ಸೋಮವಾರ, ಜುಲೈ 26, 2010

ಮಲ್ಲಿಪಟ್ಟಣ: ರೋಗಪೀಡಿತರಿಗೆ ಸಾಂತ್ವನ ಹೇಳಿದ ಜಿ.ಪಂ. ಅಧ್ಯಕ್ಷೆ

ಅರಕಲಗೂಡು: ವಾಂತಿಭೇಧಿ ಶುರುವಾಗಿ 3ವಾರಗಳು ಕಳೆದರೂ ಆರೋಗ್ಯ ಇಲಾಖೆ ನಿಖರವಾಗಿ ರೋಗವನ್ನೇ ಪತ್ತೆ ಹಚ್ಚದೇ ಸಾಮಾನ್ಯ ಚಿಕಿತ್ಸೆ ಮುಂದುವರೆಸಿದ ಪರಿಣಾಮ ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಕಳೆದ ಭಾನುವಾರ ಓರ್ವ ಮೃತಪಟ್ಟು ಇನ್ನು ಮುವ್ವರು ಚಿಂತಾಜನಕ ಸ್ಥಿತಿಯಲ್ಲಿ ಸಾವಿನ ದಿನ ಎಣಿಸುತ್ತಿರುವ ಘಟನೆ ನಡೆದಿದೆ.
ಮಲ್ಲಿಪಟ್ಟಣ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿದ 50ಕ್ಕೂ ಹೆಚ್ಚು ಮಂದಿ ಕಳೆದ 25ದಿನಗಳಿಂದ ಅರಕಲಗೂಡು ಮತ್ತು ಹಾಸನದ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಸಧ್ಯ ಈಗ ಗ್ರಾಮದಲ್ಲಿ 34ಮಂದಿ ಮಾತ್ರ ರೋಗ ಪೀಡಿತರಿದ್ದಾರೆ. ಈ ಮದ್ಯೆ ರಕ್ತಪರೀಕ್ಷೆಗೆ ಕಳುಹಿಸಲಾಗಿದ್ದ ಓರ್ವ ರೋಗಿಯ ಸ್ಯಾಂಪಲ್ ನಲ್ಲಿ ಕಾಲರ ಸೋಂಕು ತಗುಲಿದ್ದು ಸ್ಪಷ್ಟವಾಗಿತ್ತು. ಆದರೆ ಭಾನುವಾರ ಮೃತನಾದ ಚನ್ನಯ್ಯ ಎಂಬಾತ ವಾಂತಿ ಭೇದಿಗೆ ಚಿಕಿತ್ಸೆ ಪಡೆದ ನಂತರವೂ ಮನೆಯಲ್ಲಿ ಸೂಕ್ತ ಆರೈಕೆ ದೊರೆಯದೇ ಹೈಪೋಗ್ಲೈಸೀಮಿಯಾದಿಂದ ಅಂದರೆ ಹಸಿವಿನಿಂದ ಮೃತಪಟ್ಟನೆಂದು ಸ್ಥಳೀಯ ವೈದ್ಯರೊಬ್ಬರು ಹೇಳುತ್ತಾರೆ. ಇಂದು ರೋಗಪೀಡಿತರಿಗೆ ಸಾಂತ್ವನ ಹೇಳಲು ಸ್ಥಳಕ್ಕೆ ಭೇಟಿ ನೀಡಿದ್ದ ಜಿ.ಪಂ. ಅಧ್ಯಕ್ಷೆ-ಉಪಾಧ್ಯಕ್ಷರ ತಂಡದೊಂದಿಗೆ ಆಗಮಿಸಿದ್ದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರಿಕೆ ಈ ಕುರಿತು ಪ್ರಶ್ನಿಸಿತು. ಕುಡಿಯುವ ನೀರು ಕಲುಷಿತಗೊಂಡಿದ್ದರಿಂದ ವಾಂತಿಭೇಧಿ ಉಂಟಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಪರಿಣಾಮ ಓರ್ವ ರೋಗಿಯ ಸ್ಯಾಂಪಲ್ ನಿಂದ ಕಾಲರ ಎಂದು ತಿಳಿದಿದೆ ಆದರೆ ತಾಲ್ಲೂಕು ವೈದ್ಯಾಧಿಕಾರಿ ಡಾ|| ನಾಗಲಕ್ಷ್ಮಿ ಇದು ಕಾಲರ ಅಲ್ಲ ಎನ್ನುತ್ತಾರೆ ಹಾಗಾದರೆ ಸತತವಾಗಿ ಜನರನ್ನು ಕಾಡುತ್ತಿರುವ ಈ ರೋಗ ಯಾವುದು? ಕಾಯಿಲೆಯನ್ನೇ ತಿಳಿಯದೇ ಏನು ಚಿಕಿತ್ಸೆ ನೀಡು್ತ್ತೀರಿ? ಎಂದರೆ ಆ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯರು ಉತ್ತರಿಸಬೇಕು ನಮಗೆ ವೈದ್ಯಕೀಯ ವರದಿ ತಲುಪಿಲ್ಲ ಎಂದರು. ವೈದ್ಯಕೀಯ ವರದಿ ಬರಲು ಎಷ್ಟು ದಿನಬೇಕು ? ಜನ ಸತ್ತಮೇಲೆ ವೈದ್ಯಕೀಯ ವರದಿ ತೆಗೆದುಕೊಂಡು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ನಿರುತ್ತರರಾದರು. ಸ್ಥಳದಲ್ಲಿ ಹಾಜರಿದ್ದ ಹಿರಿಯ ವೈದ್ಯಕೀಯ ಪರಿವೀಕ್ಷಕ ಭದ್ರಯ್ಯ, ಡಾ|| ಶಿವೇಗೌಡ ಮತ್ತು ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್ ಕೂಡ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದಾದರು. ಆಗ ಮಧ್ಯ ಪ್ರವೇಶಿಸಿದ ಜಿ.ಪಂ. ಉಪಾಧ್ಯಕ್ಷ ದ್ಯಾವೇಗೌಡ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ವೈದ್ಯರ ತಂಡವನ್ನು ಇಲ್ಲಿಗೆ ಕರೆತರಲಾಗಿದೆ, ನಿಮ್ಮ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಚವಾಗಿಡಲು ಸಹಕರಿಸಿ ಎಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೀಲಪ್ಪ, ತಾ.ಪಂ. ಅಧ್ಯಕ್ಷ ಮಾದೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದು ರೋಗಪೀಡಿತರಿಗೆ ಸಾಂತ್ವನ ಹೇಳಿದರು.
ಹಸಿವು ಕಾರಣವೇ?: ಭಾನುವಾರ ಮೃತಪಟ್ಟ ಚನ್ನಯ್ಯ(42) ಎಂಬಾತನು ವಾಂತಿಭೇಧಿಗೆ ಚಿಕಿತ್ಸೆ ಬಂದು ಊರಿಗೆ ಮರಳಿದ್ದ ಆದರೆ ಅವನನ್ನು ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಆಹಾರದ ಕೊರತೆಯಿಂದ ಭಾನುವಾರ ತೀರಿಕೊಂಡ ಎನ್ನಲಾಗಿದೆ. ಗ್ರಾಮದ ಜನತೆ 25ದಿನಗಳಿಂದ ರೋಗ ಪೀಡಿತರಾಗಿ ನರಳುತ್ತಿದ್ದಾರೆ ಹೀಗಿರುವಾಗ ಅಲ್ಲಿ ಆರೋಗ್ಯ ಸಹಾಯಕರು, ಪರಿಶೀಲಕರು, ಅಂಗನವಾಡಿಯವರು, ವೈದ್ಯರು, ಗ್ರಾಮ ಪಂಚಾಯಿತಿಯವರು ಆಸ್ಥೆ ವಹಿಸುತ್ತಾರಲ್ಲವೇ? ಹಾಗಿದ್ದರೂ ಶುಶ್ರೂಷೆ ಸಿಗದೆ ಹಸಿವಿನಿಂದ ಚನ್ನಯ್ಯ ಮೃತಪಟ್ಟಿದ್ದಾನೆ ಎನ್ನುವುದಾದರೆ ಅದಕ್ಕೆ ತಾಲ್ಲೂಕು ಆಡಳಿತ ಹೊಣೆಯಲ್ಲವೇ? ಈ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಬೇಕು.
ಎಲ್ಲಿದೆ ಸಮರೋಪಾದಿಯ ಸೇವೆ?: ಕಳೆದ ವಾರ ರೋಗ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಆಗಮಿಸಿದ್ದ ಡಿಎಚ್ ಓ ಡಾ|| ಭೀಷ್ಮಾಚಾರ್ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೆರವಿನೊಂದಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆ ಸರ್ವೆ ಮಾಡಿಸಿ ರೋಗ ಪೀಡಿತರಿಗೆ ಚಿಕಿತ್ಸೆ ನೀಡಲಾಗುವುದು ಎಂದಿದ್ದರು. ಆದರೆ ವಾರ ಕಳೆದರೂ ಕಳ್ಳಿಮುದ್ದನಹಳ್ಳಿ ಮತ್ತು ಆನಂದೂರು ಗಳಲ್ಲಿ ಓರ್ವ ವೈದ್ಯರ ಸೇವೆ ಬಿಟ್ಟರೆ ಸರ್ವೆಯೂ ಇಲ್ಲ ಜಾಗೃತಿಯೂ ಆಗಿಲ್ಲ ಪರಿಣಾಂ ರೋಗ ಕೈ ಮೀರಿ ಹೋಗುತ್ತಿದೆ.ತಾಲೂಕಿನ ಮುದ್ದನಹಳ್ಳಿಯಲ್ಲಿ ಡೆಂಗ್ಯೂ, ಕಳ್ಳಿಮುದ್ದನಹಳ್ಳಿಯಲ್ಲಿ ಚಿಕನ್ ಗುನ್ಯಾ, ಮಲ್ಲಿಪಟ್ಟಣದಲ್ಲಿ ಕಾಲರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಶುಚಿತ್ವಕ್ಕೆಂದೆ ಸ್ವಚ್ಚಗ್ರಾಮ ಯೋಜನೆಯಿದೆ, ಆರೋಗ್ಯ ಇಲಾಖೆಯ ರಾಷ್ಟ್ರೀಯ ಗ್ರಾಮೀನ ಆರೋಗ್ಯ ಸಮಿತಿಯಿದೆ ಇವು ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತೂಕಡಿಸುತ್ತಿದ್ದಾರೋ ಏನೋ ಗೊತ್ತಿಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಷ್ಟೆ.

ಕಾಮೆಂಟ್‌ಗಳಿಲ್ಲ: