ಗುರುವಾರ, ಅಕ್ಟೋಬರ್ 21, 2010

ಉದ್ಯೋಗ ಖಾತ್ರಿ ಅಕ್ರಮ ಸಾಬೀತು:18ಗ್ರಾ.ಪಂ.ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸೂಚನೆ

ಅರಕಲಗೂಡು:ತಾಲೂಕಿನ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ ಎಸಗಿದ್ದ 18ಗ್ರಾಮಪಂಚಾಯ್ತಿ ಗಳ ಕಾರ್ಯದರ್ಶಿಗಳು ಹಾಗೂ ಮೂವರು ಅಧಿಕಾರಿಗಳ ವಿರುದ್ದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ತಕ್ಷಣವೇ ಕ್ರಿಮಿನಲ್ ಕೇಸು ದಾಖಲಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶ ನೀಡಿದ್ದಾರೆ.
ಈ ಬಗ್ಗೆ ವಾರದ ಹಿಂದೆಯೇ ಪ್ರಧಾನ ಕಾರ್ಯದರ್ಶಿಯವರು ಬರೆದಿರುವ ಪತ್ರ ಆದೇಶ ಸಂಖ್ಯೆ:ಗ್ರಾ.ಅ.ಪ.ಇ/24/ಉ.ಖಾ.ಯೋ-08, ದಿ:8-10-2010ರಲ್ಲಿ ತಾಲೂಕಿನಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮ ದೃಢಪಟ್ಟಿದ್ದು ಈಗಾಗಲೇ ಅಮಾನತು ಗೊಂಡಿರುವ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಕಿರಿಯ ಅಭಿಯಂತರ ಸೇರಿದಂತೆ 18ಗ್ರಾ.ಪಂ.ಗಳ ಕಾರ್ಯದರ್ಶಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಲಾಗಿದೆ. ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಖುದ್ದು ತಾಲೂಕಿಗೆ ಆಗಮಿಸಿದ್ದ ಪ್ರಧಾನ ಕಾರ್ಯದರ್ಶಿಯವರು ಹೆಚ್ಚಿನ ತನಿಖೆಗಾಗಿ ತನಿಖಾ ತಂಡಗಳನ್ನು ರಚಿಸಿದ್ದರು. ಸದರಿ ತನಿಖಾ ತಂಡ ಮತ್ತ ಸಾಮಾಜಿಕ ಲೆಕ್ಕ ಪರಿಶೋಧನಾ ತಂಡಗಳು ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿದ್ದ ಮದ್ಯಂತರ ವರದಿ ಹಾಗೂ ಹಾಸನ ಜಿ.ಪಂ. ಮುಖ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ನೀಡಿದ ಮೇಲು ವರದಿಯನುಸಾರ ತಾಲೂಕಿನ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು, ಹೊಳಲಗೋಡು, ಚಿಕ್ಕಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯ್ತಿಗಳಲ್ಲಿ ಅಕ್ರಮ ಮತ್ತು ಭ್ರಷ್ಠಾಚಾರಗಳು ಕಂಡುಬಂದಿದ್ದು ಯೋಜನಾನುಷ್ಠಾನದಲ್ಲಿ ತೀವ್ರ ಲೋಪವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾರ್ಯದರ್ಶಿಗಳು ಮತ್ತು ಅಮಾನತುಗೊಂಡಿರುವ ಅಧಿಕಾರಿಗಳ ವಿರುದ್ದ ತಕ್ಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಿ ಅವಶ್ಯಕ ಕ್ರಮ ಜರುಗಿಸಲು ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಉಳಿದ 11ಗ್ರಾಮ ಪಂಚಾಯ್ತಿಗಳಲ್ಲಿನ ಯೋಜನಾನುಷ್ಠಾನ ಕುರಿತು ತನಿಖೆ ಪ್ರಗತಿಯಲ್ಲಿದ್ದು ಸದರಿ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದವೂ ಕ್ರಮ ಜರುಗಿಸುವ ಸಾಧ್ಯತೆ ಇದೆ. ಅಕ್ರಮದಲ್ಲಿ ಹಣ ಬಿಡುಗಡೆ ಮಾಡಲು ಕಾರ್ಯದರ್ಶಿಗಳ ಜೊತೆ ಜಂಟಿ ಖಾತೆಗೆ ಸಹಿ ಹಾಕಿರುವ ಹಿಂದಿನ ಗ್ರಾ.ಪಂ ಅಧ್ಯಕ್ಷರುಗಳ ವಿರುದ್ದವೂ ಸಹಾ ಕ್ರಮ ಜರುಗಿಸುವ ನಿರೀಕ್ಷೆಯಿದೆ.
ಅರಕಲಗೂಡು: ಕ್ಷೇತ್ರದ ಶಾಸಕ ಎ. ಮಂಜು ಕಾಂಗ್ರೆಸ್ ತೊರೆಯುವುದಿಲ್ಲ ಈ ಬಗ್ಗೆ ಬರುತ್ತಿರುವ ಸುದ್ದಿಗಳು ಸುಳ್ಳು ಎಂದು ತಾಲೂಕು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಎ. ಮಂಜು ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ದಟ್ಟ ಸುದ್ದಿಗಳ ಹಿನ್ನೆಲೆಯಲ್ಲಿ  ಕಳವಳಕ್ಕೀಡಾದ ಸ್ಥಳೀಯ ಮುಖಂಡರಾದ ಕಬ್ಬಳಿಗೆರೆ ಬೈರೇಗೌಡ, ಬ್ಲಾಕ್ ಕಾಂಗೈ ಅಧ್ಯಕ್ಷ ಕೀರ್ತಿರಾಜು ಮತ್ತಿತರರು ದಿಡೀರ್ ಪತ್ರಿಕಾ ಗೋಷ್ಠಿ ನಡೆಸಿದರು. ಶಾಸಕ ಮಂಜು ಜೊತೆ ಕಾಂಗ್ರೆಸ್ ಪಕ್ಷದ ಮಖಂಡರುಗಳು ನಿರಂತರ ಸಂಪರ್ಕದಲ್ಲಿದ್ದು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಮಾದ್ಯಮಗಳಲ್ಲಿ ಬರುತ್ತಿರುವ ಸುದ್ದಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಹೇಳಿದ್ದಾರೆಂದು ಪಕ್ಷದ ಅಧ್ಯಕ್ಷ ಕೀರ್ತಿರಾಜ್ ಸ್ಪಷ್ಠಪಡಿಸಿದರು. ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್  ಸಾರಿರುವ ಸಮರದಲ್ಲಿ ಮಂಚೂಣಿಯಲ್ಲಿರುವ ನಮ್ಮ ನಾಯಕ ಮಂಜು ವಿರುದ್ದ ಆಗದವರು ಗಾಳಿ ಸುದ್ದಿ ಹಬ್ಬಿಸಿದ್ದಾರೆ, ಕಾರ್ಯಕರ್ತರಲ್ಲಿ ಶಂಕೆ ಹುಟ್ಟುವಂತೆ ಮಾಡಿದ್ದಾರೆ ಆದರೆ ಇದನ್ನೆಲ್ಲಾ ನಂಬಬಾರದೆಂದು ಅವರು ಮನವಿ ಮಾಡಿದರು. ಕಬ್ಬಳಿಗೆರೆ ಬೈರೇಗೌಡ ಮಾತನಾಡಿ ರೆಸಾರ್ಟ್ ರಾಜಕೀಯ ಬಿಜೆಪಿಯಿಂದ ಆರಂಭವಾಗಿದೆ, ಎ. ಮಂಜು ಪಕ್ಷ ತೊರೆಯುತ್ತೇನೆಂದು ಎಲ್ಲಿಯೂ ಹೇಳಿಲ್ಲ ಪಕ್ಷಕ್ಕೆ ಸೆಳೆಯುವ ದುರುದ್ದೇಶದಿಂದ ಬಿಜೆಪಿ ಕುತಂತ್ರ ನಡೆಸಿದೆ ಎಂದು ಕಿಡಿಕಾರಿದ ಅವರು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಅತೀಭ್ರಷ್ಠ ಹಾಗೂ ಅತೀ ಕೆಟ್ಟ ಸರ್ಕಾರ ಇದನ್ನು ತೊಲಗಿಸುವುದೇ ನಮ್ಮ ಗುರಿಯಾಗಿದೆ ಆದ್ದರಿಂದ ಶಾಸಕ ಮಂಜು ನೇತೃತ್ವದಲ್ಲಿ ಇದೇ. ಅ.23ರಂದು ಸಾರ್ವಜನಿಕವಾಗಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಯುವ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು ಅಲ್ಲಿಗೆ ಎ. ಮಂಜು ಹೋಗಲು ಸಾಧ್ಯವಿಲ್ಲ ಆರಂಭದಲ್ಲೇ ಬಿಜೆಪಿ ಆಮಿಷವೊಡ್ಡಿ ಸೆಳೆಯಲು ಯತ್ನಿಸಿತ್ತು ಆದರೆ ಮಂಜು ಆಮಿಷಕ್ಕೆ ಬಲಿಯಾಗಲಿಲ್ಲ ಮುಂದಿನ ದಿನಗಳಲ್ಲೂ ಇದಕ್ಕೆಲ್ಲ ಸೊಪ್ಪುಹಾಕುವುದಿಲ್ಲ ಎಂದರು. ಗೋಷ್ಠಿಯಲ್ಲಿ ಮುಖಂಡರಾದ ಚೌಡೇಗೌಡ,ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಮೇಶ್ ಮುತ್ತಿಗೆ,ಯುವ ಕಾಂಗೈ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಅನ್ಸರ್ ಪಾಶ ಹಾಜರಿದ್ದರು

ಕಾಮೆಂಟ್‌ಗಳಿಲ್ಲ: