ಅರಕಲಗೂಡು: ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದ ರೈತ ನಿರೀಕ್ಷಿಸಿದ ಫಸಲು ಬರದೇ ಕಂಗೆಟ್ಟು ಹೋಗಿರುವಾಗಲೇ ಪ್ರಮುಖ ಆಹಾರ ಬೆಳೆಯಾದ ರಾಗಿ ಬೆಳೆಗೆ ಹಸಿರು ಹುಳುವಿನ ಕಾಟ ಉಂಟಾಗಿದ್ದು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ತಾಲೂಕಿನ ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳ ರಾಗಿ,ಅವರೇಕಾಳು, ತಡಣಿಕಾಳು ಬೆಳೆಗೆ ಹಸಿರು ಹುಳುವಿನ ಕಾಟ ದಟ್ಟವಾಗಿ ಹರಡಿದ್ದು 2-3ದಿನಗಳಲ್ಲೆ ಫಸಲನ್ನು ಹಾಳುಮಾಡುತ್ತಿವೆ. ತಾಲೂಕಿನಲ್ಲಿ ಮೊದಲ ಭಾರಿಗೆ ಈ ಮಾಹಿತಿ ಅನುಸರಿಸಿ ರಾಮನಾಥಪುರ ಹೋಬಳಿಯ ಮಲ್ಲಾಪುರ, ಗಂಗೂರು, ರಾಗಿಮರೂರು, ಲಕ್ಕೂರು ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿದ್ದ ಅರಕಲಗೂಡು ಪೊಟ್ಯಾಟೋ ಕ್ಲಬ್ ನ ಯೋಗಾರಮೇಶ್ ಈ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಕೃಷಿ ಮಾಹಿತಿಗಾಗಿ ತಾಲೂಕಿನಲ್ಲಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್ ಗೆ ಬಂದ ಮಾಹಿತಿ ಅನುಸರಿಸಿ ಗ್ರಾಮಗಳಿಗೆ ಕೃಷಿ ತಜ್ಞರೊಂದಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆಗಳನ್ನು ಆಲಿಸಿ ಕೃಷಿ ತಜ್ಞರಾದ ಡಾ|| ರಾವುಲ್, ಡಾ|| ಅರುಣಕುಮಾರ್ ಅವರನ್ನು ಸಂಪರ್ಕಿಸಿ ಹಸಿರು ಹುಳು ನಿವಾರಣೆಗೆ ಪರಿಹಾರೋಪಾಯ ಸೂಚಿಸಿದರು. ಈ ಹಿಂದೆ ಟೊಬ್ಯಾಕೋ, ಶುಂಠಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆದ ಭೂಮಿಯಲ್ಲಿ ರಾಗಿ ಬೆಳೆದಾಗ ಇಂತಹ ಸಮಸ್ಯೆ ಕಂಡು ಬಂದಿದೆ ಎನ್ನಲಾಗುತ್ತಿದೆ. ಈ ಭಾಗದ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ರಾಗಿ ಬೆಳೆ ಹಸಿರು ಹುಳುವಿನ ಕಾಟಕ್ಕೆ ತುತ್ತಾಗಿದೆ. ಪ್ರತೀ ಎಲೆಯ ಮೇಲೂ 3-4ಹುಳುಗಳೂ ಹರಿದಾಡುತ್ತಿದ್ದು 3-4ದಿನದಲ್ಲಿ ಬುಡಸಮೇತ ಬೆಳೆಯನ್ನು ತಿಂದು ಹಾಕುತ್ತಿವೆ. ರೇಷ್ಮೇ ಹುಳುವಿನ ಮಾದರಿಯಲ್ಲಿ ರೂಪಾಂತರ ಹೊಂದುತ್ತಿರುವ ಇದು ಅಂತಿಮ ಹಂತದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಹುಳುಗಳ ನಿವಾರಣೆಗೆ ರೈತರು ತಮಗೆ ತೋಚಿದ ರೀತಿಯಲ್ಲಿ ಔಷಧ ಸಿಂಪಡಿಸಿದ್ದಾರಾದರೂ ಹುಳುವಿನ ಹತೋಟಿ ಆಗಿಲ್ಲ. ಆದರೆ ಪೊಟ್ಯಾಟೋ ಕ್ಲಬ್ ನ ಕೃಷಿ ತಜ್ಞರಾದ ಡಾ|| ರಾವುಲ್ ಗೊಬ್ಬರದ ಅಂಗಡಿಗಳಲ್ಲಿ ದೊರೆಯುವ ಕ್ರಿಮಿನಾಶಕಗಳಾದ ಲ್ಯಾನೆಟ್ ಪೌಡರಿನೊಂದಿಗೆ ನಿರ್ದಿಷ್ಠ ಪ್ರಮಾಣದ ನೀರನ್ನು ಸೇರಿಸಿ ಸಿಂಪರಣೆ ಮಾಡಬಹುದು ಅದೇ ರೀತಿ ಆವಂತ್ 1ಲಿ. ಗೆ 0.5ಗ್ರಾಂ ನೀರು ಬೆರೆಸಿ ಸಿಂಪರಣೆ ಮಾಡಿದಲ್ಲಿ ಹುಳುವಿನ ನಿವಾರಣೆ ಆಗುವುದು ಎಂದು ತಿಳಿಸಿದ್ದಾರೆ. ಎಲ್ಲ ಕ್ರಿಮಿನಾಶಕ ಮಾರಾಟದ ಅಂಗಡಿಗಳಲ್ಲೂ ಈ ಕ್ರಿಮಿನಾಶಕಗಳು ಲಭ್ಯವಿದೆ ರೈತರಿಗೆ ಹೆಚ್ಚಿನ ಮಾಹಿತಿ ಬೇಕಾದರೆ ಪೊಟ್ಯಾಟೋ ಕ್ಲಬ್ ನ ಮೊಬೈಲ್ ಸಂಖ್ಯೆ 9141573331ಕ್ಕೆ ಕರೆ ಮಾಡಬಹುದು ಎಂದು ಯೋಗಾರಮೇಶ್ ಹೇಳಿದ್ದಾರೆ. ಕ್ರಿಮಿನಾಶಕ ಮಾರಾಟಗಾರರಾಗಲು ನಿರ್ದಿಷ್ಠವಾಗಿ ತಿಳುವಳಿಕೆ ಇರುವಂತೆ ಕೃಷಿ ಪಧವೀಧರರಿಗೆ ಮಾತ್ರ ಲೈಸೆನ್ಸ್ ನೀಡಿದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಯೋಗಾರಮೇಶ್ ಅಭಿಪ್ರಾಯಪಟ್ಟರು.
ಕೃಷಿಅಧಿಕಾರಿಗಳ ಭೇಟಿ: ಪೊಟ್ಯಾಟೋ ಕ್ಲಬ್ ನ ತಂಡ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿದ ಮೇಲೆ ಎಚ್ಚೆತ್ತುಕೊಂಡಿರುವ ತಾಲೂಕು ಕೃಷಿ ಅಧಿಕಾರಿಗಳ ತಂಡ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೆಲ ತಜ್ಞರೊಂದಿಗೆ ಹಸಿರು ಹುಳು ಕಾಟವಿರುವ ಕೃಷಿ ಜಮೀನುಗಳಿಗೆ ಭೇಟಿ ನೀಡಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ