ಸೋಮವಾರ, ನವೆಂಬರ್ 22, 2010

ತಂಬಾಕು ಬೆಲೆ ದಿಢೀರ್ ಕುಸಿತ:ರೈತರ ಪ್ರತಿಭಟನೆ

ಅರಕಲಗೂಡು/ರಾಮನಾಥಪುರ: ತಂಬಾಕು ಮಾರಾಟದ ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ಕಂಗಾಲಾದ ರೈತರು ನಿಶ್ಚಿತ ಬೆಲೆ ನೀಡುವಂತೆ ಆಗ್ರಹಿಸಿ  ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ  ಪ್ರತಿಭಟನೆ ನಡೆಸಿದರು. ಒಂದು ವಾರದಿಂದಲೂ ತಂಬಾಕಿನ ಮಾರುಕಟ್ಟೆ ದರ ಇಳಿಕೆಯಾಗಿದ್ದು ರೈತರ ಅಸಹನೆ ಹೊಗೆಯಾಡುತ್ತಿತ್ತು, ನಿಗದಿತ ಗುರಿಗಿಂತ ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗಿರುವುದು ಮತ್ತು ಈ ಮುಂಚೆ ಆಂದ್ರ ಪ್ರದೇಶದಲ್ಲಿ ನಡೆದ ಮಾರುಕಟ್ಟೆಯಲ್ಲೂ ಬೆಲೆ ಕುಸಿತ ಕಂಡಿದ್ದರಿಂದ ಅದು ಇಲ್ಲಿನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ.  ಕಳೆದ ವರ್ಷ ಪ್ರತೀ ಕೇಜಿಗೆ 130ರೂ ಇದ್ದ ತಂಬಾಕು ಬೆಲೆ ಈ ಬಾರಿ 75ಕ್ಕೆ ಇಳಿದಿದೆ, ಇದು ರೈತರಿಗೆ ಕಣ್ಣೀರು ತರಿಸುತ್ತಿದೆ. ಸೋಮವಾರ ಬೆಳಿಗ್ಗೆ ಪ್ಲಾಟ್ ಫಾರಂ 63ರಲ್ಲಿ 1250ಬೇಲ್ (1ಬೇಲ್=50-150ಕೆಜಿ) ಆವಕವಾಗಿತ್ತು. ಈ ಹಿಂದೆ ಪ್ರತೀ ಕೆಜಿಗೆ 130ರೂ ಬೆಲೆ ಲಭ್ಯ ವಾಗುತ್ತಿತ್ತು, ಸರಾಸರಿ 106ರೂ. ಬೆಲೆ ಇತ್ತಾದರು ಇಂದು ದಿಢೀರನೇ ಪ್ರತಿ ಕೆಜಿಗೆ ರೂ.75 ನಿಗದಿ ಗೊಳಿಸಿದ್ದರಿಂದ ರೈತರು ಕಂಗಾಲಾದರು ಮತ್ತು ತಂಬಾಕು ಕೊಳ್ಳಲು ಬಂದಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಅಚಾನಕ್ಕಾಗಿ ಮಳೆ ಬೀಳುತ್ತಿರುವುದರಿಂದ ಬೆಳೆಯ ಇಳುವರಿಯೂ ಸಹಾ ಕುಂಠಿತಗೊಂಡಿದೆ ಈ ನಡುವೆ ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಿಗದಿದ್ದರೆ ಬದುಕು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡ ರೈತರು ತಂಬಾಕು ಬೆಳೆಗಾಗಿ ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ ಮುಂದೇನು ಮಾಡಬೇಕೋ ತೋಚುತ್ತಿಲ್ಲ, ನಾಳೆ ಮೈಸೂರಿನಿಂದ ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಸುಧಾರಿಸುವ ಭರವಸೆ ನೀಡಿದ್ದಾರೆ ನಮಗೆ ನಿರೀಕ್ಷಿತ ಕನಿಷ್ಟ ಬೆಲೆ 95ರೂ ಸಿಕ್ಕರೂ ಬದುಕುತ್ತೇವೆ ಇಲ್ಲದಿದ್ದರೆ ಸತ್ತಂತಯೇ ಎಂದು ವಿಷಾದದಿಂದ ನುಡಿದರು. ಇಂದು ಪ್ರತಿಭಟನೆಯ ನಂತರ ಅರಕಲಗೂಡಿಗೆ ಆಗಮಿಸಿದ ತಂಬಾಕು ಬೆಳೆಗಾರರು ತಹಸೀಲ್ದಾರರನ್ನು ಭೇಟಿಯಾಗಿ  ನ.23ರಂದು ಸೂಕ್ತ ಬೆಲೆ ನಿಗದಿಗೊಳಿಸುವಂತಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ, ಯೋಗೇಶ್, ಕೃಷ್ಣೆಗೌಡ ವಹಿಸಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ ತಂಬಾಕು ಮಂಡಳಿಯ ಅಧೀಕ್ಷಕ ಶಿವರುದ್ರಯ್ಯ ಕಳೆದ ಬಾರಿಗಿಂತ ಈ ಸಲ ಮಾರುಕಟ್ಟೆ ದರ ಕುಸಿದಿದೆ ಆದರೆ ಪ್ಲಾಟ್ ಫಾರಂ 7ರಲ್ಲಿ ಬಂದ 1200ಬೇಲುಗಳು ಪೂರ್ಣವಾಗಿ ಮಾರಾಟವಾಗಿವೆ ಎಂದರು.
ಮನವಿ: ತಂಬಾಕಿಗೆ ಸೂಕ್ತ ದರ ನೀಡುವಂತೆ ರಾಮನಾಥಪುರ ತಂಬಾಕು ಮಾರುಕಟ್ಟೆ ಆವರಣದಲ್ಲಿ ಬೆಳಿಗ್ಗೆ 9ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಎಲ್ಲ ತಂಬಾಕು ಬೆಳೆಗಾರರು ಭಾಗವಹಿಸುವಂತೆ ರೈತ ಮುಖಂಡ ರಾಮೇಗೌಡ ಮನವಿ ಮಾಡಿದ್ದಾರೆ.
ಆಗ್ರಹ:  ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣವೇ ಸೂಕ್ತ ಬೆಲೆ ನಿಗದಿಗೊಳಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕು ಎಂದು ಬಿಜೆಪಿ ವಕ್ತಾರ ಕೆ ಎನ್ ಪ್ರದೀಪ್ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಸುಮಾರು 15ಸಾವಿರ ತಂಬಾಕು ಬೆಳೆಗಾರರಿದ್ದು  ಅವರು ಬೆಳೆದ ತಂಬಾಕಿಗೆ ಸರಾಸರಿ 70ರೂ ದೊರಕುತ್ತಿದೆ ಆದರೆ ಒಂದು ಕೆಜಿ ತಂಬಾಕು ಉತ್ಪಾದಿಸಲು ರೈತನಿಗೆ 70-75ರೂ ಆಗುತ್ತದೆ ಆದ್ದರಿಂದ ಮಂಡಳಿಯು ಪ್ರತೀ ಕೆಜಿಗೆ ಕನಿಷ್ಠ ರೂ.100 ನಿಗದಿಗೊಳಿಸಬೇಕು ಎಂದಿರುವ ಅವರು ಈ ಕುರಿತು ಡಿಸೆಂಬರ್ 5ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅರಕಲಗೂಡು:ಅರಕಲಗೂಡು ತಾಲೂಕು ವಕೀಲರ ಸಂಘದ 2010-11ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಬಿ ಸಿ ರಾಜೇಶ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿಯಾಗಿ ವಕೀಲ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.

ಕಾಮೆಂಟ್‌ಗಳಿಲ್ಲ: