ಶುಕ್ರವಾರ, ಸೆಪ್ಟೆಂಬರ್ 3, 2010

ನೈಮತುಲ್ಲಾ ಷರೀಫ್ ಗೆ ಅಮೇರಿಕಾ ವಿ.ವಿ ಪಿಎಚ್ ಡಿ


ಅರಕಲಗೂಡು: ಇಲ್ಲಿಗೆ ಸಮೀಪದ ಗೊರೂರು ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ನೈಮತುಲ್ಲಾ ಷರೀಫ್ ಗೆ ಅಮೇರಿಕ ದೇಶದ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.
ನೈಮತುಲ್ಲಾ ಷರೀಫ್ ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕರಾಗಿದ್ದು "ಇಂಡೋ ಪರ್ಶಿಯನ್ ಸಿಂಥಸಿಸ್ ಡ್ಯೂರಿಂಗ್ ಮೆಡೀವಲ್ ಪೀರಿಯಡ್(1206 ಎಡಿ ನಿಂದ 1707 ಎಡಿ) ಎ ಕ್ರಿಟಿಕಲ್ ಸ್ಟಡಿ" ಎಂಬ ಮಹಾ ಪ್ರಬಂಧವನ್ನು ಅಮೇರಿಕಾ ದೇಶದ ಗೋಲ್ಡನ್ ಗೇಟ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ವಿಶ್ವ ವಿದ್ಯಾಲಯವು ಅವರ ಪ್ರಬಂಧಕ್ಕೆ ಮಾನ್ಯತೆ ನೀಡಿ ಪಿಎಚ್ ಡಿ ಪದವಿ ನೀಡಿದೆ. ಡಾಡಬ್ಲ್ಯೂ.ಪಿ. ಮಾರ್ಟಿನ್ ಪ್ರಬಂದ ರಚನೆಗೆ ಮಾರ್ಗದರ್ಶನ ನೀಡಿದ್ದರು.
ಶ್ರಾವಣ ಪೂಜೆ: ಪಟ್ಟಣದ ವಾಸವಿ ವನಿತಾ ಸಂಘದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಛತ್ರದಲ್ಲಿ ಲಕ್ಷ್ಮೀ ವೆಂಕಟೇಶ್ವರಮಣ ಸ್ವಾಮಿ ಹಾಗೂ 7ಬೆಟ್ಟದ ಪೂಜೆಯನ್ನು ಲೋಕಕಲ್ಯಾಣಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಪಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆ: ತಾಲೂಕಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಎಲ್ಲಾ ಶಿಕ್ಷಕರೂ ಕಡ್ಡಾಯವಾಗಿ ಹಾಜರಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮನವಿ ಮಾಡಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಖ್ಯಾತ ರಂಗಕರ್ಮಿ ಹಾಗೂ ಚಿತ್ರನಟ ಪ್ರೊಪೆಸರ್ ಪಿ.ಎಸ್. ಲೋಹಿತಾಶ್ವ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಎ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಜನಸಂಪರ್ಕ ಸಭೆ : ತಾಲೂಕು ಕಸಬಾ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಸೆ.4 ರಂದು ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆಯಲಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ತಹಸೀಲ್ದಾರ್ ಸವಿತಾ ಜನಸ್ಪಂದನ ಸಭೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸ ಬೇಕೆಂದು ಮನವಿ ಮಾಡಿದ್ದಾರೆ.
ನೂತನ ಕಟ್ಟಡ ನಿರ್ಮಾಣದ ಭರವಸೆ
ಅರಕಲಗೂಡು: ಗೊರೂರು ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡವನ್ನು ತಮ್ಮ ಅವಧಿಯಲ್ಲೆ ನಿರ್ಮಿಸುವ ಬದ್ದತೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದ್ಯಾವೇಗೌಡ ಹೇಳಿದ್ದಾರೆ. ಇಂದು ಗೊರೂರು ಗ್ರಾಮಕ್ಕೆ ಅಧಿಕೃತ ಭೇಟಿ ನೀಡಿದ್ದ ಅವರು ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ದಿಯನ್ನು ಪರಿಶೀಲಿಸಿದರು, ಇದೇ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸಲು ಅತ್ಯಂತ ಕಿರಿದಾಗಿದ್ದ ಪಂಚಾಯ್ತಿ ಕಟ್ಟಡವನ್ನು ಗಮನಿಸಿ ತಮ್ಮ ಅವಧಿಯಲ್ಲಿಯೇ ಗೊರೂರು ಗ್ರಾಮ ಪಂಚಾಯ್ತಿಗೆ ನೂತನ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದರು. ಉಪಾಧ್ಯಕ್ಷರ ಜೊತೆ ಹಾಸನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅನಂತರಾಜು, ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಪ್ರಶಾಂತ್ ಮತ್ತು ಪಂಚಾಯ್ತಿ ಸದಸ್ಯರುಗಳು ಹಾಗೂ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮಣಿ ಇದ್ದರು.

ಕಾಮೆಂಟ್‌ಗಳಿಲ್ಲ: