ಶುಕ್ರವಾರ, ಆಗಸ್ಟ್ 27, 2010

ಅಂಗಮಾರಿಯಿಂದ ಮುಕ್ತ ಆಲೂಗಡ್ಡೆ ಬೆಳೆ, ರೈತರ ಮೊಗದಲ್ಲಿ ಮೂಡಿದ ಹರ್ಷ


ಅರಕಲಗೂಡು: ಜಿಲ್ಲೆಯ ವಿವಿದೆಡೆ ಬೆಳೆಯಲಾಗಿರುವ ಆಲೂಗಡ್ಡೆ ಬೆಳೆ ಅಂಗಮಾರಿಗೆ ಸಿಲುಕಿದ್ದು ರೈತರು ಸಂಕಷ್ಟದಲ್ಲಿದ್ದಾರೆ . ಆದರೆ ತಾಲೂಕಿನಲ್ಲಿ ಪೊಟ್ಯಾಟೋ ಕ್ಲಬ್ ವತಿಯಿಂದ ವಿತರಿಸಲಾಗಿರುವ ಧೃಢೀಕೃತ ಆಲೂಗಡ್ಡೆ ಬಿತ್ತಿದ ರೈತರ ಬೆಳೆ ಅಂಗಮಾರಿಯಿಂದ ಮುಕ್ತವಾಗಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.ಇಂತಹದ್ದೊಂದು ಹರ್ಷಕ್ಕೆ ಕಾರಣವಾಗಿದ್ದು ತಾಲ್ಲೂಕಿನಲ್ಲಿ ರೈತರ ಹಿತಾಸಕ್ತಿಗಾಗಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್!. ಪಂಜಾಬ್ ರಾಜ್ಯದಿಂದ ಸುಮಾರು 5ಲಾರಿ ಲೋಡು ಧೃಢೀಕೃತ ಆಲೂಗಡ್ಡೆಯನ್ನು ಕ್ಲಬ್ ವತಿಯಿಂದ ತರಿಸಿ 600ಚೀಲ ಆಲೂಗಡ್ಡೆಯನ್ನು ಪ್ರಾಯೋಗಿಕವಾಗಿ ರೈತರಿಗೆ ನೀಡಿತ್ತು.
ಕಳೆದ 2ವರ್ಷಗಳಿಂದ ಜಿಲ್ಲೆಯ ಸುಮಾರು 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದಿದ್ದ ಆಲೂಗಡ್ಡೆ ಅಂಗಮಾರಿಗೆ ತುತ್ತಾಗಿ ನೂರಾರು ಕೋಟಿರೂ ನಷ್ಟ ಸಂಭವಿಸಿತ್ತು. ಬೆಳೆ ಕಳೆದುಕೊಂಡ ರೈತರಿಗೆ ಬೆಳೆಗೆ ಕಟ್ಟಿದ ವಿಮಾ ಹಣವಾಗಲಿ ಸರ್ಕಾರದ ಪರಿಹಾರ ಧನವಾಗಲಿ ದೊರೆಯದೇ ಹಲವು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ರಾಜ್ಯ ಸರ್ಕಾರ ಕೂಡ ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ. ಕರ್ನಾಟಕ ರಾಜ್ಯ ಬೀಜ ನಿಗಮ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದರೂ ಸಹಾ ಆಲೂಗಡ್ಡೆ ಬಿತ್ತನೆ ಬೀಜ ನಮ್ಮ ರೈತರಿಗೆ ಧೃಢೀಕೃತವಾಗಿ ಲಭ್ಯವಿರಲಿಲ್ಲ, ಪರಿಣಾಮ ರೈತನ ಗೋಳು ಕೇಳುವವರು ದಿಕ್ಕಿಲ್ಲದಂತಾಗಿತ್ತು. ಈ ಸಂಧರ್ಭದಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ರೈತರ ಸಹಕಾರದಿಂದ ಯೋಗಾರಮೇಶ್ ಪೊಟ್ಯಾಟೋ ಕ್ಲಬ್ ಗೆ ಚಾಲನೆ ನೀಡಿದರ. ಕ್ಲಬ್ ವತಿಯಿಂದ ಆಲೂ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳ ಚಿಂತನ-ಮಂಥನ ನಡೆಯಿತು. ಆಲೂಬೆಳೆ ಹಾಗೂ ಬಿತ್ತನೆ ಬೀಜದ ಪ್ರಾತ್ಯಕ್ಷಿಕೆ ಅರಿಯಲು ತಾಲೂಕಿನ ರೈತರನ್ನು ಕ್ಲಬ್ ವತಿಯಿಂದ ಪಂಜಾಬ್ ಗೆ ಕಳುಹಿಸಲಾಯಿತು. ಅಷ್ಟೇ ಅಲ್ಲ, ಅಲ್ಲಿ ಆಲೂ ಬಿತ್ತನೆ ಬೀಜ ಉತ್ಪಾದಿಸುವ ದೊಡ್ಡ ರೈತರನ್ನು , ತಜ್ಞರನ್ನು ತಾಲೂಕಿಗೆ ಕರೆಸಿ ಸ್ಥಳೀಯ ಕೃಷಿ ಅಧಿಕಾರಿಗಳ ಸಹಾಯದೊಂದಿಗೆ ದೃಶ್ಯರೂಪದ ಪ್ರಾತ್ಯಕ್ಷಿಕೆ ಮತ್ತು ರೈತರಿಗೆ ಬೆಳೆಯಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ದೇಶದ ಪ್ರಸಿದ್ದ ಕೀಟ ಶಾಸ್ತ್ರಜ್ಞ ಡಾ ರಾವುಲ್ ಮತ್ತು ವಿಜ್ಞಾನಿಗಳ ತಂಡವೂ ಕಾಲಾನುಕಾಲಕ್ಕೆ ರೈತರ ಜಮೀನುಗಳಿಗೆ ತೆರಳಿ ಬೆಳೆಯನ್ನು ಪರಿಶೀಲಿಸಿದ್ದರಲ್ಲದೇ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ತೋರಿಸಕೊಟ್ಟಿದ್ದರು. ಕ್ಲಬ್ ವತಿಯಿಂದ ಧೃಢೀಕೃತ ಆಲೂಗಡ್ಡೆ ಪಡೆದ ರೈತರಿಗೆ ಉಚಿತ ಔಷದ ಹಾಗೂ ಸ್ಪ್ರೇಯರ್ ಗಳನ್ನು ಸಹಾ ನೀಡಲಾಗಿತ್ತು. ಆಲೂಬಿತ್ತನೆ ಮಾಡುವಾಗ ಬೀಜೋಪಚಾರದಿಂದ ಹಿಡಿದು ಬೆಳೆ ಬರುವವರೆಗೂ ರೈತರು, ತಜ್ಞರು ಸೂಚಿಸಿದ ಕ್ರಮಗಳನ್ನೇ ಅನುಸರಿಸಿದ್ದರು. ಪರಿಣಾಮವಾಗಿ ಧೃಢೀಕೃತ ಬಿತ್ತನೆಯ ಆಲೂಗಡ್ಡೆ ಬೆಳೆಯ ಗಿಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ದಪ್ಪ ಸೈಜಿನ ಆಲೂಗಡ್ಡೆ ಬಿಟ್ಟಿದೆ. ಇಳುವರಿ ಅತ್ಯುತ್ತಮವಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷೆಯಲ್ಲಿರುವಾಗಲೇ ಇಲ್ಲಿ ನ ಆಲೂಗಡ್ಡೆಯನ್ನು ಕೊಳ್ಳಲು ಪಂಜಾಬ್ ರಾಜ್ಯದಿಂದ ಬೇಡಿಕೆ ಬಂದಿದೆ ಎನ್ನುತ್ತಾರೆ ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಯೋಗಾರಮೇಶ್. ಈಗಾಗಲೇ ಆಲೂಗಡ್ಡೆಯನ್ನು ಸ್ಯಾಂಪಲ್ ಆಗಿ ಪಂಜಾಬ್ ಗೆ ಕಳುಹಿಸಲಾಗಿದೆ. ಚಿಪ್ಸ್ ತಯಾರಿಸುವ ಕಂಪನಿಗಳು ಈ ಆಲೂಗಡ್ಡೆ ಕೊಳ್ಳಲು ಒಲವು ವ್ಯಕ್ತಪಡಿಸಿವೆ ಎನ್ನುತ್ತಾರೆ ಕ್ಲಬ್ ನ ಮುಖಂಡ ರಾಜೇಂದ್ರ. ಪ್ರಮಾಣೀಕರಿಸಿದ ಬೀಜದ ಆಲೂಗಡ್ಡೆ ಬೆಳೆಯ ಪಕ್ಕದಲ್ಲೇ ಪ್ರಮಾಣೀಕರಿಸದ ಕಡಿಮೆ ಬೆಲೆಯ ಆಲೂಗಡ್ಡೆ ಯನ್ನು ಇತರೆ ರೈತರು ಬೆಳೆದಿದ್ದು ಅದು ಅಂಗಮಾರಿಗೆ ತುತ್ತಾಗಿದೆ ಹಾಗೂ ಕೆಲವೆಡೆ ಕರಿಕಡ್ಡಿ ರೋಗದ ಭಾಧೆಗೆ ಬೆಳೆ ಸಿಲುಕಿದೆ. ಜಿಲ್ಲಾ ಆಡಳಿತವೂ ಸಹಾ ಈ ಬಾರಿ ಪ್ರಮಾಣೀಕೃತ/ಪ್ರಮಾಣೀಕರಿಸದ ಆಲೂಗಡ್ಡೆ ಬಿತ್ತನೆ ಬೀಜಕ್ಕೆ ವ್ಯವಸ್ಥೆ ಮಾಡಿತ್ತಾದರೂ ಹೆಚ್ಚಿನ ಮಂದಿ ಕಡಿಮೆ ಬೆಲೆಗೆ ಸಿಗುವ ಸಾಧಾರಣ ಬಿತ್ತನೆ ಬೀಜವನ್ನೆ ಪಡೆದಿದ್ದರೂ ಹಾಗೂ ಕ್ರಮಬದ್ದ ಬೇಸಾಯ ವಿಧಾನವನ್ನು ಅನುಸರಿಸದಿದ್ದುದರಿಂದ ಅಂತಹ ಬೆಳೆಗಳು ಅಂಗಮಾರಿ ಮತ್ತು ಕರಿಕಡ್ಡಿ ರೋಗಕ್ಕೆ ತುತ್ತಾಗಿವೆ. ಈ ನಡುವೆ ಪೊಟ್ಯಾಟೋ ಕ್ಲಬ್ ನ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು ಮುಂದಿನ ಭಾರಿ ರೈತರನ್ನು ಮತ್ತುಷ್ಟು ಜಾಗೃತಿ ಗೊಳಿಸಿ ಸಂಕಷ್ಟದಿಂದ ಪಾರುಮಾಡಲು ಯತ್ನಿಸಲಾಗುವುದು ಹಾಗೂ ರೈತರ ಸಹಕಾರದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆಗೂ ಪ್ರಯತ್ನಿಸಲಾಗುವುದು ಎನ್ನುತ್ತಾರೆ ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್.
ಅರಕಲಗೂಡು: ತಾಲೂಕಿನಲ್ಲಿ ಬಾಕಿ ಉಳಿದಿರುವ ವೃದ್ದಾಪ್ಯ ವೇತನ/ವಿಧವಾ ವೇತನ/ಅಂಗವಿಕಲರ ವೇತನಗಳ ಕಡತವನ್ನು ವಾರದೊಳಗೆ ವಿಲೇ ಮಾಡಲಾಗುವುದೆಂದು ಕಂದಾಯಾಧಿಕಾರಿಗಳು ತಿಳಿಸಿದ್ದಾರೆಂದು ಪಟ್ಟಣ ಪಂಚಾಯ್ತಿ ಸದಸ್ಯ ರಾಮಣ್ಣ ಹೇಳಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪಿಂಚಣಿ ವೇತನಗಳ ಅರ್ಜಿಗಳು ಬಾಕಿ ಉಳಿದಿದ್ದು ಕಂದಾಯ ಇಲಾಖೆ ನೌಕರರು ಅವುಗಳನ್ನು ವಿಲೇ ಮಾಡಲು ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಗ್ಗೆ ದೂರುಗಳಿತ್ತು ಈ ಹಿನ್ನೆಲೆಯಲ್ಲಿ ಪ.ಪಂ ಉಪಾಧ್ಯಕ್ಷ ರಮೇಶ್, ಸದಸ್ಯರಾದ ಮುನ್ನಾ, ಶಂಕರಯ್ಯ ಮತ್ತಿತರರು ಶುಕ್ರವಾರ ತಹಸೀಲ್ದಾರ್ ಸವಿತಾರನ್ನು ಭೇಟಿ ಆಗಿದ್ದೆವು. ಈ ಸಂಧರ್ಭದಲ್ಲಿ ಅವರು ಬಾಕಿ ಉಳಿದಿದ್ದ 800ಕಡತಗಳನ್ನು ವಿಲೇ ಮಾಡಲಾಗಿದೆ ಇನ್ನುಳಿದ 200ರಷ್ಟು ಕಡತಗಳಿಗೆ ಈ ತಿಂಗಳ ಅಂತ್ಯದೊಳಗೆ ವಿಲೇ ಮಾಡಲಾಗುವುದು, ಯಾವುದೇ ದೂರುಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ್ದಾರೆ ಎಂದರು.

ಮಂಗಳವಾರ, ಆಗಸ್ಟ್ 24, 2010

ರಕ್ಷಾ ಸಮಿತಿ ಸಭೆಯಲ್ಲಿ ಬಯಲಾದ ಸಾರ್ವಜನಿಕ ಆಸ್ಪತ್ರೆ ಹುಳುಕು

ಅರಕಲಗೂಡು: ಕಳೆದ 4ತಿಂಗಳಿನಿಂದಲೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳಿಗೆ ಆಹಾರ ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದು, ಅಸಮರ್ಪಕ ಸ್ವಚ್ಚತೆ ಕೆಲಸ, ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಫಿಜಿಶಿಯನ್ ಗಳ ಅಸಹಕಾರ ಹೀಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಲವು ವೈಫಲ್ಯಗಳು ಇಂದು ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತಲ್ಲದೇ ಕೆಲ ಸಿಬ್ಬಂದಿಗಳ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲಾಯಿತು.
ಹಲವು ದಿನಗಳಿಂದ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯಕ್ಕೆ ಒಳಗಾಗಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ಶಾಸಕ ಎ ಮಂಜು ಆಸ್ಪತ್ರೆ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂಧರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಶೀತಲ್ ಕುಮಾರ್ ಕೆಟ್ಟಿರುವ ಎಕ್ಸ್ ರೇ ಯಂತ್ರವನ್ನು 2ತಿಂಗಳೊಳಗಾಗಿ ಸರಿಪಡಿಸಲಾಗುವುದು, ನೂತನ ಕಟ್ಟಡವನ್ನು 15ದಿನಗಳೊಳಗಾಗಿ ವಶಕ್ಕೆ ಪಡೆಯಲಾಗುವುದು, ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ತಿಂಗಳಿಗೊಮ್ಮ ನಡೆಸಲಾಗುವುದು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಔಷಧ ಮಾತ್ರೆ, ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಎಪಿಎಲ್ ಕಾರ್ಡು ದಾರರಿಗೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಪ್ರತಿ ಕಿಮಿಗೆ 1ರೂ. ಪಟ್ಟಣದಿಂದ ಹಳ್ಳಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಪ್ರತಿ ಕಿಮಿಗೆ 4ರೂ ದರ ಪಡೆಯಲಾಗುವುದು ಎಂದರು. ಆಸ್ಪತ್ರೆಗೆ ವಾರ್ಷಿಕವಾಗಿ 8.86ಲಕ್ಷರೂಪಾಯಿ ವೆಚ್ಚದಲ್ಲಿ ಔಷಧ ಮಾತ್ರೆ ಖರೀದಿಗೆ ಅವಕಾಶವಿದೆ ಈ ವರ್ಷ ಸದರಿ ವೆಚ್ಚವನ್ನು ಬಳಸಲಾಗಿದೆ ಎಂದರು. ಆಗ ಮದ್ಯೆ ಪ್ರವೇಶಿಸಿ ಮಾತನಾಡಿ ಶಾಸಕ ಎ ಮಂಜು ಸಾರ್ವಜನಿಕರಿಗೆ ಮಾಹಿತಿಯನ್ನು ಫಲಕದ ಮೇಲೆ ಪ್ರಕಟಿಸಬೇಕು, ರೋಗಿಗಳಿಗೆ ತೊಂದರೆಯಾಗದಂತೆ ಆರೋಗ್ಯ ಸೇವೆ ಒದಗಿಸಲು ಕಾಳಜಿ ವಹಿಸಬೇಕು ಯಾವುದೇ ಕಾರಣಕ್ಕೂ ಸೂಜಿ-ಮಾತ್ರೆಗಳಿಗೆ ಖಾಸಗಿ ಅಂಗಡಿಗಳಿಗೆ ಚೀಟಿ ಬರೆಯಬಾರದು ಈ ಬಗ್ಗೆ ದೂರುಗಳು ಬಂದರೆ ಅದನ್ನು ತಾವು ಸಹಿಸುವುದಿಲ್ಲ ಎಂದು ವೈದ್ಯರುಗಳಿಗೆ ಎಚ್ಚರಿಸಿದರು. ರಕ್ಷಾ ಸಮಿತಿಯ ಸದಸ್ಯರುಗಳು ಆಸ್ಪತ್ರೆಯ ಸ್ವಚ್ಚತೆ ಬಗಗ ಕಿಡಿ ಕಾರಿದಾಗ ಆಗಿರುವ ಲೋಪವನ್ನು ಸ್ವಚ್ಚತೆ ಉಸ್ತವಾರಿ ಪಡೆದಿರುವ ಕೃಷ್ಣ ಎಂಟರ್ ಪ್ರೈಸಸ್ ನ ಉಮೇಶ್ ಒಪ್ಪಿಕೊಂಡರು. ಸ್ವಚ್ಚತಾ ಕಾಮಗಾರಿಯ ಲೋಪಗಳಿಗೆ ಅಸಹನೆ ವ್ಯಕ್ತಪಡಿಸಿದ ಶಾಸಕರು ಕಡ್ಡಾಯವಾಗಿ ಬೆಳಿಗ್ಗೆ 7ಮಂದಿ ಮತ್ತು ರಾತ್ರಿ 2ಮಂದಿ ಕಾರ್ಯ ನಿರ್ವಹಿಸಬೇಕು ಮತ್ತು ಸದರಿ ಕೆಲಸಗಾರರು ಗುರುತು ಪತ್ರ ಹೊಂದಿರಬೇಕು ಅವರಿಗೆ ಸರ್ಕಾರದಿಂದ ನಿಗದಿಯಾಗಿರುವ 2300ರೂ ಸಂಬಳವನ್ನು ನೀಡಬೇಕು ಎಂದು ಟೆಂಡರುದಾರನಿಗೆ ತಾಕೀತು ಮಾಡಿದರು. ಆತ ಇದುವರೆಗೂ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೋಗುವ ಭರವಸೆ ನೀಡಿ ಕ್ಷಮೆಯಾಚಿಸಿದರು. ಆಸ್ಪತ್ರೆಯ ವೈದ್ಯರುಗಳಾದ ಡಾ ಶಂಕರಪ್ಪ, ಡಾ ಯೋಗೇಶ್ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗುತ್ತಿದ್ದಾರೆ, ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಾಸಕರು ಸದರಿ ವೈದ್ಯರುಗಳಿಗೆ ತಪ್ಪನ್ನು ತಿದ್ದಿಕೊಳ್ಳುವಂತೆ ತಿಳಿ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ದಂತ ವೈದ್ಯರುಗಳಿದ್ದು ಅವರನ್ನು ಕೊಣನೂರಿನ ಸರ್ಕಾರಿ ಆಸ್ಪತ್ರೆಗೆ ತಲಾ 3ದಿನ ನಿಯೋಜನೆ ಕಳುಹಿಸುವಂತೆ ಸೂಚಿಸಲಾಯಿತು. ಇದೇ ಸಂಧರ್ಭದಲ್ಲಿ ಮಾತನಾಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ ಸ್ವಾಮಿಗೌಡ ಸರ್ಕಾರದ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯ ಅನುಷ್ಠಾನಕ್ಕೆ ಆಸ್ಪತ್ರೆಯ ಫಿಜಿಶಿಯನ್ಗಳು ಮತ್ತು ದಂತ ವೈದ್ಯರುಗಳು ಸಹಕರಿಸುತ್ತಿಲ್ಲ ಇದರಿಂದಾಗಿ ತಾಲ್ಲೂಕಿನ 4530ಮಕ್ಕಳಿಗೆ ಅನ್ಯಾಯ ಮಾಡಿದಂತಾಗಿದೆ ಈ ಬಗ್ಗೆ ಸದರಿ ವೈದ್ಯರುಗಳಿಗೆ ಸೂಚನೆ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಕಳೆದ ಫೆಬ್ರುವರಿ ತಿಂಗಳಿನಲ್ಲೆ ಟೆಂಡರು ಆಗಿದ್ದರು ಸಹಾ ಆಡಳಿತಾತ್ಮಕ ಮಂಜೂರಾತಿಯ ನೆಪದಲ್ಲಿ ಕಳೆದ 4-5ತಿಂಗಳಿನಿಂದ ಆಸ್ಪತ್ರೆಯ ರೋಗಿಗಳಿಗೆ ಆಹಾರ ಒದಗಿಸದೇ ವಂಚಿಸಲಾಗಿದೆ ಈ ಹಿನ್ನೆಲೆಯಲ್ಲಿ ಸದರಿ ಲೋಪಕ್ಕೆ ಕಾರಣಕರ್ತನಾಗಿರುವ ಆಸ್ಪತ್ರೆಯ ಗುಮಾಸ್ತ ರಾಕಿ ಜೇಕಬ್ ನ್ನು ತರಾಟೆಗೆ ತೆಗೆದುಕೊಂಡ ಶಾಸಕ ಮಂಜು ಆತನ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲು ಸೂಚಿಸಿದರು. ಕಳೆದ ತಿಂಗಳು ಆಸ್ಪತ್ರೆಯಲ್ಲಿ ಕುಡಿದು ಗಲಾಟೆ ಮಾಡಿದ ಡಿ ಗ್ರೂಪ್ ನೌಕರ ದೇವರಾಜು ವಿರುದ್ದವೂ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲು ಶಾಸಕರು ಸೂಚಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಮಾದೇಶ್, ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್, ತಹಸೀಲ್ದಾರ್ ಸವಿತಾ, ತಾಲೂಕು ಆಡಳಿತಾಧಿಕಾರಿ ಡಾಸ್ವಾಮಿಗೌಡ, ರಕ್ಷಾ ಸಮಿತಿಯ ಸದಸ್ಯರಾದ ಮಾಜಿ ಜಿ.ಪಂ. ಸದಸ್ಯ ಶೆಟ್ಟಿಗೌಡ, ಪಿಎಸ್ಎನ್ ಪ್ರಸಾದ್, ಗುಂಡಣ್ಣ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮತ್ತಿತರರು ಉಪಸ್ತಿತರಿದ್ದರು.
ಅರಕಲಗೂಡು: ಮಿನಿಟ್ರಕ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪಟ್ಟಣದ ಕೋಟೆಯಲ್ಲಿ ನಡೆಯಿತು.
ಹಾಸನದಿಂದ ಅರಕಲಗೂಡು ಪಟ್ಟಣಕ್ಕೆ ಬರುತ್ತಿದ್ದ 407ಮಿನಿಟ್ರಕ್ ಗೆ ಅರಕಲಗೂಡು ಕೋಟೆ ಮಿನಿ ವಿಧಾನಸೌಧದೆದುರು ದಿಢೀರನೇ ರಸ್ತೆಯ ಬಲಬದಿಗೆ ಚಲಿಸಿದ ಬೈಕ್ ಡಿಕ್ಕಿ ಹೊಡೆಯಿತು. ಆಗ ಬೈಕ್ ಸವಾರ ರುದ್ರಪಟ್ಟಣದ ಜಯಣ್ಣ(50) ತೀವ್ರವಾಗಿ ಗಾಯಗೊಂಡರು, ಹಿಂಬದಿಯ ಸವಾರನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಇಬ್ಬರನ್ನು ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅರಕಲಗೂಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ, ಆಗಸ್ಟ್ 23, 2010

ಅತಿಥಿ ಉಪನ್ಯಾಸಕರ ಸಂದರ್ಶನ ಇಂದು

ಅರಕಲಗೂಡು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆ.24ರಂದು ಸಂದರ್ಶನ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಚಲುವಯ್ಯ ತಿಳಿಸಿದ್ದಾರೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಕನ್ನಡ-1,ಇಂಗ್ಲೀಷ್-2,ಅರ್ಥಶಾಸ್ತ್ರ-2,ಸಮಾಜ ಶಾಸ್ತ್ರ-3,ವಾಣಿಜ್ಯ ಶಾಸ್ತ್ರ-9,ಇತಿಹಾಸ-1 ಮತ್ತು ಪರಿಸರ ಅಧ್ಯಯನ-1 ತಾತ್ಕಾಲಿಕ ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು ವಿವಿ ನಿಯಮಾನುಸಾರ NET,SLET,PhD., ಆದವರಿಗೆ ಆದ್ಯತೆ ನೀಡಲಾಗುವುದು. ಅರ್ಹರು ಆ.24ರಂದು ಮದ್ಯಾಹ್ನ ಕಾಲೇಜಿನಲ್ಲಿ ಸಂದರ್ಶನ ನಡೆಯಲಿದೆ, ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದ್ದಾರೆ.
ದಸಂಸ ನೂತನಸಮಿತಿ: ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯನ್ನು ಪುನರ್ ರಚಿಸಲಾಗಿದೆ. ದಸಂಸ ಮುಖಂಡ ಡಿ ಇ ಜನಾರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮುಂದಿನಂತೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಟಿ ವಿ ಶಿವರಾಮಯ್ಯ-ಸಂಚಾಲಕರು, ಮಗ್ಗೆಸಣ್ಣಸ್ವಾಮಿ,ಎ ಸಿ ಮಂಜುನಾಥ,ಸುರೇಶ-ಸಂಘಟನಾ ಸಂಚಾಲಕರುಗಳು ಗಿರೀಶ್-ಖಜಾಂಚಿ, ಪ್ರವೀಣ್ ಕುಮಾರ್,ಜೆ ಸ್ವಾಮಿ,ಚನ್ನಕೇಶವ, ಡಿ ಜೆ ಸಾಗರ್ - ಸಲಹಾ ಸಮಿತಿ ನಿರ್ದೇಶಕರುಗಳು.

ಶುಕ್ರವಾರ, ಆಗಸ್ಟ್ 20, 2010

ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

ಅರಕಲಗೂಡು: ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಯಶೋಧಮ್ಮ ಹಾಗೂ ಎ ಪಿ ರಮೇಶ್ ಆಯ್ಕೆಯಾಗಿದ್ದಾರೆ. ಯಶೋಧಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದುರಮೇಶ್ ಪಕ್ಷೇತರ ಸದಸ್ಯರಾಗಿ ಜೆಡಿಎಸ್ ಬೆಂಬಲದಿಂದ ಆಯ್ಕೆಯಾಗಿದ್ದಾರೆ. ಈಗ 30ತಿಂಗಳ ಅದಿಕಾರಾವಧಿ ಉಳಿದಿದ್ದು 15ತಿಂಗಳು ಅಧಿಕಾರ ಹಂಚಿಕೆ ಆಗಿದೆ. ಆ ನಂತರದ ಅವಧಿಗೆ ಮತ್ತೆ ಬೇರೆ ಆಯ್ಕೆ ನಡೆಯಲಿದೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ.

ಅರಕಲಗೂಡು: ಪಟ್ಟಣದ ರಿಲಾಯನ್ಸ್ ಶೋ ರೂಂ ಮಳಿಗೆಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಕೇವಲ ಒಂದು ತಿಂಗಳ ಅಂತರದಲ್ಲಿ ನಡೆದಿರುವ 2ನೇ ಕಳ್ಳತನ ಇದಾಗಿದೆ. ಪಟ್ಟಣದ ಕೋಟೆಯಲ್ಲಿ ನೂತನವಾಗಿ ಆರಂಭಗೊಂಡಿದ್ದ ರಿಲಾಯನ್ಸ್ ಶೋರೂಂ ನ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು 10ಸಾವಿರ ನಗದು ಹಾಗೂ ಹಲವು ಮೊಬೈಲ್ ಸೆಟ್ ಗಳನ್ನು ಕದ್ದೊಯ್ದಿದ್ದಾರೆ ಎಂದು ಮಾಲೀಕ ನಾಗೇಶ್ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಗುರುವಾರ, ಆಗಸ್ಟ್ 19, 2010

ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

ಅರಕಲಗೂಡು: ಪಟ್ಟಣ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ನ ಯಶೋಧಮ್ಮ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿತ್ತು ಕಾಂಗ್ರೆಸ್ ನಿಂದ ಯಶೋಧಮ್ಮ ಏಕಮಾತ್ರ ಅಭ್ಯರ್ಥಿಯಾಗಿದ್ದರು,ಜೆಡಿಎಸ್ ನಲ್ಲಿ ಈ ವರ್ಗದಿಂದ ಯಾವ ಸದಸ್ಯರೂ ಇಲ್ಲದಿದ್ದುದರಿಂದ ಯಶೋಧಮ್ಮ ಅವರ ಆಯ್ಕೆ ಸುಗಮವಾಗಿ ಮುಗಿಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರವಿಕುಮಾರ್ ಹಾಗೂ ಜೆಡಿಎಸ್ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ರಮೇಶ್ ಸ್ಪರ್ದಿಸಿದರು. ಆದ್ದರಿಂದ ಚುನಾವಣೆ ಅನಿವಾರ್ಯವಾಗಿ ಎರಡು ಅಭ್ಯರ್ಥಿಗಳ ಪರ ಬೆಂಬಲಿಗರ ಕೈ ಎತ್ತಿಸುವ ಮೂಲಕ ಮತ ಎಣಿಕೆ ಮಾಡಲಾಯಿತು. ಇಬ್ಬರು ಅಭ್ಯರ್ಥಿಗಳಿಗೂ ಸಮಾನ ಮತಗಳು ಬಂದಿದ್ದರಿಂದ ಲಾಟರಿ ಎತ್ತಲಾಯಿತು. ಅಂತಿಮವಾಗಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಅವರಿಗೆ ವಿಜಯಲಕ್ಷ್ಮಿ ಒಲಿಯಿತು. ನಂತರ ಮಾತನಾಡಿದ ಉಪಾಧ್ಯಕ್ಷ ರಮೇಶ್ ಸಂತಸದ ಭಾವೋದ್ವೇಗ ತಡೆಯಲಾರದೇ ಗಳಗಳನೆ ಅತ್ತರಲ್ಲದೇ ಅವರ ಗೆಲುವನ್ನು ಮತದಾರರಿಗೆ ಸಮರ್ಪಿಸುವುದಾಗಿ ತಿಳಿಸಿದರು. ನಿರ್ಗಮಿತ ಅಧ್ಯಕ್ಷ ಲೋಕೇಶ್ ಮಾತನಾಡಿ ತನ್ನ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಮುಂದೆಯೂ ಅದೇ ರೀತಿ ಅಧಿಕಾರ ನಿರ್ವಹಿಸಿ ಎಂದರು, ಪರಾಜಿತ ಅಭ್ಯರ್ಥಿ ರವಿಕುಮಾರ್ ಮಾತನಾಡಿ ಅಭಿವೃದ್ದಿ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಚುನಾವಣೆಯಲ್ಲಿಯೂ ಭಾಗವಹಿಸಿ ಮಾತನಾಡಿದ ಶಾಸಕ ಎ ಮಂಜು ಮಾತನಾಡಿ ಗೆಲ್ಲುವವರೆಗೂ ಪಕ್ಷ ರಾಜಕಾರಣ, ಗೆದ್ದ ಮೇಲೆ ಯಾವುದೇ ಪಕ್ಷ ರಾಜಕಾರಣ ಮಾಡದೇ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಕೊಂಡು ಹೋಗಿ, ಹಿಂದಿನ ಎಂ ಎಲ್ ಎ ಸದಸ್ಯರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾವೇ ನಿರ್ದಾರ ತೆಗೆದುಕೊಂಡು ಸರ್ಕಾರದಿಂದ ಬಂದ ಹಣವನ್ನು ವಿನಿಯೋಗಿಸುತ್ತಿದ್ದರು ಆದರೆ ನಾನು ಹಾಗೆ ಮಾಡದೇ ಎಲ್ಲರನ್ನು ಕೇಳಿ ಆಗಬೇಕಾದ ಕೆಲಸಗಳ ಕಡೆ ಹೆಚ್ಚಿನ ಒತ್ತು ನೀಡಿದ್ದೇನೆ, ಪಟ್ಟಣಕ್ಕೆ ಯುಜಿಡಿ ಕಾಮಗಾರಿ ಆಗಬೇಕೆನ್ನುವುದು ನನಗೆ ದಶಕಗಳ ಕನಸು ಅದು ಈಗ ಮಂಜೂರಾಗಿದೆ, ಈ ಹಿಂದಿನ ಅವಧಿಯಲ್ಲಿ ಆರಂಭಿಕ ಮೊತ್ತ ಕಟ್ಟದಿದುದರಿಂದ ಯೋಜನೆ ವಿಳಂಬವಾಗಿತ್ತು ಎಂದು ಆರೋಪಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಸವಿತಾ ಕಾರ್ಯ ನಿರ್ವಹಿಸಿದರು. ಪ.ಪಂ. ಮುಖ್ಯಾಧಿಕಾರಿ ವಾಸುದೇವ್ ಸಭೆಯಲ್ಲಿ ಹಾಜರಿದ್ದರು.
ಅರಕಲಗೂಡು:ಅನಗತ್ಯವಾಗಿ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರ ಮೇಲೆ ಆರೋಪ ಹೊರಿಸುತ್ತಿರುವ ಶಾಸಕ ಎ. ಮಂಜು ಇದುವರೆಗೂ ಎಷ್ಟು ಬಾರಿ ಪಟ್ಟಣದ ವಾರ್ಡುಗಳಿಗೆ ಭೇಟಿ ನೀಡಿದ್ದಾರೆಂಬುದನ್ನು ಹೇಳಲಿ ಎಂದು ಪ.ಪಂ ಮಾಜಿ ಅಧ್ಯಕ್ಷ ಲೋಕೇಶ್ ಸವಾಲು ಹಾಕಿದ್ದಾರೆ.
ಪ.ಪಂ. ನ ಜೆಡಿಎಸ್ ಸದಸ್ಯರೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಶಾಸಕ ಮಂಜು ಜವಾಬ್ಧಾರಿಯುತವಾಗಿ ಮಾತನಾಡಬೇಕೆ ವಿನಹ ಸಲ್ಲದ ಮಾತುಗಳನ್ನು ಆಡಬಾರದು, ಮಾಜಿ ಶಾಸಕರು ಹಿಂದಿನ ಆಡಳಿತಾವಧಿಯಲ್ಲಿ ಪ್ರತೀ ವಾರ್ಡುಗಳಿಗೂ ಭೇಟಿ ನೀಡಿ ಸಮಸ್ಯೆಯನ್ನು ಮನಗಂಡಿದ್ದರು ಹಾಘೂ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದಾರೆ, ಅದೇ ರೀತಿ ಯುಜಿಡಿ ಕುರಿತು ಶಾಸಕ ಎ ಮಂಜು ಹೇಳಿಕೆ ಸರಿಯಲ್ಲ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಯುಜಿಡಿ ಆರಂಭಕ್ಕೆ ಆರಂಭಿಕ ಮೊತ್ತವನ್ನು ಪಾವತಿಸಲಾಗಿತ್ತು ಆದರೆ ಸರ್ಕಾರದ ಆಡಳಿತಾತ್ಮಕ ಕಾರಣಗಳಿಂದ ತಡವಾಗಿದೆ ಅದನ್ನು ಸಾರ್ವಜನಿಕರು ಅರಿಯಬೇಕು ಎಂದರು. ಪಕ್ಷೇತರ ಅಭ್ಯರ್ಥಿ ರಮೇಶ್ ಜೆಡಿಎಸ್ ಪಕ್ಷ ಸೇರಿದ್ದಾರೆ ಆದ್ದರಿಂದ ಅವರನ್ನು ಬೇಷರತ್ತಾಗಿ ಬೆಂಬಲಿಸಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ರಮೇಶ್, ಶಂಕರಯ್ಯ, ಮುನ್ನಾ, ಅಲೀಂ, ರಾಮಣ್ಣ ಮತ್ತಿತರರು ಇದ್ದರು.

ಮಂಗಳವಾರ, ಆಗಸ್ಟ್ 17, 2010

INDEPENDENCE DAY VISUALS 2010

1. ನಾಗರಿಕ ವೇದಿಕೆ ಆಯೋಜಿಸಿದ್ದ ಸ್ವಾತಂತ್ರ್ಯಓಟದಲ್ಲಿ ಯೋಗಾರಮೇಶ್
2. ಅರಕಲಗೂಡು ಕಾಲೇಜು ಮೈದಾನದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಶಾಸದ ಎ ಮಂಜು ಮತ್ತಿತರರು
3. ಅರಕಲಗೂಡು ಕೋಟೆ ಹೈಸ್ಕೂಲ್ ನಲ್ಲಿ ಶಾಸಕ ಎ ಮಂಜು ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿದರು
4. ಅರಕಲಗೂಡು ಕೋಟೆ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಎ ಮಂಜು ನೋಟ್ ಪುಸ್ತಕ ವಿತರಿಸಿದರು
5. ಪಟ್ಟಣದಲ್ಲಿ ನಡೆದ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಮಾತನಾಡಿದರು.
6. ಅರಕಲಗೂಡಿನಲ್ಲಿ ನಡೆದ ಮಾದಿಗ ದಂಡೋರ ಜಾಗೃತಿ ಕಾರ್ಯಕ್ರಮದಲ್ಲಿ ಮುಖಂಡ ಪಾವಗಡ ಪ್ರಕಾಶ್ ಮಾತನಾಡಿದರು.

ಶುಕ್ರವಾರ, ಆಗಸ್ಟ್ 13, 2010

ದೇಶದ್ರೋಹಿ ವಿನಯ್ ನ ಅಂತರಂಗ-ಬಹಿರಂಗ!

ಅರಕಲಗೂಡು: ಕನ್ನಡದ ಹೆಸರಾಂತ ಕಾದಂಬರಿಕಾರ ಅನಕೃ ಹೆಸರಿನಿಂದಾಗಿ ಗುರುತಿಸಲ್ಪಡುತ್ತಿದ್ದ ಅರಕಲಗೂಡು ಇದೀಗ ಉಗ್ರಗಾಮಿ ಚಟುವಟಿಕೆಗೆ ಸಹಕರಿಸಿ ದೇಶದ್ರೋಹಿ ಚಟುವಟಿಕೆ ನಡೆಸುಯತ್ತಿದ್ದ ವಿನಯ್ ಕುಮಾರ್ ಬಂಧನದಿಂದಾಗಿ ರಾಷ್ಟಾಧ್ಯಂತ ಮತ್ತೊಮ್ಮೆ ಗಮನ ಸೆಳೆದಿರುವುದು ದುರಂತದ ಸಂಗತಿ.
ಅರಕಲಗೂಡು ತಾಲೂಕಿನ ರಾಮನಾಥಪುರ ಕೊಡಗು ಗಡಿಯಂಚಿನಲ್ಲಿದ್ದು ಜಿಲ್ಲಾ ಕೇಂದ್ರದಿಂದ 50ಕಿಮಿ ಹಾಗೂ ತಾಲ್ಲೂಕು ಕೇಂದ್ರದಿಂದ 20ಕಿಮಿ ದೂರದಲ್ಲಿದೆ. ರಾಷ್ಟಕೂಟರು-ಹೊಯ್ಸಳರ ಶೈಲಿಯ ಶಿಲ್ಪ ಕಲೆಯ ದೇಗುಲಗಳ ಸಮುಚ್ಚಯ ಹಾಗೂ ಕಾವೇರಿ ಹೊಳೆ ಇಲ್ಲಿ ಹರಿಯುವುದರಿಂದ ಇದು ಪ್ರಮುಖ ಧಾರ್ಮಿಕ ಕ್ಷೇತ್ರವೂ ಹೌದು. ಅಡಿಕೆ-ಭತ್ತ-ತಂಬಾಕು ಬೆಳೆಯುವ ಮೂಲಕ ಅತ್ಯಂತ ಸಮೃದ್ದಿ ಹಾಗೂ ಸಿರಿತನವೂ ಇಲ್ಲಿದೆಯಾದರೂ ಗ್ರಾಮೀಣ ಪ್ರದೇಶವಾದ ಇಲ್ಲಿ ಆಧುನಿಕತೆಯ ಸೋಂಕು ಇಲ್ಲ .ಇಂತಹ ರಾಮನಾಥಪುರಕ್ಕೆ ವಿನಯ್ ಅಲಿಯಾಸ್ ವಿನಯಕುಮಾರ್(30) ಕುಟುಂಬ ಕಳೆದ 15-20ವರ್ಷಗಳ ಹಿಂದೆ ಕೊಡಗಿನಿಂದ ವಲಸೆ ಬಂದು ಗ್ರಾಮದಲ್ಲಿ ನೆಲೆಸಿತ್ತು. ತಂದೆ ಇಲ್ಲದ ವಿನಯ್ ತನ್ನ ತಾಯಿ ಮಡಿಕೆರಿಯಮ್ಮ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದ. ತಾರುಣ್ಯದ ಆರಂಭದಲ್ಲಿ ಶ್ರಮವಿಲ್ಲದೇ ದುಡ್ಡು ಸಂಪಾದಿಸುವ ಹಪಾಹಪಿಗೆ ಬಿದ್ದ ಈತ ರೈಸ್ ಪುಲ್ಲಿಂಗ್, 20ಕಾಲುಗಳ ಆಮೆ, 2ತಲೆ ಬಿಳಿ ಹಾವು ಇತ್ಯಾಧಿಗಳ ಬೆನ್ನು ಹತ್ತಿ ತಮಿಳುನಾಡು ,ಕೇರಳ ಹಾಗೂ ಆಂಧ್ರಪ್ರದೇಶಗಳಿಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರು ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಲೈವ್ ಬ್ಯಾಂಡ್ ನಲ್ಲೂ ಕೆಲ ಕಾಲ ಭೌನ್ಸ್ರರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈ ಮದ್ಯೆ ಈತನ ಸಹೋದರಿಯರ ಮದುವೆಯಾಗಿದ್ದು, ತಾಯಿ ಸುಬ್ರಹ್ಮಣ್ಯೇಶ್ವರ ಧೇಗುಲದೆದರುರು ಹೂವು-ಹಣ್ಣು ಮಾರಾಟ ಮಾಡಿ ಜೀವನ ಸಾಕುತ್ತಾರೆ. ಆದರೆ ವಿನಯ್ ಶ್ರೀಮಂತಿಕೆ ಮತ್ತು ಸುಖದ ಜೀವನದ ಹಂಬಲಕ್ಕೆ ಬಿದ್ದು ಅಪಹರಣ, ವಂಚನೆಯಂತಹ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮತ್ತು ಹಾಸನದ ಪೋಲೀಸ್ ಪೇದೆಯೊಬ್ಬರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಈತನ ಅಸಲಿಯತ್ತು ತಿಳಿದ ಮೇಲೆ ಆಕೆ 2ವರ್ಷಗಳ ಹಿಂದೆ ಈತನನ್ನು ತೊರೆದಿದ್ದಾಳೆ. ಒಂದೂವರೆವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ಕೇರಳ ಮೂಲಕ ಉದ್ಯಮಿಯೊಬ್ಬರನ್ನು ತನ್ನ ತಂಡದೊಂದಿಗೆ ಅಪಹರಿಸಿ ರಾಮನಾಥಪುರದ ತನ್ನ ಮನೆಯಲ್ಲಿ ಕೂಡಿಹಾಕಿ ಒತ್ತೆ ಹಣಕ್ಕೆ ಬೆದರಿಕೆ ಇಟ್ಟಿದ್ದ, ಮೂರು ತಿಂಗಳ ನಂತರ ಕೇರಳ-ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒತ್ತೆ ಬಿಡಿಸಿ ವಿನಯ್ ನನ್ನು ಜೈಲಿಗಟ್ಟಿದ್ದರು. ಜೈಲಿನಿಂದ ಹಿಂತಿರುಗಿದ ಈತ ಹಳ್ಳಿಯಲ್ಲಿ ಜನರ ವಿಶ್ವಾಸ ಬೆಳೆಸಿ ಹಲವು ಚೀಟಿಗಳನ್ನು ಹಾಕಿದ್ದ ಮತ್ತು ಬೇರೆ ಬೇರೆ ಮಾದರಿಯ ಕಾರುಗಳನ್ನು ತಂದು ಶೋಕಿ ಜೀವನ ನಡೆಸುತ್ತಿದ್ದ. ಗ್ರಾಮದಲ್ಲಿ ಸಭ್ಯನಂತೆ ಬದುಕುತಿದ್ದ ಈತನನ್ನು ಬೆಂಗಳೂರಿನ ಪೋಲೀಸರು ಕಳೆದ ಬುಧವಾರವೇ ಬಂಧಿಸಿ ಕರೆದೊಯ್ದಿದ್ದರು. ಇದೀಗ ವಿನಯನ ದೇಶದ್ರೋಹಿ ಪಾತಕಗಳು ಬಯಲಾಗಿದ್ದು ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಆತನ ಮನೆಯಿಂದಲೂ ಪೋಲೀಸರು ಹಲವು ಮುಖ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ , ಆತನ ಮನೆಗೀಗ ಬೀಗ ಜಡಿಯಲಾಗಿದೆ ಆತನ ತಾಯಿ ಹಾಗೂ ಸಂಬಂಧಿಕರು ಸಂಪರ್ಕ ಸದ್ಯಕ್ಕೆ ಲಭ್ಯವಾಗಲಿಲ್ಲ.
ಅರಕಲಗೂಡು: ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ಮಾಜಿ ಶಾಸಕ ಎ ಟಿ ರಾಮಸ್ತಾಮಿ ವೈಯುಕ್ತಿಕ ಹಿತಾಸಕ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಕುರಿತು ದೂರುನೀಡುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ. ಕತ್ತಿಮಲ್ಲೇನಹಳ್ಲಿ ಏತ ನೀರಾವರಿ ಬಳಿಯ ಛಾನೆಲ್ ಗೆ ನೀರು ಹರಿಸುವ ಹಾಗೂ ಭಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು, ನಿನ್ನೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಪರಿಶೀಲಿಸಿರುವುದು ಗಮನಕ್ಕೆ ಬಂದಿದೆ, ತಪ್ಪು ಕಂಡು ಬಂದರೆ ಕ್ರಮ ಜರುಗಿಸಲಿ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಆದರೆ ಯೋಜನೆ ಅನುಷ್ಠಾನದಲ್ಲಿ ಆಗಿರುವ ಸಣ್ಣಪುಟ್ಟ ಲೋಪದೋಷಗಳನ್ನು ದೊಡ್ಡದೆಂದು ಬಿಂಬಿಸಿ ಅಭಿವೃದ್ದಿಗೆ ಅಡ್ಡಿಪಡಿಸುವ ಕ್ರಿಯೆಯನ್ನು ತಾವು ಸಹಿಸುವುದಿಲ್ಲ ಎಂದರು. ಕೂಲಿ ಕಾರರ ಹಣ ಶೀಘ್ರವಾಗಿ ಬಿಡುಗಡೆ ಆಗಬೇಕು ಆದರೆ ಸರಕು-ಸಾಮಾಗ್ರಿ ವೆಚ್ಚದ ಬಗ್ಗೆ ತಕರಾರು ತೆಗೆದಿರುವುದು ಸರಿಯಲ್ಲ ಸಾಮಾಗ್ರಿ ವೆಚ್ಚ ಬಿಡುಗಡೆಯಾಗದೇ ಕೆಲಸ ಮಾಡುವುದಾದರೂ ಹೇಗೆ ಎಂದರು. ಮಾಜಿ ಶಾಸಕರು ಅವರ ಅಧಿಕಾರಾವಧಿಯಲ್ಲಿ ಅವರ ೂರಿನಲ್ಲೆ ಎಷ್ಟರ ಮಟ್ಟಿಗೆ ಕಾಮಗಾರಿ ಮಾಡಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ರಾಮನಾಥಪುರದಲ್ಲಿ ಪಟ್ಟಾಭಿರಾಮ ಪ್ರೌಡಶಾಲೆಯ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿ ಬಿಲ್ ಮಾಡಲಾಗಿದೆ ಇದನ್ನೇಕೆ ಮಾಜಿ ಶಾಸಕರು ದೂರಲಿಲ್ಲ ಎಂದು ಪ್ರಶ್ನಿಸಿದ ಅವರು ಮಾಜಿ ಶಾಸಕರು ಒತ್ತುವರಿ ಸಮಿತಿ ಅಧ್ಯಕ್ಷರಾಗಿದ್ದವರು ತಾಲೂಕಿನಲ್ಲಿ ಅವರು ಮತ್ತು ಅ ವರ ಶಿಷ್ಯರು ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ , ಅದನ್ನು ತೆರವುಗೊಳಿಸಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಿ ಅದನ್ನು ಬಿಟ್ಟು ಅಭಿವೃದ್ದಿ ಸಹಿಸದೇ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಪತ್ರ ಬರೆದಿದ್ದಾರೆ ಎಂದು ಲೇವಡಿ ಮಾಡಿದರು. .

ಗುರುವಾರ, ಆಗಸ್ಟ್ 12, 2010

'ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಕ್ರಮವಾಗಿರುವುದು ನಿಜ'


ಅರಕಲಗೂಡು: ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಅಕ್ರಮನಡೆದಿರುವ ಬಗ್ಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ತಾಲ್ಲೂಕಿನಲ್ಲಿ ಯೋಜನೆ ಅನುಷ್ಠಾನ ಮಾಡುವಾಗ ಇಂಜಿನಿಯರುಗಳಿಂದ ಅಕ್ರಮ ನಡೆದಿದೆ ಎಂದು ಮಾಜಿಶಾಸಕ ಎ ಟಿ ರಾಮಸ್ವಾಮಿ ಮಾಹಿತಿಯೊಂದಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಕುರಿತು ಪರಿಶೀಲನೆಗೆಂದು ಪ್ರದಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಬೆಳಿಗ್ಗೆ 10ಗಂಟೆ ಸುಮಾರಿಗೆ ತಾಲ್ಲೂಕಿಗೆ ಆಗಮಿಸಿದ ಅವರ ಜೊತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ರಾಜ್ಯ ನಿರ್ದೇಶಕ ಪ್ರಸನ್ನಕುಮಾರ್, ಜಿ.ಪಂ. ಸಿಇಓ ಅಂಜನಕುಮಾರ್, ತಾಲ್ಲೂಕಿನ ಖಾತ್ರಿ ಯೋಜನೆ ನೋಡಲ್ ಅಧಿಕಾರಿ ಜಿಲ್ಲಾ ಜಲಾನಯನ ಇಲಾಖೆಯ ವಿಜಯಕುಮಾರ್ , ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್, ಸದಸ್ಯರಾದ ರಾಮಶೇಷ ಮತ್ತಿತರ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಯವರ ಜೊತೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಿಗೆ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿದರು. ಯಲಗತವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲನೆ ವೇಳೆ ರಾಜಕೀಯ ಪಕ್ಷಗಳ ಬೆಂಬಲಿಗರು ಕಾಮಗಾರಿ ನಡೆಸಿ 6ತಿಂಗಳಾದರೂ ಕೂಲಿ ಹಣ ಬಿಡುಗಡೆ ಮಾಡದಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಕಾಮಗಾರಿಯನ್ನೇ ಮಾಡದೇ 11ಲಕ್ಷಕ್ಕೂ ಹೆಚ್ಚು ಹಣವನ್ನು ಕಾರ್ಯದರ್ಶಿ ಮತ್ತು ಅಧ್ಯಕ್ಷ ಡ್ರಾ ಮಾಡಿಕೊಂಡಿರುವುದು ಪತ್ತೆಯಾಯಿತು. ಈ ಪಂಚಾಯ್ತಿಯಲ್ಲಿ 53ಲಕ್ಷ ಸರಕು-ಸಾಮಾಗ್ರಿ ವೆಚ್ಚ ಪಾವತಿಸಲಾಗಿದ್ದು 11ಲಕ್ಷ ಕೂಲಿ ಅಕ್ರಮವಾಗಿ ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಸದರಿ ಬಾಬ್ತಿಗೆ ಯೋಜನಾ ಅನುಮೋದನೆಯಾಗಲೀ ಎಂಬಿಯನ್ನಾಗಲೀ ಬರೆಯದೇ ಹಣ ಪಡೆಯಲಾಗಿದೆ. ಅಲ್ಲಿನ ಪಂಚಾಯ್ತಿ ಕಾರ್ಯದರ್ಶಿ ಯನ್ನು ಈಗಾಗಲೇ ಅಮಾನತ್ತಿನಲ್ಲಿಡಲಾಗಿದ್ದು ಇದೀಗ ಕಾರ್ಯದರ್ಶಿ ಅಪ್ಪಣ್ಣೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲ ಹಾಗೂ ಬಿಲ್ ಕಲೆಕ್ಟರನ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ಸೂಚಿಸಲಾಗಿದೆ. ಯಗಟಿ ಗ್ರಾಮದಲ್ಲಿ ಬೂಮಿ ಸಮತಟ್ಟು ಮಾಡಿದ್ದೇವೆಂದು ರೆಕಾರ್ಡು ಮಾಡಲಾಗಿದೆಯಾದರೂ ಅದಕ್ಕೆ ಯಾವುದೇ ಎನ್ ಎಂ ಆರ್ ಲಭ್ಯವಿಲ್ಲ, ಯಲಗತವಳ್ಳಿ ಊರು ಮಧ್ಯೆ ಗುಂಡಿ ಮುಚ್ಚಲು 2ಲಕ್ಷ ವೆಚ್ಚ ಮಾಡಲಾಗಿದೆ, ಮಂಡಿ ಚಿಕ್ಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ತೋಟದ ಕೆರೆಯಿಂದ ಮಣ್ಣು ತಂದು ಹಾಕಿ ಹೂಳೆತ್ತುವ ಕೆಲಸ ಎಂದು 15ಲಕ್ಷ ಬಿಲ್ ಪಡೆಯಲಾಗಿದೆ ಈ ಬಗ್ಗೆ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆಯಲಾಯಿತು ಎಂದು ತಾ.ಪಂ. ಅಧ್ಯಕ್ಷ ಮಾದೇಶ್ ಪತ್ರಿಕೆಗೆ ತಿಳಿಸಿದರು. ನಂತರ ಕತ್ತಿಮಲ್ಲೇನಹಳ್ಳಿ ಗ್ರಾ.ಪಂ ಗೆ ತೆರಳಿದ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿತು, ಈ ಸಂಧರ್ಭ ಹಾಜರಿದ್ದ ಪತ್ರಕರ್ತರನ್ನು ಗಮನಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ಪತ್ರಕರ್ತರಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯವರ ಗಮನಸೆಳೆದರು. ತಕ್ಷಣ ಪರಿಶೀಲನೆ ಸ್ಥಗಿತಗೊಳಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಉದ್ಯೋಗ ಖಾತ್ರಿ ಅಕ್ರಮದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಬೇಜವಾಬ್ದಾರಿಯ ಉತ್ತರ ನೀಡಿದರಲ್ಲದೇ ಮೊದಲಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದರು, ಹಾಗಾದರೆ ಬಂದ ಔಚಿತ್ಯವೇನು ಎಂಬ ಪ್ರಶ್ನೆಗೆ ದೂರಿನ ಹಿನ್ನೆಲೆಯಲ್ಲಿ ಬಂದಿದ್ದೇನೆ ಪರಿಶೀಲಿಸುತ್ತಿದ್ದೇನೆ ಎಂದು ನುಡಿದರು. ಭೇಟಿ ನೀಡಿದ ಕಾಮಗಾರಿಗಳು ಅಕ್ರಮವಾಗಿದೆಯೇ ಎಂದು ಕೇಳಿದಾಗ ಆ ಕುರಿತು ತಾಂತ್ರಿಕ ಪರಿಣಿತರ ತಂಡ ಪರಿಶೀಲಿಸುವುದು ಮೇಲ್ನೋಟಕ್ಕೆ ಕಂಡು ಬರುವ ಮಾಹಿತಿಯನ್ನಷ್ಟೆ ತಾವು ಗಮನಿಸುತ್ತಿರುವುದಾಗಿ ತಿಳಿಸಿರುವುದಲ್ಲದೇ ಪರೋಕ್ಷವಾಗಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಂಡರು. ಸಾಮಾಗ್ರಿ ವೆಚ್ಚವನ್ನು ಪಾವತಿಸಿ ಕೂಲಿ ಹಣವನ್ನು 6ತಿಂಗಳಿನಿಂದ ತಡೆಹಿಡಿಯಲಾಗಿರುವ ಕುರಿತು ಪ್ರಶ್ನಿಸಿದಾಗ ದೂರಿನ ಹಿನ್ನೆಲೆಯಲ್ಲಿ ತಡೆಯಲಾಗಿದೆ ಎಂದರು, ಹಾಗಾದರೆ ಸಾಮಾಗ್ರಿ ವೆಚ್ಚವನ್ನು ತಡೆ ಹಿಡಿಯಬಹುದಿತ್ತಲ್ಲವೇ ? ನಿಮ್ಮ ಕ್ರಮದಿಂದ ಕೂಲಿಕಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವವರು ಯಾರು ? ಅಷ್ಟಕ್ಕೂ ಸಾಮಾಗ್ರಿ ಬಿಲ್ ವಿತರಿಸಲು ಗ್ರಾ.ಪಂ.ಗೆ ಮಾತ್ರ ಅಧಿಕಾರವಿದೆ ಹೀಗಿರುವಾಗ ಜಿ.ಪಂ. ಅಧಿಕಾರಿಗಳು ಸಪ್ಲೈ ಬಿಲ್ ಕೊಟ್ಟದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದ ಅಧಿಕಾರಿ ಹಾರಿಕೆಯ ಉತ್ತರ ನೀಡಿದರು. ಯೋಜನಾನುಷ್ಟಾನದಲ್ಲಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಿ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಎಷ್ಟೋ ಮಟ್ಟಿಗೆ ಉತ್ತಮ ಕೆಲಸವಾಗಿದೆ ಸಣ್ಣಪುಟ್ಟ ಲೋಪದೋಷಗಳಾಗಿರಬಹುದು, ಈ ಯೋಜನೆಯಲ್ಲಿ ಯಂತ್ರ ಬಳಸಲು ಅವಕಾಶವಿದೆ, ಕೂಲಿಕಾರ್ಮಿಕರಿಗೆ ವಾಸ್ತವ ನೆಲೆಗಟ್ಟಿನಲ್ಲಿ ಖಾಸಗಿಯವರಿಂದ ಹೆಚ್ಚಿನ ಕೂಲಿ ಸಿಗುತ್ತಿದೆ ಖಾತ್ರಿ ಯೋಜನೆಯಲ್ಲಿ ಕಡಿಮೆ ಇದೆ ಹೀಗಿರುವಾಗ ಯಂತ್ರ ಬಳಸುವುದರಲ್ಲಿ ತಪ್ಪೇನಿದೆ ಎಂದು ಉತ್ತರಿಸಿದಾಗ ಸಿಟ್ಟಿಗೆದ್ದ ಪತ್ರಕರ್ತರು ಹಾಗಾದರೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಯೋಜನಾನುಷ್ಠಾನ ಬೇಕಿಲ್ಲ ರದ್ದುಪಡಿಸಿ ನೀವೇ ಹೀಗೆ ಹೇಳುವುದು ಸರಿಯೇ ಎಂದರು. ಆದರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ತಿಣುಕಾಡಿದ ಅವರು ತೇಲಿಕೆಯ ಉತ್ತರ ನೀಡಿ ಪತ್ರಕರ್ತರನ್ನು ಸಾಗಹಾಕಿದರು.
ಟೈಂ ಬಾಂಡ್ ಇಲ್ಲ!
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ಕೋಟಿ ರೂಪಾಯಿ ಕೂಲಿ ಬಾಬ್ತು ಬಾಕಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಪ್ರಧಾನ ಕಾರ್ಯದರ್ಶಿ ತಡಕಾಡಿದಾಗ ಜಿ.ಪಂ. ಸಿಇಓ 10ಕೋಟಿ ಎಂದುತ್ತರಿಸಿದರು ಇದು ಅರಕಲಗೂಡು ತಾಲ್ಲೂಕಿನದ್ದು ಆದರೆ ಜಿಲ್ಲೆಯಲ್ಲಿ ಎಷ್ಟು ಬಾಕಿ ಇದೆ ಎಂಬ ಪ್ರಶ್ನೆಗೆ ಅವರಿಂದ ಉತ್ತರ ಸಿಗಲಿಲ್ಲ. ಕಳೆದ 6ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಹಣ ಬಾಕಿ ಇರುವುದರಿಂದ ಸಂಕಷ್ಟದಲ್ಲಿದ್ದಾರೆ ದುಡ್ಡು ಬಿಡುಗಡೆ ಯಾವಾಗ ಎಂದರೆ ಅಕ್ರಮಗಳ ಕುರಿತ ತನಿಖಾ ವರದಿ ಬಂದ ನಂತರ ಶೀಘ್ರವಾಗಿ ಹಣ ಬಿಡುಗಡೆಗೊಳಿಸಲಾಗುವುದು ಎಂದರು.

ಅರಕಲಗೂಡು: ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಜಿನಿಯರುಗಳು ಹಣ ಲೂಟಿ ಮಾಡಿದ್ದಾರೆ ಮತ್ತು ಆ ಮೂಲಕ ಕಾಮಗಾರಿ ನಿರ್ವಹಿಸಿದ ಕೂಲಿಕಾರರಿಗೆ ಹಣ ನೀಡದೇ ವಂಚಿಸಲಾಗಿದೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಲೆಕ್ಕಕ್ಕೆ ಪತ್ರಕ್ಕೆ ಇಲ್ಲದ ಕೆರೆ-ಕಟ್ಟೆಗಳನ್ನು ಮಾಡಿದ್ದೇವೆ, ಕೆರೆಗಳ ಹೂಳೆತ್ತಿದ್ದೇವೆ ಎಂದು ಉದ್ಯೋಗ ಖಾತ್ರಿ ಬಿಲ್ ಮಾಡಲಾಗಿದೆ, ಭೂಮಿ ಸಮತಟ್ಟುಮಾಡಲು ಗ್ರಾವೆಲ್ ಹಾಕಿದ್ದೇವೆಂದು ಹೇಳಿದ್ದಾರೆ, ಎಲ್ಲಾ 29ಗ್ರಾ.ಪಂಗಳಲ್ಲೂ ನೀರುಗಾಲುವೆಗಳನ್ನು ಮಾಡುವಾಗ, ಬೂಮಿ ಸಮತಟ್ಟು ಮಾಡುವಾಗ ಸಪ್ಲೈ ಬಿಲ್ ತೋರಿಸಲಾಗಿದೆ,ಇಂಜಿನಿಯರುಗಳು ಅದೆಷ್ಟು ಎಂಬಿ ಬುಕ್ ಗಳನ್ನು ಇಶ್ಯೂ ಮಾಡಿದ್ದಾರೆಂಬ ಮಾಹಿತಿಯೇ ಇಲ್ಲ, ಒಬ್ಬೊಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ದಿನ 6-7ಕಾಮಗಾರಿ ನಿರ್ವಹಿಸಲಾಗಿದೆ, 7-8ನೇ ತರಗತಿಯ ವಿದ್ಯಾರ್ತಿಗಳ ಹೆಸರಿನಲ್ಲೂ ಜಾಬ್ ಕಾರ್ಡು ವಿತರಣೆಯಾಗಿದೆ, ಸ್ಥಳಕ್ಕೆ ತೆರಳದೇ ಬೇಕಾಬಿಟ್ಟಿ ಎಂಬಿ ಬರೆಯಲಾಗಿದೆ ಇದನ್ನೆಲ್ಲಾ ಸಹಿಸಿಕೊಂಡಿರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಯೋಜನೆಯಲ್ಲಿ ಯಾವುದೇ ಪಕ್ಷದ ಬೆಂಬಲಿಗರು ಕೆಲಸ ಮಾಡಿದ್ದಾರೆ, ಕಂಟ್ರಾಕ್ಟು ಮಾಡಿದ್ದಾರೆ ಎಂದು ನಾನು ಹೇಳುತ್ತಿಲ್ಲ ಎಲ್ಲಾ ಪಕ್ಷದ ಜನರು ಕಾಮಗಾರಿ ನಡೆಸಿದ್ದಾರೆ ಆದರೆ ಕಾಮಗಾರಿ ನಡೆಸಿದ ಜನರಿಗೆ ಹಣ ಬಿಡುಗಡೆ ಮಾಡದೇ ಸಾಮಾಗ್ರಿ ವೆಚ್ಚ ತೋರಿಸಿ 3ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿರುವ ಇಂಜಿನಿಯರುಗಳ ವಿರುದ್ದ ನನ್ನ ಹೋರಾಟ ನಡೆಸುತ್ತೇನೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಉತ್ತಮ ಕೆಲಸವಾಗಿದೆ ನಿಜ ಆದರೆ ಕೆಲಸ ಮಾಡದೆ ಸುಳ್ಳು ಲೆಕ್ಕ ಪತ್ರ ನೀಡಿ ದುಡ್ಡು ಹೊಡೆದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು. ಅರಣ್ಯ ಇಲಾಖೆಯಲ್ಲಿ 1ಕಾಲು ಕೋಟಿಯಷ್ಟು ವೆಚ್ಚ ಮಾಡಿ ಗಿಡ ನೆಟ್ಟಿದ್ದೇವೆಂದು ಸುಳ್ಳು ದಾಖಲೆ ನೀಡಿದ್ದಾರೆ, ನೀರಾವರಿ ಇಲಾಖೆಯಲ್ಲು ಹೂಳು ತೆಗೆಯಲು ಕೋಟ್ಯಾಂತರ ರೂ ವೆಚ್ಚ ಮಾಡಲಾಗಿದೆ ಹೀಗೆ ವಿವಿಧ ಇಲಾಖೆಗಳಲ್ಲೂ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅಕ್ರಮ ಕುರಿತು ಅಧಿಕೃತ ಮಾಹಿತಿ ಸಂಗ್ರಹಿಸಿದ್ದು ದೂರು ನೀಡಿದ್ದೇನೆ ಎಂದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 17ಲಕ್ಷ ಹಣ ಡ್ರಾ ಮಾಡಿರುವ ಬಗ್ಗೆ ನನ್ನ ಹತ್ತಿರ ಅಧಿಕಾರಿಗಳು ಧೃಢೀಕರಿಸಿದ ಮಾಹಿತಿಯಿದೆ ಆದರೆ ಈಗ 11ಲಕ್ಷದ ಮಾಹಿತಿ ಮಾತ್ರ ಇದೆ ಎನ್ನುತ್ತಿದ್ದಾರೆ, ಕಂಪ್ಯೂಟರ್ ನಲ್ಲಿ 2009ನೇ ವರ್ಷದ ಮಾಹಿತಿಗಳನ್ನು ಅಕ್ರಮ ಮುಚ್ಚುವ ಸಲುವಾಗಿ ವ್ಯವಸ್ಥಿತವಾಗಿ ತೆಗೆಯಲಾಗಿದೆ, ಇದರಿಂದಾಗಿ ಈಗಾಗಲೇ ಕಾರ್ಯ ನಿರ್ವಹಿಸಿರುವ ಕಾಮಗಾರಿಗಳಿಗೂ ಹಣ ಪಾವತಿಯಾಗದೇ ತೊಂದರೆ ಎದುರಾಗಲಿದೆ, ಅಧಿಕಾರಿಗಳು ಮಾಡಿದ ತಪ್ಪಿಗೆ ಕೂಲಿಕಾರರಿಗೆ ಬವಣೆ ಪಡಬೇಕಿದೆ ಎಂದರು. ಜನರ ಪರವಾಗಿ ತನ್ನ ನಿಲುವಿದ್ದು ಅನ್ಯಾಯವಾಗಿ ಜನರ ತೆರಿಗೆ ಹಣವನ್ನು ಯೋಜನೆ ಮೂಲಕ ಲೂಟಿಗೈದಿರುವ ಅಧಿಕಾರಿಗಳ ವಿರುದ್ದ ಮಾತ್ರ ತಮ್ಮ ಹೋರಾಟವಿದೆ ತನ್ನಿಂದಾಗಿ ಖಾತ್ರಿ ಯೋಜನೆಯ ದುಡ್ಡು ನಿಂತಿಲ್ಲ, ಅಧಿಕಾರಿಗಳ ತಪ್ಪಿನಿಂದ ಹಣ ಬರುವುದು ನಿಂತಿದೆ ಈ ಬಗ್ಗೆ ಜನರ ಬಳಿಗೆ ತೆರಳಿ ಆಗಿರುವ ಅನ್ಯಾಯವನ್ನು ಹೇಳುತ್ತೇನೆ, ಇದನ್ನು ಇಲ್ಲಿಗೆ ಬಿಡುವುದಿಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನನ್ನ ಹೋರಾಟ ಇದ್ದೇ ಇರುತ್ತದೆ ಎಂದರು. ಈ ಸಂಧರ್ಭದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಜಿ.ಪಂ ಸದಸ್ಯ ಅಪ್ಪಣ್ಣ, ತಾ.ಪಂ. ಸದಸ್ಯ ರಾಮಶೇಷ ಇದ್ದರು.

ಭಾನುವಾರ, ಆಗಸ್ಟ್ 8, 2010

ಕನ್ನಡದ ಚಿತ್ರರಂಗದಲ್ಲಿ 'ಮತ್ತೆ ಮುಂಗಾರು'!

ಕನ್ನಡ ಚಿತ್ರರಂಗದ ಸ್ಥಿತಿ ಇವತ್ತು ಹೇಗಿದೆ? ಸಿದ್ದ ಮಾದರಿಯ ಕಥೆ, ಮಚ್ಚು-ಕತ್ತಿ-ಲಾಂಗು, ಅದೇ ಡೈಲಾಗು, ಅದೇ ಹಾಡು, ಅದೇ ಹಾಸ್ಯ, ರಿಮೇಕ್ ಚಿತ್ರಾನ್ನ, 4ಹಾಡು1ಫೈಟು1ಮಸಾಲೆ ಹಾಕಿ ಯಾವ್ದಾದ್ರೂ ಒಂದು ಥೇಟರಲ್ಲಿ ಬಿಡುಗಡೆ ಮಾಡಿದ್ರೆ ಸಾಕು ಒಂದಿಷ್ಟು ಹಕ್ಕುಗಳನ್ನ ಟಿವಿ ಯವರಿಗೆ ಮಾರಿಕೊಂಡ್ರೆ ಮುಗೀತು.ಪ್ರೇಕ್ಷಕರನ್ನ ಕುರಿತು ಈ ನನ್ನ ಮಕ್ಳು ಥೇಟರಿಗೆ ಬಂದು ಚಿತ್ರ ನೋಡಲ್ಲ ನಾವು ಉದ್ದಾರ ಆಗಲ್ಲ ಅಂತ ಡೈಲಾಗು ಬಿಸಾಕೋರು ಒಂದು ಕಡೆ ಆದ್ರೆ ನಾನೇ ಸುಪ್ರೀಂ ಎಂದು ಬೀಗುವ ನಿರ್ದೇಶಕರ ಸಂಘ, ಕಲಾವಿದರ ಸಂಘ,ಚಲನ ಚಿತ್ರ ವಾಣಿಜ್ಯ ಮಂಡಳಿ ದಿನಕ್ಕೊಂದು ರಾಧ್ದಾಂತ ಎಬ್ಬಿಸಿಕೊಂಡು ಪರಸ್ಪರರ ಮೇಲೆ ಕೆಸರೆರಚಾಡಿಕೊಂಡು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿವೆ. ನಾಯಕ ನಟರುಗಳೂ ಒಂದೇ ಮಾದರಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬದಲಾವಣೆಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳದೇ ಜಿಡ್ಡುಗಟ್ಟಿದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಅಲೆಯ ಕಥೆಗಳು, ಮನಕಲಕುವ ವಿಚಾರಗಳ ಸಂಕೀರ್ಣತೆ ಅದನ್ನು ತೆರೆಯ ಮೇಲೆ ಮೂಡಿಸುವ ಪ್ರಬುದ್ದತೆ ಕೊರತೆ ಇವತ್ತು ಕನ್ನಡ ಚಿತ್ರರಂಗದಲ್ಲಿದೆ. ಒಬ್ಬ ಪುಟ್ಟಣ್ಣ, ಒಬ್ಬ ಶಂಕರ್ ನಾಗ್,ಒಬ್ಬ ಗಿರೀಶ್ ಕಾಸರವಳ್ಳಿ, ಏಕಮೇವಾದ್ವಿತಿಯರೆನಿಸಿದ ರಾಜ್, ವಿಷ್ಣು, ಅಶ್ವಥ್ ಹೀಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಉಳಿಸಿದ ಹಳಬರನ್ನು ಬಿಟ್ಟರೆ ಹೊಸಬರಲ್ಲಿ ಅಂತಹ ಗಟ್ಟಿತನ ಕೊರತೆ ಇವತ್ತಿಗೂ ಇದ್ದೇ ಇದೆ.
ಇದನ್ನೆಲ್ಲಾ ಇವತ್ತು ನಿಮ್ಮ ಮುಂದೆ ಹೇಳಲು ಕಾರಣವೂ ಇದೆ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ವಂತಿಕೆ ಇದೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ ಕನ್ನಡ ಚಿತ್ರರಂಗದಲ್ಲಿ ಕಳೆದ 2ದಶಕಗಳಿಂದ ಗುಣಮಟ್ಟದ ಚಿತ್ರಗಳ ಕೊರತೆ ಇದೆ. ಇಲ್ಲಿ ಪ್ರಯೋಗಶೀಲತೆಗೆ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವವರಿಲ್ಲ, ಸಂತೆಗೆ ಮೂರು ಮೊಳ ನೇಯುವವರದ್ದೇ ಕಾರುಬಾರು, ಸಂಘ-ಸಂಸ್ಥೆ ಹಾಗೂ ಮಂಡಳಿಗಳಲ್ಲೂ ಅವರದ್ದೇ ಆಟಾಟೋಪ. ಮೊನ್ನೆ ಮೊನ್ನೆ 92.7 ಬಿಗ್ ಎಫ್ ಎಂ ಮನರಂಜನಾ ರೇಡಿಯೋ ಪ್ರಸಾರದಲ್ಲಿ ಕನ್ನಡ ಚಿತ್ರರಂಗದ ಛತ್ರಿ ಯಾರು? ಎಂಬ ತರ್ಲೆ ಪ್ರಶ್ನೆಯನ್ನು ಇಟ್ಟು ಕನ್ನಡದ ಹಾಸ್ಯ ನಟರ ಪಟ್ಟಿ ನೀಡಿ ಆರಿಸುವಂತೆ ಕೋರಿತ್ತು. ಇದರಿಂದ ಸಿಟ್ಟಿಗೆದ್ದ ಚಲನ ಚಿತ್ರ ಮಂಡಳಿ ಸದರಿ ರೇಡಿಯೋ ವಿರುದ್ದ ಪ್ರತಿಭಟನಾರ್ಥವಾಗಿ ಚಲನಚಿತ್ರ ಚಟುವಟಿಕೆಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿತ್ತು. ಆಗ ಸಂಧಾನಕ್ಕೆ ಬಂದ ಖಾಸಗಿ ರೇಡಿಯೋದ ಮುಖ್ಯಸ್ಥರು ಕ್ಷಮೆಯಾಚಿಸಿದರು. ಅದಕ್ಕೆ ಮಂಡಳಿ ವಿಧಿಸಿದ ಶಿಕ್ಷೆ ಒಂದು ದಿನ ರೇಡಿಯೋ ಬಂದ್ ಮಾಡಬೇಕು, ಪ್ರತೀ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸಬೇಕು ಇತ್ಯಾದಿ. ಇದ್ಯಾವ ಸೀಮೆಯ ಶಿಕ್ಷೆ ಸ್ವಾಮಿ.? ಇದು ಶಿಕ್ಷೆಯ ಹುಟ್ಟಾ? ಅದ್ಯಾವುದೋ ಒಂದು ರೇಡಿಯೋ ನಟರನ್ನ ಅಪಮಾನಿಸಿದೆ ಎಂದಾದರೆ ಅದಕ್ಕೆ ಕಾನೂನಿನಡಿ ಶಿಕ್ಷೆ ಕೊಡಿಸುವ ಅವಕಾಶವಿದೆ ಹೀಗಿರುವಾಗ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸುವುದು ಅಂದರೆ ಅದೆಂಥದ್ದು. ಇದೇ ಮಂಡಳಿ ತಿಂಗಳ ಹಿಂದೆ 'ರಾವಣ್' ಹಿಂದಿ ಚಿತ್ರ ರಾಜ್ಯದಲ್ಲಿ ಬಿಡುಗಡೆ ಯಾದಾಗ ಬಾಲ ಮುದುರಿಕೊಂಡು ತನ್ನ ನಿಯಮಗಳನ್ನು ಸಡಿಲಿಸಿತು. ಕನ್ನಡ ಚಿತ್ರ ರಂಗದ 75ರ ಸಂಭ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಸಮರ್ಪಕವಾಗಿ ಆಚರಿಸಲು ಸಾಮರ್ತ್ಯವಿಲ್ಲದ ಚಿತ್ರರಂಗದ ಮಂದಿಗೆ ತನ್ನದೇ ನಟರು,ನಟಿಯರು,ನಿರ್ದೇಶಕರು ಕೆಸರೆರಚಾಡಿಕೊಂಡಾಗ ಸರಿಯಾದ್ದೊಂದು ಖಾಜಿ ನ್ಯಾಯ ಮಾಡಲು ಆಗಲಿಲ್ಲ, ಅನೇಕ ದಶಕಗಳಿಂದ ಕನ್ನಡದಲ್ಲಿ ಪೈರಸಿ ತಡೆಗೆ ಕಟ್ಟುನಿಟ್ಟಾದ ಒಂದು ನಿಯಮ ಹೊರಡಿಸಲು ಆಗಲಿಲ್ಲ, ಹೊಡಿ-ಬಡಿ-ಕೊಚ್ಚು-ಕೊಲ್ಲು-ಸುಂದರ ಹೊರಾಂಗಣ,ಮಧುರ ಹಾಡುಗಳು, ಕೆಟ್ಟುಕೆರ ಹಿಡಿದ ಕಥೆ, ಸವಕಲು ನಿರೂಪಣೆ ಇಂಥಹದ್ದನ್ನು ವಿಮರ್ಶಿಸಿದರೆ ಪತ್ರಕರ್ತರ ವಿರುದ್ದ ಹರಿಹಾಯುವ ಸ್ಥಿತಿ ಇದೆ. ಇಂಥಹ ವೈರುದ್ಯ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬದಲಾವಣೆ ಗಾಳಿ ಬೀಸುವುದೇ? ಹೌದು ಖಂಡಿತವಾಗಿಯೂ ಒಂದು ಹಂತದಲ್ಲಿ ಇಂತಹದ್ದನ್ನ ನಿರೀಕ್ಷಿಸಲು ಸಾಧ್ಯವಿದೆ. ಹಳೆ ದಿನಗಳ ಮಾಧುರ್ಯವನ್ನ ತುಂಬಲು ಜಯಂತ್ ಕಾಯ್ಕಿಣಿ, ಯೋಗರಾಜ ಭಟ್ ರಂತಹವರ ಸಾಹಿತ್ಯ ಶ್ರೀಮಂತಿಕೆ, ಹರಿಕೃಷ್ಣ,ಮನೋಮೂರ್ತಿ, ಅನೂಪ್ ಸಿಳೀನ್, ರಿಕಿಕೇಜ್, ರಘು ದೀಕ್ಷಿತ್ ರಂತಹ ಹೊಸ ಅಲೆಯ ಸಂಗೀತ ನಿರ್ದೇಶಕರು, ಜೇಕಬ್ ವರ್ಗೀಸ್,ಸೈನೈಡ್ ನ ರಮೇಶ್, ಯೋಗರಾಜಭಟ್, ಸೂರಿ, ರಾಘವ(ದ್ವಾರ್ಕಿ), ಶಶಾಂಕ್, ಚಂದ್ರು, ಗುರುಪ್ರಸಾದ್ ರಂತಹ ಹೊಸ ತುಡಿತದ ನಿರ್ದೇಶಕರು ಮನಸ್ಸು ಮಾಡಿದರೇ ಮತ್ತೆ ಹಳೇ ದಿನಗಳ ವೈಭವ ಕನ್ನಡಕ್ಕೆ ಮರಳಬಹುದು. ಇಂತಹದ್ದೊಂದು ಬೆಳಕು ಕಾಣಿಸಿದ್ದು ಕಳೆದೆರೆಡು ವಾರಗಳಿಂದ ಬಿಡುಗಡೆಯಾದ ಕೆಲವು ಚಿತ್ರಗಳ ವಿಭಿನ್ನತೆಯಿಂದಾಗಿ. ಶಶಾಂಕ್ ರ ಕೃಷ್ಣನ್ ಲವ್ ಸ್ಟೋರಿ, ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಮತ್ತೆ ಮುಂಗಾರು ಅಂತಹ ಭರವಸೆಯನ್ನು ದಕ್ಕಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮತ್ತೆ ಮುಂಗಾರು ಕಥಾವಸ್ತುವಿನಿಂದಾಗಿ ಕನ್ನಡದ ಮಟ್ಟಿಗೆ ಒಂದು ವಿಶಿಷ್ಠ ಚಿತ್ರ.
'ಮತ್ತೆ ಮುಂಗಾರು' ಈ . ಕೃಷ್ಣಪ್ಪ ನಿರ್ಮಾಣದ ಹೊಸ ಚಿತ್ರ. ಮುಂಗಾರು ಮಳೆಯಂತಹ ಉತ್ತಮ ಮನರಂಜನಾ ಚಿತ್ರ ಮೊಗ್ಗಿನ ಮನಸ್ಸು ವಿನಂತಹ ಪ್ರಬುದ್ದ ಚಿತ್ರಗಳು ಇವರ ನಿರ್ಮಾಣದಲ್ಲೇ ಬಂದಿತ್ತು. ಈಗ ಮತ್ತೆ ಮುಂಗಾರು ಬಂದಿದೆ, ಇದು ಮೇಲ್ನೋಟಕ್ಕೆ ಪ್ರೇಮ ಕಥಾವಸ್ತುವಿನಂತಹ ಚಿತ್ರದಂತೆ ಬಿಂಬಿತವಾದರೂ ಆಂತರ್ಯದಲ್ಲಿ ಬೇರೆಯದೇ ಆದ ಕಥೆಯನ್ನು ಹೊಂದಿದೆ. ನಿರ್ದೇಶಕರು, ದೃಶ್ಯನಿರೂಪಣೆ ಹಾಗೂ ಸಂಭಾಷಣೆಯಲ್ಲಿ ಸ್ವಲ್ಪ ಪ್ರಬುದ್ದತೆ ತೋರಿದ್ದರೆ ಇದು ಅಂತರಾಷ್ಟ್ರೀಯ ಗುಣಮಟ್ಟದ ಚಿತ್ರ ವಾಗಿ ರೂಪುಗೊಳ್ಳುವುದು ನಿಸ್ಸಂದೇಹ.ಅಂತಹ ಲೋಪಗಳ ನಡುವೆಯೂ ಮಾತೃ ಪ್ರೇಮೆ, ದೇಶಭಕ್ತಿ, ಪ್ರೇಮ, ಬದುಕಿನ ಅನಿವಾರ್ಯ ಸಂಕಟ ಹಾಗೂ ತಲ್ಲಣವನ್ನು ಮತ್ತೆ ಮುಂಗಾರು ಪ್ರೇಕ್ಷಕರಿಗೆ ಹಿಡಿ ಹಿಡಿಯಾಗಿ ಕಟ್ಟಿಕೊಡುತ್ತದೆ. ಮುಂಬೈ ಕಡಲತೀರದಲ್ಲಿ ಬದುಕುವ ವಲಸಿಗ ಮೀನುಗಾರರ ಬವಣೆ, ಅಲ್ಲಿ ನಾಯಕ-ನಾಯಕಿಯ ನಡುವೆ ನಡೆಯುವ ಪ್ರೇಮ, ತೆಗೆದುಕೊಳ್ಳುವ ಅನಿರೀಕ್ಷಿತ ತಿರುವು, ಕಡಲಿನಲ್ಲಿ ಉಂಟಾಗುವ ಚಂಡಮಾರುತದ ಸುಳಿಗೆ ಸಿಕ್ಕ ಭಾರತೀಯ ಮೀನುಗಾರರು ತಮಗೆ ತಿಳಿಯದಂತೆ ಪಾಕಿಸ್ತಾನದ ಸರಹದ್ದು ಮೀರಿದಾಗ ಅನುಭವಿಸುವ ಕಷ್ಟ, ಕತ್ತಲ ಕಾರಾಗೃಹದಲ್ಲಿ ಅನುಭವಿಸುವ ಪಡಿಪಾಟಲು, ಇಂದಿರಾಗಾಂದಿ-ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಕಾರ್ಗಿಲ್ ಯುದ್ದ ತದನಂತರ ವಾಜಪೇಯಿ ಸರ್ಕಾರದಲ್ಲಿ ಎರಡೂ ದೇಶಗಳ ನಡುವೆ ನಡೆಯುವ ಒಪ್ಪಂದದಿಂದ 21ವರ್ಷಗಳ ನಂತರ ಬಿಡುಗಡೆಯಾಗುವ ಮೀನುಗಾರರು ನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳು ನೀರು ತುಂಬುವಂತೆ ಮಾಡಿಬಿಡುತ್ತವೆ. ಅಷ್ಟರ ಮಟ್ಟಿಗೆ ನಿರ್ದೇಶಕ ರಾಘವ (ದ್ವಾರ್ಕಿ) ತನ್ನ ಶ್ರಮವನ್ನ ವಿಭಿನ್ನ ಕಥಾವಸ್ತುವಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾಯಕ ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರದ ಪ್ರತಿಯೊಂದು ಪಾತ್ರವೂ ಸಹಜತೆಗೆ ಒತ್ತುಕೊಡುವ ರೀತಿಯಲ್ಲಿ ಮೂಡಿಬಂದಿವೆ. ಎಷ್ಟೋ ದಿನಗಳ ನಂತರ ಕಾಡುವ ಚಿತ್ರವನ್ನು ರಾಘವ ಕೊಟ್ಟಿದ್ದಾರೆ. ಚಿತ್ರ ಹಲವು ಪ್ರಶ್ನೆಗಳನ್ನು ಮೂಡಿಸಿ ತಾರ್ಕಿಕ ವಾದ ುತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಕನ್ನಡದಲ್ಲಿ ಇಂತಹ ಕಥೆ ಬಂದು ಎಷ್ಟೋ ವರ್ಷಗಳಾಗಿತ್ತು. ಇರಲಿ ಕನ್ನಡ ಚಿತ್ರ ರಂಗದ ಸಧ್ಯದ ಪರಿಸ್ಥಿತಿ ಸುಧಾರಿಸಬೇಕಿದೆ, ಚಿತ್ರರಂಗದ ಮಂದಿ ವೈಯುಕ್ತಿಕ ತಗಾದೆ-ಸಂಘರ್ಷಕ್ಕೆ ಮಹತ್ವ ನೀಡದೇ ಗಂಭೀರವಾಗಿ ಸದಭಿರುಚಿಯ, ವಿಚಾರದ ತುಡಿತ, ಹದವರಿತ ಮನರಂಜನೆಗೆ ಆದ್ಯತೆ ನೀಡುವ ಚಿತ್ರಗಳ ನಿರ್ಮಾಣದಲ್ಲಿ ತೊಡಗುವ ಮೂಲಕ ಕನ್ನಡ ಚಿತ್ರರಂಗಕ್ಕೆ 'ಮತ್ತೆ ಮುಂಗಾರು' ಬರುವುದೇ ಕಾದು ನೋಡಬೇಕು.

ಸೋಮವಾರ, ಆಗಸ್ಟ್ 2, 2010

ಸುವರ್ಣ ಆರೋಗ್ಯ ಚೈತನ್ಯ ಮಕ್ಕಳ ಆರೋಗ್ಯಕ್ಕೆ ಸಹಕಾರಿ

ಅರಕಲಗೂಡು: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳು ಆರೋಗ್ಯ ಸುಧಾರಿಸಲು ಪೋಷಕರುಮತ್ತು ಶಿಕ್ಷಕರ ಒಗ್ಗೂಡಿದಲ್ಲಿ ಯಶ ಕಾಣಲು ಸಾಧ್ಯ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪಾರ್ವತಿ ಸಂಜೀವನಾಯ್ಕ ಹೇಳಿದ್ದಾರೆ.
ಪಟ್ಟಣದಲ್ಲಿ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಸುವರ್ಣ ಆರೋಗ್ಯ ಚೈತನ್ಯದಡಿ ಶಾಲಾ ಮಕ್ಕಳು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶಾಲಾ ಮಕ್ಕಳ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ತಂದಿದೆ ಅವುಗಳನ್ನು ಬಳಸಿಕೊಳ್ಳುವ ಪ್ರಯತ್ನ ಅಗಬೇಕಿದೆಯಷ್ಟೇ.ತಾಲೂಕಿನಲ್ಲಿ ಈಗ ಸಾಂಕ್ರಾಮಿಕ ರೋಗಗಳು ಹರಡಿದ್ದು ವೈದ್ಯರುಗಳು ಎಚ್ಚರಿಕೆ ವಹಿಸಬೇಕು, ಶಿಬಿರದಲ್ಲಿ ಮಕ್ಕಳಿಗೆ ಚಿಕಿತ್ಸೆ ದೊರಕಿಸಲು ಪೋಷಕರು ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮಾತನಾಡಿ ಉಚಿತ ಆರೋಗ್ಯ ತಪಾಸಣೆ ಸರ್ಕಾರದ ಯೋಜಿತ ಕಾರ್ಯಕ್ರಮವಾಗಿದ್ದು ಕಳೆದ 4ವರ್ಷಗಳಿಂದ ಜಾರಿಯಲ್ಲಿದೆ, ಕಳೆದ ವರ್ಷ 11ಪ್ರಕರಣವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಯಶಸ್ವಿನಿ ಯೋಜನೆಯ ಸಹಯೋಗದೊಂದಿಗೆ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. 1 ರಿಂದ 10ನೇ ತರಗತಿಯ ಅನುದಾನಿತ/ಅನುದಾನ ರಹಿತ ಶಾಲೆಯ ಮಕ್ಕಳಿಗೂ ಯೋಜನೆಯ ಲಾಭ ಲಭಿಸಲಿದೆ ಎಂದರು.ಶಿಬಿರ ನಡೆಯುವ ಸಂಧರ್ಭ ಗೈರುಹಾಜರಿ ಬೇಡ ಎಂದು ಸೂಚಿಸಿದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶೈಲಜಾ ಮಾತನಾಡಿ ಪೋಷಕರು ಸರ್ಕಾರಿ ಸವಲತ್ತುಗಳ ಬಳಕೆಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ನಾಗಲಕ್ಷ್ಮಿ, ವೈದ್ಯರುಗಳಾದ ಸ್ವಾಮಿಗೌಡ, ಲತಾ, ಸೌಮ್ಯ, ಪೂರ್ಣಿಮ, ಅಕ್ಷರ ದಾಸೋಹ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು.

ಭಾನುವಾರ, ಆಗಸ್ಟ್ 1, 2010

ವೃಕ್ಷಾಧಾರಿತ ಬದುಕು ಉಸಿರಾಗಲಿ;ಪರಿಸರವಾದಿ ಚ ನಂ ಅಶೋಕ್ಅರಕಲಗೂಡು: ವೃಕ್ಷಾಧಾರಿತ ಕೃಷಿ ಬದುಕು ರೈತರ ಉಸಿರಾಗಬೇಕು, ಪ್ರಸಕ್ತ ಸಂಧರ್ಭದಲ್ಲಿ ರೈತರ ಸಂಕಷ್ಟಗಳಿಗೆ ಸಿದ್ದೌಷಧ ಎಂದರೆ ಗಿಡ-ಮರ ಬೆಳೆಸುವುದೇ ಆಗಿದೆ ಎಂದು ಜಿಲ್ಲೆಯ ಪರಿಸರವಾದಿ ಚ.ನಂ. ಅಶೋಕ್ ಹೇಳಿದ್ದಾರೆ.
ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ತಾಲೂಕಿನ ವಿವಿದೆಡೆ ರೈತರಿಗೆ ಉಚಿತ ಗಿಡಗಳನ್ನು ವಿತರಿಸಿದ ಅವರು ರುದ್ರಪಟ್ಟಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಸಂಕಷ್ಟ ನಿವಾರಣೆಗೆ ವೃಕ್ಷ ಪ್ರೀತಿ ಬೆಳೆಯಬೇಕು, ಪರಿಸರದಲ್ಲಿ ದೇವರನ್ನು ಕಾಣುವ ಮನೋಧರ್ಮ ಬಂದಾಗ ತಂತಾನೆ ಪ್ರಾಕೃತಿಕ ಸಂಪತ್ತು ಬೆಳೆಯಲು ಸಾಧ್ಯ ಎಂದು ನುಡಿದ ಅವರು ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸಾಂಪ್ರದಾಯಿಕ ಬೆಳೆಯ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭರಾಟೆಯಲ್ಲಿ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತರುತ್ತಿದ್ದಾರೆ, ಆಧುನಿಕ ಬೇಸಾಯ ಪದ್ದತಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ, ಇಂದಿನ ಸಂಧರ್ಬದಲ್ಲಿ ಜಮೀನು-ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯೂ ಇದೆ ಹೀಗಿರುವಾಗ ಮರ-ಗಿಡ ನೆಟ್ಟು ಪೋಷಿಸುವುದರಿಂದ ಅವು ನಮ್ಮ ಕಷ್ಟಕಾಲದಲ್ಲಿ ನೆರವಿಗೆ ಬರುತ್ತವೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ, ಖಾಲಿ ಸ್ಥಳಗಳಲ್ಲಿ ಗಿಡಬೆಳೆಸಿ ಹಸಿರು ವಾತಾವರಣವನ್ನು ಉಳಿಸಿ ಎಂದು ಮನವಿ ಮಾಡಿದರು. ಪೊಟ್ಯೋಟೋ ಕ್ಲಬ್ ಸಂಚಾಲಕ ಯೋಗಾರಮೇಶ್ ಮಾತನಾಡಿ ತಾಲೂಕಿನ ರೈತರ ಮನೆ ಬಾಗಿಲಿಗೆ ತೆರಳಿ ಉಚಿತ ಗಿಡಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಕ್ಲಬ್ ವತಿಯಿಂದ ಹಸಿರು ಆಂಧೋಲನವನ್ನು ಮಾಡಲಾಗುತ್ತಿದೆ ಪ್ರತೀ ವರ್ಷದಂತೆ ಈ ಭಾರಿಯೂ ಗಿಡಗಳನ್ನು ವಿತರಿಸಲಾಗುತ್ತಿದೆ ಎಂದರು. ಕೃಷಿ ಜಮೀನಿಗೆ ಸತ್ವಯುತ ಪೋಷಕಾಂಶಗಳು ಲಭಿಸಬೇಕೆಂದರೆ ಗಿಡ ನೆಡುವುದೊಂದೇ ಏಕೈಕ ಪರಿಹಾರವಾಗಿದೆ ಈ ನಿಟ್ಟಿನಲ್ಲಿ ಪೊಟ್ಯಾಟೋ ಕ್ಲಬ್ ಗಿಡಬೆಳೆಸಲು ಆಯಾ ಊರಿನ ಗ್ರಾಮಸ್ಥರುಗಳು ಚೀಟಿ ಹಾಕಿಕೊಳ್ಳುವ ಮೂಲಕ ಪ್ರತೀ ವರ್ಷ ಹೊಸದಾಗಿ ಗಿಡಖರೀದಿಸಿ ಅವರವರ ಗ್ರಾಮಗಳಲ್ಲಿ ಗಿಡನೆಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದೆ, ಇದನ್ನು ಇತರೆ ಊರುಗಳ ಗ್ರಾಮಸ್ಥರುಗಳು ಅನುಕರಿಸಬೇಕು. ಮರಗಳು ಆಪತ್ತಿನ ಸ್ನೇಹಿತರಿದ್ದಂತೆ ವಾಣಿಜ್ಯ ಬೆಳೆಬೆಳೆದು ಮಣ್ಣಿನ ಫಲವತ್ತತೆ ಹಾಳು ಮಾಡುವ ಮತ್ತು ನೇಣಿಗೆ ಶರಣಾಗುವ ಬದಲಿಗೆ ರೈತರು ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸಿ ಅವು ನಿಮ್ಮನ್ನು ಜೀವನ ಪರ್ಯಂತ ಕಾಯುತ್ತವೆ ಎಂದರು.

ಮುಖಂಡರಾದ ಕಾಂತರಾಜು ಮಾತನಾಡಿ ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ಉಚಿತ ಗಿಡ ವಿತರಿಸಿ ಗಿಡನೆಡುವ ಸಂಪ್ರದಾಯ ಆರಂಭಿಸಿರುವ ಯೋಗಾರಮೇಶ್ ಕಾಳಜಿಯನ್ನು ನಮ್ಮ ರೈತರು ಅರ್ಥ ಮಾಡಿಕೊಳ್ಳಬೇಕು, ಪ್ರಾಕೃತಿಕ ಅಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಿಡ ಬೆಳೆಸಿ ಎಂದರು. ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಕ್ಲಬ್ ನ ಮುಖಂಡ ರಾಜೇಂದ್ರ, ಜಾನಪದ ಪರಿಷತ್ ನ ಶ್ರೀಕಂಠ, ನಾಗರಿಕವೇದಿಕೆಯ ಕುಮಾರಸ್ವಾಮಿ ಮಾತನಾಡಿದರು. ಚ.ನಂ. ಅಶೋಕ್ ಹಾಗೂ ಯೋಗಾರಮೇಶ್ ಅವರಿಗೆ ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಮಂಜುನಾಥ್ ಶಾಲು ಹೊದೆಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಚಂದ್ರ, ಎವಿಕೆ ಕಾಲೇಜು ಉಪನ್ಯಾಸಕ ಪ್ರಕಾಶ್, ಜಯಪ್ಪ, ಸತ್ಯನಾರಾಯಣ,ಸುಬ್ಬೇಗೌಡ ಮತ್ತು ರುದ್ರಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ರುದ್ರಪಟ್ಟಣದ ಕಾರ್ಯಕ್ರಮಕ್ಕೂ ಮುನ್ನ ನೆಲಮನೆ ಗ್ರಾಮದ ಶಾಲಾವರಣದಲ್ಲಿ ಗಿಡ ನೆಟ್ಟು ರೈತರಿಗೆ ಸಸಿ ವಿತರಿಸಲಾಯಿತು, ಅಜ್ಜೂರು ಹಾಗೂ ಹೊಸನಗರ ಗ್ರಾಮಗಳಲ್ಲೂ ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು.