ಶುಕ್ರವಾರ, ಫೆಬ್ರವರಿ 19, 2010

ಬಣವೆಗೆ ಬೆಂಕಿ, ತಹಸೀಲ್ದಾರ್ ವಿರುದ್ದ ಪ್ರತಿಭಟನೆ


ಅರಕಲಗೂಡು: ಹಿರೇಹಳ್ಳಿ ಗ್ರಾಮದ ಹುಲ್ಲಿನ ಮೆದೆಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಭಂದಿಸಿದಂತೆ ತಹಸೀಲ್ದಾರರ ಪರೋಕ್ಷ ಬೆಂಬಲವಿದ್ದು ಅವರನ್ನು ಅಮಾನತ್ತಿಲ್ಲಿಡಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು.
ಕಳೆದ ಬುಧವಾರ ಹಿರೇಹಳ್ಳಿ ಗ್ರಾಮದಲ್ಲಿ ತಹಸೀಲ್ದಾರ್ ಶೈಲಜಾ ನಿರ್ದೇಶನದ ಮೇರೆಗೆ ಗ್ರಾಮದ ಭಗೀರಥ ಯುವಕ ಸಂಘದ ಸದಸ್ಯರು ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ನಡು ರಾತ್ರಿಯಲ್ಲಿ ಭತ್ತದ ಬಣವೆಗೆ ಬೆಂಕಿ ಬಿದ್ದಿತ್ತು. ಸದರಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳು ಇಲ್ಲದಿದ್ದರೂ ಸಹಾ ತಹಸೀಲ್ದಾರ್ ದೌರ್ಜನ್ಯದಿಂದ ನಡೆದುಕೊಂಡು ಪಕ್ಷ ಪಾತ ಧೋರಣೆ ಅನುಸರಿಸಿ ರಸ್ತೆ ನಿರ್ಮಿಸಲು ಸೂಚಿಸಿದ್ದಾರೆ ಹಾಗೂ ಯುವಕರನ್ನು ಪ್ರೇರೇಪಿಸಿದ್ದರಿಂದ ಭತ್ತದ ಬಣವೆಗೆ ಬೆಂಕಿ ಹಾಕಲಾಗಿದೆ ಎಂದು ಜೆಡಿಎಸ್ ಮುಖಂಡ ಜನಾರ್ಧನ ಗುಪ್ತ ಆರೋಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ್ ಮಾತನಾಡಿ ತಾಲ್ಲೂಕಿನ ಆಡಳಿತ ನಿರ್ವಹಣೆ ಸಂಧರ್ಭ ತಹಸೀಲ್ದಾರ್ ನಿಷ್ಪಕ್ಷಪಾತವಾಗಿ ನಡೆದು ಕೊಳ್ಳುತ್ತಿಲ್ಲ ಹಿರೇ ಹಳ್ಳಿ ಕೊಪ್ಪಲು ಗ್ರಾಮದ ಜಮೀನನ್ನು ಬಗರ್ ಹುಕುಂ ಅಡಿಯಲ್ಲಿ ರೈತ ರಿಗೆ ನೀಡಲಾಗಿದೆ, ಈ ಊರಿನಲ್ಲಿ ಕೆರೆ-ಸರ್ಕಾರಿ ಗೋಮಾಳ ೊತ್ತುವರಿಯಾಗಿದ್ದರೂ ಸಹಾ ಆ ಬಗ್ಗೆ ತಲೆ ಕೆಡಿಸಿಕೊಳ್ಳದ ತಹಸೀಲ್ದಾರ್, ರಾಜಕೀಯ ದುರುದ್ದೇಶದಿಂದ ರೈತರ ಜಮೀನಿನಲ್ಲಿ ಅನಗತ್ಯವಾಗಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ ಈ ಸಂಧರ್ಭ ತಿಂಗಿನ ಮರಗಳನ್ನು ಉರುಳಿಸಲಾಗಿದೆ, ಜೆಸಿಬಿ ಬಳಸಿ ಕೆಲಸ ಮಾಡಲಾಗಿದೆ ಎಂದರಲ್ಲದೇ ತಹಸೀಲ್ದಾರ್ ರೈತರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಇದು ಖಂಡನೀಯ ಎಂದರು ಇಡೀ ಪ್ರಕರಣದ ಕೇಂದ್ರ ಬಿಂದುವಾಗಿರುವ ತಹಸೀಲ್ದಾರರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು, ನೋದ ರೈತನಿಗೆ ಅವರಿಂದ ಪರಿಹಾರ ಕಟ್ಟಿಸಿಕೊಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತ ನಾಗೇಂದ್ರ ಪ್ರಸಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವಾಂಶಗಳನ್ನು ಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು. ಆದರೆ ಅದಕ್ಕೊಪ್ಪದ ಪ್ರತಿಭಟನಾಕಾರರು ತಹಸೀಲ್ದಾರರು ಜನಸಾಮಾನ್ಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ನ್ಯಾಯ ಕೇಳಲು ಹೋದರೆ ರಾಸ್ಕಲ್, ಗೆಟ್ ಔಟ್ ಎಂಬ ಮಾತುಗಳನ್ನಾಡುತ್ತಾರೆ ಇಂತಹವರ ಅಗತ್ಯ ನಮಗಿಲ್ಲ,ಅವರಿಗೆ ಸೌಜನ್ಯದ ನಡವಳಿಕೆ ಹೇಳಿಕೊಡಿ, ಅಮಾನತ್ತಿಲ್ಲಿಡಿ ಎಂದು ಆಗ್ರಹಿಸಿದರು. ನಂತರ ಎಸಿ ನಾಗೇಂದ್ರ ಪ್ರಸಾದ್ ಒಂದು ವಾರದೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಾಟನಾಕಾರರಿಗೆ ಆಶ್ವಾಸನೆ ನೀಡಿದರು. ಇದೇ ಸಂಧರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಪ್ರಕರಣದ ಬಗ್ಗೆ ಜೆಡಿಎಸ್ ಪಕ್ಷದ ವರಿಷ್ಠರ ಗಮನಕ್ಕೆ ಮಾಹಿತಿ ನೀಡಲಾಗಿದೆ, ಜನರ ಹಿತಾಸಕ್ತಿಗನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು. ತಹಸೀಲ್ದಾರ್ ದೌರ್ಜನ್ಯವನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ. ವಾರದ ನಂತರವೂ ಕ್ರಮವಾಗದಿದ್ದರೆ ಪ್ರತಿಭಟನೆಯನ್ನು ತೀವ್ರ ಗೊಳಿಸಲಾಗುವುದು ಎಂದು ನುಡಿದರು. ಪ್ರತಿಭಟನೆಯ ನೇತೃತ್ವವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಂಜುಂಡಾಚಾರ್, ಜಿಲ್ಲಾಪಂಚಾಯತ್ ಸದಸ್ಯ ಅಪ್ಪಣ್ಣ ವಹಿಸಿದ್ದರು.

ಕಾಮೆಂಟ್‌ಗಳಿಲ್ಲ: