ಮಂಗಳವಾರ, ಆಗಸ್ಟ್ 24, 2010

ರಕ್ಷಾ ಸಮಿತಿ ಸಭೆಯಲ್ಲಿ ಬಯಲಾದ ಸಾರ್ವಜನಿಕ ಆಸ್ಪತ್ರೆ ಹುಳುಕು

ಅರಕಲಗೂಡು: ಕಳೆದ 4ತಿಂಗಳಿನಿಂದಲೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳಿಗೆ ಆಹಾರ ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದು, ಅಸಮರ್ಪಕ ಸ್ವಚ್ಚತೆ ಕೆಲಸ, ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಫಿಜಿಶಿಯನ್ ಗಳ ಅಸಹಕಾರ ಹೀಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಲವು ವೈಫಲ್ಯಗಳು ಇಂದು ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತಲ್ಲದೇ ಕೆಲ ಸಿಬ್ಬಂದಿಗಳ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲಾಯಿತು.
ಹಲವು ದಿನಗಳಿಂದ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯಕ್ಕೆ ಒಳಗಾಗಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ಶಾಸಕ ಎ ಮಂಜು ಆಸ್ಪತ್ರೆ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂಧರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಶೀತಲ್ ಕುಮಾರ್ ಕೆಟ್ಟಿರುವ ಎಕ್ಸ್ ರೇ ಯಂತ್ರವನ್ನು 2ತಿಂಗಳೊಳಗಾಗಿ ಸರಿಪಡಿಸಲಾಗುವುದು, ನೂತನ ಕಟ್ಟಡವನ್ನು 15ದಿನಗಳೊಳಗಾಗಿ ವಶಕ್ಕೆ ಪಡೆಯಲಾಗುವುದು, ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ತಿಂಗಳಿಗೊಮ್ಮ ನಡೆಸಲಾಗುವುದು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಔಷಧ ಮಾತ್ರೆ, ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಎಪಿಎಲ್ ಕಾರ್ಡು ದಾರರಿಗೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಪ್ರತಿ ಕಿಮಿಗೆ 1ರೂ. ಪಟ್ಟಣದಿಂದ ಹಳ್ಳಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಪ್ರತಿ ಕಿಮಿಗೆ 4ರೂ ದರ ಪಡೆಯಲಾಗುವುದು ಎಂದರು. ಆಸ್ಪತ್ರೆಗೆ ವಾರ್ಷಿಕವಾಗಿ 8.86ಲಕ್ಷರೂಪಾಯಿ ವೆಚ್ಚದಲ್ಲಿ ಔಷಧ ಮಾತ್ರೆ ಖರೀದಿಗೆ ಅವಕಾಶವಿದೆ ಈ ವರ್ಷ ಸದರಿ ವೆಚ್ಚವನ್ನು ಬಳಸಲಾಗಿದೆ ಎಂದರು. ಆಗ ಮದ್ಯೆ ಪ್ರವೇಶಿಸಿ ಮಾತನಾಡಿ ಶಾಸಕ ಎ ಮಂಜು ಸಾರ್ವಜನಿಕರಿಗೆ ಮಾಹಿತಿಯನ್ನು ಫಲಕದ ಮೇಲೆ ಪ್ರಕಟಿಸಬೇಕು, ರೋಗಿಗಳಿಗೆ ತೊಂದರೆಯಾಗದಂತೆ ಆರೋಗ್ಯ ಸೇವೆ ಒದಗಿಸಲು ಕಾಳಜಿ ವಹಿಸಬೇಕು ಯಾವುದೇ ಕಾರಣಕ್ಕೂ ಸೂಜಿ-ಮಾತ್ರೆಗಳಿಗೆ ಖಾಸಗಿ ಅಂಗಡಿಗಳಿಗೆ ಚೀಟಿ ಬರೆಯಬಾರದು ಈ ಬಗ್ಗೆ ದೂರುಗಳು ಬಂದರೆ ಅದನ್ನು ತಾವು ಸಹಿಸುವುದಿಲ್ಲ ಎಂದು ವೈದ್ಯರುಗಳಿಗೆ ಎಚ್ಚರಿಸಿದರು. ರಕ್ಷಾ ಸಮಿತಿಯ ಸದಸ್ಯರುಗಳು ಆಸ್ಪತ್ರೆಯ ಸ್ವಚ್ಚತೆ ಬಗಗ ಕಿಡಿ ಕಾರಿದಾಗ ಆಗಿರುವ ಲೋಪವನ್ನು ಸ್ವಚ್ಚತೆ ಉಸ್ತವಾರಿ ಪಡೆದಿರುವ ಕೃಷ್ಣ ಎಂಟರ್ ಪ್ರೈಸಸ್ ನ ಉಮೇಶ್ ಒಪ್ಪಿಕೊಂಡರು. ಸ್ವಚ್ಚತಾ ಕಾಮಗಾರಿಯ ಲೋಪಗಳಿಗೆ ಅಸಹನೆ ವ್ಯಕ್ತಪಡಿಸಿದ ಶಾಸಕರು ಕಡ್ಡಾಯವಾಗಿ ಬೆಳಿಗ್ಗೆ 7ಮಂದಿ ಮತ್ತು ರಾತ್ರಿ 2ಮಂದಿ ಕಾರ್ಯ ನಿರ್ವಹಿಸಬೇಕು ಮತ್ತು ಸದರಿ ಕೆಲಸಗಾರರು ಗುರುತು ಪತ್ರ ಹೊಂದಿರಬೇಕು ಅವರಿಗೆ ಸರ್ಕಾರದಿಂದ ನಿಗದಿಯಾಗಿರುವ 2300ರೂ ಸಂಬಳವನ್ನು ನೀಡಬೇಕು ಎಂದು ಟೆಂಡರುದಾರನಿಗೆ ತಾಕೀತು ಮಾಡಿದರು. ಆತ ಇದುವರೆಗೂ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೋಗುವ ಭರವಸೆ ನೀಡಿ ಕ್ಷಮೆಯಾಚಿಸಿದರು. ಆಸ್ಪತ್ರೆಯ ವೈದ್ಯರುಗಳಾದ ಡಾ ಶಂಕರಪ್ಪ, ಡಾ ಯೋಗೇಶ್ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗುತ್ತಿದ್ದಾರೆ, ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಾಸಕರು ಸದರಿ ವೈದ್ಯರುಗಳಿಗೆ ತಪ್ಪನ್ನು ತಿದ್ದಿಕೊಳ್ಳುವಂತೆ ತಿಳಿ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ದಂತ ವೈದ್ಯರುಗಳಿದ್ದು ಅವರನ್ನು ಕೊಣನೂರಿನ ಸರ್ಕಾರಿ ಆಸ್ಪತ್ರೆಗೆ ತಲಾ 3ದಿನ ನಿಯೋಜನೆ ಕಳುಹಿಸುವಂತೆ ಸೂಚಿಸಲಾಯಿತು. ಇದೇ ಸಂಧರ್ಭದಲ್ಲಿ ಮಾತನಾಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ ಸ್ವಾಮಿಗೌಡ ಸರ್ಕಾರದ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯ ಅನುಷ್ಠಾನಕ್ಕೆ ಆಸ್ಪತ್ರೆಯ ಫಿಜಿಶಿಯನ್ಗಳು ಮತ್ತು ದಂತ ವೈದ್ಯರುಗಳು ಸಹಕರಿಸುತ್ತಿಲ್ಲ ಇದರಿಂದಾಗಿ ತಾಲ್ಲೂಕಿನ 4530ಮಕ್ಕಳಿಗೆ ಅನ್ಯಾಯ ಮಾಡಿದಂತಾಗಿದೆ ಈ ಬಗ್ಗೆ ಸದರಿ ವೈದ್ಯರುಗಳಿಗೆ ಸೂಚನೆ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಕಳೆದ ಫೆಬ್ರುವರಿ ತಿಂಗಳಿನಲ್ಲೆ ಟೆಂಡರು ಆಗಿದ್ದರು ಸಹಾ ಆಡಳಿತಾತ್ಮಕ ಮಂಜೂರಾತಿಯ ನೆಪದಲ್ಲಿ ಕಳೆದ 4-5ತಿಂಗಳಿನಿಂದ ಆಸ್ಪತ್ರೆಯ ರೋಗಿಗಳಿಗೆ ಆಹಾರ ಒದಗಿಸದೇ ವಂಚಿಸಲಾಗಿದೆ ಈ ಹಿನ್ನೆಲೆಯಲ್ಲಿ ಸದರಿ ಲೋಪಕ್ಕೆ ಕಾರಣಕರ್ತನಾಗಿರುವ ಆಸ್ಪತ್ರೆಯ ಗುಮಾಸ್ತ ರಾಕಿ ಜೇಕಬ್ ನ್ನು ತರಾಟೆಗೆ ತೆಗೆದುಕೊಂಡ ಶಾಸಕ ಮಂಜು ಆತನ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲು ಸೂಚಿಸಿದರು. ಕಳೆದ ತಿಂಗಳು ಆಸ್ಪತ್ರೆಯಲ್ಲಿ ಕುಡಿದು ಗಲಾಟೆ ಮಾಡಿದ ಡಿ ಗ್ರೂಪ್ ನೌಕರ ದೇವರಾಜು ವಿರುದ್ದವೂ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲು ಶಾಸಕರು ಸೂಚಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಮಾದೇಶ್, ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್, ತಹಸೀಲ್ದಾರ್ ಸವಿತಾ, ತಾಲೂಕು ಆಡಳಿತಾಧಿಕಾರಿ ಡಾಸ್ವಾಮಿಗೌಡ, ರಕ್ಷಾ ಸಮಿತಿಯ ಸದಸ್ಯರಾದ ಮಾಜಿ ಜಿ.ಪಂ. ಸದಸ್ಯ ಶೆಟ್ಟಿಗೌಡ, ಪಿಎಸ್ಎನ್ ಪ್ರಸಾದ್, ಗುಂಡಣ್ಣ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮತ್ತಿತರರು ಉಪಸ್ತಿತರಿದ್ದರು.
ಅರಕಲಗೂಡು: ಮಿನಿಟ್ರಕ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪಟ್ಟಣದ ಕೋಟೆಯಲ್ಲಿ ನಡೆಯಿತು.
ಹಾಸನದಿಂದ ಅರಕಲಗೂಡು ಪಟ್ಟಣಕ್ಕೆ ಬರುತ್ತಿದ್ದ 407ಮಿನಿಟ್ರಕ್ ಗೆ ಅರಕಲಗೂಡು ಕೋಟೆ ಮಿನಿ ವಿಧಾನಸೌಧದೆದುರು ದಿಢೀರನೇ ರಸ್ತೆಯ ಬಲಬದಿಗೆ ಚಲಿಸಿದ ಬೈಕ್ ಡಿಕ್ಕಿ ಹೊಡೆಯಿತು. ಆಗ ಬೈಕ್ ಸವಾರ ರುದ್ರಪಟ್ಟಣದ ಜಯಣ್ಣ(50) ತೀವ್ರವಾಗಿ ಗಾಯಗೊಂಡರು, ಹಿಂಬದಿಯ ಸವಾರನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಇಬ್ಬರನ್ನು ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅರಕಲಗೂಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 ಕಾಮೆಂಟ್‌:

Obat Herbal Jantung Koroner ಹೇಳಿದರು...

ಮಾಹಿತಿಗಾಗಿ ಧನ್ಯವಾದಗಳು ಮಹಾನ್ ತಲುಪಿಸಲಾಗುತ್ತದೆ ^ ____ ^