ಗುರುವಾರ, ಆಗಸ್ಟ್ 19, 2010

ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

ಅರಕಲಗೂಡು: ಪಟ್ಟಣ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ನ ಯಶೋಧಮ್ಮ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿತ್ತು ಕಾಂಗ್ರೆಸ್ ನಿಂದ ಯಶೋಧಮ್ಮ ಏಕಮಾತ್ರ ಅಭ್ಯರ್ಥಿಯಾಗಿದ್ದರು,ಜೆಡಿಎಸ್ ನಲ್ಲಿ ಈ ವರ್ಗದಿಂದ ಯಾವ ಸದಸ್ಯರೂ ಇಲ್ಲದಿದ್ದುದರಿಂದ ಯಶೋಧಮ್ಮ ಅವರ ಆಯ್ಕೆ ಸುಗಮವಾಗಿ ಮುಗಿಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರವಿಕುಮಾರ್ ಹಾಗೂ ಜೆಡಿಎಸ್ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ರಮೇಶ್ ಸ್ಪರ್ದಿಸಿದರು. ಆದ್ದರಿಂದ ಚುನಾವಣೆ ಅನಿವಾರ್ಯವಾಗಿ ಎರಡು ಅಭ್ಯರ್ಥಿಗಳ ಪರ ಬೆಂಬಲಿಗರ ಕೈ ಎತ್ತಿಸುವ ಮೂಲಕ ಮತ ಎಣಿಕೆ ಮಾಡಲಾಯಿತು. ಇಬ್ಬರು ಅಭ್ಯರ್ಥಿಗಳಿಗೂ ಸಮಾನ ಮತಗಳು ಬಂದಿದ್ದರಿಂದ ಲಾಟರಿ ಎತ್ತಲಾಯಿತು. ಅಂತಿಮವಾಗಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಅವರಿಗೆ ವಿಜಯಲಕ್ಷ್ಮಿ ಒಲಿಯಿತು. ನಂತರ ಮಾತನಾಡಿದ ಉಪಾಧ್ಯಕ್ಷ ರಮೇಶ್ ಸಂತಸದ ಭಾವೋದ್ವೇಗ ತಡೆಯಲಾರದೇ ಗಳಗಳನೆ ಅತ್ತರಲ್ಲದೇ ಅವರ ಗೆಲುವನ್ನು ಮತದಾರರಿಗೆ ಸಮರ್ಪಿಸುವುದಾಗಿ ತಿಳಿಸಿದರು. ನಿರ್ಗಮಿತ ಅಧ್ಯಕ್ಷ ಲೋಕೇಶ್ ಮಾತನಾಡಿ ತನ್ನ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಮುಂದೆಯೂ ಅದೇ ರೀತಿ ಅಧಿಕಾರ ನಿರ್ವಹಿಸಿ ಎಂದರು, ಪರಾಜಿತ ಅಭ್ಯರ್ಥಿ ರವಿಕುಮಾರ್ ಮಾತನಾಡಿ ಅಭಿವೃದ್ದಿ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಚುನಾವಣೆಯಲ್ಲಿಯೂ ಭಾಗವಹಿಸಿ ಮಾತನಾಡಿದ ಶಾಸಕ ಎ ಮಂಜು ಮಾತನಾಡಿ ಗೆಲ್ಲುವವರೆಗೂ ಪಕ್ಷ ರಾಜಕಾರಣ, ಗೆದ್ದ ಮೇಲೆ ಯಾವುದೇ ಪಕ್ಷ ರಾಜಕಾರಣ ಮಾಡದೇ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಕೊಂಡು ಹೋಗಿ, ಹಿಂದಿನ ಎಂ ಎಲ್ ಎ ಸದಸ್ಯರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾವೇ ನಿರ್ದಾರ ತೆಗೆದುಕೊಂಡು ಸರ್ಕಾರದಿಂದ ಬಂದ ಹಣವನ್ನು ವಿನಿಯೋಗಿಸುತ್ತಿದ್ದರು ಆದರೆ ನಾನು ಹಾಗೆ ಮಾಡದೇ ಎಲ್ಲರನ್ನು ಕೇಳಿ ಆಗಬೇಕಾದ ಕೆಲಸಗಳ ಕಡೆ ಹೆಚ್ಚಿನ ಒತ್ತು ನೀಡಿದ್ದೇನೆ, ಪಟ್ಟಣಕ್ಕೆ ಯುಜಿಡಿ ಕಾಮಗಾರಿ ಆಗಬೇಕೆನ್ನುವುದು ನನಗೆ ದಶಕಗಳ ಕನಸು ಅದು ಈಗ ಮಂಜೂರಾಗಿದೆ, ಈ ಹಿಂದಿನ ಅವಧಿಯಲ್ಲಿ ಆರಂಭಿಕ ಮೊತ್ತ ಕಟ್ಟದಿದುದರಿಂದ ಯೋಜನೆ ವಿಳಂಬವಾಗಿತ್ತು ಎಂದು ಆರೋಪಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಸವಿತಾ ಕಾರ್ಯ ನಿರ್ವಹಿಸಿದರು. ಪ.ಪಂ. ಮುಖ್ಯಾಧಿಕಾರಿ ವಾಸುದೇವ್ ಸಭೆಯಲ್ಲಿ ಹಾಜರಿದ್ದರು.
ಅರಕಲಗೂಡು:ಅನಗತ್ಯವಾಗಿ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರ ಮೇಲೆ ಆರೋಪ ಹೊರಿಸುತ್ತಿರುವ ಶಾಸಕ ಎ. ಮಂಜು ಇದುವರೆಗೂ ಎಷ್ಟು ಬಾರಿ ಪಟ್ಟಣದ ವಾರ್ಡುಗಳಿಗೆ ಭೇಟಿ ನೀಡಿದ್ದಾರೆಂಬುದನ್ನು ಹೇಳಲಿ ಎಂದು ಪ.ಪಂ ಮಾಜಿ ಅಧ್ಯಕ್ಷ ಲೋಕೇಶ್ ಸವಾಲು ಹಾಕಿದ್ದಾರೆ.
ಪ.ಪಂ. ನ ಜೆಡಿಎಸ್ ಸದಸ್ಯರೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಶಾಸಕ ಮಂಜು ಜವಾಬ್ಧಾರಿಯುತವಾಗಿ ಮಾತನಾಡಬೇಕೆ ವಿನಹ ಸಲ್ಲದ ಮಾತುಗಳನ್ನು ಆಡಬಾರದು, ಮಾಜಿ ಶಾಸಕರು ಹಿಂದಿನ ಆಡಳಿತಾವಧಿಯಲ್ಲಿ ಪ್ರತೀ ವಾರ್ಡುಗಳಿಗೂ ಭೇಟಿ ನೀಡಿ ಸಮಸ್ಯೆಯನ್ನು ಮನಗಂಡಿದ್ದರು ಹಾಘೂ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದಾರೆ, ಅದೇ ರೀತಿ ಯುಜಿಡಿ ಕುರಿತು ಶಾಸಕ ಎ ಮಂಜು ಹೇಳಿಕೆ ಸರಿಯಲ್ಲ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಯುಜಿಡಿ ಆರಂಭಕ್ಕೆ ಆರಂಭಿಕ ಮೊತ್ತವನ್ನು ಪಾವತಿಸಲಾಗಿತ್ತು ಆದರೆ ಸರ್ಕಾರದ ಆಡಳಿತಾತ್ಮಕ ಕಾರಣಗಳಿಂದ ತಡವಾಗಿದೆ ಅದನ್ನು ಸಾರ್ವಜನಿಕರು ಅರಿಯಬೇಕು ಎಂದರು. ಪಕ್ಷೇತರ ಅಭ್ಯರ್ಥಿ ರಮೇಶ್ ಜೆಡಿಎಸ್ ಪಕ್ಷ ಸೇರಿದ್ದಾರೆ ಆದ್ದರಿಂದ ಅವರನ್ನು ಬೇಷರತ್ತಾಗಿ ಬೆಂಬಲಿಸಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ರಮೇಶ್, ಶಂಕರಯ್ಯ, ಮುನ್ನಾ, ಅಲೀಂ, ರಾಮಣ್ಣ ಮತ್ತಿತರರು ಇದ್ದರು.

ಕಾಮೆಂಟ್‌ಗಳಿಲ್ಲ: