ಭಾನುವಾರ, ಅಕ್ಟೋಬರ್ 3, 2010

ಬಾಳೆ ಬೆಳೆದು ನೆಮ್ಮದಿಯ ಬದುಕು ಸಾಗಿಸಿ:ಡಾ. ರವೋಫ್

ಅರಕಲಗೂಡು: ರೈತರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಬೆಳೆ ನಷ್ಟ ಹೊಂದಿ ಸಂಕಟಕ್ಕೆ ಸಿಲುಕುತ್ತಿದ್ದಾರೆ, ಆದರೆ ಸರಿಯಾದ ಕ್ರಮಗಳನ್ನು ಶ್ರದ್ದೆಯಿಂದ ಅನುಸರಿಸಿದರೆ ರೈತರು ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಪ್ರಗತಿಪರ ಕೃಷಿಕ ಡಾ|| ರವೂಫ್ ಹೇಳಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಪೋಟ್ಯಾಟೋ ಕ್ಲಬ್ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ 'ಬಾಳೆ ಒಂದು ಮುಖ್ಯ ಬೆಳೆ ಹಾಗೂ ಉಪಬೆಳೆ' ಕುರಿತು ಮಾಹಿತಿ ನೀಡಿ ಸಂವಾದ ನಡೆಸಿದ ಅವರು ಮಳೆ ಹಾಗೂ ವಾತಾವರಣ ಕೈಕೊಟ್ಟರೆ ರೈತರು ಸಹಜವಾಗಿ ವಾಣಿಜ್ಯ ಬೆಳೆ ಗಳಲ್ಲಿ ನಷ್ಟ ಹೊಂದುತ್ತಾರೆ ಆದರೆ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿಕೊಂಡು ಕೃಷಿ ಮಾಡಿದರೆ ಯಾವುದೇ ರೀತಿಯ ತೊಂದರೆಯೂ ಎದುರಾಗದು ಎಂದರು. ರೈತರು ಟೊಮ್ಯಾಟೋ, ಮೆಣಸಿನಕಾಯಿ, ಆಲೂಗಡ್ಡೆ ಇತ್ಯಾದಿಗಳನ್ನು ಬೆಳೆದು ಸೂಕ್ತ ಬೆಲೆಯು ಸಿಗದೆ ತೊಂದರೆ ಅನುಭವಿಸುತ್ತಾರೆ ಆದರೆ ಬಾಳೆ ಬೆಳೆದ ರೈತ ನಷ್ಟಹೊಂದಿದ ಉದಾಹರಣೆ ಸಿಗಲು ಸಾಧ್ಯವಿಲ್ಲ, ನಾನು ಒಂದು ಎಕರೆಯಲ್ಲಿ 3-4ಲಕ್ಷದವರೆಗೆ ಆದಾಯ ಪಡೆದಿದ್ದೇನೆ ನೀವು ಕೂಡ ಅಂತಹದ್ದನ್ನು ಸಾಧಿಸಲು ಸಾಧ್ಯವಿದೆ, ಪ್ರಯತ್ನ ಮತ್ತು ಶ್ರದ್ದೇ ಮಾತ್ರ ನಿಮ್ಮ ಕೈ ಹಿಡಿಯುತ್ತದೆ ಎಂದರು. ಕಡಿಮೆ ಖರ್ಚಿನಲ್ಲಿ ಬೆಳೆಯಲ್ಪಡುವ ಬಾಳೆಯನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗುತ್ತಿಲ್ಲ, ಇಲ್ಲಿನ ಉತ್ಪಾದನೆ ಸಾಲದೆ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ,ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬಾಳೆಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ರವೂಫ್ ನುಡಿದರು. ಆಸಕ್ತ ರೈತರು ನನ್ನ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಬಹುದು, ಬಾಳೆ ಬೆಳೆಗೆ ಬೇಕಾದ ಮಾರ್ಗದರ್ಶನವನ್ನು ನೀಡಲು ಸದಾ ಸಿದ್ದನಿರುತ್ತೇನೆ, ಹಾಗೆಯೇ ಆಸಕ್ತ ರೈತರು ಮುಂದೆ ಬಂದರೆ 5000ಬಾಳೆ ಗಿಡಗಳನ್ನು ಉಚಿತವಾಗಿ ನೀಡುತ್ತೇನೆ ಎಂದು ಘೋಷಿಸಿದರು. ನಾನು ಬಾಳೆ ಬೆಳೆ ಜೊತೆಗೆ ಅನಾನಸ್ ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಸಹಾ ಬೆಳೆಯುತ್ತಿದ್ದೇನೆ, ಸಾವಯವ ಗೊಬ್ಬರನ್ನು ತಯಾರಿಸಿಕೊಂಡು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಇಳುವರಿ ಪಡೆಯಲಾಗುತ್ತಿದೆ ಎಂದರು. ಕೃಷಿ ತಜ್ಞ ದತ್ತಾತ್ರೇಯ ಮಾತನಾಡಿ ಕೃಷಿ ಸಂಸ್ಕೃತಿ ಮರೆಯಬಾರದು, ಕೃಷಿ ನಿಂತ ನೀರಲ್ಲ ಅದು ಸದಾ ಚಲನೆಯುಳ್ಳದ್ದು ಜನರಿಗೆ ಬದುಕು ಕೊಡುವ ಪ್ರಯತ್ನವನ್ನು ಅದು ಮಾಡುತ್ತದೆ ಎಂದರು. ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾರಮೇಶ್ ಮಾತನಾಡಿ ರೈತರು ಆರ್ಥಿಕವಾಗಿ ಸಧೃಢವಾಗಬೇಕಾದರೆ ವಿವೇಚನಾಯುಕ್ತವಾದ ಕೃಷಿ ಮಾಡಬೇಕು. ನಷ್ಟದ ಬೆಳೆಗಳನ್ನು ಬೆಳೆದು ಶ್ರಮ-ಹಣ ಎರಡನ್ನೂ ಪೋಲು ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಬೇಡಿ, ಹೆಚ್ಚಿನ ವೆಚ್ಚವಿಲ್ಲದೇ ಬೆಳೆಯಬಹುದಾದ ಬೆಳೆಗಳ ಮಾಹಿತಿ ಪಡೆದು ಅದರ ಪ್ರಯೋಜನ ಪಡೆಯಿರಿ ಎಂದರು. ಬಾಳೆ ಬೆಳೆಗೆ ಅಗತ್ಯವಿರುವ ಪ್ರೋತ್ಸಾಹದಾಯಕವಾದ ಸಾಲ ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಲಭ್ಯವಿದೆ ಅಗತ್ಯಕ್ಕನುಸಾರವಾಗಿ ಅದನ್ನು ಬಳಸಿಕೊಳ್ಲಿ ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಜ್ಞರಾದ ಅರುಣ್ ಕುಮಾರ್, ಸೂರ್ಯನಾರಾಯಣ ಮಾತನಾಡಿದರು. ಪ್ರಗತಿ ಪರ ರೈತರಾದ ಹೆಮ್ಮಿಗೆ ಮೋಹನ್, ಹೆದ್ದಾರಿ ಉಪವಿಭಾಗದ ಅಭಿಯಂತರ ಸೋಮಶೇಖರ್, ಮುಖಂಡರಾದ ಜಯಪ್ಪ, ಕಾಂತರಾಜು, ಸತ್ಯನಾರಾಯಣ,ಆರ್ ಕೆ ಮಂಜುನಾಥ್, ಸಾದಿಕ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಅರಕಲಗೂಡು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ ಕೂಲಿ ಹಣವನ್ನು ತಕ್ಷಣವೆ ಬಿಡುಗಡೆ ಮಾಡಬೇಕು ಎಂದು ಅ.4 ರಂದು ಪಟ್ಟಣದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 150ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದು ಮಾಹಿತಿ ನೀಡಿರುವ ಅಧಿಕಾರಿಗಳು ಸರಕು ಸರಬರಾಜು ವೆಚ್ಚವನ್ನು ಪಡೆದಿದ್ದಾರೆ ಆದರೆ ಕಳೆದ 10ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಪಾವತಿಸದೇ ವಂಚನೆ ಮಾಡುತ್ತಿದ್ದಾರೆ ಅಲ್ಲದೇ ಅಕ್ರಮದಲ್ಲಿ ಸಿಲುಕಿ ಅಮಾನತ್ತುಗೊಂಡಿದ್ದಾರೆ ಕೂಲಿಕಾರ ಕೂಲಿ ಇಲ್ಲದೇ ಪರಿತಪಿಸುವಂತಾಗಿದೆ ಆದ್ದರಿಂದ ತಕ್ಷಣವೇ ಕೂಲಿ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿರುವ ಮಾದೇಶ್, ಕೂಲಿಕಾರರ ಹಿತ ಕಾಯುವ ದಿಸೆಯಲ್ಲಿ ಸ್ಥಳೀಯ ಸಂಸ್ಥೆಗಳ ಜಿ.ಪಂ ಸದಸ್ಯರುಗಳು, ತಾ.ಪಂ. ಸದಸ್ಯರುಗಳು ಹಾಗೂ ಗ್ರಾ.ಪಂ ಸದಸ್ಯರುಗಳ ನೇತೃತ್ವದಲ್ಲಿ ಕೂಲಿಕಾರರೊಂದಿಗೆ ತಾಲ್ಲೂಕು ಕಛೇರಿ ಮುಂದೆ ಬೆಳಿಗ್ಗೆ 11ಗಂಟೆಯಿಂದ ಪ್ರತಿಭಟನಾ ಧರಣಿ ನಡೆಸಲಾಗುವುದುಎಂದು ತಿಳಿಸಿದ್ದಾರೆ.
ರೈತ ಸಂಘದ ಪ್ರತಿಭಟನೆ: ಬಿಜೆಪಿ ಸರ್ಕಾರ ರೈತರ ಬಗ್ಗೆ ತಳೆದಿರುವ ಧೋರಣೆ, ಬೆಳೆನಷ್ಟ, ನಕಲಿ ರಸಗೊಬ್ಬರ, ನಕಲಿ ಬೀಜ ಹಾಗು ಕೃಷಿ ಉತ್ನ್ನಕ್ಕೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸದ ಸರ್ಕಾರದ ವಿರುದ್ದ ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ಹೊ.ತಿ ಹುಚ್ಚಪ್ಪ ತಿಳಿಸಿದ್ದಾರೆ.

ಅರಕಲಗೂಡು: ತಾಲೂಕಿನ ಕೊಣನೂರು ಗ್ರಾ.ಪಂ.ಗೆ ಇದೇ ಅ.24ರಂದು ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸಲು ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಗ್ರಾಮವಾಗಿರುವ ಕೊಣನೂರು ಈಗ ಗ್ರಾಮ ಪಂಚಾಯ್ತಿ ಆಡಳಿತವನ್ನು ಹೊಂದಿದೆ. 25ಸದಸ್ಯ ಬಲವಿರುವ ಈ ಪಂಚಾಯ್ತಿಗೆ ಅತೀ ಹೆಚ್ಚು ಕಂದಾಯವೂ ಸಂಗ್ರಹವಾಗುತ್ತಿದೆ, ಮೂರು ಹಳ್ಳಿಗಳ ವ್ಯಾಪ್ತಿಯನ್ನೂ ಸಹಾ ಇದು ಹೊಂದಿದೆ. ಆದರೆ ಗ್ರಾ.ಪಂ ಆಗಿರುವುದರಿಂದ ಬರುತ್ತಿರುವ ಅಭಿವೃದ್ದಿ ಅನುದಾನ ಸಾಲದೇ ಅಗತ್ಯ ಅಭಿವೃದ್ದಿ ಕಾಮಗಾರಿಗಳಿಂದ ಗ್ರಾಮದ ಜನತೆ ವಂಚಿತರಾಗಿದ್ದಾರೆ. ಕಳೆದ ಬಜೆಟ್ ನಲ್ಲಿ ತಾಲೂಕು ಕೇಂದ್ರದ ಪ.ಪಂ. ಯನ್ನು ಪುರಸಭೆ ಮಾಡಿ ಕೊಣನೂರಿನ ಗ್ರಾ.ಪಂ. ಯನ್ನು ಪ.ಪಂ. ಮಾಡುವ ಪ್ರಸ್ತಾವನ್ನು ಬಿಜೆಪಿ ಸರ್ಕಾರ ಮಾಡಿತ್ತು ಆದರೆ ಕೊಟ್ಟ ಮಾತು ಉಳಿಸಿಕೊಳ್ಳದ ಸಿಎಂ ಯಡಿಯೂರಪ್ಪ ನಿಲುವಿನಿಂದ ಸ್ಥಳೀಯ ಸಂಸ್ಥೆಗಳು ಯಥಾ ಸ್ಥಿತಿಯಲ್ಲೆ ಉಳಿಯುವಂತಾಗಿದೆ. ಇದರಿಂದ ಬೇಸತ್ತಿರುವ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪತ್ರಿಕೆಯೊಂದಿಗೆ ಮಾತನಾಡಿ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿಸಿ ಪ.ಪಂ. ಮಾಡದಿದ್ದರೆ ಅ.24ರಂದು ನಡೆಯುವ ಸಾರ್ವಜನಿಕ ಚುನಾವಣೆಯನ್ನು ಬಹಿಸಷ್ಕರಿಸುತ್ತೇವೆ ಈ ಕುರಿತು ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಮಾಡಲಾಗುವುದು ಎಂದರು.

ಗಾಂಧೀ ತತ್ವಾದರ್ಶ ಅನುಕರಣೀಯವಾಗಬೇಕು-ಎಟಿಆರ್

ಅರಕಲಗೂಡು: ಪ್ರಸಕ್ತ ಸಂಧರ್ಭದಲ್ಲಿ ಮಹಾತ್ಮ ಗಾಂಧಿಯವರ ತತ್ವಾದರ್ಶ ಅನುಕರಣೀಯವಾಗಬೇಕು ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹೇಳಿದ್ದಾರೆ. ಪಟ್ಟಣದ ನೂತನ ಮಹಾತ್ಮಗಾಂಧಿ ಬಡಾವಣೆ, ನಾಗೇಂದ್ರಶ್ರೇಷ್ಠಿ ಉದ್ಯಾನವನ, ಗಾಂಧಿ ಸೇವಾ ಸಂಘವನ್ನು ಉದ್ಗಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಆದರ್ಶಗಳು ಮರೆಯಾಗಿವೆ, ಭ್ರಷ್ಟಾಚಾರ ಮೇರೆ ಮೀರಿದೆ ಇದು ಪ್ರಜಾ ತಾಂತ್ರಿಕ ವ್ಯವಸ್ಥೆ ಸುಲಲಿತವಾಗಿ ನಡೆಯಲು ಅಡ್ಡಿಯಾಗಿದೆ ಎಂದರು. ಗಾಂಧಿ ಹುಟ್ಟಿದ ಈ ನಾಡಿನಲ್ಲಿ ನ್ಯಾಯ-ನೀತಿ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ದೇಶದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮ ಸಾಕ್ಷಿಯಾಗಿದೆ, ಅಯೋಧ್ಯೆ ತೀರ್ಪು ಸರ್ವಸಮ್ಮತವಾಗಿ ಪ್ರಕಟಗೊಳ್ಳುವ ಮೂಲಕ ನ್ಯಾಯಾಂಗದ ಸುಭದ್ರತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು. ಇವತ್ತಿನ ದಿನಗಳಲ್ಲಿ ನಮ್ಮೆದುರು ಕಠಿಣ ಸನ್ನಿವೇಶಗಳಿವೆ, ಆಂತರಿಕ ವ್ಯವಸ್ಥೆಯಲ್ಲಿ ಅನುಕೂಲಕ್ಕೆ ತಕ್ಕಂತೆ ಅಧಿಕಾರಗಳನ್ನು ಬಳಸಿಕೊಳ್ಲುತ್ತಿರುವುದರಿಂದ ಕ್ಷುಲ್ಲುಕ ವಿಚಾರಗಳು ಪ್ರಾಧಾನ್ಯತೆ ಪಡೆಯುತ್ತಿರುವುದರಿಂದ ಸಾಧನೆಗಳೆಲ್ಲ ಮಂಕಾಗುತ್ತಿವೆ ಎಂದು ವಿಷಾಧಿಸಿದರು. ಜಗತ್ತಿನ ಬಹುದೊಡ್ಡ ಪ್ರಜಾತಾಂತ್ರಿಕ ರಾಷ್ಟ್ರವೆಂಬ ಹೆಗ್ಗಳಿಕೆಯ ಭಾರತದ ಮಾನ ಕಾಮನ್ ವೆಲ್ತ್ ಗೇಮ್ ಸಂಘಟಿಸುವಲ್ಲಿನ ಭ್ರಷ್ಟಾಚಾರದ ಮೂಲಕ ಹರಾಜಾಗಿದೆ ಇದು ದುರಾದೃಷ್ಟಕರ, ಗಾಂಧಿ ಹುಟ್ಟಿದ ಈ ದೇಶದಲ್ಲಿ ದುರಾಸೆಗೆ, ಸ್ವಾರ್ಥಕ್ಕೆ ಅವಕಾಶ ಕಲ್ಪಿಸಬಾರದು. ದುರಾಸೆಯನ್ನು ಮೆಟ್ಟಿ ನಿಲ್ಲುವ ಮೂಲಕ ಪಾವಿತ್ರ್ಯತೆಯನ್ನು ತರಬೇಕಾಗಿದೆ ಎಂದರು. ರಾಜ್ಯದಲ್ಲಿ ಬಡವರು ಹಾಗೂ ರೈತರ ಹೆಸರಿನಲ್ಲಿ ಸರ್ಕಾರದ ಸಚಿವರೆ ನಕಲಿ ಕಂದಾಯ ದಾಖಲೆಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ಹಣ ನುಂಗಿದ್ದಾರೆ ಈ ಬಗ್ಗೆ ನಾನು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ಈಗ ಅವೆಲ್ಲ ಬಹಿರಂಗವಾಗುತ್ತಿವೆ, ತಪ್ಪು ಮಾಡಿದವರಿಗೆ ತಡವಾಗಿಯಾದರೂ ಶಿಕ್ಷೆಯಾಗಲೇ ಬೇಕು ಆ ಮೂಲಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಚಿಲುಮೆ ಮಠದ ಶ್ರೀ ಜಯದೇವಸ್ವಾಮಿಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅರೆಮಾದನಹಳ್ಳಿ ಮಠದ ಶ್ರೀ ಗುರುಶಿಸುಜ್ಞಾನ ಸ್ವಾಮಿಜಿ, ಕಾಗಿನೆಲೆ ಗುರುಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ,ಆಶೀರ್ವಚನ ನೀಡಿದರು. ರಾಜ್ಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಂಚೀರಾಯ ಪ್ರೌಢಶಾಲೆಯ ಶಿಕ್ಷಕ ಕೆ ಗಂಗಾಧರಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಪ.ಪಂ. ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ರಮೇಶ್, ಸದಸ್ಯ ಶಂಕರಯ್ಯ, ಶಶಿಕುಮಾರ್, ಜನಾರ್ಧನಗುಪ್ತ, ಎ. ಜಿ ರಾಮನಾಥ್ ಉಪಸ್ಥಿತರಿದ್ದರು. ಗಾನಕಲಾ ಸಂಘದ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

1 ಕಾಮೆಂಟ್‌:

Guruprasad ಹೇಳಿದರು...

ವರದಿಗಾರರೆ ತಮ್ಮ ವಿಳಾಸ ಸಂಪರ್ಕ ಸಂ ಕ್ಯೆ ಯನ್ನು ದಯವಿಟ್ಟು ತಿಳಿಸಿ.ನನ್ನ ದೂರವಾಣಿ ಸಂಕ್ಯೆ8762929900
ಇ ಮೈಲ್ Guruprasad.xyz@gml.com