ಶನಿವಾರ, ಜನವರಿ 30, 2010

ಸರ್ಕಾರಿ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಲು ಕಾನೂನು ಅರಿವು ಅಗತ್ಯ

ಅರಕಲಗೂಡು: ಸರ್ಕಾರಿ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಲು ಕಾನೂನು ಅರಿವು ಅಗತ್ಯ ಎಂದು ತ್ವರಿತಗತಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧಿಶ ಹಾಲಪ್ಪ ಹೇಳಿದ್ದಾರೆ. ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಾಡಾಗಿದ್ದ ಒಂದು ದಿನದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಕಾನೂನು ಅರಿವಿನ ಕೊರತೆಯಿಂದಾಗಿ ಜನಸಾಮಾನ್ಯರಿಗೆ ಸರ್ಕಾರಿ ಸವಲತ್ತುಗಳನ್ನು ಸರಿಯಾಗಿ ಸಧ್ಭಳಕೆ ಮಾಡಿಕೊಳ್ಳಲು ಆಗುತ್ತಿಲ್ಲ, ಕಾನೂನುಗಳು ಜನರ ಅನುಕೂಲಕ್ಕಾಗಿ ಇವೆ ಅವನ್ನು ಅರಿತು ಮುನ್ನೆಡೆದರೆ ಏಳಿಗೆ ಸಾಧ್ಯ ಎಂದರು. ಕಾನೂನು ಅರಿವಿನ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವಾಗಬೇಕು ಹಾಗಾದಾಗ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣದ ಸಾಧ್ಯ ಎಂದು ಅವರು ನುಡಿದರು. ತಹಸೀಲ್ದಾರ್ ಶೈಲಜಾ ಮಾತನಾಡಿ ಜನರಿಗೆ ಕಾನೂರು ಅರಿವು ಮುಖ್ಯ ಆದರೆ ಕಾನೂನಿನ ಅರೆಬರೆ ತಿಳುವಳಿಕೆಯಿಂದ ಕೆಲವರು ಅನಾವಶ್ಯಕವಾಗಿ ಆಡಳಿತದಲ್ಲಿ ಗೋಜಲು ಮಾಹಿತಿ ಕೇಳುತ್ತಾ ಸಂಕೀರ್ಣತೆ ಸೃಷ್ಟಿಸುತ್ತಾರೆ ಇದು ಸಮಾಜದ ಅಭಿವೃದ್ದಿಗೆ ಪೂರಕವಲ್ಲ ೆಂದರು. ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಮಂಜುನಾಥ್ ಮಾತನಾಡಿ ಕೆಲವು ಜನರು ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ನ್ಯಾಯಾಲಯದ ಮೆಟ್ಟಿಲಿಗೆ ಬರುತ್ತಿದ್ದಾರೆ. ಪ್ರಕರಣಗಳು ಒಂದು ನ್ಯಾಯಾಲಯದಲ್ಲಿ ಇತ್ಯರ್ಥವಾದರೆ ಮತ್ತೆ ಮತ್ತೆ ಮೇಲ್ಮನವಿ ಸಲ್ಲಿಸುವ ಮೂಲಕ ಮೇಲಿನ ಕೋರ್ಟುಗಳಿಗೆ ಹೋಗುತ್ತಾರೆ, ಸೌಹಾರ್ಧಯುತವಾಗಿ ಕಡಿಮೆ ವೆಚ್ಚದಲ್ಲಿ ಬಗೆಹರಿಸಿಕೊಳ್ಳಬಹುದಾದ ವಿಷಯಗಳಿಗೆ ಹೆಚ್ಚುವರಿಗೆಯಾಗಿ ಹಣ ವ್ಯಯ ಮಾಡುತ್ತಾರೆ ಇದು ತಪ್ಪಬೇಕು. ವಾಸ್ತವ ನೆಲೆಗಟ್ಟಿನಲ್ಲಿ ಸಮಸ್ಯೆ ಪರಿಹಾರವಾಗಬೇಕಾದರೆ ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಇದ್ದರೆ ಇಂತಹ ಬೆಳವಣಿಗೆಗೆ ತಡೆ ಹಾಕಬಹುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಭಾಷಣ ಮಾಡಿದ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಆರ್ ವೈ ಶಶಿಧರ್ ಕಾನೂನು ತಿಳುವಳಿಕೆ ಮತ್ತು ಉಚಿತ ಕಾನೂನು ಸೇವೆ ಒದಗಿಸುವ ನಿಟ್ಟಿನಲ್ಲಿ ಜನತಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಾಲಕೃಷ್ಣ ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿ ನೀಡಿದರೆ, ಹಿರಿಯ ವಕೀಲರಾದ ಜನಾರ್ಧನ ಗುಪ್ತ 'ಮಾಹಿತಿ ಹಕ್ಕು ಕಾಯ್ದೆ' ಮತ್ತು ಎಚ್ ಎಸ್ ರೇವಣ್ಣ ಖಾತೆ ಬದಲಾವಣೆ ಬಗೆಗೆ ಕಾನೂನು ಮತ್ತು ನಿಯಮಗಳು ವಿಷಯವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿರಿಯ ಶ್ರೇಣಿಯ ಸಿವಿಲ್ ಜಡ್ಜ್ ಬಿ ವೆಂಕಟಪ್ಪ,ಎಸ್ ಬಿ ಎಂ ವ್ಯವಸ್ಥಾಪಕ ಕೆ ಎಸ್ ಗುರುರಾಜ್, ಕಾನೂನು ಸೇವಾ ಸಮಿತಿ ಸದಸ್ಯೆ ವಾಸವಾಂಬ ಗುಪ್ತ, ವಿಶೇಷ ಸರ್ಕಾರಿ ಅಭಿಯೋಜಕಿ ಶೋಬಾರಾಕೇಶ್, ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್ ಆರ್ ಸತ್ಯವತಿ ಉಪಸ್ಥಿತರಿದ್ದರು.
ಜಿ.ಪಂ. ಉಪಕಾರ್ಯದರ್ಶಿ ತರಾಟೆಗೆ:- ಕಾರ್ಯಕ್ರಮಕ್ಕೆ ಅನಿರೀಕ್ಷಿತ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತ್ ಉಪಕಾರ್ಯದರ್ಶಿ ಬಾಲಕೃಷ್ಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಪ್ರಾತ್ಯಕ್ಷಿಕೆ ಜೊತೆಗೆ ಉಪನ್ಯಾಸ ನೀಡುತ್ತಿದ್ದ ವೇಳೆ 'ಗ್ರಾಮ ಪಂಚಾಯತ್ ಸದಸ್ಯರನ್ನುದ್ದೇಶಿಸಿ ನೀವು ಜಾಬ್ ಕಾರ್ಡುಗಳನ್ನು ಮಾರಿಕೊಳ್ಳಬೇಡಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ, ಜೆಸಿಬಿಯಿಂದ ಕೆಲಸ ಮಾಡಬೇಡಿ ಅಗತ್ಯವಿರುವೆಡೆ ಮಾತ್ರ ಮಾಡಿ, ಬೋಗಸ್ ಕೆಲಸ ನಿರ್ವಹಿಸಿ ತೋರಬೇಡಿ ಎಂದಾಗ ಸಭೆಯಲ್ಲಿದ್ದ ಹಲವು ಮಂದಿ ಕುಪಿತರಾಗಿ ಉಪಕಾರ್ಯದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನೀವು ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಕಾರಣ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಪ್ಲೈ ಬಿಲ್ ಗಳನ್ನು ನೀವೆ ಕೊಡುತ್ತಿದ್ದೀರಿ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುತ್ತಿದ್ದೀರಿ ಎಂದರಲ್ಲದೇ, ಪ್ರಾತ್ಯಕ್ಷಿಗೆ ಆಂಗ್ಲ ಭಾಷೆಯಲ್ಲಿ ಪ್ರಸೆಂಟೇಶನ್ ನೀಡಿದ್ದನ್ನು ತೀವ್ರವಾಗಿ ವಿರೋಧಿಸಿದರು. ಆಗ ಕಂಗಾಲಾದ ಅಧಿಕಾರಿ ಹೀಗೆ ಗಲಾಟೆ ಮಾಡಿದರೆ ಉಪನ್ಯಾಸ ನಿಲ್ಲಿಸಿಬಿಡುತ್ತೇನೆ ಎಂದು ಎಚ್ಚರಿಸುತ್ತಿದ್ದರಲ್ಲದೇ ಕಾರ್ಯಕ್ರಮದ ಅಂತ್ಯದಲ್ಲಿ ಪ್ರಶ್ನೆಗಳಿಗೆ ಉತ್ತಿರಿಸುವುದಾಗಿ ಹೇಳುತ್ತಿದ್ದರು. ಇದರಿಂದ ನಿರಾಶರಾದ ಬಹುತೇಕ ಸದಸ್ಯರು ಕಾನೂನು ಕಾರ್ಯಾಗಾರದಿಂದ ಹೊರನಡೆದರು.

ಶುಕ್ರವಾರ, ಜನವರಿ 29, 2010

'ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ' ಕೂಲಿಕಾರರ ಪ್ರತಿಭಟನೆ

ಅರಕಲಗೂಡು: ರಾಜಕಾರಣಿಗಳು ಹಾಗು ಮಾಧ್ಯಮಗಳು ಉದ್ಯೋಗ ಖಾತರಿ ಯೋಜನೆ ಬಗ್ಗೆ ಸುಳ್ಳು ಹಾಗೂ ದಾರಿತಪ್ಪಿಸುವ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಆರೋಪಿಸಿ ಉದ್ಯೋಗ ಖಾತರಿ ಯೋಜನೆಯ ಕೂಲಿಕಾರರು ಪಟ್ಟಣದಲ್ಲಿಂದು ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತರಿ ಯೋಜನೆಯ ವ್ಯಾಪಕ ಅಕ್ರಮಗಳ ಕುರಿತು 'ಪತ್ರಿಕೆ'ಯ ಸಮಗ್ರ ವರದಿಯ ಬೆನ್ನಲ್ಲೆ ಯೋಜನೆ ಅನುಷ್ಠಾನದ ಅಕ್ರಮಗಳ ವಿರುದ್ದ ಮಾಜಿ ಸಚಿವ ಬಿ ಶಿವರಾಂ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ತೊಡಕುಂಟಾಗಿದೆ ಎಂದು ಪ್ರತಿಭಟನೆಕಾರರು ಮಾಜಿ ಸಚಿವ ಬಿ ಶಿವರಾಂ ಮತ್ತು ಮಾದ್ಯಮಗಳ ವಿರುದ್ದ ಘೋಷಣೆ ಕೂಗಿದರು. ವಡ್ಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸೇಗೌಡ ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ಯೋಜನಾನುಷ್ಠಾನ ಉತ್ತಮವಾಗಿದೆ, ಯಾರು ಬೇಕಾದರೂ ಬಂದು ಪರಿಶೀಲಿಸಬಹುದು, ಸೋತು ಮನೆಯಲ್ಲಿ ಕುಳಿತವರು ದುರುದ್ದೇಶದಿಂದ ುದ್ಯೋಗ ಖಾತ್ರಿ ಕುರಿತು ಹೇಳಿಕೆ ನೀಡುತ್ತಿದ್ದಾರೆ ಪತ್ರಕರ್ತರು ಅದನ್ನು ಬರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ನ್ಯಾಯಬೆಲೆ ಅಂಗಡಿಗಳ ಸಂಘದ ಅಧ್ಯಕ್ಷ ಚನ್ನಕೇಶವೇಗೌಡ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮಗಳ ಅಭಿವೃದ್ದಿಯಾಗುತ್ತಿದೆ, ಆದರೆ ಇದನ್ನು ಸಹಿಸದೇ ಅನಗತ್ಯ ಟೀಕೆ ಮಾಡುತ್ತಾ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ತುಂಬಲಾಗುತ್ತಿದೆ ಎಂದರು.ಕೂಲಿಕಾರರ ಸಂಘಟಕ ದಿನೇಶ್ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮಗಳ ಸರ್ವೊದಯಕ್ಕೆ ಸದುದ್ದೇಶದಿಂದ ಜಾರಿಗೊಳಿಸಲಾಗಿದೆ, ಇಂತಹ ಮಹತ್ತರ ಯೋಜನೆಯ ಬಗ್ಗೆ ಕೆಲವು ಕಿಡಿಗೇಡಿಗಳು ಗ್ರಾಮೀಣ ಜನತೆಯ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ದಿ ಸಹಿಸದೇ ಸಲ್ಲದ ಹೇಳಿಕೆಗಳನ್ನು ಪತ್ರಿಕೆಗಳ ಮೂಲಕ ನೀಡುತ್ತಿದ್ದಾರೆ ಈ ರೀತಿ ಉದ್ಯೋಗ ಖಾತ್ರಿ ಯೋಜನೆ ವಿರುದ್ದ ಹೇಳಿಕೆ ನೀಡುವವರಿಗೆ ಶಿಕ್ಷೆ ನೀಡಿ ದಂಡ ಹಾಕಲು ಅವಕಾಶವಿದೆ, ಪತ್ರಿಕೆಗಳಲ್ಲಿ ವಡ್ಡರಹಳ್ಳಿಯ ಕೆ ಎಸ್ ಆರ್ ಟಿ ಸಿ ಚಾಲಕರೋಬ್ಬರ ಹೆಸರಿನಲ್ಲಿ ಜಾಬ್ ಕಾರ್ಡ್ ಇದೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ, ಒಬ್ಬ ನೌಕರನ ಹೆಸರಿನಲ್ಲಿ ಕಾರ್ಡು ಇದ್ದರೆ ತಪ್ಪಲ್ಲ, ತಮ್ಮ ಆ ಕಾರ್ಡಿನಲ್ಲಿ ಕೆಲಸ ಮಾಡಬಹುದು ಎಂದರು. ದಲಿತ ಸಂಘರ್ಷ ಸಮಿತಿಯ ಗಣೇಶ ವೇಲಾಪುರಿ ಮಾತನಾಡಿ ಉದ್ಯೋಗ ಖಾತ್ರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹೇಳಿಕೆ ನೀಡುವವರ ವಿರುದ್ದ ಪ್ರತಿಭಟನೆಗೆ ದಸಂಸ ಬೆಂಬಲಿಸುತ್ತದೆ. ಯೋಜನೆಯ ಬಗ್ಗೆ ಮಾಜಿ ಸಚಿವ ಬಿ ಶಿವರಾಂ ತಕರಾರು ತೆಗೆದಿರುವುದು ಸರಿಯಲ್ಲ, ಅಭಿವೃದ್ದಿ ಯೋಜನೆಗಳನ್ನು ಟೀಕಿಸದಿರಿ ಎಂದರು.ನಂತರ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ತಾಲ್ಲೂಕು ಪಂಚಾಯಿತಿ ಕಛೇರಿಗೆ ತೆರಳಿ ಕಾರ್ಯ ನಿರ್ವಾಹಕ ಅಧಿಕಾರಿ ಫಣೀಶ್ ಅವರಿಗೆ ಮನವಿ ಅರ್ಪಿಸಿದರು.ಅಕುಶಲ ಕೂಲಿಕಾರರ ನೇತೃತ್ವವನ್ನು ಮುಖಂಡರಾದ ಎಸ್ ಎಲ್ ಗಣಪತಿ, ಚನ್ನಕೇಶವೇಗೌಡ,ನರಸೇಗೌಡ,ದಿನೇಶ್,ಗಣೇಶವೇಲಾಪುರಿ ವಹಿಸಿದ್ದರು.ಪ್ರತಿಭಟನೆಯಲ್ಲಿ ಸರಿಸುಮಾರು 50-60ಮಂದಿ ಕೂಲಿಕಾರರು, ಗುತ್ತಿಗೆದಾರರು,ಕೆಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ಕ್ರಿಕೇಟ್ ಬಾಲ್ ಪಂದ್ಯಾವಳಿ
ಅರಕಲಗೂಡು ಜೈಭೀಮ್ ನಗರದ ಅಂಬೇಡ್ಕರ್ ಕ್ರಿಕೇಟರ್ಸ್ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ ಯನ್ನು ಜನವರಿ 30,31ರಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಂಜು ತಿಳಿಸಿದ್ದಾರೆ

ಶನಿವಾರ, ಜನವರಿ 23, 2010

ಹುಚ್ಚುಮುಂಡೆ ಮದ್ವೆಲಿ ಉಂಡೋನೆ ಜಾಣ:ಉದ್ಯೋಗ 'ಖತ್ರಿ'

ಹಾಸನ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ 'ಉದ್ಯೋಗ ಖಾತ್ರಿ' ಯೋಜನೆ ಜನರಿಗೆ ಉದ್ಯೋಗ ಕಲ್ಪಿಸುವ ಬದಲಿಗೆ ಅಧಿಕಾರ ಶಾಹಿಗಳಿಗೆ ಮತ್ತು ಕಂಟ್ರಾಕ್ಟರುಗಳಿಗೆ ಹಣದೋಚುವ ಅಕ್ಷಯ ಪಾತ್ರೆಯಾಗಿ ಪರಿಣಮಿಸಿದೆ. ನಿನ್ನೆಯ ಪತ್ರಿಕೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕರ್ಮಕಾಂಡದ ಮೊದಲ ಕಂತನ್ನು ಪತ್ರಿಕೆ ಬಯಲಿಗೆ ತರುತ್ತಿದ್ದಂತೆ ಜಿಲ್ಲಾದ್ಯಂತ ಸಂಚಲನ ಸೃಷ್ಟಿಯಾಗಿದೆ.
ಕೆಂದ್ರ ಸರ್ಕಾರ ಈ ಮೊದಲು ಎಸ್ ಜೆ ಆರ್ ವೈ ಯೋಜನೆ ಯನ್ನು ಕೂಲಿಗಾಗಿ ಕಾಳು ಹೆಸರಿನಲ್ಲಿ ಜಾರಿಗೆ ತಂದಿತ್ತು, ಈ ಯೋಜನೆಯು ಕೂಡ ಅಧಿಕಾರ ಶಾಹಿಯ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದಿತ್ತು ಮತ್ತು ಬಡವರಿಗೆ ಕೂಲಿಯ ಜೊತೆಗೆ ವಿತರಣೆಯಾಗಬೇಕಾಗಿದ್ದ ಅಕ್ಕಿ ಮಾರಾಟವಾಗಿ 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ ತಿಂಗಳುಗಳ ಕಾಲ ಮುದ್ದೆ ಮುರಿಯುತ್ತ ಕಂಬಿ ಎಣಿಸಿದ್ದರು.ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳು ಬೆಳಕಿಗೆ ಬಂದು ಕ್ರಮವಾದರೆ ಜಿಲ್ಲೆಯಲ್ಲಿಯೂ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಗ್ರಾ.ಪಂ. ಅಧ್ಯಕ್ಷರುಗಳು ಕಂಬಿ ಎಣಿಸುವುದರಲ್ಲಿ ಅನುಮಾನವೇ ಇಲ್ಲ. ಕೂಲಿಗಾಗಿ ವಲಸೆಹೋಗುವ ಬಡಕೂಲಿ ಕಾರ್ಮಿಕರನ್ನು ತಡೆಯುವ ಸಲುವಾಗಿ ಬಂದ ಉದ್ಯೋಗ ಖಾತ್ರಿ ಯೋಜನೆ ಮೊದಲಿಗೆ ಉತ್ತರ ಕರ್ನಾಟಕ 5ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿತಾದರೂ ನಂತರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲ್ಪಟ್ಟಿತು.ಆರ್ಥಿಕವಾಗಿ ಸಮೃದ್ದವಾಗಿರುವ ಜಿಲ್ಲೆಗಳ ಜನರು ಈ ಯೋಜನೆಗೆ ಸೇರಲು ಮನಸ್ಸು ಮಾಡದಿದ್ದು ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ಆತಂಕ ತಂದಿತ್ತು, ಆದರೆ ಕೆಲವೇ ದಿನಗಳಲ್ಲಿ ಯೋಜನೆಯ ರುಚಿ ಕಂಡವರು ಹುಮ್ಮಸಿನಿಂದ ುದ್ಯೋಗ ಖಾತ್ರಿ ಕೆಲಸ ಮಾಡಲು ಮುಂದಾದರು. ಹಾಸನ ಜಿಲ್ಲೆಯ ಅರಕಲಗೂಡು ಮಲ್ಲಿಪಟ್ಟಣ ಗ್ರಾ.ಪಂ ಹಾಗೂ ಜಿಲ್ಲೆಯ ಬೆರಳೇಣಿಕೆಯ ಪಂಚಾಯಿತಿ ಹೊರತು ಪಡಿಸಿ ನಡೆದ ಎಲ್ಲ ಕಾಮಗಾರಿಗಳಲ್ಲೂ ವ್ಯಾಪಕವಾದಅಕ್ರಮ ನಡೆದಿದದೆ. ಈ ಬಗ್ಗೆ ಈಗಾಗಲೇ ಸೋಷಿಯಲ್ ಆಡಿಟ್ ನಡೆಯುತ್ತಿದ್ದು ನಿದಾನವಾಗಿ ಉದ್ಯೋಗ ಖಾತ್ರಿ ಯೋಜನೆಯ ಹಗರಣಗಳು ಬೆಳಕಿಗೆ ಬರಲಾರಂಭಿಸಿವೆ. ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಗಳಲ್ಲೂ ಜನಸಂಖ್ಯಾಧಾರಿತ ಕಾಮಗಾರಿ ಯೋಜನೆ ತಯಾರಿಸಿ ಜಾಬ್ ಕಾರ್ಡುಗಳನ್ನು ಮಾಡಬೇಕಾಗಿದೆ, ಕಾಮಗಾರಿ ಮುಗಿದ ನಂತರ ಜಾಬ್ ಕಾಡ್ರುದಾರರ ಮಾಹಿತಿ ಸೇರಿದಂತೆ ವೆಚ್ಚದ ಮಾಹಿತಿಯನ್ನು ಕಾಮಗಾರಿ ಸ್ಥಳದಲ್ಲಿ ಪ್ರದರ್ಶಿಸಬೇಕಾಗಿದೆ, ಆದರೆ ಈ ಕ್ರಿಯೆಗಳು ಜರುಗಿಲ್ಲ. ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದ ವೆಚ್ಚದ ಕಾಮಗಾರಿ ತಯಾರಿಸಲಾಗಿದೆ. ಅರಕಲಗೂಡು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆ ಎಸ್ ಆರ್ ಟಿ ಸಿ ಚಾಲಕರೊಬ್ಬರ ಹೆಸರಿನಲ್ಲಿ ಜಾಬ್ ಕಾರ್ಡು ಮಾಡಿಸಿ ಹಣ ಡ್ರಾ ಮಾಡಲಾಗಿದೆ. ಜಿಲ್ಲೆಯಾಧ್ಯಂತ ಸಹಕಾರಿ ಸೊಸೈಟಿಗಳಲ್ಲಿ ಮತ್ತು ಅಂಚೆ ಇಲಾಖೆಯಲ್ಲಿಯೂ ಖಾತೆ ತೆರೆದು ಹಣ ಪಡೆಯಲಾಗಿದೆ. ಉದಾ : ಗೆ ಹೇಳುವುದಾದರೆ 1ಲಕ್ಷದ ಕಾಮಗಾರಿಗೆ 10ಲಕ್ಷದ ಅಂದಾಜು ಮೊತ್ತ ತಯಾರಿಸಿ ಬಿಲ್ ಪಡೆಯಲಾಗಿದೆ. ಒಂದು ಕುಟುಂಬಕ್ಕೆ ಒಮ್ಮೆ ಕೆಲಸ ಒದಗಿಸಿದ ಮೇಲೆ ಮತ್ತೆ ಅದೇ ಕುಟುಂಬದ 2ನೆ , 3ನೇ ಸದಸ್ಯನನ್ನು ಕುಟುಂಬದ ಯಜಮಾನನೆಂದು ತೋರಿಸಿ ವಂಚಿಸಲಾಗಿದೆ. ಜಿ.ಪಂ ಅಭಿಯಂತರರುಗಳು ಸ್ಥಳಕ್ಕೆ ತೆರಳದೆ ಕಛೇರಿಯಲ್ಲಿ, ಖಾಸಗಿ ಸ್ಥಳದಲ್ಲಿ ಕುಳಿತು ಒಂದಕ್ಕೆ ದುಪ್ಪಟ್ಟು ಯೋಜನಾ ವೆಚ್ಚದ ವರದಿ ತಯಾರಿಸಿ ಕೊಡುತ್ತಿದ್ದಾರೆ. ಕೆಲಸ ಮುಗಿದ ಮೇಲೆ ಹಾಸನದ ಖಾಸಗಿ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಕುಳಿತು ಬಿಲ್ ಗಳನ್ನು/ವರದಿಗಳನ್ನು ಬರೆಯುತ್ತಿದ್ದಾರೆ. ಎಷ್ಟೋ ಮಂದಿ ಸಣ್ಣ ಪುಟ್ಟ ನೌಕರಿ ಮಾಡುವ ಖಾಸಗಿ/ಸರ್ಕಾರಿ/ಅರೆಸರ್ಕಾರಿ ನೌಕರರು ಈಗ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಂಟ್ರಾಕ್ಟುದಾರರಾಗಿದ್ದಾರೆ. ವರ್ಕ್ ಆರ್ಡರು ಸಿಗುವ ಮುನ್ನವೇ ಜೆಸಿಬಿ ಮೂಲಕ ಕೆಲಸ ಆರಂಭಿಸಿ ನಂತರ ಅಧಿಕಾರಿಗಳಿಗೆ ಕಪ್ಪಕಾಣಿಕೆ ಸಲ್ಲಿಸಿ ಮಂಜೂರಾತಿ ಪಡೆಯುತ್ತಿದ್ದಾರೆ, ರಾಜಕೀಯವಾಗಿ ಸಬಲರಾಗಿಲ್ಲದವರು ನಷ್ಟಮಾಡಿಕೊಂಡು ಪರಿತಪಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯವೆನಿಸಿದ ಕಡೆ ಮಾತ್ರ ಯಂತ್ರೋಪಕರಣಗಳ ಬಳಕೆಗೆ ಅವಕಾಶವಿದೆ, ಆದರೆ ಅದನ್ನೇ ಪ್ಲಸ್ ಪಾಯಿಂಟ್ ಎಂದುಕೊಂಡ ಅಧಿಕಾರಿಗಳು ಶೇ>90ರಷ್ಟು ಕಾಮಗಾರಿಗಳನ್ನು ಜೆಸಿಬಿ ಮೂಲಕ ನಿರವಹಿಸಲು ಅವಕಾಶ ಮಾಡಿದ್ದಾರೆ. ಹುಚ್ಚುಮುಂಡೆ ಮದ್ವೇಲಿ ಉಂಡವನೇ ಜಾಣ ಎಂಬಂತೆ ಮನಸೋ ಇಚ್ಚೇ ಹಣ ದೋಚುತ್ತಿರುವವರ ಪೈಕಿ ಜಿ.ಪಂ. ಇಂಜಿನಿರಯರುಗಳು ಅಗ್ರ ಸ್ಥಾನದಲ್ಲಿ ಬರುತ್ತಾರೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಿಯಮಿತ ವೆಚ್ಚದ ಕಾಮಗಾರಿ ನಿರ್ವಹಿಸಲು ಅವಕಾಶವಿದ್ದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಸಪ್ಲೈ ಬಿಲ್ ಗಳನ್ನು ಮಾಡುತ್ತಿದ್ದಾರೆ, ಬೇಕಾದ ಏಜೆನ್ಸಿಗಳಿಗೆ ಜಿಲ್ಲಾ ಮಟ್ಟದಲ್ಲೇ ಅಕ್ರಮವಾಗಿ ಸಪ್ಲೈ ಬಿಲ್ ನೀಡಲಾಗಿದೆಯೆಂಬ ದೂರಿದೆ. ಎನ್ ಎಂ ಆರ್ ಗಳನ್ನು ಮಾತ್ರ ಗ್ರಾಮ ಪಂಚಾಯಿತಿಗಳಿಗೆ ಕಳುಹಿಸಲಾಗುತ್ತಿದೆ.ಒಂದು ಖಚಿತ ಮಾಹಿತಿ ಪ್ರಕಾರ ಶೇ.100ರ ವೆಚ್ಚದ ಕಾಮಗಾರಿಗೆ ಲಂಚವಾಗಿ ಶೆ.5 ಗ್ರಾ.ಪಂ. ಕಾರ್ಯದರ್ಶಿಗೆ, ಶೆ.5 ಗ್ರಾ.ಪಂ. ಅಧ್ಯಕ್ಷರಿಗೆ, ಜಿಲ್ಲಾ ಪಂಚಾಯಿತಿ ಇಂಜಿನಿಯರು, ಕಾರ್ಯನಿರ್ವಾಹಕ ಅಧಿಕಾರಿ, ಡಿಎಸ್1/2,ಲೆಕ್ಕಅಧಿಕ್ಷಕ,ಮ್ಯಾನೆಜರ್,ಇತ್ಯಾದಿಗಳಿಗೆ ಒಟ್ಟಾರೆಯಾಗಿ ಶೇ.16, ಕೆಲಸ ನಿರ್ವಹಿಸದ ನಕಲಿ ಜಾಬ್ ಕರ್ಡುದಾರರಿಗೆ ಶೇ.15 ಹಾಗೂ ಕಛೇರಿಯಲ್ಲೇ ಕೂತು ಅಂದಾಜು ಪಟ್ಟಿ ತಯಾರಿಸುವ ಇಂಜಿನಿಯರನಿಗೆ ಶೇ.3 ಲಂಚರೂಪದ ಕಪ್ಪಕಾಣಿಕೆ ಸಲ್ಲಿಕೆಯಾಗುತ್ತದಂತೆ.ಕಂಪ್ಯೂಟರು ಆಪರೇಟರುಗಳು, ನೀರುಗಂಟಿ, ಕಾರ್ಯದರ್ಶಿ, ಸದಸ್ಯ, ಜವಾನ, ಡ್ರೈವರು ಹೀಗೆ ಬೇಧವಿಲ್ಲದೇ ಎಲ್ಲರೂ ಉದ್ಯೋಗ ಖಾತ್ರಿ ಯೋಜನೆಯ ಕಂಟ್ರಾಕ್ಟರುಗಳೇ! ಸಜ್ಜನಿಕೆಯ, ಪ್ರಾಮಾಣಿಕತನದ ಮಾತನಾಡುವ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಾಲಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ುದ್ಯೋಗ ಖಾತ್ರಿ ಯೋಜನೆ ಬಗ್ಗೆ ದೊಡ್ಡ ಮಾತುಗಳನ್ನಾಡುತ್ತಾರಾದರೂ, ಅನುಷ್ಠಾನಕ್ಕೆ ಇಂತಹ ಗೋಲ್ಮಾಲ್ ಗಳನ್ನು ಪ್ರೋತ್ಸಾಹಿಸುತ್ತಿರುವುದು ಸಂಶಯ ಹುಟ್ಟುಹಾಕಿದೆ. ಪೂರ್ಣ ಪ್ರಮಾಣದ ಸೋಷಿಯಲ್ ಆಡಿಟ್ ಮುಗಿದು ಅಕ್ರಮಗಳ ದೂರುಗಳು ಸಾರ್ವಜನಿಕರಿಂದ ದಾಖಲಾದರೆ ಅಧಿಕಾರಿಗಳ ಅಸಲಿಯತ್ತು ಬಯಲಿಗೆ ಬರುವುದಲ್ಲದೇ ಕಂಬಿ ಎಣಿಸುವ ದಿನಗಳನ್ನು ಲೆಕ್ಕಹಾಕಬಹುದು.

ಮಂಗಳವಾರ, ಜನವರಿ 19, 2010

ಕನ್ನಡ ಬೆಳ್ಳಿಪರದೆಯ 'ಸಿರಿವಂತ' ಕೆಎಸ್ ಅಶ್ವತ್ಥ್

'ಸ್ತ್ರೀರತ್ನ' ಚಿತ್ರದ ಮೂಲಕ ಬೆಳ್ಳಿತೆರೆ ಅಲಂಕರಿಸಿದ ಹಿರಿಯ ಪೋಷಕ ನಟ ಕೆ ಎಸ್ ಅಶ್ವತ್ಥ್ ನಂತರ 370 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶ್ವತ್ಥ್ ಅಭಿನಯಿಸಿದ ಕೆಲವು ಚಿತ್ರಗಳು ಇಂದಿಗೂ ಅಜರಾಮರ. 1960ರಲ್ಲಿ ತೆರೆಕಂಡ ಬಿ ಸರೋಜಾದೇವಿ ಅಭಿನಯದ 'ಕಿತ್ತೂರು ಚೆನ್ನಮ್ಮ' ಚಿತ್ರದಲ್ಲಿ ಸ್ವಾಮೀಜಿಯಾಗಿ ಅಭಿನಯಿಸಿದ್ದರು. ಅದೇ ವರ್ಷ ತೆರೆಕಂಡ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ನಾರದ ಮುನಿಯ ಪಾತ್ರದಲ್ಲಿ ಕಾಣಿಸಿದ್ದರು.

'ಗಾಳಿ ಗೋಪುರ' ಚಿತ್ರದ ಮೂಲಕ ತಾವೊಬ್ಬ ಅಪ್ಪಟ ಕಲಾವಿದ ಎಂಬುದನ್ನು ತೋರಿಸಿಕೊಟ್ಟರು. ಅಶ್ವತ್ಥ್ ಅವರು ಆಂಗ್ಲ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. Seven Wonders of the World ಎಂಬ ಆಂಗ್ಲ ಚಿತ್ರದಲ್ಲಿ ಅಶ್ವತ್ಥ್ ಅಭಿನಯಿಸಿದ್ದರು. ಆಂಗ್ಲ ಚಿತ್ರದಲ್ಲಿ ನಟಿಸಿದ ಮೊದಲ ಕನ್ನಡ ನಟ ಎಂಬ ಖ್ಯಾತಿಯೂ ಅಶ್ವತ್ಥ್ ಅವರಿಗೆ ಸಲ್ಲುತ್ತದೆ.

ಮೇರುನಟ ಅಶ್ವಥ್ ಚಿತ್ರಸಂಪುಟ

ನಾಗಹಾವು, ನಂದಾದೀಪ, ಗೆಜ್ಜೆಪೂಜೆ, ಶರಪಂಜರ, ಜೇನುಗೂಡು, ನ್ಯಾಯವೇ ದೇವರು ಮತ್ತು ಬೆಳ್ಳಿ ಮೋಡ ಚಿತ್ರಗಳು ಅಶ್ವತ್ಥ್ ನಟನೆಯ ಅತ್ಯುತ್ತಮ ಚಿತ್ರಗಳಲ್ಲಿ ಕೆಲವು. ಫುಡ್ ಇನ್ಸ್ ಫೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅಶ್ವತ್ಥ್ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗೆಕ್ಕೆ ಬಂದಿದ್ದರು. ಈ ಬಗ್ಗೆ ಅವರ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಅಶ್ವತ್ಥ್ ನಟನೆಯ ಕೆಲವು ಚಿತ್ರಗಳು
ಸ್ತ್ರೀರತ್ನ, ಅಣ್ಣತಂಗಿ, ನಮ್ಮ ಮಕ್ಕಳು, ಶುಭಮಂಗಳ, ನಾಗರಹಾವು, ಶ್ರೀ ಪುರಂದರದಾಸರು, ಕಸ್ತೂರಿ ನಿವಾಸ, ಉಪಾಸನೆ, ಮುತ್ತಿನ ಹಾರ, ಪರಾಜಿತ, ಜೇನುಗೂಡು, ಹೃದಯ ಸಂಗಮ, ಹೇಮರೆಡ್ಡಿ ಮಲ್ಲಮ್ಮ, ನಾ ನಿನ್ನ ಬಿಡಲಾರೆ, ನವಜೀವನ, ಸಂಧ್ಯಾರಾಗ, ಗೆಜ್ಜೆ ಪೂಜೆ, ಮಹಾಸತಿ ಅನಸೂಯ, ಒಂದೇ ಬಳ್ಳಿಯ ಹೂಗಳು, ಬೆಳ್ಳಿ ಮೋಡ, ಅನುರಾಧ, ಕರುಣಾಮಯಿ, ಕಾಚದೇವಯಾನಿ, ಕೋಕಿಲ ವಾಣಿ, ಚಿಂತಾಮಣಿ, ಪ್ರಭುಲಿಂಗ ಲೀಲೆ, ಭೂ ಕೈಲಾಸ, ಮಂಗಲ ಯೋಗ, ಮನೆಗೆ ಬಂದ ಮಹಾಲಕ್ಷ್ಮಿ, ಮಹಿಷಾಸುರ ಮರ್ದಿನಿ, ರಣಧೀರ ಕಂಠೀರವ, ಭಕ್ತ ಕನಕದಾಸ, ಕುಲವಧು, ನಂದಾದೀಪ, ಮಹಾಶಿಲ್ಪಿ, ಪ್ರೇಮಮಯಿ, ಸುಬ್ಬಾ ಶಾಸ್ತ್ರಿ, ಸತಿ ಸುಕನ್ಯ, ಇಮ್ಮಡಿ ಪುಲಿಕೇಶಿ, ಜೇಡರ ಬಲೆ, ಬೆಂಗಳೂರು ಮೇಲ್, ಅಮ್ಮ, ಭಗೀರಥಿ, ಕಲ್ಪವೃಕ್ಷ, ಉಯ್ಯಾಲೆ, ಗೃಹಲಕ್ಷ್ಮಿ, ಅನಿರೀಕ್ಷಿತ, ನಮ್ಮ ಮನೆ, ವಿಷ ಕನ್ಯೆ, ಬಾಲ ಪಂಜರ, ದೇವರು ಕೊಟ್ಟ ವರ, ಮಾತು ತಪ್ಪದ ಮಗ, ಆಟೋ ರಾಜ, ನಾರದ ವಿಜಯ, ಸಿರಿವಂತ, ಶಬ್ದವೇದಿ.
ತಿಪ್ಪಗೊಂಡನಹಳ್ಳಿ ಬಸ್ ಹತ್ತಿದ ಜಗ್ಗೇಶ್, ಕೋಮಲ್
ನವರಸ ನಾಯಕ ಜಗ್ಗೇಶ್ ಅಭಿನಯಕ್ಕೆ ಮನ ಸೋಲದವದರ ಸಂಖ್ಯೆ ವಿರಳ. ತಮ್ಮ ಅಮೋಘ ಅಭಿನಯದಿಂದ ಅಭಿಮಾನಿ ಸಮೂಹಕ್ಕೆ ನಗೆಯ ರಸದೌತಣ ನೀಡುವ ಅಪರೂಪದ ಕಲಾವಿದರವರು. ಅವರ ಸಹೋದರ ಕೋಮಲ್ ಕೂಡ ಮೇಲಿನ ಮಾತಿಗೆ ಹೊರತಲ್ಲ. ನಿರ್ದೇಶನ, ಸಂಗೀತ ನಿರ್ದೇಶನದೊಂದಿಗೆ, ನಟನೆಯಲ್ಲೂ ಅದ್ಭುತ ಯಶಸ್ಸು ಕಂಡವರು ಸಾಧುಕೊಕಿಲಾ. ಇವರನ್ನು ತೆರೆಯಲ್ಲಿ ಕಂಡ ಕೂಡಲೆ ಚಪ್ಪಾಳೆ, ಶಿಳ್ಳೆಗಳದೇ ಆರ್ಭಟ. ಮತ್ತೊಬ್ಬ ಕಲಾವಿದ ರಾಜುತಾಳಿಕೋಟೆ. ರಂಗಭೂಮಿಯಲ್ಲಿ ಹೆಚ್ಚಿನ ಅನುಭವ. ‘ಮನಸಾರೆ’ ಚಿತ್ರದಲ್ಲಿ ಅಭಿನಯಿಸಿ ನೋಡುಗರ ಮನಸೂರೆಗೊಂಡರು. ಇಂತ ಅನುಭವಿ ಕಲಾವಿದರ ಅಭಿನಯ ‘ಲಿಫ್ಟ್ ಕೊಡ್ಲಾ’ ಚಿತ್ರಕ್ಕೆ ಲಭ್ಯ. .

ಈ ನಾಲ್ವರು ಕಲಾವಿದರು ಒಂದೇ ಬಸ್‌ನಲ್ಲಿ ಕುಳಿತು ತಿಪ್ಪಗೊಂಡನಹಳ್ಳಿ ಸುತ್ತಾಮುತ್ತಾ ಪ್ರಯಾಣಿಸುತ್ತಾರೆ. ಆ ಬಸ್ಸಿನಲ್ಲಿ ಹಾಸ್ಯಭರಿತ ಮಾತುಗಳನ್ನು ಆಡುತ್ತಾರೆ. ಈ ಸನ್ನಿವೇಶವನ್ನು ‘ಲಿಫ್ಟ್ ಕೊಡ್ಲಾ’ ಚಿತ್ರಕ್ಕಾಗಿ ಚಿತ್ರೀಕರಿಸಿಕೊಂಡ ನಿರ್ದೇಶಕ ಅಶೋಕ್ ಕಶ್ಯಪ್ ಸಂತಸದಲಿದ್ದಾರೆ. ‘ಈ ನಾಲ್ವರು ನಟರ ಅಭಿನಯ ಅದ್ಭುತ’ ಎಂದು ಪ್ರಶಂಸೆ ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಸಿಕರಿಗೆ ಈ ಚಿತ್ರ ಉತ್ತಮ ಮನೋರಂಜನೆ ನೀಡುವುದಂತು ಸತ್ಯ.

ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ನಿರ್ಮಿಸುತ್ತಿರುವ ‘ಲಿಫ್ಟ್ ಕೊಡ್ಲಾ’ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ರಾಂನಾರಾಯಣ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಛಾಯಾಗ್ರಹಣದ ನಿರ್ವಹಣೆ ಮಾಡುತ್ತಿದ್ದಾರೆ. ಜಗ್ಗೇಶ್, ಕೋಮಲ್, ಅರ್ಚನಾಗುಪ್ತಾ, ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್‌ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರು ಚಿತ್ರದ ತಾರಾಗಣದಲಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ಪಂಚರಂಗಿ' ಗಿಳಿ ಹಾರಿಬಿಟ್ಟ ಯೋಗರಾಜ ಭಟ್

ಚಿತ್ರ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ 'ಪಂಚರಂಗಿ'ಎಂದುಹೆಸರಿಟ್ಟಿದ್ದಾರೆ. ಪಂಚರಂಗಿ ಎಂದರೆ ಐದು ಬಣ್ಣಗಳು ಎಂದು ಅರ್ಥ ಬರುತ್ತದೆ. ಐದು ಬಣ್ಣಗಳ ಪ್ರತೀಕವೇ 'ಪಂಚರಂಗಿ' ಚಿತ್ರ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಈ ಐದು ಬಣ್ಣಗಳು ಭಟ್ಟರ ದೃಷ್ಟಿಕೋನದಲ್ಲಿ ಭಿನ್ನವಾಗಿವೆ. ವಿದ್ಯೆ, ಉದ್ಯೋಗ, ಪ್ರೀತಿ, ಪಾಲಕರು ಹಾಗೂ ಮದುವೆ...ಇವು ಭಟ್ಟರ ಕಲ್ಪನೆಯ ಪಂಚರಂಗುಗಳು. ಈ ಐದು ಬಣ್ಣಗಳನ್ನು ಬೆಸೆಯುವ ಕಾರ್ಯ ಫೆಬ್ರವರಿ 3ರಿಂದ ಆರಂಭವಾಗಲಿದೆ. ಚಿತ್ರೀಕರಣ ಬೆಂಗಳೂರು, ಕರಾವಳಿ ಪ್ರದೇಶದ ರಮಣೀಯ ಪ್ರದೇಶಗಳಲ್ಲಿ ಸಾಗಲಿದೆ.

ಚಿತ್ರದ ಕತೆಗೆ ರಮಣೀಯ ದೃಶ್ಯಗಳು ಹೆಚ್ಚು ಸೂಕ್ತ. ಹಾಗಾಗಿ ಈ ಬಾರಿ ಭಟ್ಟರ ಪಯಣ ಕೊಡಗಿನಿಂದ ಕರಾವಳಿ ಕಡೆಗೆ ಸಾಗಲಿದೆಯಂತೆ. ''ಮನುಷ್ಯ ತನ್ನ ಆಸೆಗಳನ್ನು ಐದು ಅಂಶಗಳ ಮೂಲಕವೇ ಪೂರೈಸಿಕೊಳ್ಳಬೇಕ'' ಎಂಬುದು ಚಿತ್ರದ ಒನ್ ಲೈನ್ ಕತೆ.

ಪಂಚರಂಗಿಯ ನಾಯಕ ದಿಗಂತ್. ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಚಿತ್ರದ ನಾಯಕಿ. ಭಟ್ಟರ ಜೊತೆ 'ಮುಂಗಾರು ಮಳೆ' ಹಾಗೂ 'ಮನಸಾರೆ' ಚಿತ್ರಗಳಿಗೆ ಕೆಲಸ ಮಾಡಿದ್ದ ಮನೋಮೂರ್ತಿ ಚಿತ್ರದ ಸಂಗೀತ ನಿರ್ದೇಶಕರು. ಛಾಯಾಗ್ರಾಹಣದ ಜಬಾಬ್ದಾರಿಯನ್ನು ತ್ಯಾಗು ಅವರಿಗೆ ವಹಿಸಿದ್ದಾರೆ

ತೆಲುಗಿನ 'ಕಿಕ್' ಕನ್ನಡಕ್ಕೆ ತರುತ್ತಿದ್ದಾರೆ ಸುದೀಪ್

ಸಂವೇದಾನಾಶೀಲ ನಟ ಸುದೀಪ್ ಸಿನಿಮಾ ವೃತ್ತಿ ಜೀವನದ ಗ್ರಾಫ್ ಏರುಗತಿಯಲ್ಲಿ ಸಾಗುತ್ತಿದೆ. ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಸುದೀಪ್ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ರಣ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ರಾಮ್ ಗೋಪಾಲ್ ವರ್ಮಾರ ತೆಲುಗಿನ 'ರಕ್ತ ಚರಿತ್ರ' ಚಿತ್ರದಲ್ಲೂ ಸುದೀಪ್ ಅಭಿನಯಿಸುತ್ತಿದ್ದಾರೆ. ಈಗ ತೆಲುಗಿನ ಮತ್ತೊಂದು ಸೂಪರ್ ಹಿಟ್ ಚಿತ್ರ 'ಕಿಕ್'ನ್ನು ಕನ್ನಡಕ್ಕೆ ರೀಮೇಕ್ ಮಾಡಲು ಸುದೀಪ್ ಸಿದ್ಧತೆ ನಡೆಸಿದ್ದಾರೆ. ತೆಲುಗಿನಲ್ಲಿ ರವಿತೇಜ ನಟಿಸಿದ್ದ ಭಿನ್ನ ಕಥಾಹಂದರದ 'ಕಿಕ್'ಚಿತ್ರ ತನ್ನ ವಿಭಿನ್ನ ನಿರೂಪಣೆಯಿಂದ ಪ್ರೇಕ್ಷಕರನ್ನು ರಂಜಿಸಿತ್ತು.

ಇದೀಗ ಅದೇ 'ಕಿಕ್'ನಲ್ಲಿ ಸುದೀಪ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ರವಿತೇಜ ನಟಿಸಿದ್ದ 'ವಿಕ್ರಮಾರ್ಕುಡು' ಚಿತ್ರ ಕನ್ನಡಕ್ಕೆ 'ಈ ಶತಮಾನದ ವೀರ ಮದಕರಿ'ಯಾಗಿ ರೀಮೇಕ್ ಆಗಿತ್ತು. ದರ್ಶನ್ ರ'ಪೊರ್ಕಿ' ಚಿತ್ರದಲ್ಲಿ ನಟಿಸುತ್ತಿರುವ ಪ್ರಣೀತಾ ಚಿತ್ರದ ನಾಯಕಿ ಎಂಬುದು ಸದ್ಯದ ಸುದ್ದಿ.

ಶುಕ್ರವಾರ, ಜನವರಿ 15, 2010

ಅನೆ ದಾಳಿಗೆ ವರ್ಷದ ಮೊದಲ ಬಲಿ


Tusk attacked a former on 14th Jan. around 5.00pm at Arkalgud Taluk nearby Abbur Kattepur Forest. Nataraj(39) was died at the spot, his brother Nagendra escaped from the tusk attack. MLA Manju and forest officials visited the spot and console the family of Nataraj.

ಮಂಗಳವಾರ, ಜನವರಿ 12, 2010

ಗುರುಪ್ರಸಾದ್ ಡೈರೆಕ್ಟರ್ಸ್ ಸ್ಪೆಷಲ್‌: ಕೋಮಲ್ ಸ್ಥಾನಕ್ಕೆ ಉಪೇಂದ್ರ?

ಜಗ್ಗೇಶ್ ಜೊತೆಗೆ ವೈಮನಸ್ಸಿನ ನಂತರ ತಮ್ಮ ಕೋಮಲ್‌ಗೆ ಗಾಳ ಹಾಕಿದ್ದ ಎದ್ದೇಳು ಮಂಜುನಾಥ ಚಿತ್ರದ ಖ್ಯಾತಿಯ ಗುರುಪ್ರಸಾದ್ ಡೈರೆಕ್ಟರ್ ಸ್ಪೆಷಲ್ ಎಂಬ ಚಿತ್ರ ನಿರ್ದೇಶಿಸುತ್ತಿರೋದು ಹಳೆಯ ವಿಚಾರ. ಅದರಿಂದ ಕೋಮಲ್ ಕೂಡಾ, ನನಗೆ ನಮ್ಮವರನ್ನೇ ಹಾಸ್ಯದ ನೆಪದಲ್ಲಿ ವ್ಯಂಗ್ಯ ಮಾಡಲು ಸಾಧ್ಯವಿಲ್ಲ ಎಂದು ಹೊರಬಂದಿರುವುದೂ ಕೂಡಾ ಹಳೇ ಸುದ್ದಿಯೇ. ಆದರೆ ಈಗ ಇದೇ ಪಾತ್ರಕ್ಕೆ ಗುರುಪ್ರಸಾದ್ ಉಪೇಂದ್ರ ಅವರಿಗೆ ಗಾಳ ಹಾಕುತ್ತಿರುವ ಸುದ್ದಿ ಗಾಂಧಿ ನಗರದಲ್ಲಿ ಸುತ್ತಾಡುತ್ತಿದೆ.

ಚಿತ್ರ ಕನ್ನಡ ಚಿತ್ರರಂಗದ ನಿರ್ದೇಶಕರನ್ನೇ ವ್ಯಂಗ್ಯ ಮಾಡುವಂಥ ಕಥಾಹಂದರ ಹೊಂದಿದೆ ಎಂಬ ಸುದ್ದಿಯೂ ಇದೆ. ಇಂಥ ಪಾತ್ರದಲ್ಲಿ ನಟಿಸುವಷ್ಟು ದೊಡ್ಡವ ನಾನಲ್ಲ ಎಂದು ಕೋಮಲ್ ಸೂಕ್ಷ್ಮವಾಗಿ ಹೇಳಿ ಗುರುಪ್ರಸಾದ್ ಬಳಗದಿಂದ ಹೊರನಡೆದಿದ್ದರು.

ಕೋಮಲ್ ನಿರಾಕರಿಸಿದ ಪಾತ್ರಕ್ಕೆ ಸೂಕ್ತ ನಾಯಕನನ್ನು ತರಲು ಗುರುಪ್ರಸಾದ್ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಗಾಂಧಿನಗರ ಮೂಲಗಳ ಪ್ರಕಾರ, ಆ ಸ್ಥಾನವನ್ನು ರಿಯಲ್ ಸ್ಟಾರ್ ಉಪೇಂದ್ರ ಅಲಂಕರಿಸಲಿದ್ದಾರೆ. ಈಗಾಗಲೇ ಉಪೇಂದ್ರ ಹಾಗೂ ಗುರುಪ್ರಸಾದ್ ಪಾತ್ರ, ಚಿತ್ರಕಥೆ ಬಗ್ಗೆ ಗಹನವಾದ ಚರ್ಚೆ ಮಾಡುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಡಿಫರೆಂಟ್ ಪಾತ್ರಗಳು ಸಿಕ್ಕರೆ ಆಸಕ್ತಿಯಿಂದ ಮುಂದೆ ಬರುವ ಉಪೇಂದ್ರ ಗುರುಗೆ ಉತ್ತಮ ಜೋಡಿಯಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

ಯಾರು ನನ್ನ ಹೀರೋ ಆಗ್ತೀರಿ?: ಪೂಜಾ ಗಾಂಧಿ!


ರಾಖಿ ಸಾವಂತ್ ರಿಯಾಲಿಟಿ ಶೋ ಮೂಲಕ ನನ್ನ ಗಂಡ ಯಾರಾಗ್ತೀರಿ ಅಂತ ರಾಖಿ ಕಾ ಸ್ವಯಂವರ್ ನಡೆಸಿದ್ದು ಟಿವಿ ಮಾಧ್ಯಮದಲ್ಲೇ ದೊಡ್ಡ ಸುದ್ದಿಯಾಯ್ತು. ಈಗ ಅದೇ ಮಾದರಿಯಲ್ಲಿ ಕನ್ನಡದ ಪೂಜಾ ಗಾಂಧಿ ಹೆಜ್ಜೆಯಿಟ್ಟದ್ದಾಳೆ. ಆದರೆ ಖಂಡಿತವಾಗಿಯೂ ಆಕೆ ತನ್ನ ಗಂಡನಾಗುವಾತನನ್ನು ಹುಡುಕಿಕೊಂಡು ಮದುವೆಯಾಗುತ್ತಿಲ್ಲ. ಆದರೆ ತನ್ನ ಮುಂಬರುವ ಚಿತ್ರಕ್ಕಾಗಿ ಹೀರೋನನ್ನು ಆಕೆಯೇ ಆಯ್ಕೆ ಮಾಡುತ್ತಾಳೆ!

ಎಸ್!!! ನಟನೆ, ನೃತ್ಯ ಗೊತ್ತಿದ್ದು, ಸಿನಿಮಾ ರಂಗಕ್ಕೆ ಬರಲು ಆಸಕ್ತಿಯಿದ್ದು ದಾರಿ ಯಾರನ್ನು ಸಂಪರ್ಕಿಸಲೆಂದು ದಾರಿ ಕಾಣದಾದ ಯುವ ಪ್ರತಿಭೆಗಳಿಗಿದು ಸ್ಯಾಂಡಲ್ ವುಡ್ಡಿಗೆ ಎಂಟ್ರಿ ಕೊಡಲು ಸುವರ್ಣಾವಕಾಶ. ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ತಾನೇ ಖುದ್ದಾಗಿ ಒಬ್ಬನನ್ನು ಅಂತಿಮವಾಗಿ ಆಯ್ಕೆ ಮಾಡಲಿದ್ದಾಳೆ. ಆತನೇ ಮುಂದೆ ಆಕೆಯ ಅಭಿನಯದ ಚಿತ್ರಕ್ಕೆ ನಾಯಕ ನಟ.

ಯಾರು ನನ್ನ ಹೀರೋ ಆಗ್ತೀರಿ?: ಈ ರಿಯಾಲಿಟಿ ಶೋ 26 ಕಂತುಗಳನ್ನು ಹೊಂದಿದೆ. ಖಾಸಗಿ ಚಾನಲ್ ಒಂದು ಈ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ಪೂಜಾ ಸದ್ಯಕ್ಕೆ ಯಾವುದೇ ಚಿತ್ರಗಳಿಗೆ ಸಹಿ ಮಾಡುತ್ತಿಲ್ಲ. ಅಳೆದು ತೂಗಿ ಮುಂದುವರಿಯುವ ನಿರ್ಧಾರ ಆಕೆ ಮಾಡಿದ್ದಾಳೆ. ಯಾಕೆಂದರೆ ಸದ್ಯ ಆಕೆಯ ಬಹುತೇಕ ಚಿತ್ರಗಳು ತೋಪಾಗಿವೆ. ಅಷ್ಟೇ ಅಲ್ಲ, ಈ ವರ್ಷದಲ್ಲಿ ಉತ್ತಮ ಕಮರ್ಷಿಯಲ್ ಚಿತ್ರಗಳನ್ನು ನೀಡಬೇಕೆಂದು ಪೂಜಾ ತೀರ್ಮಾನಿಸಿದ್ದಾರೆ. ಈ ಹಿಂದೆ ಹಲವು ಮಾದರಿಯ ಪಾತ್ರಗಳನ್ನು ಸ್ವೀಕರಿಸಿ ನಟಿಸಿ, ತನ್ನ ಅದೃಷ್ಟ ಪರೀಕ್ಷೆ ಮಾಡಿದ ಪೂಜಾ, ಇನ್ನು ತುಂಬ ಜಾಗರೂಕತೆಯಿಂದ ಚಿತ್ರಗಳ ಆಯ್ಕೆ ಮಾಡಲು ತೀರ್ಮಾನಿಸಿದ್ದಾರೆ.

ಕನ್ನಡದ ಖಾಸಗಿ ಚಾನಲ್ ರಾಖಿ ಸಾವಂತ್ ಥರಹದ ರಿಯಾಲಿಟಿ ಶೋ ನಡೆಸಲು ತೀರ್ಮಾನಿಸಿತ್ತು. ಆದರೆ, ಕನ್ನಡದ ಮಟ್ಟಿಗೆ ಅದು ತೀರಾ ಬೋಲ್ಡ್ ಆಯಿತೆಂದು ಚಾನಲ್ ಇದರಲ್ಲೇ ಕೊಂಚ ಡಿಫರೆಂಟ್ ಕಾರ್ಯಕ್ರಮ ನಡೆಸಿಕೊಡಲು ತೀರ್ಮಾನಿಸಿತ್ತು. ಅದೇ ಸಂದರ್ಭ ಪೂಜಾರ ಮುಂದಿನ ಚಿತ್ರಕ್ಕೆ ನಾಯಕ ನಟ ಬೇಕಿತ್ತು. ರಾಖಿ ಸಾವಂತ್‌ರ ಸ್ವಯಂವರ ಮಾದರಿಯಲ್ಲೇ ಹೀರೋನ ಹುಡುಕಾಟವನ್ನು ರಿಯಾಲಿಟಿ ಶೋ ಮೂಲಕ ಮಾಡಿದರೆ ಹೇಗೆ ಅಂತ ಚಾನಲ್ ಚಿಂತಿಸಿತು. ಎಲ್ಲ ಒಕೆ ಆಗಿ, ಸದ್ಯದಲ್ಲೇ ಈ ರಿಯಾಲಿಟಿ ಶೋ ತೆರೆಯ ಮೇಲೆ ಬರಲಿದೆ.

ಈ ಚಿತ್ರ ಕುಮಾರ ಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಬ್ಯಾನರ್ ಮೂಲಕ ಹೊರಬರುತ್ತಿದೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ. ನಾಯಕಿ ಪೂಜಾ ಗಾಂಧಿ. ಈಗಾಗಲೇ ಟಿವಿ ಚಾಲ್ ರಾಜ್ಯದ ಆರು ಪ್ರಮುಖ ನಗರಗಳಲ್ಲಿ ಸಂಚರಿಸಿ ಪ್ರತಿಭೆಗಳ ಆಯ್ಕೆ ನಡೆಸುತ್ತಿದೆ. ಅಂತಿಮವಾಗಿ ಆಯ್ಕೆಯಾದ 12 ಮಂದಿಗೆ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಗಲಿದೆ.

ನಾಯಕರ ಬರವೇ?: ಹಾಗಾದರೆ ಕನ್ನಡದಲ್ಲಿ ನಾಯಕ ನಟರಿಗೇನು ಬರವೇ ಅಂತ ಪೂಜಾರನ್ನೇ ಕೇಳಿದರೆ, ಆಕೆ ಹೇಳೋದು ಹೀಗೆ. ಕನ್ನಡದ್ಲಲಿ ಬೇಕಾದಷ್ಟು ನಟರಿದ್ದಾರೆ. ಅತ್ಯುತ್ತಮ ಪ್ರತಿಭೆಗಳಿವೆ. ಆದರೆ ಈ ಕಾರ್ಯಕ್ರಮದ ಮೂಲಕ ಹೊಸ ಪ್ರತಿಭೆಗೆ ಸಿನಿಮಮಾ ರಂಗಕ್ಕೆ ಬರಲು ದಾರಿ ಮಾಡುತ್ತಿದ್ದೇವೆ ಎನ್ನುತ್ತಾರೆ.

ರಿಯಾಲಿಟಿ ಶೋನಲ್ಲಿ ಏನೇನಿರುತ್ತೆ ಎಂದರೆ ಪೂಜಾ ಸ್ವಲ್ಪ ಗುಟ್ಟನ್ನು ಬಿಟ್ಟುಕೊಟ್ಟರು. ನೋಡಲು ಸುಂದರ, ಸದೃಢ ಮೈಕಟ್ಟು, ಎಲ್ಲರೊಂದಿಗೆ ಚೆನ್ನಾಗಿ ಬೆರೆಯುವ ವ್ಯಕ್ತಿತ್ವ, ನೃತ್ಯ, ನಟನೆ ಗೊತ್ತಿರಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ, ಪೂಜಾರೇ ಸ್ವತಃ ಈ 12 ಮಂದಿಯ ಜೊತೆಗೆ ತುಣುಕುಗಳಲ್ಲಿ ಅಬಿನಯಿಸಿ ಅವರ ಅಭಿನಯ ಚಾತುರ್ಯ ಪರೀಕ್ಷೆ ಮಾಡಲಿದ್ದಾರೆ. ಅಂಕ ಹಾಕಲು ಸಿನಿಮಾ ಮಂದಿಯೂ ಶೋಗೆ ಬರುತ್ತಾರೆ. ಅಂತಿಮವಾಗಿ ವಿಜಯಿಯಾದಾತ ಪೂಜಾಳ ಚಿತ್ರಕ್ಕೆ ಹೀರೋ!!!

ಏನಂತೀರಾ? ನೀವೂ ಹೀರೋ ಆಗ್ತೀರಾ? ಹಾಗಾದ್ರೆ ತಡ ಬೇಡ, ರೆಡಿಯಾಗಿ!!!