ಶನಿವಾರ, ಜನವರಿ 30, 2010

ಸರ್ಕಾರಿ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಲು ಕಾನೂನು ಅರಿವು ಅಗತ್ಯ

ಅರಕಲಗೂಡು: ಸರ್ಕಾರಿ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಲು ಕಾನೂನು ಅರಿವು ಅಗತ್ಯ ಎಂದು ತ್ವರಿತಗತಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧಿಶ ಹಾಲಪ್ಪ ಹೇಳಿದ್ದಾರೆ. ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಾಡಾಗಿದ್ದ ಒಂದು ದಿನದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಕಾನೂನು ಅರಿವಿನ ಕೊರತೆಯಿಂದಾಗಿ ಜನಸಾಮಾನ್ಯರಿಗೆ ಸರ್ಕಾರಿ ಸವಲತ್ತುಗಳನ್ನು ಸರಿಯಾಗಿ ಸಧ್ಭಳಕೆ ಮಾಡಿಕೊಳ್ಳಲು ಆಗುತ್ತಿಲ್ಲ, ಕಾನೂನುಗಳು ಜನರ ಅನುಕೂಲಕ್ಕಾಗಿ ಇವೆ ಅವನ್ನು ಅರಿತು ಮುನ್ನೆಡೆದರೆ ಏಳಿಗೆ ಸಾಧ್ಯ ಎಂದರು. ಕಾನೂನು ಅರಿವಿನ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವಾಗಬೇಕು ಹಾಗಾದಾಗ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣದ ಸಾಧ್ಯ ಎಂದು ಅವರು ನುಡಿದರು. ತಹಸೀಲ್ದಾರ್ ಶೈಲಜಾ ಮಾತನಾಡಿ ಜನರಿಗೆ ಕಾನೂರು ಅರಿವು ಮುಖ್ಯ ಆದರೆ ಕಾನೂನಿನ ಅರೆಬರೆ ತಿಳುವಳಿಕೆಯಿಂದ ಕೆಲವರು ಅನಾವಶ್ಯಕವಾಗಿ ಆಡಳಿತದಲ್ಲಿ ಗೋಜಲು ಮಾಹಿತಿ ಕೇಳುತ್ತಾ ಸಂಕೀರ್ಣತೆ ಸೃಷ್ಟಿಸುತ್ತಾರೆ ಇದು ಸಮಾಜದ ಅಭಿವೃದ್ದಿಗೆ ಪೂರಕವಲ್ಲ ೆಂದರು. ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಮಂಜುನಾಥ್ ಮಾತನಾಡಿ ಕೆಲವು ಜನರು ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ನ್ಯಾಯಾಲಯದ ಮೆಟ್ಟಿಲಿಗೆ ಬರುತ್ತಿದ್ದಾರೆ. ಪ್ರಕರಣಗಳು ಒಂದು ನ್ಯಾಯಾಲಯದಲ್ಲಿ ಇತ್ಯರ್ಥವಾದರೆ ಮತ್ತೆ ಮತ್ತೆ ಮೇಲ್ಮನವಿ ಸಲ್ಲಿಸುವ ಮೂಲಕ ಮೇಲಿನ ಕೋರ್ಟುಗಳಿಗೆ ಹೋಗುತ್ತಾರೆ, ಸೌಹಾರ್ಧಯುತವಾಗಿ ಕಡಿಮೆ ವೆಚ್ಚದಲ್ಲಿ ಬಗೆಹರಿಸಿಕೊಳ್ಳಬಹುದಾದ ವಿಷಯಗಳಿಗೆ ಹೆಚ್ಚುವರಿಗೆಯಾಗಿ ಹಣ ವ್ಯಯ ಮಾಡುತ್ತಾರೆ ಇದು ತಪ್ಪಬೇಕು. ವಾಸ್ತವ ನೆಲೆಗಟ್ಟಿನಲ್ಲಿ ಸಮಸ್ಯೆ ಪರಿಹಾರವಾಗಬೇಕಾದರೆ ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಇದ್ದರೆ ಇಂತಹ ಬೆಳವಣಿಗೆಗೆ ತಡೆ ಹಾಕಬಹುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಭಾಷಣ ಮಾಡಿದ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಆರ್ ವೈ ಶಶಿಧರ್ ಕಾನೂನು ತಿಳುವಳಿಕೆ ಮತ್ತು ಉಚಿತ ಕಾನೂನು ಸೇವೆ ಒದಗಿಸುವ ನಿಟ್ಟಿನಲ್ಲಿ ಜನತಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಾಲಕೃಷ್ಣ ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿ ನೀಡಿದರೆ, ಹಿರಿಯ ವಕೀಲರಾದ ಜನಾರ್ಧನ ಗುಪ್ತ 'ಮಾಹಿತಿ ಹಕ್ಕು ಕಾಯ್ದೆ' ಮತ್ತು ಎಚ್ ಎಸ್ ರೇವಣ್ಣ ಖಾತೆ ಬದಲಾವಣೆ ಬಗೆಗೆ ಕಾನೂನು ಮತ್ತು ನಿಯಮಗಳು ವಿಷಯವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿರಿಯ ಶ್ರೇಣಿಯ ಸಿವಿಲ್ ಜಡ್ಜ್ ಬಿ ವೆಂಕಟಪ್ಪ,ಎಸ್ ಬಿ ಎಂ ವ್ಯವಸ್ಥಾಪಕ ಕೆ ಎಸ್ ಗುರುರಾಜ್, ಕಾನೂನು ಸೇವಾ ಸಮಿತಿ ಸದಸ್ಯೆ ವಾಸವಾಂಬ ಗುಪ್ತ, ವಿಶೇಷ ಸರ್ಕಾರಿ ಅಭಿಯೋಜಕಿ ಶೋಬಾರಾಕೇಶ್, ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್ ಆರ್ ಸತ್ಯವತಿ ಉಪಸ್ಥಿತರಿದ್ದರು.
ಜಿ.ಪಂ. ಉಪಕಾರ್ಯದರ್ಶಿ ತರಾಟೆಗೆ:- ಕಾರ್ಯಕ್ರಮಕ್ಕೆ ಅನಿರೀಕ್ಷಿತ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತ್ ಉಪಕಾರ್ಯದರ್ಶಿ ಬಾಲಕೃಷ್ಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಪ್ರಾತ್ಯಕ್ಷಿಕೆ ಜೊತೆಗೆ ಉಪನ್ಯಾಸ ನೀಡುತ್ತಿದ್ದ ವೇಳೆ 'ಗ್ರಾಮ ಪಂಚಾಯತ್ ಸದಸ್ಯರನ್ನುದ್ದೇಶಿಸಿ ನೀವು ಜಾಬ್ ಕಾರ್ಡುಗಳನ್ನು ಮಾರಿಕೊಳ್ಳಬೇಡಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ, ಜೆಸಿಬಿಯಿಂದ ಕೆಲಸ ಮಾಡಬೇಡಿ ಅಗತ್ಯವಿರುವೆಡೆ ಮಾತ್ರ ಮಾಡಿ, ಬೋಗಸ್ ಕೆಲಸ ನಿರ್ವಹಿಸಿ ತೋರಬೇಡಿ ಎಂದಾಗ ಸಭೆಯಲ್ಲಿದ್ದ ಹಲವು ಮಂದಿ ಕುಪಿತರಾಗಿ ಉಪಕಾರ್ಯದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನೀವು ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಕಾರಣ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಪ್ಲೈ ಬಿಲ್ ಗಳನ್ನು ನೀವೆ ಕೊಡುತ್ತಿದ್ದೀರಿ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುತ್ತಿದ್ದೀರಿ ಎಂದರಲ್ಲದೇ, ಪ್ರಾತ್ಯಕ್ಷಿಗೆ ಆಂಗ್ಲ ಭಾಷೆಯಲ್ಲಿ ಪ್ರಸೆಂಟೇಶನ್ ನೀಡಿದ್ದನ್ನು ತೀವ್ರವಾಗಿ ವಿರೋಧಿಸಿದರು. ಆಗ ಕಂಗಾಲಾದ ಅಧಿಕಾರಿ ಹೀಗೆ ಗಲಾಟೆ ಮಾಡಿದರೆ ಉಪನ್ಯಾಸ ನಿಲ್ಲಿಸಿಬಿಡುತ್ತೇನೆ ಎಂದು ಎಚ್ಚರಿಸುತ್ತಿದ್ದರಲ್ಲದೇ ಕಾರ್ಯಕ್ರಮದ ಅಂತ್ಯದಲ್ಲಿ ಪ್ರಶ್ನೆಗಳಿಗೆ ಉತ್ತಿರಿಸುವುದಾಗಿ ಹೇಳುತ್ತಿದ್ದರು. ಇದರಿಂದ ನಿರಾಶರಾದ ಬಹುತೇಕ ಸದಸ್ಯರು ಕಾನೂನು ಕಾರ್ಯಾಗಾರದಿಂದ ಹೊರನಡೆದರು.

ಕಾಮೆಂಟ್‌ಗಳಿಲ್ಲ: