ಸೋಮವಾರ, ಡಿಸೆಂಬರ್ 28, 2009

ಬಿಜೆಪಿ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಗದ್ದಲ ಕೋಲಾಹಲ

ಅರಕಲಗೂಡು: ತಾಲ್ಲೂಕು ಬಿಜೆಪಿ ಅಧ್ಯಕ್ಷರ ಆಯ್ಕೆ ಸಂಧರ್ಬದಲ್ಲಿ ಗದ್ದಲ-ಕೋಲಾಹಲ ಉಂಟಾಗಿ ಕೈ ಕೈ ಮಿಲಾಯಿಸಿದ ಪ್ರಸಂಗ ಇಂದು ಪಟ್ಟಣದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು. ತಾಲೂಕು ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಿಗದಿಯಾಗಿತ್ತು. ಕಾರ್ಯಕ್ರಮ ಏರ್ಪಾಟಾಗಿದ್ದ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಠಪಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಕೊಡಗಿನ ಬಿಜೆಪಿ ಮುಖಂಡ ಮೇದಪ್ಪ ಸಭೆಯಲ್ಲಿ ಚುನಾವಣ ಪ್ರಕ್ರಿಯೆಯನ್ನು ಘೋಷಿಸಿ ಪಕ್ಷದ ಬಲವರ್ದನೆಗೆ ಕಾರ್ಯಕರ್ತರು ಶ್ರಮಿಸಬೇಕು ಈ ನಿಟ್ಟಿನಲ್ಲಿ ಸಮರ್ಥರನ್ನು ಆಯ್ಕೆ ಮಾಡುವಂತೆ ಕರೆ ನೀಡಿದರು. ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ 13ಮಂದಿ ಉತ್ಸುಕರಿದ್ದಾರೆ ಎಂದು ತಿಳಿಸಿದ ಅವರು ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದು ಒಬ್ಬ ವ್ಯಕ್ತಿಯನ್ನು ಅಂತಿಮಗೊಳಿಸಬೇಕೆಂದು ಮನವಿ ಮಾಡಿದರು. ನಂತರ ಚುನಾವಣಾಧಿಕಾರಿಗಳು ಮತ್ತು ಮುಖಂಡರು ಕೆಲವು ಮಂದಿ ಆಕಾಂಕ್ಷಿಗಳನ್ನು ಕರೆದುಕೊಂಡು ವೇದಿಕೆ ಹಿಂದಿನ ಕೊಠಡಿಗೆ ತೆರಳಿದ್ದು ಹೊರಗೆ ಉಳಿದಿದ್ದ ಅಭ್ಯರ್ಥಿಗಳನ್ನು ಕೆರಳಿಸಿತು. ಬಿಜೆಪಿಯಲ್ಲಿ ಮುಕ್ತವಾಗಿ ಚುನಾವಣೆ ನಡೆಸುತ್ತಿಲ್ಲ, ಚುನಾವಣೆ ಕ್ರಮವನ್ನೆ ಸರಿಯಾಗಿ ತಿಳಿಸಿಲ್ಲ, ತಮಗೆ ಬೇಕಾದವರನ್ನು ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಮಾಡಿಕೊಂಡು ಅವರ ಮೂಲಕ ಬೇಕಾದವರನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಐಯ್ಯಣ್ಣ ಗೌಡ ಮತ್ತು ಶಿವಲಿಂಗ ಶಾಸ್ತ್ರಿ ಆರೋಪಿಸಿದಾಗ ರೊಚ್ಚಿಗೆದ್ದ ಇತರೆ ಕಾರ್ಯಕರ್ತರು ನೂಕಾಟ-ತಳ್ಳಾಟ ಆರಂಭಿಸಿದರು. ಅಧ್ಯಕ್ಷ ಸ್ಥಾನದ ಻ತೃಪ್ತರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ ಕೆಲ ಕಾರ್ಯರ್ತರು ಅಡ್ಡಿಪಡಿಸಲು ಯತ್ನಿಸಿದರು ಈ ಹಂತದಲ್ಲಿ ಬಿಜೆಪಿ ಅಧ್ಯಕ್ಷ ರೊಂದಿಗೆ ಅತೃಪ್ತರು ನೇರವಾಗಿಯೇ ಮಾತಿನ ಚಕಮಕಿ ನಡೆಸಿದರಲ್ಲದೇ ಬಿಜೆಪಿಯ ಅಂತರಂಗವನ್ನು ಬಯಲುಗೊಳಿಸಲೆತ್ನಿಸಿದರು. ಇದರಿಂದ ಕ್ರುದ್ದರಾದ ಕೆಲ ಕಿಡಿಗೇಡಿಗಳು ಅತೃಪ್ತರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರಲ್ಲದೇ ಸಭಾಂಗಣದಿಂದಲೇ ಆಚೆಗಟ್ಟಿದರು. ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಅದ್ಯಕ್ಷ ನವಿಲೆ ಅಣ್ಣಪ್ಪ ಈ ಹಿಂದೆ ಪಕ್ಷ ಸಂಘಟಿಸುವಾಗ ಇಲ್ಲದವರು ಈಗ ಪಕ್ಷ ಅಧಿಕಾರದಲ್ಲಿರುವುದರಿಂದ ಲಾಭದ ಆಸೆಗೆ ಗೋಂದಲ ಸೃಷ್ಟಿಸುತ್ತಿದ್ದಾರೆ ಇದೆಲ್ಲ ಸಹಜವಾಗಿದೆ ಎಂದರು. ಅಂತಿಮವಾಗಿ ಸರ್ವಸಮ್ಮತ ಅಂತಿಮವಾಗಿ ಸರ್ವ ಸಮ್ಮತ ಆಯ್ಕೆಯ ಅಧ್ಯಕ್ಷರನ್ನಾಗಿ ಹಳ್ಳಿಮೈಸೂರಿನ ನಟರಾಜ್ ರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಕೇಶವೇಗೌಡ, ಪ್ರತಿನಿಧಿಗಳಾಗಿ ಶಿವಲಿಂಗ ಶಾಸ್ತ್ರಿ, ಕುಮಾರಸ್ವಾಮಿಯನ್ನು ಆಯ್ಕೆ ಮಾಡಲಾಯಿತು. ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಐಯ್ಯಣ್ಣಗೌಡ ಸಭೆಯಿಂದ ಹೊರನೆಡೆದರು ಅವರನ್ನು ಅವರ ಬೆಂಬಲಿಗರು ಹಿಂಬಾಲಿಸಿದರು. ವೇದಿಕೆಯಲ್ಲಿದ್ದ ಹೊಳೆನರಸೀಪುರದ ತಾ.ಪಂ. ಸದಸ್ಯ ಚಂದ್ರಶೇಖರ್ ಸಹಾ ಆಯ್ಕೆಯಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಅತೃಪ್ತಿ ವ್ಯಕ್ತ ಪಡಿಸಿ ಬೆಂಬಲಿಗರೊಂದಿಗೆ ತೆರಳಿದರು. ಗೋಂದಲದ ಗೂಡಾಗಿದ್ದ ವೇದಿಕೆಯಲ್ಲಿ ತರಾತುರಿಯಲ್ಲಿ ನಿಕಟಪೂರ್ವ ಅಧ್ಯಕ್ಷ ನಟೇಶ್ ಕುಮಾರ್ ನೂತನ ಅಧ್ಯಕ್ಷ ನಟರಾಜ್ ಗೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ಮುಖಂಡರಾದ ರವಿಕುಮಾರ್, ಲೋಹಿತ್ ಕುಂದೂರು, ಭುವನಾಕ್ಷ, ನಾರಾಯಣ, ನಂಜುಂಡೇಗೌಡ, ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ಕಾಂಗ್ರೆಸ್ಸಿಗರಿಗೆ ಸಂಸ್ಥಾಪನಾ ದಿನದ ಸನ್ಮಾನ

ಅರಕಲಗೂಡು/ರಾಮನಾಥಪುರ,ಡಿ.28: ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ತಾಲ್ಲೂಕಿನ ಹಿರಿಯ ಕಾಂಗ್ರೆಸ್ಸಿಗರನ್ನು ಜಿಲ್ಲಾ ಕಾಂಗೈ ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೀರ್ತಿರಾಜ್ ಸನ್ಮಾನಿಸಿದರು. ಪಕ್ಷದ 125ನೇ ವರ್ಷಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ನಾಗರಾಜಶೆಟ್ಟಿ, ಮರಿಗೌಡ, ಇಬ್ರಾಹಿಂ ರನ್ನು ಫಲ ಪುಷ್ಪ ನೀಡಿ ಶಾಲು ಹೊದೆಸಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಮತ್ತು ಜಿಲ್ಲಾ ಕಾಂಗೈ ಅಧ್ಯಕ್ಷರಾದ ಎ ಮಂಜು ಪಕ್ಷದ ವರಿಷ್ಠರ ಸೂಚನೆಯಂತೆ ಈ ಸಂಧರ್ಭದಲ್ಲಿ ಪಕ್ಷದ ಮುಖಂಡರನ್ನು ಸನ್ಮಾನಿಸಲಾಗುತ್ತಿದೆ, ತಾಲೂಕಿನ ಎಲ್ಲಾ 29 ಗ್ರಾಮ ಪಂಚಾಯ್ತಿಗಳಲ್ಲು ಹಿರಿಯ ಕಾಮಗ್ರೆಸ್ಸಿಗರನ್ನು ಗುರುತಿಸಲಾಗಿದ್ದು ಪಕ್ಷದ ಮುಖಂಡರು ಸನ್ಮಾನಿಸುವರು ಎಂದರು. ಹಿರಿಯ ಕಾಂಗ್ರೆಸ್ಸಿಗರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿದೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಯಾಗಿದ್ದು ಜನರ ಏಳಿಗೆಗಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಪ್ರಯೋಜನ ಮತ್ತು ಅನುಷ್ಠಾನಕ್ಕೆ ಪಕ್ಷ ಹೋರಾಟ ಮಾಡುವುದು ಎಂದರು. ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಹಿಂದುಳಿದ ವರ್ಗದ ಅದ್ಯಕ್ಷ ಮುತ್ತಿಗೆ ರಮೇಶ್, ಮುಖಂಡರಾದ ಬಾಲಾಜಿ, ಅತಿಉಲ್ಲಾ ಖಾನ್, ವಿಶ್ವೇಶ್ವರಯ್ಯ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಹಿರಿಯ ಮುಖಂಡರುಗಳಾದ ಕಬ್ಬಳಿಗೆರೆ ಬೈರೇಗೌಡ, ಕೊಣನೂರಿನ ನಾರಾಯಣ, ಪುಟ್ಟಸ್ವಾಮಿ, ಕರೀಂಸಾಬ್, ರಾಮನಾಥಪುರದ ತಿಪ್ಪೇಗೌಡ, ಗೋವಿಂದರಾಜಶೆಟ್ಟಿ, ಚೌಡೇಗೌಡ ಮತ್ತಿತರನ್ನು ಅವರ ನಿವಾಸಗಳಿಗೆ ತೆರಳಿ ಸನ್ಮಾನಿಸಲಾಯಿತು.

ಮಂಗಳವಾರ, ಡಿಸೆಂಬರ್ 8, 2009

ನೀರಾವರಿ ತಜ್ಞ ಎಚ್ ಎನ್ ನಂಜೇಗೌಡರ ವಾರ್ಷಿಕ ಸ್ಮರಣೆ

ಖ್ಯಾತ ನೀರಾವರಿ ತಜ್ಞ ದಿ. ಎಚ್ ಎನ್ ನಂಜೇಗೌಡರ ವಾರ್ಷಿಕ ಪುಣ್ಯತಿಥಿಯಂದು ಮೌನ ಮೆರವಣಿಗೆ ನಡೆಸಿ ಶ್ರಧ್ದಾಂಜಲಿ ಅರ್ಪಿಸಿದ ಪಟ್ಟಣದ ವಿವಿಧ ಸಂಘಸಂಸ್ಥೆಗಳ ಮುಖಂಡರು ತಹಸೀಲ್ದಾರ್ ಕಛೇರಿಗೆ ಮನವಿ ಅರ್ಪಿಸಿದರು. ಚಿತ್ರದಲ್ಲಿ ಬಿಎಸ್ ಪಿ ಮುಖಂಡ ರಾಜೇಶ್, ತಾ.ಪಂ ಅಧ್ಯಕ್ಷ ನಂಜುಂಡಾಚಾರ್, ಪ.ಪಂ ಸದಸ್ಯ ರವಿಕುಮಾರ್, ಪತ್ರಕರ್ತು ಶಂಕರ್, ದಸಂಸ ದ ವೀರಾಜ್, ರಮೇಶ್ ವಾಟಾಳ್ ಇದ್ದಾರೆ.

ನಂಜೇಗೌಡರ ಸ್ಮರಣೆಯಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮೌನ ಚಳುವಳಿ

ಅರಕಲಗೂಡು: ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಖ್ಯಾತ ನೀರಾವರಿ ತಜ್ಞ ದಿ.ನಂಜೇಗೌಡರ ಸ್ಮರಣಾರ್ಥ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ಪಟ್ಟಣದ ಅನಕೃ ವೃತ್ತದಿಂದ ತೆರಳಿದ ಮೌನ ಮೆರವಣಿಗೆ ತಾಲೂಕು ಕಛೇರಿ ಮುಂದೆ ಸಮಾವೇಶ ಗೊಂಡಿತು, ಈ ಸಂಧರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷ ನಂಜುಂಡಚಾರ್ ನಿರ್ಭೀತ ನಡೆ-ನುಡಿಯ ಶ್ರೇಷ್ಠ ರಾಜಕಾರಣಿ ಎಚ್ ಎನ್ ನಂಜೇಗೌಡ, ಅವರು ತಾವು ನಂಬಿದ ತತ್ವಗಳನ್ನು ಬಿಟ್ಟು ರಾಜೀ ಮನೋಭಾವ ಅನುಸರಿಸಿದ್ದರೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಿದ್ದರಲ್ಲದೇ ಕೇಂದ್ರದಲ್ಲಿ ಸಚಿವರೂ ಆಗಬಹುದಿತ್ತು ಆದರೆ ಯಾವತ್ತಿಗೂ ನಂಜೇಗೌಡರು ತಾವು ನಂಬಿದ ಮೌಲ್ಯಗಳನ್ನು ಬಿಡಲಿಲ್ಲ ಎಂದರು. ತಾಲೂಕಿನ ಹಲವು ನೀರಾವರಿ ಯೋಜನೆಗಳಿಗೆ ಮಹತ್ವದ ಪಾತ್ರ ವಹಿಸಿರುವ ಗೌಡರು ರಾಜ್ಯದ ನೀರಾವರಿ ವಿಚಾರ ಬಂದಾಗಲೂ ಅಂಕಿ ಅಂಶ ಸಮೇತ ರಾಜ್ಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದರು ಎಂದರು. ಬಿಎಸ್ಪಿ ಮುಖಂಡ ರಾಜೇಶ್ ಮಾತನಾಡಿ ಭೋಫೋರ್ಸ್ ಹಗರಣದ ಸಂಧರ್ಭ ಪ್ರಾಮಾಣಿಕ ನಡೆ ನುಡಿಯಿಂದ ತಮ್ಮ ವ್ಯಕ್ತಿತ್ವ ಕಾಯ್ದು ಕೊಂಡು ಇತರರಿಗೆ ಮಾದರಿಯಾದ ನಂಜೇಗೌಡರು ತಾಲೂಕಿನ ರಾಮನಾಥಪುರ-ಕೊಣನೂರು ಹೋಬಳಿಯ ಜನರ ಕೃಷಿ ಬದುಕು ಹಸನಿಗೆ ಕಾರಣರಾಗಿದ್ದಾರೆ. ಅವರು ರೂಪಿಸಿದ ಹಾರಂಗಿ ನೀರಾವರಿ ಯೋಜನೆ ಯಿಂದ ಇವತ್ತು ರೈತರು ನೆಮ್ಮದಿಯ ದಿನಗಳನ್ನು ಕಾಣುತ್ತಿದ್ದಾರೆ ಇಂತಹ ಶ್ರೇಷ್ಠ ರಾಜಕಾರಣಿಯನ್ನು ಜನತೆ ನೆನೆಸಿಕೊಳ್ಳಬೇಕು ಹಾಗೂ ಇದೇ ಸಂಧರ್ಭದಲ್ಲಿ ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ.ಪಂ ಸದಸ್ಯ ರವಿಕುಮಾರ್ ಮಾತನಾಡಿ ಒಬ್ಬ ಪ್ರಾಮಾಣಿಕ ರಾಜಕೀಯ ಮುತ್ಸದ್ದಿಯನ್ನು ನೆನಪು ಮಾಡಿಕೊಳ್ಳುವ ಜೊತೆಗೆ ಅವರು ನಂಬಿದ ಮೌಲ್ಯಗಳಿಗೆ ಗೌರವ ಸಿಗಬೇಕಾದರೆ ಅವರ ಕನಸಿನ ನೀರಾವರಿ ಯೋಜನೆ ಜಾರಿಯಾಗಬೇಕು ಎಂದರು. ದಸಂಸ ದ ವಿರಾಜ್ ಮಾತನಾಡಿ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಗುಣಮಟ್ಟ ಸಂಪೂರ್ಣ ಕಳಪೆಯಾಗಿದೆ, ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಇಂಜಿನಿಯರುಗಳು ಆಸ್ಥೆ ವಹಿಸುತ್ತಿಲ್ಲ ಇದು ವಿಷಾಧನೀಯಕರ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಜಿ ಚಂದ್ರಶೇಖರ್, ಅ. ರಾ. ಸುಬ್ಬರಾವ್ ಮತ್ತಿತರರು ಮಾತನಾಡಿದರು. 2ನಿಮಿಷಗಳ ಮೌನ ಆಚರಣೆ ನಂತರ ತಾಲೂಕು ಕಛೇರಿ ವ್ಯವಸ್ಥಾಪಕ ಗಂಗರಾಜುವಿಗೆ ಪ್ರತಿಭಟನಾ ನಿರತರು ಮನವಿ ಅರ್ಪಿಸಿದರು.
ಶ್ರದ್ದಾಂಜಲಿ ಅರ್ಪಣೆ: ತಾಲ್ಲೂಕಿನ ಪೊಟ್ಯಾಟೋ ಕ್ಲಬ್ ವತಿಯಿಂದ ನೀರಾವರಿ ತಜ್ಞ ಎಚ್ ಎನ್ ನಂಜೇಗೌಡರ ವಾರ್ಷಿಕ ಸ್ಮರಣೆ ಆಚರಿಸಲಾಯಿತು. ತಹಸೀಲ್ದಾರ್ ವಿ ಆರ್ ಶೈಲಜಾ , ಎಚ್ ಎನ್ ನಂಜೇಗೌಡರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌಡರ ಗುಣಗಾನ ಮಾಡಿದರು. ಪೋಟಾಟೋ ಕ್ಲಬ್ ನ ರಾಜೇಂದ್ರ ದೊಡ್ಡಮಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಮುಖಂಡರಾದ ಜಯಪ್ಪ, ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಸೋಮವಾರ, ಡಿಸೆಂಬರ್ 7, 2009

ಕುರಿ-ಆಡು ಸಾಕಾಣಿಕೆ ರೈತರ ಆರ್ಥಿಕಾಭಿವೃದ್ದಿಗೆ ಸಹಾಯಕ
೧. ಪೊಟ್ಯಾಟೋ ಕ್ಲಬ್ ನ ಆಶ್ರಯದಲ್ಲಿ ಏರ್ಪಾಡಾಗಿದ್ದ ರೈತರ ಸಮಾವೇಶ ದಲ್ಲಿ ಕುರಿ-ಆಡು ಸಾಕಾಣಿಕೆ ಅಭಿವೃದ್ದಿ ಕೇಂದ್ರದ ಸಮಿತಿ ಸದಸ್ಯ ವೀರಕೆಂಪಣ್ಣ ಆಡುಮತ್ತು ಕುರಿಗಳಿಗೆ ಹಾರ ಹಾಕುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಪ್ರಯೋಜಕರಾದ ಯೋಗಾರಮೇಶ್, ಮತ್ತು ಅತಿಥಿಗಳಾದ ಹೊಂಬೇಗೌಡ,ಆಲದಹಳ್ಳಿ ಸುಬ್ಬೇಗೌಡ, ಮತ್ತು ಇತರರು ಉಪಸ್ಥಿತರಿದ್ದರು.