ಸೋಮವಾರ, ಸೆಪ್ಟೆಂಬರ್ 6, 2010

ಉದ್ಯೋಗ 'ಅಕ್ರಮ' ಖಾತ್ರಿ,ಮೂವರು ಅಧಿಕಾರಿಗಳು ಅಮಾನತ್ತು

ಹಾಸನ/ಅರಕಲಗೂಡು: ಜಿಲ್ಲೆಯಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮಕ್ಕಾಗಿ ತಾಲೂಕಿನ ಮೂವ್ವರು ಅಧಿಕಾರಿಗಳು ಮೊದಲ ಬಾರಿಗೆ ಅಮಾನತ್ತಾಗಿದ್ದಾರೆ. ಆ ಮೂಲಕ ಉದ್ಯೋಗ ಖಾತ್ರಿ ಅಕ್ರಮದ ಖಾತೆ ತೆರೆದಂತಾಗಿದ್ದು ಇನ್ನೂ ಹಲವು ಮಂದಿ ಅಧಿಕಾರಿಗಳು ಹಾಗೂ ನೌಕರರು ಅಮಾನತ್ತಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ತಾಲ್ಲೂಕಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ತಾಲೂಕುಗಳಲ್ಲು ಉದ್ಯೋಗ 'ಅಕ್ರಮ' ಖಾತ್ರಿ ಇದೆ ಆದ್ದರಿಂದ ಇಡೀ ಯೋಜನೆಗೆ ಕೇಂದ್ರದ ಸ್ವಾಮ್ಯದ ಸ್ವತಂತ್ರ ಸಂಸ್ಥೆ ಸಮಗ್ರ ತನಿಖೆ ನಡೆಸದಲ್ಲಿ ಹಲವು ಮಂದಿ ನೌಕರರು/ಅಧಿಕಾರಿಗಳು ಮನೆಗೆ ಹೋಗುವುದು ಗ್ಯಾರಂಟಿಯಾಗಲಿದೆ. ಕೆಲ ವರ್ಷಗಳ ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿನ ಅಕ್ರಮದಿಂದ 39ಮಂದಿ ಗೆಜೆಟೆಡ್ ದರ್ಜೆಯ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ ಮುದ್ದೆ ಮುರಿಯುತ್ತಾ 3ದಿಂಗಳ ಕಾರಾಗೃಹ ವಾಸ ಕಂಡಿದ್ದರು, ಈಗ ಅದು ಪುನರಾವರ್ತನೆಯಾಗಲಿದೆಯೇ ಕಾದು ನೋಡಬೇಕು.
ಪತ್ರಿಕೆಗೆ ಈ ಮಾಹಿತಿ ನೀಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ನಮ್ಮ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು. ಸೆ.1 ರಿಂದಲೇ ಅನ್ವಯವಾಗುವಂತೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಫಣೀಶ್, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಮತ್ತು ಕಿರಿಯ ಅಭಿಯಂತರ ನಿಂಗೇಗೌಡ ಮೊದಲ ಹಂತದಲ್ಲಿ ಅಮಾನತ್ತಾದ ಅಧಿಕಾರಿಗಳಾಗಿದ್ದಾರೆ ಎಂದು ಅವರು ತಿಳಿಸಿದರು. ಇಂದು ಜಿ.ಪಂ. ನಲ್ಲಿ ನಡೆದ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಇಡೀ ಜಿಲ್ಲೆಗೆ 150ಕೋಟಿ ರೂಗಳ ಕ್ರಿಯಾ ಯೋಜನೆಯನ್ನು ಅನುಮೋದನೆ ನೀಡಲಾಗಿದೆ, ಸದರಿ ಕ್ರಿಯಾ ಯೋಜನೆಯ ಕೆಲಸ ಜನವರಿಯಲ್ಲೇ ಮುಗಿದಿದೆ ಎಂದು ನುಡಿದ ಅವರು ಅರಕಲಗೂಡಿನಲ್ಲಿ ಕಳೆದ ವರ್ಷ 22.80ಕೋಟಿ ರೂಗೆ ಕ್ರಿಯಾ ಯೋಜನೆ ವೆಚ್ಚ ನಿಗದಿ ಯಾಗಿತ್ತಾದರೂ ಅಧಿಕಾರಿಗಳು 150ಕೋಟಿ ರೂಗಳ ಕ್ರಿಯಾ ಯೋಜನೆ ತಯಾರಿಸಿದ್ದಲ್ಲದೇ ಜಿಲ್ಲಾ ಪಂಚಾಯ್ತಿಯ ಇಂಜಿನಿಯರುಗಳು ಶೇ.40 ಸಪ್ಲೈ ಬಿಲ್ ಗಳನ್ನು ಪಡೆದಿದ್ದರು ಆದರೆ ಕೂಲಿ ಕಾರರ ಹಣ ಬಿಡುಗಡೆ ಆಗಿರಲಿಲ್ಲ, ನಕಲಿ ಜಾಬ್ ಕಾರ್ಡು, ನಕಲಿ ಎಸ್ಟಿಮೇಟ್, ಸುಳ್ಳು ಎಂಬಿಗಳನ್ನು ವ್ಯಾಪಕವಾಗಿ ಬರೆಯಲಾಗಿದೆ ಇದನ್ನೆಲ್ಲ ಗಮನಿಸಿದ ಕೇಂದ್ರದ ಅಧಿಕಾರಿಗಳು ಡಿಸೆಂಬರ್ ನಲ್ಲೇ ವ್ಯತ್ಯಾಸದ ಕುರಿತು ನೋಟೀಸ್ ನೀಡಿ ವಿವರ ಕೇಳಿದ್ದರು ಆದರೆ ತಪ್ಪಿಗೆ ಸಿಕ್ಕಿ ಬಿದ್ದ ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡಿ ತಾಲ್ಲೂಕಿನಿಂದಲೇ ತರಾತುರಿಯಲ್ಲಿ ವರ್ಗಾವಣೆ ಮಾಡಿಸಿ ಕೊಂಡಿದ್ದರು, ಈ ಹಂತದಲ್ಲಿ ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಧಾನ ಸೌಧದಲ್ಲಿ ಪ್ರತಿಭಟನೆ ನಡೆಸಿ ಇಲಾಖೆಗೆ ದೂರು ನೀಡಿದ ಪರಿಣಾಮ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಅಕ್ರಮ ಧೃಢವಾಗುತ್ತಿದ್ದಂತೆ ಮುಂದಿನ ತನಿಖೆ ಕಾಯ್ದಿರಿಸಿ ತಾ.ಪಂ. ಇ ಓ , ಇಂಜಿನಿಯರುಗಳನ್ನು ಅಮಾನತ್ತು ಗೊಳಿಸಿದ್ದಾರೆ ಈ ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಸಹಾ ಪಾಲ್ಗೊಂಡಿರುವುದರಿಂದ ಅವರ ಮೇಲೂ ಕ್ರಮವನ್ನು ನಿರೀಕ್ಷಿಸಲಾಗುತ್ತಿದೆ ಎಂದರು. ಇಡೀ ಪ್ರಕರಣ ಸಮಗ್ರವಾಗಿ ತನಿಖೆಯಾಗಬೇಕು ತಪ್ಪಿತಸ್ಥರೆನಿಸಿದ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಮತ್ತು ಕೂಲಿಕಾರರನ್ನು ವಂಚಿಸಿದ ಹಣವನ್ನು ಅವರಿಂದ ಕಕ್ಕಿಸಬೇಕು ಎಂದರು ಮಾದೇಶ್ ನುಡಿದರು. ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೇತೃತ್ವದಲ್ಲಿ ನಡೆಸಿ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ತೆಗೆದುಕೊಂಡಿದೆ ಮುಂದೆಯೂ ಹೀಗೆ ಕಾರ್ಯ ನಿರ್ವಹಿಸಿ ತಪ್ಪಿತಸ್ಥರನ್ನು ಬಲಿಹಾಕಲಿ, ಇದು ಅಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ ಎಂದು ಹೇಳಿದ ಅವರು ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.

ಕಾಮೆಂಟ್‌ಗಳಿಲ್ಲ: