ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ತಾಲೂಕಿನ ವಿವಿದೆಡೆ ರೈತರಿಗೆ ಉಚಿತ ಗಿಡಗಳನ್ನು ವಿತರಿಸಿದ ಅವರು ರುದ್ರಪಟ್ಟಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಸಂಕಷ್ಟ ನಿವಾರಣೆಗೆ ವೃಕ್ಷ ಪ್ರೀತಿ ಬೆಳೆಯಬೇಕು, ಪರಿಸರದಲ್ಲಿ ದೇವರನ್ನು ಕಾಣುವ ಮನೋಧರ್ಮ ಬಂದಾಗ ತಂತಾನೆ ಪ್ರಾಕೃತಿಕ ಸಂಪತ್ತು ಬೆಳೆಯಲು ಸಾಧ್ಯ ಎಂದು ನುಡಿದ ಅವರು ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸಾಂಪ್ರದಾಯಿಕ ಬೆಳೆಯ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭರಾಟೆಯಲ್ಲಿ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತರುತ್ತಿದ್ದಾರೆ, ಆಧುನಿಕ ಬೇಸಾಯ ಪದ್ದತಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ, ಇಂದಿನ ಸಂಧರ್ಬದಲ್ಲಿ ಜಮೀನು-ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯೂ ಇದೆ ಹೀಗಿರುವಾಗ ಮರ-ಗಿಡ ನೆಟ್ಟು ಪೋಷಿಸುವುದರಿಂದ ಅವು ನಮ್ಮ ಕಷ್ಟಕಾಲದಲ್ಲಿ ನೆರವಿಗೆ ಬರುತ್ತವೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ, ಖಾಲಿ ಸ್ಥಳಗಳಲ್ಲಿ ಗಿಡಬೆಳೆಸಿ ಹಸಿರು ವಾತಾವರಣವನ್ನು ಉಳಿಸಿ ಎಂದು ಮನವಿ ಮಾಡಿದರು. ಪೊಟ್ಯೋಟೋ ಕ್ಲಬ್ ಸಂಚಾಲಕ ಯೋಗಾರಮೇಶ್ ಮಾತನಾಡಿ ತಾಲೂಕಿನ ರೈತರ ಮನೆ ಬಾಗಿಲಿಗೆ ತೆರಳಿ ಉಚಿತ ಗಿಡಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಕ್ಲಬ್ ವತಿಯಿಂದ ಹಸಿರು ಆಂಧೋಲನವನ್ನು ಮಾಡಲಾಗುತ್ತಿದೆ ಪ್ರತೀ ವರ್ಷದಂತೆ ಈ ಭಾರಿಯೂ ಗಿಡಗಳನ್ನು ವಿತರಿಸಲಾಗುತ್ತಿದೆ ಎಂದರು. ಕೃಷಿ ಜಮೀನಿಗೆ ಸತ್ವಯುತ ಪೋಷಕಾಂಶಗಳು ಲಭಿಸಬೇಕೆಂದರೆ ಗಿಡ ನೆಡುವುದೊಂದೇ ಏಕೈಕ ಪರಿಹಾರವಾಗಿದೆ ಈ ನಿಟ್ಟಿನಲ್ಲಿ ಪೊಟ್ಯಾಟೋ ಕ್ಲಬ್ ಗಿಡಬೆಳೆಸಲು ಆಯಾ ಊರಿನ ಗ್ರಾಮಸ್ಥರುಗಳು ಚೀಟಿ ಹಾಕಿಕೊಳ್ಳುವ ಮೂಲಕ ಪ್ರತೀ ವರ್ಷ ಹೊಸದಾಗಿ ಗಿಡಖರೀದಿಸಿ ಅವರವರ ಗ್ರಾಮಗಳಲ್ಲಿ ಗಿಡನೆಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದೆ, ಇದನ್ನು ಇತರೆ ಊರುಗಳ ಗ್ರಾಮಸ್ಥರುಗಳು ಅನುಕರಿಸಬೇಕು. ಮರಗಳು ಆಪತ್ತಿನ ಸ್ನೇಹಿತರಿದ್ದಂತೆ ವಾಣಿಜ್ಯ ಬೆಳೆಬೆಳೆದು ಮಣ್ಣಿನ ಫಲವತ್ತತೆ ಹಾಳು ಮಾಡುವ ಮತ್ತು ನೇಣಿಗೆ ಶರಣಾಗುವ ಬದಲಿಗೆ ರೈತರು ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸಿ ಅವು ನಿಮ್ಮನ್ನು ಜೀವನ ಪರ್ಯಂತ ಕಾಯುತ್ತವೆ ಎಂದರು.
ಮುಖಂಡರಾದ ಕಾಂತರಾಜು ಮಾತನಾಡಿ ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ಉಚಿತ ಗಿಡ ವಿತರಿಸಿ ಗಿಡನೆಡುವ ಸಂಪ್ರದಾಯ ಆರಂಭಿಸಿರುವ ಯೋಗಾರಮೇಶ್ ಕಾಳಜಿಯನ್ನು ನಮ್ಮ ರೈತರು ಅರ್ಥ ಮಾಡಿಕೊಳ್ಳಬೇಕು, ಪ್ರಾಕೃತಿಕ ಅಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಿಡ ಬೆಳೆಸಿ ಎಂದರು. ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಕ್ಲಬ್ ನ ಮುಖಂಡ ರಾಜೇಂದ್ರ, ಜಾನಪದ ಪರಿಷತ್ ನ ಶ್ರೀಕಂಠ, ನಾಗರಿಕವೇದಿಕೆಯ ಕುಮಾರಸ್ವಾಮಿ ಮಾತನಾಡಿದರು. ಚ.ನಂ. ಅಶೋಕ್ ಹಾಗೂ ಯೋಗಾರಮೇಶ್ ಅವರಿಗೆ ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಮಂಜುನಾಥ್ ಶಾಲು ಹೊದೆಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಚಂದ್ರ, ಎವಿಕೆ ಕಾಲೇಜು ಉಪನ್ಯಾಸಕ ಪ್ರಕಾಶ್, ಜಯಪ್ಪ, ಸತ್ಯನಾರಾಯಣ,ಸುಬ್ಬೇಗೌಡ ಮತ್ತು ರುದ್ರಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ರುದ್ರಪಟ್ಟಣದ ಕಾರ್ಯಕ್ರಮಕ್ಕೂ ಮುನ್ನ ನೆಲಮನೆ ಗ್ರಾಮದ ಶಾಲಾವರಣದಲ್ಲಿ ಗಿಡ ನೆಟ್ಟು ರೈತರಿಗೆ ಸಸಿ ವಿತರಿಸಲಾಯಿತು, ಅಜ್ಜೂರು ಹಾಗೂ ಹೊಸನಗರ ಗ್ರಾಮಗಳಲ್ಲೂ ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ