ಶನಿವಾರ, ಸೆಪ್ಟೆಂಬರ್ 18, 2010

ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿದರೆ ಅದು ಅಭಿವೃದ್ದಿ ವಿರೋಧ ಹೇಗೆ? -ಎಟಿಆರ್

'ನಾನು ಜನರ ಕೂಲಿ ದುಡ್ಡು ನಿಲ್ಲಿಸಿ ಎಂದು ಹೇಳುತ್ತಿಲ್ಲ,ಅಭಿವೃದ್ದಿಗೆ ಅಡ್ಡಗಾಲಾಗುತ್ತಿಲ್ಲ ಆದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರ ದುಡ್ಡು ಲೂಟಿ ಮಾಡಿದ ಇಂಜಿನಿಯರುಗಳಿಗೆ ಬುದ್ದಿಕಲಿಸಿ, ತಿಂದ ಹಣ ವಸೂಲಿ ಮಾಡಿ ಎಂದು ಹೇಳುತ್ತಿದ್ದೇನೆ ಹೀಗೆ ಕೇಳುವುದು ತಪ್ಪಾ? ಜನರ ದುಡ್ಡು ಕೋಟಿ ಕೋಟಿಗಳಲ್ಲಿ ಲೂಟಿಯಾಗುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಬೇಕಾ?ಎಂದು ಪ್ರಶ್ನಿಸಿದ್ದು ಮಾಜಿ ಶಾಸಕ ಹಾಗೂ ಅಕ್ರಮ ಭೂ ಒತ್ತುವರಿ ಜಂಟಿ ಸದನ ಸಮಿತಿಯ ಮಾಜಿ ಅಧ್ಯಕ್ಷ ಎ ಟಿ ರಾಮಸ್ವಾಮಿ. ತಾಲೂಕಿನ ಕೊಣನೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ದಿಗೆ-ಶಿಕ್ಷಣಕ್ಕೆ-ಮೂಲಭೂತ ಸೌಕರ್ಯಾಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು ಅಂದು ಮಂಜೂರಾದ ಕಾಮಗಾರಿಗಳು ಈಗಲೂ ನಡೆಯುತ್ತಿವೆ. ಪ್ರಸಕ್ತ ಸಂಧರ್ಭದಲ್ಲಿ ನಾವು ವಿರೋಧ ಪಕ್ಷವಾಗಿದ್ದೇವೆ, ಇಂತಹ ಸನ್ನಿವೇಶದಲ್ಲಿ ನಮ್ಮ ಜವಾಬ್ದಾರಿ ಏನು?ಬಡವರ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಗಮನ ನೀಡಬೇಕಾಗಿದೆ ಜನರಿಗೆ ನ್ಯಾಯ ಒದಗಿಸಬೇಕಾಗಿದೆ ಅದಕ್ಕಾಗಿ ಪಕ್ಷದ ಸಂಘಟನೆಯನ್ನು ಭದ್ರ ಪಡಿಸುವ ಕೆಲಸ ಮಾಡಬೇಕಾಗಿದೆ ಆ ಮೂಲಕ ಸಾರ್ವನಿಕರ ಹಿತ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಹೀಗಿರುವಾಗ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡವರ-ಕೂಲಿ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಅನುಷ್ಟಾನ ವಾಗಬೇಕಾಗಿದೆ ಆದರೆ ಸದರಿ ಯೋಜನೆಯನ್ನು ಅಧಿಕಾರಿಗಳು ಹಳ್ಳ ಹಿಡಿಸಿದ್ದಾರೆ ಕೆಲಸ ಮಾಡಿದ ಕೂಲಿ ಕಾರ್ಮಿಕರನ್ನು ವ್ಯವಸ್ಥಿತವಾಗಿ ವಂಚಿಸಿದ್ದಾರೆ ಇದನ್ನು ಪ್ರಶ್ನಿಸಿದರೆ ಭ್ರಷ್ಟಾಚಾರವನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳು ಕೂಲಿ ಕಾರರ ಹೆಸರಿನಲ್ಲಿ ನಮ್ಮ ವಿರುದ್ದ ಅಪಪ್ರಚಾರದ ಕರಪತ್ರ ಹೊರಡಿಸುವ ನೀಚ ಕೆಲಸ ಮಾಡುತ್ತಾರೆ, ಒಂದು ರೀತಿಯಲ್ಲಿ ಇದು ನನಗೆ ಒಳ್ಳೆಯದೇ ಆಗಿದೆ. ವ್ಯಕ್ತಿಗತವಾಗಿ ನನ್ನ ವಿರುದ್ದ ಮಾಡಿರುವ ಆರೋಪಗಳಿಗೆ ನಾನು ಸ್ಪಷ್ಟ ಉತ್ತರವನ್ನು ಹೇಳುತ್ತೇನೆ, ನಾನು ರಾಜಕೀಯ ಪ್ರವೇಶಿಸುವ ಮುನ್ನವೇ ನನ್ನ ಸಾರ್ವಜನಿಕ ವ್ಯವಹಾರ-ವಹಿವಾಟುಗೆ ತಿಲಾಂಜಲಿ ಹೇಳಿ ಪ್ರಾಮಾಣಿಕವಾಗಿ ಜನಸೇವೆ ಮಾಡುವ ಬದ್ದತೆ ಇಟ್ಟುಕೊಂಡಿದ್ದೇನೆ. ಅಕ್ರಮವಾಗಿ ಆಸ್ತಿಪಾಸ್ತಿ ಮಾಡುವ, ಸ್ವಜನ ಪಕ್ಷಪಾತ ಮಾಡುವ ದರ್ದು ನನಗಿಲ್ಲ, ಪಾಪದ ಅನ್ನ ಉಂಡು ನನ್ನ ರಕ್ತದಲ್ಲಿ ಸೇರಿಲ್ಲ, ನನಗೆ ನೈತಿಕತೆ ಇದೆ ಎಂದು ನುಡಿದ ಅವರು ವಿರೋಧಿಗಳು ಆಪಾದಿಸುವಂತೆ ನಾನು ಯಾವುದೇ ತೋಟ ಮಾಡುವುದರಲ್ಲಿ ಬೇರೆಯವರೊಂದಿಗೆ ಪಾಲುದಾರಿಕೆ ಹೊಂದಿಲ್ಲ, ರಸ್ತೆ ಕೆಲಸದ ಕಂಟ್ರಾಕ್ಟಿನಲ್ಲಿ ಪಾಲಿಲ್ಲ, ಬೆಂಗಳೂರಿನಲ್ಲಿ ಯಾವುದೇ ಅಕ್ರಮ ಲೇಔಟ್ ವ್ಯವಹಾರದಲ್ಲಿ ಶಾಮೀಲಾಗಿಲ್ಲ ಆದರೆ ರಾಜಕೀಯ ದ್ವೇಷ, ಅಸೂಯೆ ಹೊಟ್ಟೆಕಿಚ್ಚಿನಿಂದ ನನ್ನ ವಿರುದ್ದ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದರು. ಉದ್ಯೋಗ ಖಾತ್ರಿಯಲ್ಲಿ ಜನ ಕೆಲಸ ಮಾಡಿ ದುಡ್ಡು ತಿಂದಿದ್ದರೆ ನಾನು ಕೇಳುತ್ತಿರಲಿಲ್ಲ ಆದರೆ ಜನರ ಹೆಸರಿನಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ವ್ಯವಸ್ಥೆಯನ್ನೆ ಕತ್ತಲಲ್ಲಿಟ್ಟು ದುಡ್ಡು ಹೊಡೆದಿದ್ದಾರಲ್ಲ ಅಧಿಕಾರಿಗಳು ಅವರನ್ನೇನು ಮಾಡಬೇಕ್ರಿ ? 50ಕೋಟಿಗೂ ಹೆಚ್ಚು ವೆಚ್ಚವನ್ನು ಮಣ್ಣಿಗೆ ಹಾಕಿದ್ದೇವೆಂದು ಹೇಳುತ್ತಾರಲ್ಲ ಯಾವ ಮಣ್ಣಿಗೆ ದುಡ್ಡು ಕೊಟ್ಟಿದ್ದಾರೆ ಅಧಿಕಾರಿಗಳು, ಒಂದೆ ಕೆಲಸಕ್ಕೆ 3-4ಬಿಲ್ಲುಗಳನ್ನು ಮಾಡಿಕೊಂಡು ಲೂಟಿ ಹೊಡೆದಿದ್ದಾರಲ್ಲ ಅವರನ್ನ ಕೇಳೋದು ಬೇಡವೇನ್ರಿ ?100ಮಂದಿಯ ಜಾಬ್ ಕಾರ್ಡಿಗೆ 10ಲಕ್ಷ ವೆಚ್ಚ ಮಾಡಲು ಸಾಧ್ಯ ಆದರೆ 1.50ಕೋಟಿಯ ಬಿಲ್ ತೋರಿಸುತ್ತಾರೆ ಇದು ಹೇಗೆ ಸಾಧ್ಯ?ಕೆಲಸವೇ ಆಗದೆ ಬಿಲ್ಲುಗಳನ್ನು ನೀಡಿದ್ದಾರೆ, 23ಕೋಟಿ ನಿಗದಿಯಾಗಿದ್ದರೂ ಅಕ್ರಮವಾಗಿ 150ಕೋಟಿಗೆ ಎಷ್ಟಿಮೇಟ್ ತಯಾರಿಸಿ ಸಪ್ಲೈ ಬಿಲ್ಲು ಪಡೆದಿದ್ದಾರೆ ಹೀಗಿರುವಾಗ ತಪ್ಪು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೇ ಕೂತಿದ್ದರೆ ಅದನ್ನು ತಪ್ಪು ಎನ್ನುತ್ತೀರಿ ತಪ್ಪನ್ನು ಎತ್ತಿ ತೋರಿಸಿದರೆ ರಾಮಸ್ವಾಮಿಯಿಂದ ುದ್ಯೋಗ ಖಾತ್ರಿ ದುಡ್ಡು ನಿಂತಿದೆ ಎನ್ನುತ್ತೀರಿ ಹಾಗಾದರೆ ನಾನು ಏನು ಮಾಡಬೇಕು ನೀವೆ ಹೇಳಿ ಎಂದು ಪ್ರಶ್ನಿಸಿದ ಅವರು ತಪ್ಪನ್ನು ಪ್ರಶ್ನಿಸಲು ಹತಾಶ ಪರಿಸ್ಥಿತಿ ನಿರ್ಮಾಣವಾಗಬಾರದು ಹಾಗಾದರೆ ಅದು ಪ್ರಜಾತಾಂತ್ರಿಕ ವ್ಯವಸ್ಥೆಯ ಕಗ್ಗೊಲೆ ಆಗುತ್ತದೆ ಆದ್ದರಿಂದ ಜನರು ಜಾಗೃತರಾಗಬೇಕು ಪಕ್ಷದ ಕಾರ್ಯ ಕರ್ತರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಈ ಬೃಹತ್ ಆಂಧೋಲನ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮ ನಡೆಸಿದ ಖದೀಮರುಗಳು ಒಟ್ಟಾಗಿ ತಮ್ಮ ವಿರುದ್ದ ಅಪ್ಪ-ಅಮ್ಮ ಇಲ್ಲದ ಕರಪತ್ರ ಹೊರಡಸಿದ್ದಾರೆ, ಅಂತಹವರು ತಾಯಿಯ ಎದೆ ಹಾಲು ಕುಡಿದು ಜನಿಸಿದ್ದರೆ ಎದುರಿಗೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದ ಅವರು ಉದ್ಯೋಗ ಖಾತ್ರಿ ಅಕ್ರಮ ಪ್ರಶ್ನಿಸಿದ್ದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ ಎಂದರು. ತಮ್ಮ ವಿರುದ್ದ ಮಾಡಲಾಗಿರುವ ಆರೋಪ ಹುರುಳಿಲ್ಲದ್ದು ಜೈಲಿಗೆ ಹೋಗಿ ಬಂದವನ್ನನ್ನು ತಾ.ಪಂ. ಅಧ್ಯಕ್ಷನನ್ನಾಗಿ ಮಾಡಲಾಗಿದೆ ಎಂದು ದೂರಲಾಗಿದೆ. ನಾನು ಪ್ರಕರಣವೊಂದರಲ್ಲಿ ವ್ಯವಸ್ಥೆಯ ತಪ್ಪು ತಿಳುವಳಿಕೆಯಿಂದ ಜೈಲಿಗೆ ಹೋಗಿದ್ದು ನಿಜ, ಸದರಿ ವಿಚಾರವಾಗಿ ವಿಚಾರಣೆ ನಡೆದು ನ್ಯಾಯಾಲಯ ನನ್ನನ್ನು ದೋಷ ಮುಕ್ತ ಗೊಳಿಸಿದೆ ಆದರೆ ರಾಜಕೀಯ ದುರುದ್ದೇಶದಿಂದ ತಿಳಿಗೇಡಿಗಳು ಅಪಪ್ರಚಾರ ನಡೆಸಿದ್ದಾರೆ ಇಂತಹ ಅಪ ಪ್ರಚಾರಗಳಿಗೆ ನಾನು ಅಂಜುವುದಿಲ್ಲ ಭ್ರಷ್ಠಾಚಾರದ ವಿರುದ್ದ ನನ್ನ ಹೋರಾಟ ಮುಂದುವರೆಸುತ್ತೇನೆ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಿ ಲೂಟಿಆಗಿರುವ ಸಾರ್ವಜನಿಕರ ಹಣ ಕಕ್ಕಿಸುವವರೆಗೂ ವಿಶ್ರಮಿಸುವುದಿಲ್ಲ ಎಂದರು. ಭ್ರಷ್ಟಾಚಾರ ಪ್ರಶ್ನಿಸಿದರೆ ಅಭಿವೃದ್ದಿಗೆ ಅಡ್ಡಗಾಲಾಗಿದ್ದಾರೆ ಎಂದು ಆರೋಪಿಸುವ ಕ್ಷೇತ್ರದ ಶಾಸಕರು ತಾಲೂಕಿನ ಜನ ಸಾಂಕ್ರಾಮಿಕ ರೋಗಕ್ಕೆ ಸಿಲುಕಿದಾಗ ಜನರ ಕಷ್ಟಸುಖ ಕೇಳಲು ಬರಲಿಲ್ಲ ಬದಲಿಗೆ ಯಾವ ಯಾವ ಯೋಜನೆಯಲ್ಲಿ ಎಷ್ಟು ಹಣ ಬಂದಿದೆ ? ಹಣ ಬಂದ ವಿಚಾರ ನನಗೇಕೆ ತಿಳಿಸಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾ ಬಳ್ಳಾರಿಗೆ ಪಾದಯಾತ್ರೆ ಹೋಗಿದ್ದರು ಇಂತಹವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಹೊನ್ನವಳ್ಳಿ ಸತೀಶ್, ಕುಮಾರಸ್ವಾಮಿ ಜಿ.ಪಂ ಸದಸ್ಯರಾದ ಶಂಕರ್, ಮುಖಂಡರಾದ ಬೊಮ್ಮೇಗೌಡ, ಮುತ್ತಿಗೆ ರಾಜೇಗೌಡ, ದೊಡ್ಡೇಗೌಡ, ಸಾದಿಕ್ ಸಾಬ್ ಮಾತನಾಡಿದರು.

ಧೃಢೀಕೃತ ಬಿತ್ತನೆ ಬೀಜ ದಿಂದ ರೋಗಮುಕ್ತ ಬಂಪರ್ ಬೆಳೆ:ಪೊಟ್ಯಾಟೋ ಕ್ಲಬ್
ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ತಾಲೂಕಿನ ವಿವಿದೆಡೆ ವಿತರಿಸಲಾಗಿರುವ ಧೃಡೀಕೃತ ಬಿತ್ತನೆ ಬೀಜದಿಂದ ಬೆಳೆಯಲಾಗಿರುವ ಆಲೂಗಡ್ಡೆ ಜಮೀನುಗಳಿಗೆ ಭೇಟಿ ನೀಡಿದ ತೋಟಗಾರಿಕೆ ಅಧಿಕಾರಿಗಳು ಅತ್ಯುತ್ತಮ ಬೆಳೆ ಬಂದಿರುವುದನ್ನು ಧೃಢೀಕರಿಸಿದ್ದಾರೆ.
ಕ್ಲಬ್ ವತಿಯಿಂದ ಸುಮಾರು 600ಟನ್ ಗಳಷ್ಟು ಧೃಢೀಕೃತ ಾಲೂ ಬಿತ್ತನೆ ಬೀಜವನ್ನು ಪಂಜಾಬ್ ನಿಂದ ತರಿಸಿ ರೈತರಿಗೆ ನೀಡಲಾಗಿತ್ತು ಹಾಗೂ ಅವುಗಳ ಕೃಷಿ ಪದ್ದತಿಯನ್ನು ಕಾಲಾನುಕಾಲಕ್ಕೆ ಗಮನಿಸಲಾಗಿತ್ತು ಅಗತ್ಯ ಸಂಧರ್ಭದಲ್ಲಿ ಉಚಿತವಾಗಿ ಔಷಧಿಗಳನ್ನು ಸಹಾ ನೀಡಲಾಗಿತ್ತು. ಪರಿಣಾಮವಾಗಿ ತಾಲೂಕಿನ ಕಸಬಾ ಹೋಬಳಿಯ ಕಳ್ಳಿಮುದ್ದನಹಳ್ಳಿ, ದೇವೀಪುರ ಮತ್ತಿತರೆಡೆಗಳಲ್ಲಿ ಪ್ರತೀ ಎಕರೆಗೆ 14-15ಟನ್ ಆಲೂಗಡ್ಡೆ ದೊರೆತಿದೆ. ಪ್ರತೀ ಗಿಡದಲ್ಲೂ 8-10ಆಲೂಗಡ್ಡೆ ಫಸಲು ಬಿಟ್ಟಿದೆ ಅಷ್ಟೆ ಅಲ್ಲ ಯಾವುದೇ ರೋಗವು ಬೆಳೆಯನ್ನು ಭಾದಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಅಧಿಕಾರಿ ನವೀನ್ ಹಾಗೂ ದೊಡ್ಡೇಗೌಡ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕಿನಾದ್ಯಂತ ಈ ಭಾರಿ ಒಟ್ಟಾರೆಯಾಗಿ 1500ಹೆಕ್ಟೇರುಗಳಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ, ಕಳೆದ ವರ್ಷಕ್ಕಿಂತ 300ಹೆಕ್ಟೇರು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ಇದೆ. ಆದರೆ ರೈತರ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಶೇ.70ರಷ್ಟು ಬೆಳೆ ಕಾಯಿಲೆಯಿಂದ ಹಾಳಾಗಿದೆ, ಇಲಾಖೆಯಿಂದ ಸೂಚಿಸಿದ ಮಾರ್ಗಸೂಚಿಯನ್ವಯ ಕೃಷಿ ಕೆಲಸ ನಿರ್ವಹಿಸಿಲ್ಲ ಎಂದರು. ಸಾಧಾರಣವಾಗಿ ಪ್ರತಿ ಹೆಕ್ಟೇರಿಗೆ 10ಟನ್ ಆಲೂಗಡ್ಡೆ ಸಿಗುತ್ತದೆ ಆದರೆ ಕ್ಲಬ್ ವತಿಯಿಂದ ನಿರ್ವಹಿಸಿರುವ ಪ್ರದೇಶದಲ್ಲಿ ಉತ್ತಮ ಫಸಲು ಇಳುವರಿ ದೊರೆತಿದೆ ಎಂದರು. ತಾಲೂಕಿನಲ್ಲಿ ಈ ಭಾರಿ ಪೆಪ್ಸಿ ಆಲೂಬೀಜ ಬಿತ್ತನೆ ಆಗಿಲ್ಲ ಬದಲಿಗೆ ಉತ್ತಮ ಇಳುವರಿ ನೀಡುವ ಕುಫ್ರಿ ಜ್ಯೋತಿ ತಳಿ ಬಿತ್ತನೆ ಮಾಡಲಾಗಿದೆ ಇದು ಇಲ್ಲಿನ ಹವಾಗುಣ ಮತ್ತು ಮಣ್ನಿಗೆ ಹೊಂದಾಣಿಕೆಯಾಗಿದೆ ಎಂದರು. ಕಳ್ಳಿಮುದ್ದನಹಳ್ಳಿ ಲೋಕೇಶ್ ಅವರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿದ ಸಂಧರ್ಭದಲ್ಲಿ ಪೊಟ್ಯಾಟೋ ಕ್ಲಬ್ ಉಪಾಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ: