ಸೋಮವಾರ, ನವೆಂಬರ್ 29, 2010

ಗೊಬ್ಬಳಿ-ಮುಸವತ್ತೂರು ದಲಿತರ ಮೇಲಿನ ದೌರ್ಜನ್ಯ:ಪ್ರಗತಿಪರ ಸಂಘಟನೆಗಳ ಪ್ರತಿಭಟನೆ





ಅರಕಲಗೂಡು: ಕಳೆದ 15ದಿನಗಳ ಹಿಂದೆ ತಾಲೂಕಿನ ಗೊಬ್ಬಳಿ ಮತ್ತು ಮುಸವತ್ತೂರು ಗ್ರಾಮಗಳಲ್ಲಿ ದಲಿತರ ಮೇಲೆ ನಡೆದ ಅಮಾನವೀಯ ದೌರ್ಜನ್ಯವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್  ಪ್ರತಿಭಟನೆ ನಡೆಸಿದವು.
         2ವಾರಗಳ ಹಿಂದೆ ಗೊಬ್ಬಳಿ ಗ್ರಾಮದಲ್ಲಿ ಬೀಗರ ಔತಣಕ್ಕೆ ಸಹಪಂಕ್ತಿಯಲ್ಲಿ ದಲಿತರು ಕುಳಿತರೆಂಬ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿ  ದೌರ್ಜನ್ಯ ನಡೆಸಿದ ಬಗ್ಗೆ ವರದಿಯಾಗಿತ್ತು ಅದೇ ದಿನ ಮಲ್ಲಿಪಟ್ಟಣ ಹೋಬಳಿಯ ಮುಸವತ್ತೂರು ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಬರಲು ನಿರಾಕರಿಸಿದ ದಲಿತನೋರ್ವನನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಲಾಗಿತ್ತು. ಧೌರ್ಜನ್ಯಕ್ಕೆ ಒಳಗಾದವರು ಆಸ್ಪತ್ರೆಯಲ್ಲಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಅರಕಲಗೂಡು ಮತ್ತು ಕೊಣನೂರು ಪೋಲೀಸರು ದೌರ್ಜನ್ಯ ೆಸಗಿದವರ ವಿರುದ್ದ ಕ್ರಮ ಜರುಗಿಸಿ ಬಂಧಿಸದೇ ಆರೋಪಿಗಳಿಂದಲೇ ಪ್ರತಿ ದೂರು ಪಡೆದು ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ, ಘಟನೆಯಿಂದ ನೊಂದಿರುವ ದಲಿತರು ಭೀತಿಯಿಂದ ದಿನ ಕಳೆಯುವಂತಾಗಿದೆ, ಗ್ರಾಮದಲ್ಲಿ ಇದುವರೆಗೂ ಶಾಂತಿ ಸಭೆ ನಡೆಸಿಲ್ಲ ಬದಲಾಗಿ ದ್ವೇಷದ ವಾತಾವರಣಕ್ಕೆ ಪೋಲೀಸರೆ ಪ್ರೋತ್ಸಾಹ ನೀಡಿತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ದಲಿತ ಸಂಘರ್ಷ ಸಮಿತಿ, ಬಹುಜನ ಸಮಾಜವಾದಿ ಪಾರ್ಟಿ ಮತ್ತು ಡಿವೈಎಫ್ಐ ಮತ್ತಿತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಜಾಥ ನಡೆಸಿದವು. ತಾಲೂಕು ಕಛೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾ ನಿರತರು ಪೋಲೀಸರು ಮತ್ತು ತಾಲೂಕು ಆಡಳಿತ ದಲಿತ ವಿರೋಧಿ ನಿಲುವು ತಳೆದಿದೆ, ದೌರ್ಜನ್ಯ ವೆಸಗಿದವರ ರಕ್ಷಣೆಗೆ ಮುಂದಾಗಿದೆ ಎಂದು ಆರೋಪಿಸಿದರು. ಪ್ರತಿಭಟನಾಕರರ ಮನವಿಯನ್ನು ತಹಸೀಲ್ದಾರ್ ಸವಿತಾ ಸ್ವೀಕರಿಸಿ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಒದಗಿಸಲಾಗುವುದು,ಆರೋಪಿಗಳ ಬಂಧನಕ್ಕೆ ಪೋಲಿಸರಿಗೆ ಕ್ರಮವಹಿಸಲು ಸೂಚನೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಜಾಗೃತ ದಳ ರಚಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ ಐ ನ ಧರ್ಮೇಶ್, ಬಿಎಸ್ ಪಿಯ ಬಿ ಸಿ ರಾಜೇಶ್, ದಸಂಸ ದ ಗಣೇಶ ವೇಲಾಪುರಿ ಮತ್ತಿತರರು ವಹಿಸಿದ್ದರು.

ಮಂಗಳವಾರ, ನವೆಂಬರ್ 23, 2010

ತಂಬಾಕು ಬೆಲೆ ಕುಸಿತ:ಮಾರುಕಟ್ಟೆ ಸ್ಥಗಿತ,ಬೆಲೆ ನಿಗದಿಗೆ ಪಟ್ಟು



ಅರಕಲಗೂಡು: ತಂಬಾಕು ಬೇಲ್ ಗಳಿಗೆ ಸೂಕ್ತ ಬೆಲೆ ದೊರಕದಿದ್ದುದರಿಂದ ಕಂಗಾಲಾದ ರೈತರು ಮಾರುಕಟ್ಟೆಯನ್ನು ಅನಿರ್ದಿಷ್ಠಾವಧಿಗೆ  ಬಹಿಷ್ಕರಿಸಿದರಲ್ಲದೇ ತಂಬಾಕು ಬೇಲ್ ಗಳಿಗೆ ಬೆಂಕಿ ಹಚ್ಚಿದ ಪ್ರಸಂಗವೂ ಇಂದು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ನಡೆಯಿತು. 
       ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದಲೂ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿಯಾಗಲು ತಂಬಾಕು ಮಂಡಳಿಯ ಮೈಸೂರು  ವಿಭಾಗೀಯ ವ್ಯವಸ್ಥಾಪಕ  ವೇಣುಗೋಪಾಲ್ ಹಾಗೂ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಆಗಮಿಸಿದ್ದ ವೇಳೆ ಅಧಿಕಾರಿಗಳ ಬೇಜವಾಬ್ದಾರಿ ಮಾತುಗಳಿಂದ ಬೇಸತ್ತ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನಡುವೆಯೇ ಮಾತನಾಡಿದ ವೇಣುಗೋಪಾಲ್ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಅನುಸರಿಸಿ ಬೆಲೆ ನೀಡಲಾಗುತ್ತಿದೆ, ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗುವುದರಿಂದ ಬೆಲೆಯಲ್ಲಿ ಏರುಪೇರು ಉಂಟಾಗಿದೆ ಎಂದರು. ತಂಬಾಕು ಖರೀದಿಸುವ  ಕಂಪನಿಗಳೊಂದಿಗೆ ರೈತರ ಹಿತಾಸಕ್ತಿ ಕಾಪಾಡುವ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ, ಇನ್ನೆರೆಡು ದಿನಗಳಲ್ಲಿ ಯಾವುದನ್ನು ಹೇಳುತ್ತೇನೆ ಎಂದರು. ನಂತರ ಮಾತನಾಡಿದ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಕಂಪನಿ ನಿಗದಿ ಪಡಿಸಿರುವ ಬೆಲೆಯನ್ನಷ್ಟೆ ನಾವು ನೀಡಲು ಸಾಧ್ಯ, ಬೇಡಿಕೆಯನ್ನಾಧರಿಸಿ ಬೆಲೆ ನಿಗದಿಯಾಗುತ್ತದೆ ಎಂದರಲ್ಲದೇ, ರೈತರೊಬ್ಬರು ಕೇಳಿದ ಪ್ರಶ್ನೆಗೆ ನಾನು ಬೆಲೆ ಕುರಿತು ಚರ್ಚಿಸಲು ಬಂದಿಲ್ಲ ಅದಕ್ಕೆ ಬೇರೆ ಅಧಿಕಾರಿಗಳಿದ್ದಾರೆ ಎಂದಿದ್ದು ರೈತ ಸಮೂಹವನ್ನು ಕೆರಳಿಸಿತು. ಈ ಸಂಧರ್ಭದಲ್ಲಿ ರೊಚ್ಚಿಗೆದ್ದ ರೈತರು ನಮ್ಮ ಸಮಸ್ಯೆ ಕುರಿತು ಚರ್ಚಿಸುವ ಆಸಕ್ತಿ ಇಲ್ಲದಿದ್ದರೆ ನೀವು ಇಲ್ಲಿಂದ ಹೊರಡಿ ಎಂದು ತಾಕೀತು ಮಾಡಿ ಗದ್ದಲ ಆರಂಭಿಸಿದರು. ಈ ಹಂತದಲ್ಲಿ ಕೆಲಹೊತ್ತು ನೂಕಾಟ ತಳ್ಳಾಟ ಆರಂಭವಾಗಿ ಗೋಂದಲದ ವಾತಾವರಣ ಮೂಡಿತ್ತು. ಇದೇ ಸಂಧರ್ಭದಲ್ಲಿ ಕೆರಳಿದ ರೈತರು ಅಧಿಕಾರಿಗಳು ಮತ್ತು ಸರ್ಕಾರವನ್ನು ಶಪಿಸುತ್ತಾ ತಂಬಾಕು ಬೇಲ್ ಗಳನ್ನು ಅಧಿಕಾರಿಗಳೆದುರೇ ಸುರಿದು ಬೆಂಕಿ ಹಚ್ಚಿದರು. ಅಂತಿಮವಾಗಿ ಮಾತನಾಡಿದ ರೈತ ಮುಖಂಡರು ಅಧಿಕಾರಿಗಳು ಬೆಲೆ ಏರಿಕೆ ಕುರಿತು ಸ್ಪಷ್ಟ ಚಿತ್ರಣ ನೀಡುವವರೆಗೂ ಮಾರುಕಟ್ಟೆ ಬಹಿಷ್ಕರಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ,ಕೃಷ್ಣೆಗೌಡ ಮತ್ತು ತಿಮ್ಮೇಗೌಡ ವಹಿಸಿದ್ದರು. 
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಮೈಸೂ ವಿಭಾಗೀಯ ವ್ಯವಸ್ಥಾಪಕ ವೇಣುಗೋಪಾಲ್ ಈ ಬಾರಿ 115ಮಿಲಿಯನ್ ತಂಬಾಕು ಉತ್ಪಾದನೆ ಗುರಿ ಸಾಧಿಸಲಾಗಿದೆ, ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದೇಶಗಳಲ್ಲಿ ಉತ್ಪಾದನೆ ಯಾಗುತ್ತಿದ್ದ ತಂಬಾಕಿನ ಪ್ರಮಾಣ ದುಪ್ಪಟ್ಟಾಗಿದೆ, ಜಿಂಬಾಬ್ವೆ ದೇಶದಲ್ಲಿ 40ಮಿಲಿಯನ್ ನಿಂದ 200 ಮಿಲಿಯನ್ ಗೆ ಏರಿದೆ, ದಕ್ಷಿಣ ಆಫ್ರಿಕಾದಲ್ಲೂ ಉತ್ಪಾದನಾ ಪ್ರಮಾಣ ಏರಿದೆ ಆದ್ದರಿಂದ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶೀಯ ಉತ್ಪನ್ನಕ್ಕೆ ಬೇಡಿಕೆ ಕುಸಿದಿದೆ ಎಂದರು. ಮಾರುಕಟ್ಟೆ ಆರಂಭವಾದಾಗ 130ರೂ. ಹೆಚ್ಚಿನ ಬೆಲೆ ಪ್ರತೀ ಕೆಜಿ ತಂಬಾಕಿಗೆ ದೊರಕಿದೆ, ಈಗ ುತ್ತಮ ದರ್ಜೆಯ ತಂಬಾಕಿಗೆ 110ರೂ ಸಿಗುತ್ತಿದೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುದಾರಿಸ ಬಹುದು ಎಂದರು. ಈ ಸಂಧರ್ಭದಲ್ಲಿ ಮಾರುಕಟ್ಟೆ ಅಧೀಕ್ಷಕ ಶಿವರುದ್ರಯ್ಯ ಹಾಜರಿದ್ದರು.

ಅರಕಲಗೂಡು: ಇದೇ ನ.25ರಂದು ಪಟ್ಟಣದಲ್ಲಿ ಏರ್ಪಟಾಗಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ಯೋಗಾರಮೇಶ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು 55ನೇ ಕನ್ನಡ ರಾಜ್ಯೊತ್ಸವವು ಪಟ್ಟಣದ ಶಿಕ್ಷಕರ ಭವನದ ಮುಂಬಾಗದಲ್ಲಿ ಸಂಜೆ 4ಗಂಟೆಗೆ ಜರುಗಲಿದೆ, ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಸಾಧಕರಾದ ಸಂಗೀತ ವಿದ್ಯಾನ್ ಪದ್ಮನಾಭ್, ಜನಪದ ತಜ್ಞ ಡಾ ಎಚ್ ಜೆ ಲಕ್ಕಪ್ಪಗೌಡ, ಅರ್ಥಶಾಸ್ತ್ರಜ್ಞ ಪ್ರೊ| ಕೆ ಸಿ ಬಸವರಾಜು, ಮತ್ತಿತರ ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ, ಹಾಗೂ ಶಿವಮೊಗ್ಗ ಸುಬ್ಬಣ್ಣ ಮತ್ತು ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಯೋಗಾರಮೇಶ್ ತಿಳಿಸಿದರು. 

ಸೋಮವಾರ, ನವೆಂಬರ್ 22, 2010

ತಂಬಾಕು ಬೆಲೆ ದಿಢೀರ್ ಕುಸಿತ:ರೈತರ ಪ್ರತಿಭಟನೆ

ಅರಕಲಗೂಡು/ರಾಮನಾಥಪುರ: ತಂಬಾಕು ಮಾರಾಟದ ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ಕಂಗಾಲಾದ ರೈತರು ನಿಶ್ಚಿತ ಬೆಲೆ ನೀಡುವಂತೆ ಆಗ್ರಹಿಸಿ  ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ  ಪ್ರತಿಭಟನೆ ನಡೆಸಿದರು. ಒಂದು ವಾರದಿಂದಲೂ ತಂಬಾಕಿನ ಮಾರುಕಟ್ಟೆ ದರ ಇಳಿಕೆಯಾಗಿದ್ದು ರೈತರ ಅಸಹನೆ ಹೊಗೆಯಾಡುತ್ತಿತ್ತು, ನಿಗದಿತ ಗುರಿಗಿಂತ ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗಿರುವುದು ಮತ್ತು ಈ ಮುಂಚೆ ಆಂದ್ರ ಪ್ರದೇಶದಲ್ಲಿ ನಡೆದ ಮಾರುಕಟ್ಟೆಯಲ್ಲೂ ಬೆಲೆ ಕುಸಿತ ಕಂಡಿದ್ದರಿಂದ ಅದು ಇಲ್ಲಿನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ.  ಕಳೆದ ವರ್ಷ ಪ್ರತೀ ಕೇಜಿಗೆ 130ರೂ ಇದ್ದ ತಂಬಾಕು ಬೆಲೆ ಈ ಬಾರಿ 75ಕ್ಕೆ ಇಳಿದಿದೆ, ಇದು ರೈತರಿಗೆ ಕಣ್ಣೀರು ತರಿಸುತ್ತಿದೆ. ಸೋಮವಾರ ಬೆಳಿಗ್ಗೆ ಪ್ಲಾಟ್ ಫಾರಂ 63ರಲ್ಲಿ 1250ಬೇಲ್ (1ಬೇಲ್=50-150ಕೆಜಿ) ಆವಕವಾಗಿತ್ತು. ಈ ಹಿಂದೆ ಪ್ರತೀ ಕೆಜಿಗೆ 130ರೂ ಬೆಲೆ ಲಭ್ಯ ವಾಗುತ್ತಿತ್ತು, ಸರಾಸರಿ 106ರೂ. ಬೆಲೆ ಇತ್ತಾದರು ಇಂದು ದಿಢೀರನೇ ಪ್ರತಿ ಕೆಜಿಗೆ ರೂ.75 ನಿಗದಿ ಗೊಳಿಸಿದ್ದರಿಂದ ರೈತರು ಕಂಗಾಲಾದರು ಮತ್ತು ತಂಬಾಕು ಕೊಳ್ಳಲು ಬಂದಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಅಚಾನಕ್ಕಾಗಿ ಮಳೆ ಬೀಳುತ್ತಿರುವುದರಿಂದ ಬೆಳೆಯ ಇಳುವರಿಯೂ ಸಹಾ ಕುಂಠಿತಗೊಂಡಿದೆ ಈ ನಡುವೆ ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಿಗದಿದ್ದರೆ ಬದುಕು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡ ರೈತರು ತಂಬಾಕು ಬೆಳೆಗಾಗಿ ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ ಮುಂದೇನು ಮಾಡಬೇಕೋ ತೋಚುತ್ತಿಲ್ಲ, ನಾಳೆ ಮೈಸೂರಿನಿಂದ ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಸುಧಾರಿಸುವ ಭರವಸೆ ನೀಡಿದ್ದಾರೆ ನಮಗೆ ನಿರೀಕ್ಷಿತ ಕನಿಷ್ಟ ಬೆಲೆ 95ರೂ ಸಿಕ್ಕರೂ ಬದುಕುತ್ತೇವೆ ಇಲ್ಲದಿದ್ದರೆ ಸತ್ತಂತಯೇ ಎಂದು ವಿಷಾದದಿಂದ ನುಡಿದರು. ಇಂದು ಪ್ರತಿಭಟನೆಯ ನಂತರ ಅರಕಲಗೂಡಿಗೆ ಆಗಮಿಸಿದ ತಂಬಾಕು ಬೆಳೆಗಾರರು ತಹಸೀಲ್ದಾರರನ್ನು ಭೇಟಿಯಾಗಿ  ನ.23ರಂದು ಸೂಕ್ತ ಬೆಲೆ ನಿಗದಿಗೊಳಿಸುವಂತಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ, ಯೋಗೇಶ್, ಕೃಷ್ಣೆಗೌಡ ವಹಿಸಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ ತಂಬಾಕು ಮಂಡಳಿಯ ಅಧೀಕ್ಷಕ ಶಿವರುದ್ರಯ್ಯ ಕಳೆದ ಬಾರಿಗಿಂತ ಈ ಸಲ ಮಾರುಕಟ್ಟೆ ದರ ಕುಸಿದಿದೆ ಆದರೆ ಪ್ಲಾಟ್ ಫಾರಂ 7ರಲ್ಲಿ ಬಂದ 1200ಬೇಲುಗಳು ಪೂರ್ಣವಾಗಿ ಮಾರಾಟವಾಗಿವೆ ಎಂದರು.
ಮನವಿ: ತಂಬಾಕಿಗೆ ಸೂಕ್ತ ದರ ನೀಡುವಂತೆ ರಾಮನಾಥಪುರ ತಂಬಾಕು ಮಾರುಕಟ್ಟೆ ಆವರಣದಲ್ಲಿ ಬೆಳಿಗ್ಗೆ 9ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಎಲ್ಲ ತಂಬಾಕು ಬೆಳೆಗಾರರು ಭಾಗವಹಿಸುವಂತೆ ರೈತ ಮುಖಂಡ ರಾಮೇಗೌಡ ಮನವಿ ಮಾಡಿದ್ದಾರೆ.
ಆಗ್ರಹ:  ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣವೇ ಸೂಕ್ತ ಬೆಲೆ ನಿಗದಿಗೊಳಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕು ಎಂದು ಬಿಜೆಪಿ ವಕ್ತಾರ ಕೆ ಎನ್ ಪ್ರದೀಪ್ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಸುಮಾರು 15ಸಾವಿರ ತಂಬಾಕು ಬೆಳೆಗಾರರಿದ್ದು  ಅವರು ಬೆಳೆದ ತಂಬಾಕಿಗೆ ಸರಾಸರಿ 70ರೂ ದೊರಕುತ್ತಿದೆ ಆದರೆ ಒಂದು ಕೆಜಿ ತಂಬಾಕು ಉತ್ಪಾದಿಸಲು ರೈತನಿಗೆ 70-75ರೂ ಆಗುತ್ತದೆ ಆದ್ದರಿಂದ ಮಂಡಳಿಯು ಪ್ರತೀ ಕೆಜಿಗೆ ಕನಿಷ್ಠ ರೂ.100 ನಿಗದಿಗೊಳಿಸಬೇಕು ಎಂದಿರುವ ಅವರು ಈ ಕುರಿತು ಡಿಸೆಂಬರ್ 5ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅರಕಲಗೂಡು:ಅರಕಲಗೂಡು ತಾಲೂಕು ವಕೀಲರ ಸಂಘದ 2010-11ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಬಿ ಸಿ ರಾಜೇಶ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿಯಾಗಿ ವಕೀಲ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.

ಮಂಗಳವಾರ, ನವೆಂಬರ್ 16, 2010

ದೌರ್ಜನ್ಯಕ್ಕೊಳಗಾದವನ ಮೇಲೆ ಮಾನಭಂಗ ದೂರು ದಾಖಲು!

ಅರಕಲಗೂಡು: ಕಳೆದ ಭಾನುವಾರ ಮುಸುವತ್ತೂರು ಗ್ರಾಮದಲ್ಲಿ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಲ್ಪಟ್ಟ ವ್ಯಕ್ತಿಯ ವಿರುದ್ದ ತಡವಾಗಿ ಮಾನಭಂಗದ ಪ್ರಕರಣ ದಾಖಲಾಗಿದ್ದು ಪ್ರಕರಣ ತಿರುವು ಪಡೆದುಕೊಂಡಿದೆ.
ಕೂಲಿ ಕೆಲಸಕ್ಕೆ ಬರಲಿಲ್ಲವೆಂಬ ವಿಚಾರಕ್ಕೆ ಭಾನುವಾರ ಸಂಜೆ 3ಗಂಟೆ ಸುಮಾರಿಗೆ ರಾಮಚಂದ್ರ(48) ಎಂಬ ದಲಿತ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಲಾಗಿತ್ತು, ಅರೆಪ್ರಜ್ಞಾವಸ್ಥೆ ತಲುಪಿದ ಆತನನ್ನು ಸಂಭಂಧಿಕರು ಬಿಡಿಸಿ ರಾತ್ರಿವೇಳೆಗೆ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹಾಗೂ ಆತನನ್ನು ಜಾತಿ ಹೆಸರಿನಿಂದ ನಿಂದಿಸಿ ಹಲ್ಲೆ ನಡೆಸಿದವರ ವಿರುದ್ಧ ಅರಕಲಗೂಡು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಸೋಮವಾರ ರಾತ್ರಿಯ ವೇಳೆಗೆ ದೌರ್ಜನ್ಯ ನಡೆಸಿದ ಆರೋಪಿಗಳಲ್ಲಿ ಒಬ್ಬರಾದ ಯಶೋದಮ್ಮ , ರಾಮಚಂದ್ರನ ವಿರುದ್ದ ಮಾನಭಂಗ ಪ್ರಯತ್ನದ ದೂರು ದಾಖಲಿಸಿದ್ದಾಳೆ. ತಾನು ದನ ಕಾಯುತ್ತಿದ್ದ ವೇಳೆ ತನ್ನ ಮಾನಭಂಗಕ್ಕೆ ರಾಮಚಂದ್ರ ಯತ್ನಿಸಿದ್ದರಿಂದ ಕೂಗಿಕೊಂಡೆ ಆಗ ನನ್ನ ರಕ್ಷಣೆಗೆ ಬಂದ  ರಾಜಣ್ಣ, ಸಣ್ಣಪ್ಪ, ದೊಡ್ಡಪ್ಪ ಮತ್ತು ಮಲ್ಲಪ್ಪ ನನ್ನನ್ನು ಪಾರು ಮಾಡಿದರು ಎಂದು ದೂರಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಪರಶುರಾಂ ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಈ ಬಗ್ಗೆ ಗ್ರಾಮದಲ್ಲಿ ಯಾವುದೇ ಚಕಾರವೆತ್ತಿಲ್ಲ ಅಷ್ಟೇ ಅಲ್ಲ ಘಟನೆಗೆ ಕಾರಣರಾದವರನ್ನು ಬಂದಿಸಿಲ್ಲ ಎನ್ನಲಾಗಿದೆ. ಪ್ರಕರಣವನ್ನು ರಾಜೀ ಮಾಡಿಸುವ ಹಿನ್ನೆಲೆಯಲ್ಲಿ ಕೆಲವು ಮದ್ಯವರ್ತಿಗಳು ಪ್ರತೀ ದೂರು ದಾಖಲಾಗುವಂತೆ ಮಾಡಿದ್ದಾರೆ ಇದನ್ನು ತಾವು ಒಪ್ಪುವುದಿಲ್ಲ, ದೌರ್ಜನ್ಯಕ್ಕೊಳಗಾದ ದಲಿತನಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಬಿಎಸ್ ಪಿ ಮುಖಂಡ ರಾಜೇಶ್ ಎಚ್ಚರಿಸಿದ್ದಾರೆ.

ಅರಕಲಗೂಡು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಪಂಚಾಯ್ತಿಯ ಪಿಡಿಓ ಹಾಗೂ ಕಾರ್ಯದರ್ಶಿ ಚೆಕ್ ಗಳಿಗೆ ಅಧ್ಯಕ್ಷರಿಂದ ಬಲವಂತದ ಸಹಿ ಹಾಕಿಸುತ್ತಾ ಅನುಮಾನಸ್ಪದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಡ್ಡರಹಳ್ಳಿ ಗ್ರಾ.ಪಂ. ಸದಸ್ಯರುಗಳ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಸದಸ್ಯರುಗ ಳಾದ ಎಸ್ ಪಿ ರೇವಣ್ಣ , ಇರ್ಶಾದ್, ಮೋಹನ್ , ಸಾಕಮ್ಮ, ಶಶಿಕಲ, ಉಪೇಂದ್ರ ಪಿಡಿಓ ಮುರುಳಪ್ಪ ಹಾಗೂ ಕಾರ್ಯದರ್ಶಿ ಕೃಷ್ಣೇಗೌಡ, ಪಂಚಾಯ್ತಿಯ ಅಧ್ಯಕ್ಷರಾದ ಸಾವಿತ್ರಮ್ಮನವರಿಗೆ ಬೆದರಿಕೆ ಹಾಕಿ ಬಲವಂತದಿಂದ 1.70ಲಕ್ಷದ ಚೆಕ್ ಗೆ ಸಹಿ ಪಡೆದಿದ್ದಾರೆ. ಸದರಿ ಚೆಕ್ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದುದಾಗಿದೆ ಈ ಬಗ್ಗೆ ಪ್ರಶ್ನಿಸಿದರೆ ಪಿಡಿ ಓ ಮರುಳಪ್ಪ ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ , ಕ್ಯಾಶ್ ಪುಸ್ತಕದಲ್ಲಿ ಈ ಮಾಹಿತಿ ದಾಖಲಾಗಿಲ್ಲ ಆದುದರಿಂದ ಪ್ರಕರಣ ಕುರಿತು ತನಿಖೆ ನಡೆಸಿ ತಪ್ಪಿತ ಸ್ಥ ನೌಕರರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

ಸೋಮವಾರ, ನವೆಂಬರ್ 15, 2010

ಕೂಲಿಗೆ ಬಾರದ ದಲಿತನಿಗೆ ಮರಕ್ಕೆ ಕಟ್ಟಿ ಹೊಡೆದರು!

ಅರಕಲಗೂಡು: ಕೂಲಿಗೆ ಬರಲು ನಿರಾಕರಿಸಿದ ದಲಿತನೋರ್ವನಿಗೆ ಸವರ್ಣಿಯರು ಮರಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆ ತಾಲ್ಲೂಕಿನ ಮುಸುವತ್ತೂರಿನಿಂದ ವರದಿಯಾಗಿದೆ.
ಮುಸುವತ್ತೂರು ಗ್ರಾಮದ ರಾಮಚಂದ್ರ(48) ಎಂಬಾತನೇ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಾಗಿದ್ದು ಸಧ್ಯ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾನೆ. ಮುಸುವತ್ತೂರು ಗ್ರಾಮದ ಸವರ್ಣಿಯರ ಮನೆಗಳ ಹಬ್ಬ ಹರಿದಿನ, ತಿಥಿ ಇತ್ಯಾದಿ ಕಾರ್ಯಕ್ರಮಗಳಿಗೆ ದಲಿತರು  ಚಾಕರಿ ಮಾಡಲು ಹೋಗುವುದು ಸಾಮಾನ್ಯ ವಿಚಾರ , ಆದರೆ ಈಗ್ಯೆ ಕೆಲ ತಿಂಗಳುಗಳಿಂದ ಸವರ್ಣಿಯರ ಮನೆಗಳಿಗೆ ಕೂಲಿ ಹೋಗುವುದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮದ್ಯಾಹ್ನ 3.30ರಲ್ಲಿ ಜಮೀನಿನಿಂದ ವಾಪಾಸಾಗುತ್ತಿದ್ದ ರಾಮಚಂದ್ರನ ಮೇಲೆ ಕ್ಯಾತೆ ತೆಗೆದ ಮುಸುವತ್ತೂರಿನ ಪಟೇಲರ ಮಗ ರಾಜಣ್ಣ, ಆತನ ಪತ್ನಿ ಯಶೋದಮ್ಮ, ಸಣ್ಣಪ್ಪ, ದೊಡ್ಡಪ್ಪ ಮತ್ತು ಆತನ ಪುತ್ರ ಮಲ್ಲಪ್ಪ ನಿಂದಿಸಿ ಹಲ್ಲೆನಡೆಸಿದರು,ನಂತರ ಲೈಟ್ ಕಂಬಕ್ಕೆ ನನ್ನನ್ನು ಕಟ್ಟಿಹಾಕಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಥಳಿಸಿದರು ಎಂದು ಆಸ್ಪತ್ರೆಯಲ್ಲಿದ್ದ ರಾಮಚಂದ್ರ ಪತ್ರಿಕೆಗೆ ತಿಳಿಸಿದರು. ಅದೇ ಸಂಧರ್ಭ ನನ್ನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಲು ಯತ್ನಿಸಿದರು ಎಂದು ರಾಮಚಂದ್ರ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರು. ಸಂಜೆಯ ವೇಳೆಗೆ ರಾಮಚಂದ್ರನ ಬಾಂಧವರಾದ ದ್ಯಾವಯ್ಯ, ಕೃಷ್ಣ, ರಂಗಸ್ವಾಮಿ ಬಿಡಿಸಿಕೊಳ್ಳಲು ಹೋದಾಗ ಆರೋಪಿಗಳು ಅವರಿಗೂ ಕೊಲೆ ಬೆದರಿಕೆ ಹಾಕಿದರು ಎಂದು ಅರಕಲಗೂಡು ಪೋಲೀಸರಿಗೆ ದೂರಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಬೀಗರ ಔತಣಕ್ಕೆ ಕರೆದು ಹಿಗ್ಗಾ-ಮುಗ್ಗಾ ಥಳಿಸಿದರು
ಅರಕಲಗೂಡು: ಬೀಗರ ಔತಣಕ್ಕೆ ಬಂದ ದಲಿತರು ಸಮಾನ ಪಂಕ್ತಿಯಲ್ಲಿ ಕುಳಿತರು ಎಂದು ಸಿಟ್ಟಿಗೆದ್ದ ಸವರ್ಣಿಯರು ಹಿಗ್ಗಾ-ಮುಗ್ಗಾ ಥಳಿಸಿದ್ದರಿಂದ 6ಮಂದಿ ಗಾಯಗೊಂಡ ಘಟನೆ ಕಳೆದ ಭಾನುವಾರ ಸಂಜೆ ತಾಲೂಕಿನ ಗೊಬ್ಬಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಗೊಬ್ಬಳಿ ಗ್ರಾಮದ ಸುಂದರಮ್ಮ ಎಂಬುವರ ಮನೆಗೆ ಬೀಗರ ಔತಣಕ್ಕೆ ಸಾಮೂಹಿಕ ಆಹ್ವಾನವಿದ್ದುದರಿಂದ ಸಂಜೆ 5-30ಕ್ಕೆ ತೆರಳಿದ್ದರೆನ್ನಲಾಗಿದೆ. ಈ ಸಂಧರ್ಭದಲ್ಲಿ ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಸವರ್ಣಿಯರ ಸಮಾನ ಪಂಕ್ತಿಯಲ್ಲಿ ಸುರೇಶ,ಜವರಯ್ಯ, ಸಣ್ಣಯ್ಯ, ಸತೀಶ, ಹಲಗಯ್ಯ, ಕುಮಾರ ಮತ್ತಿತರ ದಲಿತರು ಕುಳಿತಾಗ ಜಾತಿಯ ಹೆಸರಿಡಿದು ನಿಂದಿಸಿದ ಸವರ್ಣಿಯರು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದರು ಎಂದು ಕೊಣನೂರು ಪೋಲೀಸರಿಗೆ ದೂರಲಾಗಿದೆ. ನಂತರ ದಲಿತರ ಕೇರಿಗೂ ನುಗ್ಗಿ ದೊಣ್ಣೆ ಮತ್ತು ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸುಟ್ಟುಹಾಕುವುದಾಗಿ ಬೆದರಿಸಿದರು ಎನ್ನಲಾಗಿದೆ. ನಂತರ ಗಾಯಾಳುಗಳನ್ನು ಕೊಣನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಬಿಎಸ್ ಪಿ ನೇತೃತ್ವದಲ್ಲಿ ದಲಿತರು ಕೊಣನೂರು ಪೋಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜು ಪ್ರತಿಭಟನಾ ನಿರತರಿಂದ ಮನಿವಿ ಸ್ವೀಕರಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಬಿಎಸ್ ಪಿ ಮುಖಂಡ ಬಿ ಸಿ ರಾಜೇಶ್ ವಹಿಸಿದ್ದರು.

ಹಾಸನ: ನಗರದಿಂದ ಅರಕಲಗೂಡಿಗೆ ತೆರಳಲು ಸಾರಿಗೆ ಬಸ್ ಗಳ ಕೊರತೆ ಉಂಟಾಗಿದ್ದರಿಂದ ನೂರಾರು ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಹಾಸನ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆಯಿತು.
ಪ್ರತಿನಿತ್ಯ ಹಾಸನದಿಂದ ಅರಕಲಗೂಡು ತಾಲ್ಲೂಕು ಕೇಂದ್ರಕ್ಕೆ 600ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರು ತೆರಳುತ್ತಿದ್ದು ಬಹುತೇಕರು ಬಸ್ ಪಾಸ್ ಹೊಂದಿದ್ದಾರೆ, ಬಸ್ ನಲ್ಲಿ ಇವರೇ ತುಂಬಿ ಕೊಂಡರೆ ಕಲೆಕ್ಷನ್ ಆಗುವುದಿಲ್ಲ ಎಂಬ ನೆಪ ಒಡ್ಡಿ  ಬಸ್ ಚಾಲಕರು ಮತ್ತು ನಿರ್ವಾಹಕರುಗಳು ಬೆಳಿಗ್ಗೆ 8ಗಂಟೆಯಿಂದ 9-30ರವರೆಗೂ ಬಸ್ ಹೊರಡಿಸುವುದೇ ಇಲ್ಲ ೆಂದು ಪ್ರತಿಭಟನಾಕಾರರು ಆರೋಪಿಸಿದರು. ತಕ್ಷಣ ಪ್ರತಿಭಟನೆಗೆ ಮಣಿದ ನಿಲ್ದಾಣ ವ್ಯವಸ್ಥಾಪಕರು ಹೆಚ್ಚುವರಿ ಬಸ್ ಗಳನ್ನು ಓಡಿಸಿ ಪ್ರತಿಭ ಟನಾನಿರತರನ್ನು ಶಾಂತಗೊಳಿಸಿದರು. ಅರಕಲಗೂಡಿನಿಂದ ಸಂಜೆ 5ಗಂಟೆಯಿಂದ 7ಗಂಟೆಯವರೆಗೂ ಸಾರಿಗೆ ಬಸ್ ಗಳು ಓಡಿಸುವುದಿಲ್ಲ ಹಾಗೆಯೇ ರಾತ್ರಿ 9-30ರ ನಂತರ ಹಾಸನದಿಂದ ಅರಕಲಗೂಡು ತಾಲೂಕಿಗೆ ತೆರಳುವವರಿಗೂ  ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ.

ಶನಿವಾರ, ನವೆಂಬರ್ 13, 2010

ಉದ್ಯೋಗ ಖಾತ್ರಿ ಕರ್ಮಕಾಂಡ: ಮಾರ್ಗಸೂಚಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ!!

  • ಅರಕಲಗೂಡು ಜಯಕುಮಾರ್
ಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ. ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ  ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ. ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು  ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು  ನಿಗದಿಪಡಿಸಬೇಕು  ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ  ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು?  ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ,ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲಿ ಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಗುತ್ತಿಗೆದಾರು  ಕೂ ಲಿಕಾರರ ಹಣವನ್ನು ಅಕ್ರಮವಾ ಗಿ ಡ್ರಾ ಮಾಡಿದ್ದಾರೆ.ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು  ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ ಅಕ್ರಮವಾಗಿ ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು  ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.  ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ  ರಹಸ್ಯ ವರದಿಯಲ್ಲಿನ ಮುಖ್ಯಾಂಶಗಳು ಈ ಮುಂದಿನಂತಿವೆ.
  •  ಅನುಷ್ಠಾನಾಧಿಕಾರಿಯಾದ ಜಿ.ಪಂ. ಸ.ಕಾ.ಅ. ನಾಗೇಶ ವಾಸ್ತವವಾಗಿ ಕಾರ್ಯ ನಿರ್ವಾಹಕ ಏಜೆನ್ಸಿಯಾಗಿದ್ದು ತಮ್ಮ ಅಧೀನ ಕಾರ್ಯ ನಿರ್ವಾಹಕ ತಾಂತ್ರಿಕ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲರಾಗಿರುತ್ತಾರೆ.ಐವರು ಇಂಜಿನಿಯರುಗಳ ತಾಂತ್ರಿಕ ಮಾನವ ಸಂಪನ್ಮೂಲ ಇದ್ದಾಗ್ಯೂ ಸಹಾ ಕಿ.ಇಂ. ನಿಂಗೇಗೌಡ ಎಂಬ ಶಾಖಾ ಇಂಜಿನಿಯರ್ ಗೆ ಪೂರ್ಣ ತಾಲೂಕಿಕನ MNREGA ಅನುಷ್ಠಾನ ಸಾಧ್ಯವಾಗದಿರುವುದಕ್ಕೆ ಕಾರಣಕರ್ತರಾಗಿರುತ್ತಾರೆ. ಕಾಮಗಾರಿಗಳ ಕಾರ್ಯನಿರ್ವಹಣೆ ಉಸ್ತುವಾರಿ ಮತ್ತು ದಾಖಲೆಗಳ ನಿರ್ವಹಣೆ ಈ ಎಲ್ಲ ವಿಭಾಗಗಳಲ್ಲಿಯೂ ಸ.ಕಾ.ಇಂ. ಮತ್ತು ಕಿ.ಇಂ. ಇಬ್ಬರು ವಿಫಲರಾಗಿರುತ್ತಾರೆ.ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿರುತ್ತದೆ.ಕಾಮಗಾರಿಗಳ ಅಳತೆಗಳು ದಿನಾಂಕಗಳಲ್ಲಿ ಸಾಕಷ್ಟು ವ್ಯತ್ಯಯವಿದ್ದು ದಾಖಲೆಗಳು ಕೇವಲ ದಾಖಲೆ ಮಾಡುವ ಹಾಗೂ ಸ್ವ-ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರವೇ ಸೃಷ್ಟಿಸಲಾಗಿದೆ. ಸುಮಾರು 20ಕೋಟಿಗೂ ಹೆಚ್ಚು ಮೊತ್ತವುಳ್ಳ ಅಂದಾಜುಗಳ ವಿವಿಧ ಕಾಮಗಾರಿಗಳಿಗೆ ರೂ.284.00ಲಕ್ಷ ಮೊತ್ತದ ಸಾಮಾಗ್ರಿ ಬಿಲ್ಲು ತಯಾರಿಸಿ ಪಾವತಿಸಿದ್ದು ಸೂಕ್ತ ಉಸ್ತುವಾರಿ, ನಿರ್ವಹಣೆ, ಪರಿಶೀಲನೆ, ದಾಖಲೆ ಧೃಢೀಕರಣ ನಿರ್ವಹಿಸಿರುವುದಿಲ್ಲ.
  • ಜಿ.ಪಂ. ಕಿ.ಇಂ. ನಿಂಗೇಗೌಡ ರವರು ಅಂದಾಜು ತಯಾರಿಕೆ ಕಾಮಗಾರಿಯ ಕಾರ್ಯ ನಿರ್ವಹಣೆ, ಉಸ್ತುವಾರಿ ಪರಿಶೀಲನೆ, ದಾಖಲೆಗಳ ನಿರ್ವಹಣೆಯನ್ನು ಸರ್ಕಾರದ ನಿಯಮಾವಳಿಯ ರೀತ್ಯಾ ನಿರ್ವಹಿಸದೇ ಮನಬಂದಂತೆ ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಅಂದಾಜು ತಯಾರಿಕೆಯನ್ನು ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗಿರುವ ಮೊತ್ತಕ್ಕೆ ಮಾಡದೇ ಕ್ರಿಯಾ ಯೋಜನೆಯಲ್ಲಿ ಸೂಚಿಸಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ತಯಾರಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣರಾಗಿರುತ್ತಾರೆ ಹಾಗೂ ಕೆಲವು ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ಸಹಾ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಂದ ಮಂಜೂರು ಮಾಡಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣಕರ್ತರಾಗಿರುತ್ತಾರೆ. ಈ ರೀತಿಯ ಕಾರ್ಯ ನಿರ್ವಹಣೆಯಲ್ಲಿ ತಾಲ್ಲೂಕಿನ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ.
  • ಅಳತೆ ಪುಸ್ತಕಗಳಲ್ಲಿ ಕೆಲವು ಸಾಮಾಗ್ರಿ ಬಿಲ್ಲುಗಳಲ್ಲಿ ಅಳತೆಗಳ ನಮೂದು ದಿನಾಂಕಗಳನ್ನು ಖಾಲಿ ಇಟ್ಟುಕೊಂಡು ನಂತರದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಮೂದಿಸಿರುವುದು ಕಂಡು ಬರುತ್ತದೆ.ಅಳತೆ ಪುಸ್ತಕಗಳನ್ವಯ ಅಳತೆ ಪುಸ್ತಕಗಳನ್ವಯ ಅಳತೆ ದಾಖಲೆಯ ದಿನಾಂಕಗಳು ಕ್ರಮಬದ್ದವಾಗಿರುವುದಿಲ್ಲ. ಇದು ಪೂರ್ಣ ಸಂಶಯಕ್ಕೆ ಕಾರಣವಾಗಿದೆ. ಇದಲ್ಲದೇ ಬಹಳಷ್ಟು ಖಾಸಗಿ ಫಲಾನುಭವಿಗಳ ಜಮೀನು ಸಮತಟ್ಟು ಕಾರ್ಯಕ್ರಮಗಳಿಗೆ ಗ್ರಾವೆಲ್ ಮಣ್ಣು ಹಾಕಿ ಸಮತಟ್ಟು ಮಾಡಿರುವುದು ಎಂದು ಬಿಲ್ಲುಗಳಲ್ಲಿ ದಾಖಲಿಸಿ ಟ್ರಾಕ್ಟರ್ ಬಾಡಿಗೆ, ಗ್ರಾವೆಲ್ ಮಣ್ಣು ಸಂಗ್ರಹಣೆಗಾಗಿ ಹಣ ನೀಡಿರುವುದು ಕಂಡು ಬರುತ್ತದೆ. ಇದು ಯೋಜನೆಯ ಫಲಕಾರಿ ಅನುಷ್ಠಾನವಲ್ಲ.

ಶುಕ್ರವಾರ, ನವೆಂಬರ್ 12, 2010

ಉದ್ಯೋಗ ಖಾತ್ರಿ ಅಕ್ರಮ:ಮಾರ್ಗಸೂಚಿ ಲೆಕ್ಕಕ್ಕಿಲ್ಲ ನೈಜಕೂಲಿಕಾರರಿಗೆ ಕೆಲಸವಿಲ್ಲ!

  • ಅರಕಲಗೂಡು ಜಯಕುಮಾರ್
ಅರಕಲಗೂಡು: ಮಹಾತ್ಮ ಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ. ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ  ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ. ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು ಮಾನದಂಡಗಳಿದ್ದು ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು  ನಿಗದಿಪಡಿಸಬೇಕು  ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ  ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು?  ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ, ಕೂಲಿಕಾರರಿಗೆ ಕೆಲಸ ಕೊಡುವ ಬದಲು ಅನಧಿಕೃತವಾಗಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ, ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲ ೂಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೂ  ಲಿ ಹಣ ಡ್ರಾ ಮಾಡಲಾಗಿದೆ. ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು  ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ  ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು  ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೈಜವಾಗಿ ಕಾಮಗಾರಿಗಳನ್ನು ಕೂಲಿಯಾಳುಗಳು ನಿರ್ವಹಿಸದಿದ್ದುದರಿಂದ ಇವ ತ್ತು ಕೂಲಿ ಹಣವನ್ನು ಕೇಳಿಕೊಂ ಡು ಯಾವ ಕಾರ್ಮಿಕನು ಧ್ವನಿಯೆತ್ತುತ್ತಿಲ್ಲ. ಈ ಎಲ್ಲ ಅಂಶಗಳನ್ನು ಸವಿಸ್ತಾರವಾಗಿ ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.ಪತ್ರದ ಮುಂದುವರೆದ ಮುಖ್ಯಾಂಶಗಳು ಈ ಮುಂದಿನಂತಿವೆ.
  • ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.


  • ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ.

  • ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.

  • ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.(ಮುಂದುವರೆಯುವುದು)
ಅರಕಲಗೂಡು: ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ  ಮಳೆಯಿಂದಾಗಿ 100ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು  ಹಲವುಕೆರೆ-ಕಟ್ಟೆ-ನಾ ಲೆಗಳು ಒಡೆದು ಸಾವಿರಾರು ಎಕರೆ ಬೆಳೆ ಜಲಾವೃತ್ತವಾಗಿದೆ. ಗುರುವಾರ ಸಂಜೆ ಸುರಿದ ಮಳೆಗೆ ಮಲ್ಲಿಪಟ್ಟಣದಲ್ 2, ರಾಮನಾಥಪುರದಲ್ಲಿ -36 ಕೊಣನೂರಿನಲ್ಲಿ 32, ಕಸಬ ಹೋಬಳಿಯಲ್ಲಿ 8, ದೊಡ್ಡಮಗ್ಗೆಯಲ್ಲಿ 23 ಮನೆಗಳು ಕುಸಿದಿವೆ ಯಾದರೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಳೆದ 4ದಿನಗಳಿಂ ದ ತಾಲ್ಲೂಕಿನಾಧ್ಯಂತ ಮಳೆಗೆ 200ಕ್ಕೂ ಹೆಚ್ಚು ಕುಸಿದಿರುವ ವರದಿಯಾಗಿದೆ. ರಾಗಿಬೈಚನಹಳ್ಳಿಯಲ್ಲಿ ಕಲ್ವರ್ಟ್ ಕುಸಿದು ನೂರಾರು ಎಕರೆ ಜಮೀನು ಜಲಾವೃತ್ತವಾಗಿದ್ದರೆ, ಕಾಳೇನಹಳ್ಳಿಯಲ್ಲಿ ಕೆರೆ ಏರಿ ಒಡೆದಿದ, ಕೊಣನೂರು ಹೋಬಳಿಯಲ್ಲಿ ಹಾರಂಗಿ ಬಲದಂಡೆ ನಾಲೆ ಗೋಡೆ  ಕುಸಿದಿದೆ, ಮಲ್ಲಿಪಟ್ಟಣದ ಮೊರಾ  ರ್ಜಿಶಾಲೆಯಮೇಲ್ಚಾವಣಿ ಕುಸಿದಿದೆ, ಮುತ್ತಿಗೆ ಕೆರೆ ಏರಿ ಒಡೆದ ಪರಿಣಾಮ ಸಾವಿರಾರು ಎಕರೆ ಯಲ್ಲಿದ್ದ ತೆಂಗು,ಅಡಿಕೆ, ಬಾಳೆ, ಶುಂಠಿ, ಜೋಳ ಹಾಗೂ ಭತ್ತದ ಫಸಲು ನಾಶವಾಗಿದೆ. ಗ್ರಾಮೀಣ ಭಾಗದ ಹಲವು ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸಂ ಚಾರಕ್ಕೆ ವ್ಯತ್ಯಯವಾಗಿದೆ. ಮುದ್ದನಹಳ್ಳಿ ಬಳಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ರಸ್ತೆ ದಾಟಲು ಯತ್ನಿಸಿದ ಗೂಡ್ಸ್ ಆಟೋ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾಗ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಆಟೋ ಹಾಗೂ ಚಾಲಕನನ್ನು ರಕ್ಷಿಸಲಾಗಿದೆ.  ಗುರುವಾರ ಸಂಜೆ  ಸಿಡಿಲಿನಹೊಡೆತಕ್ಕೆ ಸಿ ಲುಕಿಮೃತಪಟ್ಟ ಬಾಲಕಿ ಮೇಘ ಳ  ಅಂತ್ಯಕ್ರಿಯೆ ಇಂದು ಜರುಗಿತು. ಗಾಯಗೊಂಡಿದ್ದ ಮತ್ತಬ್ಬ  ಬಾಲಕಿ ದೀಪಿಕಾ ಹಾಗೂ ಕಾಳಯ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಾದೇಶ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಬೊಮ್ಮೇಗೌಡ, ತಹಸೀಲ್ದಾರ್ ಸವಿತಾ, ಶಾಸಕ ಎ. ಮಂಜು, ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅರಕಲಗೂಡು : ನೆರೆ ಹಾವಳಿ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಚರ್ಚಿಸಲು ಶಾಸಕ ಎ. ಮಂಜು  ಶುಕ್ರವಾರತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದರು.  ನೆರೆಹಾವಳಿ ಪ್ರದೇಶಕ್ಕೆ ತಗೆರಳದೇ ನಿರ್ಲಕ್ಷಯ ಧೋರಣೆ ತಳೆದ ಜಿ.ಪಂ. ಇಂಜಿನಿಯರ್ ಈಶ್ವರ್  ನ್ನು ಅಮಾನತ್ತುಗೊಳಿಸಲು ಸೂಚಿಸಿದ ಶಾಸಕ ಮಂಜು ಬೆಳೆ ನಷ್ಟ ಕುರಿತು ಸೂಕ್ತ ಮಾಹಿತಿ ನೀಡದ ಸಹಾಯಕ ಕೃಷಿ ನಿರ್ದೇಶಕ ವಾಸುವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 15ದಿನಗಳಿಂದ ಮಳೆ ಸುರಿಯುತ್ತಿದ್ದರೂ ಸಹ ಸ್ಥಳಕ್ಕೆ ಭೇಟಿ ನೀಡದೆ ಮುಗುಮ್ಮಾಗಿದ್ದ ಅಧಿಕಾರಿಯ ವರ್ತನೆಯನ್ನು ಖಂಡಿಸಿದ ಅವರು 3ದಿನದೊಳಗೆ ಸಮಗ್ರ ಮಾಹಿತಿ ನೀಡಲು ಸೂಚಿಸಿದರು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಮಳೆ ಹಾನಿ ಕುರಿತ ವರದಿ ಹಾಗೂ ಪರಿಹಾರೋಪಾಯ ಒದಗಿಸುವಂತೆ ಸೂಚಿಸಿದರು. ಸಭೆಯಲ್ಲಿ ನಿನ್ನೆ ಸಿಡಿಲಿನಿಂದ ಮೃತಪಟ್ಟ ಗಂಜಲಗೋಡಿನ ಬಾಲಕಿಯ ಪೋಷಕರಿಗೆ 1ಲಕ್ಷರೂಪಾಯಿಯ ಪರಿಹಾರ ವಿತರಿಸಿದ ಶಾಸಕರು ಅದೇ ಘಟನೆಯಲ್ಲಿ ಗಾಯಗೊಂಡ ಬಾಲಕಿ ದೀಪಿಕಾ ಹಾಗೂ ಕಾಳಯ್ಯ ನ ಮನೆಯವರಿಗೆ 2000ಪರಿಹಾರದ ಚೆಕ್ ನೀಡಿದರು.

ಬುಧವಾರ, ನವೆಂಬರ್ 10, 2010

ಉದ್ಯೋಗ ಖಾತ್ರಿ ಕರ್ಮಕಾಂಡ-2

ಉದ್ಯೋಗ ಖಾತ್ರಿ ಅಕ್ರಮ ಕುರಿತು ಸರ್ಕಾರಕ್ಕೆ ಸಿಇಓ ಸಲ್ಲಿಸಿದ ರಹಸ್ಯ ವರದಿಯಲ್ಲಿ ಏನಿದೆ?
  • ಅರಕಲಗೂಡು ಜಯಕುಮಾರ್

ಕೇಂದ್ರ ಸರ್ಕಾರ ಈ ಮೊದಲು ಎಸ್ ಜೆ ಆರ್ ವೈ ಯೋಜನೆಯನ್ನು ಕೂಲಿಗಾಗಿ ಕಾಳು ಹೆಸರಿನಲ್ಲಿ ಜಾರಿಗೆ ತಂದಿತ್ತು . ಈ ಯೋಜನೆಯು ಕೂಡಾ ಅಧಿಕಾರಿಶಾಹಿಯ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದಿತ್ತು ಮತ್ತು ಬಡವರಿಗೆ ಕೂಲಿಯ ಜೊತೆಗೆ ವಿತರಣೆಯಾಗ ಬೇಕಾಗಿದ್ದ ಸಾವಿರಾರು ಟನ್ ಅಕ್ಕಿ ವಿದೇಶಕ್ಕೆ ಮಾರಾಟವಾಗಿ 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ 3ತಿಂಗಳುಗಳ ಕಾಳ ಮುದ್ದೆ ಮುರಿಯುತ್ತಾ ಕಂಬಿ ಎಣಿಸಿದ್ದರು! ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳು ಸಾಬೀತಾದರೆ ಜಿಲ್ಲೆಯಲ್ಲಿಯೂ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರುಗಳು ಕಂಬಿ ಎಣಿಸುವುದು ಶತಸಿದ್ಧ ಎಂದು ಪತ್ರಿಕೆಯ ವರದಿಯಲ್ಲಿ 10ತಿಂಗಳ ಹಿಂದೆಯೇ ಸ್ಪಷ್ಟವಾಗಿ ಬರೆಯಲಾಗಿತ್ತು. ಆದರೂ ಜಗ್ಗದ ಭ್ರಷ್ಟ ಅಧಿಕಾರಶಾಹಿಯ ಸ್ವೇಚ್ಚಾಚಾರದಿಂದ ಅರಕಲಗೂಡು ತಾಲ್ಲೂಕಿನಲ್ಲಿ 2009ನೇ ಸಾಲಿಗೆ ಉದ್ಯೋಗ ಚೀಟಿಗಳಿಗನುಗುಣವಾಗಿ 22ಕೋಟಿ ಮಾತ್ರ ಕಾಮಗಾರಿಗಳು ನಡೆಯಬೇಕಿತ್ತು ಆದರೆ ಅನಾಮತ್ತು 150ಕೋಟಿ ರೂಪಾಯಿಗಳ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿಯನ್ನೇ ನಿರ್ವಹಿಸದೇ ಶೇ.40ರ ಸಾಮಾಗ್ರಿ ಬಿಲ್ ಸುಮಾರು 3ಕೋಟಿ ವೆಚ್ಚವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಸದರಿ ಸರಕು-ಸಾಮಾಗ್ರಿ ಬಿಲ್ ಗೆ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣ 35ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಟ್ಟದೇ ವಂಚಿಸಲಾಗಿದೆ. ವಾಸ್ತವವಾಗಿ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಬೇಕಾದ ಸಂಪೂರ್ಣ ಹೊಣೆಗಾರಿಕೆ ಇರುವುದು ಗ್ರಾ.ಪಂ.ಗಳಿಗೆ ಆದರೆ ಇಲ್ಲಿ ಹಿರಿಯ ಅನುಷ್ಠಾನಾಧಿಕಾರಿಗಳು ಗ್ರಾ.ಪಂ.ಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸ್ವೇಚ್ಚಾಚಾರದಿಂದ ವರ್ತಿಸಿದ್ದಾರೆ. ಈ ಎಲ್ಲಾ ಅಂಶಗಳ ಕುರಿತು ಹಾಸನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ರಹಸ್ಯ ವರದಿ ಪತ್ರಿಕೆಗೆ ಲಭ್ಯವಾಗಿದ್ದು ಅದರ ಮುಖ್ಯಾಂಶಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. 
  • ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ (ಕಾರ್ಯಕ್ರಮ ಅಧಿಕಾರಿ)ಯಾಗಿದ್ದು ತೋಟಗಾರಿಕೆ, ಸಾಮಾಜಿಕ ಅರಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ,ನೀರಾವರಿ ಹಾಗೂ ಜಲಾನಯನ ಹಾಗೂ ಮುಂತಾದ ಇಲಾಖೆಗಳು ಮಾತ್ರ ಒಳಗೊಂಡಿರುತ್ತದೆ. ಆದರೆ ತಾಲ್ಲೂಕಿನ ಉದ್ಯೋಗಖಾತ್ರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ನಾಗೇಶ್,ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ,ಫಣೀಶ್,ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಜಿ.ಪಂ. ನ ಕಿರಿಯ ಇಂಜಿನಿಯರ್ ನಿಂಗೇಗೌಡ ಇವರುಗಳು ಮಾತ್ರ ಅನುಷ್ಠಾನದಲ್ಲಿ ಪ್ರಮುಖವಾಗಿ ಭಾಗಿಗಳಾಗಿರುವುದು ಕಂಡು ಬಂದಿರುತ್ತದೆ. 
  • ಕಾಮಗಾರಿಗಳಿಗೆ ಸಾಮಾಗ್ರಿ ಬಿಲ್ ಪಾವತಿಯನ್ನು ತ್ವರಿತವಾಗಿ ಪೂರ್ಣಗೊಳಿಸಿರುವ ಅನುಷ್ಠಾನಾಧಿಕಾರಿಗಳು ಇದೇ ಆಸಕ್ತಿಯನ್ನು ಕಾಮಗಾರಿಗಳ ಪೂರ್ಣ ಅನುಷ್ಠಾನದಲ್ಲಿ ತೋರಿಸಿರುವುದಿಲ್ಲ. ತಮಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಪಟ್ಟ ಕಾಮಗಾರಿಗಳ ಅಂದಾಜು ಪರಿಶೀಲನೆಯಿಂದ ಹಿಡಿದು ಕಾಮಗಾರಿ ಉಸ್ತುವಾರಿ ಪರಿಣಾಮಕಾರಿ ಕಾರ್ಯನಿರ್ವಹಣೆ, ಅಳತೆ ಪುಸ್ತಕಗಳ ಸೂಕ್ತ ಪರಿಶೀಲನೆ, ಎನ್ ಎಂಆರ್ ಗಳು ಇತರೆ ದಾಖಲೆಗಳ ಧೃಢೀಕರಣವನ್ನು ಸಹಾ ಅನುಷ್ಠಾನಾಧಿಕಾರಿಯಾದ ಸಹಾಯಕ ಕಾರ್ಯಪಾಲಕ ಅಭಿಯಂತರ ನಿರ್ವಹಿಸಬೇಕಾಗಿತ್ತು ಆದರೆ ಈ ಪ್ರಕ್ರಿಯೆಗಳಿಂದ ಸದರಿ ಅಧಿಕಾರಿಯವರು ಪ್ರಗತಿಯಲ್ಲಿರುವ ಉಳಿದ ಎಲ್ಲಾ ಕಾಮಗಾರಿಗಳ ಶೇ.10ರಷ್ಟು ಕಾಮಗಾರಿಗಳ ಅಳತೆ ಪರಿಶೀಲನೆಯನ್ನು ಸಹಾ ಧೃಢೀಕರಿಸಿಲ್ಲ. ಯೋಜನೆಯ ಹಣ ಇಲ್ಲಿ ನೇರವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಹೆಸರಿನಲ್ಲಿ ಬಿಡುಗಡೆಯಾಗಿದ್ದು ಅವರೇ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ.
  • ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.
  • ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ. 
  • ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. 
  • ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ  ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ  ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.(ಮುಂದುವರೆಯುವುದು).
ಅರಕಲಗೂಡು: ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ವ್ಯಾಪಕ ವಾಗಿ ನೀತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಜಿ.ಪಂ. ಸಿಇಓ ಒಪ್ಪಿಕೊಳ್ಳುತ್ತಾರೆ ಆದರೆ ಶಿಸ್ತು ಕ್ರಮಕ್ಕೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯನ್ನು ಕಳೆದ 2-3ವರ್ಷಗಳಿಂದ ಬಿಜೆಪಿ ಸರ್ಕಾರ ಕಡೆಗಣಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವರುಗಳ ಬೇಜವಾಬ್ದಾರಿಯೂ ಸಹಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಅರ್ಥೈಸಲಾಗುತ್ತಿದೆ. ತಾಲೂಕಿನಲ್ಲಿ ಅನುಷ್ಠಾನವಾದ ುದ್ಯೋಗ ಖಾತ್ರಿಯ ಭ್ರಷ್ಟಾಚಾರವನ್ನು ಪತ್ರಕೆ ಬಯಲಿಗೆಳೆಯುತ್ತಿದ್ದಂತೆ ಸಮಗ್ರ ಮಾಹಿತಿ ಸಂಗ್ರಹಿಸಿ ವಿಧಾನ ಸೌಧದಲ್ಲಿ ಧರಣಿ ಕೂರುವ ಮೂಲಕ ಹೋರಾಟ ಆರಂಭಿಸಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ತಾಲೂಕಿನಾದ್ಯಂತ ಸಂಚರಿಸಿ ಉದ್ಯೋಗ ಖಾತ್ರಿ ಭ್ರಷ್ಟಾಚಾರದ ತೀವ್ರತೆಯನ್ನು ತಿಳಿಸುತ್ತಿದ್ದಾರೆ. ಆರಂಭದಲ್ಲಿ ಖಾತ್ರಿ ಭ್ರಷ್ಟಾಚಾರದ ವಿರುದ್ದ ಜಿಲ್ಲಾ ಮಟ್ಟದಲ್ಲಿ  ಧ್ವನಿಯೆತ್ತಿದ  ಮಾಜಿ ಸಚಿವ ಬಿ ಶಿವರಾಂ ಈಗ ಮುಗುಮ್ಮಾಗಿರುವುದೇಕೋ ತಿಳಿಯುತ್ತಿಲ್ಲ. ತಾಲೂಕಿನಲ್ಲಿ ನಡೆದಿರುವ ಖಾತ್ರಿ ಭ್ರಷ್ಟಾಚಾರದಿಂದ ಯೋಜನೆಯಡಿ ನೈಜವಾಗಿ ಕಾರ್ಯ ನಿರ್ವಹಿಸಿದ ಸಾವಿರಾರು ಮಂದಿ ಕೂಲಿಕಾರರು 10ತಿಂಗಳಿನಿಂದ ಕೂಲಿ ಸಿಗದೇ ಪರಿತಪಿಸುತ್ತಿದ್ದಾರೆ. ಎರಡು ಮೂರು ಬಾರಿ ಪ್ರತಿಭಟನೆಯನ್ನು ಮಾಡಿದ್ದಾರೆ ಆದರೆ ಪ್ರಯೋಜನವಾಗಿಲ್ಲ. ಮಾಡಿದ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಅನೇಕ ದಾಖಲೆಗಳನ್ನು ಅಧಿಕಾರಿಗಳು ತಿದ್ದುಪಡಿ ಮಾಡಿ ಕೆಲವನ್ನು ನಾಶಪಡಿಸಿರುವುದರಿಂದ ಅನೇಕ ಕಾಮಗಾರಿಗಳ ದುಡ್ಡು ಬರುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಕಂಗೆಟ್ಟು ಹೋಗಿರುವ ಅನೇಕರು ಕೂಲಿಯ ಆಸೆಗೆ ಎಳ್ಳು ನೀರು ಬಿಡಬೇಕಾದ ಪರಿಸ್ತಿತಿ ಒದಗಿದೆ. ಈಗಾಗಲೆ ಖಾತ್ರಿ ಅಕ್ರಮದ ಹಿನ್ನೆಲೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ. ನ ಸ.ಕಾ.ಇಂ ಮತ್ತು ಕಿ.ಇಂ. ಅಮಾನತ್ತಾಗಿದ್ದು ಇನ್ನು 6ಮಂದಿ ಕಿ.ಇಂ. ನಿಗಳು ಮತ್ತು ಗ್ರಾ.ಪಂ. ನ 29ಕಾರ್ಯದರ್ಶಿಗಳ ವಿರುದ್ದ ಶಿಸ್ತು ಕ್ರಮವಾಗಬೇಕಿದೆ. ಆದರೆ ಜಿಲ್ಲೆಯ ಹಿರಿಯ ಅಧಿಕಾರಿಗಳೂ ಹಾವು ಏಣಿ ಆಟ ಆಡಿಸುತ್ತಾ ಹುಲಿ ಬಂತು ಹುಲಿ ಎಂಬಂತೆ ನಡೆದು ಕೊಳ್ಳುತ್ತಿರುವುದರಿಂದ ಜಿ.ಪಂ. ನಲ್ಲಿ ಕಿ.ಇಂ. ಗಳು ಮತ್ತು ಗ್ರಾ.ಪಂ. ನಲ್ಲಿ ಕಾರ್ಯದರ್ಶಿಗಳು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ಕುಸಿದಿದ್ದು ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಒಂದು ಮೂಲದ ಪ್ರಕಾರ ತಪ್ಪಿತ್ಸ್ಥರನ್ನು ರಕ್ಷಿಸುವ ಭರವಸೆ ನೀಡುತ್ತಿರುವ ಜಿ.ಪಂ. ನ ಹಿರಿಯ ಅಧಿಕಾರಿಗಳು ದೂರು ವಾಪಾಸ್ ಪಡೆಯುವಂತೆ ದೂರುದಾರರ ಮನವೊಲಿಸಲು ಒತ್ತಡ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ. ಒಟ್ಟಾರೆ ಈ ಪ್ರಕರಣ ನಡೆಯಲು ಈ ಹಿಂದೆ ಜಿ.ಪಂ. ಉಪಕಾರ್ಯದರ್ಶಿಯಾಗಿದ್ದ ಬಾಲಕೃಷ್ಣ ಎಂಬಾತನೇ ಕಾರಣಕರ್ತನಾಗಿದ್ದು ನಾವು ಈಗ ನೋವು ಅನುಭವಿಸುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ಹೇಳುತ್ತಾರೆ. ಅಷ್ಟೇ ಅಲ್ಲ ಈ ಹಗರಣದ ಲಾಭ ಪಡೆಯಲು  ಅಧಿಕಾರಿಗಳು  ಹವಣಿಸುತ್ತಿದ್ದಾರೆ. ಜಿಲ್ಲೆಗೆ ಇಂದು ಭೇಟಿ ನೀಡಲಿರುವ ಮುಖ್ಯ ಮಂತ್ರಿ ಯಡಿಯೂರಪ್ಪ ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ನಿರ್ಧಾರ ಪ್ರಕಟಿಸುವುದನ್ನು ಜನತೆ ಎದುರು ನೋಡುತ್ತಿದ್ದಾರೆ. ತಪ್ಪಿದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರಕ್ಕೆ ನೊಂದ ಜನರ ಶಾಪ ತಟ್ಟದಿರದು.

ಮಂಗಳವಾರ, ನವೆಂಬರ್ 9, 2010

ಉದ್ಯೋಗ 'ಖತ್ರಿ' ಅಕ್ರಮ ಕ್ರಿಮಿನಲ್ ಕೇಸು ದಾಖಲಿಸಲು ಜಿ.ಪಂ. ಸಿಇಓ ಮೀನಾಮೇಷ!


  • ಅರಕಲಗೂಡು ಜಯಕುಮಾರ್
ದೇಶದಲ್ಲಿನ ಗ್ರಾಮೀಣ ಪ್ರದೇಶದ  ಬಡವರಿಗೆ ತುತ್ತಿನ ಚೀಲ ತುಂಬಿಸುವ, ದುಡಿಯಲು ಕೆಲಸ ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಲವು ದಶಕಗಳಿಂದಲೂ ಮಾಡುತ್ತಲೇ ಬಂದಿದೆ. ಆದರೆ ಯೋಜನೆಗಳ ಅನುಷ್ಠಾನದ ಹಂತದಲ್ಲಿ ನಡೆಯುವ ಭ್ರಷ್ಟಾಚಾರ ಯೋಜನೆಗಳ ಗುರಿಯನ್ನು ಮಸುಕಾಗಿಸುತ್ತದೆ. ಸರ್ಕಾರ ಜಾಣ ಕುರುಡು ಪ್ರದರ್ಶಿಸಿ ಮತ್ತೆ ಮತ್ತೆ ಅಂತಹುದೇ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಅದು ರಾಜಕಾರಣಿಗಳು ಮತ್ತು ಆಢಳಿತಶಾಹಿಗಳ ಹಿತ ಕಾಪಾಡಲು ಎಂದರೆ ತಪ್ಪಾಗಲಾರದೇನೋ. ಇದಕ್ಕೆ ಸಧ್ಯದ ಜ್ವಲಂತ ನಿದರ್ಶನವೆಂದರೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ'.ಸದರಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಬದಲಿಗೆ ಅಧಿಕಾರಶಾಹಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಣ ದೋಚುವ 'ಅಕ್ಷಯ ಪಾತ್ರೆ'ಯಾಗಿದ್ದು ಈಗ ಇತಿಹಾಸ!
     ಕಳೆದ 10ತಿಂಗಳ ಹಿಂದೆಯೇ ಪತ್ರಿಕೆ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ದಾಖಲೆಗಳ ಸಮೇತ 'ುದ್ಯೋಗ ಖಾತ್ರಿಯಲ್ಲಿ ದುಡ್ಡೇ ದುಡ್ಡು:ತಿನ್ನದವನೇ ಪರಮ ಪಾಪಿ' ಹಾಗೂ 'ಹುಚ್ಚುಮುಂಡೆ ಮದ್ವೇಲಿ ಉಂಡೋನೆ ಜಾಣ:ುದ್ಯೋಗ ಖಾತ್ರಿ ಜಾತ್ರೆ' ಶೀರ್ಷಿಕೆಯಲ್ಲಿ ಬಯಲಿಗೆಳೆಯಲಾಗಿತ್ತು. ಆದರೆ ಯೋಜನೆಯಲ್ಲಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದ ದುಷ್ಟ ಹಿತಾಸಕ್ತಿಗಳು ಜನವರಿ 29ರಂದು ಪತ್ರಿಕಾ ವರದಿಯ ವಿರುದ್ದ ಸಾರ್ವಜನಿಕ ಪ್ರತಿಭಟನೆ ನಡೆಸಿದ್ದವು. ಆದರೆ ಪತ್ರಿಕೆಯು ಅಂದು ಬರೆದ ಪ್ರತೀ ಅಕ್ಷರವೂ ಸತ್ಯಕ್ಕೆ ಹತ್ತಿರವಾಗಿದ್ದು ಹಾಸನ ಜಿ.ಪಂ. ಸಿಇಓ ಅಂಜನಕುಮಾರ್ ಸ್ವತ: ಸರ್ಕಾರಕ್ಕೆ ಬರೆದಿರುವ ರಹಸ್ಯ ಪತ್ರದಲ್ಲಿ ಉದ್ಯೋಗ ಖಾತ್ರಿಯಲ್ಲಿ ಆಗಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳು ನಿಜವೆಂದು ದಾಖಲಿಸಿದ್ದು ಮದ್ಯಂತರ ವರದಿಯನುಸಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿ ಸೆ.4ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ವರದಿಯನ್ನು ಆಧರಿಸಿ ಅಕ್ಟೋಬರ್ 10ರಂದು ಸಚಿವಾಲಯದಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ರವಿಕುಮಾರ್, ಜಿ.ಪಂ ಸಿಇಓ ಗೆ ತುರ್ತು ಆದೇಶ ಲಿಖಿತ ಪತ್ರ ರವಾನಿಸಿದ್ದು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಸೂಚಿಸಿದ್ದಾರೆ. ಸದರಿ ಮದ್ಯಂತರ ವರದಿ ಹಾಗೂ ಸಾಮಾಜಿಕ ವರದಿಯನ್ನು ಪರಿಶೀಲಿಸಿದಾಗ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು,ಹೊಳಲಗೋಡು, ಚಿಕ್ಕಹಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯಿತಿಗಳಲ್ಲಿ ತೀವ್ರ ಲೋಪವಾಗಿದೆಯೆಂದು ತಿಳಿಸಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸದರಿ ತಪ್ಪಿತಸ್ಥರ ವಿರುದ್ದ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಲು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ಮತ್ತು ಅವಶ್ಯಕ ಕ್ರಮ ಜರುಗಿಸಲು ಸದರಿ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶಿಸ್ತುಕ್ರಮಕ್ಕೆ ಸೂಚಿಸಿರುವ ಪತ್ರ ಬಂದು ಇಂದಿಗೆ ಒಂದು ತಿಂಗಳು ಕಳೆದಿದೆ ಆದರೆ ಹಾಸನ ಜಿ.ಪಂ ಸಿಇ ಓ ಅಂಜನಕುಮಾರ್ ಮರುಪರಿಶೀಲನೆಗೆ ಸ್ಥಳೀಯ ಅಧಿಕಾರಿಗಳನ್ನು ಅದರಲ್ಲೂ ಮುಖ್ಯವಾಗಿ ಅಕ್ರಮದಲ್ಲಿ ಸಂಪೂರ್ಣವಾಗಿ ಪಾಲುದಾರರಾದ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದ್ದಾರೆ. ಈ ತಂಡ ಪ್ರತೀ ಗ್ರಾಮ ಪಂಚಾಯ್ತಿಗಳಿಗೆ ತೆರಳಿ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ಪರಿಶೀಲಿಸುದಂತೆ! ಕಳೆದವಾರ ತಾಲೂಕಿಗೆ ತರಾತುರಿಯಲ್ಲಿ ಭೇಟಿ ನೀಡಿ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 10ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲ ತಪ್ಪಿ ತಸ್ಥ ಅಧಿಕಾರಿಗಳು, ಮುಖ್ಯವಾಗಿ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ ಕ್ರಿಮಿನಲ್ ಕೇಸು ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ನಿಲುವಿನ ಹಿಂದೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಏನು ಹುನ್ನಾರ ನಡೆಸಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ತಾನೇ ಅಕ್ರಮಗಳ ಕುರಿತು ಸರ್ಕಾರಕ್ಕೆ ರಹಸ್ಯ ವರದಿ ನೀಡಿದ್ದು ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂಬ ಪ್ರಶ್ನೆಯ ಬೆನ್ನಲ್ಲೇ ಸಿಇಓ ಪರೋಕ್ಷವಾಗಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆಸಿದ್ದಾರೆಂಬ ಅನುಮಾನವೂ ಇದೆ. ಸಿಇಓ ಅಂಜನಕುಮಾರ್ ಬರೆದ ರಹಸ್ಯ ಪತ್ರದಲ್ಲಿ ಏನಿದೆ?(ಮುಂದುವರೆಯುವುದು)

ಗುರುವಾರ, ನವೆಂಬರ್ 4, 2010

ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳದಿದ್ದರೆ ಪ್ರತಿಭಟನೆ:ಶಾಸಕ ಎ. ಮಂಜು

"ಮಾಮೂಲಿ ಎಷ್ಟು ವಸೂಲಿ ಮಾಡ್ತಿದೀರಾ? ಬಡ್ಡಿ ಮಕ್ಕಳಾ ದುಡ್ಡು ಮಾಡ್ಕೊಂಡು ಸುಮ್ನಿರ್ತೀರಾ?ಜನ ಬಯ್ಯೋದು ನಮ್ಗೆ", ಎಷ್ಟು ಫಿಕ್ಸ್ ಮಾಡ್ಕಂಡಿದೀರಾ ಗಾಡಿಗೆ? ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ನಾನೇ ದೂರು ಕೊಡ್ತೀನಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಸಿದ್ದು ಶಾಸಕ ಎ. ಮಂಜು.
 ತಾಲ್ಲೂಕಿನಾಧ್ಯಂತ ಅವ್ಯಾಹತವಾಗಿ ನಡೆಯುತ್ತಿರುವ  ಮರಳುದಂಧೆಯಿಂದ ತಾಲ್ಲೂಕಿನ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣವಾಗಿ ಹಾಳಾಗಿದ್ದು ರಾಮನಾಥಪುರ ಸೇತುವೆ ಕುಸಿದು ಬಿದ್ದಿದೆ ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,ಕಂದಾಯ,ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕೊಣನೂರಿನಲ್ಲಿ ನಡೆಸಿದ ಶಾಸಕ ಎ. ಮಂಜು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹರೀಶ ಎಂಬಾತನಿಗೆ ಚುರುಕು ಮುಟ್ಟಿಸಿದ ಶಾಸಕ ಮಂಜು ಇದಕ್ಕೆಲ್ಲಾ ತಡೆಬೀಳಬೇಕು ಎಂದು ತಾಕೀತು ಮಾಡಿದರು. ಆರ್ ಟಿ ಓ ಅಧಿಕಾರಿಗಳಿಗೆ ತಾಲೂಕಿನಲ್ಲಿ ಎಷ್ಟು ಕಡೆ ಮರಳು ತೆಗೆಯಲು ಟೆಂಡರು ಆಗಿದೆಯೆಂಬುದೇ ತಿಳಿದಿಲ್ಲ ಈ ವಿಚಾರದಲ್ಲಿ ಅಧಿಕಾರಿಗಳಿಗೆ ಸಮನ್ವಯದ ಕೊರತೆಯಿದೆ ಇಂತಹದ್ದನ್ನೆಲ್ಲ ನಾನು ಸಹಿಸುವುದಿಲ್ಲ, ತಾಲೂಕಿನ ರಸ್ತೆಗಳಲ್ಲಿ ಅಧಿಕ ಭಾರದ ಲಾರಿಗಳು ಓಡಾಡುತ್ತಿವೆ ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಮರಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಇದಕ್ಕೆ ತಕ್ಷಣವೇ ಕಡಿವಾಣ ಹಾಕಿ ಎಂದು ನುಡಿದ ಅವರು ಪೋಲೀಸ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿಯನ್ನು ಕುರಿತು "ಪ್ರಾಮಾಣಿಕರಂತೆ ಮಾತನಾಡ ಬೇಡಿ ನಿಮ್ಮ ಇಲಾಖೆಯ ಪೇದೆ ಪರಮೇಶ ಪ್ರತೀ ಮರಳು ಲಾರಿಯಿಂದ 300ರೂಪಾಯಿಗಳನ್ನು ವಸೂಲು ಮಾಡುತ್ತಿದ್ದಾನೆಂಬ ದೂರಿದೆ ಅದನ್ನು ತಕ್ಷಣವೇ ನಿಲ್ಲಿಸಿ ಎಂದರು. ತಾಲೂಕಿನಲ್ಲಿ ಈ ವರೆಗೆ ಕೇವಲ 15ಲಾರಿಗಳನ್ನು ಮಾತ್ರ ಹಿಡಿಯಲಾಗಿದೆ, ಪ್ರತಿ ನಿತ್ಯ ನೂರಾರು ಲಾರಿಗಳು ನಿಯಮ ಉಲ್ಲಂಘಿಸಿ ಮರಳು ಸಾಗಿಸುತ್ತಿವೆ ಇದು ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ದೂರು ನೀಡಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿ ನಂತರ ಹೊರಬಂದ ವಿವಿಧ ಇಲಾಖೆಗಳ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಲಾರಿ ಹಿಡಿದರೆ ಜನಪ್ರತಿನಿಧಿಗಳೇ ಫೋನು ಮಾಡುತ್ತಾರೆ ನಮಗೆ ಒತ್ತಡವಿಲ್ಲದೇ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ ಎಂದು ಪತ್ರಕರ್ತರೊಂದಿಗೆ ಅಸಮಧಾನ ಪ್ರದರ್ಶಿಸಿದರು.