ಶುಕ್ರವಾರ, ಅಕ್ಟೋಬರ್ 1, 2010

ಅರಕಲಗೂಡು:ಅಭಿವೃದ್ದಿಗೆ ಕಿರಿಕಿರಿ ಇಲ್ಲಿ ಹೊಸತೇನಲ್ಲ!

  • ಅರಕಲಗೂಡುಜಯಕುಮಾರ್

ಅರಕಲಗೂಡು: ಅಕ್ಕಿಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅನ್ನೋ ಗಾದೆ ಮಾತಿದೆ, ಹಾಗೇ ಇಲ್ಲಿನ ಜನಕ್ಕೆ ಅಭಿವೃದ್ದಿ ಬೇಕು ಆದರೆ ಅಭಿವೃದ್ದಿಗೆ ಇರುವ ಅಡಚಣೆ ನಿವಾರಣೆ ಬೇಡ. ಹಾಗಂತ ಬಹುಸಂಖ್ಯೆಯ ಜನ ಹೀಗಿದ್ದಾರೆ ಅಂತಲ್ಲ, ಎಲ್ಲೋ 10ಪರ್ಸೆಂಟಿನಷ್ಟು ಜನ ಇಂತಹ ಕ್ರಿಯೆಗೆ ಮುಂದಾಗುತ್ತಾರಾದ್ದರಿಂದ ಒಟ್ಟು ಅಭಿವೃದ್ದಿಯೋಜನೆಗೆ ಅಡ್ಡಿ ಆತಂಕ ಉಂಟಾಗುತ್ತಲೇ ಇರುತ್ತದೆ. ಹಾಗಾಗಿ ಇವತ್ತಿಗೂ ಪೂರ್ಣ ಪ್ರಮಾಣದಲ್ಲಿ ಪಟ್ಟಣದ ಸಮರ್ಪಕ ಅಭಿವೃದ್ದಿ ಸಾಧ್ಯವಾಗಿಲ್ಲ. ಇಂತಹ ಕ್ರಿಯೆಗೆ ಕೆಲವೊಮ್ಮೆ ರಾಜಕೀಯ ಪ್ರತಿಷ್ಟೆಯೂ ಜೊತೆಯಲ್ಲೇ ಬರುತ್ತೆ. ಹಾಸನ ಜಿಲ್ಲೆಯಲ್ಲಿ ಅರಕಲಗೂಡು ಅಭಿವೃದ್ದಿಯ ದೃಷ್ಟಿಯಿಂದ ಹಿಂದುಳಿದ ತಾಲೂಕು ಕೇಂದ್ರ. ಇದನ್ನರಿಯಲು ತಾಲೂಕು ಸಂಚಾರ ಮಾಡಬೇಕಿಲ್ಲ, ಕೇಂದ್ರ ಸ್ಥಾನವಾದ ಅರಕಲಗೂಡಿಗೆ ಬಂದರೆ ಸಾಕು ಅದರ ದರ್ಶನವಾಗುತ್ತದೆ. ನಂಜುಂಡಪ್ಪ ಆಯೋಗದ ವರದಿಯಲ್ಲಿ ಅರಕಲಗೂಡಿನ ಉಲ್ಲೇಖವಿದೆ, ಬಿಜೆಪಿ ಸರ್ಕಾರ ಬಂದ ಮೇಲೆ ಆಯೋಗದ ವರದಿಯನುಸಾರ ಹೆಚ್ಚಿನ ಅನುದಾನ ಅಭಿವೃದ್ದಿ ಸಲುವಾಗಿಯೇ ಹರಿದು ಬಂದಿದೆ. ಅದರೆ ಅದರ ಬಳಕೆ ಮಾತ್ರ ವಿಳಂಬವಾಗಿದೆ. ಇದಕ್ಕೆ ಅಧಿಕಾರಸ್ಥರ ಇಚ್ಚಾಶಕ್ತಿಯೂ ಕಾರಣವೆಂದರೆ ತಪ್ಪಾಗಲಾರದು. ಪಟ್ಟಣವನ್ನು ಸುಂದರವಾಗಿ ಮಾಡಬೇಕು ಎಂದು ಇಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳೂ ಆಶಿಸುತ್ತಾರೆ, ಹಾಗೂ ಆ ದಿಸೆಯಲ್ಲಿ ತಕ್ಕಮಟ್ಟಿಗೆ ಕೆಲಸವೂ ಆಗುತ್ತಿದೆ. ರಸ್ತೆ ಆಗಿದೆ, ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಸುಸಜ್ಜಿತ ಬಸ್ ನಿಲ್ದಾಣ ಪೂರ್ಣಗೊಳ್ಳುತ್ತಿದೆ, ಸಾರ್ವಜನಿಕ ಈಜುಕೊಳದ ಪ್ರಸ್ತಾವನೆ ಇದೆ. ಪಟ್ಟಣದ ಮುಖ್ಯ ಭಾಗಗಳಲ್ಲಿ ಹೈಮಾಸ್ಟ್ ದೀಪಗಳು ಬಂದಿವೆ ಆದರೆ ಹದಗೆಟ್ಟ ಸಂಚಾರಿ ವ್ಯವಸ್ಥೆ,ಬೇಕಾಬಿಟ್ಟಿಯಾಗಿ ನಿಲ್ಲುವ ಖಾಸಗಿ ವಾಹನಗಳು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಜನಸಂದಣಿ ಇರುವ ಕಡೆ ವೇಗವಾಗಿ ಸಾಗುವ ವಾಹನಗಳು ರಸ್ತೆ ದಾಟುವವರನ್ನು, ಪಾದಚಾರಿಗಳನ್ನು ಬೆಚ್ಚಿ ಬೀಳಿಸುತ್ತವೆ. ಹೊಳೆನರಸೀಪುರಕ್ಕೆ ಸಾಗುವ ರಸ್ತೆಯಲ್ಲಿ ರಸ್ತೆಯನ್ನೇ ಆಕ್ರಮಿಸಿರುವ ಖಾಸಗಿ ವಾಹನಗಳು ಅನಧಿಕೃತವಾಗಿ ಫುಟ್ ಪಾತ್ ಆಕ್ರಮಿಸಿ ಬೋರ್ಡನ್ನು ತಗುಲಿಸಿಕೊಂಡು ಬಿಟ್ಟಿವೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲುವ ವಾಹನಗಳ ಬಗ್ಗೆ ಸ್ಥಳೀಯ ಪೋಲೀಸರನ್ನ ಪ್ರಶ್ನಿಸಿದರೆ ಅವರಿಗೆ ಪಾರ್ಕಿಗ್ ಜಾಗ ಕೊಟ್ಟರೆ ಸ್ಥಳಾಂತರಿಸಬಹುದು ಪಟ್ಟಣ ಪಂಚಾಯ್ತಿಯವರು ಜಾಗ ಕೊಡಲಿ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ರಸ್ತೆ ಸುರಕ್ಷತೆಗಾಗಿ ಪಟ್ಟಣ ಪಂಚಾಯ್ತಿ ವತಿಯಿಂದ ಉಚಿತವಾಗಿ ಫಲಕಗಳನ್ನು ಪೋಲೀಸರಿಗೆ ನೀಡಲಾಗಿದೆ, ಪೋಲೀಸ್ ಚೌಕಿಗಳನ್ನು ನಿಗದಿತ ಸ್ಥಳದಲ್ಲಿ ಹಾಕಲು ಸಿದ್ದಪಡಿಸಿಟ್ಟು ಕೊಳ್ಳಲಾಗಿದೆಯಾದರೂ ಅವುಗಳನ್ನು ನಿಗದಿತ ಸ್ಥಳದಲ್ಲಿ ಹಾಕಿ ಸಂಚಾರಿ ವ್ಯವಸ್ಥೆ ಸುಧಾರಿಸಲು ಇನ್ನೂ ಕಾಲ ಕೂಡಿಬಂದಿಲ್ಲದಿರುವುದು ದುರಾದೃಷ್ಟಕರ ಸಂಗತಿ. ದಕ್ಷಿಣ ವಲಯ ಐಜಿಪಿ ಎ ಎಸ್ ಎನ್ ಮೂರ್ತಿ ಮತ್ತು ಎಸ್ಪಿ ಶರತ್ ಚಂದ್ರ ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು ಕೇಳಿ ಹೋದರೆ ವಿನಹ ಕನಿಷ್ಠ ಸುಧಾರಣೆಯೂ ಸಹಾ ಆಗಿಲ್ಲ. ಪಟ್ಟಣದ ಮುಖ್ಯ ರಸ್ತೆ ಗಳನ್ನು ಪುನರ್ ನಿರ್ಮಾಣ ಮಾಡುವಾಗ ಪೇಟೆ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿ ನಿರ್ಮಿಸುವ ಪ್ರಸ್ತಾವನೆಯೂ ಇತ್ತು ಆದರೆ ಅಡ್ಡಿ ಎದುರಾಗಿದ್ದರಿಂದ ಸ್ಥಗಿತವಾಗಿತ್ತು. ಇತ್ತೀಚೆಗೆ ಪಟ್ಟಣ ಪಂಚಾಯ್ತಿಯಲ್ಲಿ ಶಾಸಕ ಎ ಮಂಜು ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಯಾರಿಗೂ ತೊಂದರೆಯಾಗದಂತೆ ಪೇಟೆ ಮುಖ್ಯ ರಸ್ತೆಯನ್ನು ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಧ್ಯ ಒಂದು ಕಿಮಿ ಇರುವ ರಸ್ತೆಗೆ 93ಲಕ್ಷದ ಕ್ರಿಯಾ ಯೋಜನೆ ತಯಾರಿಸಿರುವ ಪ.ಪಂ. ರಸ್ತೆ ಅಗಲೀಕರಣದ ತೀರ್ಮಾನ ಕೈಗೊಂಡಿರುವುದರಿಂದ ಇನ್ನೂ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿದೆ. ಹಾಗಾಗಿ ಟೆಂಡರು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ರಸ್ತೆ ಅಗಲೀಕರಣದ ವೇಳೆ ಪಂಚಾಯ್ತಿ ಕಛೇರಿ ಮುಂದೆ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಉಳಿಸಿಕೊಂಡು ಮುಂದಕ್ಕೆ ಎರಡೂ ಬದಿಯಲ್ಲಿ ಅಗತ್ಯ ಜಾಗ ಪಡೆಯುವ ಪ್ರಕ್ರಿಯೆಗೆ ನಿರ್ದರಿಸಲಾಗಿದೆ. ಆದರೆ ಕೆಲ ದಶಕಗಳ ಹಿಂದೆ ಪೇಟೆಯ ಒಳಗೆ ಹೆದ್ದಾರಿ ಹಾದು ಹೋಗುತ್ತದೆ ಎಂದು ಆತಂಕಗೊಂಡ ಜನ ಅವರವರ ಶಕ್ತ್ಯಾನುಸಾರ ಹಣ, ಜಾಗ ಎರಡನ್ನೂ ನೀಡಿ ಪಟ್ಟಣದಿಂದ ಕೊಣನೂರಿಗೆ ಬೈಪಾಸ್ ರಸ್ತೆ ನಿರ್ಮಾಣವಾಗಲು ಸಹಕರಿಸಿದ್ದರು. ಈಗ ಮತ್ತೆ ಹಳೆ ಜಾಗದಲ್ಲೇ ಅಂದರೆ ಪೇಟೆಯ ಒಳಗೆ ರಸ್ತೆ ಅಗಲೀಕರಣವಾಗುತ್ತಿರುವುದು ಕೆಲವು ಕುಟುಂಬಗಳಿಗೆ ಆತಂಕಗೊಳ್ಳುವಂತೆ ಮಾಡಿದೆ, ಆದರೆ ಬಹುತೇಕ ಮಂದಿ ರಸ್ತೆ ಅಗಲೀಕರಣವನ್ನು ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲ ವಾಣಿಜ್ಯ ಮಳಿಗೆ ರಿಯಾಯ್ತಿ ಬೇಡೆ ತೆಗೆಯುವುದಿದ್ದರೆ ಅಗತ್ಯವಿರುವ ಎಲ್ಲಾ ಕಟ್ಟಡಗಳನ್ನು ಒಡೆಯಿರಿ ಎಂಬ ಅಭಿಪ್ರಾಯ ಬಂದಿದೆ ಎನ್ನಲಾಗಿದೆ, ಈ ಸಲುವಾಗಿ ಪಟ್ಟಣಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ದಿ ಅಧಿಕಾರಿಗಳು ಎಲ್ಲರಿಗೂ ಸರ್ವಸಮ್ಮತವಾಗುವಂತೆ ವಾಣಿಜ್ಯ ಮಳಿಗೆಗಳನ್ನು ಒಡೆದು ಬೇರೆ ಕಡೆ ಅವಕಾಶ ಕಲ್ಪಿಸಿ ಮುಂದುವರೆಯಲು ಸೂಚನೆ ನೀಡಿದ್ದಾರೆ.ಲಬ್ಯ ಮಾಹಿತಿ ಪ್ರಕಾರ ಈಗಿರುವ ರಸ್ತೆಯ ಮದ್ಯದಿಂದ ಎರಡೂ ಬದಿಗೂ ತಲಾ 30ಅಡಿ ವಿಸ್ತರಿಸುವ ಪ್ರಸ್ತಾವವಿದೆ. 40ಅಡಿ ರಸ್ತೆ, 5 ಅಡಿ ರಸ್ತೆ ವಿಭಜಕ, 10ಅಡಿ ಚರಂಡಿಗೆ ಬಾಕಿ ಎಂಟು ಅಡಿ ಪಾದಚಾರಿ ರಸ್ತೆ,ವಿದ್ಯತ್ ಕಂಬ ಹಾಗೂ ಯುಜಿಡಿಗೆ ಬಳಸುವ ಯೋಜನೆ ಇದೆ. ಲೋಕೋಪಯೋಗಿ ಸದರಿ ರಸ್ತೆ ನಿರ್ಮಾಣಕ್ಕೆ ಮಾತ್ರ ಪ.ಪಂ.ಗೆ ಅನುಮತಿನೀಡಲಿದ್ದು ಅದನ್ನು ಕಾಯಲಾಗುತ್ತಿದೆ. ಈ ವರ್ಷದ ದಸರೆಗೆ ಕೊರಕಲು ಬಿದ್ದಿರುವ ಪೇಟೆ ರಸ್ತೆಯನ್ನು ತಕ್ಕಮಟ್ಟಿಗೆ ಸಜ್ಜುಗೊಳಿಸಿ ನಂತರ ರಸ್ತೆ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎನ್ನುತ್ತಾರೆ ಪ.ಪಂ ಸದಸ್ಯ ರವಿಕುಮಾರ್.ಪಟ್ಟಣದ ನಿರ್ವಸಿತರಿಗೆ ಹಂಚಿಕೆಗೆ ಬಾಕಿ ಉಳಿದಿರುವ 300 ನಿವೇಶನಗಳನ್ನು ಹಂಚುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ, ಹಲವು ಬಾರಿ ಮುಂದೂಡಲ್ಪಟ್ಟಿದ್ದ ಸಭೆ ಕಳೆದ ವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿದ್ದು ಫಲಾನುಭವಿಗಳ ಮುಖದಲ್ಲಿ ಹರ್ಷ ಮೂಡಿಸಿದೆ. ಪಟ್ಟಣದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಹುಚ್ಚು ಹಿಡಿದ ನಾಯಿಗಳನ್ನು ಕೊಲ್ಲುವ ಕ್ರಿಯೆಗೆ ಚಾಲನೆ ಸಿಕ್ಕಿದೆ. ಪ.ಪಂ. 2.50ಕೋಟಿ ರೂಗಳ ಅನುದಾನದಲ್ಲಿ ಎಲ್ಲ ವಾರ್ಡ್ ಗಳಿಗೂ ಅಭಿವೃದ್ದಿ ಕ್ರಿಯಾಯೋಜನೆ ಅನುಮೋದನೆ ದೊರೆತಿದ್ದು ಶಾಸಕ ಎ.ಮಂಜು ಹಾಗುಅಧ್ಯಕ್ಷೆ ಯಶೋಧಮ್ಮ ಉಪಾಧ್ಯಕ್ಷ ರಮೇಶ್, ಪುರ ಪ್ರತಿನಿಧಿಗಳು ಉತ್ಸಾದಿಂದ ಚಾಲನೆ ನೀಡಿದ್ದಾರೆ. ಕುಡಿಯುವ ನೀರಿನ ಅಭಿವೃದ್ದಿ ಯೋಜನೆ ಮಂಜೂರಾಗಿದ್ದರು ಅನುಷ್ಠಾನ ಕುಂಟುತ್ತಾ ಸಾಗಿದೆ. ಪಟ್ಟಣದ ಜನತೆಯ ಬಹುದಿನಗಳ ಕನಸು ಯುಜಿಡಿ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಪಟ್ಟಣದ ಕೆಲವು ವಾರ್ಡಗಳಲ್ಲಿ ಈಗಾಗಲೇ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದರೂ ಜೈಬೀಮ್ ನಗರ, ಕೆಇಬಿ ರಸ್ತೆಯ ವಸತಿ ಪ್ರದೇಶ, ಅನಕೃ ಬಡಾವಣೆ, ಸಾಲಗೇರಿ ಮತ್ತಿತರೆಡೆಗಳಲ್ಲಿ ಹೈ ಮಾಸ್ಟ್ ಅಳವಡಿಕೆಯಾಗಬೇಕಿದೆ. ಆದರೆ ಜನ ವಸತಿ ವಿರಳವಾಗಿರುವ ಬಸವೇಶ್ವರ ಸರ್ಕಲ್ ನಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಪ.ಪಂ. ಆದ್ಯತೆ ನೀಡಿದ ಔಚಿತ್ಯ ತಿಳಿಯುತ್ತಿಲ್ಲ. ಪ.ಪಂ. ಕೋಟೆ ಪ್ರದೇಶದಲ್ಲಿ ಖರೀದಿಸಿರುವ ರುದ್ರಭೂಮಿ ಜಾಗದ ಅಭಿವೃದ್ದಿಗೆ ಗ್ರೀನ್ ಸಿಗ್ನಲ್ ದೊರಕಿದ್ದು ಮುಂದಿನ ಕ್ರಮಕ್ಕೆ ಸಿದ್ದತೆ ನಡೆಯುತ್ತಿದೆ. ತ್ಯಾಜ್ಯ ವಿಲೇವಾರಿಗೆ ದೇವರಹಳ್ಳಿ ಬಳಿ ಇರುವ ಜಾಗದ ಜೊತೆಗೆ ಇನ್ನೂ ಎರಡು ಎಕರೆ ಜಾಗ ಅವಶ್ಯವಿರುವುದರಿಂದ ಪ್ರಸ್ತಾವನೆ ಸಲ್ಲಿಸಲು ಪ.ಪಂ. ಚಿಂತನೆ ನಡೆಸಿದೆ. ಅಂದುಕೊಂಡ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ನಡೆದರೆ ಪ.ಪಂ. ಜನಮನ್ನಣೆಗೆ ಪಾತ್ರವಾಗುತ್ತದೆ ಆದರೆ ಇವತ್ತಿಗೂ ಸಾರ್ವಜನಿಕರಿಂದ ಉಪೇಕ್ಷೆಗೆ ಒಳಗಾಗುವ ವಿಚಾರವೆಂದರೆ ಪ.ಪಂ. ಇದುವರೆಗೂ ತನ್ನ ಆಸ್ತಿಯನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ವಿಫಲವಾಗಿರುವುದು, ಹಲವೆಡೆ ಒತ್ತುವರಿಯಾಗಿದ್ದರೂ ಅದು ಜಾಣ ಮೌನವನ್ನು ತಾಳಿದೆ. ಪಟ್ಟಣದ ಜನತೆಗೆ ಇದ್ದ ಟೌನ್ ಹಾಲ್ ಅನ್ನು ಅಕ್ರಮಿಸಿಕೊಂಡಿರುವ ಪ.ಪಂ. ತನ್ನ ಮೂಲ ಸ್ಥಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ದುಡ್ಡು ಮಾಡುವ ದಾರಿ ಕಂಡುಕೊಂಡಿದೆ, ಮತ್ತು ಟೌನ್ ಹಾಲ್ ಜಾಗದಲ್ಲಿ ಮನಸ್ಸಿಗೆ ಬಂದಂತೆ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿದೆ ಆ ಮೂಲಕ ಪಟ್ಟಣದ ಜನತೆಗೆ ಸಭೆ-ಸಮಾರಂಭ ನಡೆಸಲು ಅಡ್ಡ ಉಂಟಾಗಿದೆ. ಈಗ ಖಾಲಿ ಉಳಿದಿರುವ ಶಿಕ್ಷಕರ ಭವನದ ಎದುರಿಗಿರುವ ಜಾಗದ ಮೇಲೆ ಕಣ್ಣು ಹಾಕಿರುವ ಪ.ಪಂ. ಅಲ್ಲಿಗೆ ತನ್ನ ವಾಸ್ತವ್ಯ ಬದಲಿಸುವ ಆಲೋಚನೆ ಜೊತೆಗೆ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶ ಹೊಂದಿರುವ ಮಾಹಿತಿ ಇದೆ. ಆದರೆ ಸದರಿ ಜಾಗ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು ಇನ್ನೂ ಆ ಬಗ್ಗೆ ಕಾಲವೇ ನಿರ್ಣಯಿಸಬೇಕಾಗಿದೆ.

ಅರಕಲಗೂಡು: ಪಟ್ಟಣದ ಸಂತೆಮರೂರು ರಸ್ತೆಯಲ್ಲಿರುವ ನೂತನ ವಸತಿ ಲೇಔಟ್ ಗೆ ಮಹಾತ್ಮಗಾಂಧಿ ಬಡಾವಣೆ ಎಂದು ನಾಮಕರಣ ಮಾಡಲಾಗುವುದು ಎಂದು ಹಿರಿಯ ವಕೀಲ ಜನಾರ್ಧನ ಗುಪ್ತ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಗಾಂಧಿ ಜಯಂತಿಯ ಅಂಗವಾಗಿ ಕಾರ್ಯಕ್ರಮವನ್ನು ಮದ್ಯಾಹ್ನ 2ಗಂಟೆಗೆ ನೂತನ ವಸತಿ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಮಫಲಕ ಅನಾವರಣ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಶ್ರೀ ಗುರುಶಿವಸುಜ್ಞಾನ ಮೂರ್ತಿ, ಶ್ರೀ ಶಿವಾನಂದಪುರಿ ಸ್ವಾಮಿ, ಶ್ರೀ ಜಯದೇವ ಸ್ವಾಮಿ, ಶ್ರೀ ನಯಾಜ್ ಅಹಮದ್, ಫಾ ಜಾಯ್ ವರ್ಗೀಸ್, ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ಜಿಲ್ಲಾ ನ್ಯಾಯಾಧೀಶ ಹಾಲಪ್ಪ ಮತ್ತಿತರ ಗಣ್ಯರು ಪಾಲ್ಗೋಳ್ಳುವರು ಎಂದು ತಿಳಿಸಿದ್ದಾರೆ.

ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ಬಾಳೆ ಬೆಳೆ ಬೇಸಾಯ ಕ್ರಮದ ಬಗ್ಗೆ ಸಂವಾದ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಅ.3ರಂದು ಶಿಕ್ಷಕರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್ ತಿಳಿಸಿದ್ದಾರೆ. 'ಬಾಳೆ ಒಮದು ಮುಖ್ಯ ಬೆಳೆ ಹಾಗೂ ಉಪಬೆಳೆ ಎಂಬ ಕುರಿತು ಪ್ರಗತಿ ಪರ ರೈತ ಡಾ ರವೂಫ್ ಮಾತನಾಡುವರು, ಪರಿಸರವಾದಿ ಹೆಮ್ಮಿಗೆ ಮೋಹನ್, ತಜ್ಞ ಡಾ ಬಿ ಸಿ ಸೂರ್ಯನಾರಾಯಣ, ರೈತ ಪಾಲಾಕ್ಷ, ಎಸ್ ದತ್ತಾತ್ರಿ ಮಾಹಿತಿ ಹಾಗೂ ವಿಚಾರಗೋಷ್ಟಿಯಲ್ಲಿ ಪಾಲ್ಗೊಂಡು ರೈತರಿಗೆ ಉಪಯುಕ್ತ ಸಲಹೆಗಳನ್ನು ನೀಡುವರು, ಆಸಕ್ತ ರೈತರು ಸಭೆಯ ಸದುಪಯೋಗ ಪಡೆಯುವಂತೆ ಕೋರಲಾಗಿದೆ.

ಕಾಮೆಂಟ್‌ಗಳಿಲ್ಲ: