ಮಂಗಳವಾರ, ಏಪ್ರಿಲ್ 6, 2010

ಭರ್ಜರಿ ಸಾಹಸದಲ್ಲಿ ಮಿಂದೇಳಲಿದೆ ವಿಜಯ್‌ರ 'ಕಂಠೀರವ'

ಅದು ಅಂತಿಂಥ ಫೈಟ್ ಅಲ್ಲ. ಭರ್ಜರಿ ಫೈಟ್. ಕುಸ್ತಿಯಿಂದ ಆರಂಭವಾಗುವ ಇದು ಮಾರ್ಷಲ್ ಆರ್ಟ್ಸ್‌ನಲ್ಲಿ ಅಂತ್ಯಗೊಳ್ಳುವುದೇ ಕಂಠೀರವ ಚಿತ್ರದ ವಿಶೇಷ.

ಹೌದು. ವಿಜಯ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ಸಾಹಸದಲ್ಲಿ ಒಂದು ಹೊಸ ಮೈಲುಗಲ್ಲನೇ ಸೃಷ್ಟಿಸಲಿದೆ ಎಂದು ಹೇಳುತ್ತಿದೆ ಚಿತ್ರತಂಡ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹೇಳಿ ಕೇಳಿ, ಈ ಚಿತ್ರದ ನಿರ್ಮಾಪಕರು ರಾಮು. ಅವರ ಚಿತ್ರಗಳಲ್ಲಿ ಸಾಹಸ, ಅದ್ದೂರಿತನಕ್ಕೆ ಕಡಿಮೆಯೇ ಇಲ್ಲ. ಜೊತೆಗೆ ಇನ್ನ ಹೆಚ್ಚಿನ ವಿಶೇಷವೆಂದರೆ, ಇದು ಕಂಠೀರವ ಚಿತ್ರ. ಮೈಸೂರಿನ ಅರಸ ರಣಧೀರ ಕಂಠೀರವ ಕುಸ್ತಿ ಪಟು. ಜೊತೆಗೆ ಕುಸ್ತಿ ನಮ್ಮ ಮಣ್ಣಿನ ಕ್ರೀಡೆ ಎಂಬ ಕಾರಣಕ್ಕೆ ಈ ಫೈಟ್ ಅನ್ನು ಕುಸ್ತಿ ಮೂಲಕವೇ ಆರಂಭಿಸಲಾಗುವುದು ಎನ್ನುತ್ತಾರೆ ವಿಜಯ್.

ವಿಜಯ್‌ಗೆ ಇಲ್ಲಿ ಇಬ್ಬರು ನಾಯಕಿಯರು. ರಿಷಿಕಾ ಮತ್ತು ಶುಭಾ ಪೂಂಜಾ. ರಿಷಿಕಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು. ನಟ ಆದಿತ್ಯರ ತಂಗಿ. ಅವರಿಗಿಲ್ಲಿ ತುಂಟತನದ, ಹೆಚ್ಚು ಮಾತನಾಡುವ ಪಾತ್ರ. ಅಂದ ಹಾಗೆ ಶುಭಾ ಪೂಂಜಾಗೆ ನಾಲ್ಕನೇ ಬಾರಿ ವಿಜಯ್ ಜೋಡಿಯಾದ ಖುಷಿ. ಈ ಚಿತ್ರದಲ್ಲಿ ಅವರಿಗೆ ಮಾನಸಿಕ ಅಸ್ವಸ್ಥೆಯ ಪಾತ್ರ!

ಈ ಚಿತ್ರವನ್ನು ತುಷಾರ್ ರಂಗನಾಥ್ ನಿರ್ದೇಶಿಸುತ್ತಿದ್ದಾರೆ. ವಿಜಯ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರಂತೆ. ಇದು ತೆಲುಗಿನ ಸಿಂಹಾದ್ರಿ ಚಿತ್ರದ ರಿಮೇಕ್. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಕೂಡ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ತುಷಾರ್.
ಭರದಿಂದ ಸಾಗುತ್ತಿದೆ ದರ್ಶನ್ ಅವರ 'ಶೌರ್ಯ'!
ದರ್ಶನ್ ನಾಯಕನಾಗಿ ನಟಿಸುತ್ತಿರುವ ಶೌರ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸಧ್ಯದಲ್ಲಿಯೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.

ಚಿತ್ರದಲ್ಲಿ ಮೂರು ಹಾಡುಗಳಿವೆ. ಇದರಲ್ಲಿ ಒಂದು ಗೀತೆ ಭಾರತದ ಪ್ರಸಿದ್ಧ ಪ್ರವಾಸಿ ತಾಣ ಕುಲು ಹಾಗೂ ಮನಾಲಿಯ ಚುಮುಚುಮು ಚಳಿಯಲ್ಲಿ ಚಿತ್ರೀಕರಣಗೊಳ್ಳಲಿದ್ದು, ಮತ್ತೆರಡು ಗೀತೆಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಕಮ್ ಸಂಗೀತ ನಿರ್ದೇಶಕರಾಗಿರುವ ಸಾಧುಕೋಕಿಲಾ ಅಭಿಪ್ರಾಯ.

ಚಿತ್ರಕ್ಕೆ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ನಾಯಕಿಯಾಗಿ ರೀಮಾ ವರ್ಮ ಅಭಿನಯಿಸುತ್ತಿದ್ದಾರೆ. ಮುಮೈತಾ ಖಾನ್ ಅವರ ಬೆಡಗು ಬಿನ್ನಾಣವೂ ಇದೆ. ಪ್ರೇಕ್ಷಕರನ್ನು ನಗಿಸಲು ಬುಲೆಟ್ ಪ್ರಕಾಶ್ ಹಾಸ್ಯನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಶೀಘ್ರದಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಸಜ್ಜುಗೊಳ್ಳುತ್ತಿದೆ.
ಸಿನಿಮಾಕ್ಕೆ ಅಗತ್ಯವಿದ್ದರೆ ಬಿಚ್ಚಲು ಸಿದ್ಧ: ಶೀನಾ ಶಹಬಾದಿ!
ಹಾಲಿವುಡ್ ಸಿನಿಮಾಗಳಲ್ಲಿ ಬಿಚ್ಚುವುದು, ಮುತ್ತಿಕ್ಕುವುದು ಎಲ್ಲಾ ಚಿತ್ರದ ಅವಿಭಾಜ್ಯ ಅಂಗ. ಆದರಿದು ಇತ್ತೀಚಿನ ಕೆಲವು ವರ್ಷಗಳಿಂದ ಬಾಲಿವುಡ್‌ನಲ್ಲೂ ಕಾಮನ್ ಎನ್ನಿಸುವಷ್ಟರ ಮಟ್ಟಿಗೆ ನಡೆಯುತ್ತಿದೆ. ಜೊತೆಗೆ ನಿಧಾನವಾಗಿ ದಕ್ಷಿಣ ಭಾರತೀಯ ಚಿತ್ರಗಳತ್ತಲೂ ಪ್ರಭಾವ ಬೀರುತ್ತಿದೆ. ಹೊಸದಾಗಿ ಪಾದಾರ್ಪಣೆ ಮಾಡುವ ಬೆಡಗಿಯರೂ ಕೂಡಾ ಇಂಥದ್ದಕ್ಕೆಲ್ಲ ರೆಡಿಯಾಗೇ ಬಂದಿರುತ್ತಾರೆ. ಈಗ ಇಂಥದ್ದಕ್ಕೆಲ್ಲ ತಯಾರಾಗಿರೋದು ಶೀನಾ ಶಹಬಾದಿ!

ಬಾಲಿವುಡ್‌ನಲ್ಲಿ ತೇರೇ ಸಂಗ್ ಎಂಬ ಚಿತ್ರದಲ್ಲಿ ನಟಿಸಿದ ಈಕೆ ಹಿರಿಯ ನಟಿ ಸಾಧನಾ ಸಿಂಗ್ ಅಂವರ ಮಗಳು. ತೆಲುಗಿನಲ್ಲೂ ಇತ್ತೀಚೆಗೆ ಬಿಂದಾಸ್ ಎಂಬ ಚಿತ್ರದಲ್ಲಿ ನಟಿಸಿ ಪಡ್ಡೆಗಳ ಹೃದಯ ಕೊಳ್ಳೆಹೊಡೆದಿದ್ದಳು. ಇದೀಗ ರಾಜಧಾನಿ ಎಂಬ ಕನ್ನಡ ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ನಟಿಸಲು ಬೆಂಗಳೂರಿಗೆ ಬಂದಿದ್ದಾಳೆ.

ಚಿತ್ರದ ಪಾತ್ರಕ್ಕೆ ಅಗತ್ಯವಿದ್ದರೆ ಖಂಡಿತಾ ನಾನು ಬಿಚ್ಚುವುದಕ್ಕೆ ಸಿದ್ಧ. ಬಿಚ್ಚಲು ನನಗೇನೂ ಮುಜುಗರವಿಲ್ಲ. ಆದರೆ ಅಗತ್ಯವಿದ್ದರೆ ಮಾತ್ರ ಬಿಚ್ಚುವ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುತ್ತಾಳೆ ಶೀನಾ.

ನೋಡಲು ಇನ್ನೂ ಪುಟ್ಟ ಹುಡುಗಿಯಂತೆ ಕಾಣುವ ಶೀನಾಗೆ ಮದುವೆಯೂ ಆಗಿದೆ. ಆದರೆ ಅಷ್ಟೇ ಬೇಗ ವಿಚ್ಛೇದನವೂ ಆಗಿದೆ. ಅದಾದ ಮೇಲೆ ಚಿತ್ರದಲ್ಲಿ ನಟಿಸಲು ಚಿತ್ರರಂಗದ ಅಂಗಳಕ್ಕೆ ಇಳಿದಿದ್ದಾಳೆ. ಇತ್ತೀಚೆಗಷ್ಟೇ ಆಕೆಯ ಮಾಜಿ ಗಂಡ ಆಕೆಯ ಜೊತೆಗೆ ತಾನಿದ್ದಾಗ ತೆಗೆದಿದ್ದ ಕೆಲವು ಹಸಿಬಿಸಿ ಫೋಟೋಗಳನ್ನು ಇಂಟರ್‌ನೆಟ್‌ಗೆ ಹರಿಯಲು ಬಿಟ್ಟಿದ್ದ. ಇದು ಭಾರೀ ಸುದ್ದಿ ಮಾಡಿತ್ತು. ಇದಕ್ಕೆಲ್ಲ ಹೆದರದಿರುವ ಈ ಬೆಡಗಿ, ತಾನೀಗ ಚಿತ್ರರಂಗದಲ್ಲಿ ಮಿಂಚುತ್ತಿರುವು ನೋಡಿ ಆತನಿಗೆ ಹೊಟ್ಟೆಕಿಚ್ಚಾಗುತ್ತಿದೆ. ಅದಕ್ಕೇ ಆತ ಹೀಗೆಲ್ಲಾ ಮಾಡಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ದೂರಿದ್ದಳು. ಸದ್ಯಕ್ಕೆ ಕನ್ನಡ ಚಿತ್ರದಲ್ಲಿ ಬ್ಯುಸಿಯಾಗಿರುವ ಶೀನಾ ಚಿತ್ರರಂಗದಲ್ಲಿ ಬೆಳೆಯಲು ಕನಸು ಕಾಣುತ್ತಿದ್ದಾಳೆ.

ಕಾಮೆಂಟ್‌ಗಳಿಲ್ಲ: