- ಅರಕಲಗೂಡು ಜಯಕುಮಾರ್
ಕೇಂದ್ರ ಸರ್ಕಾರ ಈ ಮೊದಲು ಎಸ್ ಜೆ ಆರ್ ವೈ ಯೋಜನೆಯನ್ನು ಕೂಲಿಗಾಗಿ ಕಾಳು ಹೆಸರಿನಲ್ಲಿ ಜಾರಿಗೆ ತಂದಿತ್ತು . ಈ ಯೋಜನೆಯು ಕೂಡಾ ಅಧಿಕಾರಿಶಾಹಿಯ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದಿತ್ತು ಮತ್ತು ಬಡವರಿಗೆ ಕೂಲಿಯ ಜೊತೆಗೆ ವಿತರಣೆಯಾಗ ಬೇಕಾಗಿದ್ದ ಸಾವಿರಾರು ಟನ್ ಅಕ್ಕಿ ವಿದೇಶಕ್ಕೆ ಮಾರಾಟವಾಗಿ 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ 3ತಿಂಗಳುಗಳ ಕಾಳ ಮುದ್ದೆ ಮುರಿಯುತ್ತಾ ಕಂಬಿ ಎಣಿಸಿದ್ದರು! ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳು ಸಾಬೀತಾದರೆ ಜಿಲ್ಲೆಯಲ್ಲಿಯೂ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರುಗಳು ಕಂಬಿ ಎಣಿಸುವುದು ಶತಸಿದ್ಧ ಎಂದು ಪತ್ರಿಕೆಯ ವರದಿಯಲ್ಲಿ 10ತಿಂಗಳ ಹಿಂದೆಯೇ ಸ್ಪಷ್ಟವಾಗಿ ಬರೆಯಲಾಗಿತ್ತು. ಆದರೂ ಜಗ್ಗದ ಭ್ರಷ್ಟ ಅಧಿಕಾರಶಾಹಿಯ ಸ್ವೇಚ್ಚಾಚಾರದಿಂದ ಅರಕಲಗೂಡು ತಾಲ್ಲೂಕಿನಲ್ಲಿ 2009ನೇ ಸಾಲಿಗೆ ಉದ್ಯೋಗ ಚೀಟಿಗಳಿಗನುಗುಣವಾಗಿ 22ಕೋಟಿ ಮಾತ್ರ ಕಾಮಗಾರಿಗಳು ನಡೆಯಬೇಕಿತ್ತು ಆದರೆ ಅನಾಮತ್ತು 150ಕೋಟಿ ರೂಪಾಯಿಗಳ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿಯನ್ನೇ ನಿರ್ವಹಿಸದೇ ಶೇ.40ರ ಸಾಮಾಗ್ರಿ ಬಿಲ್ ಸುಮಾರು 3ಕೋಟಿ ವೆಚ್ಚವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಸದರಿ ಸರಕು-ಸಾಮಾಗ್ರಿ ಬಿಲ್ ಗೆ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣ 35ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಟ್ಟದೇ ವಂಚಿಸಲಾಗಿದೆ. ವಾಸ್ತವವಾಗಿ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಬೇಕಾದ ಸಂಪೂರ್ಣ ಹೊಣೆಗಾರಿಕೆ ಇರುವುದು ಗ್ರಾ.ಪಂ.ಗಳಿಗೆ ಆದರೆ ಇಲ್ಲಿ ಹಿರಿಯ ಅನುಷ್ಠಾನಾಧಿಕಾರಿಗಳು ಗ್ರಾ.ಪಂ.ಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸ್ವೇಚ್ಚಾಚಾರದಿಂದ ವರ್ತಿಸಿದ್ದಾರೆ. ಈ ಎಲ್ಲಾ ಅಂಶಗಳ ಕುರಿತು ಹಾಸನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ರಹಸ್ಯ ವರದಿ ಪತ್ರಿಕೆಗೆ ಲಭ್ಯವಾಗಿದ್ದು ಅದರ ಮುಖ್ಯಾಂಶಗಳನ್ನು ಆಯ್ದು ಇಲ್ಲಿ ನೀಡಲಾಗಿದೆ.
- ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ (ಕಾರ್ಯಕ್ರಮ ಅಧಿಕಾರಿ)ಯಾಗಿದ್ದು ತೋಟಗಾರಿಕೆ, ಸಾಮಾಜಿಕ ಅರಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ,ನೀರಾವರಿ ಹಾಗೂ ಜಲಾನಯನ ಹಾಗೂ ಮುಂತಾದ ಇಲಾಖೆಗಳು ಮಾತ್ರ ಒಳಗೊಂಡಿರುತ್ತದೆ. ಆದರೆ ತಾಲ್ಲೂಕಿನ ಉದ್ಯೋಗಖಾತ್ರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ನಾಗೇಶ್,ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ,ಫಣೀಶ್,ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಜಿ.ಪಂ. ನ ಕಿರಿಯ ಇಂಜಿನಿಯರ್ ನಿಂಗೇಗೌಡ ಇವರುಗಳು ಮಾತ್ರ ಅನುಷ್ಠಾನದಲ್ಲಿ ಪ್ರಮುಖವಾಗಿ ಭಾಗಿಗಳಾಗಿರುವುದು ಕಂಡು ಬಂದಿರುತ್ತದೆ.
- ಕಾಮಗಾರಿಗಳಿಗೆ ಸಾಮಾಗ್ರಿ ಬಿಲ್ ಪಾವತಿಯನ್ನು ತ್ವರಿತವಾಗಿ ಪೂರ್ಣಗೊಳಿಸಿರುವ ಅನುಷ್ಠಾನಾಧಿಕಾರಿಗಳು ಇದೇ ಆಸಕ್ತಿಯನ್ನು ಕಾಮಗಾರಿಗಳ ಪೂರ್ಣ ಅನುಷ್ಠಾನದಲ್ಲಿ ತೋರಿಸಿರುವುದಿಲ್ಲ. ತಮಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಪಟ್ಟ ಕಾಮಗಾರಿಗಳ ಅಂದಾಜು ಪರಿಶೀಲನೆಯಿಂದ ಹಿಡಿದು ಕಾಮಗಾರಿ ಉಸ್ತುವಾರಿ ಪರಿಣಾಮಕಾರಿ ಕಾರ್ಯನಿರ್ವಹಣೆ, ಅಳತೆ ಪುಸ್ತಕಗಳ ಸೂಕ್ತ ಪರಿಶೀಲನೆ, ಎನ್ ಎಂಆರ್ ಗಳು ಇತರೆ ದಾಖಲೆಗಳ ಧೃಢೀಕರಣವನ್ನು ಸಹಾ ಅನುಷ್ಠಾನಾಧಿಕಾರಿಯಾದ ಸಹಾಯಕ ಕಾರ್ಯಪಾಲಕ ಅಭಿಯಂತರ ನಿರ್ವಹಿಸಬೇಕಾಗಿತ್ತು ಆದರೆ ಈ ಪ್ರಕ್ರಿಯೆಗಳಿಂದ ಸದರಿ ಅಧಿಕಾರಿಯವರು ಪ್ರಗತಿಯಲ್ಲಿರುವ ಉಳಿದ ಎಲ್ಲಾ ಕಾಮಗಾರಿಗಳ ಶೇ.10ರಷ್ಟು ಕಾಮಗಾರಿಗಳ ಅಳತೆ ಪರಿಶೀಲನೆಯನ್ನು ಸಹಾ ಧೃಢೀಕರಿಸಿಲ್ಲ. ಯೋಜನೆಯ ಹಣ ಇಲ್ಲಿ ನೇರವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಹೆಸರಿನಲ್ಲಿ ಬಿಡುಗಡೆಯಾಗಿದ್ದು ಅವರೇ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ.
- ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.
- ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ.
- ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.
- ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.(ಮುಂದುವರೆಯುವುದು).
1 ಕಾಮೆಂಟ್:
ಸಿಇಓ ವರದಿ ಸತ್ಯವನ್ನೇ ಎತ್ತಿ ಹಿಡಿದಿದೆ...ಆದರೆ"ಯೋಜನೆಯಡಿ ನೈಜವಾಗಿ ಕಾರ್ಯ ನಿರ್ವಹಿಸಿದ ಸಾವಿರಾರು ಮಂದಿ ಕೂಲಿಕಾರರು 10ತಿಂಗಳಿನಿಂದ ಕೂಲಿ ಸಿಗದೇ ಪರಿತಪಿಸುತ್ತಿದ್ದಾರೆ" ಎಂಬುದನ್ನು ಒಪ್ಪಲು ಸಾಧ್ಯವಿಲ್ಲ...ನೈಜ ಕೂಲಿ ಕಾರರು ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ..ಕೂಲಿ ಪಾವತಿ ವಿಳಂಬವಾದ 16ನೇ ದಿನಕ್ಕೆ ಬಿಳಿ ಹಾಳೆಯಲ್ಲಿ ಕೂಲಿ ವಿಳಂಬ ಪಾವತಿ ಪರಿಹಾರಕ್ಕೆ ಅರ್ಜಿ ಹಾಕಲು ಕಾಯ್ದೆ ಪ್ರಕಾರ ಅವಕಾಶವಿದೆ..ತಪ್ಪಿತಸ್ಥ ಜನಪ್ರತಿನಿಧಿ/ಅಧಿಕಾರಿ/ನೌಕರನಿಗೆ ಕನಿಷ್ಠ ಕೂಲಿ ವೇತನ ಕಾಯ್ದೆಯಡಿ 6 ತಿಂಗಳು ಜೈಲು ಶಿಕ್ಷೆ ಹಾಗೂ ರೂ. 3,000/- ವರೆಗೆ ಪರಿಹಾರವಾಗಿ ಕೂಲಿ ಕಾರ್ಮಿಕರನಿಗೆ ನೀಡಲು ಅವಕಾಶವಿದೆ(4/1936)...ಯೋಜನೆಯಡಿ ನಿಜವಾದ ಕೂಲಿ ಕಾರ್ಮಿಕರೆ ಇದ್ದರೆ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ 'ಕೂಲಿ ವಿಳಂಬ ಪರಿಹಾರ ಕೋರಿಕೆ ಅರ್ಜಿ' ಸಲ್ಲಿಸಿ ಹಿಂಬರಹ ಪಡೆಯಲಿ...
ಕಾಮೆಂಟ್ ಪೋಸ್ಟ್ ಮಾಡಿ