ಸೋಮವಾರ, ನವೆಂಬರ್ 15, 2010

ಕೂಲಿಗೆ ಬಾರದ ದಲಿತನಿಗೆ ಮರಕ್ಕೆ ಕಟ್ಟಿ ಹೊಡೆದರು!

ಅರಕಲಗೂಡು: ಕೂಲಿಗೆ ಬರಲು ನಿರಾಕರಿಸಿದ ದಲಿತನೋರ್ವನಿಗೆ ಸವರ್ಣಿಯರು ಮರಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆ ತಾಲ್ಲೂಕಿನ ಮುಸುವತ್ತೂರಿನಿಂದ ವರದಿಯಾಗಿದೆ.
ಮುಸುವತ್ತೂರು ಗ್ರಾಮದ ರಾಮಚಂದ್ರ(48) ಎಂಬಾತನೇ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಾಗಿದ್ದು ಸಧ್ಯ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾನೆ. ಮುಸುವತ್ತೂರು ಗ್ರಾಮದ ಸವರ್ಣಿಯರ ಮನೆಗಳ ಹಬ್ಬ ಹರಿದಿನ, ತಿಥಿ ಇತ್ಯಾದಿ ಕಾರ್ಯಕ್ರಮಗಳಿಗೆ ದಲಿತರು  ಚಾಕರಿ ಮಾಡಲು ಹೋಗುವುದು ಸಾಮಾನ್ಯ ವಿಚಾರ , ಆದರೆ ಈಗ್ಯೆ ಕೆಲ ತಿಂಗಳುಗಳಿಂದ ಸವರ್ಣಿಯರ ಮನೆಗಳಿಗೆ ಕೂಲಿ ಹೋಗುವುದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮದ್ಯಾಹ್ನ 3.30ರಲ್ಲಿ ಜಮೀನಿನಿಂದ ವಾಪಾಸಾಗುತ್ತಿದ್ದ ರಾಮಚಂದ್ರನ ಮೇಲೆ ಕ್ಯಾತೆ ತೆಗೆದ ಮುಸುವತ್ತೂರಿನ ಪಟೇಲರ ಮಗ ರಾಜಣ್ಣ, ಆತನ ಪತ್ನಿ ಯಶೋದಮ್ಮ, ಸಣ್ಣಪ್ಪ, ದೊಡ್ಡಪ್ಪ ಮತ್ತು ಆತನ ಪುತ್ರ ಮಲ್ಲಪ್ಪ ನಿಂದಿಸಿ ಹಲ್ಲೆನಡೆಸಿದರು,ನಂತರ ಲೈಟ್ ಕಂಬಕ್ಕೆ ನನ್ನನ್ನು ಕಟ್ಟಿಹಾಕಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಥಳಿಸಿದರು ಎಂದು ಆಸ್ಪತ್ರೆಯಲ್ಲಿದ್ದ ರಾಮಚಂದ್ರ ಪತ್ರಿಕೆಗೆ ತಿಳಿಸಿದರು. ಅದೇ ಸಂಧರ್ಭ ನನ್ನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಲು ಯತ್ನಿಸಿದರು ಎಂದು ರಾಮಚಂದ್ರ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರು. ಸಂಜೆಯ ವೇಳೆಗೆ ರಾಮಚಂದ್ರನ ಬಾಂಧವರಾದ ದ್ಯಾವಯ್ಯ, ಕೃಷ್ಣ, ರಂಗಸ್ವಾಮಿ ಬಿಡಿಸಿಕೊಳ್ಳಲು ಹೋದಾಗ ಆರೋಪಿಗಳು ಅವರಿಗೂ ಕೊಲೆ ಬೆದರಿಕೆ ಹಾಕಿದರು ಎಂದು ಅರಕಲಗೂಡು ಪೋಲೀಸರಿಗೆ ದೂರಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಬೀಗರ ಔತಣಕ್ಕೆ ಕರೆದು ಹಿಗ್ಗಾ-ಮುಗ್ಗಾ ಥಳಿಸಿದರು
ಅರಕಲಗೂಡು: ಬೀಗರ ಔತಣಕ್ಕೆ ಬಂದ ದಲಿತರು ಸಮಾನ ಪಂಕ್ತಿಯಲ್ಲಿ ಕುಳಿತರು ಎಂದು ಸಿಟ್ಟಿಗೆದ್ದ ಸವರ್ಣಿಯರು ಹಿಗ್ಗಾ-ಮುಗ್ಗಾ ಥಳಿಸಿದ್ದರಿಂದ 6ಮಂದಿ ಗಾಯಗೊಂಡ ಘಟನೆ ಕಳೆದ ಭಾನುವಾರ ಸಂಜೆ ತಾಲೂಕಿನ ಗೊಬ್ಬಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಗೊಬ್ಬಳಿ ಗ್ರಾಮದ ಸುಂದರಮ್ಮ ಎಂಬುವರ ಮನೆಗೆ ಬೀಗರ ಔತಣಕ್ಕೆ ಸಾಮೂಹಿಕ ಆಹ್ವಾನವಿದ್ದುದರಿಂದ ಸಂಜೆ 5-30ಕ್ಕೆ ತೆರಳಿದ್ದರೆನ್ನಲಾಗಿದೆ. ಈ ಸಂಧರ್ಭದಲ್ಲಿ ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಸವರ್ಣಿಯರ ಸಮಾನ ಪಂಕ್ತಿಯಲ್ಲಿ ಸುರೇಶ,ಜವರಯ್ಯ, ಸಣ್ಣಯ್ಯ, ಸತೀಶ, ಹಲಗಯ್ಯ, ಕುಮಾರ ಮತ್ತಿತರ ದಲಿತರು ಕುಳಿತಾಗ ಜಾತಿಯ ಹೆಸರಿಡಿದು ನಿಂದಿಸಿದ ಸವರ್ಣಿಯರು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದರು ಎಂದು ಕೊಣನೂರು ಪೋಲೀಸರಿಗೆ ದೂರಲಾಗಿದೆ. ನಂತರ ದಲಿತರ ಕೇರಿಗೂ ನುಗ್ಗಿ ದೊಣ್ಣೆ ಮತ್ತು ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸುಟ್ಟುಹಾಕುವುದಾಗಿ ಬೆದರಿಸಿದರು ಎನ್ನಲಾಗಿದೆ. ನಂತರ ಗಾಯಾಳುಗಳನ್ನು ಕೊಣನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಬಿಎಸ್ ಪಿ ನೇತೃತ್ವದಲ್ಲಿ ದಲಿತರು ಕೊಣನೂರು ಪೋಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜು ಪ್ರತಿಭಟನಾ ನಿರತರಿಂದ ಮನಿವಿ ಸ್ವೀಕರಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಬಿಎಸ್ ಪಿ ಮುಖಂಡ ಬಿ ಸಿ ರಾಜೇಶ್ ವಹಿಸಿದ್ದರು.

ಹಾಸನ: ನಗರದಿಂದ ಅರಕಲಗೂಡಿಗೆ ತೆರಳಲು ಸಾರಿಗೆ ಬಸ್ ಗಳ ಕೊರತೆ ಉಂಟಾಗಿದ್ದರಿಂದ ನೂರಾರು ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಹಾಸನ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆಯಿತು.
ಪ್ರತಿನಿತ್ಯ ಹಾಸನದಿಂದ ಅರಕಲಗೂಡು ತಾಲ್ಲೂಕು ಕೇಂದ್ರಕ್ಕೆ 600ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರು ತೆರಳುತ್ತಿದ್ದು ಬಹುತೇಕರು ಬಸ್ ಪಾಸ್ ಹೊಂದಿದ್ದಾರೆ, ಬಸ್ ನಲ್ಲಿ ಇವರೇ ತುಂಬಿ ಕೊಂಡರೆ ಕಲೆಕ್ಷನ್ ಆಗುವುದಿಲ್ಲ ಎಂಬ ನೆಪ ಒಡ್ಡಿ  ಬಸ್ ಚಾಲಕರು ಮತ್ತು ನಿರ್ವಾಹಕರುಗಳು ಬೆಳಿಗ್ಗೆ 8ಗಂಟೆಯಿಂದ 9-30ರವರೆಗೂ ಬಸ್ ಹೊರಡಿಸುವುದೇ ಇಲ್ಲ ೆಂದು ಪ್ರತಿಭಟನಾಕಾರರು ಆರೋಪಿಸಿದರು. ತಕ್ಷಣ ಪ್ರತಿಭಟನೆಗೆ ಮಣಿದ ನಿಲ್ದಾಣ ವ್ಯವಸ್ಥಾಪಕರು ಹೆಚ್ಚುವರಿ ಬಸ್ ಗಳನ್ನು ಓಡಿಸಿ ಪ್ರತಿಭ ಟನಾನಿರತರನ್ನು ಶಾಂತಗೊಳಿಸಿದರು. ಅರಕಲಗೂಡಿನಿಂದ ಸಂಜೆ 5ಗಂಟೆಯಿಂದ 7ಗಂಟೆಯವರೆಗೂ ಸಾರಿಗೆ ಬಸ್ ಗಳು ಓಡಿಸುವುದಿಲ್ಲ ಹಾಗೆಯೇ ರಾತ್ರಿ 9-30ರ ನಂತರ ಹಾಸನದಿಂದ ಅರಕಲಗೂಡು ತಾಲೂಕಿಗೆ ತೆರಳುವವರಿಗೂ  ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ.

ಕಾಮೆಂಟ್‌ಗಳಿಲ್ಲ: