ಸೋಮವಾರ, ಮಾರ್ಚ್ 1, 2010

ಪ್ರಾಯೋಗಿಕ ಕೃಷಿಯ ಮಹತ್ವ ಅರಿಯಿರಿ: ದೇವಂಗಿ ಪ್ರಫುಲ್ಲಚಂದ್ರ

ಅರಕಲಗೂಡು: ಬದಲಾಗುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಖ್ಯಾತ ಕೃಷಿ ತಜ್ಞ ದೇವಂಗಿ ಪ್ರಫುಲ್ಲ ಚಂದ್ರ ಹೇಳಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ಇಂದು ಏರ್ಪಾಟಾಗಿದ್ದ ಕಾರ್ಯಕ್ರಮಉದ್ಘಾಟಿಸಿ ಅಗ್ರಿತಾಜ್ ಡಿಆರ್ಪಿ ಎಂಬ ಕೃಷಿ ಪುಸ್ತಕ ಬಿಡುಗಡೆ ಮಾಡಿ ಮಾತಾನಾಡಿದ ಅವರು ನಮ್ಮ ರೈತರು ಪ್ರಾಯೋಗಿಕ ಕೃಷಿಯ ಮಹತ್ವವನ್ನು ಅರಿಯಬೇಕಾಗಿದೆ ಅದು ಇಂದಿನ ಸಂಧರ್ಭದ ಅನಿವಾರ್ಯತೆಯೂ ಆಗಿದೆ ಎಂದು ಅಭಿಪ್ರಾಯ ವ್ಯಕ್ತಿಪಡಿಸಿದರು. ಕೃಷಿ ಸ್ವಾವಲಂಬನೆಗೆ ಒತ್ತು ನೀಡುತ್ತದೆ, ನಮ್ಮ ಕೆಲಸಗಳನ್ನು ನಾವೇ ಶ್ರಮವಹಿಸಿ ಮಾಡಿಕೊಂಡಾಗ ಅದಕ್ಕೊಂದು ಅರ್ಥ ಸಿಗುತ್ತದೆ ಎಂದು ನುಡಿದ ಅವರು ರೈತರು ಒಂದೇ ತೆರನಾದ ಬೆಳೆ ಬೆಳೆದರೆ ಉಳಿಗಾಲ ಸಾಧ್ಯವಿಲ್ಲ, ಬೆಳೆಗಳಲ್ಲಿ ಅಂತರದ ಬದಲಾವಣೆ ಅಗತ್ಯವಾಗಿದೆ ಇದರಿಂದಾಗಿ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ ಎಂದರು. ಕೃಷಿ ಜಮೀನುಗಳಲ್ಲಿ ಜಾನುವಾರುಗಳನ್ನು ಬೆಳೆಸುವಾಗ ಕಟ್ಟಿಹಾಕಿಕೊಂಡು ಬೆಳೆಸುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ, ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು ಆಗ ಕೃಷಿ ಬದುಕಿನ ಗತಿ ತಿಳಿಯುತ್ತದೆ ಎಂದರು. ಅಗ್ರಿತಾಜ್ ಪುಸ್ತಕದ ಕನ್ನಡಾನುವಾದ ಮಾಡಿದ ಲೇಖಕ ಭಗವಾನ್ ಮಾತನ಻ಡಿ ರೈತಾಪಿ ಸಂಸ್ಕೃತಿ ಬದುಕಿನ ಆಸರೆಯಾಗಬೇಕು, ತುಂಬಾ ಆಸ್ಥೆ ವಹಿಸಿ ತೊಡಗಿಸಿಕೊಂಡಾಗ ಮಾತ್ರ ಯಶ ಕಾಣಲು ಸಾಧ್ಯ ಎಂದರು. ಹೆಮ್ಮಿಗೆ ಮೋಹನ್ ಮಾತನಾಡಿ ಆಧುನಿಕ ಕೃಷಿಯಲ್ಲಿ ಮೌನ ಕ್ರಾಂತಿ ಮಾಡಿದ ಮಹಾನ್ ಸಾಧಕ ಪ್ರಫುಲ್ಲ ಚಂದ್ರ ಅವರ ಕೃಷಿ ಬದುಕು ಇತರರಿಗೆ ಮಾದರಿಯ಻ಗಬೇಕು ಎಂದರು. ಪೊಟ್ಯಾಟೋ ಕ್ಲಬ್ ಸಂಚಾಲಕರಾದ ಯೋಗಾರಮೇಶ್ ಮಾತನಾಡಿ ಮುಂದಿನ ತಿಂಗಳಿನಲ್ಲಿ ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ಆಲೂಗಡ್ಡೆ ಬೆಳೆ ಕುರಿತ ಸಂವಾದ ಮತ್ತು ಮಾಹಿತಿ ಕಾರ್ಯಾಗಾರ ನಡೆಯಲಿದೆ, ಹಾಗೂ ಮಾಸಿಕ ಸಭೆಯ ದಿನವನ್ನು ತಿಂಗಳ ಮೊದಲ ಭಾನುವಾರಕ್ಕೆ ಬದಲಾಯಿಸಲಾಗಿದೆ ಎಂದರು. ಪೊಟ್ಯಾಟೋ ಕ್ಲಬ್ ರೈತರ ಹಿತ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ ಅವುಗಳ ಸದ್ಭಳಕೆಗೆ ರೈತರು ಮುಂದಾಗಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನತಾ ಮಾದ್ಯಮ ಪತ್ರಿಕೆಯ ಸಂಪಾದಕ ಆರ್ ಪಿ ವೆಂಕಟೇಶಮೂರ್ತಿ, ಪ್ರಫುಲ್ಲಚಂದ್ರ ರಂತಹವರ ಬದುಕು ರೈತರಿಗೆ ಆದರ್ಶನಿಯವಾಗಿದೆ, ಪರಿಶ್ರಮಕ್ಕೆ ಮತ್ತೊಂದು ಹೆಸರು ಎನ್ನುವಂತೆ ಅವರಿದ್ದಾರೆ ಅವರ ಕುರಿತು ಸಾರ್ವಜನಿಕವಾಗಿ ಮಾಹಿತಿ ನೀಡುವ ಪ್ರಯತ್ನಗಳು ಆಗಬೇಕಾಗಿದೆ ಎಂದರಲ್ಲದೇ ಮಾದ್ಯಮಗಳು ಇಂತಹ ಕಾರ್ಯಕ್ರಮಕ್ಕೆ ಆದ್ಯತೆ ನೀಡಿ ಪ್ರಚುರಪಡಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ದೇವಂಗಿ ಪ್ರಫುಲ್ಲ ಚಂದ್ರ, ಭಗವಾನ್ ಮತ್ತಿತರರಿಗೆ ಶಾಲು ಹೊದೆಸಿ ಸನ್ಮಾನ ಮಾಡಲಾಯಿತು.ಸನ್ಮಾನಿತರ ಮಾಹಿತಿಯನ್ನು ವಕೀಲ ಜಯಪ್ಪ ನೀಡಿದರು, ದೊಡ್ಡಮಗ್ಗೆ ರಾಜೆಂದ್ರ ಸ್ವಾಗತಿಸಿ ವಕೀಲ ಮಂಜುನಾಥ್ ವಂದಿಸಿದರು.

ಕಾಮೆಂಟ್‌ಗಳಿಲ್ಲ: