ಶನಿವಾರ, ಜನವರಿ 23, 2010

ಹುಚ್ಚುಮುಂಡೆ ಮದ್ವೆಲಿ ಉಂಡೋನೆ ಜಾಣ:ಉದ್ಯೋಗ 'ಖತ್ರಿ'

ಹಾಸನ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ 'ಉದ್ಯೋಗ ಖಾತ್ರಿ' ಯೋಜನೆ ಜನರಿಗೆ ಉದ್ಯೋಗ ಕಲ್ಪಿಸುವ ಬದಲಿಗೆ ಅಧಿಕಾರ ಶಾಹಿಗಳಿಗೆ ಮತ್ತು ಕಂಟ್ರಾಕ್ಟರುಗಳಿಗೆ ಹಣದೋಚುವ ಅಕ್ಷಯ ಪಾತ್ರೆಯಾಗಿ ಪರಿಣಮಿಸಿದೆ. ನಿನ್ನೆಯ ಪತ್ರಿಕೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕರ್ಮಕಾಂಡದ ಮೊದಲ ಕಂತನ್ನು ಪತ್ರಿಕೆ ಬಯಲಿಗೆ ತರುತ್ತಿದ್ದಂತೆ ಜಿಲ್ಲಾದ್ಯಂತ ಸಂಚಲನ ಸೃಷ್ಟಿಯಾಗಿದೆ.
ಕೆಂದ್ರ ಸರ್ಕಾರ ಈ ಮೊದಲು ಎಸ್ ಜೆ ಆರ್ ವೈ ಯೋಜನೆ ಯನ್ನು ಕೂಲಿಗಾಗಿ ಕಾಳು ಹೆಸರಿನಲ್ಲಿ ಜಾರಿಗೆ ತಂದಿತ್ತು, ಈ ಯೋಜನೆಯು ಕೂಡ ಅಧಿಕಾರ ಶಾಹಿಯ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದಿತ್ತು ಮತ್ತು ಬಡವರಿಗೆ ಕೂಲಿಯ ಜೊತೆಗೆ ವಿತರಣೆಯಾಗಬೇಕಾಗಿದ್ದ ಅಕ್ಕಿ ಮಾರಾಟವಾಗಿ 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ ತಿಂಗಳುಗಳ ಕಾಲ ಮುದ್ದೆ ಮುರಿಯುತ್ತ ಕಂಬಿ ಎಣಿಸಿದ್ದರು.ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳು ಬೆಳಕಿಗೆ ಬಂದು ಕ್ರಮವಾದರೆ ಜಿಲ್ಲೆಯಲ್ಲಿಯೂ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಗ್ರಾ.ಪಂ. ಅಧ್ಯಕ್ಷರುಗಳು ಕಂಬಿ ಎಣಿಸುವುದರಲ್ಲಿ ಅನುಮಾನವೇ ಇಲ್ಲ. ಕೂಲಿಗಾಗಿ ವಲಸೆಹೋಗುವ ಬಡಕೂಲಿ ಕಾರ್ಮಿಕರನ್ನು ತಡೆಯುವ ಸಲುವಾಗಿ ಬಂದ ಉದ್ಯೋಗ ಖಾತ್ರಿ ಯೋಜನೆ ಮೊದಲಿಗೆ ಉತ್ತರ ಕರ್ನಾಟಕ 5ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿತಾದರೂ ನಂತರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲ್ಪಟ್ಟಿತು.ಆರ್ಥಿಕವಾಗಿ ಸಮೃದ್ದವಾಗಿರುವ ಜಿಲ್ಲೆಗಳ ಜನರು ಈ ಯೋಜನೆಗೆ ಸೇರಲು ಮನಸ್ಸು ಮಾಡದಿದ್ದು ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ಆತಂಕ ತಂದಿತ್ತು, ಆದರೆ ಕೆಲವೇ ದಿನಗಳಲ್ಲಿ ಯೋಜನೆಯ ರುಚಿ ಕಂಡವರು ಹುಮ್ಮಸಿನಿಂದ ುದ್ಯೋಗ ಖಾತ್ರಿ ಕೆಲಸ ಮಾಡಲು ಮುಂದಾದರು. ಹಾಸನ ಜಿಲ್ಲೆಯ ಅರಕಲಗೂಡು ಮಲ್ಲಿಪಟ್ಟಣ ಗ್ರಾ.ಪಂ ಹಾಗೂ ಜಿಲ್ಲೆಯ ಬೆರಳೇಣಿಕೆಯ ಪಂಚಾಯಿತಿ ಹೊರತು ಪಡಿಸಿ ನಡೆದ ಎಲ್ಲ ಕಾಮಗಾರಿಗಳಲ್ಲೂ ವ್ಯಾಪಕವಾದಅಕ್ರಮ ನಡೆದಿದದೆ. ಈ ಬಗ್ಗೆ ಈಗಾಗಲೇ ಸೋಷಿಯಲ್ ಆಡಿಟ್ ನಡೆಯುತ್ತಿದ್ದು ನಿದಾನವಾಗಿ ಉದ್ಯೋಗ ಖಾತ್ರಿ ಯೋಜನೆಯ ಹಗರಣಗಳು ಬೆಳಕಿಗೆ ಬರಲಾರಂಭಿಸಿವೆ. ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಗಳಲ್ಲೂ ಜನಸಂಖ್ಯಾಧಾರಿತ ಕಾಮಗಾರಿ ಯೋಜನೆ ತಯಾರಿಸಿ ಜಾಬ್ ಕಾರ್ಡುಗಳನ್ನು ಮಾಡಬೇಕಾಗಿದೆ, ಕಾಮಗಾರಿ ಮುಗಿದ ನಂತರ ಜಾಬ್ ಕಾಡ್ರುದಾರರ ಮಾಹಿತಿ ಸೇರಿದಂತೆ ವೆಚ್ಚದ ಮಾಹಿತಿಯನ್ನು ಕಾಮಗಾರಿ ಸ್ಥಳದಲ್ಲಿ ಪ್ರದರ್ಶಿಸಬೇಕಾಗಿದೆ, ಆದರೆ ಈ ಕ್ರಿಯೆಗಳು ಜರುಗಿಲ್ಲ. ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದ ವೆಚ್ಚದ ಕಾಮಗಾರಿ ತಯಾರಿಸಲಾಗಿದೆ. ಅರಕಲಗೂಡು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆ ಎಸ್ ಆರ್ ಟಿ ಸಿ ಚಾಲಕರೊಬ್ಬರ ಹೆಸರಿನಲ್ಲಿ ಜಾಬ್ ಕಾರ್ಡು ಮಾಡಿಸಿ ಹಣ ಡ್ರಾ ಮಾಡಲಾಗಿದೆ. ಜಿಲ್ಲೆಯಾಧ್ಯಂತ ಸಹಕಾರಿ ಸೊಸೈಟಿಗಳಲ್ಲಿ ಮತ್ತು ಅಂಚೆ ಇಲಾಖೆಯಲ್ಲಿಯೂ ಖಾತೆ ತೆರೆದು ಹಣ ಪಡೆಯಲಾಗಿದೆ. ಉದಾ : ಗೆ ಹೇಳುವುದಾದರೆ 1ಲಕ್ಷದ ಕಾಮಗಾರಿಗೆ 10ಲಕ್ಷದ ಅಂದಾಜು ಮೊತ್ತ ತಯಾರಿಸಿ ಬಿಲ್ ಪಡೆಯಲಾಗಿದೆ. ಒಂದು ಕುಟುಂಬಕ್ಕೆ ಒಮ್ಮೆ ಕೆಲಸ ಒದಗಿಸಿದ ಮೇಲೆ ಮತ್ತೆ ಅದೇ ಕುಟುಂಬದ 2ನೆ , 3ನೇ ಸದಸ್ಯನನ್ನು ಕುಟುಂಬದ ಯಜಮಾನನೆಂದು ತೋರಿಸಿ ವಂಚಿಸಲಾಗಿದೆ. ಜಿ.ಪಂ ಅಭಿಯಂತರರುಗಳು ಸ್ಥಳಕ್ಕೆ ತೆರಳದೆ ಕಛೇರಿಯಲ್ಲಿ, ಖಾಸಗಿ ಸ್ಥಳದಲ್ಲಿ ಕುಳಿತು ಒಂದಕ್ಕೆ ದುಪ್ಪಟ್ಟು ಯೋಜನಾ ವೆಚ್ಚದ ವರದಿ ತಯಾರಿಸಿ ಕೊಡುತ್ತಿದ್ದಾರೆ. ಕೆಲಸ ಮುಗಿದ ಮೇಲೆ ಹಾಸನದ ಖಾಸಗಿ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಕುಳಿತು ಬಿಲ್ ಗಳನ್ನು/ವರದಿಗಳನ್ನು ಬರೆಯುತ್ತಿದ್ದಾರೆ. ಎಷ್ಟೋ ಮಂದಿ ಸಣ್ಣ ಪುಟ್ಟ ನೌಕರಿ ಮಾಡುವ ಖಾಸಗಿ/ಸರ್ಕಾರಿ/ಅರೆಸರ್ಕಾರಿ ನೌಕರರು ಈಗ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಂಟ್ರಾಕ್ಟುದಾರರಾಗಿದ್ದಾರೆ. ವರ್ಕ್ ಆರ್ಡರು ಸಿಗುವ ಮುನ್ನವೇ ಜೆಸಿಬಿ ಮೂಲಕ ಕೆಲಸ ಆರಂಭಿಸಿ ನಂತರ ಅಧಿಕಾರಿಗಳಿಗೆ ಕಪ್ಪಕಾಣಿಕೆ ಸಲ್ಲಿಸಿ ಮಂಜೂರಾತಿ ಪಡೆಯುತ್ತಿದ್ದಾರೆ, ರಾಜಕೀಯವಾಗಿ ಸಬಲರಾಗಿಲ್ಲದವರು ನಷ್ಟಮಾಡಿಕೊಂಡು ಪರಿತಪಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯವೆನಿಸಿದ ಕಡೆ ಮಾತ್ರ ಯಂತ್ರೋಪಕರಣಗಳ ಬಳಕೆಗೆ ಅವಕಾಶವಿದೆ, ಆದರೆ ಅದನ್ನೇ ಪ್ಲಸ್ ಪಾಯಿಂಟ್ ಎಂದುಕೊಂಡ ಅಧಿಕಾರಿಗಳು ಶೇ>90ರಷ್ಟು ಕಾಮಗಾರಿಗಳನ್ನು ಜೆಸಿಬಿ ಮೂಲಕ ನಿರವಹಿಸಲು ಅವಕಾಶ ಮಾಡಿದ್ದಾರೆ. ಹುಚ್ಚುಮುಂಡೆ ಮದ್ವೇಲಿ ಉಂಡವನೇ ಜಾಣ ಎಂಬಂತೆ ಮನಸೋ ಇಚ್ಚೇ ಹಣ ದೋಚುತ್ತಿರುವವರ ಪೈಕಿ ಜಿ.ಪಂ. ಇಂಜಿನಿರಯರುಗಳು ಅಗ್ರ ಸ್ಥಾನದಲ್ಲಿ ಬರುತ್ತಾರೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಿಯಮಿತ ವೆಚ್ಚದ ಕಾಮಗಾರಿ ನಿರ್ವಹಿಸಲು ಅವಕಾಶವಿದ್ದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಸಪ್ಲೈ ಬಿಲ್ ಗಳನ್ನು ಮಾಡುತ್ತಿದ್ದಾರೆ, ಬೇಕಾದ ಏಜೆನ್ಸಿಗಳಿಗೆ ಜಿಲ್ಲಾ ಮಟ್ಟದಲ್ಲೇ ಅಕ್ರಮವಾಗಿ ಸಪ್ಲೈ ಬಿಲ್ ನೀಡಲಾಗಿದೆಯೆಂಬ ದೂರಿದೆ. ಎನ್ ಎಂ ಆರ್ ಗಳನ್ನು ಮಾತ್ರ ಗ್ರಾಮ ಪಂಚಾಯಿತಿಗಳಿಗೆ ಕಳುಹಿಸಲಾಗುತ್ತಿದೆ.ಒಂದು ಖಚಿತ ಮಾಹಿತಿ ಪ್ರಕಾರ ಶೇ.100ರ ವೆಚ್ಚದ ಕಾಮಗಾರಿಗೆ ಲಂಚವಾಗಿ ಶೆ.5 ಗ್ರಾ.ಪಂ. ಕಾರ್ಯದರ್ಶಿಗೆ, ಶೆ.5 ಗ್ರಾ.ಪಂ. ಅಧ್ಯಕ್ಷರಿಗೆ, ಜಿಲ್ಲಾ ಪಂಚಾಯಿತಿ ಇಂಜಿನಿಯರು, ಕಾರ್ಯನಿರ್ವಾಹಕ ಅಧಿಕಾರಿ, ಡಿಎಸ್1/2,ಲೆಕ್ಕಅಧಿಕ್ಷಕ,ಮ್ಯಾನೆಜರ್,ಇತ್ಯಾದಿಗಳಿಗೆ ಒಟ್ಟಾರೆಯಾಗಿ ಶೇ.16, ಕೆಲಸ ನಿರ್ವಹಿಸದ ನಕಲಿ ಜಾಬ್ ಕರ್ಡುದಾರರಿಗೆ ಶೇ.15 ಹಾಗೂ ಕಛೇರಿಯಲ್ಲೇ ಕೂತು ಅಂದಾಜು ಪಟ್ಟಿ ತಯಾರಿಸುವ ಇಂಜಿನಿಯರನಿಗೆ ಶೇ.3 ಲಂಚರೂಪದ ಕಪ್ಪಕಾಣಿಕೆ ಸಲ್ಲಿಕೆಯಾಗುತ್ತದಂತೆ.ಕಂಪ್ಯೂಟರು ಆಪರೇಟರುಗಳು, ನೀರುಗಂಟಿ, ಕಾರ್ಯದರ್ಶಿ, ಸದಸ್ಯ, ಜವಾನ, ಡ್ರೈವರು ಹೀಗೆ ಬೇಧವಿಲ್ಲದೇ ಎಲ್ಲರೂ ಉದ್ಯೋಗ ಖಾತ್ರಿ ಯೋಜನೆಯ ಕಂಟ್ರಾಕ್ಟರುಗಳೇ! ಸಜ್ಜನಿಕೆಯ, ಪ್ರಾಮಾಣಿಕತನದ ಮಾತನಾಡುವ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಾಲಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ುದ್ಯೋಗ ಖಾತ್ರಿ ಯೋಜನೆ ಬಗ್ಗೆ ದೊಡ್ಡ ಮಾತುಗಳನ್ನಾಡುತ್ತಾರಾದರೂ, ಅನುಷ್ಠಾನಕ್ಕೆ ಇಂತಹ ಗೋಲ್ಮಾಲ್ ಗಳನ್ನು ಪ್ರೋತ್ಸಾಹಿಸುತ್ತಿರುವುದು ಸಂಶಯ ಹುಟ್ಟುಹಾಕಿದೆ. ಪೂರ್ಣ ಪ್ರಮಾಣದ ಸೋಷಿಯಲ್ ಆಡಿಟ್ ಮುಗಿದು ಅಕ್ರಮಗಳ ದೂರುಗಳು ಸಾರ್ವಜನಿಕರಿಂದ ದಾಖಲಾದರೆ ಅಧಿಕಾರಿಗಳ ಅಸಲಿಯತ್ತು ಬಯಲಿಗೆ ಬರುವುದಲ್ಲದೇ ಕಂಬಿ ಎಣಿಸುವ ದಿನಗಳನ್ನು ಲೆಕ್ಕಹಾಕಬಹುದು.

ಕಾಮೆಂಟ್‌ಗಳಿಲ್ಲ: