ಶುಕ್ರವಾರ, ಮಾರ್ಚ್ 19, 2010

ಮಠದ ಶ್ರೇಯೋಭಿವೃದ್ದಿಗೆ ತಡೆ ಒಡ್ಡುವವರಿಗೆ ಹೆದರುವುದಿಲ್ಲ,ಬಸವಲಿಂಗ ಸ್ವಾಮೀಜಿ

ಅರಕಲಗೂಡು: ಮಠಗಳು ಸಮಾಜದ ಸುಧಾರಣೆಗೆ ಇವೆ, ಆದರೆ ಇದನ್ನೆಲ್ಲ ಮರೆತು ತಾಲ್ಲೂಕಿನ ಕೆಲವು ಮಠಾಧೀಶರುಗಳು ಸಂಕುಚಿತ ಮನೋಭಾವದಿಂದ ವರ್ತಿಸುತ್ತಿದ್ದಾರೆ, ದೇವರು ಅವರಿಗೆ ಒಳ್ಳೆಯ ಬುದ್ದಿ ಕರುಣಿಸಲಿ ಎಂದು ಶಿರದನಹಳ್ಳಿ ಬಸವಕಲ್ಯಾಣ ಮಠದ ಬಸವಲಿಂಗ ಶೀವಾಚಾರ್ಯ ಮಹಾಸ್ವಾಮಿಗಳು ಮನವಿ ಮಾಡಿದ್ದಾರೆ.
ಬಸವಕಲ್ಯಾಣ ಮಠದ ಶಾಖಾ ಮಠವನ್ನು ತಾಲ್ಲೂಕಿನ ಕೋಟೆ ಕರ್ಪೂರವಳ್ಳಿ ಗ್ರಾಮದಲ್ಲಿ ನೆರವೇರಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ಶ್ರೀಗಳು ತಾಲ್ಲೂಕಿನಲ್ಲಿ 6ವೀರಶೈವ ಮಠ , 1 ಆಚಾರ್ಯರ ಮಠ ಸೇರಿ 7ಮಠಗಳಿವೆ. ಇದೀಗ ಈ ಸಾಲಿಗೆ 8ನೇ ಮಠ ಸೇರ್ಪಡೆಯಾಗಿದೆ , ಶಾಖಾ ಮಠವನ್ನು ಸದ್ದುದ್ದೇಶದಿಂದ ಸ್ಥಾಪಿಸಲಾಗಿದೆ, ಆದರೆ ಇದನ್ನು ಸಹಿಸದ ಅರಕಲಗೂಡು ದೊಡ್ಡಮಠದ ಶ್ರೀಮಲ್ಲಿಕಾರ್ಜುನ ಸ್ವಾಮಿಗಳೂ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮಿಗಳು ಹಾಗೂ ವೀರಶೈವ ಮುಖಂಡರಾದ ಮುದುಗನೂರು ಚಂದ್ರಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಶಾಂತಮಲ್ಲಪ್ಪ, ಮಾಗೋಡು ಬಸವರಾಜು ಇತರರು ಸೇರಿಕೊಂಡು ಕಲ್ಯಾಣ ಮಠದ ಸ್ಥಾಪನೆಗೆ ಅಡ್ಡಿ ಉಂಟು ಮಾಡುವ ಕ್ರಿಯೆಯಲ್ಲಿ ಪಾಲ್ಗೊಂಡು ಅಹಿತಕರವಾಗಿ ನಡೆದುಕೊಂಡಿದ್ದಾರೆ. ಸಮಾಜದಲ್ಲಿ ಮನಸ್ಸುಗಳನ್ನು ಒಗ್ಗೂಡಿಸಿ ಕರೆದೊಯ್ಯಬೇಕೇ ವಿನಹ ಮನಸ್ಸುಗಳನ್ನು ಒಡೆಯುವ ಪ್ರಯತ್ನ ಮಾಡಬಾರದು. ಆದರೆ ಇವರು ಶಾಖಾ ಮಠದ ಆರಂಭದ ಬಗ್ಗೆ ತಿಳಿಯುತ್ತಲೇ ಗ್ರಾಮಕ್ಕೆ ಆಗಮಿಸಿ ಜನರಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ, ಕಾರ್ಯಕ್ರಮಕ್ಕೆ ಬರುವ ಗಣ್ಯರು ಮತ್ತು ಶ್ರೀಗಳನ್ನು ತಡೆಯುವ ವ್ಯವಸ್ಥಿತ ಪ್ರಯತ್ನ ಮಾಡುವ ಮೂಲಕ ಸಂಕುಚಿತವಾಗಿ ನಡೆದುಕೊಂಡಿದ್ದಾರೆ ಎಂದು ನುಡಿದ ಶ್ರೀಗಳು ಧಾರ್ಮಿಕ ಗುರುಗಳು ಮತ್ತು ಸಮಾಜದ ಮುಖಂಡರುಗಳು ಸಮಾಜದ ಸುಧಾರಣೆಗೆ ಪ್ರಯತ್ನ ಮಾಡಬೇಕೆ ವಿನಹ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಬಾರದು, ಸ್ವಾರ್ಥಕ್ಕಾಗಿ ಸಮಾಜದ ಶಾಂತಿಯನ್ನು ಕಲಕಬಾರದು, ಇವರಿಗೆ ಸನಾತನ ಧರ್ಮದ ಅರಿವಿದ್ದಿದ್ದರೆ ಹೀಗೆಲ್ಲ ನಡೆದು ಕೊಳ್ಳುತ್ತಿರಲಿಲ್ಲವೇನೋ ಇವರುಗಳ ದುರ್ಬುದ್ದಿಯಿಂದ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ , ಎಂದು ನುಡಿದ ಅವರು ಇನ್ನಾದರೂ ಇವರು ಎಚ್ಚೆತ್ತು ಕೊಂಡು ತಪ್ಪನ್ನು ತಿದ್ದುಕೊಂಡು ಸಮಾಜವನ್ನು ಕಟ್ಟುವ ಕೆಲಸ ಮಾಡಲಿ ಎಂದು ಮನವಿ ಮಾಡಿದರು. ವೀರಶೈವ ಮಹಾ ಸಭಾ ಸಮಾಜದ ಒಂದು ಪ್ರಾತಿನಿಧಿಕ ಸಂಸ್ಥೆ ಆದರೆ ಅದರ ಅಧ್ಯಕರಾದವರು ಆ ಮಹತ್ವವನ್ನು ಅರಿಯದಿದ್ದರೆ ಅವರನ್ನು ಮುಖಂಡ ಎಂದು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂದು ಪ್ರಶ್ನಿಸಿದ ಅವರು ಮಠಗಳಲ್ಲು ರಾಜಕೀಯ ತರುತ್ತಾರೆ ಇದೆಲ್ಲ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೋಟೆ ಕರ್ಪೂರವಳ್ಳಿ ಶಾಖಾ ಮಠದ ಮಾದರಿಯಲ್ಲಿ ಇನ್ನೂ 15 ಮಠಗಳನ್ನು ಸ್ಥಾಪಿಸುತ್ತೇನೆ, ನಾನು ಯಾರಿಗೂ ಹೆದರುವುದಿಲ್ಲ, ಇಲ್ಲಿನ ಮಠದ ಜೊತೆಗೆ ವೃದ್ದಾಶ್ರಮವನ್ನು ನಿರ್ವಹಿಸಲಾಗುತ್ತದೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಗಳು ನಾನು ಏಕಾಂಗಿ ಹೋರಾಟಗಾರನಲ್ಲ ನನ್ನೊಂದಿಗೆ ಸಮಾಜದ ಸಮಸ್ತ ಭಾಂಧವರು ಸಹೃದಯಿಗಳು ಇದ್ದಾರೆ ಯಾರ ಕುತಂತ್ರಕ್ಕೂ ಹೆದರುವುದಿಲ್ಲ ಎಂದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಭಸ್ಮ
ಅರಕಲಗೂಡು: 2ಪ್ರತ್ಯೇಕ ಘಟನೆಗಳಲ್ಲಿ ವಾಸದ ಮನೆಗಳಿಗೆ ಹಾಗೂ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ ಪರಿಣಾಮ 1.50ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಠ ಸಂಭವಿಸದ ಘಟನೆ ತಾಲ್ಲೂಕಿನ ವಿಜಿ ಕೊಪ್ಪಲು ಹಾಗೂ ಅಕ್ಕಲವಾಡಿಯಲ್ಲಿ ನಡೆದಿದೆ.
ಇಂದು ಮದ್ಯಾಹ್ನ 2.30ರ ಸುಮಾರಿಗೆ ಸ್ಥಗಿತಗೊಂಡಿದ್ದ ವಿದ್ಯುತ್ ಬಂದ ತಕ್ಷಣವೇ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಅಪ್ಪಣ್ಣ ಎಂಬ ರೈತನ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ದುರ್ಘಟನೆ ಸಂಭವಿಸಿದ ವೇಳೆ ರೈತ ದಂಪತಿಗಳು ಜಮೀನಿಗೆ ತೆರಳಿದ್ದರೆ, ಮಕ್ಕಳು ಶಾಲೆಗೆ ಹೋಗಿದ್ದರೆನ್ನಲಾಗಿದೆ. ಮನೆಯಲ್ಲಿ ಶೇಖರಿಸಿದ್ದ ಧವಸ ಧಾನ್ಯ, ಬಟ್ಟೆಬರೆ, ದುಡ್ಡು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ರೈತ ಕುಟುಂಬ ಅನಿರೀಕ್ಷಿತ ಆಘಾತಕ್ಕೊಳಗಾಗಿದೆ. ಇನ್ನೊಂದು ಘಟನೆಯಲ್ಲಿ ಕೊಣನೂರು ಹೋಬಳಿಯ ಅಕ್ಕಲವಾಡಿಯಲ್ಲಿ ರೈತನೋರ್ವನ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸುಟ್ಟುಹೋಗಿದೆ. ತಾಲ್ಲೂಕಿನಲ್ಲಿ ಅಗ್ನಿಶಾಮಕ ದಳದ ಸೌಲಭ್ಯವಿಲ್ಲದಿರುವುದು ಮತ್ತು ದೂರದ ಹೊಳೆನರಸಿಪುರದಿಂದ ಅಗ್ನಿಶಾಮಕ ಬರುವ ವೇಳೆಗೆ ಎಲ್ಲವೂ ಸುಟ್ಟು ಹೋಗುತ್ತಿರುವುದು ಈ ತಾಲ್ಲೂಕಿನ ರೈತರಿಗೆ ಅಗ್ಗಿ ಅಕಸ್ಮಿಕ ಶಾಪವಾಗಿ ಪರಿಣಮಿಸಿದೆ. ಶಾಸಕರು ಈ ಸಂಬಂಧ ತಕ್ಷಣ ತಾಲ್ಲೂಕಿಗೆ ಮಂಜೂರಾಗಿರುವ ಅಗ್ನಿಶಾಮಕ ಠಾಣೆಗೆ ಜಾಗ ೊದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆಯ ಸ್ಥಳಕ್ಕೆ ತಹಸೀಲ್ದಾರ್ ಶೈಲಜಾ ಭೇಟಿ ನೀಡಿ ನೊಂದ ಕುಂಟುಂಬದವರಿಗೆ ಸಾಂತ್ವನ ಹೇಳಿದರು. ಹಾಗೂ ವಿಜಿ ಕೊಪ್ಪಲಿನ ನಿರಾಶ್ರಿತ ಕುಟುಂಬಕ್ಕೆ ಅಗತ್ಯ ನೆರವನ್ನು ಒದಗಿಸಲು ತಾಲ್ಲೂಕು ಆಡಳಿತ ಬದ್ದವಾಗಿದೆ ಎಂದರು.
ಆಸ್ಪತ್ರೆ ಸ್ವಚ್ಚತೆ ವೈಫಲ್ಯ ದಿಢೀರ್ ಪ್ರತಿಭಟನೆ
ಅರಕಲಗೂಡು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಚತೆ ವೈಫಲ್ಯ ಹಾಗೂ ವೈದ್ಯರು-ಸಿಬ್ಬಂದಿಗಳ ಗೈರು ಖಂಡಿಸಿ ಇಂದು ರಾತ್ರಿ 9ಗಂಟೆಯಲ್ಲಿ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ಏರಿದೆ ಆದಾಗ್ಯು ಇಲ್ಲಿನ ವ್ಯವಸ್ಥೆ ಸುಧಾರಿಸಿಲ್ಲ, ಕಳೆದ ೆರಡು ಮೂರು ದಿನಗಳಿಂದ ಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಊಟ ನೀಡಿಲ್ಲ, ಸ್ವಚ್ಚತೆ ಕೈಗೊಳ್ಳಲಾಗಿಲ್ಲ, ವೈದ್ಯರು ಮತ್ತು ಸಿಬ್ಬಂದಿ ಸರಿಯಾದ ಸೇವೆ ನೀಡುತ್ತಿಲ್ಲವೆಂದು ದೂರು ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವಮೋರ್ಚಾದ ಮಾಜಿ ಅಧ್ಯಕ್ಷ ಗಣಪತಿ ಮತ್ತಿತರ ಮುಖಂಡರು ಆಸ್ಪತ್ರೆಗೆ ತೆರಳಿದರು. ಆಗ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಸಿಬ್ಬಂದಿಯಾಗಲಿ ವೈದ್ಯರಾಗಲಿ ಇಲ್ಲದಿದ್ದದುರಿಂದ ಸಿಟ್ಟಿಗೆದ್ದ ನಾಗರಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಆದಾಗ್ಯೂ ಆಸ್ಪತ್ರೆಗೆ ಭೇಟಿ ನೀಡದ ವೈದ್ಯ ಸತೀಶ್ ವಿರುದ್ದ ಮುಖಂಡರು ಕಿಡಿ ಕಾರಿದರು. ನಂತರ ಶಾಸಕ ಎ ಮಂಜು ರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಮಾಹಿತಿ ನೀಡಿದರು. ಶಾಸಕರು ನಾಳೆ(ಮಾ. 20) ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಅಂತ್ಯಗೊಳಿಸಿದರು.

ಕಾಮೆಂಟ್‌ಗಳಿಲ್ಲ: