ಮಂಗಳವಾರ, ನವೆಂಬರ್ 9, 2010

ಉದ್ಯೋಗ 'ಖತ್ರಿ' ಅಕ್ರಮ ಕ್ರಿಮಿನಲ್ ಕೇಸು ದಾಖಲಿಸಲು ಜಿ.ಪಂ. ಸಿಇಓ ಮೀನಾಮೇಷ!


  • ಅರಕಲಗೂಡು ಜಯಕುಮಾರ್
ದೇಶದಲ್ಲಿನ ಗ್ರಾಮೀಣ ಪ್ರದೇಶದ  ಬಡವರಿಗೆ ತುತ್ತಿನ ಚೀಲ ತುಂಬಿಸುವ, ದುಡಿಯಲು ಕೆಲಸ ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಲವು ದಶಕಗಳಿಂದಲೂ ಮಾಡುತ್ತಲೇ ಬಂದಿದೆ. ಆದರೆ ಯೋಜನೆಗಳ ಅನುಷ್ಠಾನದ ಹಂತದಲ್ಲಿ ನಡೆಯುವ ಭ್ರಷ್ಟಾಚಾರ ಯೋಜನೆಗಳ ಗುರಿಯನ್ನು ಮಸುಕಾಗಿಸುತ್ತದೆ. ಸರ್ಕಾರ ಜಾಣ ಕುರುಡು ಪ್ರದರ್ಶಿಸಿ ಮತ್ತೆ ಮತ್ತೆ ಅಂತಹುದೇ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಅದು ರಾಜಕಾರಣಿಗಳು ಮತ್ತು ಆಢಳಿತಶಾಹಿಗಳ ಹಿತ ಕಾಪಾಡಲು ಎಂದರೆ ತಪ್ಪಾಗಲಾರದೇನೋ. ಇದಕ್ಕೆ ಸಧ್ಯದ ಜ್ವಲಂತ ನಿದರ್ಶನವೆಂದರೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ'.ಸದರಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಬದಲಿಗೆ ಅಧಿಕಾರಶಾಹಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಣ ದೋಚುವ 'ಅಕ್ಷಯ ಪಾತ್ರೆ'ಯಾಗಿದ್ದು ಈಗ ಇತಿಹಾಸ!
     ಕಳೆದ 10ತಿಂಗಳ ಹಿಂದೆಯೇ ಪತ್ರಿಕೆ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ದಾಖಲೆಗಳ ಸಮೇತ 'ುದ್ಯೋಗ ಖಾತ್ರಿಯಲ್ಲಿ ದುಡ್ಡೇ ದುಡ್ಡು:ತಿನ್ನದವನೇ ಪರಮ ಪಾಪಿ' ಹಾಗೂ 'ಹುಚ್ಚುಮುಂಡೆ ಮದ್ವೇಲಿ ಉಂಡೋನೆ ಜಾಣ:ುದ್ಯೋಗ ಖಾತ್ರಿ ಜಾತ್ರೆ' ಶೀರ್ಷಿಕೆಯಲ್ಲಿ ಬಯಲಿಗೆಳೆಯಲಾಗಿತ್ತು. ಆದರೆ ಯೋಜನೆಯಲ್ಲಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದ ದುಷ್ಟ ಹಿತಾಸಕ್ತಿಗಳು ಜನವರಿ 29ರಂದು ಪತ್ರಿಕಾ ವರದಿಯ ವಿರುದ್ದ ಸಾರ್ವಜನಿಕ ಪ್ರತಿಭಟನೆ ನಡೆಸಿದ್ದವು. ಆದರೆ ಪತ್ರಿಕೆಯು ಅಂದು ಬರೆದ ಪ್ರತೀ ಅಕ್ಷರವೂ ಸತ್ಯಕ್ಕೆ ಹತ್ತಿರವಾಗಿದ್ದು ಹಾಸನ ಜಿ.ಪಂ. ಸಿಇಓ ಅಂಜನಕುಮಾರ್ ಸ್ವತ: ಸರ್ಕಾರಕ್ಕೆ ಬರೆದಿರುವ ರಹಸ್ಯ ಪತ್ರದಲ್ಲಿ ಉದ್ಯೋಗ ಖಾತ್ರಿಯಲ್ಲಿ ಆಗಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳು ನಿಜವೆಂದು ದಾಖಲಿಸಿದ್ದು ಮದ್ಯಂತರ ವರದಿಯನುಸಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿ ಸೆ.4ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ವರದಿಯನ್ನು ಆಧರಿಸಿ ಅಕ್ಟೋಬರ್ 10ರಂದು ಸಚಿವಾಲಯದಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ರವಿಕುಮಾರ್, ಜಿ.ಪಂ ಸಿಇಓ ಗೆ ತುರ್ತು ಆದೇಶ ಲಿಖಿತ ಪತ್ರ ರವಾನಿಸಿದ್ದು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಸೂಚಿಸಿದ್ದಾರೆ. ಸದರಿ ಮದ್ಯಂತರ ವರದಿ ಹಾಗೂ ಸಾಮಾಜಿಕ ವರದಿಯನ್ನು ಪರಿಶೀಲಿಸಿದಾಗ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು,ಹೊಳಲಗೋಡು, ಚಿಕ್ಕಹಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯಿತಿಗಳಲ್ಲಿ ತೀವ್ರ ಲೋಪವಾಗಿದೆಯೆಂದು ತಿಳಿಸಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸದರಿ ತಪ್ಪಿತಸ್ಥರ ವಿರುದ್ದ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಲು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ಮತ್ತು ಅವಶ್ಯಕ ಕ್ರಮ ಜರುಗಿಸಲು ಸದರಿ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶಿಸ್ತುಕ್ರಮಕ್ಕೆ ಸೂಚಿಸಿರುವ ಪತ್ರ ಬಂದು ಇಂದಿಗೆ ಒಂದು ತಿಂಗಳು ಕಳೆದಿದೆ ಆದರೆ ಹಾಸನ ಜಿ.ಪಂ ಸಿಇ ಓ ಅಂಜನಕುಮಾರ್ ಮರುಪರಿಶೀಲನೆಗೆ ಸ್ಥಳೀಯ ಅಧಿಕಾರಿಗಳನ್ನು ಅದರಲ್ಲೂ ಮುಖ್ಯವಾಗಿ ಅಕ್ರಮದಲ್ಲಿ ಸಂಪೂರ್ಣವಾಗಿ ಪಾಲುದಾರರಾದ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದ್ದಾರೆ. ಈ ತಂಡ ಪ್ರತೀ ಗ್ರಾಮ ಪಂಚಾಯ್ತಿಗಳಿಗೆ ತೆರಳಿ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ಪರಿಶೀಲಿಸುದಂತೆ! ಕಳೆದವಾರ ತಾಲೂಕಿಗೆ ತರಾತುರಿಯಲ್ಲಿ ಭೇಟಿ ನೀಡಿ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 10ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲ ತಪ್ಪಿ ತಸ್ಥ ಅಧಿಕಾರಿಗಳು, ಮುಖ್ಯವಾಗಿ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ ಕ್ರಿಮಿನಲ್ ಕೇಸು ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ನಿಲುವಿನ ಹಿಂದೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಏನು ಹುನ್ನಾರ ನಡೆಸಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ತಾನೇ ಅಕ್ರಮಗಳ ಕುರಿತು ಸರ್ಕಾರಕ್ಕೆ ರಹಸ್ಯ ವರದಿ ನೀಡಿದ್ದು ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂಬ ಪ್ರಶ್ನೆಯ ಬೆನ್ನಲ್ಲೇ ಸಿಇಓ ಪರೋಕ್ಷವಾಗಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆಸಿದ್ದಾರೆಂಬ ಅನುಮಾನವೂ ಇದೆ. ಸಿಇಓ ಅಂಜನಕುಮಾರ್ ಬರೆದ ರಹಸ್ಯ ಪತ್ರದಲ್ಲಿ ಏನಿದೆ?(ಮುಂದುವರೆಯುವುದು)

ಕಾಮೆಂಟ್‌ಗಳಿಲ್ಲ: