ಮಂಗಳವಾರ, ಸೆಪ್ಟೆಂಬರ್ 29, 2009

ಶಂಕರನ ನೆನಪು.........


ಶಂಕರ್ ನಾಗ್ ....ನಮ್ಮನಗಲಿ ಇಂದಿಗೆ 35ವರ್ಷ 10ತಿಂಗಳು 21ದಿನ, ವಿಧಿಯ ವಿಪರ್ಯಾಸವೋ ಏನೋ ಸದಾ ಕ್ರಿಯಾಶೀಲ ಚಿಂತನೆಗಳಲ್ಲಿ ತೊಡಗಿಸಿಕೊಂಡು ತನ್ನೊಂದಿಗಿದ್ದವರನ್ನು ಬೆಳೆಸುತ್ತಾ, ಸಮಾಜದ ಅಭಿವೃದ್ದಿ ಚಿಂತನೆಗೆ ತನ್ನದೇ ಆದ ವಿಶಿಷ್ಠ ರೀತಿಯಲ್ಲಿ ಕೊಡುಗೆ ನೀಡಿದ ಶಂಕರ್ ನಾಗ್ ಯುವ ಸಮೂಹಕ್ಕೆ ಆದರ್ಶ ಮತ್ತು ಅನುಕರಣೀಯ. ಸಂಕೇತ್ , ಕಂಟ್ರಿಕ್ಲಬ್, ಹೊಸ ಅಲೆಯ ಸಿನಿಮಾಗಳು , ರಂಗ ನಾಟಕಗಳು ಹೀಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಮನಗೆದ್ದವರು ನಮ್ಮ-ನಿಮ್ಮೆಲ್ಲರ ಶಂಕರ್ ನಾಗ್..

ಶಂಕರ್ ನೆನಪಿಗೆ ಅರಕಲಗೂಡಿನ ಸಮಾನ ಗೆಳೆಯರು ಸೇರಿ ಶಂಕರ್ ನೆಟಿಸಿದ ಚಿತ್ರಗಳ ಆಯ್ದ ತುಣುಕುಗಳ ಪ್ರದರ್ಶನ, ಶಂಕರ್ ಒಡನಾಡಿ ಪ್ರಜಾವಾಣಿ ಪತ್ರಿಕೆಯ ಹಿರಿಯ ನಿವೃತ್ತ ಪತ್ರಕರ್ತ ಎಂ ಕೆ. ಭಾಸ್ಕರ್ ರಾವ್ ರಿಂದ ಶಂಕರ್ ನೆನಪು ಮೊಗೆದು ಕೊಡಲಿದ್ದಾರೆ. ಅಂತಿಮವಾಗಿ ಹಾಸನದ ಕಲಾಸಿರಿ ತಂಡದವರಿಂದ "ಒಂದು ಬೊಗಸೆ ನೀರು" ನಾಟಕ ಪ್ರದರ್ಶನ ಇದೆ. ಈ ಎಲ್ಲ ಕಾರ್ಯಕ್ರಮಗಳು ಸೆ.೩೦ ರಂದು ಸಂಜೆ 6ಗಂಟೆಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಲಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ. ಕಾರ್ಯಕ್ರಮಕ್ಕೆ ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ....ಮಂಗಳವಾರ, ಸೆಪ್ಟೆಂಬರ್ 22, 2009

ವಿಷ್ಣು 60ರ ಸಂಭ್ರಮಕ್ಕೆ ಅಭಿಮಾನಿಗಳ ಹಾರೈಕೆ!

ಅರಕಲಗೂಡಿನ ವಿಷ್ಣು ಸೇನಾ ಸಮಿತಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ವಿಷ್ಣುವರ್ಧನ್ ಗೆ 60ತುಂಬಿದ ಸಂಧರ್ಭದಲ್ಲಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರಲ್ಲದೇ, ಅವರ ನಿವಾಸದ ಎದುರು ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಚಿತ್ರದಲ್ಲಿ ಅರಕಲಗೂಡು ತಾಲೂಕು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವಿಷ್ಣುಪ್ರಕಾಶ್ (ಎಡಬದಿಯವರು) ರನ್ನು ಕಾಣಬಹುದು.

ಬುಧವಾರ, ಸೆಪ್ಟೆಂಬರ್ 9, 2009

ಕಾಸರವಳ್ಳಿ ಚಿತ್ರಗಳತ್ತ ಪ್ರಕಾಶ್ ರೈ ಚಿತ್ತ

ಸೋಮವಾರ ರಾತ್ರಿ (ಸೆ. 7) ಬಹುಹೊತ್ತಿನವರೆಗೂ ಅವರ ದೂರವಾಣಿ ಬಿಡುವು ಕಳೆದುಕೊಂಡಿತ್ತು. ’ಅಭಿನಂದನೆಗಳು. ನಮಗೆ ತುಂಬಾ ಹೆಮ್ಮೆ’. ಪ್ರಕಾಶ್ ನಕ್ಕರು. ಥ್ಯಾಂಕ್ಸ್ ಎಂದರು. ನನಗೂ ಖುಷಿಯಾಗುತ್ತಿದೆ ಎಂದರು. ಅವರ ನಗುವಿನಲ್ಲಿ ಖುಷಿಯಿತ್ತು, ಸಂಭ್ರಮವಿತ್ತು, ಹೆಮ್ಮೆಯಿತ್ತು, ಅಧ್ಯಾತ್ಮವೂ!

ಸ್ವಲ್ಪ ಹಿಂದಕ್ಕೆ ನೋಡೋಣ. ನಾಟಕ, ಕವಿತೆಯ ಗುಂಗು ಹಚ್ಚಿಕೊಂಡು, ಕಣ್ಣ ತುಂಬ ಕನಸುಗಳನ್ನು ತುಂಬಿಕೊಂಡು ಬೆಂಗಳೂರಿನ ಕಲಾಕ್ಷೇತ್ರದ ಮೊಗಸಾಲೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ, ಸಿಕ್ಕಸಿಕ್ಕವರೊಡನೆ ಜಗಳಕ್ಕೆ ನಿಲ್ಲುತ್ತಿದ್ದ ಹದಿಹರೆಯದ ಹುಡುಗ ಭಾರತೀಯ ಚಿತ್ರರಂಗದ ಅನನ್ಯ ಪ್ರತಿಭೆಯಾಗಿ ರೂಪುಗೊಂಡಿರುವುದು ಈಗ ಚರಿತ್ರೆ. ಈ ಹುಡುಗ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಸ್ಕೌಟು ಪಟುವಾಗಿದ್ದ. ರಾಷ್ಟ್ರಪತಿಗಳ ಪ್ರಶಸ್ತಿ ಪಡೆದಿದ್ದ. ಈಗ ಮತ್ತೊಮ್ಮೆ ’ಅತ್ಯುತ್ತಮ ನಟ’ ಪ್ರಶಸ್ತಿ ನೆಪದಲ್ಲಿ ರಾಷ್ಟ್ರಪತಿಗಳ ಎದುರು ನಿಲ್ಲಲಿಕ್ಕೆ ಸಜ್ಜು. ಇದಲ್ಲವೇ ಬದುಕಿನ ಸೌಂದರ್ಯ!

ಪ್ರಕಾಶ್ ರೈ ಕಾಲೇಜು [^] ದಿನಗಳಲ್ಲಿ ಅತ್ಯುತ್ತಮ ಚರ್ಚಾಪಟು ಕೂಡ. ನಾಟಕಗಳಲ್ಲಿ ಕೂಡ ತಮ್ಮ ಮಾತುಗಾರಿಕೆಯಿಂದ ಅವರು ಗಮನಸೆಳೆದಿದ್ದರು. ಬೇಕಿದ್ದರೆ ಈ ಮಾತಿನಮಲ್ಲನನ್ನು ಜಗಳಗಂಟ ಎನ್ನಲಿಕ್ಕೂ ಅಡ್ಡಿಯಿಲ್ಲ. ಲಂಕೇಶ್ ಮೇಷ್ಟ್ರು, ನಾಗೇಶ್ ಮೇಷ್ಟ್ರು- ರೈ ಆಡಿದ ಜಗಳಗಳಿಗೆ ಲೆಕ್ಕವಿಲ್ಲ. ನಾಟಕದಿಂದ ಅವರು ಹೊರಳಿಕೊಂಡಿದ್ದು ಕಿರುತೆರೆಯತ್ತ. ‘ಬಿಸಿಲುಕುದುರೆ’, ‘ಗುಡ್ಡದಭೂತ’ ಧಾರಾವಾಹಿಗಳು ಹೆಸರು ತಂದುಕೊಟ್ಟವು. ಇಲ್ಲಿಯೇ ಉಳಿದಿದ್ದರೆ ಪ್ರಕಾಶ್ ಮತ್ತೊಬ್ಬ ರವಿಕಿರಣ್, ಸುನೀಲ್ ಪುರಾಣಿಕ್ ಅಥವಾ ವೆಂಕಿ ಆಗುತ್ತಿದ್ದರೇನೊ? ಅದೃಷ್ಟ ಬೇರೆಯೇ ಇತ್ತು. ಕೆ.ಬಾಲಚಂದರ್ ಎನ್ನುವ ಮಾಂತ್ರಿಕನ ಕಣ್ಣು ಅವರ ಮೇಲೆ ಬಿದ್ದಿತ್ತು.

‘ಡುಯೆಟ್’ ಮೂಲಕ ಪ್ರಕಾಶ್ ರೈ ತಮಿಳು ಚಿತ್ರರಂಗ ಪ್ರವೇಶಿಸಿದರು. ಎಚ್‌ಎಲ್‌ಎನ್ ಸಿಂಹ ಮುತ್ತುರಾಜನನ್ನು ರಾಜಕುಮಾರ್ [^] ಎಂದು ಕರೆದಂತೆ, ಬಾಲಚಂದರ್ ರೈ ಹೆಸರನ್ನು ರಾಜ್ ಎಂದು ಬದಲಿಸಿದರು (ಕನ್ನಡಿಗರಿಗೇ ಅವರು ಯಾವತ್ತಿಗೂ ರೈ!). ನಂತರದ್ದು ಏಣಿ ಹತ್ತುವ ದಿನಗಳು. ತೆಲುಗು, ತಮಿಳು, ಮಲೆಯಾಳಂ, ಹಿಂದಿ- ಕನ್ನಡಕ್ಕೇ ಅಪರೂಪ ಎನ್ನುವಂತಾದರು ಪ್ರಕಾಶ್. ಆದರೂ, ರೈ ಅಪರೂಪಕ್ಕೆ ಬಿಡುವು ಮಾಡಿಕೊಂಡು ತವರಿಗೆ ಬಂದು ಬಣ್ಣಹಚ್ಚಿಕೊಂಡರು. ತಾರಾ [^] ವರ್ಚಸ್ಸಿನ ಉತ್ತುಂಗದ ದಿನಗಳಲ್ಲಿ ಒಂದು ರೂಪಾಯಿ ಸಂಭಾವನೆ ಪಡೆದು ಶೇಷಾದ್ರಿ ಅವರ ’ಅತಿಥಿ’ ಚಿತ್ರದಲ್ಲಿ ನಟಿಸಿದರು. ಅದು ಪ್ರಕಾಶ್ ರೈ ಕನ್ನಡ ಪ್ರೇಮ. ‘ರಾಮಾಚಾರಿ’, ‘ಹರಕೆಯ ಕುರಿ’, ‘ಏಕಾಂಗಿ’, ‘ನಾಗಮಂಡಲ’, ‘ಬಿಂಬ’- ರೈ ನಟನೆಯ ಎದ್ದು ಕಾಣುವ ಕನ್ನಡ ಚಿತ್ರಗಳು.

ಕೇವಲ ನಟನೆಗಷ್ಟೇ ಸೀಮಿತ ಆಗಿದ್ದಿದ್ದರೆ ಇವತ್ತು ಪ್ರಕಾಶ್ ರೈ ಸಂಭ್ರಮ ಆತ್ಮತೃಪ್ತಿಯ ರೂಪ ಪಡೆದುಕೊಳ್ಳುತ್ತಿರಲಿಲ್ಲವೇನೊ? ಅವರ ಪ್ರಯೋಗಶೀಲ ಮನಸ್ಸು ಸಿನಿಮಾ ನಿರ್ದೇಶನದಲ್ಲೂ ತೊಡಗಿದೆ. ಹೊಸ ಪ್ರತಿಭೆಗಳ ಅಖಾಡಕ್ಕೆ ಕರೆತರುವ ಕೆಲಸದಲ್ಲಿ ಪ್ರಕಾಶ್ ಖುಷಿ ಕಾಣುತ್ತಿದ್ದಾರೆ. ಪ್ರಕಾಶ್ ನಿರ್ಮಾಣದ ‘ಮೊಳಿ’ ಹೊಸ ಅಲೆಯ ಚಿತ್ರ. ಬಾಲಚಂದರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಚಂದರ್ ನಟಿಸಿದ್ದಾರೆ ಕೂಡ. ‘ದಾಯ’, ‘ಪೊಯ್’, ‘ವೆಳ್ಳಿತಿರೈ’, ‘ಅಭಿಯುಂ ನಾನುಂ’ ಅವರ ನಿರ್ಮಾಣದ ಇತರ ಚಿತ್ರಗಳು. ’ಕಾಂಜೀವರಂ’ ಕಲಶಪ್ರಾಯದ ಚಿತ್ರ.

’ಕಾಂಜೀವರಂ’ ಚಿತ್ರದ್ದು ದುಪ್ಪಟ್ಟು ಸಂಭ್ರಮ. ಅತ್ಯುತ್ತಮ ಚಿತ್ರ ಎನ್ನುವ ಗೌರವದ ಜೊತೆಗೆ ಅತ್ಯುತ್ತಮ ನಟ ಎನ್ನುವ ಸಮ್ಮಾನ. ತನ್ನ ನಿರ್ಮಾಣದ ಚಿತ್ರ ಅತ್ಯುತ್ತಮ ಎನ್ನಿಸಿಕೊಳ್ಳುವುದು, ತನ್ನ ನಟನೆಗೆ ಪುರಸ್ಕಾರ ಸಲ್ಲುವುದು- ಪೂರ್ಣ ತೃಪ್ತಿ ಎಂದದ್ದು ಇದನ್ನೇ.

ಡಬ್ಬಲ್ ಪ್ರಶಸ್ತಿಗಳು ಪ್ರಕಾಶ್‌ಗೆ ಖುಷಿ ಕೊಟ್ಟಿವೆ. ಹಾಗೆಂದು ಅವರು ಮೈಮರೆತಿಲ್ಲ. ‘ಗುಡ್ಡದ ಭೂತ’ ನೆನ್ನೆ ನಡೆದಂಗಿದೆ. ನಾಟಕಗಳು ಮೊನ್ನೆ ನಡೆದ ರೀತಿ ಇದೆ ಎನ್ನುವ ರೈಗೆ ಪ್ರಶಸ್ತಿಗಳ ಬಗ್ಗೆ ಹೆಮ್ಮೆಯಿದ್ದರೂ ಹಮ್ಮಿಲ್ಲ. ’ನನಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ (ಕಾಂಜೀವರಂ ಚಿತ್ರದ ಪ್ರಶಸ್ತಿ ಸೇರಿದಂತೆ) ಎಂದರೆ ಅದು ಎಲ್ಲವೂ ಆದಂತೆ ಅಲ್ಲ. ಆ ವರ್ಷದ ಸಿನಿಮಾಗಳ ಪೈಕಿ ನಾನು ಅತ್ಯುತ್ತಮ ನಟ ಎನ್ನುವುದು ಪ್ರಶಸ್ತಿಯ ಅರ್ಥ. ಪ್ರಶಸ್ತಿ ಎನ್ನುವುದು ತುಂಬಾ ಸಾಪೇಕ್ಷವಾದದ್ದು’. ಇದು ಪ್ರಕಾಶ್ ರೈ ವಿನಯ.

’ಸಿನಿಮಾಗೆ ಬಂದಾಗ ನನಗೆ ಮೂವತ್ತು ವರ್ಷ. ಆ ಮೂವತ್ತು ವರ್ಷಗಳ ಕಾಲ ನಾನು ಏನಾಗಿದ್ದೆ, ಸಿನಿಮಾದ ಈವರೆಗಿನ ಅವಧಿಯಲ್ಲಿ ನಾನು ಏನಾಗಿದ್ದೇನೆ- ಇವೆಲ್ಲ ನನಗೇ ಗೊತ್ತು. ಒಂದಂತೂ ನಿಜ, ಇನ್ನೂ ಇಪ್ಪತ್ತು ವರ್ಷಗಳು ನನಗೆ ಬಾಕಿಯಿವೆ ಎಂದಾದರೆ, ಆ ಎರಡು ದಶಕಗಳ ನಂತರವೂ ನಾನು ನಾನಾಗಿಯೇ ಇರ್ತೇನೆ’. ಪ್ರಕಾಶ್ ಮಾತುಗಳಲ್ಲಿ ಯಾವುದು ಅನುಭವ, ಯಾವುದು ಖುಷಿ, ಯಾವುದು ಅಧ್ಯಾತ್ಮ- ವಿಂಗಡಿಸುವುದು ಕಷ್ಟ.

ರಾಷ್ಟ್ರಪ್ರಶಸ್ತಿ ಬಂದಾಯಿತು- ಮುಂದೇನು? ಹಾಗೆ ಪ್ರಶ್ನಿಸಿಕೊಳ್ಳುವುದು ಪ್ರಕಾಶ್ ರೈ ಜಾಯಮಾನ ಅಲ್ಲವೇ ಅಲ್ಲ. ತನ್ನ ಪಾಲಿನ ಕೆಲಸವನ್ನು ತಾನು ಸುಮ್ಮನೆ ಮಾಡುತ್ತಾ ಹೋಗಬೇಕು ಎನ್ನುವುದು ಅವರ ಪಾಲಿಸಿ. ಸದ್ಯ, ತಮ್ಮ ನಿರ್ಮಾಣದ ’ಅಭಿಯುಂ ನಾನುಂ’ ಚಿತ್ರವನ್ನು ಗೆಳೆಯ ಬಿ.ಸುರೇಶ್ ಸಹಕಾರದಲ್ಲಿ ಕನ್ನಡದಲ್ಲಿ ನಿರ್ದೇಶಿಸುವ ಆಸೆ ಅವರದ್ದು. ಯಾವಾಗ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಅಂದಹಾಗೆ, ನಟನೆಯ ನಿಟ್ಟಿನಲ್ಲಿ ಪ್ರಕಾಶ್ ರೈ ಅವರ ಕನಸೇನು ಗೊತ್ತಾ? ಗಿರೀಶ್ ಕಾಸರವಳ್ಳಿ ಚಿತ್ರದಲ್ಲಿ ನಟಿಸಬೇಕು ಎನ್ನುವುದು. ಈ ಹಂಬಲವನ್ನು ಕಾಸರವಳ್ಳಿ ಅವರಲ್ಲಿ ತೋಡಿಕೊಂಡೂ ಇದ್ದಾರೆ. ಯಾರಿಗೆ ಗೊತ್ತು, ಕನ್ನಡ [^]ದಲ್ಲಿ ಗಿರೀಶ್-ಪ್ರಕಾಶ್ ಕಾಂಬಿನೇಷನ್ ಸಾಧ್ಯವಾಗಿ ’ಕಾಂಜೀವರಂ’ ಇತಿಹಾಸ ಮರುಕಳಿಸಲೂಬಹುದು.

(Courtesy: thatskannada.com)