ಗುರುವಾರ, ಅಕ್ಟೋಬರ್ 21, 2010

ಉದ್ಯೋಗ ಖಾತ್ರಿ ಅಕ್ರಮ ಸಾಬೀತು:18ಗ್ರಾ.ಪಂ.ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸೂಚನೆ

ಅರಕಲಗೂಡು:ತಾಲೂಕಿನ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ ಎಸಗಿದ್ದ 18ಗ್ರಾಮಪಂಚಾಯ್ತಿ ಗಳ ಕಾರ್ಯದರ್ಶಿಗಳು ಹಾಗೂ ಮೂವರು ಅಧಿಕಾರಿಗಳ ವಿರುದ್ದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ತಕ್ಷಣವೇ ಕ್ರಿಮಿನಲ್ ಕೇಸು ದಾಖಲಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶ ನೀಡಿದ್ದಾರೆ.
ಈ ಬಗ್ಗೆ ವಾರದ ಹಿಂದೆಯೇ ಪ್ರಧಾನ ಕಾರ್ಯದರ್ಶಿಯವರು ಬರೆದಿರುವ ಪತ್ರ ಆದೇಶ ಸಂಖ್ಯೆ:ಗ್ರಾ.ಅ.ಪ.ಇ/24/ಉ.ಖಾ.ಯೋ-08, ದಿ:8-10-2010ರಲ್ಲಿ ತಾಲೂಕಿನಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮ ದೃಢಪಟ್ಟಿದ್ದು ಈಗಾಗಲೇ ಅಮಾನತು ಗೊಂಡಿರುವ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಕಿರಿಯ ಅಭಿಯಂತರ ಸೇರಿದಂತೆ 18ಗ್ರಾ.ಪಂ.ಗಳ ಕಾರ್ಯದರ್ಶಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಲಾಗಿದೆ. ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಖುದ್ದು ತಾಲೂಕಿಗೆ ಆಗಮಿಸಿದ್ದ ಪ್ರಧಾನ ಕಾರ್ಯದರ್ಶಿಯವರು ಹೆಚ್ಚಿನ ತನಿಖೆಗಾಗಿ ತನಿಖಾ ತಂಡಗಳನ್ನು ರಚಿಸಿದ್ದರು. ಸದರಿ ತನಿಖಾ ತಂಡ ಮತ್ತ ಸಾಮಾಜಿಕ ಲೆಕ್ಕ ಪರಿಶೋಧನಾ ತಂಡಗಳು ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿದ್ದ ಮದ್ಯಂತರ ವರದಿ ಹಾಗೂ ಹಾಸನ ಜಿ.ಪಂ. ಮುಖ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ನೀಡಿದ ಮೇಲು ವರದಿಯನುಸಾರ ತಾಲೂಕಿನ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು, ಹೊಳಲಗೋಡು, ಚಿಕ್ಕಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯ್ತಿಗಳಲ್ಲಿ ಅಕ್ರಮ ಮತ್ತು ಭ್ರಷ್ಠಾಚಾರಗಳು ಕಂಡುಬಂದಿದ್ದು ಯೋಜನಾನುಷ್ಠಾನದಲ್ಲಿ ತೀವ್ರ ಲೋಪವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾರ್ಯದರ್ಶಿಗಳು ಮತ್ತು ಅಮಾನತುಗೊಂಡಿರುವ ಅಧಿಕಾರಿಗಳ ವಿರುದ್ದ ತಕ್ಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಿ ಅವಶ್ಯಕ ಕ್ರಮ ಜರುಗಿಸಲು ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಉಳಿದ 11ಗ್ರಾಮ ಪಂಚಾಯ್ತಿಗಳಲ್ಲಿನ ಯೋಜನಾನುಷ್ಠಾನ ಕುರಿತು ತನಿಖೆ ಪ್ರಗತಿಯಲ್ಲಿದ್ದು ಸದರಿ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದವೂ ಕ್ರಮ ಜರುಗಿಸುವ ಸಾಧ್ಯತೆ ಇದೆ. ಅಕ್ರಮದಲ್ಲಿ ಹಣ ಬಿಡುಗಡೆ ಮಾಡಲು ಕಾರ್ಯದರ್ಶಿಗಳ ಜೊತೆ ಜಂಟಿ ಖಾತೆಗೆ ಸಹಿ ಹಾಕಿರುವ ಹಿಂದಿನ ಗ್ರಾ.ಪಂ ಅಧ್ಯಕ್ಷರುಗಳ ವಿರುದ್ದವೂ ಸಹಾ ಕ್ರಮ ಜರುಗಿಸುವ ನಿರೀಕ್ಷೆಯಿದೆ.
ಅರಕಲಗೂಡು: ಕ್ಷೇತ್ರದ ಶಾಸಕ ಎ. ಮಂಜು ಕಾಂಗ್ರೆಸ್ ತೊರೆಯುವುದಿಲ್ಲ ಈ ಬಗ್ಗೆ ಬರುತ್ತಿರುವ ಸುದ್ದಿಗಳು ಸುಳ್ಳು ಎಂದು ತಾಲೂಕು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಎ. ಮಂಜು ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ದಟ್ಟ ಸುದ್ದಿಗಳ ಹಿನ್ನೆಲೆಯಲ್ಲಿ  ಕಳವಳಕ್ಕೀಡಾದ ಸ್ಥಳೀಯ ಮುಖಂಡರಾದ ಕಬ್ಬಳಿಗೆರೆ ಬೈರೇಗೌಡ, ಬ್ಲಾಕ್ ಕಾಂಗೈ ಅಧ್ಯಕ್ಷ ಕೀರ್ತಿರಾಜು ಮತ್ತಿತರರು ದಿಡೀರ್ ಪತ್ರಿಕಾ ಗೋಷ್ಠಿ ನಡೆಸಿದರು. ಶಾಸಕ ಮಂಜು ಜೊತೆ ಕಾಂಗ್ರೆಸ್ ಪಕ್ಷದ ಮಖಂಡರುಗಳು ನಿರಂತರ ಸಂಪರ್ಕದಲ್ಲಿದ್ದು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಮಾದ್ಯಮಗಳಲ್ಲಿ ಬರುತ್ತಿರುವ ಸುದ್ದಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಹೇಳಿದ್ದಾರೆಂದು ಪಕ್ಷದ ಅಧ್ಯಕ್ಷ ಕೀರ್ತಿರಾಜ್ ಸ್ಪಷ್ಠಪಡಿಸಿದರು. ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್  ಸಾರಿರುವ ಸಮರದಲ್ಲಿ ಮಂಚೂಣಿಯಲ್ಲಿರುವ ನಮ್ಮ ನಾಯಕ ಮಂಜು ವಿರುದ್ದ ಆಗದವರು ಗಾಳಿ ಸುದ್ದಿ ಹಬ್ಬಿಸಿದ್ದಾರೆ, ಕಾರ್ಯಕರ್ತರಲ್ಲಿ ಶಂಕೆ ಹುಟ್ಟುವಂತೆ ಮಾಡಿದ್ದಾರೆ ಆದರೆ ಇದನ್ನೆಲ್ಲಾ ನಂಬಬಾರದೆಂದು ಅವರು ಮನವಿ ಮಾಡಿದರು. ಕಬ್ಬಳಿಗೆರೆ ಬೈರೇಗೌಡ ಮಾತನಾಡಿ ರೆಸಾರ್ಟ್ ರಾಜಕೀಯ ಬಿಜೆಪಿಯಿಂದ ಆರಂಭವಾಗಿದೆ, ಎ. ಮಂಜು ಪಕ್ಷ ತೊರೆಯುತ್ತೇನೆಂದು ಎಲ್ಲಿಯೂ ಹೇಳಿಲ್ಲ ಪಕ್ಷಕ್ಕೆ ಸೆಳೆಯುವ ದುರುದ್ದೇಶದಿಂದ ಬಿಜೆಪಿ ಕುತಂತ್ರ ನಡೆಸಿದೆ ಎಂದು ಕಿಡಿಕಾರಿದ ಅವರು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಅತೀಭ್ರಷ್ಠ ಹಾಗೂ ಅತೀ ಕೆಟ್ಟ ಸರ್ಕಾರ ಇದನ್ನು ತೊಲಗಿಸುವುದೇ ನಮ್ಮ ಗುರಿಯಾಗಿದೆ ಆದ್ದರಿಂದ ಶಾಸಕ ಮಂಜು ನೇತೃತ್ವದಲ್ಲಿ ಇದೇ. ಅ.23ರಂದು ಸಾರ್ವಜನಿಕವಾಗಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಯುವ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು ಅಲ್ಲಿಗೆ ಎ. ಮಂಜು ಹೋಗಲು ಸಾಧ್ಯವಿಲ್ಲ ಆರಂಭದಲ್ಲೇ ಬಿಜೆಪಿ ಆಮಿಷವೊಡ್ಡಿ ಸೆಳೆಯಲು ಯತ್ನಿಸಿತ್ತು ಆದರೆ ಮಂಜು ಆಮಿಷಕ್ಕೆ ಬಲಿಯಾಗಲಿಲ್ಲ ಮುಂದಿನ ದಿನಗಳಲ್ಲೂ ಇದಕ್ಕೆಲ್ಲ ಸೊಪ್ಪುಹಾಕುವುದಿಲ್ಲ ಎಂದರು. ಗೋಷ್ಠಿಯಲ್ಲಿ ಮುಖಂಡರಾದ ಚೌಡೇಗೌಡ,ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಮೇಶ್ ಮುತ್ತಿಗೆ,ಯುವ ಕಾಂಗೈ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಅನ್ಸರ್ ಪಾಶ ಹಾಜರಿದ್ದರು

ಬುಧವಾರ, ಅಕ್ಟೋಬರ್ 20, 2010

ಕೋಟಿ ಬಹುಮಾನದ ಆಮಿಷಕ್ಕೆ ಮರುಳಾಗದಿರಿ..


  • ಅರಕಲಗೂಡು ಜಯಕುಮಾರ್

TO REDEEM YOUR PRIZE IS FREE OF CHARGE!!

Your E-ID was selected online in this week''s AWARD PROMO BRITISH CANADIAN
LOTTERY BC-49 05 07 14 20 32 34 06 Your draw has a total value of
$1,000,000.00 USD
And your Winning No:05 07 14 20 32 34 06. Please acknowledge the receipt of
this mail 
with the details below to our claim agent.

Contact Agent: Mr.Tross Brian.
E-mail: onlinepromo_7171yahoo.com.hk

Claims Requirements


ಹೀಗೊಂದು ಈ ಮೇಲ್ ಅಥವಾ ಮೊಬೈಲ್ ಎಸ್ ಎಂ ಎಸ್ ನಿಮಗೂ ಬಂದಿರಬಹುದು. ಜೋಕೆ ಇಂಥಹದ್ದಕ್ಕೆಲ್ಲ ಮರುಳಾಗಿ ನಿಮ್ಮ ಸಂಪೂರ್ಣ ಮಾಹಿತಿ ನೀಡಿ ಒಮ್ಮೆ ಸಂಪರ್ಕಿಸಿದಿರೋ ನಿಮ್ಮನ್ನು ಪೂರಾ ಸುಲಿದು ಬಿಡಲು ಅಪರಾಧಿಗಳು ಸಜ್ಜಾಗಿರುತ್ತಾರೆ. ಕಳೆದ ಒಂದೆರೆಡು ವರ್ಷಗಳಿಂದಲೂ ಇಂಥಹದ್ದೊಂದು ದಂಧೆ ಜಾಗೃತಾವಸ್ಥೆಯಲ್ಲಿದೆ. ಅಂತರ್ಜಾಲದಲ್ಲಿ ಜಾಹಿರಾತು ಆಕರ್ಷಣೆಗಳು ಬೇಡವೆಂದರೂ ನಾನಾ ನಮೂನೆಯ ಮೇಲ್ ಗಳು ಮೊಬೈಲ್ ಗೆ ಎಸ್ ಎಂ ಎಸ್ ಗಳು ಬರುವುದು ಸಹಜ. ಅದೊಮ್ಮೆ ನನ್ನ ಮೇಲ್ ಗೆ ಪದೇ ಪದೇ ಬಂದು ಬೀಳುತ್ತಿದ್ದ ಅಪರಿಚಿತ ಆಗಂತುಕನ ಮೇಲ್ ಅನ್ನು ಕುತೂಹಲದಿಂದ ತೆರೆದು ನೋಡಿದೆ. ''ನಾನು ಉಗಾಂಡ ದೇಶದ ರಾಜಮನೆತನದ ಗಣ್ಯ ವ್ಯಕ್ತಿ, ಅಲ್ಲಿನ ಆಂತರಿಕ ಕಲಹಗಳಿಂದ ದೇಶಾಂತರ ಬಂದಿದ್ದೇನೆ. ರಾಯಭಾರ ಕಛೇರಿಯಲ್ಲಿ ನಿಮ್ಮ ಈ ಮೇಲ್ ವಿಳಾಸ ತಿಳಿಯಿತು, ದೇಶ ಬಿಟ್ಟು ಬರುವಾಗ ಅಪಾರ ಮೊತ್ತದ ಹಣವನ್ನು ತಂದಿದ್ದೇನೆ. ನಿಮ್ಮಲ್ಲಿ ವಿಶ್ವಾಸವಿಟ್ಟು ಯಾವುದಾದರೂ ವ್ಯವಹಾರದಲ್ಲಿ ನಿಮ್ಮ ಹೆಸರಿನಲ್ಲಿ ಹಣ ಹೂಡುವವನಿದ್ದೇನೆ. ಬಂದ ಲಾಭಾಂಶದಲ್ಲಿ ಅರ್ಧಕ್ಕರ್ಧ ಹಂಚಿಕೊಳ್ಳೋಣ ಈ ವಿಚಾರ ನಮ್ಮ ನಡುವೆ ಮಾತ್ರ ಇರಲಿ ಸಧ್ಯಕ್ಕೆ ನಿಮ್ಮ ವ್ಯಕ್ತಿ ವಿವರವನ್ನು ಕಳುಹಿಸಿ ಎಂದಿತ್ತು. ಪರವಾಗಿಲ್ವೇ ಮನೆ ಬಾಗಿಲಿಗೆ ಅದೃಷ್ಠ ಒದ್ಕೊಂಡು ಬಂದಿದೆ ಅಂತ ವಿವರ ಕಳುಹಿಸಿದರೆ ನನ್ನಲ್ಲಿರುವ ದಶಲಕ್ಷ ಹಣವನ್ನು ನಿಮ್ಮ ಅಕೌಂಟಿಗೆ ಹಾಕಬೇಕು ನಿಮ್ಮ ಬ್ಯಾಂಕ್ ಖಾತೆ ನಂಬರು ಕಳುಹಿಸಿ ಎಂಬ ಪತ್ರ ಬಂತು, ಆತನ ಮನವಿಯಂತೆ ಅಕೌಂಟ್ ನಂಬರು ಕಳುಹಿಸಿದರೆ ಹಣವನ್ನು ನನ್ನ ಖಾತೆಗೆ ವರ್ಗಾಯಿಸಲು ಇಂತಿಷ್ಟು ವಿನಿಮಯ ಹಣ ಕಟ್ಟಿ ಎಂದು ಆತನ ಬ್ಯಾಂಕ್ ಖಾತೆ ನಂಬರು ಬಂತು, ಅಲ್ಲಿಗೆ ಇದು ಟೋಪಿ ಸ್ಕೀಮು ಅಂತ ಖಾತ್ರಿ ಆಯ್ತು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದೆ. ಆದರೆ ನಿಮ್ಮ ಮೊಬೈಲು ನಂಬರನ್ನು ಲಕ್ಕಿ ಡ್ರಾದಲ್ಲಿ 250ಲಕ್ಷ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಅಭಿನಂದನೆಗಳು ನಿಮ್ಮ ವಿವರ ಕಳುಹಿಸಿ ಎಂದು ಲಕ್ಷಾಂತರ ಮಂದಿಗೆ ಇಂದಿಗೂ ಮೆಸೆಜುಗಳು ಬರುತ್ತಲೇ ಇವೆ ಆದರೆ ಅಮಾಯಕ ಜನ ಇಂಟರ್ ನೆಟ್ ಪಾರ್ಲರ್ ಗಳಿಗೆ ತೆರಳಿ ಮಾಹಿತಿ ನೀಡುವುದು, ಪದೇ ಪದೇ ಪತ್ರ ವ್ಯವಹಾರ ಮಾಡುವುದು, ಬ್ಯಾಂಕ್ ಗಳಲ್ಲಿ ಹಣ ಜಮಾವಣೆ ಮಾಡುವುದು ಇಂದಿಗೂ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಅನೇಕ ಮಂದಿ ಇಂಥ ಮೋಸದ ಬಹುಮಾನಗಳಿಗೆ ಬಲಿಯಾಗಿದ್ದಾರೆ. ದುಡ್ಡು ಕಳೆದುಕೊಂಡ ಎಷ್ಟೋ ಮಂದಿ ಮೋಸ ಹೋದದ್ದನ್ನು ಹೇಳಿಕೊಳ್ಳಲಾಗದೇ ಸಂಕಟಪಡುತ್ತಿದ್ದಾರೆ. ಜನರನ್ನು ಸುಲಭ ರೀತಿಯಲ್ಲಿ ಆಕರ್ಷಿಸುವ ಸಲುವಾಗಿ ವಿವಿಧ ನಮೂನೆಯ ಕಟ್ಟುಕಥೆಗಳನ್ನು ಹೆಣೆಯುವ ಮಂದಿ ದೆಹಲಿ,ಮುಂಬೈ ಇಲ್ಲವೇ ಕೊಲ್ಲಿ ರಾಷ್ಟ್ರಗಳನ್ನು ಕಾರಾಸ್ಥಾನವಾಗಿ ಮಾಡಿಕೊಂಡು ಟೋಪಿ ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರ ಮಾತನ್ನು ನಂಬಿ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಮುಗಿಯಿತು ಅದು ಮತ್ತೆ ಸಂಪರ್ಕಕ್ಕೆ ಸಿಗುವುದಿಲ್ಲ ಆದರೆ ಸದರಿ ಕ್ರಿಮಿನಲ್ ಗಳು ಸುಲಭವಾಗಿ ಮೋಬೈಲ್ ನಲ್ಲಿ ಸಿಕ್ಕುತ್ತಾರೆ.ಅಮೇರಿಕನ್ ಆಕ್ಸೆಂಟ್ ನಲ್ಲಿ ಮಾತನಾಡುತ್ತಾರೆ ನಂಬಿಕೆ ಬರುವ ರೀತಿ ವ್ಯವಹರಿಸುತ್ತಾರೆ. ಇನ್ನೇನು ಮುಂದಿನ ವಾರ ಕೋಟಿ ರೂಪಾಯಿಗಳ ಬಹುಮಾನದ ಮೊತ್ತ ಬಂದೆ ಬಿಡುತ್ತೆ ಎಂಬಷ್ಟರ ಮಟ್ಟಿಗೆ ಅವರು ಆಮಿಷ ಒಡ್ಡುತ್ತಾರೆ.ಕೆಲವು ಸ್ಥಳೀಯರೊಂದಿಗೆ ಸೇರಿ ವಿದೇಶಿ ಕ್ರಿಮಿನಲ್ ಗಳು ಇಂಥಹ ದಂಧೆಗೆ ಇಳಿದಿದ್ದಾರೆ. ಈ ಬಗ್ಗೆ ಆಗಾಗ್ಯೆ ಸೈಬರ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ ಆದರೆ ಅಪರಾಧಿಗಳು ಸಿಕ್ಕಿರುವ ಪ್ರಕರಣಗಳು ಅತ್ಯಂತ ಕಡಿಮೆ. ಹೆಸರು ಹೇಳಲು ಇಚ್ಚಿಸದ ಪತ್ರಿಕೆಯ ಓದುಗರೊಬ್ಬರು ಇಂತಹ ವಂಚನೆಗೆ ಬಲಿಯಾಗಿದ್ದಾರೆ. ಬಹುಮಾನದ ಆಸೆಗೆ ಅತ್ತ ಕಡೆಯಿಂದ ಹೇಳಿದಷ್ಟು ದುಡ್ಡನ್ನು ಹಂತ ಹಂತವಾಗಿ ಅನಾಮತ್ತು 2ಲಕ್ಷರೂ ವರೆಗೆ ಕಟ್ಟಿದ್ದಾರೆ. ಇದಾಗಿ 7-8ತಿಂಗಳ ನಂತರವೂ ವಂಚಕ ಅವರ ಮೋಬೈಲಿಗೆ ವಂಚಕ ದಹಲಿಯಿಂದ ಫೋನಾಯಿಸುತ್ತಿದ್ದಾನೆ. ಬಹುಮಾನದ ಮೊತ್ತವನ್ನು ಪಾವತಿಸಲು ಅಂತಿಮವಾಗಿ ಇನ್ನೂ ಹೆಚ್ಚುವರಿ 20ಸಾವಿರ ಕಟ್ಟಿ ಅನ್ನುತ್ತಿದ್ದಾನೆ. ಆತನನ್ನು ಹುಡುಕಿಕೊಂಡು ಒಂದೆರೆಡುಬಾರಿ ದೆಹಲಿಗೆ ಹೋಗಿ ಬಂದದ್ದಾಗಿದೆ ಆದರ ಆತ ಕಣ್ಣಾಮುಚ್ಚಾಲೆ ಆಟ ಆಡುತ್ತಾ ತಪ್ಪಿಸಿಕೊಂಡಿದ್ದಾನೆ ನಂಬುವಂತಹ ಸಬೂಬು ಹೇಳಿದ್ದಾನೆ. ವಂಚನೆಗೊಳಗಾದ ಓದುಗ ತನಗಾದ ವಂಚನೆಯಿಂದ ಪರಿತಪಿಸುತ್ತಿದ್ದಾನೆ. ಇದೇ ರೀತಿ ಬಹುಮಾನದ ಆಸೆಗೆ ಬಿದ್ದ ಹಲವು ಮಂದಿ ಇಂದಿಗೂ ಇಂತ ಮೆಸೇಜುಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಪೈಕಿ ಸರ್ಕಾರಿ ನೌಕರರು, ವ್ಯವಹಾರಸ್ಥರು, ವಿದ್ಯಾರ್ಥಿಗಳು ಇದ್ದಾರೆ. ಅಷ್ಟೆ ಏಕೆ ಜಿಲ್ಲೆಯ ಕೆಲವು ಪೋಲೀಸರು ಮತ್ತಿ ಎಸ್ ಐ ಗಳು ಕೂಡ ಇಂತ ಆಮಿಷಕ್ಕೆ ತುತ್ತಾಗಿ ಪಿಗ್ಗಿ ಬಿದ್ದಿದ್ದಾರೆ. ಸುಲಭ ಮಾರ್ಗದಲ್ಲಿ ದುಡ್ಡು ಸಿಗುತ್ತದೆ ಎಂದರೆ ಯಾರಿಗಾದರೂ ಆಸೆ ಸಹಜವೇ ಆದರೆ ಅದನ್ನು ಪರಿಗ್ರಹಿಸಿ ನೋಡುವ ಗುಣ ಬೆಳೆಯಬೇಕಿದೆ. ಆಧುನಿಕ ಜಗತ್ತಿನಲ್ಲಿ ವಂಚನೆಗೆ ನೂರು ದಾರಿಗಳಿವೆ ಬಣ್ಣ ಬಣ್ಣದ ಆಕರ್ಷಣೆ ಒಡ್ಡಿ ವಂಚಿಸುವ ಮೋಸಗಾರರಿದ್ದಾರೆ ಆದರೆ ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.   

ಸೋಮವಾರ, ಅಕ್ಟೋಬರ್ 18, 2010

ರಾಗಿ,ಅವರೇಕಾಯಿಗೆ ಹಸಿರು ಹುಳು ಕಾಟ!

ಅರಕಲಗೂಡು: ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದ ರೈತ ನಿರೀಕ್ಷಿಸಿದ ಫಸಲು ಬರದೇ ಕಂಗೆಟ್ಟು ಹೋಗಿರುವಾಗಲೇ ಪ್ರಮುಖ ಆಹಾರ ಬೆಳೆಯಾದ ರಾಗಿ ಬೆಳೆಗೆ ಹಸಿರು ಹುಳುವಿನ ಕಾಟ ಉಂಟಾಗಿದ್ದು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ತಾಲೂಕಿನ ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳ ರಾಗಿ,ಅವರೇಕಾಳು, ತಡಣಿಕಾಳು ಬೆಳೆಗೆ ಹಸಿರು ಹುಳುವಿನ ಕಾಟ ದಟ್ಟವಾಗಿ ಹರಡಿದ್ದು 2-3ದಿನಗಳಲ್ಲೆ ಫಸಲನ್ನು ಹಾಳುಮಾಡುತ್ತಿವೆ. ತಾಲೂಕಿನಲ್ಲಿ ಮೊದಲ ಭಾರಿಗೆ ಈ ಮಾಹಿತಿ ಅನುಸರಿಸಿ ರಾಮನಾಥಪುರ ಹೋಬಳಿಯ ಮಲ್ಲಾಪುರ, ಗಂಗೂರು, ರಾಗಿಮರೂರು, ಲಕ್ಕೂರು ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿದ್ದ ಅರಕಲಗೂಡು ಪೊಟ್ಯಾಟೋ ಕ್ಲಬ್ ನ ಯೋಗಾರಮೇಶ್ ಈ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಕೃಷಿ ಮಾಹಿತಿಗಾಗಿ ತಾಲೂಕಿನಲ್ಲಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್ ಗೆ ಬಂದ ಮಾಹಿತಿ ಅನುಸರಿಸಿ ಗ್ರಾಮಗಳಿಗೆ ಕೃಷಿ ತಜ್ಞರೊಂದಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆಗಳನ್ನು ಆಲಿಸಿ ಕೃಷಿ ತಜ್ಞರಾದ ಡಾ|| ರಾವುಲ್, ಡಾ|| ಅರುಣಕುಮಾರ್ ಅವರನ್ನು ಸಂಪರ್ಕಿಸಿ ಹಸಿರು ಹುಳು ನಿವಾರಣೆಗೆ ಪರಿಹಾರೋಪಾಯ ಸೂಚಿಸಿದರು. ಈ ಹಿಂದೆ ಟೊಬ್ಯಾಕೋ, ಶುಂಠಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆದ ಭೂಮಿಯಲ್ಲಿ ರಾಗಿ ಬೆಳೆದಾಗ ಇಂತಹ ಸಮಸ್ಯೆ ಕಂಡು ಬಂದಿದೆ ಎನ್ನಲಾಗುತ್ತಿದೆ. ಈ ಭಾಗದ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ರಾಗಿ ಬೆಳೆ ಹಸಿರು ಹುಳುವಿನ ಕಾಟಕ್ಕೆ ತುತ್ತಾಗಿದೆ. ಪ್ರತೀ ಎಲೆಯ ಮೇಲೂ 3-4ಹುಳುಗಳೂ ಹರಿದಾಡುತ್ತಿದ್ದು 3-4ದಿನದಲ್ಲಿ ಬುಡಸಮೇತ ಬೆಳೆಯನ್ನು ತಿಂದು ಹಾಕುತ್ತಿವೆ. ರೇಷ್ಮೇ ಹುಳುವಿನ ಮಾದರಿಯಲ್ಲಿ ರೂಪಾಂತರ ಹೊಂದುತ್ತಿರುವ ಇದು ಅಂತಿಮ ಹಂತದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಹುಳುಗಳ ನಿವಾರಣೆಗೆ ರೈತರು ತಮಗೆ ತೋಚಿದ ರೀತಿಯಲ್ಲಿ ಔಷಧ ಸಿಂಪಡಿಸಿದ್ದಾರಾದರೂ ಹುಳುವಿನ ಹತೋಟಿ ಆಗಿಲ್ಲ. ಆದರೆ ಪೊಟ್ಯಾಟೋ ಕ್ಲಬ್ ನ ಕೃಷಿ ತಜ್ಞರಾದ ಡಾ|| ರಾವುಲ್ ಗೊಬ್ಬರದ ಅಂಗಡಿಗಳಲ್ಲಿ ದೊರೆಯುವ ಕ್ರಿಮಿನಾಶಕಗಳಾದ ಲ್ಯಾನೆಟ್ ಪೌಡರಿನೊಂದಿಗೆ ನಿರ್ದಿಷ್ಠ ಪ್ರಮಾಣದ ನೀರನ್ನು ಸೇರಿಸಿ ಸಿಂಪರಣೆ ಮಾಡಬಹುದು ಅದೇ ರೀತಿ ಆವಂತ್ 1ಲಿ. ಗೆ 0.5ಗ್ರಾಂ ನೀರು ಬೆರೆಸಿ ಸಿಂಪರಣೆ ಮಾಡಿದಲ್ಲಿ ಹುಳುವಿನ ನಿವಾರಣೆ ಆಗುವುದು ಎಂದು ತಿಳಿಸಿದ್ದಾರೆ. ಎಲ್ಲ ಕ್ರಿಮಿನಾಶಕ ಮಾರಾಟದ ಅಂಗಡಿಗಳಲ್ಲೂ ಈ ಕ್ರಿಮಿನಾಶಕಗಳು ಲಭ್ಯವಿದೆ ರೈತರಿಗೆ ಹೆಚ್ಚಿನ ಮಾಹಿತಿ ಬೇಕಾದರೆ ಪೊಟ್ಯಾಟೋ ಕ್ಲಬ್ ನ ಮೊಬೈಲ್ ಸಂಖ್ಯೆ 9141573331ಕ್ಕೆ ಕರೆ ಮಾಡಬಹುದು ಎಂದು ಯೋಗಾರಮೇಶ್ ಹೇಳಿದ್ದಾರೆ. ಕ್ರಿಮಿನಾಶಕ ಮಾರಾಟಗಾರರಾಗಲು ನಿರ್ದಿಷ್ಠವಾಗಿ ತಿಳುವಳಿಕೆ ಇರುವಂತೆ ಕೃಷಿ ಪಧವೀಧರರಿಗೆ ಮಾತ್ರ ಲೈಸೆನ್ಸ್ ನೀಡಿದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಯೋಗಾರಮೇಶ್ ಅಭಿಪ್ರಾಯಪಟ್ಟರು.
ಕೃಷಿಅಧಿಕಾರಿಗಳ ಭೇಟಿ: ಪೊಟ್ಯಾಟೋ ಕ್ಲಬ್ ನ ತಂಡ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿದ ಮೇಲೆ ಎಚ್ಚೆತ್ತುಕೊಂಡಿರುವ ತಾಲೂಕು ಕೃಷಿ ಅಧಿಕಾರಿಗಳ ತಂಡ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೆಲ ತಜ್ಞರೊಂದಿಗೆ ಹಸಿರು ಹುಳು ಕಾಟವಿರುವ ಕೃಷಿ ಜಮೀನುಗಳಿಗೆ ಭೇಟಿ ನೀಡಿತ್ತು.

ಮಂಗಳವಾರ, ಅಕ್ಟೋಬರ್ 12, 2010

ಖಾತ್ರಿ ಅನುಷ್ಠಾನ ತಡೆ ನಿವಾರಣೆಗೆ 'ಹಗಲು ವೇಷ'ದ ತಂಡ !

ಅರಕಲಗೂಡು: ಕುರಿ ಕಾಯಲು ತೋಳ ಬಿಟ್ಟರೆ ಹೇಗಿರುತ್ತೆ? ಹೌದು ಇಂತಹುದೇ ಪರಿಸ್ಥಿತಿ ಈಗ ತಾಲೂಕಿನಲ್ಲಿ ನಿರ್ಮಾಣವಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಹಾಗೂ ಕೂಲಿ ಬಿಡುಗಡೆ ಗೊಳಿಸುವ ಉದ್ದೇಶದಿಂದ ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ ವರದಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದ 5ತಂಡಗಳನ್ನು ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿನರಸಯ್ಯ ರಚಿಸಿದ್ದಾರೆಂದು ತಿಳಿದು ಬಂದಿದೆ..ತಮಾಷೆಯ ಸಂಗತಿಯೆಂದರೆ ಉದ್ಯೋಗ ಖಾತ್ರಿಯ ಎಬಿಸಿಡಿ ಗೊತ್ತಿಲ್ಲದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಈಗಾಗಲೇ ನಡೆದಿರುವ ಖಾತ್ರಿ ಅಕ್ರಮದ ಪಾಲುದಾರರಾಗಿರುವ ಆರೋಪ ಹೊತ್ತಿರುವ ಜಿ.ಪಂ. ಇಂಜಿನಿಯರುಗಳನ್ನು ತಾಂತ್ರಿಕ ಸಲಹೆಗಾರರನ್ನಾಗಿ ಮಾಡಲಾಗಿದೆ ಮತ್ತು ಅಕ್ರಮದ ನೇರ ಪಾಲುದಾರರಾದ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಕೆಲವು ಪಿಡಿಓಗಳು ಈ ತಂಡದ ಮಾರ್ಗದರ್ಶಕರಾಗಿರುವುದು ದುರಂತವೇ ಸರಿ.ಸದರಿ ಕೆಲಸ ನಿರ್ವಹಿಸಲು ಪ್ರತೀ ತಾಲೂಕುಗಳಲ್ಲು ಸಾಮಾಜಿಕ ಲೆಕ್ಕಪರಿಶೋಧಕರುಗಳಿದ್ದಾರೆ ಹಾಗೂ ಪ್ರಾಮಾಣಿಕವಾಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ ಆದರೆ ತಾಲೂಕು ಹೊರತು ಪಡಿಸಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾತ್ರಿ ಯೋಜನೆಯ ುಸ್ತುವಾರಿ ಹೊತ್ತ ಅಧಿಕಾರಿಗಳೇ ಲೆಕ್ಕಪರಿಶೋಧಕರುಗಳನ್ನು ಬೆದರಿಸಿ ಮಟ್ಟಹಾಕುವ ಪ್ರಯತ್ನ ನಡೆಸಿರುವುದರಿಂದ ಅಕ್ರಮ ಖಾತ್ರಿಯ ಮಹಾತ್ಮೆ ತಿಳಿಯುತ್ತಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಈಗ ಗುಟ್ಟಾಗಿ ಉಳಿದಿಲ್ಲ, ನಿಗದಿತ ಕೂಲಿಕಾರರ ಸಂಖ್ಯೆಗಿಂತ ದುಪ್ಪಟ್ಟು ಕಾಮಗಾರಿಗಳ ನಿರ್ವಹಣೆ, ಬೋಗಸ್ ದಾಖಲೆಗಳು, ಕೆಲಸವೇ ನಡೆಯದೇ ಬಿಲ್ ಪಡೆದಿರುವುದು, ಒಂದೇ ಕೆಲಸಕ್ಕೆ 3-4ಬಿಲ್ ಗಳನ್ನು ಪಡೆದಿರುವುದು, ನಕಲಿ ಎನ್ ಎಂ ಆರ್ ಹೀಗೆ ಒಂದೇ ಎರಡೇ. ಈ ಎಲ್ಲ ಕರ್ಮಕಾಂಡಗಳ ಕುರಿತು ರಾಜ್ಯ ಮಟ್ಟದ ತನಿಖಾ ಸಮಿತಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ, ಇದೇ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಸಹಾ ಅಕ್ರಮಗಳು ನಡೆದಿರುವುದನ್ನು ಪ್ರಮಾಣಿಕರಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ, ವರದಿಯನುಸಾರ ಇಬ್ಬರು ಇಂಜಿನಿಯರುಗಳು ಮತ್ತು ಒಬ್ಬ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತುಗೊಂಡಿದ್ದಾರೆ. ಇದೀಗ ರಚನೆ ಆಗಿರುವ ಹೊಸ ತಂಡದ ಉದ್ದೇಶವೇ ಸಾರ್ವಜನಿಕ ವಲಯದಲ್ಲಿ ಶಂಕೆಗೆ ಕಾರಣವಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧಕರ ವರದಿಗಿಂತ ಭಿನ್ನವಾಗಿ ಈ ತಂಡ ವರದಿ ನೀಡಿತೇ ಎಂಬುದು ಈಗ ಪ್ರಶ್ನೆಯಾಗಿದೆ. ಅಧಿಕಾರಿಗಳು ಮಾಡಿದ ತಪ್ಪುಗಳು ಮತ್ತು ಹಣದ ಲೂಟಿಯಿಂದ ನೈಜವಾಗಿ ಕೆಲಸವಾಗಿರುವ ಕಡೆಯೂ ದುಡ್ಡು ಬಾರದೇ ನಿಂತು ಹೋಗಿದೆ, ಜನಪ್ರತಿನಿಧಿಗಳ ಮಾತುಕೇಳಿ ದಾಖಲೆಯಲ್ಲಿ ಇಲ್ಲದ ಜಿ.ಪಂ ಸೆಲ್ಫ್ ಕೆಲಸಗಳನ್ನು ಬೇಕಾಬಿಟ್ಟಿಯಾಗಿ ಸೇರಿಸಿದ್ದರಿಂದಾಗಿ ಕೆಲಸ ನಡೆದರೂ ತಾಲೂಕಿನ ಹಲವೆಡೆ ಕ್ರಿಯಾ ಯೋಜನೆ ಅನುಮೋದನೆ ಇಲ್ಲದಿರುವುದರಿಂದ ಕೂಲಿಕಾರರ ದುಡ್ಡು ನಿಂತುಹೋಗಿದೆ. ಇದೆಲ್ಲಾ ಹೋಗಲಿ ಎಂದರೆ ಕೂಲಿಕಾರರು ಮಾಡಿದ ಕೆಲಸಕ್ಕಿಂತ 100ಪಟ್ಟು ಹೆಚ್ಚು ಬೋಗಸ್ ಕಾಮಗಾರಿಗಳನ್ನು ತೋರಿಸಿ ರಾಜಾರೋಷವಾಗಿ 2.80ಕೋಟಿ ಸರಕು-ಸಾಮಾಗ್ರಿ ಹಣವನ್ನು ಇಂಜಿನಿಯರುಗಳು ಕೊಳ್ಳೆ ಹೊಡೆದಿದ್ದಾರೆ. ಅಧಿಕೃತ ದಾಖಲೆಗಳೊಂದಿಗೆ ಕೂಲಿಕಾರರಿಗೆ ವಂಚನೆಯಾಗಿರುವ ಕುರಿತು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮತ್ತು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಒಂದು ವಿಶ್ವಸನೀಯ ಮೂಲದ ಪ್ರಕಾರ ತಾಲೂಕಿನ ಎಲ್ಲಾ 29 ಪಂಚಾಯ್ತಿಗಳಲ್ಲೂ ಅಕ್ರಮಗಳು ಕಣ್ಣಿಗೆ ಕಟ್ಟುವಂತೆ ನಡೆದಿದ್ದು ಹಲವುಮಂದಿ ಸರ್ಕಾರಿ ನೌಕರರು ಕಂಬಿ ಹಿಂದೆ ಹೋಗುವ ಲಕ್ಷಣಗಳಿವೆ.ಆದರೆ ಯೋಜನೆಯ ಮೇಲೆ ದುಷ್ಪರಿಣಾಮ ಉಂಟಾಗಿ ಕೇಂದ್ರ ಸರ್ಕಾರ ಅನುದಾನ ಸ್ಥಗಿತವಾಗುತ್ತದೆಂಬ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ತಡವಾಗುತ್ತಿದೆ ಎಂದು ತಿಳಿದು ಬಂದಿದೆ, ಹಂತ ಹಂತವಾಗಿ ತಪ್ಪಿತಸ್ಥರನ್ನು ಬಲಿಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಓಡಿಗೆ ವಹಿಸಲು ಚಿಂತನೆ ನಡೆಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ಇಡೀ ಪ್ರಕರಣ ರಾಜ್ಯ ಲೋಕಾಯುಕ್ತದ ಸುಪರ್ದಿಗೆ ಬಂದರೂ ಅಚ್ಚರಿ ಏನಿಲ್ಲ. ಇವೆಲ್ಲಾ ಬೆಳವಣಿಗೆಯ ನಡುವೆಯೇ ಜಿ.ಪಂ. ಸಿಇಓ ವರದಿಯ ಹಿನ್ನೆಲೆಯಲ್ಲಿ ಸರಕು-ಸಾಮಾಗ್ರಿ ಬಿಲ್ ಪಾವತಿಯಾಗಿದ್ದರೂ ಕಾಮಗಾರಿಗಳು ನಡೆಯದಿಲ್ಲದಿರುವುದರಿಂದ ಸ್ಟಾಕ್ ಪರಿಶೀಲನೆಗೆ ಕ್ಷಿಪ್ರ ಜಾಗೃತ ದಳ ಧಾಳಿ ನಡೆಸಲಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಕೆಂದ್ರ ತಂಡವೂ ಸಹಾ ಜಿಲ್ಲೆಯ ಒಟ್ಟು ಅಕ್ರಮ ಪರಿಶೀಲನೆಗೆ ಮುಂದಿನ ತಿಂಗಳು ಆಗಮಿಸುವ ನಿರೀಕ್ಷೆ ಇದೆಯೆಂದು ತಿಳಿದುಬಂದಿದೆ.

ಸೋಮವಾರ, ಅಕ್ಟೋಬರ್ 4, 2010

ಉದ್ಯೋಗ ಖಾತ್ರಿ ಕೂಲಿ ಬಡುಗಡೆಗೆ ಪ್ರತಿಭಟನಾ ಧರಣಿಅರಕಲಗೂಡು:ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಾಲ್ಲೂಕು ಕಛೇರಿ ಎದುರು ಧರಣಿ ನಡೆಸಿದರು. ಜಡಿಎಸ್ ಮುಖಂಡ ಬೊಮ್ಮೇಗೌಡ ಮಾತನಾಡಿ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ ಕಳೆದ 10ತಿಂಗಳಿನಿಂದ ಕೂಲಿ ವೆಚ್ಚ ನೀಡಿಲ್ಲ, ಬದಲಾಗಿ ಸರಕು ಸಾಮಗ್ರಿ ಬಿಲ್ ಗಳನ್ನು ಪಾವತಿಸಲಾಗಿದೆ, ಅಧಿಕಾರಿಗಳು ಕೂಲಿ ಹಣವನ್ನು ಪಾವತಿಸದೇ ವಂಚಿಸಿದ್ದಾರೆ ಅವರಿಗೆ ಅಮಾನತ್ತು ಶಿಕ್ಷೆಯಲ್ಲ, ಜೈಲಿಗೆ ಅಟ್ಟಿ ಹಣವನ್ನು ವಸೂಲಿ ಮಾಡಿ ಎಂದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾ.ಪಂ ಅಧ್ಯಕ್ಷ ಎಚ್ ಮಾದೇಶ್ ಮಾತನಾಡಿ ಕ್ರಿಯಾಯೋಜನೆಯಲ್ಲಿ ಸೇರದ ಕೆಲಸಗಳಿಗೆ ಸರಕು ಸಾಮಾಗ್ರಿ ಬಿಲ್ ಗಳನ್ನು ತಯಾರಿಸಿ 3ಕೋಟಿ ಗೂ ಹೆಚ್ಚು ಹಣವನ್ನು ಲೂಟಿ ಮಾಡಿದ ಅಧಿಕಾರಿಗಳು ಅಮಾನತ್ತಿನ ನೆವದಲ್ಲಿ ಹೆಂಡತಿ ಮಕ್ಕಳ ಜೊತೆ ಮೋಜಿನ ಪ್ರವಾಸ ಕೈಗೊಂಡಿದ್ದಾರೆ, ಕೆಲಸ ಮಾಡಿದ ಕೂಲಿಕಾರರು ಕೂಲಿಗೂ ಗತಿಯಿಲ್ಲದೇ ಪರಿತಪಿಸುತ್ತಿದ್ದಾರೆ ಇಂತಹ ಸ್ಥಿತಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ದ ತಕ್ಷಣವೇ ಸೂಕ್ತ ಕ್ರಮ ಜರುಗಿಸಿ ಹಣವಸೂಲಿಗೆ ಕ್ರಮ ಜರುಗಿಸಬೇಕು ಎಂದರು. ಜಿ.ಪಂ. ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ ಯೋಜನೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಪರಿಣಾಮವಾಗಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನೆಡೆ ಆಗಿದೆ, ಜನ ಕೂಲಿ ಇಲ್ಲದೇ ಪರಿತಪಿಸುತ್ತಿದ್ದಾರೆ ಆದ್ದರಿಂದ ತಕ್ಷಣವೇ ಹಣ ಬಿಡುಗಡೆಗೆ ಸರ್ಕಾರ ಗಮನಹರಿಸಬೇಕು ಎಂದರು. ಜಿ.ಪಂ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಅಧಿಕಾರಿಗಳು ಯೋಜನೆಯನ್ನು ದಿಕ್ಕು ತಪ್ಪಿಸಿದ್ದಾರೆ, ತಕ್ಷಣ ಕೂಲಿ ಬಿಡುಗಡೆ ಮಾಡಿ ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ದ ಕ್ರಮವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ಜಿ.ಪಂ. ಸದಸ್ಯರಾದ ಬಿ ಜೆ ಅಪ್ಪಣ್ಣ, ನೀರುಬಳಕೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷ ದೊಡ್ಡೇಗೌಢ, ಮುಖಂಡರಾದ ಜನಾರ್ಧನಗುಪ್ತ, ಮತ್ತಿತರರು ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಹಾಗೂ ಮುಖಂಡರಾದ ಕೇಶವಮೂರ್ತಿ ವಹಿಸಿದ್ದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ತಹಸೀಲ್ದಾರ್ ಸವಿತಾ ಅವರಿಗೆ ಸಲ್ಲಿಸಿದರು.


ಅರಕಲಗೂಡು:ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಅ.5ರಂದು ಬೆಳಿಗ್ಗೆ 11ಗಂಟೆಗೆ ಕರೆಯಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ತಾಲ್ಲಕು ಪಂಚಾಯ್ತಿ ಅಧ್ಯಕ್ಷ ಮಾದೇಶ್ ಸಭೆಯ ಅಧ್ಯಕ್ಷತೆ ವಹಿಸುವರು.

ಪ್ರತಿಭಟನೆ: ಕೊಣನೂರು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಪರಿವರ್ತಿಸುವವರೆಗೆ ಸಾರ್ವಜನಿಕ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ವಿವಿಧ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಅ.5ರಿಂದ ಗ್ರಾಮ ಪಂಚಾಯ್ತಿ ಎದರು ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಮತ್ತು ಯಾರೂ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೋರಾಟ ಸಮಿತಿಯ ಮುಖಂಡ ಕಬ್ಬಳಿಗೆರೆ ಬೈರೇಗೌಡ ಹೇಳಿದ್ದಾರೆ. ಇಂದು ಕೋಟೆ ಕೋಡಿ ಅಮ್ಮನ ದೇಗುಲದಲ್ಲಿ ನಡೆದ ಸರ್ವಪಕ್ಷದ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿ.ಪಂ. ಸದಸ್ಯ ಅಪ್ಪಣ್ಣ, ಮುಖಂಡರಾದ ಚೌಡೇಗೌಡ,ತಾ.ಪಂ. ಸದಸ್ಯ ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಭಾನುವಾರ, ಅಕ್ಟೋಬರ್ 3, 2010

ಬಾಳೆ ಬೆಳೆದು ನೆಮ್ಮದಿಯ ಬದುಕು ಸಾಗಿಸಿ:ಡಾ. ರವೋಫ್

ಅರಕಲಗೂಡು: ರೈತರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಬೆಳೆ ನಷ್ಟ ಹೊಂದಿ ಸಂಕಟಕ್ಕೆ ಸಿಲುಕುತ್ತಿದ್ದಾರೆ, ಆದರೆ ಸರಿಯಾದ ಕ್ರಮಗಳನ್ನು ಶ್ರದ್ದೆಯಿಂದ ಅನುಸರಿಸಿದರೆ ರೈತರು ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಪ್ರಗತಿಪರ ಕೃಷಿಕ ಡಾ|| ರವೂಫ್ ಹೇಳಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಪೋಟ್ಯಾಟೋ ಕ್ಲಬ್ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ 'ಬಾಳೆ ಒಂದು ಮುಖ್ಯ ಬೆಳೆ ಹಾಗೂ ಉಪಬೆಳೆ' ಕುರಿತು ಮಾಹಿತಿ ನೀಡಿ ಸಂವಾದ ನಡೆಸಿದ ಅವರು ಮಳೆ ಹಾಗೂ ವಾತಾವರಣ ಕೈಕೊಟ್ಟರೆ ರೈತರು ಸಹಜವಾಗಿ ವಾಣಿಜ್ಯ ಬೆಳೆ ಗಳಲ್ಲಿ ನಷ್ಟ ಹೊಂದುತ್ತಾರೆ ಆದರೆ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿಕೊಂಡು ಕೃಷಿ ಮಾಡಿದರೆ ಯಾವುದೇ ರೀತಿಯ ತೊಂದರೆಯೂ ಎದುರಾಗದು ಎಂದರು. ರೈತರು ಟೊಮ್ಯಾಟೋ, ಮೆಣಸಿನಕಾಯಿ, ಆಲೂಗಡ್ಡೆ ಇತ್ಯಾದಿಗಳನ್ನು ಬೆಳೆದು ಸೂಕ್ತ ಬೆಲೆಯು ಸಿಗದೆ ತೊಂದರೆ ಅನುಭವಿಸುತ್ತಾರೆ ಆದರೆ ಬಾಳೆ ಬೆಳೆದ ರೈತ ನಷ್ಟಹೊಂದಿದ ಉದಾಹರಣೆ ಸಿಗಲು ಸಾಧ್ಯವಿಲ್ಲ, ನಾನು ಒಂದು ಎಕರೆಯಲ್ಲಿ 3-4ಲಕ್ಷದವರೆಗೆ ಆದಾಯ ಪಡೆದಿದ್ದೇನೆ ನೀವು ಕೂಡ ಅಂತಹದ್ದನ್ನು ಸಾಧಿಸಲು ಸಾಧ್ಯವಿದೆ, ಪ್ರಯತ್ನ ಮತ್ತು ಶ್ರದ್ದೇ ಮಾತ್ರ ನಿಮ್ಮ ಕೈ ಹಿಡಿಯುತ್ತದೆ ಎಂದರು. ಕಡಿಮೆ ಖರ್ಚಿನಲ್ಲಿ ಬೆಳೆಯಲ್ಪಡುವ ಬಾಳೆಯನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗುತ್ತಿಲ್ಲ, ಇಲ್ಲಿನ ಉತ್ಪಾದನೆ ಸಾಲದೆ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ,ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬಾಳೆಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ರವೂಫ್ ನುಡಿದರು. ಆಸಕ್ತ ರೈತರು ನನ್ನ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಬಹುದು, ಬಾಳೆ ಬೆಳೆಗೆ ಬೇಕಾದ ಮಾರ್ಗದರ್ಶನವನ್ನು ನೀಡಲು ಸದಾ ಸಿದ್ದನಿರುತ್ತೇನೆ, ಹಾಗೆಯೇ ಆಸಕ್ತ ರೈತರು ಮುಂದೆ ಬಂದರೆ 5000ಬಾಳೆ ಗಿಡಗಳನ್ನು ಉಚಿತವಾಗಿ ನೀಡುತ್ತೇನೆ ಎಂದು ಘೋಷಿಸಿದರು. ನಾನು ಬಾಳೆ ಬೆಳೆ ಜೊತೆಗೆ ಅನಾನಸ್ ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಸಹಾ ಬೆಳೆಯುತ್ತಿದ್ದೇನೆ, ಸಾವಯವ ಗೊಬ್ಬರನ್ನು ತಯಾರಿಸಿಕೊಂಡು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಇಳುವರಿ ಪಡೆಯಲಾಗುತ್ತಿದೆ ಎಂದರು. ಕೃಷಿ ತಜ್ಞ ದತ್ತಾತ್ರೇಯ ಮಾತನಾಡಿ ಕೃಷಿ ಸಂಸ್ಕೃತಿ ಮರೆಯಬಾರದು, ಕೃಷಿ ನಿಂತ ನೀರಲ್ಲ ಅದು ಸದಾ ಚಲನೆಯುಳ್ಳದ್ದು ಜನರಿಗೆ ಬದುಕು ಕೊಡುವ ಪ್ರಯತ್ನವನ್ನು ಅದು ಮಾಡುತ್ತದೆ ಎಂದರು. ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾರಮೇಶ್ ಮಾತನಾಡಿ ರೈತರು ಆರ್ಥಿಕವಾಗಿ ಸಧೃಢವಾಗಬೇಕಾದರೆ ವಿವೇಚನಾಯುಕ್ತವಾದ ಕೃಷಿ ಮಾಡಬೇಕು. ನಷ್ಟದ ಬೆಳೆಗಳನ್ನು ಬೆಳೆದು ಶ್ರಮ-ಹಣ ಎರಡನ್ನೂ ಪೋಲು ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಬೇಡಿ, ಹೆಚ್ಚಿನ ವೆಚ್ಚವಿಲ್ಲದೇ ಬೆಳೆಯಬಹುದಾದ ಬೆಳೆಗಳ ಮಾಹಿತಿ ಪಡೆದು ಅದರ ಪ್ರಯೋಜನ ಪಡೆಯಿರಿ ಎಂದರು. ಬಾಳೆ ಬೆಳೆಗೆ ಅಗತ್ಯವಿರುವ ಪ್ರೋತ್ಸಾಹದಾಯಕವಾದ ಸಾಲ ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಲಭ್ಯವಿದೆ ಅಗತ್ಯಕ್ಕನುಸಾರವಾಗಿ ಅದನ್ನು ಬಳಸಿಕೊಳ್ಲಿ ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಜ್ಞರಾದ ಅರುಣ್ ಕುಮಾರ್, ಸೂರ್ಯನಾರಾಯಣ ಮಾತನಾಡಿದರು. ಪ್ರಗತಿ ಪರ ರೈತರಾದ ಹೆಮ್ಮಿಗೆ ಮೋಹನ್, ಹೆದ್ದಾರಿ ಉಪವಿಭಾಗದ ಅಭಿಯಂತರ ಸೋಮಶೇಖರ್, ಮುಖಂಡರಾದ ಜಯಪ್ಪ, ಕಾಂತರಾಜು, ಸತ್ಯನಾರಾಯಣ,ಆರ್ ಕೆ ಮಂಜುನಾಥ್, ಸಾದಿಕ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಅರಕಲಗೂಡು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ ಕೂಲಿ ಹಣವನ್ನು ತಕ್ಷಣವೆ ಬಿಡುಗಡೆ ಮಾಡಬೇಕು ಎಂದು ಅ.4 ರಂದು ಪಟ್ಟಣದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 150ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದು ಮಾಹಿತಿ ನೀಡಿರುವ ಅಧಿಕಾರಿಗಳು ಸರಕು ಸರಬರಾಜು ವೆಚ್ಚವನ್ನು ಪಡೆದಿದ್ದಾರೆ ಆದರೆ ಕಳೆದ 10ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಪಾವತಿಸದೇ ವಂಚನೆ ಮಾಡುತ್ತಿದ್ದಾರೆ ಅಲ್ಲದೇ ಅಕ್ರಮದಲ್ಲಿ ಸಿಲುಕಿ ಅಮಾನತ್ತುಗೊಂಡಿದ್ದಾರೆ ಕೂಲಿಕಾರ ಕೂಲಿ ಇಲ್ಲದೇ ಪರಿತಪಿಸುವಂತಾಗಿದೆ ಆದ್ದರಿಂದ ತಕ್ಷಣವೇ ಕೂಲಿ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿರುವ ಮಾದೇಶ್, ಕೂಲಿಕಾರರ ಹಿತ ಕಾಯುವ ದಿಸೆಯಲ್ಲಿ ಸ್ಥಳೀಯ ಸಂಸ್ಥೆಗಳ ಜಿ.ಪಂ ಸದಸ್ಯರುಗಳು, ತಾ.ಪಂ. ಸದಸ್ಯರುಗಳು ಹಾಗೂ ಗ್ರಾ.ಪಂ ಸದಸ್ಯರುಗಳ ನೇತೃತ್ವದಲ್ಲಿ ಕೂಲಿಕಾರರೊಂದಿಗೆ ತಾಲ್ಲೂಕು ಕಛೇರಿ ಮುಂದೆ ಬೆಳಿಗ್ಗೆ 11ಗಂಟೆಯಿಂದ ಪ್ರತಿಭಟನಾ ಧರಣಿ ನಡೆಸಲಾಗುವುದುಎಂದು ತಿಳಿಸಿದ್ದಾರೆ.
ರೈತ ಸಂಘದ ಪ್ರತಿಭಟನೆ: ಬಿಜೆಪಿ ಸರ್ಕಾರ ರೈತರ ಬಗ್ಗೆ ತಳೆದಿರುವ ಧೋರಣೆ, ಬೆಳೆನಷ್ಟ, ನಕಲಿ ರಸಗೊಬ್ಬರ, ನಕಲಿ ಬೀಜ ಹಾಗು ಕೃಷಿ ಉತ್ನ್ನಕ್ಕೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸದ ಸರ್ಕಾರದ ವಿರುದ್ದ ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ಹೊ.ತಿ ಹುಚ್ಚಪ್ಪ ತಿಳಿಸಿದ್ದಾರೆ.

ಅರಕಲಗೂಡು: ತಾಲೂಕಿನ ಕೊಣನೂರು ಗ್ರಾ.ಪಂ.ಗೆ ಇದೇ ಅ.24ರಂದು ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸಲು ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಗ್ರಾಮವಾಗಿರುವ ಕೊಣನೂರು ಈಗ ಗ್ರಾಮ ಪಂಚಾಯ್ತಿ ಆಡಳಿತವನ್ನು ಹೊಂದಿದೆ. 25ಸದಸ್ಯ ಬಲವಿರುವ ಈ ಪಂಚಾಯ್ತಿಗೆ ಅತೀ ಹೆಚ್ಚು ಕಂದಾಯವೂ ಸಂಗ್ರಹವಾಗುತ್ತಿದೆ, ಮೂರು ಹಳ್ಳಿಗಳ ವ್ಯಾಪ್ತಿಯನ್ನೂ ಸಹಾ ಇದು ಹೊಂದಿದೆ. ಆದರೆ ಗ್ರಾ.ಪಂ ಆಗಿರುವುದರಿಂದ ಬರುತ್ತಿರುವ ಅಭಿವೃದ್ದಿ ಅನುದಾನ ಸಾಲದೇ ಅಗತ್ಯ ಅಭಿವೃದ್ದಿ ಕಾಮಗಾರಿಗಳಿಂದ ಗ್ರಾಮದ ಜನತೆ ವಂಚಿತರಾಗಿದ್ದಾರೆ. ಕಳೆದ ಬಜೆಟ್ ನಲ್ಲಿ ತಾಲೂಕು ಕೇಂದ್ರದ ಪ.ಪಂ. ಯನ್ನು ಪುರಸಭೆ ಮಾಡಿ ಕೊಣನೂರಿನ ಗ್ರಾ.ಪಂ. ಯನ್ನು ಪ.ಪಂ. ಮಾಡುವ ಪ್ರಸ್ತಾವನ್ನು ಬಿಜೆಪಿ ಸರ್ಕಾರ ಮಾಡಿತ್ತು ಆದರೆ ಕೊಟ್ಟ ಮಾತು ಉಳಿಸಿಕೊಳ್ಳದ ಸಿಎಂ ಯಡಿಯೂರಪ್ಪ ನಿಲುವಿನಿಂದ ಸ್ಥಳೀಯ ಸಂಸ್ಥೆಗಳು ಯಥಾ ಸ್ಥಿತಿಯಲ್ಲೆ ಉಳಿಯುವಂತಾಗಿದೆ. ಇದರಿಂದ ಬೇಸತ್ತಿರುವ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪತ್ರಿಕೆಯೊಂದಿಗೆ ಮಾತನಾಡಿ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿಸಿ ಪ.ಪಂ. ಮಾಡದಿದ್ದರೆ ಅ.24ರಂದು ನಡೆಯುವ ಸಾರ್ವಜನಿಕ ಚುನಾವಣೆಯನ್ನು ಬಹಿಸಷ್ಕರಿಸುತ್ತೇವೆ ಈ ಕುರಿತು ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಮಾಡಲಾಗುವುದು ಎಂದರು.

ಗಾಂಧೀ ತತ್ವಾದರ್ಶ ಅನುಕರಣೀಯವಾಗಬೇಕು-ಎಟಿಆರ್

ಅರಕಲಗೂಡು: ಪ್ರಸಕ್ತ ಸಂಧರ್ಭದಲ್ಲಿ ಮಹಾತ್ಮ ಗಾಂಧಿಯವರ ತತ್ವಾದರ್ಶ ಅನುಕರಣೀಯವಾಗಬೇಕು ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹೇಳಿದ್ದಾರೆ. ಪಟ್ಟಣದ ನೂತನ ಮಹಾತ್ಮಗಾಂಧಿ ಬಡಾವಣೆ, ನಾಗೇಂದ್ರಶ್ರೇಷ್ಠಿ ಉದ್ಯಾನವನ, ಗಾಂಧಿ ಸೇವಾ ಸಂಘವನ್ನು ಉದ್ಗಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಆದರ್ಶಗಳು ಮರೆಯಾಗಿವೆ, ಭ್ರಷ್ಟಾಚಾರ ಮೇರೆ ಮೀರಿದೆ ಇದು ಪ್ರಜಾ ತಾಂತ್ರಿಕ ವ್ಯವಸ್ಥೆ ಸುಲಲಿತವಾಗಿ ನಡೆಯಲು ಅಡ್ಡಿಯಾಗಿದೆ ಎಂದರು. ಗಾಂಧಿ ಹುಟ್ಟಿದ ಈ ನಾಡಿನಲ್ಲಿ ನ್ಯಾಯ-ನೀತಿ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ದೇಶದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮ ಸಾಕ್ಷಿಯಾಗಿದೆ, ಅಯೋಧ್ಯೆ ತೀರ್ಪು ಸರ್ವಸಮ್ಮತವಾಗಿ ಪ್ರಕಟಗೊಳ್ಳುವ ಮೂಲಕ ನ್ಯಾಯಾಂಗದ ಸುಭದ್ರತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು. ಇವತ್ತಿನ ದಿನಗಳಲ್ಲಿ ನಮ್ಮೆದುರು ಕಠಿಣ ಸನ್ನಿವೇಶಗಳಿವೆ, ಆಂತರಿಕ ವ್ಯವಸ್ಥೆಯಲ್ಲಿ ಅನುಕೂಲಕ್ಕೆ ತಕ್ಕಂತೆ ಅಧಿಕಾರಗಳನ್ನು ಬಳಸಿಕೊಳ್ಲುತ್ತಿರುವುದರಿಂದ ಕ್ಷುಲ್ಲುಕ ವಿಚಾರಗಳು ಪ್ರಾಧಾನ್ಯತೆ ಪಡೆಯುತ್ತಿರುವುದರಿಂದ ಸಾಧನೆಗಳೆಲ್ಲ ಮಂಕಾಗುತ್ತಿವೆ ಎಂದು ವಿಷಾಧಿಸಿದರು. ಜಗತ್ತಿನ ಬಹುದೊಡ್ಡ ಪ್ರಜಾತಾಂತ್ರಿಕ ರಾಷ್ಟ್ರವೆಂಬ ಹೆಗ್ಗಳಿಕೆಯ ಭಾರತದ ಮಾನ ಕಾಮನ್ ವೆಲ್ತ್ ಗೇಮ್ ಸಂಘಟಿಸುವಲ್ಲಿನ ಭ್ರಷ್ಟಾಚಾರದ ಮೂಲಕ ಹರಾಜಾಗಿದೆ ಇದು ದುರಾದೃಷ್ಟಕರ, ಗಾಂಧಿ ಹುಟ್ಟಿದ ಈ ದೇಶದಲ್ಲಿ ದುರಾಸೆಗೆ, ಸ್ವಾರ್ಥಕ್ಕೆ ಅವಕಾಶ ಕಲ್ಪಿಸಬಾರದು. ದುರಾಸೆಯನ್ನು ಮೆಟ್ಟಿ ನಿಲ್ಲುವ ಮೂಲಕ ಪಾವಿತ್ರ್ಯತೆಯನ್ನು ತರಬೇಕಾಗಿದೆ ಎಂದರು. ರಾಜ್ಯದಲ್ಲಿ ಬಡವರು ಹಾಗೂ ರೈತರ ಹೆಸರಿನಲ್ಲಿ ಸರ್ಕಾರದ ಸಚಿವರೆ ನಕಲಿ ಕಂದಾಯ ದಾಖಲೆಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ಹಣ ನುಂಗಿದ್ದಾರೆ ಈ ಬಗ್ಗೆ ನಾನು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ಈಗ ಅವೆಲ್ಲ ಬಹಿರಂಗವಾಗುತ್ತಿವೆ, ತಪ್ಪು ಮಾಡಿದವರಿಗೆ ತಡವಾಗಿಯಾದರೂ ಶಿಕ್ಷೆಯಾಗಲೇ ಬೇಕು ಆ ಮೂಲಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಚಿಲುಮೆ ಮಠದ ಶ್ರೀ ಜಯದೇವಸ್ವಾಮಿಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅರೆಮಾದನಹಳ್ಳಿ ಮಠದ ಶ್ರೀ ಗುರುಶಿಸುಜ್ಞಾನ ಸ್ವಾಮಿಜಿ, ಕಾಗಿನೆಲೆ ಗುರುಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ,ಆಶೀರ್ವಚನ ನೀಡಿದರು. ರಾಜ್ಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಂಚೀರಾಯ ಪ್ರೌಢಶಾಲೆಯ ಶಿಕ್ಷಕ ಕೆ ಗಂಗಾಧರಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಪ.ಪಂ. ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ರಮೇಶ್, ಸದಸ್ಯ ಶಂಕರಯ್ಯ, ಶಶಿಕುಮಾರ್, ಜನಾರ್ಧನಗುಪ್ತ, ಎ. ಜಿ ರಾಮನಾಥ್ ಉಪಸ್ಥಿತರಿದ್ದರು. ಗಾನಕಲಾ ಸಂಘದ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶನಿವಾರ, ಅಕ್ಟೋಬರ್ 2, 2010

141st Gandhi Jayanthi Celebration at Arkalgud KARAVE


1) Gandhi Jayanthi Celebration held at Arkalgud Pet Bypass Road Councilor Ramanna, Leaders Tajim Pasha, Kanchenahally Srinivas, Sadiq Saab and others were seen on the picture.
2)Gandhi Jayanthi programme celeberation held at Arkalgud, Minority Leader Sadiq Saab presiding the function Senior Advocate Janardhana Gupta, ANV College Trustee A G Ramanath, Karave Leader Bhaskar, Councillor Shankaraiah and Tajim Pasha were seen the picture.ಶುಕ್ರವಾರ, ಅಕ್ಟೋಬರ್ 1, 2010

ಅರಕಲಗೂಡು:ಅಭಿವೃದ್ದಿಗೆ ಕಿರಿಕಿರಿ ಇಲ್ಲಿ ಹೊಸತೇನಲ್ಲ!

  • ಅರಕಲಗೂಡುಜಯಕುಮಾರ್

ಅರಕಲಗೂಡು: ಅಕ್ಕಿಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅನ್ನೋ ಗಾದೆ ಮಾತಿದೆ, ಹಾಗೇ ಇಲ್ಲಿನ ಜನಕ್ಕೆ ಅಭಿವೃದ್ದಿ ಬೇಕು ಆದರೆ ಅಭಿವೃದ್ದಿಗೆ ಇರುವ ಅಡಚಣೆ ನಿವಾರಣೆ ಬೇಡ. ಹಾಗಂತ ಬಹುಸಂಖ್ಯೆಯ ಜನ ಹೀಗಿದ್ದಾರೆ ಅಂತಲ್ಲ, ಎಲ್ಲೋ 10ಪರ್ಸೆಂಟಿನಷ್ಟು ಜನ ಇಂತಹ ಕ್ರಿಯೆಗೆ ಮುಂದಾಗುತ್ತಾರಾದ್ದರಿಂದ ಒಟ್ಟು ಅಭಿವೃದ್ದಿಯೋಜನೆಗೆ ಅಡ್ಡಿ ಆತಂಕ ಉಂಟಾಗುತ್ತಲೇ ಇರುತ್ತದೆ. ಹಾಗಾಗಿ ಇವತ್ತಿಗೂ ಪೂರ್ಣ ಪ್ರಮಾಣದಲ್ಲಿ ಪಟ್ಟಣದ ಸಮರ್ಪಕ ಅಭಿವೃದ್ದಿ ಸಾಧ್ಯವಾಗಿಲ್ಲ. ಇಂತಹ ಕ್ರಿಯೆಗೆ ಕೆಲವೊಮ್ಮೆ ರಾಜಕೀಯ ಪ್ರತಿಷ್ಟೆಯೂ ಜೊತೆಯಲ್ಲೇ ಬರುತ್ತೆ. ಹಾಸನ ಜಿಲ್ಲೆಯಲ್ಲಿ ಅರಕಲಗೂಡು ಅಭಿವೃದ್ದಿಯ ದೃಷ್ಟಿಯಿಂದ ಹಿಂದುಳಿದ ತಾಲೂಕು ಕೇಂದ್ರ. ಇದನ್ನರಿಯಲು ತಾಲೂಕು ಸಂಚಾರ ಮಾಡಬೇಕಿಲ್ಲ, ಕೇಂದ್ರ ಸ್ಥಾನವಾದ ಅರಕಲಗೂಡಿಗೆ ಬಂದರೆ ಸಾಕು ಅದರ ದರ್ಶನವಾಗುತ್ತದೆ. ನಂಜುಂಡಪ್ಪ ಆಯೋಗದ ವರದಿಯಲ್ಲಿ ಅರಕಲಗೂಡಿನ ಉಲ್ಲೇಖವಿದೆ, ಬಿಜೆಪಿ ಸರ್ಕಾರ ಬಂದ ಮೇಲೆ ಆಯೋಗದ ವರದಿಯನುಸಾರ ಹೆಚ್ಚಿನ ಅನುದಾನ ಅಭಿವೃದ್ದಿ ಸಲುವಾಗಿಯೇ ಹರಿದು ಬಂದಿದೆ. ಅದರೆ ಅದರ ಬಳಕೆ ಮಾತ್ರ ವಿಳಂಬವಾಗಿದೆ. ಇದಕ್ಕೆ ಅಧಿಕಾರಸ್ಥರ ಇಚ್ಚಾಶಕ್ತಿಯೂ ಕಾರಣವೆಂದರೆ ತಪ್ಪಾಗಲಾರದು. ಪಟ್ಟಣವನ್ನು ಸುಂದರವಾಗಿ ಮಾಡಬೇಕು ಎಂದು ಇಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳೂ ಆಶಿಸುತ್ತಾರೆ, ಹಾಗೂ ಆ ದಿಸೆಯಲ್ಲಿ ತಕ್ಕಮಟ್ಟಿಗೆ ಕೆಲಸವೂ ಆಗುತ್ತಿದೆ. ರಸ್ತೆ ಆಗಿದೆ, ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಸುಸಜ್ಜಿತ ಬಸ್ ನಿಲ್ದಾಣ ಪೂರ್ಣಗೊಳ್ಳುತ್ತಿದೆ, ಸಾರ್ವಜನಿಕ ಈಜುಕೊಳದ ಪ್ರಸ್ತಾವನೆ ಇದೆ. ಪಟ್ಟಣದ ಮುಖ್ಯ ಭಾಗಗಳಲ್ಲಿ ಹೈಮಾಸ್ಟ್ ದೀಪಗಳು ಬಂದಿವೆ ಆದರೆ ಹದಗೆಟ್ಟ ಸಂಚಾರಿ ವ್ಯವಸ್ಥೆ,ಬೇಕಾಬಿಟ್ಟಿಯಾಗಿ ನಿಲ್ಲುವ ಖಾಸಗಿ ವಾಹನಗಳು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಜನಸಂದಣಿ ಇರುವ ಕಡೆ ವೇಗವಾಗಿ ಸಾಗುವ ವಾಹನಗಳು ರಸ್ತೆ ದಾಟುವವರನ್ನು, ಪಾದಚಾರಿಗಳನ್ನು ಬೆಚ್ಚಿ ಬೀಳಿಸುತ್ತವೆ. ಹೊಳೆನರಸೀಪುರಕ್ಕೆ ಸಾಗುವ ರಸ್ತೆಯಲ್ಲಿ ರಸ್ತೆಯನ್ನೇ ಆಕ್ರಮಿಸಿರುವ ಖಾಸಗಿ ವಾಹನಗಳು ಅನಧಿಕೃತವಾಗಿ ಫುಟ್ ಪಾತ್ ಆಕ್ರಮಿಸಿ ಬೋರ್ಡನ್ನು ತಗುಲಿಸಿಕೊಂಡು ಬಿಟ್ಟಿವೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲುವ ವಾಹನಗಳ ಬಗ್ಗೆ ಸ್ಥಳೀಯ ಪೋಲೀಸರನ್ನ ಪ್ರಶ್ನಿಸಿದರೆ ಅವರಿಗೆ ಪಾರ್ಕಿಗ್ ಜಾಗ ಕೊಟ್ಟರೆ ಸ್ಥಳಾಂತರಿಸಬಹುದು ಪಟ್ಟಣ ಪಂಚಾಯ್ತಿಯವರು ಜಾಗ ಕೊಡಲಿ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ರಸ್ತೆ ಸುರಕ್ಷತೆಗಾಗಿ ಪಟ್ಟಣ ಪಂಚಾಯ್ತಿ ವತಿಯಿಂದ ಉಚಿತವಾಗಿ ಫಲಕಗಳನ್ನು ಪೋಲೀಸರಿಗೆ ನೀಡಲಾಗಿದೆ, ಪೋಲೀಸ್ ಚೌಕಿಗಳನ್ನು ನಿಗದಿತ ಸ್ಥಳದಲ್ಲಿ ಹಾಕಲು ಸಿದ್ದಪಡಿಸಿಟ್ಟು ಕೊಳ್ಳಲಾಗಿದೆಯಾದರೂ ಅವುಗಳನ್ನು ನಿಗದಿತ ಸ್ಥಳದಲ್ಲಿ ಹಾಕಿ ಸಂಚಾರಿ ವ್ಯವಸ್ಥೆ ಸುಧಾರಿಸಲು ಇನ್ನೂ ಕಾಲ ಕೂಡಿಬಂದಿಲ್ಲದಿರುವುದು ದುರಾದೃಷ್ಟಕರ ಸಂಗತಿ. ದಕ್ಷಿಣ ವಲಯ ಐಜಿಪಿ ಎ ಎಸ್ ಎನ್ ಮೂರ್ತಿ ಮತ್ತು ಎಸ್ಪಿ ಶರತ್ ಚಂದ್ರ ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು ಕೇಳಿ ಹೋದರೆ ವಿನಹ ಕನಿಷ್ಠ ಸುಧಾರಣೆಯೂ ಸಹಾ ಆಗಿಲ್ಲ. ಪಟ್ಟಣದ ಮುಖ್ಯ ರಸ್ತೆ ಗಳನ್ನು ಪುನರ್ ನಿರ್ಮಾಣ ಮಾಡುವಾಗ ಪೇಟೆ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿ ನಿರ್ಮಿಸುವ ಪ್ರಸ್ತಾವನೆಯೂ ಇತ್ತು ಆದರೆ ಅಡ್ಡಿ ಎದುರಾಗಿದ್ದರಿಂದ ಸ್ಥಗಿತವಾಗಿತ್ತು. ಇತ್ತೀಚೆಗೆ ಪಟ್ಟಣ ಪಂಚಾಯ್ತಿಯಲ್ಲಿ ಶಾಸಕ ಎ ಮಂಜು ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಯಾರಿಗೂ ತೊಂದರೆಯಾಗದಂತೆ ಪೇಟೆ ಮುಖ್ಯ ರಸ್ತೆಯನ್ನು ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಧ್ಯ ಒಂದು ಕಿಮಿ ಇರುವ ರಸ್ತೆಗೆ 93ಲಕ್ಷದ ಕ್ರಿಯಾ ಯೋಜನೆ ತಯಾರಿಸಿರುವ ಪ.ಪಂ. ರಸ್ತೆ ಅಗಲೀಕರಣದ ತೀರ್ಮಾನ ಕೈಗೊಂಡಿರುವುದರಿಂದ ಇನ್ನೂ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿದೆ. ಹಾಗಾಗಿ ಟೆಂಡರು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ರಸ್ತೆ ಅಗಲೀಕರಣದ ವೇಳೆ ಪಂಚಾಯ್ತಿ ಕಛೇರಿ ಮುಂದೆ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಉಳಿಸಿಕೊಂಡು ಮುಂದಕ್ಕೆ ಎರಡೂ ಬದಿಯಲ್ಲಿ ಅಗತ್ಯ ಜಾಗ ಪಡೆಯುವ ಪ್ರಕ್ರಿಯೆಗೆ ನಿರ್ದರಿಸಲಾಗಿದೆ. ಆದರೆ ಕೆಲ ದಶಕಗಳ ಹಿಂದೆ ಪೇಟೆಯ ಒಳಗೆ ಹೆದ್ದಾರಿ ಹಾದು ಹೋಗುತ್ತದೆ ಎಂದು ಆತಂಕಗೊಂಡ ಜನ ಅವರವರ ಶಕ್ತ್ಯಾನುಸಾರ ಹಣ, ಜಾಗ ಎರಡನ್ನೂ ನೀಡಿ ಪಟ್ಟಣದಿಂದ ಕೊಣನೂರಿಗೆ ಬೈಪಾಸ್ ರಸ್ತೆ ನಿರ್ಮಾಣವಾಗಲು ಸಹಕರಿಸಿದ್ದರು. ಈಗ ಮತ್ತೆ ಹಳೆ ಜಾಗದಲ್ಲೇ ಅಂದರೆ ಪೇಟೆಯ ಒಳಗೆ ರಸ್ತೆ ಅಗಲೀಕರಣವಾಗುತ್ತಿರುವುದು ಕೆಲವು ಕುಟುಂಬಗಳಿಗೆ ಆತಂಕಗೊಳ್ಳುವಂತೆ ಮಾಡಿದೆ, ಆದರೆ ಬಹುತೇಕ ಮಂದಿ ರಸ್ತೆ ಅಗಲೀಕರಣವನ್ನು ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲ ವಾಣಿಜ್ಯ ಮಳಿಗೆ ರಿಯಾಯ್ತಿ ಬೇಡೆ ತೆಗೆಯುವುದಿದ್ದರೆ ಅಗತ್ಯವಿರುವ ಎಲ್ಲಾ ಕಟ್ಟಡಗಳನ್ನು ಒಡೆಯಿರಿ ಎಂಬ ಅಭಿಪ್ರಾಯ ಬಂದಿದೆ ಎನ್ನಲಾಗಿದೆ, ಈ ಸಲುವಾಗಿ ಪಟ್ಟಣಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ದಿ ಅಧಿಕಾರಿಗಳು ಎಲ್ಲರಿಗೂ ಸರ್ವಸಮ್ಮತವಾಗುವಂತೆ ವಾಣಿಜ್ಯ ಮಳಿಗೆಗಳನ್ನು ಒಡೆದು ಬೇರೆ ಕಡೆ ಅವಕಾಶ ಕಲ್ಪಿಸಿ ಮುಂದುವರೆಯಲು ಸೂಚನೆ ನೀಡಿದ್ದಾರೆ.ಲಬ್ಯ ಮಾಹಿತಿ ಪ್ರಕಾರ ಈಗಿರುವ ರಸ್ತೆಯ ಮದ್ಯದಿಂದ ಎರಡೂ ಬದಿಗೂ ತಲಾ 30ಅಡಿ ವಿಸ್ತರಿಸುವ ಪ್ರಸ್ತಾವವಿದೆ. 40ಅಡಿ ರಸ್ತೆ, 5 ಅಡಿ ರಸ್ತೆ ವಿಭಜಕ, 10ಅಡಿ ಚರಂಡಿಗೆ ಬಾಕಿ ಎಂಟು ಅಡಿ ಪಾದಚಾರಿ ರಸ್ತೆ,ವಿದ್ಯತ್ ಕಂಬ ಹಾಗೂ ಯುಜಿಡಿಗೆ ಬಳಸುವ ಯೋಜನೆ ಇದೆ. ಲೋಕೋಪಯೋಗಿ ಸದರಿ ರಸ್ತೆ ನಿರ್ಮಾಣಕ್ಕೆ ಮಾತ್ರ ಪ.ಪಂ.ಗೆ ಅನುಮತಿನೀಡಲಿದ್ದು ಅದನ್ನು ಕಾಯಲಾಗುತ್ತಿದೆ. ಈ ವರ್ಷದ ದಸರೆಗೆ ಕೊರಕಲು ಬಿದ್ದಿರುವ ಪೇಟೆ ರಸ್ತೆಯನ್ನು ತಕ್ಕಮಟ್ಟಿಗೆ ಸಜ್ಜುಗೊಳಿಸಿ ನಂತರ ರಸ್ತೆ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎನ್ನುತ್ತಾರೆ ಪ.ಪಂ ಸದಸ್ಯ ರವಿಕುಮಾರ್.ಪಟ್ಟಣದ ನಿರ್ವಸಿತರಿಗೆ ಹಂಚಿಕೆಗೆ ಬಾಕಿ ಉಳಿದಿರುವ 300 ನಿವೇಶನಗಳನ್ನು ಹಂಚುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ, ಹಲವು ಬಾರಿ ಮುಂದೂಡಲ್ಪಟ್ಟಿದ್ದ ಸಭೆ ಕಳೆದ ವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿದ್ದು ಫಲಾನುಭವಿಗಳ ಮುಖದಲ್ಲಿ ಹರ್ಷ ಮೂಡಿಸಿದೆ. ಪಟ್ಟಣದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಹುಚ್ಚು ಹಿಡಿದ ನಾಯಿಗಳನ್ನು ಕೊಲ್ಲುವ ಕ್ರಿಯೆಗೆ ಚಾಲನೆ ಸಿಕ್ಕಿದೆ. ಪ.ಪಂ. 2.50ಕೋಟಿ ರೂಗಳ ಅನುದಾನದಲ್ಲಿ ಎಲ್ಲ ವಾರ್ಡ್ ಗಳಿಗೂ ಅಭಿವೃದ್ದಿ ಕ್ರಿಯಾಯೋಜನೆ ಅನುಮೋದನೆ ದೊರೆತಿದ್ದು ಶಾಸಕ ಎ.ಮಂಜು ಹಾಗುಅಧ್ಯಕ್ಷೆ ಯಶೋಧಮ್ಮ ಉಪಾಧ್ಯಕ್ಷ ರಮೇಶ್, ಪುರ ಪ್ರತಿನಿಧಿಗಳು ಉತ್ಸಾದಿಂದ ಚಾಲನೆ ನೀಡಿದ್ದಾರೆ. ಕುಡಿಯುವ ನೀರಿನ ಅಭಿವೃದ್ದಿ ಯೋಜನೆ ಮಂಜೂರಾಗಿದ್ದರು ಅನುಷ್ಠಾನ ಕುಂಟುತ್ತಾ ಸಾಗಿದೆ. ಪಟ್ಟಣದ ಜನತೆಯ ಬಹುದಿನಗಳ ಕನಸು ಯುಜಿಡಿ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಪಟ್ಟಣದ ಕೆಲವು ವಾರ್ಡಗಳಲ್ಲಿ ಈಗಾಗಲೇ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದರೂ ಜೈಬೀಮ್ ನಗರ, ಕೆಇಬಿ ರಸ್ತೆಯ ವಸತಿ ಪ್ರದೇಶ, ಅನಕೃ ಬಡಾವಣೆ, ಸಾಲಗೇರಿ ಮತ್ತಿತರೆಡೆಗಳಲ್ಲಿ ಹೈ ಮಾಸ್ಟ್ ಅಳವಡಿಕೆಯಾಗಬೇಕಿದೆ. ಆದರೆ ಜನ ವಸತಿ ವಿರಳವಾಗಿರುವ ಬಸವೇಶ್ವರ ಸರ್ಕಲ್ ನಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಪ.ಪಂ. ಆದ್ಯತೆ ನೀಡಿದ ಔಚಿತ್ಯ ತಿಳಿಯುತ್ತಿಲ್ಲ. ಪ.ಪಂ. ಕೋಟೆ ಪ್ರದೇಶದಲ್ಲಿ ಖರೀದಿಸಿರುವ ರುದ್ರಭೂಮಿ ಜಾಗದ ಅಭಿವೃದ್ದಿಗೆ ಗ್ರೀನ್ ಸಿಗ್ನಲ್ ದೊರಕಿದ್ದು ಮುಂದಿನ ಕ್ರಮಕ್ಕೆ ಸಿದ್ದತೆ ನಡೆಯುತ್ತಿದೆ. ತ್ಯಾಜ್ಯ ವಿಲೇವಾರಿಗೆ ದೇವರಹಳ್ಳಿ ಬಳಿ ಇರುವ ಜಾಗದ ಜೊತೆಗೆ ಇನ್ನೂ ಎರಡು ಎಕರೆ ಜಾಗ ಅವಶ್ಯವಿರುವುದರಿಂದ ಪ್ರಸ್ತಾವನೆ ಸಲ್ಲಿಸಲು ಪ.ಪಂ. ಚಿಂತನೆ ನಡೆಸಿದೆ. ಅಂದುಕೊಂಡ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ನಡೆದರೆ ಪ.ಪಂ. ಜನಮನ್ನಣೆಗೆ ಪಾತ್ರವಾಗುತ್ತದೆ ಆದರೆ ಇವತ್ತಿಗೂ ಸಾರ್ವಜನಿಕರಿಂದ ಉಪೇಕ್ಷೆಗೆ ಒಳಗಾಗುವ ವಿಚಾರವೆಂದರೆ ಪ.ಪಂ. ಇದುವರೆಗೂ ತನ್ನ ಆಸ್ತಿಯನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ವಿಫಲವಾಗಿರುವುದು, ಹಲವೆಡೆ ಒತ್ತುವರಿಯಾಗಿದ್ದರೂ ಅದು ಜಾಣ ಮೌನವನ್ನು ತಾಳಿದೆ. ಪಟ್ಟಣದ ಜನತೆಗೆ ಇದ್ದ ಟೌನ್ ಹಾಲ್ ಅನ್ನು ಅಕ್ರಮಿಸಿಕೊಂಡಿರುವ ಪ.ಪಂ. ತನ್ನ ಮೂಲ ಸ್ಥಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ದುಡ್ಡು ಮಾಡುವ ದಾರಿ ಕಂಡುಕೊಂಡಿದೆ, ಮತ್ತು ಟೌನ್ ಹಾಲ್ ಜಾಗದಲ್ಲಿ ಮನಸ್ಸಿಗೆ ಬಂದಂತೆ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿದೆ ಆ ಮೂಲಕ ಪಟ್ಟಣದ ಜನತೆಗೆ ಸಭೆ-ಸಮಾರಂಭ ನಡೆಸಲು ಅಡ್ಡ ಉಂಟಾಗಿದೆ. ಈಗ ಖಾಲಿ ಉಳಿದಿರುವ ಶಿಕ್ಷಕರ ಭವನದ ಎದುರಿಗಿರುವ ಜಾಗದ ಮೇಲೆ ಕಣ್ಣು ಹಾಕಿರುವ ಪ.ಪಂ. ಅಲ್ಲಿಗೆ ತನ್ನ ವಾಸ್ತವ್ಯ ಬದಲಿಸುವ ಆಲೋಚನೆ ಜೊತೆಗೆ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶ ಹೊಂದಿರುವ ಮಾಹಿತಿ ಇದೆ. ಆದರೆ ಸದರಿ ಜಾಗ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು ಇನ್ನೂ ಆ ಬಗ್ಗೆ ಕಾಲವೇ ನಿರ್ಣಯಿಸಬೇಕಾಗಿದೆ.

ಅರಕಲಗೂಡು: ಪಟ್ಟಣದ ಸಂತೆಮರೂರು ರಸ್ತೆಯಲ್ಲಿರುವ ನೂತನ ವಸತಿ ಲೇಔಟ್ ಗೆ ಮಹಾತ್ಮಗಾಂಧಿ ಬಡಾವಣೆ ಎಂದು ನಾಮಕರಣ ಮಾಡಲಾಗುವುದು ಎಂದು ಹಿರಿಯ ವಕೀಲ ಜನಾರ್ಧನ ಗುಪ್ತ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಗಾಂಧಿ ಜಯಂತಿಯ ಅಂಗವಾಗಿ ಕಾರ್ಯಕ್ರಮವನ್ನು ಮದ್ಯಾಹ್ನ 2ಗಂಟೆಗೆ ನೂತನ ವಸತಿ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಮಫಲಕ ಅನಾವರಣ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಶ್ರೀ ಗುರುಶಿವಸುಜ್ಞಾನ ಮೂರ್ತಿ, ಶ್ರೀ ಶಿವಾನಂದಪುರಿ ಸ್ವಾಮಿ, ಶ್ರೀ ಜಯದೇವ ಸ್ವಾಮಿ, ಶ್ರೀ ನಯಾಜ್ ಅಹಮದ್, ಫಾ ಜಾಯ್ ವರ್ಗೀಸ್, ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ಜಿಲ್ಲಾ ನ್ಯಾಯಾಧೀಶ ಹಾಲಪ್ಪ ಮತ್ತಿತರ ಗಣ್ಯರು ಪಾಲ್ಗೋಳ್ಳುವರು ಎಂದು ತಿಳಿಸಿದ್ದಾರೆ.

ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ಬಾಳೆ ಬೆಳೆ ಬೇಸಾಯ ಕ್ರಮದ ಬಗ್ಗೆ ಸಂವಾದ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಅ.3ರಂದು ಶಿಕ್ಷಕರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್ ತಿಳಿಸಿದ್ದಾರೆ. 'ಬಾಳೆ ಒಮದು ಮುಖ್ಯ ಬೆಳೆ ಹಾಗೂ ಉಪಬೆಳೆ ಎಂಬ ಕುರಿತು ಪ್ರಗತಿ ಪರ ರೈತ ಡಾ ರವೂಫ್ ಮಾತನಾಡುವರು, ಪರಿಸರವಾದಿ ಹೆಮ್ಮಿಗೆ ಮೋಹನ್, ತಜ್ಞ ಡಾ ಬಿ ಸಿ ಸೂರ್ಯನಾರಾಯಣ, ರೈತ ಪಾಲಾಕ್ಷ, ಎಸ್ ದತ್ತಾತ್ರಿ ಮಾಹಿತಿ ಹಾಗೂ ವಿಚಾರಗೋಷ್ಟಿಯಲ್ಲಿ ಪಾಲ್ಗೊಂಡು ರೈತರಿಗೆ ಉಪಯುಕ್ತ ಸಲಹೆಗಳನ್ನು ನೀಡುವರು, ಆಸಕ್ತ ರೈತರು ಸಭೆಯ ಸದುಪಯೋಗ ಪಡೆಯುವಂತೆ ಕೋರಲಾಗಿದೆ.