ಶುಕ್ರವಾರ, ಮಾರ್ಚ್ 19, 2010

ಮಠದ ಶ್ರೇಯೋಭಿವೃದ್ದಿಗೆ ತಡೆ ಒಡ್ಡುವವರಿಗೆ ಹೆದರುವುದಿಲ್ಲ,ಬಸವಲಿಂಗ ಸ್ವಾಮೀಜಿ

ಅರಕಲಗೂಡು: ಮಠಗಳು ಸಮಾಜದ ಸುಧಾರಣೆಗೆ ಇವೆ, ಆದರೆ ಇದನ್ನೆಲ್ಲ ಮರೆತು ತಾಲ್ಲೂಕಿನ ಕೆಲವು ಮಠಾಧೀಶರುಗಳು ಸಂಕುಚಿತ ಮನೋಭಾವದಿಂದ ವರ್ತಿಸುತ್ತಿದ್ದಾರೆ, ದೇವರು ಅವರಿಗೆ ಒಳ್ಳೆಯ ಬುದ್ದಿ ಕರುಣಿಸಲಿ ಎಂದು ಶಿರದನಹಳ್ಳಿ ಬಸವಕಲ್ಯಾಣ ಮಠದ ಬಸವಲಿಂಗ ಶೀವಾಚಾರ್ಯ ಮಹಾಸ್ವಾಮಿಗಳು ಮನವಿ ಮಾಡಿದ್ದಾರೆ.
ಬಸವಕಲ್ಯಾಣ ಮಠದ ಶಾಖಾ ಮಠವನ್ನು ತಾಲ್ಲೂಕಿನ ಕೋಟೆ ಕರ್ಪೂರವಳ್ಳಿ ಗ್ರಾಮದಲ್ಲಿ ನೆರವೇರಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ಶ್ರೀಗಳು ತಾಲ್ಲೂಕಿನಲ್ಲಿ 6ವೀರಶೈವ ಮಠ , 1 ಆಚಾರ್ಯರ ಮಠ ಸೇರಿ 7ಮಠಗಳಿವೆ. ಇದೀಗ ಈ ಸಾಲಿಗೆ 8ನೇ ಮಠ ಸೇರ್ಪಡೆಯಾಗಿದೆ , ಶಾಖಾ ಮಠವನ್ನು ಸದ್ದುದ್ದೇಶದಿಂದ ಸ್ಥಾಪಿಸಲಾಗಿದೆ, ಆದರೆ ಇದನ್ನು ಸಹಿಸದ ಅರಕಲಗೂಡು ದೊಡ್ಡಮಠದ ಶ್ರೀಮಲ್ಲಿಕಾರ್ಜುನ ಸ್ವಾಮಿಗಳೂ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮಿಗಳು ಹಾಗೂ ವೀರಶೈವ ಮುಖಂಡರಾದ ಮುದುಗನೂರು ಚಂದ್ರಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಶಾಂತಮಲ್ಲಪ್ಪ, ಮಾಗೋಡು ಬಸವರಾಜು ಇತರರು ಸೇರಿಕೊಂಡು ಕಲ್ಯಾಣ ಮಠದ ಸ್ಥಾಪನೆಗೆ ಅಡ್ಡಿ ಉಂಟು ಮಾಡುವ ಕ್ರಿಯೆಯಲ್ಲಿ ಪಾಲ್ಗೊಂಡು ಅಹಿತಕರವಾಗಿ ನಡೆದುಕೊಂಡಿದ್ದಾರೆ. ಸಮಾಜದಲ್ಲಿ ಮನಸ್ಸುಗಳನ್ನು ಒಗ್ಗೂಡಿಸಿ ಕರೆದೊಯ್ಯಬೇಕೇ ವಿನಹ ಮನಸ್ಸುಗಳನ್ನು ಒಡೆಯುವ ಪ್ರಯತ್ನ ಮಾಡಬಾರದು. ಆದರೆ ಇವರು ಶಾಖಾ ಮಠದ ಆರಂಭದ ಬಗ್ಗೆ ತಿಳಿಯುತ್ತಲೇ ಗ್ರಾಮಕ್ಕೆ ಆಗಮಿಸಿ ಜನರಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ, ಕಾರ್ಯಕ್ರಮಕ್ಕೆ ಬರುವ ಗಣ್ಯರು ಮತ್ತು ಶ್ರೀಗಳನ್ನು ತಡೆಯುವ ವ್ಯವಸ್ಥಿತ ಪ್ರಯತ್ನ ಮಾಡುವ ಮೂಲಕ ಸಂಕುಚಿತವಾಗಿ ನಡೆದುಕೊಂಡಿದ್ದಾರೆ ಎಂದು ನುಡಿದ ಶ್ರೀಗಳು ಧಾರ್ಮಿಕ ಗುರುಗಳು ಮತ್ತು ಸಮಾಜದ ಮುಖಂಡರುಗಳು ಸಮಾಜದ ಸುಧಾರಣೆಗೆ ಪ್ರಯತ್ನ ಮಾಡಬೇಕೆ ವಿನಹ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಬಾರದು, ಸ್ವಾರ್ಥಕ್ಕಾಗಿ ಸಮಾಜದ ಶಾಂತಿಯನ್ನು ಕಲಕಬಾರದು, ಇವರಿಗೆ ಸನಾತನ ಧರ್ಮದ ಅರಿವಿದ್ದಿದ್ದರೆ ಹೀಗೆಲ್ಲ ನಡೆದು ಕೊಳ್ಳುತ್ತಿರಲಿಲ್ಲವೇನೋ ಇವರುಗಳ ದುರ್ಬುದ್ದಿಯಿಂದ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ , ಎಂದು ನುಡಿದ ಅವರು ಇನ್ನಾದರೂ ಇವರು ಎಚ್ಚೆತ್ತು ಕೊಂಡು ತಪ್ಪನ್ನು ತಿದ್ದುಕೊಂಡು ಸಮಾಜವನ್ನು ಕಟ್ಟುವ ಕೆಲಸ ಮಾಡಲಿ ಎಂದು ಮನವಿ ಮಾಡಿದರು. ವೀರಶೈವ ಮಹಾ ಸಭಾ ಸಮಾಜದ ಒಂದು ಪ್ರಾತಿನಿಧಿಕ ಸಂಸ್ಥೆ ಆದರೆ ಅದರ ಅಧ್ಯಕರಾದವರು ಆ ಮಹತ್ವವನ್ನು ಅರಿಯದಿದ್ದರೆ ಅವರನ್ನು ಮುಖಂಡ ಎಂದು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂದು ಪ್ರಶ್ನಿಸಿದ ಅವರು ಮಠಗಳಲ್ಲು ರಾಜಕೀಯ ತರುತ್ತಾರೆ ಇದೆಲ್ಲ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೋಟೆ ಕರ್ಪೂರವಳ್ಳಿ ಶಾಖಾ ಮಠದ ಮಾದರಿಯಲ್ಲಿ ಇನ್ನೂ 15 ಮಠಗಳನ್ನು ಸ್ಥಾಪಿಸುತ್ತೇನೆ, ನಾನು ಯಾರಿಗೂ ಹೆದರುವುದಿಲ್ಲ, ಇಲ್ಲಿನ ಮಠದ ಜೊತೆಗೆ ವೃದ್ದಾಶ್ರಮವನ್ನು ನಿರ್ವಹಿಸಲಾಗುತ್ತದೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಗಳು ನಾನು ಏಕಾಂಗಿ ಹೋರಾಟಗಾರನಲ್ಲ ನನ್ನೊಂದಿಗೆ ಸಮಾಜದ ಸಮಸ್ತ ಭಾಂಧವರು ಸಹೃದಯಿಗಳು ಇದ್ದಾರೆ ಯಾರ ಕುತಂತ್ರಕ್ಕೂ ಹೆದರುವುದಿಲ್ಲ ಎಂದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಭಸ್ಮ
ಅರಕಲಗೂಡು: 2ಪ್ರತ್ಯೇಕ ಘಟನೆಗಳಲ್ಲಿ ವಾಸದ ಮನೆಗಳಿಗೆ ಹಾಗೂ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ ಪರಿಣಾಮ 1.50ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಠ ಸಂಭವಿಸದ ಘಟನೆ ತಾಲ್ಲೂಕಿನ ವಿಜಿ ಕೊಪ್ಪಲು ಹಾಗೂ ಅಕ್ಕಲವಾಡಿಯಲ್ಲಿ ನಡೆದಿದೆ.
ಇಂದು ಮದ್ಯಾಹ್ನ 2.30ರ ಸುಮಾರಿಗೆ ಸ್ಥಗಿತಗೊಂಡಿದ್ದ ವಿದ್ಯುತ್ ಬಂದ ತಕ್ಷಣವೇ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಅಪ್ಪಣ್ಣ ಎಂಬ ರೈತನ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ದುರ್ಘಟನೆ ಸಂಭವಿಸಿದ ವೇಳೆ ರೈತ ದಂಪತಿಗಳು ಜಮೀನಿಗೆ ತೆರಳಿದ್ದರೆ, ಮಕ್ಕಳು ಶಾಲೆಗೆ ಹೋಗಿದ್ದರೆನ್ನಲಾಗಿದೆ. ಮನೆಯಲ್ಲಿ ಶೇಖರಿಸಿದ್ದ ಧವಸ ಧಾನ್ಯ, ಬಟ್ಟೆಬರೆ, ದುಡ್ಡು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ರೈತ ಕುಟುಂಬ ಅನಿರೀಕ್ಷಿತ ಆಘಾತಕ್ಕೊಳಗಾಗಿದೆ. ಇನ್ನೊಂದು ಘಟನೆಯಲ್ಲಿ ಕೊಣನೂರು ಹೋಬಳಿಯ ಅಕ್ಕಲವಾಡಿಯಲ್ಲಿ ರೈತನೋರ್ವನ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸುಟ್ಟುಹೋಗಿದೆ. ತಾಲ್ಲೂಕಿನಲ್ಲಿ ಅಗ್ನಿಶಾಮಕ ದಳದ ಸೌಲಭ್ಯವಿಲ್ಲದಿರುವುದು ಮತ್ತು ದೂರದ ಹೊಳೆನರಸಿಪುರದಿಂದ ಅಗ್ನಿಶಾಮಕ ಬರುವ ವೇಳೆಗೆ ಎಲ್ಲವೂ ಸುಟ್ಟು ಹೋಗುತ್ತಿರುವುದು ಈ ತಾಲ್ಲೂಕಿನ ರೈತರಿಗೆ ಅಗ್ಗಿ ಅಕಸ್ಮಿಕ ಶಾಪವಾಗಿ ಪರಿಣಮಿಸಿದೆ. ಶಾಸಕರು ಈ ಸಂಬಂಧ ತಕ್ಷಣ ತಾಲ್ಲೂಕಿಗೆ ಮಂಜೂರಾಗಿರುವ ಅಗ್ನಿಶಾಮಕ ಠಾಣೆಗೆ ಜಾಗ ೊದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆಯ ಸ್ಥಳಕ್ಕೆ ತಹಸೀಲ್ದಾರ್ ಶೈಲಜಾ ಭೇಟಿ ನೀಡಿ ನೊಂದ ಕುಂಟುಂಬದವರಿಗೆ ಸಾಂತ್ವನ ಹೇಳಿದರು. ಹಾಗೂ ವಿಜಿ ಕೊಪ್ಪಲಿನ ನಿರಾಶ್ರಿತ ಕುಟುಂಬಕ್ಕೆ ಅಗತ್ಯ ನೆರವನ್ನು ಒದಗಿಸಲು ತಾಲ್ಲೂಕು ಆಡಳಿತ ಬದ್ದವಾಗಿದೆ ಎಂದರು.
ಆಸ್ಪತ್ರೆ ಸ್ವಚ್ಚತೆ ವೈಫಲ್ಯ ದಿಢೀರ್ ಪ್ರತಿಭಟನೆ
ಅರಕಲಗೂಡು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಚತೆ ವೈಫಲ್ಯ ಹಾಗೂ ವೈದ್ಯರು-ಸಿಬ್ಬಂದಿಗಳ ಗೈರು ಖಂಡಿಸಿ ಇಂದು ರಾತ್ರಿ 9ಗಂಟೆಯಲ್ಲಿ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ಏರಿದೆ ಆದಾಗ್ಯು ಇಲ್ಲಿನ ವ್ಯವಸ್ಥೆ ಸುಧಾರಿಸಿಲ್ಲ, ಕಳೆದ ೆರಡು ಮೂರು ದಿನಗಳಿಂದ ಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಊಟ ನೀಡಿಲ್ಲ, ಸ್ವಚ್ಚತೆ ಕೈಗೊಳ್ಳಲಾಗಿಲ್ಲ, ವೈದ್ಯರು ಮತ್ತು ಸಿಬ್ಬಂದಿ ಸರಿಯಾದ ಸೇವೆ ನೀಡುತ್ತಿಲ್ಲವೆಂದು ದೂರು ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವಮೋರ್ಚಾದ ಮಾಜಿ ಅಧ್ಯಕ್ಷ ಗಣಪತಿ ಮತ್ತಿತರ ಮುಖಂಡರು ಆಸ್ಪತ್ರೆಗೆ ತೆರಳಿದರು. ಆಗ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಸಿಬ್ಬಂದಿಯಾಗಲಿ ವೈದ್ಯರಾಗಲಿ ಇಲ್ಲದಿದ್ದದುರಿಂದ ಸಿಟ್ಟಿಗೆದ್ದ ನಾಗರಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಆದಾಗ್ಯೂ ಆಸ್ಪತ್ರೆಗೆ ಭೇಟಿ ನೀಡದ ವೈದ್ಯ ಸತೀಶ್ ವಿರುದ್ದ ಮುಖಂಡರು ಕಿಡಿ ಕಾರಿದರು. ನಂತರ ಶಾಸಕ ಎ ಮಂಜು ರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಮಾಹಿತಿ ನೀಡಿದರು. ಶಾಸಕರು ನಾಳೆ(ಮಾ. 20) ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಅಂತ್ಯಗೊಳಿಸಿದರು.

ಭಾನುವಾರ, ಮಾರ್ಚ್ 14, 2010

ಎಚ್ ಎನ್ ನಂಜೇಗೌಡರ ಪುತ್ಥಳಿ ಸ್ಥಾಪನೆಗೆ ನಿರ್ಧಾರ

ಅರಕಲಗೂಡು: ಪಟ್ಟಣದ ಸಮಕಾಲೀನ ಸಮಸ್ಯಗಳು ವಿಚಾರ ಮಂಥನ ಹಾಗೂ ಸ್ಪಂದನೆಗೆ ಅನುವಾಗುವಂತೆ ನಾಗರಿಕ ಹಿತರಕ್ಷಣಾ ವೇದಿಕೆ ಇಂದು ಪಟ್ಟಣದಲ್ಲಿ ಅಸ್ತಿತ್ವಕ್ಕೆ ಬಂದಿದೆ. ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆ, ಸಾಹಿತ್ಯ-ಸಂಗೀತ, ಸಮಾಜ ಸೇವಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡಲಿದೆ. ಪಟ್ಟಣದ ಪ್ರಮುಖರಾದ ಯೋಗಾರಮೇಶ್, ಅಪ್ಪಾಜಿಗೌಡ ರಾಮಣ್ಣ, ರವಿಕುಮಾರ್,ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್, ಮಾಜಿ ಜಿ.ಪಂ ಸದಸ್ಯ ಶೆಟ್ಟಿಗೌಡ, ವಕೀಲರಾದ ಜಯಪ್ಪ ಶಾಂತಮ್ಮ, ಅಜೀಂ,ಆಲದಹಳ್ಳಿ ಸುಬ್ಬೇಗೌಡ, ರಮೇಶ್ ವಾಟಾಳ್ , ಕಾಂತರಾಜ್ಮ, ಮತ್ತ್ತಿತರರ ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ವೇದಿಕೆಯನ್ನು ಅಸ್ತಿತ್ವಕ್ಕೆ ತಂದರು. ಸಭೆಯಲ್ಲಿ ಹಿರಿಯ ರಾಜಕಾರಣಿ ದಿವಂಗತ ಎಚ್ ಎನ್ ನಂಜೇಗೌಡರ ರಾಜಕೀಯ ಮತ್ತು ಸಮಾಜ ಸೇವೆಯನ್ನು ಸ್ಮರಿಸಿಕೊಂಡು ಅವರ ಪುತ್ತಳಿಯನ್ನು ಪಟ್ಟಣದಲ್ಲಿ ಸ್ಥಾಪಿಸುವ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಯಿತು. ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಯೋಗಾ ರಮೇಶ್ ರನ್ನು ಆಯ್ಕೆ ಮಾಡಲಾಯಿತು.
ಪ್ರವಾಸ: ಪಟ್ಟಣದ ಪೊಟ್ಯಾಟೋ ಕ್ಷಬ್ ಆಶ್ರಯದಲ್ಲಿ ತಾಲ್ಲೂಕಿನ ರೈತರ ತಂಡ ಕೋಕೋ ಬೆಳೆ ಕುರಿತು ತಿಳಿಯಲು ಪುತ್ತೂರಿಗೆ ಪ್ರವಾಸ ಕೈಗೊಂಡಿತು.ಈ ಸಂಧರ್ಭದಲ್ಲಿ ಮಾತನಾಡಿದ ಪೊಟ್ಯಾಟೋ ಕ್ಲಬ್ ನ ಸಂಚಾಲಕ ಯೋಗಾರಮೇಶ್ ತೋಟಗಾರಿಕ ಬೆಳೆಯಾಗಿ ಬೆಳೆಯುವ ಕೋಕೋ, ತೆಂಗು ಹಾಗೂ ಅಡಿಕೆ ಬೆಳೆಯಂತೆ ಉತ್ತಮ ಲಾಭ ತರುವ ಬೆಳೆಯಾಗಿದ್ದು ರೈತರು ಈ ಬೆಳೆಯ ಬಗ್ಗೆ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.ಈ ಸಂಧರ್ಭದಲ್ಲಿ ದೊಡ್ಡಮಗ್ಗೆ ರಾಜೇಂದ್ರ, ವೀರಾಜು ಉಪಸ್ಥಿತರಿದ್ದರು. ರೈತರ ತಂಡದ ಜೊತೆ ಪೊಟ್ಯಾಟೊ ಕ್ಲಬ್ ನ ರಂಗಸ್ವಾಮಿ ತೆರಳಿದರು.

ಸೋಮವಾರ, ಮಾರ್ಚ್ 8, 2010

ಪ.ಪಂ ಹಾಗೂ ಪಾರ್ಕ್ ಗೆ ಸೇರಿದ ಅತಿಕ್ರಮಣ ತೆರವಿಗೆ ಶೀಘ್ರವೇ ಕ್ರಮ

ಅರಕಲಗೂಡು: ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿಕ್ರಮಣಗೊಂಡಿರುವ ಜಾಗಗಳ ತೆರವಿಗೆ ವರದಿ ತಯಾರಿಸಲಾಗಿದ್ದು ಶೀಘ್ರವೇ ತೆರವಿಗೆ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲೋಕೇಶ್ ಹೇಳಿದ್ದಾರೆ.
ಪಟ್ಟನ ಪಂಚಾಯ್ತಿಯ ಬಜೆಟ್ ಪೂರ್ವ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ ಪಟ್ಟಣದಲ್ಲಿ ಅತಿಕ್ರಮಣ ಗೊಂಡಿರುವ ಖಾಲಿ ಜಾಗ, ಪಾರ್ಕು ಗಳು ಅಂದಾಜು 60-70 ಇದೆ, ಈ ಬಗ್ಗೆ ಕೂಲಂಕುಶವಾದ ವರದಿಯನ್ನು ತಯಾರಿಸಲಾಗಿದೆ, ಈ ಜಾಗವನ್ನು ತೆರವು ಗೊಳಿಸಿ ಸಂರಕ್ಷಿಸಲು 20ಲಕ್ಷವನ್ನು ತೆಗೆದಿರಿಸಲಾಗಿದೆ ಎಂದರು. ಪಟ್ಟಣದ ದೊಡ್ಡಕೆರೆ ಆವರಣದಲ್ಲಿ 70ಲಕ್ಷರೂ ವೆಚ್ಚದಲ್ಲಿ ಈಜುಕೊಳ, ಮತ್ತು ಬಯಲು ರಂಗ ಮಂದಿರ ನಿರ್ಮಿಸಲಾಗುವುದು, ಅಗತ್ಯವಿರುವೆಡೆ ಹೈ ಮಾಸ್ಟ್ ದೀಪಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದ ಅವರು ಎಸ್ ಎಫ್ ಸಿ ಯೋಜನೆಯಲ್ಲಿ ಪಟ್ಟಣದ ವಿವಿಧ ರಸ್ತೆಗಳ ಡಾಂಬರೀಕರಣ ಮಾಡಲಾಗುವುದು ಅಗತ್ಯವಿರುವೆಡೆ ಸಿಮೆಂಟು ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ನುಡಿದ ಅವರು, ಹಿಂದಿನ ವರ್ಷಗಳಲ್ಲಿ 2000 ನಳನೀರು ಸಂಪರ್ಕವಿದ್ದರೆ ಈಗ ಅದು 3800 ಆಗಿದೆ ಇದರಿಂದಾಗಿ ಪ್ರತಿದಿನ ಸುಗಮವಾಗಿ ನೀರು ಒದಗಿಸಲು ಅಡ್ಡಿಯಾಗಿದೆ ಕುಡಿಯುವ ನೀರು ಯೋಜನೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಇದರಲ್ಲಿ ಪಟ್ಟಣದ 3ಕಡೆ ಹೊಸದಾಗಿ ನೀರಿನ ಟ್ಯಾಂಕುಗಳನ್ನು ನಿರ್ಮಿಸಲಾಗುವುದು ಆಗ ಸಮಸ್ಯೆ ಬಗೆಹರಿಯುವುದು ಎಂದರು. ಪಟ್ಟಣದ ಸ್ವಚ್ಚತೆ ಸುದಾರಣೆಗೆ ಆದ್ಯ ಗಮನ ಹರಿಸಲಾಗುವುದು, ಅನಕೃ ವೃತ್ತದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಸಲಾಗುವುದು, ಮುಂದಿನ ಏಪ್ರಿಲ್ ವೇಳೆಗೆ ಪ.ಪಂ. ಪುರಸಭೆಯಾಗಿ ಪರಿವರ್ತನೆಯಾಗುತ್ತಿದೆ, ಸ್ಮಶಾನ ಅಭಿವೃದ್ದಿ, ಕಸಹೀರುವ ಮೆಶಿನು, ಹೆಚ್ಚುವರಿ ಟ್ರ್ಯಾಕ್ಟರು ಕೊಂಡುಕೊಳ್ಳಲಾಗುವುದು, ಬಡಾವಣೆಗಳಿಗೆ ವಾರ್ಡ ಸಂಕ್ಯೆ ಫಲಕ ಹಾಕಲಾಗುವುದು ಎಂದರು. ಸಂಯೋಜನಾಧಿಕಾರಿ ಶಶಿಕುಮಾರ್ ಮಾತನಾಡಿ ಪ.ಪಂ. ವ್ಯಾಪ್ತಿಯಲ್ಲಿ 19ಕೊಳಗೇರಿಗಳನ್ನು ಗುರುತಿಸಲಾಗಿದೆ ಈಗ ಿವುಗಳ ಗಣತಿ ನಡೆಸಿ ಮೂಲ ಸೌಕರ್ಯ ಅಭಿವೃದ್ದಿಗೆ ಯೋಜನೆ ರೂಪಿಸಲಾಗುವುದು ಎಂದರು. ಪ.ಪಂ. ಮುಖ್ಯಾಧಿಕಾರಿ ವಾಸುದೇವ ಮಾತನಾಡಿ ಪಟ್ಟಣದ ನಾಗರಿಕರು 25ಲಕ್ಷಕ್ಕೂ ಹೆಚ್ಚು ನೀರಿನ ಕಂದಾಯ, ಮನೆ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ ಸಕಾಲದಲ್ಲಿ ಅದನ್ನು ಪಾವತಿಸಿದರೆ ಉತ್ತಮ ಸೇವೆಗೆ ಅನುಕೂಲವಾಗುವುದು ಎಂದರು. ಸಭೆಯಲ್ಲಿ ಸದಸ್ಯರಾದ ರವಿಕುಮಾರ್, ಶಂಕರಯ್ಯ, ಶ್ರೀನಿವಾಸ, ಮುನ್ನಾ, ುಪಾಧ್ಯಕ್ಷೆ ವಿಮಲ, ಭೂಪತಿ ಮತ್ತಿತರರು ಭಾಗವಹಿಸಿದ್ದರು. ನಾಗರಿಕರು ಸಭೆಯಲ್ಲಿ ಸಲಹೆ ನೀಡಿದರು. ಕಛೇರಿ ಅಧಿಕ್ಷಕ ಜಯರಾಂ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸೋಮವಾರ, ಮಾರ್ಚ್ 1, 2010

ಪ್ರಾಯೋಗಿಕ ಕೃಷಿಯ ಮಹತ್ವ ಅರಿಯಿರಿ: ದೇವಂಗಿ ಪ್ರಫುಲ್ಲಚಂದ್ರ

ಅರಕಲಗೂಡು: ಬದಲಾಗುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಖ್ಯಾತ ಕೃಷಿ ತಜ್ಞ ದೇವಂಗಿ ಪ್ರಫುಲ್ಲ ಚಂದ್ರ ಹೇಳಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ಇಂದು ಏರ್ಪಾಟಾಗಿದ್ದ ಕಾರ್ಯಕ್ರಮಉದ್ಘಾಟಿಸಿ ಅಗ್ರಿತಾಜ್ ಡಿಆರ್ಪಿ ಎಂಬ ಕೃಷಿ ಪುಸ್ತಕ ಬಿಡುಗಡೆ ಮಾಡಿ ಮಾತಾನಾಡಿದ ಅವರು ನಮ್ಮ ರೈತರು ಪ್ರಾಯೋಗಿಕ ಕೃಷಿಯ ಮಹತ್ವವನ್ನು ಅರಿಯಬೇಕಾಗಿದೆ ಅದು ಇಂದಿನ ಸಂಧರ್ಭದ ಅನಿವಾರ್ಯತೆಯೂ ಆಗಿದೆ ಎಂದು ಅಭಿಪ್ರಾಯ ವ್ಯಕ್ತಿಪಡಿಸಿದರು. ಕೃಷಿ ಸ್ವಾವಲಂಬನೆಗೆ ಒತ್ತು ನೀಡುತ್ತದೆ, ನಮ್ಮ ಕೆಲಸಗಳನ್ನು ನಾವೇ ಶ್ರಮವಹಿಸಿ ಮಾಡಿಕೊಂಡಾಗ ಅದಕ್ಕೊಂದು ಅರ್ಥ ಸಿಗುತ್ತದೆ ಎಂದು ನುಡಿದ ಅವರು ರೈತರು ಒಂದೇ ತೆರನಾದ ಬೆಳೆ ಬೆಳೆದರೆ ಉಳಿಗಾಲ ಸಾಧ್ಯವಿಲ್ಲ, ಬೆಳೆಗಳಲ್ಲಿ ಅಂತರದ ಬದಲಾವಣೆ ಅಗತ್ಯವಾಗಿದೆ ಇದರಿಂದಾಗಿ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ ಎಂದರು. ಕೃಷಿ ಜಮೀನುಗಳಲ್ಲಿ ಜಾನುವಾರುಗಳನ್ನು ಬೆಳೆಸುವಾಗ ಕಟ್ಟಿಹಾಕಿಕೊಂಡು ಬೆಳೆಸುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ, ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು ಆಗ ಕೃಷಿ ಬದುಕಿನ ಗತಿ ತಿಳಿಯುತ್ತದೆ ಎಂದರು. ಅಗ್ರಿತಾಜ್ ಪುಸ್ತಕದ ಕನ್ನಡಾನುವಾದ ಮಾಡಿದ ಲೇಖಕ ಭಗವಾನ್ ಮಾತನ಻ಡಿ ರೈತಾಪಿ ಸಂಸ್ಕೃತಿ ಬದುಕಿನ ಆಸರೆಯಾಗಬೇಕು, ತುಂಬಾ ಆಸ್ಥೆ ವಹಿಸಿ ತೊಡಗಿಸಿಕೊಂಡಾಗ ಮಾತ್ರ ಯಶ ಕಾಣಲು ಸಾಧ್ಯ ಎಂದರು. ಹೆಮ್ಮಿಗೆ ಮೋಹನ್ ಮಾತನಾಡಿ ಆಧುನಿಕ ಕೃಷಿಯಲ್ಲಿ ಮೌನ ಕ್ರಾಂತಿ ಮಾಡಿದ ಮಹಾನ್ ಸಾಧಕ ಪ್ರಫುಲ್ಲ ಚಂದ್ರ ಅವರ ಕೃಷಿ ಬದುಕು ಇತರರಿಗೆ ಮಾದರಿಯ಻ಗಬೇಕು ಎಂದರು. ಪೊಟ್ಯಾಟೋ ಕ್ಲಬ್ ಸಂಚಾಲಕರಾದ ಯೋಗಾರಮೇಶ್ ಮಾತನಾಡಿ ಮುಂದಿನ ತಿಂಗಳಿನಲ್ಲಿ ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ಆಲೂಗಡ್ಡೆ ಬೆಳೆ ಕುರಿತ ಸಂವಾದ ಮತ್ತು ಮಾಹಿತಿ ಕಾರ್ಯಾಗಾರ ನಡೆಯಲಿದೆ, ಹಾಗೂ ಮಾಸಿಕ ಸಭೆಯ ದಿನವನ್ನು ತಿಂಗಳ ಮೊದಲ ಭಾನುವಾರಕ್ಕೆ ಬದಲಾಯಿಸಲಾಗಿದೆ ಎಂದರು. ಪೊಟ್ಯಾಟೋ ಕ್ಲಬ್ ರೈತರ ಹಿತ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ ಅವುಗಳ ಸದ್ಭಳಕೆಗೆ ರೈತರು ಮುಂದಾಗಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನತಾ ಮಾದ್ಯಮ ಪತ್ರಿಕೆಯ ಸಂಪಾದಕ ಆರ್ ಪಿ ವೆಂಕಟೇಶಮೂರ್ತಿ, ಪ್ರಫುಲ್ಲಚಂದ್ರ ರಂತಹವರ ಬದುಕು ರೈತರಿಗೆ ಆದರ್ಶನಿಯವಾಗಿದೆ, ಪರಿಶ್ರಮಕ್ಕೆ ಮತ್ತೊಂದು ಹೆಸರು ಎನ್ನುವಂತೆ ಅವರಿದ್ದಾರೆ ಅವರ ಕುರಿತು ಸಾರ್ವಜನಿಕವಾಗಿ ಮಾಹಿತಿ ನೀಡುವ ಪ್ರಯತ್ನಗಳು ಆಗಬೇಕಾಗಿದೆ ಎಂದರಲ್ಲದೇ ಮಾದ್ಯಮಗಳು ಇಂತಹ ಕಾರ್ಯಕ್ರಮಕ್ಕೆ ಆದ್ಯತೆ ನೀಡಿ ಪ್ರಚುರಪಡಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ದೇವಂಗಿ ಪ್ರಫುಲ್ಲ ಚಂದ್ರ, ಭಗವಾನ್ ಮತ್ತಿತರರಿಗೆ ಶಾಲು ಹೊದೆಸಿ ಸನ್ಮಾನ ಮಾಡಲಾಯಿತು.ಸನ್ಮಾನಿತರ ಮಾಹಿತಿಯನ್ನು ವಕೀಲ ಜಯಪ್ಪ ನೀಡಿದರು, ದೊಡ್ಡಮಗ್ಗೆ ರಾಜೆಂದ್ರ ಸ್ವಾಗತಿಸಿ ವಕೀಲ ಮಂಜುನಾಥ್ ವಂದಿಸಿದರು.