ಭಾನುವಾರ, ನವೆಂಬರ್ 8, 2009

ಯೋಗರಾಜ್ ಭಟ್ಟರ ಹೊಸ ಸಾಹಸಕ್ಕೆ ದಿಗಂತ್-ಪುನೀತ್

ಹೌದು. ಮುಂಗಾರು ಮಳೆಯಿಂದ ಹಿಡಿದು ಮೊನ್ನೆ ಮೊನ್ನೆಯ ಮನಸಾರೆವರೆಗೆ ಯೋಗರಾಜ ಭಟ್ಟರು ತನ್ನ ಚಿತ್ರಗಳಲ್ಲಿ ಭಡ್ತಿ ನೀಡುತ್ತಲೇ ಬಂದ ನಟನೆಂದರೆ ಅದು ದಿಗಂತ್ ಮಾತ್ರ. ಮುಂಗಾರು ಮಳೆಯ ಪುಟ್ಟ ಪಾತ್ರ, ಗಾಳಿಪಟದಲ್ಲಿ ಮೂವರು ನಾಯಕರಲ್ಲಿ ಮತ್ತೊಬ್ಬನಾಗಿ, ನಂತರ ಮನಸಾರೆಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಂಗೊಳಿಸಿದ್ದು ದಿಗಂತ್ ಜೀವನದಲ್ಲಿ ನಿಜಕ್ಕೂ ಅದ್ಭುತ ಮೆಟ್ಟಿಲುಗಳೇ ಸರಿ. ಈಗ ಭಟ್ಟರು ಅದೇ ದಿಗಂತ್ ಜೊತೆಗೆ ಮತ್ತೆ ಇನ್ನೊಂದು ಚಿತ್ರವನ್ನೂ ಆರಂಭಿಸಲು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದ್ದಾರೆ.ಭಟ್ಟರದೇ ಪ್ರೊಡಕ್ಷನ್: ಹೌದು. ಯೋಗರಾಜ ಭಟ್ಟರು ದಿಗಂತರನ್ನು ಬಿಟ್ಟಿಲ್ಲ. ಡಿಸೆಂಬರ್‌ನಲ್ಲಿ ತಮ್ಮದೇ ಬ್ಯಾನರ್‌ನ ನಿರ್ಮಾಣವನ್ನು ಆರಂಭಿಸಲು ಭಟ್ಟರು ತಯಾರಿ ನಡೆಸುತ್ತಿದ್ದಾರೆ. ''ಕೆಲವು ಸಿನಿಮಾ ನಿರ್ಮಾಪಕರು ಈಗೀಗ ನನ್ನ ಬಳಿ ಬಂದು ದೊಡ್ಡ ಬಜೆಟ್ ಹೂಡಿ ಅದ್ದೂರಿ ಚಿತ್ರ ತೆಗೆಯಲು ರೆಡಿ ಇದ್ದಾರೆ. ನಾನು ಅವರ ಆಫರನ್ನು ಇನ್ನೂ ಒಪ್ಪಿಕೊಳ್ಳುವ ನಿರ್ಧಾರ ಮಾಡಿಲ್ಲ. ಮಾಡಿದರೂ ಮಾಡಿಯೇನು. ಆ ಬಗ್ಗೆ ಇನ್ನೂ ಯೋಚಿಸಿಲ್ಲ. ಆದರೆ ಇದರ ಜೊತೆಗೆ ನನ್ನದೊಂದು ಯೋಚನೆಯೂ ಇದೆ. ಬ್ಯಾಂಕ್‌ನಿಂದ ಸಾಲ ಮಾಡಿ ನನ್ನದೇ ಒಂದು ಪ್ರೊಡಕ್ಷನ್ ಹೌಸ್ ನಿರ್ಮಿಸಿ ದಿಗಂತ್ ಹಾಕಿಕೊಂಡು ಸಿನಿಮಾ ಮಾಡಬೇಕೆಂದಿದ್ದೇನೆ. ಇನ್ನೊಂದೆರಡು ವಾರಗಳಲ್ಲಿ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುತ್ತೇನೆ'' ಅಂತಾರೆ ಯೋಗರಾಜ್ ಭಟ್.ಹಾಗಾದರೆ ಪುನೀತ್ ಹಾಕಿಕೊಂಡು ಮಾಡುವ ಚಿತ್ರದ ಕಥೆಯೇನಾಯಿತು ಎಂದರೆ, ''ಅದೂ ಇದೆ. ಅದಕ್ಕಿನ್ನೂ ಹೆಸರಿಟ್ಟಿಲ್ಲ. ಪೂರ್ತಿ ಸಂಗೀತಮಯ ಚಿತ್ರವದು. ಸಿಕ್ಕಾಪಟ್ಟೆ ಕನಸನ್ನಿಟ್ಟುಕೊಂಡು, ತುಂಬಾ ಕಷ್ಟಪಟ್ಟು ಆ ಚಿತ್ರಕಥೆ ಬರೆದಿಟ್ಟಿದ್ದೇನೆ'' ಎನ್ನುತ್ತಾರೆ ಭಟ್ಟರು

ಗಣೇಶ್ ಈಸ್ ಗ್ರೇಟ್ ಆಕ್ಟರ್: ಮನಸಾರೆ ಚಿತ್ರದಲ್ಲಿ ದಿಗಂತ್ ಪಾತ್ರವನ್ನು ಗಣೇಶ್ ಪಾತ್ರಕ್ಕೆ ಎಲ್ಲರೂ ಹೋಲಿಸುತ್ತಿದ್ದಾರಲ್ಲಾ? ಎಂದರೆ, ''ಗಣೇಶ್ ಒಬ್ಬ ಗ್ರೇಟ್ ನಟ. ದಿಗಂತ್ ಕೂಡಾ ಉತ್ತಮ ನಟನೇ. ಇಬ್ಬರಿಗೂ ಅವರದ್ದೇ ಆದ ನಟನಾ ತಾಕತ್ತಿದೆ, ಪ್ರತಿಭೆಯಿದೆ. ಇವರಿಬ್ಬರನ್ನೂ ಹೋಲಿಸುವುದು ಸ್ವಾಭಾವಿಕ, ಯಾಕೆಂದರೆ ಇಬ್ಬರೂ ಒಂದೇ ನಿರ್ದೇಶಕನ ಜೊತೆಗೆ ಕೆಲಸ ಮಾಡಿದವರಲ್ಲವೇ'' ಎನ್ನುತ್ತಾರೆ ಭಟ್.ಹಾಗಾದರೆ ಈ ಬಾರಿ ಮನಸಾರೆ ಮೂಲಕ ಗಣೇಶ್ ಅವರನ್ನು ಈ ಬಾರಿ ಮಿಸ್ ಮಾಡಿಕೊಂಡಂತೆ ಅನಿಸುತ್ತಿಲ್ಲವಾ? ಎಂದರೆ ಅದಕ್ಕೂ ಯೋಗರಾಜ್ ಭಟ್ ಬಳಿ ಸಿದ್ಧ ಉತ್ತರವಿದೆ. ''ಚಿತ್ರಕಥೆ ಬರೆದು ಗಣೇಶ್ ಜೊತೆಗೆ ಚಿತ್ರಕ್ಕೆ ತಯಾರಿ ಮಾಡೋದೇ ಒಂಥರಾ ಖುಷಿ, ಮಜಾ. ಆದರೂ ಮನಸಾರೆ ಚಿತ್ರಕ್ಕೆ ನನ್ನ ಆಯ್ಕೆ ದಿಗಂತ್ ಆಗಿದ್ದರು. ಗಣೇಶ್ ಅಲ್ಲ. ಹಾಗಾಗಿ ನಾನು ಗಣೇಶ್ ಅವರನ್ನು ಮಿಸ್ ಮಾಡಿಕೊಂಡೆ ಅನಿಸಿಲ್ಲ. ಆದರೆ ಮನಸಾರೆಯ ಯಶಸ್ಸು ಮುಂಗಾರು ಮಳೆಯ ಪರ್ವಕಾಲದಿಂದ ನನಗೆ ಮುಕ್ತಿ ಕರುಣಿಸಿದೆ. ಮನಸಾರೆಯನ್ನು ಗಣೇಶ್ ಜೊತೆಗೆ ಕೂತು ವೀಕ್ಷಿಸಬೇಕು ಹಾಗೂ ಆತನ ಮುಖದಲ್ಲಿ ಪ್ರತಿಕ್ರಿಯೆಯನ್ನು ನೋಡಬೇಕು ಎಂಬ ಆಸೆಯಿದೆ. ಗಣೇಶ್‌ನನ್ನು ನಾನು ತುಂಬ ಗೌರವಿಸುತ್ತೇನೆ'' .
ಮನಸಾರೆಯಿಂದ ಯದ್ವಾತದ್ವಾ ಖುಷಿ: ಮನಸಾರೆಗೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ಕಂಡು ಸ್ವತಃ ಯೋಗರಾಜ ಭಟ್ಟರು ಥ್ರಿಲ್ಲಾಗಿದ್ದಾರಂತೆ. ''ಕರ್ನಾಟಕದೆಲ್ಲೆಡೆ ಐಂದ್ರಿತಾ, ದಿಗಂತ್ ಹಾಗು ಇತರ ನಟರ ಜೊತೆಗೆ ಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ಆಶ್ಚರ್ಯವಾಯಿತು. ನಾನೇ ಸ್ವತಃ ಇಂಥ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ'' ಎನ್ನುತ್ತಾರೆ.''ಮುಂಗಾರು ಮಳೆಯ ನಂತರ ಬಹಳಷ್ಟು ಮಂದಿ ತಾವೂ ತಮ್ಮ ಸಿನಿಮಾದಲ್ಲಿ ಮುಂಗಾರು ಮಳೆಯಂತೆಯೇ ಮಾಡಹೊರಟರು. ನನ್ನ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಮಾತಾಡಿಕೊಂಡರು. ಆದರೆ ಜನರು ನನ್ನ ಕೈಬಿಡಲಿಲ್ಲ. ನನ್ನ ಸಿನಿಮಾಗಳ ಬಗ್ಗೆ ಜನರು ಒಂದು ನಂಬಿಕೆಯಿಟ್ಟುಕೊಂಡಿದ್ದಾರೆ. ಮನಸಾರೆಯ ಈ ಯಶಸ್ಸು ಹಲವು ಮಂದಿಯ ಬಾಯಿಗೆ ಬೀಗ ಜಡಿದಂತಾಗಿದೆ'' ಎಂದು ಯೋಗರಾಜ ಭಟ್ಟರು ಹೇಳುತ್ತಾರೆ.

ಕಾಮೆಂಟ್‌ಗಳಿಲ್ಲ: