ಮಂಗಳವಾರ, ಅಕ್ಟೋಬರ್ 12, 2010

ಖಾತ್ರಿ ಅನುಷ್ಠಾನ ತಡೆ ನಿವಾರಣೆಗೆ 'ಹಗಲು ವೇಷ'ದ ತಂಡ !

ಅರಕಲಗೂಡು: ಕುರಿ ಕಾಯಲು ತೋಳ ಬಿಟ್ಟರೆ ಹೇಗಿರುತ್ತೆ? ಹೌದು ಇಂತಹುದೇ ಪರಿಸ್ಥಿತಿ ಈಗ ತಾಲೂಕಿನಲ್ಲಿ ನಿರ್ಮಾಣವಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಹಾಗೂ ಕೂಲಿ ಬಿಡುಗಡೆ ಗೊಳಿಸುವ ಉದ್ದೇಶದಿಂದ ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ ವರದಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದ 5ತಂಡಗಳನ್ನು ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿನರಸಯ್ಯ ರಚಿಸಿದ್ದಾರೆಂದು ತಿಳಿದು ಬಂದಿದೆ..ತಮಾಷೆಯ ಸಂಗತಿಯೆಂದರೆ ಉದ್ಯೋಗ ಖಾತ್ರಿಯ ಎಬಿಸಿಡಿ ಗೊತ್ತಿಲ್ಲದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಈಗಾಗಲೇ ನಡೆದಿರುವ ಖಾತ್ರಿ ಅಕ್ರಮದ ಪಾಲುದಾರರಾಗಿರುವ ಆರೋಪ ಹೊತ್ತಿರುವ ಜಿ.ಪಂ. ಇಂಜಿನಿಯರುಗಳನ್ನು ತಾಂತ್ರಿಕ ಸಲಹೆಗಾರರನ್ನಾಗಿ ಮಾಡಲಾಗಿದೆ ಮತ್ತು ಅಕ್ರಮದ ನೇರ ಪಾಲುದಾರರಾದ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಕೆಲವು ಪಿಡಿಓಗಳು ಈ ತಂಡದ ಮಾರ್ಗದರ್ಶಕರಾಗಿರುವುದು ದುರಂತವೇ ಸರಿ.ಸದರಿ ಕೆಲಸ ನಿರ್ವಹಿಸಲು ಪ್ರತೀ ತಾಲೂಕುಗಳಲ್ಲು ಸಾಮಾಜಿಕ ಲೆಕ್ಕಪರಿಶೋಧಕರುಗಳಿದ್ದಾರೆ ಹಾಗೂ ಪ್ರಾಮಾಣಿಕವಾಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ ಆದರೆ ತಾಲೂಕು ಹೊರತು ಪಡಿಸಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾತ್ರಿ ಯೋಜನೆಯ ುಸ್ತುವಾರಿ ಹೊತ್ತ ಅಧಿಕಾರಿಗಳೇ ಲೆಕ್ಕಪರಿಶೋಧಕರುಗಳನ್ನು ಬೆದರಿಸಿ ಮಟ್ಟಹಾಕುವ ಪ್ರಯತ್ನ ನಡೆಸಿರುವುದರಿಂದ ಅಕ್ರಮ ಖಾತ್ರಿಯ ಮಹಾತ್ಮೆ ತಿಳಿಯುತ್ತಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಈಗ ಗುಟ್ಟಾಗಿ ಉಳಿದಿಲ್ಲ, ನಿಗದಿತ ಕೂಲಿಕಾರರ ಸಂಖ್ಯೆಗಿಂತ ದುಪ್ಪಟ್ಟು ಕಾಮಗಾರಿಗಳ ನಿರ್ವಹಣೆ, ಬೋಗಸ್ ದಾಖಲೆಗಳು, ಕೆಲಸವೇ ನಡೆಯದೇ ಬಿಲ್ ಪಡೆದಿರುವುದು, ಒಂದೇ ಕೆಲಸಕ್ಕೆ 3-4ಬಿಲ್ ಗಳನ್ನು ಪಡೆದಿರುವುದು, ನಕಲಿ ಎನ್ ಎಂ ಆರ್ ಹೀಗೆ ಒಂದೇ ಎರಡೇ. ಈ ಎಲ್ಲ ಕರ್ಮಕಾಂಡಗಳ ಕುರಿತು ರಾಜ್ಯ ಮಟ್ಟದ ತನಿಖಾ ಸಮಿತಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ, ಇದೇ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಸಹಾ ಅಕ್ರಮಗಳು ನಡೆದಿರುವುದನ್ನು ಪ್ರಮಾಣಿಕರಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ, ವರದಿಯನುಸಾರ ಇಬ್ಬರು ಇಂಜಿನಿಯರುಗಳು ಮತ್ತು ಒಬ್ಬ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತುಗೊಂಡಿದ್ದಾರೆ. ಇದೀಗ ರಚನೆ ಆಗಿರುವ ಹೊಸ ತಂಡದ ಉದ್ದೇಶವೇ ಸಾರ್ವಜನಿಕ ವಲಯದಲ್ಲಿ ಶಂಕೆಗೆ ಕಾರಣವಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧಕರ ವರದಿಗಿಂತ ಭಿನ್ನವಾಗಿ ಈ ತಂಡ ವರದಿ ನೀಡಿತೇ ಎಂಬುದು ಈಗ ಪ್ರಶ್ನೆಯಾಗಿದೆ. ಅಧಿಕಾರಿಗಳು ಮಾಡಿದ ತಪ್ಪುಗಳು ಮತ್ತು ಹಣದ ಲೂಟಿಯಿಂದ ನೈಜವಾಗಿ ಕೆಲಸವಾಗಿರುವ ಕಡೆಯೂ ದುಡ್ಡು ಬಾರದೇ ನಿಂತು ಹೋಗಿದೆ, ಜನಪ್ರತಿನಿಧಿಗಳ ಮಾತುಕೇಳಿ ದಾಖಲೆಯಲ್ಲಿ ಇಲ್ಲದ ಜಿ.ಪಂ ಸೆಲ್ಫ್ ಕೆಲಸಗಳನ್ನು ಬೇಕಾಬಿಟ್ಟಿಯಾಗಿ ಸೇರಿಸಿದ್ದರಿಂದಾಗಿ ಕೆಲಸ ನಡೆದರೂ ತಾಲೂಕಿನ ಹಲವೆಡೆ ಕ್ರಿಯಾ ಯೋಜನೆ ಅನುಮೋದನೆ ಇಲ್ಲದಿರುವುದರಿಂದ ಕೂಲಿಕಾರರ ದುಡ್ಡು ನಿಂತುಹೋಗಿದೆ. ಇದೆಲ್ಲಾ ಹೋಗಲಿ ಎಂದರೆ ಕೂಲಿಕಾರರು ಮಾಡಿದ ಕೆಲಸಕ್ಕಿಂತ 100ಪಟ್ಟು ಹೆಚ್ಚು ಬೋಗಸ್ ಕಾಮಗಾರಿಗಳನ್ನು ತೋರಿಸಿ ರಾಜಾರೋಷವಾಗಿ 2.80ಕೋಟಿ ಸರಕು-ಸಾಮಾಗ್ರಿ ಹಣವನ್ನು ಇಂಜಿನಿಯರುಗಳು ಕೊಳ್ಳೆ ಹೊಡೆದಿದ್ದಾರೆ. ಅಧಿಕೃತ ದಾಖಲೆಗಳೊಂದಿಗೆ ಕೂಲಿಕಾರರಿಗೆ ವಂಚನೆಯಾಗಿರುವ ಕುರಿತು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮತ್ತು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಒಂದು ವಿಶ್ವಸನೀಯ ಮೂಲದ ಪ್ರಕಾರ ತಾಲೂಕಿನ ಎಲ್ಲಾ 29 ಪಂಚಾಯ್ತಿಗಳಲ್ಲೂ ಅಕ್ರಮಗಳು ಕಣ್ಣಿಗೆ ಕಟ್ಟುವಂತೆ ನಡೆದಿದ್ದು ಹಲವುಮಂದಿ ಸರ್ಕಾರಿ ನೌಕರರು ಕಂಬಿ ಹಿಂದೆ ಹೋಗುವ ಲಕ್ಷಣಗಳಿವೆ.ಆದರೆ ಯೋಜನೆಯ ಮೇಲೆ ದುಷ್ಪರಿಣಾಮ ಉಂಟಾಗಿ ಕೇಂದ್ರ ಸರ್ಕಾರ ಅನುದಾನ ಸ್ಥಗಿತವಾಗುತ್ತದೆಂಬ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ತಡವಾಗುತ್ತಿದೆ ಎಂದು ತಿಳಿದು ಬಂದಿದೆ, ಹಂತ ಹಂತವಾಗಿ ತಪ್ಪಿತಸ್ಥರನ್ನು ಬಲಿಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಓಡಿಗೆ ವಹಿಸಲು ಚಿಂತನೆ ನಡೆಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ಇಡೀ ಪ್ರಕರಣ ರಾಜ್ಯ ಲೋಕಾಯುಕ್ತದ ಸುಪರ್ದಿಗೆ ಬಂದರೂ ಅಚ್ಚರಿ ಏನಿಲ್ಲ. ಇವೆಲ್ಲಾ ಬೆಳವಣಿಗೆಯ ನಡುವೆಯೇ ಜಿ.ಪಂ. ಸಿಇಓ ವರದಿಯ ಹಿನ್ನೆಲೆಯಲ್ಲಿ ಸರಕು-ಸಾಮಾಗ್ರಿ ಬಿಲ್ ಪಾವತಿಯಾಗಿದ್ದರೂ ಕಾಮಗಾರಿಗಳು ನಡೆಯದಿಲ್ಲದಿರುವುದರಿಂದ ಸ್ಟಾಕ್ ಪರಿಶೀಲನೆಗೆ ಕ್ಷಿಪ್ರ ಜಾಗೃತ ದಳ ಧಾಳಿ ನಡೆಸಲಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಕೆಂದ್ರ ತಂಡವೂ ಸಹಾ ಜಿಲ್ಲೆಯ ಒಟ್ಟು ಅಕ್ರಮ ಪರಿಶೀಲನೆಗೆ ಮುಂದಿನ ತಿಂಗಳು ಆಗಮಿಸುವ ನಿರೀಕ್ಷೆ ಇದೆಯೆಂದು ತಿಳಿದುಬಂದಿದೆ.

ಕಾಮೆಂಟ್‌ಗಳಿಲ್ಲ: