ಸೋಮವಾರ, ನವೆಂಬರ್ 29, 2010

ಗೊಬ್ಬಳಿ-ಮುಸವತ್ತೂರು ದಲಿತರ ಮೇಲಿನ ದೌರ್ಜನ್ಯ:ಪ್ರಗತಿಪರ ಸಂಘಟನೆಗಳ ಪ್ರತಿಭಟನೆ





ಅರಕಲಗೂಡು: ಕಳೆದ 15ದಿನಗಳ ಹಿಂದೆ ತಾಲೂಕಿನ ಗೊಬ್ಬಳಿ ಮತ್ತು ಮುಸವತ್ತೂರು ಗ್ರಾಮಗಳಲ್ಲಿ ದಲಿತರ ಮೇಲೆ ನಡೆದ ಅಮಾನವೀಯ ದೌರ್ಜನ್ಯವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್  ಪ್ರತಿಭಟನೆ ನಡೆಸಿದವು.
         2ವಾರಗಳ ಹಿಂದೆ ಗೊಬ್ಬಳಿ ಗ್ರಾಮದಲ್ಲಿ ಬೀಗರ ಔತಣಕ್ಕೆ ಸಹಪಂಕ್ತಿಯಲ್ಲಿ ದಲಿತರು ಕುಳಿತರೆಂಬ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿ  ದೌರ್ಜನ್ಯ ನಡೆಸಿದ ಬಗ್ಗೆ ವರದಿಯಾಗಿತ್ತು ಅದೇ ದಿನ ಮಲ್ಲಿಪಟ್ಟಣ ಹೋಬಳಿಯ ಮುಸವತ್ತೂರು ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಬರಲು ನಿರಾಕರಿಸಿದ ದಲಿತನೋರ್ವನನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಲಾಗಿತ್ತು. ಧೌರ್ಜನ್ಯಕ್ಕೆ ಒಳಗಾದವರು ಆಸ್ಪತ್ರೆಯಲ್ಲಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಅರಕಲಗೂಡು ಮತ್ತು ಕೊಣನೂರು ಪೋಲೀಸರು ದೌರ್ಜನ್ಯ ೆಸಗಿದವರ ವಿರುದ್ದ ಕ್ರಮ ಜರುಗಿಸಿ ಬಂಧಿಸದೇ ಆರೋಪಿಗಳಿಂದಲೇ ಪ್ರತಿ ದೂರು ಪಡೆದು ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ, ಘಟನೆಯಿಂದ ನೊಂದಿರುವ ದಲಿತರು ಭೀತಿಯಿಂದ ದಿನ ಕಳೆಯುವಂತಾಗಿದೆ, ಗ್ರಾಮದಲ್ಲಿ ಇದುವರೆಗೂ ಶಾಂತಿ ಸಭೆ ನಡೆಸಿಲ್ಲ ಬದಲಾಗಿ ದ್ವೇಷದ ವಾತಾವರಣಕ್ಕೆ ಪೋಲೀಸರೆ ಪ್ರೋತ್ಸಾಹ ನೀಡಿತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ದಲಿತ ಸಂಘರ್ಷ ಸಮಿತಿ, ಬಹುಜನ ಸಮಾಜವಾದಿ ಪಾರ್ಟಿ ಮತ್ತು ಡಿವೈಎಫ್ಐ ಮತ್ತಿತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಜಾಥ ನಡೆಸಿದವು. ತಾಲೂಕು ಕಛೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾ ನಿರತರು ಪೋಲೀಸರು ಮತ್ತು ತಾಲೂಕು ಆಡಳಿತ ದಲಿತ ವಿರೋಧಿ ನಿಲುವು ತಳೆದಿದೆ, ದೌರ್ಜನ್ಯ ವೆಸಗಿದವರ ರಕ್ಷಣೆಗೆ ಮುಂದಾಗಿದೆ ಎಂದು ಆರೋಪಿಸಿದರು. ಪ್ರತಿಭಟನಾಕರರ ಮನವಿಯನ್ನು ತಹಸೀಲ್ದಾರ್ ಸವಿತಾ ಸ್ವೀಕರಿಸಿ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಒದಗಿಸಲಾಗುವುದು,ಆರೋಪಿಗಳ ಬಂಧನಕ್ಕೆ ಪೋಲಿಸರಿಗೆ ಕ್ರಮವಹಿಸಲು ಸೂಚನೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಜಾಗೃತ ದಳ ರಚಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ ಐ ನ ಧರ್ಮೇಶ್, ಬಿಎಸ್ ಪಿಯ ಬಿ ಸಿ ರಾಜೇಶ್, ದಸಂಸ ದ ಗಣೇಶ ವೇಲಾಪುರಿ ಮತ್ತಿತರರು ವಹಿಸಿದ್ದರು.

1 ಕಾಮೆಂಟ್‌:

ವಿ. ಭೂಮಿಕಾ ಹೇಳಿದರು...

ಹೀನ ಮನಸ್ಥಿತಿಯ ಅವಿವೇಕಿಗಳು, ಕಿಡಿಗೇಡಿಗಳು ಇನ್ನೂ ಭೂಮಿಯ ಮೇಲೆ ಬದುಕಿದ್ದಾರೆ ಎನ್ನುವುದೇ ದುರ್ದೈವದ ಸಂಗತಿ...ಜಾತಿವಾದಿಗಳಿಗೆ ಧಿಕ್ಕಾರ..ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ...