್ಮಾನ ಭಾಂಧವರ ಮಕ್ಕಳು ಸಹಾ ಕೃಷ್ಣ-ರಾಧೆಯ ವೇಷಧರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಇದೇ ಸಂಧರ್ಭದಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಸಹಾ ಏರ್ಪಾಟಾಗಿತ್ತು. ಸಮಾವೇಶವನ್ನು ವಾಸವಿ ಮಹಿಳಾ ಸಮಾಜದ ಪದ್ಮಾವತಮ್ಮ ಉದ್ಘಾಟಿಸಿದರು. ರಾಗಿಣಿ-ಅಕ್ಷತಾ ಪ್ರಾರ್ಥಿಸಿ, ನಂದಿನಿ ಸ್ವಾಗತಿಸಿದರು, ಲತಾ ವಂದಿಸಿ ರಂಜಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣ ವೇಷಧಾರಿ ವಿಜೇತರ ವಿವರ: ತೇಜಸ್ ಎಸ್ ಕಶ್ಯಪ್ (ಪ್ರಥಮ) ಜ್ಯೋತಿ ಆಂಗ್ಲಶಾಲೆ, ಶ್ರೀರಾಂ(ದ್ವಿತಿಯ) ನಿವೇದಿತಾ ಶಾಲೆ, ಪೃಥ್ವಿ (ತೃತೀಯ). ರಾಧೆ ವೇಷಧಾರಿ ವಿಜೇತರು: ಪರ್ವಿತ(ಪ್ರಥಮ), ಮಾನ್ಯ ಎಚ್. ಎಂ(ದ್ವಿತಿಯ), ಮೇಘ(ತೃತೀಯ). ಭಗವದ್ಗೀತೆ ಕಂಠಪಾಠ ವಿಜೇತರು: ಮೇಘನಾ(ಪ್ರಥಮ),ಅನುಕೌಶಿಕ್(ದ್ವಿತಿಯ)ಸುರಭಿ ಎಂ(ತೃತಿಯ).

ಅರಕಲಗೂಡು: ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಸಭೆ ಸೆಪ್ಟಂಬರ್ 4ರಂದು ಬೆಳಿಗ್ಗೆ 11ಗಂಟೆಗೆ ಶಿಕ್ಷಕರ ಭವನದಲ್ಲಿ ಏರ್ಪಾಟಾಗಿದೆ ಎಂದು ಜೆಡಿಎಸ್ ಮುಖಂಡ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ಅಂದಿನ ಸಭೆಗೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯ ಸಭಾ ಸದಸ್ಯ ಎಚ್ ಕೆ ಜವರೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಎಂ ಸಿ ರಂಗಸ್ವಾಮಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗೆ ರಾಜೆಗೌಡ, ಮತ್ತಿತರ ಜೆಡಿಎಸ್ ಮುಖಂಡರು ಭಾಗವಹಿಸುವರು, ಮಾಜಿ ಶಾಸಕ ಎ ಟ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದ್ದಾರೆ.

ಗೋಹತ್ಯೆ ಪ್ರತಿಭಟನೆ: ಗೋ ಹತ್ಯೆ ಕಾಯ್ದೆಗೆ ಅಂಕಿತಾ ಹಾಕುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಘಟಕ ಸೆ.3ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಮುಖಂಡ ಕೇಶವೇಗೌಡ ತಿಳಿಸಿದ್ದಾರೆ.