ಅರಕಲಗೂಡು: ಜಿಲ್ಲೆಯ ವಿವಿದೆಡೆ ಬೆಳೆಯಲಾಗಿರುವ ಆಲೂಗಡ್ಡೆ ಬೆಳೆ ಅಂಗಮಾರಿಗೆ ಸಿಲುಕಿದ್ದು ರೈತರು ಸಂಕಷ್ಟದಲ್ಲಿದ್ದಾರೆ . ಆದರೆ ತಾಲೂಕಿನಲ್ಲಿ ಪೊಟ್ಯಾಟೋ ಕ್ಲಬ್ ವತಿಯಿಂದ ವಿತರಿಸಲಾಗಿರುವ ಧೃಢೀಕೃತ ಆಲೂಗಡ್ಡೆ ಬಿತ್ತಿದ ರೈತರ ಬೆಳೆ ಅಂಗಮಾರಿಯಿಂದ ಮುಕ್ತವಾಗಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.ಇಂತಹದ್ದೊಂದು ಹರ್ಷಕ್ಕೆ ಕಾರಣವಾಗಿದ್ದು ತಾಲ್ಲೂಕಿನಲ್ಲಿ ರೈತರ ಹಿತಾಸಕ್ತಿಗಾಗಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್!. ಪಂಜಾಬ್ ರಾಜ್ಯದಿಂದ ಸುಮಾರು 5ಲಾರಿ ಲೋಡು ಧೃಢೀಕೃತ ಆಲೂಗಡ್ಡೆಯನ್ನು ಕ್ಲಬ್ ವತಿಯಿಂದ ತರಿಸಿ 600ಚೀಲ ಆಲೂಗಡ್ಡೆಯನ್ನು ಪ್ರಾಯೋಗಿಕವಾಗಿ ರೈತರಿಗೆ ನೀಡಿತ್ತು.
ಕಳೆದ 2ವರ್ಷಗಳಿಂದ ಜಿಲ್ಲೆಯ ಸುಮಾರು 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದಿದ್ದ ಆಲೂಗಡ್ಡೆ ಅಂಗಮಾರಿಗೆ ತುತ್ತಾಗಿ ನೂರಾರು ಕೋಟಿರೂ ನಷ್ಟ ಸಂಭವಿಸಿತ್ತು. ಬೆಳೆ ಕಳೆದುಕೊಂಡ ರೈತರಿಗೆ ಬೆಳೆಗೆ ಕಟ್ಟಿದ ವಿಮಾ ಹಣವಾಗಲಿ ಸರ್ಕಾರದ ಪರಿಹಾರ ಧನವಾಗಲಿ ದೊರೆಯದೇ ಹಲವು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ರಾಜ್ಯ ಸರ್ಕಾರ ಕೂಡ ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ. ಕರ್ನಾಟಕ ರಾಜ್ಯ ಬೀಜ ನಿಗಮ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದರೂ ಸಹಾ ಆಲೂಗಡ್ಡೆ ಬಿತ್ತನೆ ಬೀಜ ನಮ್ಮ ರೈತರಿಗೆ ಧೃಢೀಕೃತವಾಗಿ ಲಭ್ಯವಿರಲಿಲ್ಲ, ಪರಿಣಾಮ ರೈತನ ಗೋಳು ಕೇಳುವವರು ದಿಕ್ಕಿಲ್ಲದಂತಾಗಿತ್ತು. ಈ ಸಂಧರ್ಭದಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ರೈತರ ಸಹಕಾರದಿಂದ ಯೋಗಾರಮೇಶ್ ಪೊಟ್ಯಾಟೋ ಕ್ಲಬ್ ಗೆ ಚಾಲನೆ ನೀಡಿದರ. ಕ್ಲಬ್ ವತಿಯಿಂದ ಆಲೂ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳ ಚಿಂತನ-ಮಂಥನ ನಡೆಯಿತು. ಆಲೂಬೆಳೆ ಹಾಗೂ ಬಿತ್ತನೆ ಬೀಜದ ಪ್ರಾತ್ಯಕ್ಷಿಕೆ ಅರಿಯಲು ತಾಲೂಕಿನ ರೈತರನ್ನು ಕ್ಲಬ್ ವತಿಯಿಂದ ಪಂಜಾಬ್ ಗೆ ಕಳುಹಿಸಲಾಯಿತು. ಅಷ್ಟೇ ಅಲ್ಲ, ಅಲ್ಲಿ ಆಲೂ ಬಿತ್ತನೆ ಬೀಜ ಉತ್ಪಾದಿಸುವ ದೊಡ್ಡ ರೈತರನ್ನು , ತಜ್ಞರನ್ನು ತಾಲೂಕಿಗೆ ಕರೆಸಿ ಸ್ಥಳೀಯ ಕೃಷಿ ಅಧಿಕಾರಿಗಳ ಸಹಾಯದೊಂದಿಗೆ ದೃಶ್ಯರೂಪದ ಪ್ರಾತ್ಯಕ್ಷಿಕೆ ಮತ್ತು ರೈತರಿಗೆ ಬೆಳೆಯಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ದೇಶದ ಪ್ರಸಿದ್ದ ಕೀಟ ಶಾಸ್ತ್ರಜ್ಞ ಡಾ ರಾವುಲ್ ಮತ್ತು ವಿಜ್ಞಾನಿಗಳ ತಂಡವೂ ಕಾಲಾನುಕಾಲಕ್ಕೆ ರೈತರ ಜಮೀನುಗಳಿಗೆ ತೆರಳಿ ಬೆಳೆಯನ್ನು ಪರಿಶೀಲಿಸಿದ್ದರಲ್ಲದೇ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ತೋರಿಸಕೊಟ್ಟಿದ್ದರು. ಕ್ಲಬ್ ವತಿಯಿಂದ ಧೃಢೀಕೃತ ಆಲೂಗಡ್ಡೆ ಪಡೆದ ರೈತರಿಗೆ ಉಚಿತ ಔಷದ ಹಾಗೂ ಸ್ಪ್ರೇಯರ್ ಗಳನ್ನು ಸಹಾ ನೀಡಲಾಗಿತ್ತು. ಆಲೂಬಿತ್ತನೆ ಮಾಡುವಾಗ ಬೀಜೋಪಚಾರದಿಂದ ಹಿಡಿದು ಬೆಳೆ ಬರುವವರೆಗೂ ರೈತರು, ತಜ್ಞರು ಸೂಚಿಸಿದ ಕ್ರಮಗಳನ್ನೇ ಅನುಸರಿಸಿದ್ದರು. ಪರಿಣಾಮವಾಗಿ ಧೃಢೀಕೃತ ಬಿತ್ತನೆಯ ಆಲೂಗಡ್ಡೆ ಬೆಳೆಯ ಗಿಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ದಪ್ಪ ಸೈಜಿನ ಆಲೂಗಡ್ಡೆ ಬಿಟ್ಟಿದೆ. ಇಳುವರಿ ಅತ್ಯುತ್ತಮವಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷೆಯಲ್ಲಿರುವಾಗಲೇ ಇಲ್ಲಿ ನ ಆಲೂಗಡ್ಡೆಯನ್ನು ಕೊಳ್ಳಲು ಪಂಜಾಬ್ ರಾಜ್ಯದಿಂದ ಬೇಡಿಕೆ ಬಂದಿದೆ ಎನ್ನುತ್ತಾರೆ ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಯೋಗಾರಮೇಶ್. ಈಗಾಗಲೇ ಆಲೂಗಡ್ಡೆಯನ್ನು ಸ್ಯಾಂಪಲ್ ಆಗಿ ಪಂಜಾಬ್ ಗೆ ಕಳುಹಿಸಲಾಗಿದೆ. ಚಿಪ್ಸ್ ತಯಾರಿಸುವ ಕಂಪನಿಗಳು ಈ ಆಲೂಗಡ್ಡೆ ಕೊಳ್ಳಲು ಒಲವು ವ್ಯಕ್ತಪಡಿಸಿವೆ ಎನ್ನುತ್ತಾರೆ ಕ್ಲಬ್ ನ ಮುಖಂಡ ರಾಜೇಂದ್ರ. ಪ್ರಮಾಣೀಕರಿಸಿದ ಬೀಜದ ಆಲೂಗಡ್ಡೆ ಬೆಳೆಯ ಪಕ್ಕದಲ್ಲೇ ಪ್ರಮಾಣೀಕರಿಸದ ಕಡಿಮೆ ಬೆಲೆಯ ಆಲೂಗಡ್ಡೆ ಯನ್ನು ಇತರೆ ರೈತರು ಬೆಳೆದಿದ್ದು ಅದು ಅಂಗಮಾರಿಗೆ ತುತ್ತಾಗಿದೆ ಹಾಗೂ ಕೆಲವೆಡೆ ಕರಿಕಡ್ಡಿ ರೋಗದ ಭಾಧೆಗೆ ಬೆಳೆ ಸಿಲುಕಿದೆ. ಜಿಲ್ಲಾ ಆಡಳಿತವೂ ಸಹಾ ಈ ಬಾರಿ ಪ್ರಮಾಣೀಕೃತ/ಪ್ರಮಾಣೀಕರಿಸದ ಆಲೂಗಡ್ಡೆ ಬಿತ್ತನೆ ಬೀಜಕ್ಕೆ ವ್ಯವಸ್ಥೆ ಮಾಡಿತ್ತಾದರೂ ಹೆಚ್ಚಿನ ಮಂದಿ ಕಡಿಮೆ ಬೆಲೆಗೆ ಸಿಗುವ ಸಾಧಾರಣ ಬಿತ್ತನೆ ಬೀಜವನ್ನೆ ಪಡೆದಿದ್ದರೂ ಹಾಗೂ ಕ್ರಮಬದ್ದ ಬೇಸಾಯ ವಿಧಾನವನ್ನು ಅನುಸರಿಸದಿದ್ದುದರಿಂದ ಅಂತಹ ಬೆಳೆಗಳು ಅಂಗಮಾರಿ ಮತ್ತು ಕರಿಕಡ್ಡಿ ರೋಗಕ್ಕೆ ತುತ್ತಾಗಿವೆ. ಈ ನಡುವೆ ಪೊಟ್ಯಾಟೋ ಕ್ಲಬ್ ನ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು ಮುಂದಿನ ಭಾರಿ ರೈತರನ್ನು ಮತ್ತುಷ್ಟು ಜಾಗೃತಿ ಗೊಳಿಸಿ ಸಂಕಷ್ಟದಿಂದ ಪಾರುಮಾಡಲು ಯತ್ನಿಸಲಾಗುವುದು ಹಾಗೂ ರೈತರ ಸಹಕಾರದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆಗೂ ಪ್ರಯತ್ನಿಸಲಾಗುವುದು ಎನ್ನುತ್ತಾರೆ ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್.
ಅರಕಲಗೂಡು: ತಾಲೂಕಿನಲ್ಲಿ ಬಾಕಿ ಉಳಿದಿರುವ ವೃದ್ದಾಪ್ಯ ವೇತನ/ವಿಧವಾ ವೇತನ/ಅಂಗವಿಕಲರ ವೇತನಗಳ ಕಡತವನ್ನು ವಾರದೊಳಗೆ ವಿಲೇ ಮಾಡಲಾಗುವುದೆಂದು ಕಂದಾಯಾಧಿಕಾರಿಗಳು ತಿಳಿಸಿದ್ದಾರೆಂದು ಪಟ್ಟಣ ಪಂಚಾಯ್ತಿ ಸದಸ್ಯ ರಾಮಣ್ಣ ಹೇಳಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪಿಂಚಣಿ ವೇತನಗಳ ಅರ್ಜಿಗಳು ಬಾಕಿ ಉಳಿದಿದ್ದು ಕಂದಾಯ ಇಲಾಖೆ ನೌಕರರು ಅವುಗಳನ್ನು ವಿಲೇ ಮಾಡಲು ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಗ್ಗೆ ದೂರುಗಳಿತ್ತು ಈ ಹಿನ್ನೆಲೆಯಲ್ಲಿ ಪ.ಪಂ ಉಪಾಧ್ಯಕ್ಷ ರಮೇಶ್, ಸದಸ್ಯರಾದ ಮುನ್ನಾ, ಶಂಕರಯ್ಯ ಮತ್ತಿತರರು ಶುಕ್ರವಾರ ತಹಸೀಲ್ದಾರ್ ಸವಿತಾರನ್ನು ಭೇಟಿ ಆಗಿದ್ದೆವು. ಈ ಸಂಧರ್ಭದಲ್ಲಿ ಅವರು ಬಾಕಿ ಉಳಿದಿದ್ದ 800ಕಡತಗಳನ್ನು ವಿಲೇ ಮಾಡಲಾಗಿದೆ ಇನ್ನುಳಿದ 200ರಷ್ಟು ಕಡತಗಳಿಗೆ ಈ ತಿಂಗಳ ಅಂತ್ಯದೊಳಗೆ ವಿಲೇ ಮಾಡಲಾಗುವುದು, ಯಾವುದೇ ದೂರುಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ್ದಾರೆ ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ