ಬುಧವಾರ, ಮೇ 19, 2010

ರವಿಚಂದ್ರನ್ ಹುಟ್ಟುಹಬ್ಬಕ್ಕೂ ಮುನ್ನ ಹೂ

ಕನಸುಗಾರ ರವಿ ಚಂದ್ರನ್ ಅಭಿನಯದ 'ಹೂ' ಚಿತ್ರ ಕಡೆಗೂ ತೆರೆಕಾಣುತ್ತಿದೆ. ರವಿಚಂದ್ರನ್ ಹುಟ್ಟುಹಬ್ಬಕ್ಕೂ ಎರಡು ದಿನ ಮುನ್ನ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಅಂದರೆ ಮೇ.30ರಂದು ರವಿಚಂದ್ರನ್ ಹುಟ್ಟುಹಬ್ಬ, ಮೇ.28ರಂದು ಚಿತ್ರಮಂದಿರಗಳಲ್ಲಿ 'ಹೂ' ಬಿರಿಯಲಿದೆ. ಹೂ ಚಿತ್ರದ ಎಲ್ಲಾ ಕೆಲಸಗಳು ಮುಗಿದಿವೆ. ಮೇ.28ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ 'ಪ್ರೈವೇಟ್ ನಂಬರ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಚಿತ್ರದ ಮೊದಲರ್ಧ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಇಷ್ಟವಾಗುತ್ತದೆ. ಉಳಿದ ಭಾಗ ಎಲ್ಲರನ್ನೂ ರಂಜಿಸಲಿದೆ ಎಂದು ರವಿ ಹೇಳಿದ್ದಾರೆ. ಬೆಂಗಳೂರು ಕೆ ಜಿ ರಸ್ತೆಯ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ಸಂತೋಷ್ ಚಿತ್ರಮಂದಿರದಲ್ಲಿ ಹೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆದರೆ ಮೇ.21ರಂದು ಸಂತೋಷ್ ಚಿತ್ರಮಂದಿರದಲ್ಲಿ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ರವಿಚಂದ್ರನ್ ಪರ್ಯಾರ್ಯ ಚಿತ್ರಮಂದಿರದ ಬಗ್ಗೆಯೂ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. 'ಮಂಜಿನ ಹನಿ' ಚಿತ್ರವನ್ನು ಹನಿಸಲು ರವಿಚಂದ್ರನ್ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ಕೂಡಲೆ ರವಿಚಂದ್ರನ್ ತಮ್ಮ ಸೀಟನ್ನು ಅವರ ಪುತ್ರ ಮನೋಜ್ ಬಿಟ್ಟುಕೊಡಲಿದ್ದಾರೆ. ರವಿಚಂದ್ರನ್ ನಿವೃತ್ತಿ ಘೋಷಿಸಿಕೊಳ್ಳುತ್ತಾರಾ? ಅಥವಾ ತೆರೆಯ ಹಿಂದೆ ಸರಿದು ಆಕ್ಷನ್, ಕಟ್ ಹೇಳುತ್ತಾರಾ? ಕಾದು ನೋಡಬೇಕಾಗಿದೆ. ಅಂದಹಾಗೆ ಚಿತ್ರರಂಗಕ್ಕೆ ರಜೆ ಘೋಷಿಸಿದ್ದ ನಮಿತಾ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೀರಾ ಜಾಸ್ಮಿನ್ ಸಹ ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಡಬ್ಬಲ್ ಧಮಾಕಾ. ಜಿಎಸ್ ವಿ ಸೀತಾರಾಂ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶರಣ್ ಅವರ ತಾರಾಗಣ ಚಿತ್ರಕ್ಕಿದೆ. ಚಿತ್ರದ ನಿರ್ಮಾಪಕರು ದಿನೇಶ್ ಗಾಂಧಿ.
ಹನ್ನೆರಡು ಭಾಷೆಗಳಿಗೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ
ವರನಟ ಡಾ.ರಾಜ್ ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರ 12 ಭಾಷೆಗಳಿಗೆ ಡಬ್ ಆಗಲಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್ ಗೌಡ ಈ ಸಾಹಸಕ್ಕೆ ಕೈಹಾಕಿದ್ದಾರೆ. ಈ ಹಿಂದೆ ಇವರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಕಪ್ಪು ಬಿಳುಪಿನಿಂದ ಬಣ್ಣದ ಚಿತ್ರವಾಗಿ ಪರಿವರ್ತಿಸಿದ್ದರು. ಇದಕ್ಕಾಗಿ ರು. 3 ಕೋಟಿ ಖರ್ಚು ಮಾಡಿದ್ದರು. ಡಾ.ರಾಜ್ ಕುಮಾರ್,ಪಂಡರಿಬಾಯಿ, ಉದಯಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಹಿಂದಿ ಭಾಷೆಗೆ ಡಬ್ ಆಗಿತ್ತು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಬಂದಂತಹ ಸತ್ಯ ಹರಿಶ್ಚಂದ್ರ ಒಂದು ಅವಿಸ್ಮರಣೀಯ ಚಿತ್ರ.ಸತ್ಯಹರಿಶ್ಚಂದ್ರದಂತಹ ಅಪರೂಪದ ಚಿತ್ರ ಬೇರೆ ಭಾಷೆಯ ಪ್ರೇಕ್ಷಕರಿಗೂ ತಲುಪಬೇಕು ಎಂಬುದು ಕೆಸಿಎನ್ ಅವರ ಉದ್ದೇಶ. 'ಕಸ್ತೂರಿ ನಿವಾಸ' ಚಿತ್ರವನ್ನು ಬಣ್ಣದಲ್ಲಿ ತರುವ ಯೋಚನೆ ಕೆಸಿಎನ್ ಗೌಡರಿಗಿದೆ. 1965ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ವಿ ದಾಖಲಿಸಿದ ಚಿತ್ರ ಸತ್ಯ ಹರಿಶ್ಚಂದ್ರ.ಅಂದಿನ ಕಾಲದಲ್ಲೇ ರು.5.5 ಲಕ್ಷ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರ ನಿರ್ಮಾಣವಾಗಿತ್ತು. ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಈ ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ಕಳಕಳಿ ಗೌಡರದ್ದು. ಈ ಚಿತ್ರ ಇಂದಿಗೂ ಪ್ರಸ್ತುತ. ಸತ್ಯ, ಪ್ರಾಮಾಣಿಕತೆಯಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಲು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕಿಂತ ಮಿಗಿಲಾದ ಪಾಠವಿಲ್ಲ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ ಇಆರ್ ಟಿ) ಈ ಹಿಂದೆ ಸುತ್ತೋಲೆ ಹೊರಡಿಸಿತ್ತು.

ಕಾಮೆಂಟ್‌ಗಳಿಲ್ಲ: