ಶನಿವಾರ, ಜುಲೈ 31, 2010

ವಿದ್ಯುತ್ ಸ್ಪರ್ಶ ಹಸುಗಳ ಸಾವು

ಅರಕಲಗೂಡು: ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಒಂದು ಹಸು ಮತ್ತು ಒಂದು ಹೋರಿ ಮೃತಪಟ್ಟ ಘಟನೆ ತಾಲೂಕಿನ ಮರವಳಲು ಗ್ರಾಮದಲ್ಲಿ ನಡೆದಿದೆ. ನಿನ್ನೆ ಚಂದ್ರ ಎಂಬುವವರಿಗೆ ಸೇರಿದ ಜಾನುವಾರುಗಳು ಅವರ ಮನೆಯ ಬಳಿ ಮೇಯುತ್ತಿದ್ದವು ಆ ವಿದ್ಯುತ್ ತಂತಿಯೊಂದು ತುಂಡಾಗಿ ಅವುಗಳ ಮೇಲೆ ಬಿದ್ದುದರಿಂದ ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟವು. ಮತ್ತೊಂದು ಪ್ರಕರಣದಲ್ಲಿ ಕತ್ತಿಮಲ್ಲೆನಹಳ್ಳಿಯಲ್ಲಿ ಗೋಡೆ ಕುಸಿತದಿಂದ ಹಸುವಿನ ಕೊಂಬುಗಳು ಹಾಗು ಕಾಲು ಮುರಿದಿದೆ. ಸ್ಥಳಕ್ಕೆ ಕಂದಾಯ-ಪಶು ಮತ್ತು ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದಾರೆ.

ಅರಕಲಗೂಡು: ಪರಿಶಿಷ್ಟವರ್ಗದ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸದಿದುದರಿಂದ ಖಾಲಿ ಉಳಿದಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಹೆಬ್ಬಾಲೆ ಗ್ರಾ.ಪಂ. ನಲ್ಲಿ ಇಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಶೈಲಜಾ ತಿಳಿಸಿದ್ದಾರೆ. ಹೆಬ್ಬಾಲೆ ಪ.ವ. ಮೀಸಲು ಸ್ಥಾನಕ್ಕೆ ಆಶಾ ಮತ್ತು ಶೈಲ 1ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆಯುವುದು. ಯಲಗತವಳ್ಳಿ ಗ್ರಾ.ಪಂ. ನಲ್ಲಿ ಇಂದು ನಡೆದ ಅಧ್ಯಕ್ಷ-ುಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಯಶೋಧಮ್ಮ ಆಯ್ಕೆಯಾಗಿದ್ದಾರೆ. ಚುನಾವಣೆ ಬಹಿಷ್ಕರಿಸಿದ್ದ ವಡ್ವಾನ ಹೊಸಹಳ್ಳಿಯಲ್ಲಿ ಪರಿಶಿಷ್ಠ ಜಾತಿಯ ಪದ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಳೆ ವಿವರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಅರಕಲಗೂಡಿನಲ್ಲಿ ಶನಿವಾರ ಬೆಳಿಗ್ಗೆಯವರೆಗೆ 10.2ಮಿಲಿಮೀ. ಮಲ್ಲಿಪಟ್ಟಣದಲ್ಲಿ 8.0ಮಿಮಿ. ದೊಡ್ಡಮಗ್ಗೆಯಲ್ಲಿ 13.4ಮಿಮಿ, ಬಸವಾಪಟ್ಟಣದಲ್ಲಿ 20.00ಮಿಮಿ ಕೊಣನೂರಿನಲ್ಲಿ 7.2ಮಿಮಿ, ರಾಮನಾಥಪುರದಲ್ಲಿ 6.6ಮಿಮಿ, ದೊಡ್ಡಬೆಮ್ಮತ್ತಿಯಲ್ಲಿ 18.2ಮಿಮಿ ಮಳೆಯಾಗಿದೆ.

ಸೋಮವಾರ, ಜುಲೈ 26, 2010

ಮಲ್ಲಿಪಟ್ಟಣ: ರೋಗಪೀಡಿತರಿಗೆ ಸಾಂತ್ವನ ಹೇಳಿದ ಜಿ.ಪಂ. ಅಧ್ಯಕ್ಷೆ

ಅರಕಲಗೂಡು: ವಾಂತಿಭೇಧಿ ಶುರುವಾಗಿ 3ವಾರಗಳು ಕಳೆದರೂ ಆರೋಗ್ಯ ಇಲಾಖೆ ನಿಖರವಾಗಿ ರೋಗವನ್ನೇ ಪತ್ತೆ ಹಚ್ಚದೇ ಸಾಮಾನ್ಯ ಚಿಕಿತ್ಸೆ ಮುಂದುವರೆಸಿದ ಪರಿಣಾಮ ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಕಳೆದ ಭಾನುವಾರ ಓರ್ವ ಮೃತಪಟ್ಟು ಇನ್ನು ಮುವ್ವರು ಚಿಂತಾಜನಕ ಸ್ಥಿತಿಯಲ್ಲಿ ಸಾವಿನ ದಿನ ಎಣಿಸುತ್ತಿರುವ ಘಟನೆ ನಡೆದಿದೆ.
ಮಲ್ಲಿಪಟ್ಟಣ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿದ 50ಕ್ಕೂ ಹೆಚ್ಚು ಮಂದಿ ಕಳೆದ 25ದಿನಗಳಿಂದ ಅರಕಲಗೂಡು ಮತ್ತು ಹಾಸನದ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಸಧ್ಯ ಈಗ ಗ್ರಾಮದಲ್ಲಿ 34ಮಂದಿ ಮಾತ್ರ ರೋಗ ಪೀಡಿತರಿದ್ದಾರೆ. ಈ ಮದ್ಯೆ ರಕ್ತಪರೀಕ್ಷೆಗೆ ಕಳುಹಿಸಲಾಗಿದ್ದ ಓರ್ವ ರೋಗಿಯ ಸ್ಯಾಂಪಲ್ ನಲ್ಲಿ ಕಾಲರ ಸೋಂಕು ತಗುಲಿದ್ದು ಸ್ಪಷ್ಟವಾಗಿತ್ತು. ಆದರೆ ಭಾನುವಾರ ಮೃತನಾದ ಚನ್ನಯ್ಯ ಎಂಬಾತ ವಾಂತಿ ಭೇದಿಗೆ ಚಿಕಿತ್ಸೆ ಪಡೆದ ನಂತರವೂ ಮನೆಯಲ್ಲಿ ಸೂಕ್ತ ಆರೈಕೆ ದೊರೆಯದೇ ಹೈಪೋಗ್ಲೈಸೀಮಿಯಾದಿಂದ ಅಂದರೆ ಹಸಿವಿನಿಂದ ಮೃತಪಟ್ಟನೆಂದು ಸ್ಥಳೀಯ ವೈದ್ಯರೊಬ್ಬರು ಹೇಳುತ್ತಾರೆ. ಇಂದು ರೋಗಪೀಡಿತರಿಗೆ ಸಾಂತ್ವನ ಹೇಳಲು ಸ್ಥಳಕ್ಕೆ ಭೇಟಿ ನೀಡಿದ್ದ ಜಿ.ಪಂ. ಅಧ್ಯಕ್ಷೆ-ಉಪಾಧ್ಯಕ್ಷರ ತಂಡದೊಂದಿಗೆ ಆಗಮಿಸಿದ್ದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರಿಕೆ ಈ ಕುರಿತು ಪ್ರಶ್ನಿಸಿತು. ಕುಡಿಯುವ ನೀರು ಕಲುಷಿತಗೊಂಡಿದ್ದರಿಂದ ವಾಂತಿಭೇಧಿ ಉಂಟಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಪರಿಣಾಮ ಓರ್ವ ರೋಗಿಯ ಸ್ಯಾಂಪಲ್ ನಿಂದ ಕಾಲರ ಎಂದು ತಿಳಿದಿದೆ ಆದರೆ ತಾಲ್ಲೂಕು ವೈದ್ಯಾಧಿಕಾರಿ ಡಾ|| ನಾಗಲಕ್ಷ್ಮಿ ಇದು ಕಾಲರ ಅಲ್ಲ ಎನ್ನುತ್ತಾರೆ ಹಾಗಾದರೆ ಸತತವಾಗಿ ಜನರನ್ನು ಕಾಡುತ್ತಿರುವ ಈ ರೋಗ ಯಾವುದು? ಕಾಯಿಲೆಯನ್ನೇ ತಿಳಿಯದೇ ಏನು ಚಿಕಿತ್ಸೆ ನೀಡು್ತ್ತೀರಿ? ಎಂದರೆ ಆ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯರು ಉತ್ತರಿಸಬೇಕು ನಮಗೆ ವೈದ್ಯಕೀಯ ವರದಿ ತಲುಪಿಲ್ಲ ಎಂದರು. ವೈದ್ಯಕೀಯ ವರದಿ ಬರಲು ಎಷ್ಟು ದಿನಬೇಕು ? ಜನ ಸತ್ತಮೇಲೆ ವೈದ್ಯಕೀಯ ವರದಿ ತೆಗೆದುಕೊಂಡು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ನಿರುತ್ತರರಾದರು. ಸ್ಥಳದಲ್ಲಿ ಹಾಜರಿದ್ದ ಹಿರಿಯ ವೈದ್ಯಕೀಯ ಪರಿವೀಕ್ಷಕ ಭದ್ರಯ್ಯ, ಡಾ|| ಶಿವೇಗೌಡ ಮತ್ತು ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್ ಕೂಡ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದಾದರು. ಆಗ ಮಧ್ಯ ಪ್ರವೇಶಿಸಿದ ಜಿ.ಪಂ. ಉಪಾಧ್ಯಕ್ಷ ದ್ಯಾವೇಗೌಡ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ವೈದ್ಯರ ತಂಡವನ್ನು ಇಲ್ಲಿಗೆ ಕರೆತರಲಾಗಿದೆ, ನಿಮ್ಮ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಚವಾಗಿಡಲು ಸಹಕರಿಸಿ ಎಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೀಲಪ್ಪ, ತಾ.ಪಂ. ಅಧ್ಯಕ್ಷ ಮಾದೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದು ರೋಗಪೀಡಿತರಿಗೆ ಸಾಂತ್ವನ ಹೇಳಿದರು.
ಹಸಿವು ಕಾರಣವೇ?: ಭಾನುವಾರ ಮೃತಪಟ್ಟ ಚನ್ನಯ್ಯ(42) ಎಂಬಾತನು ವಾಂತಿಭೇಧಿಗೆ ಚಿಕಿತ್ಸೆ ಬಂದು ಊರಿಗೆ ಮರಳಿದ್ದ ಆದರೆ ಅವನನ್ನು ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಆಹಾರದ ಕೊರತೆಯಿಂದ ಭಾನುವಾರ ತೀರಿಕೊಂಡ ಎನ್ನಲಾಗಿದೆ. ಗ್ರಾಮದ ಜನತೆ 25ದಿನಗಳಿಂದ ರೋಗ ಪೀಡಿತರಾಗಿ ನರಳುತ್ತಿದ್ದಾರೆ ಹೀಗಿರುವಾಗ ಅಲ್ಲಿ ಆರೋಗ್ಯ ಸಹಾಯಕರು, ಪರಿಶೀಲಕರು, ಅಂಗನವಾಡಿಯವರು, ವೈದ್ಯರು, ಗ್ರಾಮ ಪಂಚಾಯಿತಿಯವರು ಆಸ್ಥೆ ವಹಿಸುತ್ತಾರಲ್ಲವೇ? ಹಾಗಿದ್ದರೂ ಶುಶ್ರೂಷೆ ಸಿಗದೆ ಹಸಿವಿನಿಂದ ಚನ್ನಯ್ಯ ಮೃತಪಟ್ಟಿದ್ದಾನೆ ಎನ್ನುವುದಾದರೆ ಅದಕ್ಕೆ ತಾಲ್ಲೂಕು ಆಡಳಿತ ಹೊಣೆಯಲ್ಲವೇ? ಈ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಬೇಕು.
ಎಲ್ಲಿದೆ ಸಮರೋಪಾದಿಯ ಸೇವೆ?: ಕಳೆದ ವಾರ ರೋಗ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಆಗಮಿಸಿದ್ದ ಡಿಎಚ್ ಓ ಡಾ|| ಭೀಷ್ಮಾಚಾರ್ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೆರವಿನೊಂದಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆ ಸರ್ವೆ ಮಾಡಿಸಿ ರೋಗ ಪೀಡಿತರಿಗೆ ಚಿಕಿತ್ಸೆ ನೀಡಲಾಗುವುದು ಎಂದಿದ್ದರು. ಆದರೆ ವಾರ ಕಳೆದರೂ ಕಳ್ಳಿಮುದ್ದನಹಳ್ಳಿ ಮತ್ತು ಆನಂದೂರು ಗಳಲ್ಲಿ ಓರ್ವ ವೈದ್ಯರ ಸೇವೆ ಬಿಟ್ಟರೆ ಸರ್ವೆಯೂ ಇಲ್ಲ ಜಾಗೃತಿಯೂ ಆಗಿಲ್ಲ ಪರಿಣಾಂ ರೋಗ ಕೈ ಮೀರಿ ಹೋಗುತ್ತಿದೆ.ತಾಲೂಕಿನ ಮುದ್ದನಹಳ್ಳಿಯಲ್ಲಿ ಡೆಂಗ್ಯೂ, ಕಳ್ಳಿಮುದ್ದನಹಳ್ಳಿಯಲ್ಲಿ ಚಿಕನ್ ಗುನ್ಯಾ, ಮಲ್ಲಿಪಟ್ಟಣದಲ್ಲಿ ಕಾಲರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಶುಚಿತ್ವಕ್ಕೆಂದೆ ಸ್ವಚ್ಚಗ್ರಾಮ ಯೋಜನೆಯಿದೆ, ಆರೋಗ್ಯ ಇಲಾಖೆಯ ರಾಷ್ಟ್ರೀಯ ಗ್ರಾಮೀನ ಆರೋಗ್ಯ ಸಮಿತಿಯಿದೆ ಇವು ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತೂಕಡಿಸುತ್ತಿದ್ದಾರೋ ಏನೋ ಗೊತ್ತಿಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಷ್ಟೆ.

ಸೋಮವಾರ, ಜುಲೈ 19, 2010

ಸಾಂಕ್ರಾಮಿಕ ರೋಗ ಪೀಡಿತ ಗ್ರಾಮಗಳಿಗೆ ಜಿ.ಪಂ ಅಧ್ಯಕ್ಷೆ ಭೇಟಿ

ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿಕನ್ ಗುನ್ಯಾ, ಹಾಗೂ ಜ್ವರದಿಂದ ಬಳಲುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಮಾಕ್ಷಿ ರಾಜು ಹಾಗೂ ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ ಸ್ವಾಮಿಗೌಡ ನಿನ್ನೆ ಚಿಕ್ಕ ಅರಕಲಗೂಡು, ಕಳ್ಳಿಮುದ್ದನಹಳ್ಳಿ, ಆನಂದೂರು ಮತ್ತು ಮಲ್ಲಿಪಟ್ಟಣ ಗ್ರಾಮಗಳಿಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳಿದ್ದರಲ್ಲದೇ ತತ್ ಕ್ಷಣದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಇಂದು ಕೂಡ ಜಿ.ಪಂ ಅಧ್ಯಕ್ಷರೊಂದಿಗೆ ಕಳ್ಳಿಮುದ್ದನಹಳ್ಳಿ ಗ್ರಾಮಕ್ಕೆ ತೆರಳಿ ರೋಗ ಪೀಡಿತರನ್ನು ಸಂತೈಸಿದರಲ್ಲದೇ ಗ್ರಾಮದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಗೆ ವ್ಯವಸ್ಥೆ ಮಾಡಿದ್ದರು. ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನರಿತ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು ಇನ್ನು ಇಬ್ಬರು ವೈದ್ಯರು ಹಾಗೂ ದಾದಿಯರನ್ನು ವೈದ್ಯಕೀಯ ಸೇವೆಗೆ ನಿಯೋಜಿಸಲಾಗುವುದು, ಗ್ರಾಮದ ನೈರ್ಮಲ್ಯೀಕರಣಕ್ಕಾಗಿ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಸೂಚಿಸಲಾಗುವುದು ಎಂದರು. ಇದೇ ಸಂಧರ್ಭದಲ್ಲಿ ಹಾಜರಿದ್ದ ಡಿಎಚ್ ಓ ಬೀಷ್ಮಾಚಾರಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಗಳ ಸಮೀಕ್ಷೆಗಾಗಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು, ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಸಮರೋಪಾದಿಯ ವೈದ್ಯಕೀಯ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದರು. ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ದೇವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಸಧ್ಯಕ್ಕೆ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ನೂತನ ಆಡಳಿತಾಧಿಕಾರಿಯಾಗಿ ಡಾ|| ಶೀತಲ್ ಕುಮಾರ್ ನೇಮಕವಾಗಿದೆ, ತಾಲ್ಲೂಕು ವೈದ್ಯಾಧಿಕಾರಿಯಾಗಿ ಡಾ ನಾಗಲಕ್ಷ್ಮಿ ಯವರನ್ನು ವರ್ಗಾಯಿಸಲಾಗಿದೆ. ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿ ಸಕಲ ವ್ಯವಸ್ಥೆಗಳು ಸುದಾರಿಸಲಿದೆ ಎಂದರು. ಇದೇ ಸಂಧರ್ಭ ಮಾತನಾಡಿದ ತಾ ಪಂ ಅಧ್ಯಕ್ಷ ಮಾದೇಶ್ ಶೀಶುಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳ ಸಭೆ ಕರೆದು ಪರಿಸ್ಥಿತಿ ಸುದಾರಣೆಗೆ ಯತ್ನಿಸಲಾಗುವುದು ಎಂದರು.

ಶುಕ್ರವಾರ, ಜುಲೈ 16, 2010

ತಾ.ಪಂ. ಅಧ್ಯಕ್ಷರಾಗಿ ಎಚ್ ಮಾದೇಶ್ ಆಯ್ಕೆ


ಅರಕಲಗೂಡು: ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಎಚ್ ಮಾದೇಶ್ ಸರ್ವಾನುಮತದಿಂದ ಆಯ್ಕೆ ಯಾದರು. ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿದ್ದ ನಂಜುಂಡಾಚಾರ್ ನಿಧನಾ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಚುನಾವಣೆ ನಡೆಯಿತು. ತಾಲ್ಲೂಕು ಪಂಚಾಯ್ತಿಯ ಒಟ್ಟು ಸದಸ್ಯ ಬಲ 19 ಆಗಿದ್ದು ಒಬ್ಬರು ಮೃತಪಟ್ಟ ನಂತರ 18ಕ್ಕೆ ಇಳಿದಿತ್ತು . ಶುಕ್ರವಾರ ಬೆಳಿಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಿದ ಸದಸ್ಯ ಎಚ್ ಮಾದೇಶ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 18ಸದಸ್ಯರ ಪೈಕಿ 17ಮಂದಿ ಮಾತ್ರ ಹಾಜರಿದ್ದರು. ಕಣದಲ್ಲಿ ಎಚ್ ಮಾದೇಶ್ ಮಾತ್ರ ಉಳಿದಿದ್ದು ಸದಸ್ಯರು ಮಾದೇಶ್ ಆಯ್ಕೆಯನ್ನು ಬೆಂಬಲಿಸಿದರು, ಆಗ ಚುನಾವಣಾಧಿಕಾರಿಗಳು ಮಾದೇಶ್ ರ ಆಯ್ಕೆಯನ್ನು ಘೋಷಿಸಿದರು. ಸಕಲೇಶಪುರ ಉಪವಿಭಾಗಾಧಿಕಾರಿ ನಾಗೇಂದ್ರ ಪ್ರಸಾದ್ ಚುನಾವಣೆ ಪ್ರಕ್ರಿಯೆ ನಡೆಸಿದರು.
ಅಭಿನಂದನೆ: ಆಯ್ಕೆ ಪ್ರಕ್ರಿಯೆ ನಂತರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಮಾತನಾಡಿ ತಾ.ಪಂ. ಸರ್ವ ಸದಸ್ಯರ ಬೆಂಬಲದೊಂದಿಗೆ ಆಯ್ಕೆ ನಡೆದಿರುವುದು ಹರ್ಷ ತಂದಿದೆ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಮಾದೇಶ್ ತಾ.ಪಂ.ಗೆ ಹೆಚ್ಚಿನ ಅಧಿಕಾರದ ಬಲವಿಲ್ಲ, ಆದಾಗ್ಯೂ ಗ್ರಾಮೀಣಾ ಭಿವೃದ್ದಿಗೆ ಒತ್ತು ನೀಡುವ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿರುವಂತೆ ನೋಡಿಕೊಳ್ಳಲಾಗುವುದು, ಅಧಿಕಾರದ ಮಿತಿಯಲ್ಲಿ ಹೆಚ್ಚಿನ ಸೇವೆ ನೀಡಲು ಬದ್ದನಾಗಿರುತ್ತೇನೆ ಹಾಗೂ ಗೆಲುವಿಗೆ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯರಾದ ಕುಮಾರಸ್ವಾಮಿ,ಜಾನಕಿ ನಾರಾಯಣ್, ರೇಣುಕಾ, ಗೌರಮ್ಮ, ಗಾಯಿತ್ರಿ, ಲಕ್ಷ್ಮಿ ಲಕ್ಷ್ಮಣ್, ುಪಾಧ್ಯಕ್ಷೆ ಪಾರ್ವತಿ ಸಂಜೀವನಾಯ್ಕ, ಮುಖಂಡರಾದ ಪಾಪಣ್ನ, ಬೊಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಅರಕಲಗೂಡು: ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸುವಂತೆ ಕರವೇ ಮುಖಂಡ ತಾಜೀಂ ಪಾಶ ತಾ.ಪಂ. ಅಧ್ಯಕ್ಷ ಮಾದೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಮನವಿ ಅರ್ಪಿಸಿದರು. ಗ್ರಾಮದಲ್ಲಿ ರಸ್ತೆ-ಚರಂಡಿ ಹಾಗೂ ಬೀದಿ ದೀಪದ ವ್ಯವಸ್ಥೆ ಹದಗೆಟ್ಟಿದ್ದು ಗ್ರಾಮದ ಜನತೆ ನೈರ್ಮಲ್ಯದ ಕೊರತೆ ಎದುರಿಸುತ್ತಿದ್ದಾರೆ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಬೇಕು, ಗ್ರಾಮದಲ್ಲಿ ಹುಲ್ಲು ಗುಡಿಸಲಿನಲ್ಲಿ ವಾಸಿಸುವ ಬಡಜನರಿದ್ದು ಅವರಿಗೆ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.
ಅಭಿನಂದನೆ:ಎಚ್ ಮಾದೇಶ್ ಅವರ ಆಯ್ಕೆಯನ್ನು ಕಾಳಿದಾಸ ಯುವಕಸಂಘದ ಶಶಿಕುಮಾರ್ ಸ್ವಾಗತಿಸಿದ್ದಾರೆ. ಕುರುಬ ಸಮುದಾಯದ ಮಾದೇಶ್ ಅವರಿಗೆ ಅಧ್ಯಕ್ಷರಾಗಿ ಆಯ್ಕೆಮಾಡಲು ಸಹಕರಿಸಿದ ಸದಸ್ಯರು ಮತ್ತು ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರನ್ನು ಅವರು ಅಭಿನಂದಿಸಿದ್ದಾರೆ.