ಭಾನುವಾರ, ಸೆಪ್ಟೆಂಬರ್ 19, 2010

ಉದ್ಯೋಗ ಖಾತ್ರಿ ಕೂಲಿ ಬಿಡುಗಡೆಗೆ ಎಟಿಆರ್ ಆಗ್ರಹ

ಅರಕಲಗೂಡು/ಕೊಣನೂರು: ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ ಉದ್ಯೋಗ ಖಾತ್ರಿ ಕಾಮಗಾರಿ ಕೂಲಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಗ್ರಹಿಸಿದ್ದಾರೆ.
ಕೊಣನೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ತಾಲೂಕಿನಲ್ಲಿ 150ಕೋಟಿ ರೂಪಾಯಿಗಳಿಗೆ ಅಕ್ರಮವಾಗಿ ಎಂಬಿ ಬರೆದು ಕ್ರಿಯಾ ಯೋಜನೆ ಅನುಮೋದನೆ ಪಡೆಯದೇ ಸಪ್ಲೈ ಬಿಲ್ ಪಡೆದಿರುವ ಅಧಿಕಾರಿಗಳು ಮಸ್ಟರ್ ರೋಲ್ ತಯಾರಿಸಲು ಹಿಂದೇಟು ಹಾಕುತ್ತಿದ್ದಾರೆ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿರುವ ಕೂಲಿಕಾರರಿಗೆ ಕಳೆದ 6-7ತಿಂಗಳಿನಿಂದ ಕೂಲಿ ಪಾವತಿಯಾಗದೇ ಪರದಾಡುವಂತಾಗಿದೆ.ಅಧಿಕಾರಿಗಳು ಎಂಬಿ ಬರೆದು ಸಪ್ಲೈ ಬಿಲ್ ಪಡೆದುಕೊಂಡ ಮೇಲೆ ಕೂಲಿಕಾರರ ವೇತನವೂ ಪಾವತಿಯಾಗ ಬೇಕಲ್ಲವೇ ? ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳು ತಕ್ಷಣವೇ 150ಕೋಟಿಗೆ ಎಂಬಿ ಬರೆದಂತೆ ಮಸ್ಟರ್ ರೋಲ್ ಕೂಡ ತಯಾರಿಸಿ ಕೂಲಿಕಾರರಿಗೆ ಹಣ ಕೊಡಿಸಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದರು. ಜಾಬ್ ಕಾರ್ಡಿಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಿದಲ್ಲಿ ಕೇವಲ 22.80ಕೋಟಿ ವೆಚ್ಚ ಮಾಡಲು ಸಾಧ್ಯ. ಹೀಗಿರುವಾಗ 150ಕೋಟಿ ಅಂದಾಜ ಪಟ್ಟಿ ತಯಾರಿಸಿರುವ ಅಧಿಕಾರಿಗಳು 'ಅಭಿವೃದ್ದಿ' ಯನ್ನು ಚೆನ್ನಾಗಿಯೇ ಮಾಡಿದ್ದಾರೆ, ಕೆಲಸ ನಿರ್ವಹಿಸಿರುವ ಕೂಲಿ ಕಾರ್ಮಿಕರು ಮಾತ್ರ ಕೂಲಿ ಇಲ್ಲದೇ ನಿರಾಶರಾಗಿದ್ದಾರೆ ಎಂದು ಕಟಕಿಯಾಡಿದರು. ಅದಿಕಾರಿಗಳು ಮಾಡಿರುವ ತಪ್ಪಿನಿಂದ ಉದ್ಯೋಗ ಖಾತ್ರಿ ಹಣ ನಿಂತಿದೆ ಎಂಬ ಆರೋಪ ಕೇಳಿ ಬರುತ್ತಿದೆ, ಹಣ ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು ಕಳೆದ ಡಿಸೆಂಬರ್ ನಲ್ಲೆ ಕೇಂದ್ರ ಸರ್ಕಾರ ನಿಗದಿತ ಸಂಖ್ಯೆಗಿಂತ ದುಪ್ಪಟ್ಟಾಗಿದ್ದ ಉದ್ಯೋಗ ಚೀಟಿ ಹಾಗೂ ಅನಿಯಂತ್ರಿತ ವೆಚ್ಚ ಕುರಿತು ಅಧಿಕಾರಿಗಳಿಗೆ 2ಬಾರಿ ನೋಟೀಸ್ ನೀಡಿದೆ, ಅಕ್ರಮ ಮನದಟ್ಟಾಗುತ್ತಿದ್ದಂತೆ ಜನವರಿಯಿಂದ ಹಣ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರವೂ ಸೂಚಿಸಿದೆ ಆದರೂ ಸ್ವೇಚ್ಚಾಚಾರದಿಂದ ವರ್ತಿಸಿರುವ ಅಧಿಕಾರಿಗಳು ಹಣ ನಿಲುಗಡೆಗೆ ಕಾರಣರಾಗಿದ್ದಾರೆ ಈ ಕುರಿತು ಪ್ರತೀ ಹೋಬಳಿಗಳಲ್ಲೂ ಸಭೆ ನಡೆಸಿ ಜನರನ್ನು ಜಾಗೃತಗೊಳಿಸಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಶಾಸಕರಿಗೆ ಹೊಲ ಉತ್ತಿದ್ದರೆ ಕೂಲಿ ಕಾರರ ಕಷ್ಟ ತಿಳಿಯುತ್ತಿತ್ತು, ಸುಮ್ಮನೆ ಚಂಗಲು ಹೊಡೆದುಕೊಂಡು ಎಂಎಲ್ ಎ ಆಗಿದ್ರೆ ಏನು ಪ್ರಯೋಜನ? ಜೆಡಿಎಸ್ ಮುಖಂಡರ ವಿರುದ್ದ ಕರಪತ್ರ ಹೊರಡಿಸುವ ಮೂಲಕ ಷಂಡತನದ ರಾಜಕೀಯ ಮಾಡುತ್ತಿದ್ದಾರೆ, ಎಟಿಆರ್ ತಮ್ಮ ಆಸ್ತಿ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡುತ್ತಿದ್ದಾರೆ ಇದೀಗ ಸಾರ್ವಜನಿಕವಾಗಿಯೂ ನೀಡುತ್ತಿದ್ದಾರೆ ಎಂದು. ಹಿರಿಯ ರಾಜಕಾರಣಿ ಎ. ಮಂಜು ಭಾವ ಎಚ್ ಎನ್ ನಂಜೇಗೌಡರೇ, ಎ ಟಿ ರಾಮಸ್ವಾಮಿಯವರ ಪ್ರಾಮಾಣಿಕತೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಹೀಗಿರುವಾಗ ಶಾಸಕರು ಅನಗತ್ಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ, ಉದ್ಯೋ ಗಖಾತ್ರಿ ಅನುಷ್ಠಾನ ಮಾಡುವಾಗ ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸಿದ್ದಾರೆ ಆದರೆ ದುಡ್ಡುಕೊಡಿಸುವ ಯೋಗ್ಯತೆ ಇವರಿಗಿಲ್ಲ ಎಂದು ಕಿಡಿಕಾರಿದರು. ಕಾಮಗಾರಿ ನಿರ್ವಹಿಸಿದವರಿಗೆ ಕೆಲಸ ಕೊಡಬೇಡಿ ಅಂತ ಹೇಳಿಲ್ಲ, ಕರಪತ್ರ ಹಂಚಿದವರು ಏನು ಮಾಡಿದ್ದಾರೆ ಎಂಬುದು ತಿಳಿದಿದೆ ಸಾರ್ವತ್ರಿಕ ಚುನಾವಣೆ ಯನಂತರ ಪಕ್ಷದ ಬಲವರ್ಧನೆಗೊಂಡಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹೇಳಿದರು. ಮುಖಂಡ ಬೊಮ್ಮೇಗೌಡ ಮಾತನಾಡಿ ಸಾರ್ವಜನಿಕರ ಸಮಸ್ಯೆ ಕುರಿತು ಜನಸಾಮಾನ್ಯರ ಅಭಿಪ್ರಾಯಕ್ಕೆ ಮಾದ್ಯಮಗಳ ಸ್ಪಂದನೆಯಿಲ್ಲ, ಮುಖಂಡರುಗಳು ಮಾತನಾಡಿದರೆ ಮಾತ್ರ ಸುದ್ದಿ ಆಗುತ್ತಿದೆ ಇದು ಶೋಚನೀಯ ಎಂದರು. ಮುತ್ತಿಗೆ ರಾಜೇಗೌಡ ಮಾತನಾಡಿ ಎಟಿಆರ್ ಅನಾಮಧೇಯ ಪತ್ರಕ್ಕೆ ಬೆಲೆ ಕೊಡಬೇಕಾದ ಅಗತ್ಯ ಇರಲಿಲ್ಲ, ಎಟಿಆರ್ ಛಲದಿಂದಾಗಿ ಉದ್ಯೋಗ ಖಾತ್ರಿ ಯ ಅಕ್ರಮ ಬಯಲಿಗೆ ಬಂದಿದೆ ಎಂದರಲ್ಲದೇ ನೈಜವಾಗಿ ಕೆಲಸವಾಗಿದ್ದರೆ ಕೂಲಿಕಾರರ ವೇತ ನಬಿಡುಗಡೆ ಮಾಡಲಿ ಎಂದರು. ಮುಖಂಡರಾದ ಸಾದಿಕ್ ಸಾಬ್ ಮಾತನಾಡಿ ತಾಲೂಕಿನಲ್ಲಿ ಕೆಲವು ದಿನಗಳಿಂದ ಪಟ್ಟಭದ್ರ ಹಿತಾಸಕ್ತಿಯೊಂದು ಕಾರ್ಯನಿರ್ವಹಿಸುತ್ತಿದೆ, ಅಕ್ರಮವಾಗಿ ಸಂಪತ್ತು ಕ್ರೋಢೀಕರಿಸಿಕೊಂಡ ವ್ಯಕ್ತಿಯೋರ್ವ ರೈತರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಅಂತಹವರ ಕುಯುಕ್ತಿಗೆ ಯಾರೂ ಬಲಿಯಾಗಬಾರದು ಎಂದರು.

ಕಾಮೆಂಟ್‌ಗಳಿಲ್ಲ: