ಮಂಗಳವಾರ, ನವೆಂಬರ್ 23, 2010

ತಂಬಾಕು ಬೆಲೆ ಕುಸಿತ:ಮಾರುಕಟ್ಟೆ ಸ್ಥಗಿತ,ಬೆಲೆ ನಿಗದಿಗೆ ಪಟ್ಟುಅರಕಲಗೂಡು: ತಂಬಾಕು ಬೇಲ್ ಗಳಿಗೆ ಸೂಕ್ತ ಬೆಲೆ ದೊರಕದಿದ್ದುದರಿಂದ ಕಂಗಾಲಾದ ರೈತರು ಮಾರುಕಟ್ಟೆಯನ್ನು ಅನಿರ್ದಿಷ್ಠಾವಧಿಗೆ  ಬಹಿಷ್ಕರಿಸಿದರಲ್ಲದೇ ತಂಬಾಕು ಬೇಲ್ ಗಳಿಗೆ ಬೆಂಕಿ ಹಚ್ಚಿದ ಪ್ರಸಂಗವೂ ಇಂದು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ನಡೆಯಿತು. 
       ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದಲೂ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿಯಾಗಲು ತಂಬಾಕು ಮಂಡಳಿಯ ಮೈಸೂರು  ವಿಭಾಗೀಯ ವ್ಯವಸ್ಥಾಪಕ  ವೇಣುಗೋಪಾಲ್ ಹಾಗೂ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಆಗಮಿಸಿದ್ದ ವೇಳೆ ಅಧಿಕಾರಿಗಳ ಬೇಜವಾಬ್ದಾರಿ ಮಾತುಗಳಿಂದ ಬೇಸತ್ತ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನಡುವೆಯೇ ಮಾತನಾಡಿದ ವೇಣುಗೋಪಾಲ್ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಅನುಸರಿಸಿ ಬೆಲೆ ನೀಡಲಾಗುತ್ತಿದೆ, ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗುವುದರಿಂದ ಬೆಲೆಯಲ್ಲಿ ಏರುಪೇರು ಉಂಟಾಗಿದೆ ಎಂದರು. ತಂಬಾಕು ಖರೀದಿಸುವ  ಕಂಪನಿಗಳೊಂದಿಗೆ ರೈತರ ಹಿತಾಸಕ್ತಿ ಕಾಪಾಡುವ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ, ಇನ್ನೆರೆಡು ದಿನಗಳಲ್ಲಿ ಯಾವುದನ್ನು ಹೇಳುತ್ತೇನೆ ಎಂದರು. ನಂತರ ಮಾತನಾಡಿದ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಕಂಪನಿ ನಿಗದಿ ಪಡಿಸಿರುವ ಬೆಲೆಯನ್ನಷ್ಟೆ ನಾವು ನೀಡಲು ಸಾಧ್ಯ, ಬೇಡಿಕೆಯನ್ನಾಧರಿಸಿ ಬೆಲೆ ನಿಗದಿಯಾಗುತ್ತದೆ ಎಂದರಲ್ಲದೇ, ರೈತರೊಬ್ಬರು ಕೇಳಿದ ಪ್ರಶ್ನೆಗೆ ನಾನು ಬೆಲೆ ಕುರಿತು ಚರ್ಚಿಸಲು ಬಂದಿಲ್ಲ ಅದಕ್ಕೆ ಬೇರೆ ಅಧಿಕಾರಿಗಳಿದ್ದಾರೆ ಎಂದಿದ್ದು ರೈತ ಸಮೂಹವನ್ನು ಕೆರಳಿಸಿತು. ಈ ಸಂಧರ್ಭದಲ್ಲಿ ರೊಚ್ಚಿಗೆದ್ದ ರೈತರು ನಮ್ಮ ಸಮಸ್ಯೆ ಕುರಿತು ಚರ್ಚಿಸುವ ಆಸಕ್ತಿ ಇಲ್ಲದಿದ್ದರೆ ನೀವು ಇಲ್ಲಿಂದ ಹೊರಡಿ ಎಂದು ತಾಕೀತು ಮಾಡಿ ಗದ್ದಲ ಆರಂಭಿಸಿದರು. ಈ ಹಂತದಲ್ಲಿ ಕೆಲಹೊತ್ತು ನೂಕಾಟ ತಳ್ಳಾಟ ಆರಂಭವಾಗಿ ಗೋಂದಲದ ವಾತಾವರಣ ಮೂಡಿತ್ತು. ಇದೇ ಸಂಧರ್ಭದಲ್ಲಿ ಕೆರಳಿದ ರೈತರು ಅಧಿಕಾರಿಗಳು ಮತ್ತು ಸರ್ಕಾರವನ್ನು ಶಪಿಸುತ್ತಾ ತಂಬಾಕು ಬೇಲ್ ಗಳನ್ನು ಅಧಿಕಾರಿಗಳೆದುರೇ ಸುರಿದು ಬೆಂಕಿ ಹಚ್ಚಿದರು. ಅಂತಿಮವಾಗಿ ಮಾತನಾಡಿದ ರೈತ ಮುಖಂಡರು ಅಧಿಕಾರಿಗಳು ಬೆಲೆ ಏರಿಕೆ ಕುರಿತು ಸ್ಪಷ್ಟ ಚಿತ್ರಣ ನೀಡುವವರೆಗೂ ಮಾರುಕಟ್ಟೆ ಬಹಿಷ್ಕರಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ,ಕೃಷ್ಣೆಗೌಡ ಮತ್ತು ತಿಮ್ಮೇಗೌಡ ವಹಿಸಿದ್ದರು. 
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಮೈಸೂ ವಿಭಾಗೀಯ ವ್ಯವಸ್ಥಾಪಕ ವೇಣುಗೋಪಾಲ್ ಈ ಬಾರಿ 115ಮಿಲಿಯನ್ ತಂಬಾಕು ಉತ್ಪಾದನೆ ಗುರಿ ಸಾಧಿಸಲಾಗಿದೆ, ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದೇಶಗಳಲ್ಲಿ ಉತ್ಪಾದನೆ ಯಾಗುತ್ತಿದ್ದ ತಂಬಾಕಿನ ಪ್ರಮಾಣ ದುಪ್ಪಟ್ಟಾಗಿದೆ, ಜಿಂಬಾಬ್ವೆ ದೇಶದಲ್ಲಿ 40ಮಿಲಿಯನ್ ನಿಂದ 200 ಮಿಲಿಯನ್ ಗೆ ಏರಿದೆ, ದಕ್ಷಿಣ ಆಫ್ರಿಕಾದಲ್ಲೂ ಉತ್ಪಾದನಾ ಪ್ರಮಾಣ ಏರಿದೆ ಆದ್ದರಿಂದ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶೀಯ ಉತ್ಪನ್ನಕ್ಕೆ ಬೇಡಿಕೆ ಕುಸಿದಿದೆ ಎಂದರು. ಮಾರುಕಟ್ಟೆ ಆರಂಭವಾದಾಗ 130ರೂ. ಹೆಚ್ಚಿನ ಬೆಲೆ ಪ್ರತೀ ಕೆಜಿ ತಂಬಾಕಿಗೆ ದೊರಕಿದೆ, ಈಗ ುತ್ತಮ ದರ್ಜೆಯ ತಂಬಾಕಿಗೆ 110ರೂ ಸಿಗುತ್ತಿದೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುದಾರಿಸ ಬಹುದು ಎಂದರು. ಈ ಸಂಧರ್ಭದಲ್ಲಿ ಮಾರುಕಟ್ಟೆ ಅಧೀಕ್ಷಕ ಶಿವರುದ್ರಯ್ಯ ಹಾಜರಿದ್ದರು.

ಅರಕಲಗೂಡು: ಇದೇ ನ.25ರಂದು ಪಟ್ಟಣದಲ್ಲಿ ಏರ್ಪಟಾಗಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ಯೋಗಾರಮೇಶ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು 55ನೇ ಕನ್ನಡ ರಾಜ್ಯೊತ್ಸವವು ಪಟ್ಟಣದ ಶಿಕ್ಷಕರ ಭವನದ ಮುಂಬಾಗದಲ್ಲಿ ಸಂಜೆ 4ಗಂಟೆಗೆ ಜರುಗಲಿದೆ, ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಸಾಧಕರಾದ ಸಂಗೀತ ವಿದ್ಯಾನ್ ಪದ್ಮನಾಭ್, ಜನಪದ ತಜ್ಞ ಡಾ ಎಚ್ ಜೆ ಲಕ್ಕಪ್ಪಗೌಡ, ಅರ್ಥಶಾಸ್ತ್ರಜ್ಞ ಪ್ರೊ| ಕೆ ಸಿ ಬಸವರಾಜು, ಮತ್ತಿತರ ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ, ಹಾಗೂ ಶಿವಮೊಗ್ಗ ಸುಬ್ಬಣ್ಣ ಮತ್ತು ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಯೋಗಾರಮೇಶ್ ತಿಳಿಸಿದರು. 

ಕಾಮೆಂಟ್‌ಗಳಿಲ್ಲ: