ಮಂಗಳವಾರ, ಏಪ್ರಿಲ್ 6, 2010

GANESH WITH MUMBAI BEAUTIES


ಯುವಿಕಾ ಚೌಧರಿ, ಅಂಜನಾ ಸುಖಾನಿಯಂಥಾ ಬಾಲಿವುಡ್ ಬೆಡಗಿಯರ ಜೊತೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಳೆಯಲಿ ಜೊತೆಯಲಿ ನೆನೆದಿದ್ದು ಗೊತ್ತೇ ಇದೆ. ಅದೇ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಈಗ ಮತ್ತೆ ಬಾಲಿವುಡ್ ಬೆಡಗಿಯರ ಜೊತೆ ಮೈ ಕುಣಿಸುವ ಯೋಗ ಬಂದಿದೆ. ಗಣೇಶ್ ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ತುಂಟ ತುಂಟಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಲೇಖಾ ವಾಷಿಂಗ್ಟನ್ ಹಾಗೂ ಇಶಿತಾ ಶರ್ಮಾ ಎಂಬಿಬ್ಬರು ಬಾಲಿವುಡ್ ಲಲನಾಮಣಿಯರು ಜೊತೆಯಾಗುತ್ತಿದ್ದಾರೆ. ಇದೇ ಎಪ್ರಿಲ್‌ನಿಂದ ತುಂಟ ತುಂಟಿ ಚಿತ್ರೀಕರಣ ಆರಂಭವಾಗಲಿದೆ.

ಇಶಿತಾ ಶರ್ಮಾ ನಾಯಕಿಯಾಗಿ ನಟಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಕೆಲವು ಆಟಕ್ಕುಂಟು ಲೆಕ್ಕಕ್ಕಿಲ್ಲದಂಥಾ ಬಾಲಿವುಡ್ ತೋಪು ಚಿತ್ರಗಳಲ್ಲಿ ನಟಿಸಿದ ಇಸಿತಾ ಈ ಬಾರಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಹಾಗಾಗಿ ಇದು ಆಕೆಯ ಜೀವನದಲ್ಲೊಂದು ಮಹತ್ವದ ಮೈಲುಗಲ್ಲು.

ಇಶಿತಾಗೆ ಇಂದ್ರಜಿತ್ ಅವರು ಚಿತ್ರದ ಕಥೆಯನ್ನು ವಿವರಿಸಿದಾಗ ಖುಷಿಯೋ ಖುಷಿಯಂತೆ. ಇಂದ್ರಜಿತ್ ಹೇಳಿದ ಕಥೆ ತುಂಬಾ ಚೆನ್ನಾಗಿತ್ತು. ನಾನು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದೇನೆ. ಜೊತೆಗೆ ಕನ್ನಡವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನಾನು ಸಿನಿಮಾ ಕುಟುಂಬದಿಂದ ಬಂದಿಲ್ಲ. ನನ್ನ ಕುಟುಂಬಕ್ಕೆ ಸಿನಿಮಾ ರಂಗ ಹೊಸತು. ಆದರೂ ನನ್ನ ಕುಟುಂಬದವರು ನನ್ನ ಈ ಆಯ್ಕೆಗೆ ತುಂಬ ಸಂತೋಷ ಹೊಂದಿದ್ದಾರೆ ಎಂದು ಇಶಿತಾ ನುಡಿದರು.

ಲೇಖಾ ವಾಷಿಂಗ್ಟನ್ ಮಾಜಿ ಐಪಿಎಲ್ ನಿರೂಪಕಿ. ಈಗ ಸದ್ಯ ಅಂಡಮಾನ್ ನಿಕೋಬಾರ್‌ನಲ್ಲಿ ವೀಟರ್ ಗಯಾ ಕಾಮ್ ಸೇ ಎಂಬ ಹಿಂದಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾಳೆ. ಜೊತೆಗೆ ಕನ್ನಡ ತುಂಟ ತುಂಟಿಗೂ ಒಕೆ ಅಂದಿದ್ದಾಳೆ. ಆದರೂ ತುಂಟ ತುಂಟಿಯ ಬಗ್ಗೆ ಚಕಾರವೆತ್ತದೆ ತುಟಿಪಿಟಿಕ್ಕೆನ್ನದೆ ಕೂತಿದ್ದಾಳೆ. ಕೇಳಿದರೆ, ಈಗ ಚಿತ್ರದ ಬಗ್ಗೆ ಮಾತಾಡುವ ಹಕ್ಕು ನನಗಿಲ್ಲ. ಮಾತಾಡುವ ಅವಕಾಶ ಸೃಷ್ಟಿಯಾದಾಗ ಮಾತಾಡುತ್ತೇನೆ ಎನ್ನುತ್ತಾಳೆ ಈ ಬೆಡಗಿ.

ಈಗಷ್ಟೇ ತೆಲುಗು ಚಿತ್ರ 'ವೇದಂ'ನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾಳೆ. ನನ್ನ ತೆಲುಗು ಚಿತ್ರ ಒಂದು ಉತ್ತಮ ಪ್ರಾಜೆಕ್ಟ್. ಇದೀಗ ಕನ್ನಡ ಚಿತ್ರದಲ್ಲೂ ಅವಕಾಶ ಬಂದಿದೆ. ಹಿಂದಿಯಲ್ಲೂ ನಟಿಸುತ್ತಿದ್ದೇನೆ. ಐಪಿಎಲ್‌ನಲ್ಲಿ ಆಂಕರ್ (ನಿರೂಪಕಿ) ಆಗಿ ಕೆಲಸ ಮಾಡಿದ ನಂತರ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸೃಷ್ಟಿಯಾಯಿತು. ಸಿನಿಮಾದ ಹಿನ್ನೆಲೆ ಇಲ್ಲದ, ದಕ್ಷಿಣದ ಮಂದಿಗೆ ಬಾಲಿವುಡ್‌ಗೆ ಎಂಟ್ರಿಯಾಗೋದು ತುಂಬ ಕಷ್ಟ ಎನ್ನುತ್ತಾಳೆ ಈ ಬೆಡಗಿ ಲೇಖಾ.

ಕಾಮೆಂಟ್‌ಗಳಿಲ್ಲ: