ಅರಕಲಗೂಡು: ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಖ್ಯಾತ ನೀರಾವರಿ ತಜ್ಞ ದಿ.ನಂಜೇಗೌಡರ ಸ್ಮರಣಾರ್ಥ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ಪಟ್ಟಣದ ಅನಕೃ ವೃತ್ತದಿಂದ ತೆರಳಿದ ಮೌನ ಮೆರವಣಿಗೆ ತಾಲೂಕು ಕಛೇರಿ ಮುಂದೆ ಸಮಾವೇಶ ಗೊಂಡಿತು, ಈ ಸಂಧರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷ ನಂಜುಂಡಚಾರ್ ನಿರ್ಭೀತ ನಡೆ-ನುಡಿಯ ಶ್ರೇಷ್ಠ ರಾಜಕಾರಣಿ ಎಚ್ ಎನ್ ನಂಜೇಗೌಡ, ಅವರು ತಾವು ನಂಬಿದ ತತ್ವಗಳನ್ನು ಬಿಟ್ಟು ರಾಜೀ ಮನೋಭಾವ ಅನುಸರಿಸಿದ್ದರೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಿದ್ದರಲ್ಲದೇ ಕೇಂದ್ರದಲ್ಲಿ ಸಚಿವರೂ ಆಗಬಹುದಿತ್ತು ಆದರೆ ಯಾವತ್ತಿಗೂ ನಂಜೇಗೌಡರು ತಾವು ನಂಬಿದ ಮೌಲ್ಯಗಳನ್ನು ಬಿಡಲಿಲ್ಲ ಎಂದರು. ತಾಲೂಕಿನ ಹಲವು ನೀರಾವರಿ ಯೋಜನೆಗಳಿಗೆ ಮಹತ್ವದ ಪಾತ್ರ ವಹಿಸಿರುವ ಗೌಡರು ರಾಜ್ಯದ ನೀರಾವರಿ ವಿಚಾರ ಬಂದಾಗಲೂ ಅಂಕಿ ಅಂಶ ಸಮೇತ ರಾಜ್ಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದರು ಎಂದರು. ಬಿಎಸ್ಪಿ ಮುಖಂಡ ರಾಜೇಶ್ ಮಾತನಾಡಿ ಭೋಫೋರ್ಸ್ ಹಗರಣದ ಸಂಧರ್ಭ ಪ್ರಾಮಾಣಿಕ ನಡೆ ನುಡಿಯಿಂದ ತಮ್ಮ ವ್ಯಕ್ತಿತ್ವ ಕಾಯ್ದು ಕೊಂಡು ಇತರರಿಗೆ ಮಾದರಿಯಾದ ನಂಜೇಗೌಡರು ತಾಲೂಕಿನ ರಾಮನಾಥಪುರ-ಕೊಣನೂರು ಹೋಬಳಿಯ ಜನರ ಕೃಷಿ ಬದುಕು ಹಸನಿಗೆ ಕಾರಣರಾಗಿದ್ದಾರೆ. ಅವರು ರೂಪಿಸಿದ ಹಾರಂಗಿ ನೀರಾವರಿ ಯೋಜನೆ ಯಿಂದ ಇವತ್ತು ರೈತರು ನೆಮ್ಮದಿಯ ದಿನಗಳನ್ನು ಕಾಣುತ್ತಿದ್ದಾರೆ ಇಂತಹ ಶ್ರೇಷ್ಠ ರಾಜಕಾರಣಿಯನ್ನು ಜನತೆ ನೆನೆಸಿಕೊಳ್ಳಬೇಕು ಹಾಗೂ ಇದೇ ಸಂಧರ್ಭದಲ್ಲಿ ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ.ಪಂ ಸದಸ್ಯ ರವಿಕುಮಾರ್ ಮಾತನಾಡಿ ಒಬ್ಬ ಪ್ರಾಮಾಣಿಕ ರಾಜಕೀಯ ಮುತ್ಸದ್ದಿಯನ್ನು ನೆನಪು ಮಾಡಿಕೊಳ್ಳುವ ಜೊತೆಗೆ ಅವರು ನಂಬಿದ ಮೌಲ್ಯಗಳಿಗೆ ಗೌರವ ಸಿಗಬೇಕಾದರೆ ಅವರ ಕನಸಿನ ನೀರಾವರಿ ಯೋಜನೆ ಜಾರಿಯಾಗಬೇಕು ಎಂದರು. ದಸಂಸ ದ ವಿರಾಜ್ ಮಾತನಾಡಿ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಗುಣಮಟ್ಟ ಸಂಪೂರ್ಣ ಕಳಪೆಯಾಗಿದೆ, ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಇಂಜಿನಿಯರುಗಳು ಆಸ್ಥೆ ವಹಿಸುತ್ತಿಲ್ಲ ಇದು ವಿಷಾಧನೀಯಕರ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಜಿ ಚಂದ್ರಶೇಖರ್, ಅ. ರಾ. ಸುಬ್ಬರಾವ್ ಮತ್ತಿತರರು ಮಾತನಾಡಿದರು. 2ನಿಮಿಷಗಳ ಮೌನ ಆಚರಣೆ ನಂತರ ತಾಲೂಕು ಕಛೇರಿ ವ್ಯವಸ್ಥಾಪಕ ಗಂಗರಾಜುವಿಗೆ ಪ್ರತಿಭಟನಾ ನಿರತರು ಮನವಿ ಅರ್ಪಿಸಿದರು.
ಶ್ರದ್ದಾಂಜಲಿ ಅರ್ಪಣೆ: ತಾಲ್ಲೂಕಿನ ಪೊಟ್ಯಾಟೋ ಕ್ಲಬ್ ವತಿಯಿಂದ ನೀರಾವರಿ ತಜ್ಞ ಎಚ್ ಎನ್ ನಂಜೇಗೌಡರ ವಾರ್ಷಿಕ ಸ್ಮರಣೆ ಆಚರಿಸಲಾಯಿತು. ತಹಸೀಲ್ದಾರ್ ವಿ ಆರ್ ಶೈಲಜಾ , ಎಚ್ ಎನ್ ನಂಜೇಗೌಡರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌಡರ ಗುಣಗಾನ ಮಾಡಿದರು. ಪೋಟಾಟೋ ಕ್ಲಬ್ ನ ರಾಜೇಂದ್ರ ದೊಡ್ಡಮಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಮುಖಂಡರಾದ ಜಯಪ್ಪ, ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ