ಮಂಗಳವಾರ, ಜನವರಿ 12, 2010

ಯಾರು ನನ್ನ ಹೀರೋ ಆಗ್ತೀರಿ?: ಪೂಜಾ ಗಾಂಧಿ!


ರಾಖಿ ಸಾವಂತ್ ರಿಯಾಲಿಟಿ ಶೋ ಮೂಲಕ ನನ್ನ ಗಂಡ ಯಾರಾಗ್ತೀರಿ ಅಂತ ರಾಖಿ ಕಾ ಸ್ವಯಂವರ್ ನಡೆಸಿದ್ದು ಟಿವಿ ಮಾಧ್ಯಮದಲ್ಲೇ ದೊಡ್ಡ ಸುದ್ದಿಯಾಯ್ತು. ಈಗ ಅದೇ ಮಾದರಿಯಲ್ಲಿ ಕನ್ನಡದ ಪೂಜಾ ಗಾಂಧಿ ಹೆಜ್ಜೆಯಿಟ್ಟದ್ದಾಳೆ. ಆದರೆ ಖಂಡಿತವಾಗಿಯೂ ಆಕೆ ತನ್ನ ಗಂಡನಾಗುವಾತನನ್ನು ಹುಡುಕಿಕೊಂಡು ಮದುವೆಯಾಗುತ್ತಿಲ್ಲ. ಆದರೆ ತನ್ನ ಮುಂಬರುವ ಚಿತ್ರಕ್ಕಾಗಿ ಹೀರೋನನ್ನು ಆಕೆಯೇ ಆಯ್ಕೆ ಮಾಡುತ್ತಾಳೆ!

ಎಸ್!!! ನಟನೆ, ನೃತ್ಯ ಗೊತ್ತಿದ್ದು, ಸಿನಿಮಾ ರಂಗಕ್ಕೆ ಬರಲು ಆಸಕ್ತಿಯಿದ್ದು ದಾರಿ ಯಾರನ್ನು ಸಂಪರ್ಕಿಸಲೆಂದು ದಾರಿ ಕಾಣದಾದ ಯುವ ಪ್ರತಿಭೆಗಳಿಗಿದು ಸ್ಯಾಂಡಲ್ ವುಡ್ಡಿಗೆ ಎಂಟ್ರಿ ಕೊಡಲು ಸುವರ್ಣಾವಕಾಶ. ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ತಾನೇ ಖುದ್ದಾಗಿ ಒಬ್ಬನನ್ನು ಅಂತಿಮವಾಗಿ ಆಯ್ಕೆ ಮಾಡಲಿದ್ದಾಳೆ. ಆತನೇ ಮುಂದೆ ಆಕೆಯ ಅಭಿನಯದ ಚಿತ್ರಕ್ಕೆ ನಾಯಕ ನಟ.

ಯಾರು ನನ್ನ ಹೀರೋ ಆಗ್ತೀರಿ?: ಈ ರಿಯಾಲಿಟಿ ಶೋ 26 ಕಂತುಗಳನ್ನು ಹೊಂದಿದೆ. ಖಾಸಗಿ ಚಾನಲ್ ಒಂದು ಈ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ಪೂಜಾ ಸದ್ಯಕ್ಕೆ ಯಾವುದೇ ಚಿತ್ರಗಳಿಗೆ ಸಹಿ ಮಾಡುತ್ತಿಲ್ಲ. ಅಳೆದು ತೂಗಿ ಮುಂದುವರಿಯುವ ನಿರ್ಧಾರ ಆಕೆ ಮಾಡಿದ್ದಾಳೆ. ಯಾಕೆಂದರೆ ಸದ್ಯ ಆಕೆಯ ಬಹುತೇಕ ಚಿತ್ರಗಳು ತೋಪಾಗಿವೆ. ಅಷ್ಟೇ ಅಲ್ಲ, ಈ ವರ್ಷದಲ್ಲಿ ಉತ್ತಮ ಕಮರ್ಷಿಯಲ್ ಚಿತ್ರಗಳನ್ನು ನೀಡಬೇಕೆಂದು ಪೂಜಾ ತೀರ್ಮಾನಿಸಿದ್ದಾರೆ. ಈ ಹಿಂದೆ ಹಲವು ಮಾದರಿಯ ಪಾತ್ರಗಳನ್ನು ಸ್ವೀಕರಿಸಿ ನಟಿಸಿ, ತನ್ನ ಅದೃಷ್ಟ ಪರೀಕ್ಷೆ ಮಾಡಿದ ಪೂಜಾ, ಇನ್ನು ತುಂಬ ಜಾಗರೂಕತೆಯಿಂದ ಚಿತ್ರಗಳ ಆಯ್ಕೆ ಮಾಡಲು ತೀರ್ಮಾನಿಸಿದ್ದಾರೆ.

ಕನ್ನಡದ ಖಾಸಗಿ ಚಾನಲ್ ರಾಖಿ ಸಾವಂತ್ ಥರಹದ ರಿಯಾಲಿಟಿ ಶೋ ನಡೆಸಲು ತೀರ್ಮಾನಿಸಿತ್ತು. ಆದರೆ, ಕನ್ನಡದ ಮಟ್ಟಿಗೆ ಅದು ತೀರಾ ಬೋಲ್ಡ್ ಆಯಿತೆಂದು ಚಾನಲ್ ಇದರಲ್ಲೇ ಕೊಂಚ ಡಿಫರೆಂಟ್ ಕಾರ್ಯಕ್ರಮ ನಡೆಸಿಕೊಡಲು ತೀರ್ಮಾನಿಸಿತ್ತು. ಅದೇ ಸಂದರ್ಭ ಪೂಜಾರ ಮುಂದಿನ ಚಿತ್ರಕ್ಕೆ ನಾಯಕ ನಟ ಬೇಕಿತ್ತು. ರಾಖಿ ಸಾವಂತ್‌ರ ಸ್ವಯಂವರ ಮಾದರಿಯಲ್ಲೇ ಹೀರೋನ ಹುಡುಕಾಟವನ್ನು ರಿಯಾಲಿಟಿ ಶೋ ಮೂಲಕ ಮಾಡಿದರೆ ಹೇಗೆ ಅಂತ ಚಾನಲ್ ಚಿಂತಿಸಿತು. ಎಲ್ಲ ಒಕೆ ಆಗಿ, ಸದ್ಯದಲ್ಲೇ ಈ ರಿಯಾಲಿಟಿ ಶೋ ತೆರೆಯ ಮೇಲೆ ಬರಲಿದೆ.

ಈ ಚಿತ್ರ ಕುಮಾರ ಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಬ್ಯಾನರ್ ಮೂಲಕ ಹೊರಬರುತ್ತಿದೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ. ನಾಯಕಿ ಪೂಜಾ ಗಾಂಧಿ. ಈಗಾಗಲೇ ಟಿವಿ ಚಾಲ್ ರಾಜ್ಯದ ಆರು ಪ್ರಮುಖ ನಗರಗಳಲ್ಲಿ ಸಂಚರಿಸಿ ಪ್ರತಿಭೆಗಳ ಆಯ್ಕೆ ನಡೆಸುತ್ತಿದೆ. ಅಂತಿಮವಾಗಿ ಆಯ್ಕೆಯಾದ 12 ಮಂದಿಗೆ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಗಲಿದೆ.

ನಾಯಕರ ಬರವೇ?: ಹಾಗಾದರೆ ಕನ್ನಡದಲ್ಲಿ ನಾಯಕ ನಟರಿಗೇನು ಬರವೇ ಅಂತ ಪೂಜಾರನ್ನೇ ಕೇಳಿದರೆ, ಆಕೆ ಹೇಳೋದು ಹೀಗೆ. ಕನ್ನಡದ್ಲಲಿ ಬೇಕಾದಷ್ಟು ನಟರಿದ್ದಾರೆ. ಅತ್ಯುತ್ತಮ ಪ್ರತಿಭೆಗಳಿವೆ. ಆದರೆ ಈ ಕಾರ್ಯಕ್ರಮದ ಮೂಲಕ ಹೊಸ ಪ್ರತಿಭೆಗೆ ಸಿನಿಮಮಾ ರಂಗಕ್ಕೆ ಬರಲು ದಾರಿ ಮಾಡುತ್ತಿದ್ದೇವೆ ಎನ್ನುತ್ತಾರೆ.

ರಿಯಾಲಿಟಿ ಶೋನಲ್ಲಿ ಏನೇನಿರುತ್ತೆ ಎಂದರೆ ಪೂಜಾ ಸ್ವಲ್ಪ ಗುಟ್ಟನ್ನು ಬಿಟ್ಟುಕೊಟ್ಟರು. ನೋಡಲು ಸುಂದರ, ಸದೃಢ ಮೈಕಟ್ಟು, ಎಲ್ಲರೊಂದಿಗೆ ಚೆನ್ನಾಗಿ ಬೆರೆಯುವ ವ್ಯಕ್ತಿತ್ವ, ನೃತ್ಯ, ನಟನೆ ಗೊತ್ತಿರಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ, ಪೂಜಾರೇ ಸ್ವತಃ ಈ 12 ಮಂದಿಯ ಜೊತೆಗೆ ತುಣುಕುಗಳಲ್ಲಿ ಅಬಿನಯಿಸಿ ಅವರ ಅಭಿನಯ ಚಾತುರ್ಯ ಪರೀಕ್ಷೆ ಮಾಡಲಿದ್ದಾರೆ. ಅಂಕ ಹಾಕಲು ಸಿನಿಮಾ ಮಂದಿಯೂ ಶೋಗೆ ಬರುತ್ತಾರೆ. ಅಂತಿಮವಾಗಿ ವಿಜಯಿಯಾದಾತ ಪೂಜಾಳ ಚಿತ್ರಕ್ಕೆ ಹೀರೋ!!!

ಏನಂತೀರಾ? ನೀವೂ ಹೀರೋ ಆಗ್ತೀರಾ? ಹಾಗಾದ್ರೆ ತಡ ಬೇಡ, ರೆಡಿಯಾಗಿ!!!

ಕಾಮೆಂಟ್‌ಗಳಿಲ್ಲ: