ಶುಕ್ರವಾರ, ಜನವರಿ 29, 2010

'ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ' ಕೂಲಿಕಾರರ ಪ್ರತಿಭಟನೆ

ಅರಕಲಗೂಡು: ರಾಜಕಾರಣಿಗಳು ಹಾಗು ಮಾಧ್ಯಮಗಳು ಉದ್ಯೋಗ ಖಾತರಿ ಯೋಜನೆ ಬಗ್ಗೆ ಸುಳ್ಳು ಹಾಗೂ ದಾರಿತಪ್ಪಿಸುವ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಆರೋಪಿಸಿ ಉದ್ಯೋಗ ಖಾತರಿ ಯೋಜನೆಯ ಕೂಲಿಕಾರರು ಪಟ್ಟಣದಲ್ಲಿಂದು ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತರಿ ಯೋಜನೆಯ ವ್ಯಾಪಕ ಅಕ್ರಮಗಳ ಕುರಿತು 'ಪತ್ರಿಕೆ'ಯ ಸಮಗ್ರ ವರದಿಯ ಬೆನ್ನಲ್ಲೆ ಯೋಜನೆ ಅನುಷ್ಠಾನದ ಅಕ್ರಮಗಳ ವಿರುದ್ದ ಮಾಜಿ ಸಚಿವ ಬಿ ಶಿವರಾಂ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ತೊಡಕುಂಟಾಗಿದೆ ಎಂದು ಪ್ರತಿಭಟನೆಕಾರರು ಮಾಜಿ ಸಚಿವ ಬಿ ಶಿವರಾಂ ಮತ್ತು ಮಾದ್ಯಮಗಳ ವಿರುದ್ದ ಘೋಷಣೆ ಕೂಗಿದರು. ವಡ್ಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸೇಗೌಡ ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ಯೋಜನಾನುಷ್ಠಾನ ಉತ್ತಮವಾಗಿದೆ, ಯಾರು ಬೇಕಾದರೂ ಬಂದು ಪರಿಶೀಲಿಸಬಹುದು, ಸೋತು ಮನೆಯಲ್ಲಿ ಕುಳಿತವರು ದುರುದ್ದೇಶದಿಂದ ುದ್ಯೋಗ ಖಾತ್ರಿ ಕುರಿತು ಹೇಳಿಕೆ ನೀಡುತ್ತಿದ್ದಾರೆ ಪತ್ರಕರ್ತರು ಅದನ್ನು ಬರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ನ್ಯಾಯಬೆಲೆ ಅಂಗಡಿಗಳ ಸಂಘದ ಅಧ್ಯಕ್ಷ ಚನ್ನಕೇಶವೇಗೌಡ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮಗಳ ಅಭಿವೃದ್ದಿಯಾಗುತ್ತಿದೆ, ಆದರೆ ಇದನ್ನು ಸಹಿಸದೇ ಅನಗತ್ಯ ಟೀಕೆ ಮಾಡುತ್ತಾ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ತುಂಬಲಾಗುತ್ತಿದೆ ಎಂದರು.ಕೂಲಿಕಾರರ ಸಂಘಟಕ ದಿನೇಶ್ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮಗಳ ಸರ್ವೊದಯಕ್ಕೆ ಸದುದ್ದೇಶದಿಂದ ಜಾರಿಗೊಳಿಸಲಾಗಿದೆ, ಇಂತಹ ಮಹತ್ತರ ಯೋಜನೆಯ ಬಗ್ಗೆ ಕೆಲವು ಕಿಡಿಗೇಡಿಗಳು ಗ್ರಾಮೀಣ ಜನತೆಯ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ದಿ ಸಹಿಸದೇ ಸಲ್ಲದ ಹೇಳಿಕೆಗಳನ್ನು ಪತ್ರಿಕೆಗಳ ಮೂಲಕ ನೀಡುತ್ತಿದ್ದಾರೆ ಈ ರೀತಿ ಉದ್ಯೋಗ ಖಾತ್ರಿ ಯೋಜನೆ ವಿರುದ್ದ ಹೇಳಿಕೆ ನೀಡುವವರಿಗೆ ಶಿಕ್ಷೆ ನೀಡಿ ದಂಡ ಹಾಕಲು ಅವಕಾಶವಿದೆ, ಪತ್ರಿಕೆಗಳಲ್ಲಿ ವಡ್ಡರಹಳ್ಳಿಯ ಕೆ ಎಸ್ ಆರ್ ಟಿ ಸಿ ಚಾಲಕರೋಬ್ಬರ ಹೆಸರಿನಲ್ಲಿ ಜಾಬ್ ಕಾರ್ಡ್ ಇದೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ, ಒಬ್ಬ ನೌಕರನ ಹೆಸರಿನಲ್ಲಿ ಕಾರ್ಡು ಇದ್ದರೆ ತಪ್ಪಲ್ಲ, ತಮ್ಮ ಆ ಕಾರ್ಡಿನಲ್ಲಿ ಕೆಲಸ ಮಾಡಬಹುದು ಎಂದರು. ದಲಿತ ಸಂಘರ್ಷ ಸಮಿತಿಯ ಗಣೇಶ ವೇಲಾಪುರಿ ಮಾತನಾಡಿ ಉದ್ಯೋಗ ಖಾತ್ರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹೇಳಿಕೆ ನೀಡುವವರ ವಿರುದ್ದ ಪ್ರತಿಭಟನೆಗೆ ದಸಂಸ ಬೆಂಬಲಿಸುತ್ತದೆ. ಯೋಜನೆಯ ಬಗ್ಗೆ ಮಾಜಿ ಸಚಿವ ಬಿ ಶಿವರಾಂ ತಕರಾರು ತೆಗೆದಿರುವುದು ಸರಿಯಲ್ಲ, ಅಭಿವೃದ್ದಿ ಯೋಜನೆಗಳನ್ನು ಟೀಕಿಸದಿರಿ ಎಂದರು.ನಂತರ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ತಾಲ್ಲೂಕು ಪಂಚಾಯಿತಿ ಕಛೇರಿಗೆ ತೆರಳಿ ಕಾರ್ಯ ನಿರ್ವಾಹಕ ಅಧಿಕಾರಿ ಫಣೀಶ್ ಅವರಿಗೆ ಮನವಿ ಅರ್ಪಿಸಿದರು.ಅಕುಶಲ ಕೂಲಿಕಾರರ ನೇತೃತ್ವವನ್ನು ಮುಖಂಡರಾದ ಎಸ್ ಎಲ್ ಗಣಪತಿ, ಚನ್ನಕೇಶವೇಗೌಡ,ನರಸೇಗೌಡ,ದಿನೇಶ್,ಗಣೇಶವೇಲಾಪುರಿ ವಹಿಸಿದ್ದರು.ಪ್ರತಿಭಟನೆಯಲ್ಲಿ ಸರಿಸುಮಾರು 50-60ಮಂದಿ ಕೂಲಿಕಾರರು, ಗುತ್ತಿಗೆದಾರರು,ಕೆಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ಕ್ರಿಕೇಟ್ ಬಾಲ್ ಪಂದ್ಯಾವಳಿ
ಅರಕಲಗೂಡು ಜೈಭೀಮ್ ನಗರದ ಅಂಬೇಡ್ಕರ್ ಕ್ರಿಕೇಟರ್ಸ್ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ ಯನ್ನು ಜನವರಿ 30,31ರಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಂಜು ತಿಳಿಸಿದ್ದಾರೆ

ಕಾಮೆಂಟ್‌ಗಳಿಲ್ಲ: