ಸೋಮವಾರ, ಜುಲೈ 19, 2010

ಸಾಂಕ್ರಾಮಿಕ ರೋಗ ಪೀಡಿತ ಗ್ರಾಮಗಳಿಗೆ ಜಿ.ಪಂ ಅಧ್ಯಕ್ಷೆ ಭೇಟಿ

ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿಕನ್ ಗುನ್ಯಾ, ಹಾಗೂ ಜ್ವರದಿಂದ ಬಳಲುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಮಾಕ್ಷಿ ರಾಜು ಹಾಗೂ ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ ಸ್ವಾಮಿಗೌಡ ನಿನ್ನೆ ಚಿಕ್ಕ ಅರಕಲಗೂಡು, ಕಳ್ಳಿಮುದ್ದನಹಳ್ಳಿ, ಆನಂದೂರು ಮತ್ತು ಮಲ್ಲಿಪಟ್ಟಣ ಗ್ರಾಮಗಳಿಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳಿದ್ದರಲ್ಲದೇ ತತ್ ಕ್ಷಣದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಇಂದು ಕೂಡ ಜಿ.ಪಂ ಅಧ್ಯಕ್ಷರೊಂದಿಗೆ ಕಳ್ಳಿಮುದ್ದನಹಳ್ಳಿ ಗ್ರಾಮಕ್ಕೆ ತೆರಳಿ ರೋಗ ಪೀಡಿತರನ್ನು ಸಂತೈಸಿದರಲ್ಲದೇ ಗ್ರಾಮದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಗೆ ವ್ಯವಸ್ಥೆ ಮಾಡಿದ್ದರು. ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನರಿತ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು ಇನ್ನು ಇಬ್ಬರು ವೈದ್ಯರು ಹಾಗೂ ದಾದಿಯರನ್ನು ವೈದ್ಯಕೀಯ ಸೇವೆಗೆ ನಿಯೋಜಿಸಲಾಗುವುದು, ಗ್ರಾಮದ ನೈರ್ಮಲ್ಯೀಕರಣಕ್ಕಾಗಿ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಸೂಚಿಸಲಾಗುವುದು ಎಂದರು. ಇದೇ ಸಂಧರ್ಭದಲ್ಲಿ ಹಾಜರಿದ್ದ ಡಿಎಚ್ ಓ ಬೀಷ್ಮಾಚಾರಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಗಳ ಸಮೀಕ್ಷೆಗಾಗಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು, ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಸಮರೋಪಾದಿಯ ವೈದ್ಯಕೀಯ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದರು. ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ದೇವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಸಧ್ಯಕ್ಕೆ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ನೂತನ ಆಡಳಿತಾಧಿಕಾರಿಯಾಗಿ ಡಾ|| ಶೀತಲ್ ಕುಮಾರ್ ನೇಮಕವಾಗಿದೆ, ತಾಲ್ಲೂಕು ವೈದ್ಯಾಧಿಕಾರಿಯಾಗಿ ಡಾ ನಾಗಲಕ್ಷ್ಮಿ ಯವರನ್ನು ವರ್ಗಾಯಿಸಲಾಗಿದೆ. ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿ ಸಕಲ ವ್ಯವಸ್ಥೆಗಳು ಸುದಾರಿಸಲಿದೆ ಎಂದರು. ಇದೇ ಸಂಧರ್ಭ ಮಾತನಾಡಿದ ತಾ ಪಂ ಅಧ್ಯಕ್ಷ ಮಾದೇಶ್ ಶೀಶುಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳ ಸಭೆ ಕರೆದು ಪರಿಸ್ಥಿತಿ ಸುದಾರಣೆಗೆ ಯತ್ನಿಸಲಾಗುವುದು ಎಂದರು.

ಕಾಮೆಂಟ್‌ಗಳಿಲ್ಲ: