ಶನಿವಾರ, ಸೆಪ್ಟೆಂಬರ್ 4, 2010

ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ

ಅರಕಲಗೂಡು: ಸರ್ಕಾರದ ಸಂವಿದಾನ ಬದ್ದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಭ್ರಷ್ಟಾಚಾರದಿಂದಾಗಿ ಸಾರ್ವಜನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಷಾಧಿಸಿದ್ದಾರೆ. ಪಟ್ಟಣದಲ್ಲಿ ಏರ್ಪಾಡಾಗಿದ್ದ ಜೆಡಿಎಸ್ ಪಕ್ಷದ ಸಭೆ ಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ನಿಯಂತ್ರಿಸಲಾಗದಷ್ಟು ಮಟ್ಟಿಗೆ ವ್ಯಾಪಿಸಿದೆ, ಈ ವ್ಯವಸ್ಥೆಯ ಸುಧಾರಣೆಗೆ ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತೇನೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು, ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಕ್ಷದ ಬಲ ವೃದ್ದಿಸಿದೆ, ಗ್ರಾ.ಪಂ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸುವ ಸಲುವಾಗಿ ಇಂದು ಕಾರ್ಯಕ್ರಮ ನಡೆಸುತ್ತಿದ್ದೇವೆ 15ದಿನಗಳ ಮುಂಚೆಯೇ ಕಾರ್ಯಕ್ರಮಕ್ಕಾಗಿ ಶಿಕ್ಷಕರ ಭವನವನ್ನು ಅಧಿಕೃತವಾಗಿ ಪಡೆಯಲಾಗಿದೆ ಆದರೆ ಇಂತಹ ಕಾರ್ಯಕ್ರಮಕ್ಕೂ ಅಧಿಕಾರ ಶಾಹಿ ಅಡ್ಡಿ ಪಡಿಸಿತು ಎಂದರು. ಶಿಕ್ಷಕ ಸಮುದಾಯದ ಸಹಕಾರದಿಂದ ಅಡ್ಡಿ ನಿವಾರಣೆಯಾಗಿದೆ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದು ನುಡಿದರು.
ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳ ಕುರಿತು ಮಾತನಾಡಿದ ಅವರು ತಾಲೂಕಿನಲ್ಲಿ ನನ್ನಿಂದಾಗಿ ಕೂಲಿಕಾರರ ಹಣ ನಿಂತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಇದು ಸರಿಯಲ್ಲ, ಕಣ್ಣೆದುರಿಗೆ ಅಕ್ರಮ ನಡೆಯುತ್ತಿದ್ದರೆ ನೋಡಿಕೊಂಡು ಕುಳಿತಿರಲು ಸಾಧ್ಯವಿಲ್ಲ. ಜನರ ತೆರಿಗೆ ದುಡ್ಡನ್ನು ಇಂಜಿನಿಯರುಗಳು ಲೂಟಿ ಮಾಡುತ್ತಿದ್ದರೆ ಸಹಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು ಇಂಜಿನಿಯರುಗಳಿಗೆ ಅನ್ನ ತಿನ್ನಿ ಎಂದರೆ ಭ್ರಷ್ಟಾಚಾರ ನಡೆಸುವ ಮೂಲಕ ಮಣ್ಣುತಿನ್ನುವ ಕೆಲಸ ಮಾಡಿದ್ದಾರೆ, ಇಂತಹದ್ದನ್ನು ಪ್ರಶ್ನೆ ಮಾಡಲು ಹತಾಶ ಸ್ಥಿತಿ ಬರಬಾರದು, ಅಂತಹ ಸ್ಥಿತಿ ಎದುರಾದರೆ ಪ್ರಜಾಪ್ರಭುತ್ವದ ಕಗ್ಗೊಲೆ ಆದಂತೆ ಆಗುತ್ತದೆ ಇದಕ್ಕೆ ಅವಕಾಶ ಮಾಡಬೇಡಿ ಎಂದು ಮನವಿ ಮಾಡಿದರು.ಉದ್ಯೋಗ ಖಾತ್ರಿ ಯೋಜನೆಗೆ ಯಾವ ಪುಣ್ಯಾತ್ಮ ಮಹಾತ್ಮ ಗಾಂಧಿ ಹೆಸರಿಟ್ಟನೋ ಗೊತ್ತಿಲ್ಲ ಇದಕ್ಕೆ ಚಂಬಲ್ ಕಣಿವೆಯ ಡಕಾಯಿತರ ಹೆಸರನ್ನು ಇಲ್ಲವೇ ವೀರಪ್ಪನ್ ಹೆಸರನ್ನಿಟ್ಟಿದ್ದರೆ ಚೆನ್ನಾಗಿತ್ತು, ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನಿಟ್ಟು ಅಪಮಾನವೆಸಗಲಾಗಿದೆ, ವ್ಯಾಪಕ ಅಕ್ರಮದ ತವರು ಉದ್ಯೋಗ ಖಾತ್ರಿ ಯೋಜನೆಯಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತು ಇಂಜಿನಿಯರುಗಳು ಇಡೀ ತಾಲೂಕಿನ ಜನಸಾಮಾನ್ಯರಿಗೆ ಮಣ್ಣುತಿನ್ನಿಸಿದ್ದಾರೆ, ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆಗಳು ತಯಾರಾಗಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆಗೊಳ್ಳಬೇಕು ಆದರೆ ಆ ಪ್ರಕ್ರಿಯೆಗಳು ನಡೆದಿಲ್ಲ, ಇಡೀ ಯೋಜನೆಯಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮದ ಸಾಕ್ಷ್ಯ ಇದೆ ಪ್ರಜಾ ರಾಜ್ಯದಲ್ಲಿ ಇಂಜಿನಿಯರುಗಳು ಮನಸ್ಸೊ ಇಚ್ಚೆ ವರ್ತಿಸುವ ಮೂಲಕ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಎಂದರು. ತಾಲೂಕಿಗೆ ನಿಗದಿಯಾದ ಅನುದಾನಕ್ಕಿಂತ ಹೆಚ್ಚಿಗೆ ಅಂದರೆ 150ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ 3ಕೋಟಿ ಸಪ್ಲೈ ಬಿಲ್ ಗಳನ್ನು ಡ್ರಾ ಮಾಡಲಾಗಿದೆ, ಕೆರೆ-ಕಟ್ಟೆಗಳ ಕೆಲಸವನ್ನು ಪೂರ್ಣಗೊಳಿಸದೇ ಎಂಬಿ ಬರೆಯಲಾಗಿದೆ, ನಕಲಿ ಜಾಬ್ ಕಾರ್ಡುಗಳನ್ನು ಸೃಷ್ಟಿಸಲಾಗಿದೆ ಆ ಮೂಲಕ ಅಮಾಯಕ ಜನರನ್ನು ವಂಚಿಸಲಾಗಿದೆ ಇದನ್ನು ಪ್ರಶ್ನಿಸಿದ್ದು ತಪ್ಪೇ? ಪ್ರಶ್ನಿಸಿದರೆ ಅಭಿವೃದ್ದಿ ನಿಂತು ಹೋಗುತ್ತಾ? ವಿಧಾನ ಸಭೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡಿದರಲ್ಲ, ಆಗ ಅಭಿವೃದ್ದಿ ನಿಂತು ಹೋಗಿತ್ತಾ ಎಂದು ಹಾಲಿ ಶಾಸಕರನ್ನು ಪರೋಕ್ಷವಾಗಿ ಚುಚ್ಚಿದ ಎಟಿಆರ್ ನನ್ನ ಹೋರಾಟದ ಉದ್ದೇಶ ಹಾಗೂ ಕಳಕಳಿಯನ್ನು ಅರಿಯಿರಿ ಎಂದರು. ನನ್ನ ಅಣ್ಣನ ಮಗನೇ ಬನ್ನೂರಿನಲ್ಲಿ ಅಧ್ಯಕ್ಷನಾಗಿದ್ದಾನೆ ಅಲ್ಲಿಂದಲೇ ಅಕ್ರಮಗಳ ತನಿಖೆ ಆರಂಭವಾಗಲಿ ಸಂತೋಷಿಸುತ್ತೇನೆ, ಪಟ್ಟಾಭಿರಾಮ ಶಾಲೆಯ ುದ್ಯೋಗ ಖಾತ್ರಿ ಕೆಲಸದ ಬಗ್ಗೆ ಕೇಳಬೇಕಿತ್ತು ಎಂದು ಹೇಳುವವರು ತಾವೇ ಅ ಬಗ್ಗೆ ಪ್ರಶ್ನಿಸಬಹುದಿತ್ತಲ್ಲವೇ ? ತಪ್ಪು ಯಾರು ಮಾಡಿದರೂ ತಪ್ಪೇ, ನಾನು ಆ ಪಾರ್ಟಿ ಈ ಪಾರ್ಟಿ ಎಂದು ಎಲ್ಲೂ ಹೇಳಿಲ್ಲ ಆದರು ನನ್ನ ಬಗ್ಗೆ ಸಣ್ಣತನದ ಆರೋಪ ಮಾಡಲಾಗಿದೆ ಸಣ್ಣತನ ನನ್ನ ಜಾಯಮಾನದಲ್ಲೇ ಇಲ್ಲ ನೈತಿಕತೆ ಇದ್ದರೆ ಅದನ್ನು ಅರಿತುಕೊಳ್ಳಲಿ ಎಂದರು. ಮಾನವೀಯತೆ ದೃಷ್ಟಿಯಿಂದ ತಾಳಿಬಾಳಿ ಹೋಗುತ್ತಿದ್ದೇನೆ, ಇತ್ತೀಚೆಗೆ ರಾಮನಾಥಪುರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ದೇಶದ್ರೋಹಿಯನ್ನು ಜೊತೆಗಿಟ್ಟುಕೊಂಡು ಓಡಾಡುವ ಇವರಿಂದ ನಾನು ಕಲಿಯಬೇಕಾದುದೇನಿಲ್ಲ, ನನ್ನಲ್ಲಿ ಪಾಪದ ರಕ್ತವಿಲ್ಲ ಶುದ್ಧ ರಕ್ತವಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಅಕ್ರಮದ ತೀವ್ರತೆ ಎಷ್ಟಿದೆ ಎಂದರೇ ಗ್ರಾಮ ಪಂಚಾಯ್ತಿಯೊಂದರ ಮಹಿಳಾ ಕಾರ್ಯದರ್ಶಿಯೋರ್ವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರಿಶೀಲನೆಗೆ ಬಂದಿದ್ದಾಗ ಖಾತ್ರಿ ಯೋಜನೆಯಲ್ಲಿ ಶೇ.1ರಷ್ಟು ಕೆಲಸವೂ ಆಗಿಲ್ಲ, ನಾನು ಆತ್ಮಹತ್ಯೆ ಮಾಡ್ಕೋತೀನಿ ಎಂದರು ಇದಕ್ಕಿಂತ ಹೆಚ್ಚಿಗೆ ಬೇರೇನೂ ಹೇಳಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಮಾತನಾಡಿದ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಬಾಲಕೃಷ್ಣ ತಾಲೂಕಿನ ಅಧಿಕಾರಿಗಳಿಗೆ ಟೋಪಿ ಹಾಕಿದ್ದಾರೆ ಆ ಮೂಲಕ ಜನತೆಯನ್ನು ವಂಚಿಸಿದ್ದಾರೆ ಎಂದರು. ತಾಲೂಕಿನಲ್ಲಿ ಕಳೆದ ವರ್ಷಕ್ಕೆ 22.80ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಮಾಡಬೇಕಿತ್ತು ಆದರೆ ಬಾಲಕೃಷ್ಣರ ಕುಮ್ಮಕ್ಕಿನಿಂದ 300ಕೋಟಿಗೆ ಬೇಕಾಬಿಟ್ಟಿ ಕ್ರಿಯಾ ಯೋಜನೆ ಮಾಡಲಾಗಿದೆ 15ಒಕೋಟಿಗೆ ಅನುಮೋದನೆ ನೀಡಿ 3ಕೋಟಿ ಸಪ್ಲೈ ಬಿಲ್ ಪಡೆಯಲಾಗಿದೆ ಈ ಕುರಿತು ಕೇಂದ್ರ ಸರ್ಕಾರ ಡಿಸೆಂಬರ್ ಅಂತ್ಯದಲ್ಲೇ ನೋಟೀಸ್ ನೀಡಿ ಉದ್ಯೋಗ ಚೀಟಿ 1:6 ಆಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಯೋಜನೆಯನ್ನು ಸ್ಥಗಿತಗೊಳಿಸಿತ್ತು ಆದರೆ ಇದನ್ನು ಸರಿಪಡಿಸಲಾಗದ ಅಧಿಕಾರಿಗಳು ಸಾಮೂಹಿಕ ವರ್ಗಾವಣೆಗೆ ಸಂಚು ರೂಪಿಸಿದ್ದರು ಈ ಮಾಹಿತಿ ತಿಳಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಜುಲೈ ತಿಂಗಳಿನಲ್ಲಿ ದೂರು ನೀಡಿದರು ಆಗ ಇಂಜಿನಿಯರುಗಳ ಅಕ್ರಮ ಬೆಳಕಿಗೆ ಬಂದಿದೆ ಎಂದರು. ಆದರೆ ರಾಮಸ್ವಾಮಿ ಯೋಜನೆಯ ದುಡ್ಡು ನಿಲ್ಲಿಸಿದ್ದಾರೆ ಎಂಬ ಆರೋಪ ಸರಿಯಾದುದಲ್ಲ ಜನರಿಗೆ ದಕ್ಕಬೇಕಾಗಿದ್ದ ಯೋಜನೆಯಲ್ಲಿ ಹಣ ಲೂಟಿ ಆಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯವೇ ಇಲ್ಲ ಇಂಜಿನಿಯರುಗಳಿಂದ ಜನರ ಕೂಲಿ ಹಣ ನಿಂತಿದೆ ಅವರನ್ನು ಶಿಕ್ಷಿಸಬೇಕು ಮತ್ತು ಹಣ ವಸೂಲು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ, ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ,ಮತ್ತಿತರ ಮುಖಂಡರು ಮಾತನಾಡಿದರು.
ಆರೋಪ: ತಾಲೂಕು ಕಛೇರಿ ಆವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಭಾಗವಹಿಸದೇ ಸ್ಥಳೀಯ ಸಂಸ್ಥೆಯ ಜೆಡಿಎಸ್ ಪ್ರತಿನಿಧಿಗಳು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಪ.ಪಂ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ. ಜೆಡಿಎಸ್ ಸದಸ್ಯರುಗಳಿಗೆ ಜನರ ಸಮಸ್ಯೆಗಳಿಗಿಂತ ಪಕ್ಷದ ಸಭೆ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.

1 ಕಾಮೆಂಟ್‌:

ಭೂಮಿಕಾ ಹೇಳಿದರು...

ಸತ್ಯ ಯಾವತ್ತೂ ಕಹಿಯಾಗಿರುತ್ತದೆ...ಎಟಿಆರ್ ಗೆ ಸದರಿ ಪ್ರಕರಣದಲ್ಲಿ ಕೆಲವು ಅಂಶಗಳು ಹಿನ್ನಡೆಯಾಗಬಹುದು...ಧೈರ್ಯದಿಂದ ಪಟ್ಟಭದ್ರರನ್ನು ಮಟ್ಟಹಾಕಿ ಇತರರಿಗೆ ಎಚ್ಚರಿಕೆಯ ಪಾಠ ಕಲಿಸುವಂತಾಗುವ ನಿಟ್ಟಿನಲ್ಲಿ ಎಟಿಆರ್ ನಿಲುವುಗಳಿಗೆ ನನ್ನ ಬೆಂಬಲ ಇದೆ..