ಮಂಗಳವಾರ, ಏಪ್ರಿಲ್ 6, 2010

ANUSHKA - SHAHID KAPOOR

ಶಾಹಿದ್ ಕಪೂರ್ ಎಂಬ ಬಾಲಿವುಡ್ ಸುರಸುಂದರಾಂಗ ದಿನದಿಂದ ದಿನಕ್ಕೆ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಗಾಸಿಪ್, ಸಿನಿಮಾ, ಡ್ಯಾನ್ಸ್ ಹೀಗೆ ಎಲ್ಲ ವಲಯದಲ್ಲೂ ಸಾಕಷ್ಟು ಸುದ್ದಿ ಮಾಡುವ ಶಾಹಿದ್ ಇದೀಗ ತಾನು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂದು ಸಾಬೀತು ಪಡಿಸಿದ್ದಾರೆ.

ಹೌದು. ಸದ್ಯ ಶಾಹಿದ್ ಹಾಗೂ ಬೆಂಗಳೂರಿನ ಚೆಲುವೆ ಅನುಷ್ಕಾ ಶರ್ಮಾ ಜೋಡಿಯ ಬದ್ಮಾಶ್ ಕಂಪನಿ ಎಂಬ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣ ನಡೆಯುವ ಸಂದರ್ಭ, ಶಾಹಿದ್ ಅನುಷ್ಕಾ ವಿಶಾಲವಾದ ಹಾಲ್ ಒಂದರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಹಾಲ್‌ನ ಮೇಲೆ ಇದ್ದ ಗಾಜುಗಳ ಅಲಂಕೃತ ಬೃಹತ್ ದೀಪ ಹಠಾತ್ ನೆಲಕ್ಕೆ ಉರುಳಿತು. ಉರುಳುತ್ತಿರುವ ಸಂದರ್ಭವೇ ಜಾಗೃತನಾದ ಶಾಹಿದ್ ತನ್ನ ಜೊತೆಗೆ ಅನುಷ್ಕಾಳನ್ನೂ ಹಿಡಿದೆಳೆದ. ಇಬ್ಬರೂ ದೂರ ಬಿದ್ದರು. ಕೂದಲೆಳೆಯ ಅಂತರದಲ್ಲಿ ಇಬ್ಬರೂ ಭಾರೀ ಅವಘಡವೊಂದರಿಂದ ಪಾರಾದರು! ಆ ಮೂಲಕ ಶಾಹಿದ್ ಮತ್ತೆ ರಿಯಲ್ ಹೀರೋ ಆಗಿಬಿಟ್ಟ!!!
ಅನುಷ್ಕಾಗಂತೂ ಎದೆ ಢವಢವ. ಆ ವಿದ್ಯುದ್ದೀಪ ಬಿದ್ದಿದ್ದರೆ ಖಂಡಿತಾ ಭಾರೀ ಪೆಟ್ಟಾಗುತ್ತಿತ್ತು. ಜೀವ ಸಹಿತ ಉಳಿಯುವುದೇ ಕಷ್ಟ. ಯಾಕೆಂದರೆ ಅದು ಅಷ್ಟು ಚೂಪಾಗಿತ್ತು. ಆದರೆ ಶಾಹಿದ್ ಮಿಂಚಿನ ವೇಗದಲ್ಲಿ ನನ್ನನ್ನು ಹಿಡಿದೆಳೆದ. ಒಂದು ಕ್ಷಣ ನನಗೇನಾಗುತ್ತಿದೆ ಅಂತಾನೇ ಅರ್ಥವಾಗಲಿಲ್ಲ. ಶಾಹಿದ್ ನನ್ನ ಪ್ರಾಣ ಉಳಿಸಿದ. ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಅನುಷ್ಕಾ ಹೇಳುತ್ತಾಳೆ.

ಆದರೆ ಶಾಹಿದ್ ಇದೇ ಮೊದಲ ಬಾರಿಗೆ ಹೀಗೆ ಮಾಡಿದ್ದಲ್ಲ. ಹಿಂದೆಯೂ ಶಾಹಿದ್ ಹೀಗೆ ಮಾಡಿದ ಉದಾಹರಣೆಯಿದೆ. ಈ ಹಿಂದೆ ಪ್ರಿಯಾಂಕಾ ಛೋಪ್ರಾ ಜೊತೆ ಕಮೀನೇ ಚಿತ್ರದಲ್ಲಿ ನಟಿಸುತ್ತಿದ್ದಾಗ, ಪ್ರಿಯಾಂಕಾ ಅಕಸ್ಮಾತಾಗಿ ಶೂಟಿಂಗ್ ಸಮಯದಲ್ಲಿ ಬೈಕ್‌ನಿಂದ ಬಿದ್ದಳಂತೆ. ಆಗ ಅದೇ ಸಮಯಕ್ಕೆ ಜಾಗೃತನಾದ ಶಾಹಿದ್ ಆಕೆ ನೆಲದ ಮೇಲೆ ಬೀಳುವುದನ್ನು ತಪ್ಪಿಸಿ ತನ್ನ ಬಾಹುಗಳನ್ನೇ ಆಕೆಗೆ ಆಧಾರವಾಗಿ ನೀಡಿದನಂತೆ. ಹೀಗಾಗಿ ಪ್ರಿಯಾಂಕಾರ ಮುಖ ನೆಲಕ್ಕೆ ಬಡಿದು ಗಾಯಗಳಾಗುವುದು ತಪ್ಪಿತ್ತು. ಸಿನಿಮೀಯ ಮಾದರಿಯಲ್ಲಿ ಪ್ರಿಂಯಾಂಕಾರನ್ನು ಹೀಗೆ ರಕ್ಷಿಸಿದ ಮೇಲೆ ಪ್ರಿಯಾಂಕಾ- ಶಾಹಿದ್ ನಡುವೆ ಏನೋ ಇದೆ ಎಂದು ಗಾಸಿಪ್ ಹರಡಿದ್ದು ಸುಳ್ಳಲ್ಲ. ಅದೇನೇ ಇರಲಿ, ಇದೆಲ್ಲ ಹಳೇ ಕಥೆ.

ಒಟ್ಟಾರೆ ಶಾಹಿದ್ ರೀಲ್ ಮಾತ್ರ ಅಲ್ಲ, ರಿಯಲ್ ಹೀರೋ ಎನ್ನೋಣವೇ!

ಕಾಮೆಂಟ್‌ಗಳಿಲ್ಲ: