ಗುರುವಾರ, ಆಗಸ್ಟ್ 12, 2010

'ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಕ್ರಮವಾಗಿರುವುದು ನಿಜ'


ಅರಕಲಗೂಡು: ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಅಕ್ರಮನಡೆದಿರುವ ಬಗ್ಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ತಾಲ್ಲೂಕಿನಲ್ಲಿ ಯೋಜನೆ ಅನುಷ್ಠಾನ ಮಾಡುವಾಗ ಇಂಜಿನಿಯರುಗಳಿಂದ ಅಕ್ರಮ ನಡೆದಿದೆ ಎಂದು ಮಾಜಿಶಾಸಕ ಎ ಟಿ ರಾಮಸ್ವಾಮಿ ಮಾಹಿತಿಯೊಂದಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಕುರಿತು ಪರಿಶೀಲನೆಗೆಂದು ಪ್ರದಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಬೆಳಿಗ್ಗೆ 10ಗಂಟೆ ಸುಮಾರಿಗೆ ತಾಲ್ಲೂಕಿಗೆ ಆಗಮಿಸಿದ ಅವರ ಜೊತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ರಾಜ್ಯ ನಿರ್ದೇಶಕ ಪ್ರಸನ್ನಕುಮಾರ್, ಜಿ.ಪಂ. ಸಿಇಓ ಅಂಜನಕುಮಾರ್, ತಾಲ್ಲೂಕಿನ ಖಾತ್ರಿ ಯೋಜನೆ ನೋಡಲ್ ಅಧಿಕಾರಿ ಜಿಲ್ಲಾ ಜಲಾನಯನ ಇಲಾಖೆಯ ವಿಜಯಕುಮಾರ್ , ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್, ಸದಸ್ಯರಾದ ರಾಮಶೇಷ ಮತ್ತಿತರ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಯವರ ಜೊತೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಿಗೆ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿದರು. ಯಲಗತವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲನೆ ವೇಳೆ ರಾಜಕೀಯ ಪಕ್ಷಗಳ ಬೆಂಬಲಿಗರು ಕಾಮಗಾರಿ ನಡೆಸಿ 6ತಿಂಗಳಾದರೂ ಕೂಲಿ ಹಣ ಬಿಡುಗಡೆ ಮಾಡದಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಕಾಮಗಾರಿಯನ್ನೇ ಮಾಡದೇ 11ಲಕ್ಷಕ್ಕೂ ಹೆಚ್ಚು ಹಣವನ್ನು ಕಾರ್ಯದರ್ಶಿ ಮತ್ತು ಅಧ್ಯಕ್ಷ ಡ್ರಾ ಮಾಡಿಕೊಂಡಿರುವುದು ಪತ್ತೆಯಾಯಿತು. ಈ ಪಂಚಾಯ್ತಿಯಲ್ಲಿ 53ಲಕ್ಷ ಸರಕು-ಸಾಮಾಗ್ರಿ ವೆಚ್ಚ ಪಾವತಿಸಲಾಗಿದ್ದು 11ಲಕ್ಷ ಕೂಲಿ ಅಕ್ರಮವಾಗಿ ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಸದರಿ ಬಾಬ್ತಿಗೆ ಯೋಜನಾ ಅನುಮೋದನೆಯಾಗಲೀ ಎಂಬಿಯನ್ನಾಗಲೀ ಬರೆಯದೇ ಹಣ ಪಡೆಯಲಾಗಿದೆ. ಅಲ್ಲಿನ ಪಂಚಾಯ್ತಿ ಕಾರ್ಯದರ್ಶಿ ಯನ್ನು ಈಗಾಗಲೇ ಅಮಾನತ್ತಿನಲ್ಲಿಡಲಾಗಿದ್ದು ಇದೀಗ ಕಾರ್ಯದರ್ಶಿ ಅಪ್ಪಣ್ಣೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲ ಹಾಗೂ ಬಿಲ್ ಕಲೆಕ್ಟರನ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ಸೂಚಿಸಲಾಗಿದೆ. ಯಗಟಿ ಗ್ರಾಮದಲ್ಲಿ ಬೂಮಿ ಸಮತಟ್ಟು ಮಾಡಿದ್ದೇವೆಂದು ರೆಕಾರ್ಡು ಮಾಡಲಾಗಿದೆಯಾದರೂ ಅದಕ್ಕೆ ಯಾವುದೇ ಎನ್ ಎಂ ಆರ್ ಲಭ್ಯವಿಲ್ಲ, ಯಲಗತವಳ್ಳಿ ಊರು ಮಧ್ಯೆ ಗುಂಡಿ ಮುಚ್ಚಲು 2ಲಕ್ಷ ವೆಚ್ಚ ಮಾಡಲಾಗಿದೆ, ಮಂಡಿ ಚಿಕ್ಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ತೋಟದ ಕೆರೆಯಿಂದ ಮಣ್ಣು ತಂದು ಹಾಕಿ ಹೂಳೆತ್ತುವ ಕೆಲಸ ಎಂದು 15ಲಕ್ಷ ಬಿಲ್ ಪಡೆಯಲಾಗಿದೆ ಈ ಬಗ್ಗೆ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆಯಲಾಯಿತು ಎಂದು ತಾ.ಪಂ. ಅಧ್ಯಕ್ಷ ಮಾದೇಶ್ ಪತ್ರಿಕೆಗೆ ತಿಳಿಸಿದರು. ನಂತರ ಕತ್ತಿಮಲ್ಲೇನಹಳ್ಳಿ ಗ್ರಾ.ಪಂ ಗೆ ತೆರಳಿದ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿತು, ಈ ಸಂಧರ್ಭ ಹಾಜರಿದ್ದ ಪತ್ರಕರ್ತರನ್ನು ಗಮನಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ಪತ್ರಕರ್ತರಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯವರ ಗಮನಸೆಳೆದರು. ತಕ್ಷಣ ಪರಿಶೀಲನೆ ಸ್ಥಗಿತಗೊಳಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಉದ್ಯೋಗ ಖಾತ್ರಿ ಅಕ್ರಮದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಬೇಜವಾಬ್ದಾರಿಯ ಉತ್ತರ ನೀಡಿದರಲ್ಲದೇ ಮೊದಲಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದರು, ಹಾಗಾದರೆ ಬಂದ ಔಚಿತ್ಯವೇನು ಎಂಬ ಪ್ರಶ್ನೆಗೆ ದೂರಿನ ಹಿನ್ನೆಲೆಯಲ್ಲಿ ಬಂದಿದ್ದೇನೆ ಪರಿಶೀಲಿಸುತ್ತಿದ್ದೇನೆ ಎಂದು ನುಡಿದರು. ಭೇಟಿ ನೀಡಿದ ಕಾಮಗಾರಿಗಳು ಅಕ್ರಮವಾಗಿದೆಯೇ ಎಂದು ಕೇಳಿದಾಗ ಆ ಕುರಿತು ತಾಂತ್ರಿಕ ಪರಿಣಿತರ ತಂಡ ಪರಿಶೀಲಿಸುವುದು ಮೇಲ್ನೋಟಕ್ಕೆ ಕಂಡು ಬರುವ ಮಾಹಿತಿಯನ್ನಷ್ಟೆ ತಾವು ಗಮನಿಸುತ್ತಿರುವುದಾಗಿ ತಿಳಿಸಿರುವುದಲ್ಲದೇ ಪರೋಕ್ಷವಾಗಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಂಡರು. ಸಾಮಾಗ್ರಿ ವೆಚ್ಚವನ್ನು ಪಾವತಿಸಿ ಕೂಲಿ ಹಣವನ್ನು 6ತಿಂಗಳಿನಿಂದ ತಡೆಹಿಡಿಯಲಾಗಿರುವ ಕುರಿತು ಪ್ರಶ್ನಿಸಿದಾಗ ದೂರಿನ ಹಿನ್ನೆಲೆಯಲ್ಲಿ ತಡೆಯಲಾಗಿದೆ ಎಂದರು, ಹಾಗಾದರೆ ಸಾಮಾಗ್ರಿ ವೆಚ್ಚವನ್ನು ತಡೆ ಹಿಡಿಯಬಹುದಿತ್ತಲ್ಲವೇ ? ನಿಮ್ಮ ಕ್ರಮದಿಂದ ಕೂಲಿಕಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವವರು ಯಾರು ? ಅಷ್ಟಕ್ಕೂ ಸಾಮಾಗ್ರಿ ಬಿಲ್ ವಿತರಿಸಲು ಗ್ರಾ.ಪಂ.ಗೆ ಮಾತ್ರ ಅಧಿಕಾರವಿದೆ ಹೀಗಿರುವಾಗ ಜಿ.ಪಂ. ಅಧಿಕಾರಿಗಳು ಸಪ್ಲೈ ಬಿಲ್ ಕೊಟ್ಟದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದ ಅಧಿಕಾರಿ ಹಾರಿಕೆಯ ಉತ್ತರ ನೀಡಿದರು. ಯೋಜನಾನುಷ್ಟಾನದಲ್ಲಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಿ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಎಷ್ಟೋ ಮಟ್ಟಿಗೆ ಉತ್ತಮ ಕೆಲಸವಾಗಿದೆ ಸಣ್ಣಪುಟ್ಟ ಲೋಪದೋಷಗಳಾಗಿರಬಹುದು, ಈ ಯೋಜನೆಯಲ್ಲಿ ಯಂತ್ರ ಬಳಸಲು ಅವಕಾಶವಿದೆ, ಕೂಲಿಕಾರ್ಮಿಕರಿಗೆ ವಾಸ್ತವ ನೆಲೆಗಟ್ಟಿನಲ್ಲಿ ಖಾಸಗಿಯವರಿಂದ ಹೆಚ್ಚಿನ ಕೂಲಿ ಸಿಗುತ್ತಿದೆ ಖಾತ್ರಿ ಯೋಜನೆಯಲ್ಲಿ ಕಡಿಮೆ ಇದೆ ಹೀಗಿರುವಾಗ ಯಂತ್ರ ಬಳಸುವುದರಲ್ಲಿ ತಪ್ಪೇನಿದೆ ಎಂದು ಉತ್ತರಿಸಿದಾಗ ಸಿಟ್ಟಿಗೆದ್ದ ಪತ್ರಕರ್ತರು ಹಾಗಾದರೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಯೋಜನಾನುಷ್ಠಾನ ಬೇಕಿಲ್ಲ ರದ್ದುಪಡಿಸಿ ನೀವೇ ಹೀಗೆ ಹೇಳುವುದು ಸರಿಯೇ ಎಂದರು. ಆದರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ತಿಣುಕಾಡಿದ ಅವರು ತೇಲಿಕೆಯ ಉತ್ತರ ನೀಡಿ ಪತ್ರಕರ್ತರನ್ನು ಸಾಗಹಾಕಿದರು.
ಟೈಂ ಬಾಂಡ್ ಇಲ್ಲ!
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ಕೋಟಿ ರೂಪಾಯಿ ಕೂಲಿ ಬಾಬ್ತು ಬಾಕಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಪ್ರಧಾನ ಕಾರ್ಯದರ್ಶಿ ತಡಕಾಡಿದಾಗ ಜಿ.ಪಂ. ಸಿಇಓ 10ಕೋಟಿ ಎಂದುತ್ತರಿಸಿದರು ಇದು ಅರಕಲಗೂಡು ತಾಲ್ಲೂಕಿನದ್ದು ಆದರೆ ಜಿಲ್ಲೆಯಲ್ಲಿ ಎಷ್ಟು ಬಾಕಿ ಇದೆ ಎಂಬ ಪ್ರಶ್ನೆಗೆ ಅವರಿಂದ ಉತ್ತರ ಸಿಗಲಿಲ್ಲ. ಕಳೆದ 6ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಹಣ ಬಾಕಿ ಇರುವುದರಿಂದ ಸಂಕಷ್ಟದಲ್ಲಿದ್ದಾರೆ ದುಡ್ಡು ಬಿಡುಗಡೆ ಯಾವಾಗ ಎಂದರೆ ಅಕ್ರಮಗಳ ಕುರಿತ ತನಿಖಾ ವರದಿ ಬಂದ ನಂತರ ಶೀಘ್ರವಾಗಿ ಹಣ ಬಿಡುಗಡೆಗೊಳಿಸಲಾಗುವುದು ಎಂದರು.

ಅರಕಲಗೂಡು: ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಜಿನಿಯರುಗಳು ಹಣ ಲೂಟಿ ಮಾಡಿದ್ದಾರೆ ಮತ್ತು ಆ ಮೂಲಕ ಕಾಮಗಾರಿ ನಿರ್ವಹಿಸಿದ ಕೂಲಿಕಾರರಿಗೆ ಹಣ ನೀಡದೇ ವಂಚಿಸಲಾಗಿದೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಲೆಕ್ಕಕ್ಕೆ ಪತ್ರಕ್ಕೆ ಇಲ್ಲದ ಕೆರೆ-ಕಟ್ಟೆಗಳನ್ನು ಮಾಡಿದ್ದೇವೆ, ಕೆರೆಗಳ ಹೂಳೆತ್ತಿದ್ದೇವೆ ಎಂದು ಉದ್ಯೋಗ ಖಾತ್ರಿ ಬಿಲ್ ಮಾಡಲಾಗಿದೆ, ಭೂಮಿ ಸಮತಟ್ಟುಮಾಡಲು ಗ್ರಾವೆಲ್ ಹಾಕಿದ್ದೇವೆಂದು ಹೇಳಿದ್ದಾರೆ, ಎಲ್ಲಾ 29ಗ್ರಾ.ಪಂಗಳಲ್ಲೂ ನೀರುಗಾಲುವೆಗಳನ್ನು ಮಾಡುವಾಗ, ಬೂಮಿ ಸಮತಟ್ಟು ಮಾಡುವಾಗ ಸಪ್ಲೈ ಬಿಲ್ ತೋರಿಸಲಾಗಿದೆ,ಇಂಜಿನಿಯರುಗಳು ಅದೆಷ್ಟು ಎಂಬಿ ಬುಕ್ ಗಳನ್ನು ಇಶ್ಯೂ ಮಾಡಿದ್ದಾರೆಂಬ ಮಾಹಿತಿಯೇ ಇಲ್ಲ, ಒಬ್ಬೊಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ದಿನ 6-7ಕಾಮಗಾರಿ ನಿರ್ವಹಿಸಲಾಗಿದೆ, 7-8ನೇ ತರಗತಿಯ ವಿದ್ಯಾರ್ತಿಗಳ ಹೆಸರಿನಲ್ಲೂ ಜಾಬ್ ಕಾರ್ಡು ವಿತರಣೆಯಾಗಿದೆ, ಸ್ಥಳಕ್ಕೆ ತೆರಳದೇ ಬೇಕಾಬಿಟ್ಟಿ ಎಂಬಿ ಬರೆಯಲಾಗಿದೆ ಇದನ್ನೆಲ್ಲಾ ಸಹಿಸಿಕೊಂಡಿರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಯೋಜನೆಯಲ್ಲಿ ಯಾವುದೇ ಪಕ್ಷದ ಬೆಂಬಲಿಗರು ಕೆಲಸ ಮಾಡಿದ್ದಾರೆ, ಕಂಟ್ರಾಕ್ಟು ಮಾಡಿದ್ದಾರೆ ಎಂದು ನಾನು ಹೇಳುತ್ತಿಲ್ಲ ಎಲ್ಲಾ ಪಕ್ಷದ ಜನರು ಕಾಮಗಾರಿ ನಡೆಸಿದ್ದಾರೆ ಆದರೆ ಕಾಮಗಾರಿ ನಡೆಸಿದ ಜನರಿಗೆ ಹಣ ಬಿಡುಗಡೆ ಮಾಡದೇ ಸಾಮಾಗ್ರಿ ವೆಚ್ಚ ತೋರಿಸಿ 3ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿರುವ ಇಂಜಿನಿಯರುಗಳ ವಿರುದ್ದ ನನ್ನ ಹೋರಾಟ ನಡೆಸುತ್ತೇನೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಉತ್ತಮ ಕೆಲಸವಾಗಿದೆ ನಿಜ ಆದರೆ ಕೆಲಸ ಮಾಡದೆ ಸುಳ್ಳು ಲೆಕ್ಕ ಪತ್ರ ನೀಡಿ ದುಡ್ಡು ಹೊಡೆದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು. ಅರಣ್ಯ ಇಲಾಖೆಯಲ್ಲಿ 1ಕಾಲು ಕೋಟಿಯಷ್ಟು ವೆಚ್ಚ ಮಾಡಿ ಗಿಡ ನೆಟ್ಟಿದ್ದೇವೆಂದು ಸುಳ್ಳು ದಾಖಲೆ ನೀಡಿದ್ದಾರೆ, ನೀರಾವರಿ ಇಲಾಖೆಯಲ್ಲು ಹೂಳು ತೆಗೆಯಲು ಕೋಟ್ಯಾಂತರ ರೂ ವೆಚ್ಚ ಮಾಡಲಾಗಿದೆ ಹೀಗೆ ವಿವಿಧ ಇಲಾಖೆಗಳಲ್ಲೂ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅಕ್ರಮ ಕುರಿತು ಅಧಿಕೃತ ಮಾಹಿತಿ ಸಂಗ್ರಹಿಸಿದ್ದು ದೂರು ನೀಡಿದ್ದೇನೆ ಎಂದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 17ಲಕ್ಷ ಹಣ ಡ್ರಾ ಮಾಡಿರುವ ಬಗ್ಗೆ ನನ್ನ ಹತ್ತಿರ ಅಧಿಕಾರಿಗಳು ಧೃಢೀಕರಿಸಿದ ಮಾಹಿತಿಯಿದೆ ಆದರೆ ಈಗ 11ಲಕ್ಷದ ಮಾಹಿತಿ ಮಾತ್ರ ಇದೆ ಎನ್ನುತ್ತಿದ್ದಾರೆ, ಕಂಪ್ಯೂಟರ್ ನಲ್ಲಿ 2009ನೇ ವರ್ಷದ ಮಾಹಿತಿಗಳನ್ನು ಅಕ್ರಮ ಮುಚ್ಚುವ ಸಲುವಾಗಿ ವ್ಯವಸ್ಥಿತವಾಗಿ ತೆಗೆಯಲಾಗಿದೆ, ಇದರಿಂದಾಗಿ ಈಗಾಗಲೇ ಕಾರ್ಯ ನಿರ್ವಹಿಸಿರುವ ಕಾಮಗಾರಿಗಳಿಗೂ ಹಣ ಪಾವತಿಯಾಗದೇ ತೊಂದರೆ ಎದುರಾಗಲಿದೆ, ಅಧಿಕಾರಿಗಳು ಮಾಡಿದ ತಪ್ಪಿಗೆ ಕೂಲಿಕಾರರಿಗೆ ಬವಣೆ ಪಡಬೇಕಿದೆ ಎಂದರು. ಜನರ ಪರವಾಗಿ ತನ್ನ ನಿಲುವಿದ್ದು ಅನ್ಯಾಯವಾಗಿ ಜನರ ತೆರಿಗೆ ಹಣವನ್ನು ಯೋಜನೆ ಮೂಲಕ ಲೂಟಿಗೈದಿರುವ ಅಧಿಕಾರಿಗಳ ವಿರುದ್ದ ಮಾತ್ರ ತಮ್ಮ ಹೋರಾಟವಿದೆ ತನ್ನಿಂದಾಗಿ ಖಾತ್ರಿ ಯೋಜನೆಯ ದುಡ್ಡು ನಿಂತಿಲ್ಲ, ಅಧಿಕಾರಿಗಳ ತಪ್ಪಿನಿಂದ ಹಣ ಬರುವುದು ನಿಂತಿದೆ ಈ ಬಗ್ಗೆ ಜನರ ಬಳಿಗೆ ತೆರಳಿ ಆಗಿರುವ ಅನ್ಯಾಯವನ್ನು ಹೇಳುತ್ತೇನೆ, ಇದನ್ನು ಇಲ್ಲಿಗೆ ಬಿಡುವುದಿಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನನ್ನ ಹೋರಾಟ ಇದ್ದೇ ಇರುತ್ತದೆ ಎಂದರು. ಈ ಸಂಧರ್ಭದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಜಿ.ಪಂ ಸದಸ್ಯ ಅಪ್ಪಣ್ಣ, ತಾ.ಪಂ. ಸದಸ್ಯ ರಾಮಶೇಷ ಇದ್ದರು.

ಕಾಮೆಂಟ್‌ಗಳಿಲ್ಲ: