ಮಂಗಳವಾರ, ಏಪ್ರಿಲ್ 6, 2010

ಹಾಡುಗಳ ಹರಿಕಾರ ಗೀತಪ್ರಿಯ ಹಿನ್ನೋಟ

ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಂದು ಹೆಸರು ಗೀತಪ್ರಿಯ. ಇವರ ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ.ಬಾಲ್ಯಮಿತ್ರ ವಿಜಯಭಾಸ್ಕರ್ ಸಹಾಯದಿಂದ 1955ರಲ್ಲಿ 'ಶ್ರೀರಾಮಪೂಜಾ' ಚಲನಚಿತ್ರಕ್ಕೆ ಗೀತೆ ಬರೆಯುವ ಅವಕಾಶ ದೊರಕಿತು. ವಿಜಯ ಭಾಸ್ಕರ್ ಅವರೆ ಇವರಿಗೆ ಗೀತಪ್ರಿಯ ಎಂದು ನಾಮಕರಣ ಮಾಡಿದರು.

ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುವ ವಿಭಿನ್ನ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ' ಯಲ್ಲಿ ಗೀತಪ್ರಿಯ ಅವರನ್ನು ಭೇಟಿಯಾಗಬಹುದು. ಏಪ್ರಿಲ್ 10ರಂದು ಸಂಜೆ 4.30ಕ್ಕೆ ಬಾದಾಮಿ ಹೌಸ್ ನಲ್ಲಿ ಗೀತಪ್ರಿಯ ಜೊತೆ ಹಿನ್ನೋಟಕ್ಕೆ ಹೊರಳಬಹುದು.

ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ, ನಮ್ಮೂರ್ನಾಗ್ ನಾನೊಬ್ಬನೆ ಜಾಣ, ಇದೇನ ಸಭ್ಯತೆ,ಇದೇನ ಸಂಸ್ಕೃತಿ, ಹಕ್ಕಿಯು ಹಾರುತಿದೆ, ವೀಣಾ ನಿನಗೇಕೋ ಈ ಕಂಪನ...ಹಾಡುಗಳನ್ನು ಕೇಳಿದಾಗಲೆಲ್ಲಾ ಅವರು ಕೇವಲ ಗೀತಪ್ರಿಯರಷ್ಟೆ ಅಲ್ಲ ಸಂಗೀತ ಪ್ರಿಯರು ಎಂಬುದು ಮನದಟ್ಟಾಗುತ್ತದೆ. ಒಂದೇ ಬಳ್ಳಿಯ ಹೂಗಳು, ಬೆಟ್ಟದ ಹುಲಿ, ಹೊಂಬಿಸಿಲು ಸೇರಿದಂತೆ ಮುವ್ವತ್ತು ಅರ್ಥಪೂರ್ಣ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕರು ಗೀತಪ್ರಿಯ.

ಗೀತಪ್ರಿಯ ನಿರ್ದೇಶನದ 'ಮಣ್ಣಿನ ಮಗ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಗೀತಪ್ರಿಯ ನಲವತ್ತೈದು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಬೆಳುವಲದ ಮಡಿಲಲ್ಲಿ, ಪುಟಾಣಿ ಏಜೆಂಟ್ 123, ಪ್ರೀತಿಸಿ ನೋಡು, ಬೆಸುಗೆ, ಹೊಂಬಿಸಿಲು ಚಿತ್ರಗಳು ಗೀತಪ್ರಿಯ ಅವರ ಪ್ರೌಢ ನಿರ್ದೇಶನಕ್ಕೆ ಕನ್ನಡಿ ಹಿಡಿಯುತ್ತವೆ.

ಮಾಜಿ ಪ್ರೇಮಿ ವಿರುದ್ಧ ರಾಖಿ ಕುಣಿತ ಸಮರಬಾಲಿವುಡ್ ನ ಐಟಂಗರ್ಲ್, ವಿವಾದಗಳ ರಾಣಿ ರಾಖಿ ಸಾವಂತ್ ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯಲು ಸಜ್ಜಾಗಿದ್ದಾರೆ. ಸ್ಟಾರ್ ಪ್ಲಸ್ ನ ರಿಯಾಲಿಟಿ ಷೋ' ಜರಾ ನಚ್ಕೆ ದಿಖಾ' ದಲ್ಲಿ ಕುಣಿಯಲು ರಾಖಿ ಮನಸ್ಸು ಮಾಡಿದ್ದಾರೆ. ರಾಖಿ ಸ್ಪರ್ಧಿಗಿಳಿಯುತ್ತಿರುವುದು ತನ್ನ ಮಾಜಿ ಪ್ರೇಮಿ ಅಭಿಷೇಕ್ ಅವಸ್ಥಿ ವಿರುದ್ಧ ಎಂಬುದು ಇಲ್ಲಿ ವಿಶೇಷ.

ಅಭಿಷೇಕ್ ಕೂಡ ಸ್ಪರ್ಧಿಯಾಗಿದ್ದಾನೆ ಈ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದರೆ, 'ಅಭಿಷೇಕ್ ಅವಸ್ಥಿಯಾಗಲಿ, ಅಮೀರ್ ಖಾನ್, ಶಾರುಖ್ ಖಾನ್ ಆಗಲಿ ನಾನು ಕೇರ್ ಮಾಡುವುದಿಲ್ಲ, ಸ್ಪರ್ಧಿಗಿಳಿದ ಮೇಲೆ ಎಲ್ಲರೂ ಒಂದೇ. ಇಲ್ಲಿ ಗೆಲುವು ನಮಗೆ ಖಚಿತ' ಎಂಬ ಬಿಂದಾಸ್ ಮಾತುಗಳನ್ನಾಡಿದರು ರಾಖಿ.

ಸುಮಾರು 9 ವಾರಗಳ ಕಾಲ ನಡೆಯುವ ಈ ಬಾಯ್ಸ್ V/s ಗರ್ಲ್ಸ್ ಡಾನ್ಸ್ ಸಮರದಲ್ಲಿ ಕಿರುತೆರೆಯ ಪ್ರಸಿದ್ಧ ತಾರೆಗಳ ದಂಡೆ ಇದೆ. ರಾಖಿ ಅಲ್ಲದೆ, ಅದಿತಿ ಗುಪ್ತಾ, ಹಜೆಲ್ ಕ್ರೋನಿ, ಕೃತಿಕಾ ಕಾಮ್ರಾ, ಮುಕ್ತಿ ಮೋಹನ್, ರಷ್ಮಿ ದೇಸಾಯಿ, ಸಂಗೀತಾ ಘೋಷ್, ಸಂಜೀದಾ ಶೇಖ್ , ಸಪರ್ಶ್ ಕಂಚಂನ್ ದಾನಿ ಮತ್ತಿತ್ತರಿದ್ದಾರೆ. ಇವರಿಗೆ ಟಾಂಗ್ ಕೊಡಲು ಅಭಿಷೇಕ್ ಅವಸ್ತಿ ಅಲ್ಲದೆ ಕರಣ್ ಕುಂದ್ರಾ, ಸಿದ್ದೇಶ್ ಪೈ, ಸುಶಾಂತ್ ಮುಂತಾದವರು ಭಾಗವಹಿಸಲಿದ್ದಾರೆ.

ವಿ ಮನೋಹರ್ ಕನಸಿನ ಕೂಸು 'ಭೂಮಿ ಗೀತ

ಚಿತ್ರಸಾಹಿತಿ, ಸಂಗೀತ ನಿರ್ದೇಶಕ ವಿ. ಮನೋಹರ್ ಮೊದಲಿನಿಂದಲೂ ಜಾನಪದ ಕಲೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದಾರೆ. ಜಾನಪದ ಕಲೆಯನ್ನು ಇನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬುಡಕಟ್ಟು ಜನರ ಹಾಡುಗಾರಿಕೆ, ಕಲೆಯ ಬಗ್ಗೆ ಅಧ್ಯಯನ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ 'ಭೂಮಿ ಗೀತ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಕುರಿತು ಕೆಲ ವಿವರಣೆಗಳನ್ನು ವಿ ಮನೋಹರ್ ನೀಡಿದ್ದಾರೆ.

ಬಾಲ್ಯದಲ್ಲಿ ಕೋಲಾಟದ ದಲಿತರ ಒಂದು ಹಾಡನ್ನು (ಕಥನ ಗೀತೆ) ಕೇಳಿದ್ದೆ. ಅದರ ಒಂದು ಸಾಲು ಮಾತ್ರ ನನಗೆ ನೆನಪಿತ್ತು. ನಾನು ಮತ್ತೆ 5 ವರ್ಷದ ನಂತರ ಅದನ್ನು ಹುಡುಕಿಕೊಂಡು ಹೋದಾಗ ಆ ಹಾಡೂ ಇರಲಿಲ್ಲ. ಅದನ್ನು ಹಾಡುವವರೂ ಇರಲಿಲ್ಲ. ಆ ಹಾಡನ್ನು ಹಾಡಿದರೆ ನಮ್ಮನ್ನು ಕೀಳುಜಾತಿಯವರೆಂದು ನಿರ್ಲಕ್ಷಿಸುತ್ತಾರೆ ಎಂದು ಆ ದಲಿತ ಬುಡಕಟ್ಟು ಜನಾಂಗದವರು ಆ ಹಾಡು ಹಾಡುವುದನ್ನು ಬಿಟ್ಟುಬಿಟ್ಟರು.

ಆ ರೀತಿಯ ಪ್ರದರ್ಶನ ಕೀಳರಿಮೆಯ ಕಾರಣದಿಂದ ನಾಶವಾಗುತ್ತ ಹೋಗುತ್ತದೆ. ಆ ಕಲೆಯನ್ನು ಉಳಿಸಿಕೊಂಡವರನ್ನು ಪ್ರೋತ್ಸಾಹಿಸಿ ಪುನಃ ಬೆಳೆಸಿ ಉಳಿಸಲು ನಮ್ಮ ಸಂಸ್ಥೆಯಿಂದ ಪ್ರಯತ್ನಿಸುತ್ತೇನೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ನನ್ನ ಸ್ಟುಡಿಯೋದಲ್ಲಿ ಅವರನ್ನು ಕರೆಸಿ ಹಾಡಿಸಿ ಎಂದುನಮಗೆ ಬೆಂಬಲ ಸೂಚಿಸಿದ್ದಾರೆ.

ಸೋಲಿಗರು, ಹಕ್ಕಿ-ಪಿಕ್ಕಿ ವಂಶಜರು ಎಲ್ಲಾ ಸೇರಿ ಹೀಗೆ 45 ರೀತಿಯ ಕೈ-ಕಸುಬುದಾರರಿದ್ದಾರೆ. ಅಂಥವರೆಲ್ಲರ ಸಾಂಸ್ಕೃತಿಕ ಕಲೆಯನ್ನು ಪುನರುಜ್ಜೀವನಗೊಳಿಸಲು ಭೂಮಿಗೀತ ಪ್ರಯತ್ನಿಸುತ್ತದೆ ಎಂದು ತಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿ. ಮನೋಹರ ವಿವರಿಸಿದರು.ಹೆಸರಾಂತ ಜನಪದ ಕಲಾವಿದ ಮೈಸೂರು ಜನ್ನಿ ಮಾತನಾಡಿ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ನಾವು ನಿಕೃಷ್ಟವಾಗಿ ಕಾಣುತ್ತಿದ್ದೇವೆ. ಅದನ್ನು ಮತ್ತೆ ಜೀವಂತವಾಗಿರಿಸಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ, ಬೆಂಬಲ ಕೂಡ ಅತ್ಯಗತ್ಯವಾಗಿದೆ ಎಂದರು.

ಕುಶಾಲನಗರದಲ್ಲಿ ಪುನೀತ್ 'ಜಾki

ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ [^]‌ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ 'ಜಾಕಿ'. ಈ ಚಿತ್ರದ ಚಿತ್ರೀಕರಣವು ಏಪ್ರಿಲ್ 4 ರಿಂದ ಕುಶಾಲನಗರದಲ್ಲಿ ಮುಂದುವರೆದಿದೆ.ಚಿತ್ರಕ್ಕಾಗಿ 19 ದಿನಗಳ ಕಾಲ ಪುನೀತ್-ಭಾವನಾ ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಬೆಂಗಳೂರಿನ ಸುತ್ತಮುತ್ತ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ನಿರ್ದೇಶಕ ಸೂರಿ ಚಿತ್ರಿಸಿಕೊಂಡರು.

ಹತ್ತು ದಿನಗಳ ಕಾಲ ಕುಶಾಲನಗರ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು ನಂತರ ಮೈಸೂರಿನಲ್ಲಿ ಚಿತ್ರೀಕರಣ ಮುಂದುವರೆಯಲಿದೆ ಎಂದು ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.ಚಿತ್ರಕ್ಕೆ ಯೋಗರಾಜ್ ಆರ್. ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಶಶಿಧರ ಅಡಪ ಕಲೆ, ಇಮ್ರಾನ್ ನೃತ್ಯ, ರವಿವರ್ಮ- ಡಿಫರೆಂಟ್ ಡ್ಯಾನಿ ಸಾಹಸ, ಮಲ್ಲಿಕಾರ್ಜುನ ನಿರ್ಮಾಣ ಮೇಲ್ವಿಚಾರಣೆ ಇದೆ.

ಕಥೆ- ಚಿತ್ರಕಥೆ- ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಸೂರಿ ಹೊತ್ತಿದ್ದಾರೆ.ತಾರಾಗಣದಲ್ಲಿ ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಚತುರ್ಭಾಷಾ ತಾರೆ ಭಾವನಾ ಕಾಣಿಸಿಕೊಳ್ಳುತ್ತಿದ್ದು, ರಂಗಾಯಣ ರಘು, ರವಿ ಕಾಳೆ, ಶೋಭರಾಜ್, ಸಂಪತ್, ಉಮೇಶ್ ಮುಂತಾದವರಿದ್ದಾರೆ

ಕಾಮೆಂಟ್‌ಗಳಿಲ್ಲ: