ಬುಧವಾರ, ಮೇ 19, 2010

ರವಿಚಂದ್ರನ್ ಹುಟ್ಟುಹಬ್ಬಕ್ಕೂ ಮುನ್ನ ಹೂ

ಕನಸುಗಾರ ರವಿ ಚಂದ್ರನ್ ಅಭಿನಯದ 'ಹೂ' ಚಿತ್ರ ಕಡೆಗೂ ತೆರೆಕಾಣುತ್ತಿದೆ. ರವಿಚಂದ್ರನ್ ಹುಟ್ಟುಹಬ್ಬಕ್ಕೂ ಎರಡು ದಿನ ಮುನ್ನ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಅಂದರೆ ಮೇ.30ರಂದು ರವಿಚಂದ್ರನ್ ಹುಟ್ಟುಹಬ್ಬ, ಮೇ.28ರಂದು ಚಿತ್ರಮಂದಿರಗಳಲ್ಲಿ 'ಹೂ' ಬಿರಿಯಲಿದೆ. ಹೂ ಚಿತ್ರದ ಎಲ್ಲಾ ಕೆಲಸಗಳು ಮುಗಿದಿವೆ. ಮೇ.28ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ 'ಪ್ರೈವೇಟ್ ನಂಬರ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಚಿತ್ರದ ಮೊದಲರ್ಧ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಇಷ್ಟವಾಗುತ್ತದೆ. ಉಳಿದ ಭಾಗ ಎಲ್ಲರನ್ನೂ ರಂಜಿಸಲಿದೆ ಎಂದು ರವಿ ಹೇಳಿದ್ದಾರೆ. ಬೆಂಗಳೂರು ಕೆ ಜಿ ರಸ್ತೆಯ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ಸಂತೋಷ್ ಚಿತ್ರಮಂದಿರದಲ್ಲಿ ಹೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆದರೆ ಮೇ.21ರಂದು ಸಂತೋಷ್ ಚಿತ್ರಮಂದಿರದಲ್ಲಿ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ರವಿಚಂದ್ರನ್ ಪರ್ಯಾರ್ಯ ಚಿತ್ರಮಂದಿರದ ಬಗ್ಗೆಯೂ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. 'ಮಂಜಿನ ಹನಿ' ಚಿತ್ರವನ್ನು ಹನಿಸಲು ರವಿಚಂದ್ರನ್ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ಕೂಡಲೆ ರವಿಚಂದ್ರನ್ ತಮ್ಮ ಸೀಟನ್ನು ಅವರ ಪುತ್ರ ಮನೋಜ್ ಬಿಟ್ಟುಕೊಡಲಿದ್ದಾರೆ. ರವಿಚಂದ್ರನ್ ನಿವೃತ್ತಿ ಘೋಷಿಸಿಕೊಳ್ಳುತ್ತಾರಾ? ಅಥವಾ ತೆರೆಯ ಹಿಂದೆ ಸರಿದು ಆಕ್ಷನ್, ಕಟ್ ಹೇಳುತ್ತಾರಾ? ಕಾದು ನೋಡಬೇಕಾಗಿದೆ. ಅಂದಹಾಗೆ ಚಿತ್ರರಂಗಕ್ಕೆ ರಜೆ ಘೋಷಿಸಿದ್ದ ನಮಿತಾ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೀರಾ ಜಾಸ್ಮಿನ್ ಸಹ ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಡಬ್ಬಲ್ ಧಮಾಕಾ. ಜಿಎಸ್ ವಿ ಸೀತಾರಾಂ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶರಣ್ ಅವರ ತಾರಾಗಣ ಚಿತ್ರಕ್ಕಿದೆ. ಚಿತ್ರದ ನಿರ್ಮಾಪಕರು ದಿನೇಶ್ ಗಾಂಧಿ.
ಹನ್ನೆರಡು ಭಾಷೆಗಳಿಗೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ
ವರನಟ ಡಾ.ರಾಜ್ ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರ 12 ಭಾಷೆಗಳಿಗೆ ಡಬ್ ಆಗಲಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್ ಗೌಡ ಈ ಸಾಹಸಕ್ಕೆ ಕೈಹಾಕಿದ್ದಾರೆ. ಈ ಹಿಂದೆ ಇವರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಕಪ್ಪು ಬಿಳುಪಿನಿಂದ ಬಣ್ಣದ ಚಿತ್ರವಾಗಿ ಪರಿವರ್ತಿಸಿದ್ದರು. ಇದಕ್ಕಾಗಿ ರು. 3 ಕೋಟಿ ಖರ್ಚು ಮಾಡಿದ್ದರು. ಡಾ.ರಾಜ್ ಕುಮಾರ್,ಪಂಡರಿಬಾಯಿ, ಉದಯಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಹಿಂದಿ ಭಾಷೆಗೆ ಡಬ್ ಆಗಿತ್ತು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಬಂದಂತಹ ಸತ್ಯ ಹರಿಶ್ಚಂದ್ರ ಒಂದು ಅವಿಸ್ಮರಣೀಯ ಚಿತ್ರ.ಸತ್ಯಹರಿಶ್ಚಂದ್ರದಂತಹ ಅಪರೂಪದ ಚಿತ್ರ ಬೇರೆ ಭಾಷೆಯ ಪ್ರೇಕ್ಷಕರಿಗೂ ತಲುಪಬೇಕು ಎಂಬುದು ಕೆಸಿಎನ್ ಅವರ ಉದ್ದೇಶ. 'ಕಸ್ತೂರಿ ನಿವಾಸ' ಚಿತ್ರವನ್ನು ಬಣ್ಣದಲ್ಲಿ ತರುವ ಯೋಚನೆ ಕೆಸಿಎನ್ ಗೌಡರಿಗಿದೆ. 1965ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ವಿ ದಾಖಲಿಸಿದ ಚಿತ್ರ ಸತ್ಯ ಹರಿಶ್ಚಂದ್ರ.ಅಂದಿನ ಕಾಲದಲ್ಲೇ ರು.5.5 ಲಕ್ಷ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರ ನಿರ್ಮಾಣವಾಗಿತ್ತು. ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಈ ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ಕಳಕಳಿ ಗೌಡರದ್ದು. ಈ ಚಿತ್ರ ಇಂದಿಗೂ ಪ್ರಸ್ತುತ. ಸತ್ಯ, ಪ್ರಾಮಾಣಿಕತೆಯಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಲು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕಿಂತ ಮಿಗಿಲಾದ ಪಾಠವಿಲ್ಲ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ ಇಆರ್ ಟಿ) ಈ ಹಿಂದೆ ಸುತ್ತೋಲೆ ಹೊರಡಿಸಿತ್ತು.

ಶಿಲ್ಪಾ ಶೆಟ್ಟಿ ಯೂರೋಪ್ ನಲ್ಲಿ ಎರಡನೆ ಹನಿಮೂನ್!

ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎರಡನೆ ಬಾರಿಗೆ ಮಧುಚಂದ್ರ ಆಚರಿಸಿಕೊಳ್ಳಲು ತನ್ನ ಪತಿ ರಾಜ್ ಕುಂದ್ರ ಜೊತೆ ಯೂರೋಪ್ ಗೆ ಹಾರಲಿದ್ದಾರೆ. ಮದುವೆಯಾದ ಆರು ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರ ಎರಡನೆ ಹನಿಮೂನ್ ಗೆ ಸಿದ್ಧತೆ ನಡೆಸಿದ್ದಾರೆ.ಈ ಹಿಂದೆ ತಮ್ಮ ಚೊಚ್ಚಲ ಮಧುಚಂದ್ರವನ್ನು ಶಿಲ್ಪಾ ಶೆಟ್ಟಿ ದಂಪತಿಗಳು ಬಹಮಾಸ್ ನಲ್ಲಿ ಸವಿದಿದ್ದರು. ಈಗ ಎರಡನೆ ಬಾರಿಗೆ ಶಿಲ್ಪಾ ಮತ್ತು ಕುಂದ್ರಾ ಮಧುಚಂದ್ರಕೆ ತೆರಳುತ್ತಿದ್ದಾರೆ. ಜುಲೈ ಎರಡನೇ ವಾರದಲ್ಲಿ ಒಂದೂವರೆ ತಿಂಗಳು ಯೂರೋಪ್ ನಲ್ಲಿ ಜೊತೆಯಾಗಿ, ಹಿತವಾಗಿ ಕಳೆಯಲಿದ್ದಾರೆ. ಸದ್ಯಕ್ಕೆ ಶಿಲ್ಪಾ ಶೆಟ್ಟಿ ಶಾಂಪೂ ಒಂದರ ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಟಿವಿ ಕಾರ್ಯಕ್ರಮ 'ಜರಾ ನಾಚ್ ಕೆ ದಿಖಾ' ಚಿತ್ರೀಕರಣದಲ್ಲಿ ಶಿಲ್ಪಾ ಪಾಲ್ಗೊಳ್ಳಲಿದ್ದಾರೆ. ಆ ಬಳಿಕವಷ್ಟೆ ಯೂರೋಪ್ ಪ್ರವಾಸ ಆರಂಭವಾಗಲಿದೆ. ತಮ್ಮ ತಮ್ಮ ಉದ್ಯೋಗಗಳಲ್ಲಿ ಇಬ್ಬರೂ ಬ್ಯುಸಿಯಾಗಿರುವ ಕಾರಣ ಈ ದಂಪತಿಗಳು ಒಬ್ಬರನ್ನೊಬ್ಬರು ಕೂಡಿ ಎರಡು ವಾರ ಆಗಿವೆಯಂತೆ. "ದಾಂಪತ್ಯದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದೇನೆ. ಇದು ನನ್ನ ಬಾಳಿನ ಅತ್ಯಂತ ಸುಂದರ ದಿನಗಳು. ಯೂರೋಪ್ ಪ್ರವಾಸ ನೆನಪಿಸಿಕೊಂಡರೆ ಮೈಯಲ್ಲಾ ಪುಳಕವಾಗುತ್ತದೆ" ಎಂದು ಶಿಲ್ಪಾ ಪ್ರತಿಕ್ರಿಯಿಸಿದ್ದಾರೆ.ಮಧುಚಂದ್ರ ಮುಗಿಸಿಕೊಂಡು ಹಿಂತಿರುಗಿದ ಬಳಿಕ ಶಿಲ್ಪಾ ಶೆಟ್ಟಿ ದಂಪತಿಗಳು ಗೃಹಪ್ರವೇಶ ಮಾಡಲಿದ್ದಾರೆ. ಸುಸಾನೆ ರೋಷನ್ ವಿನ್ಯಾಸದ ಹೊಸ ಮನೆಗೆ ಶಿಲ್ಪಾ ಶೆಟ್ಟಿ ದಂಪತಿಗಳಿಗೆ ಸ್ವಾಗತ ಕೋರಲಿದೆ.
ಸ್ವಯಂವರವೆಂಬ ದೊಡ್ಡವರ ಮಕ್ಕಳಾಟ!
ಮದುವೆಗೆ ಸಿದ್ಧವಾಗಿರುವ ಹುಡುಗಿ ಇನ್ನೇನು ತನ್ನನ್ನೇ ಆಯ್ದುಬಿಡುತ್ತಾಳೆ ಎಂದು ಕಾತುರದಿಂದ ಕಾಯ್ದ ಒಬ್ಬ ಹುಡುಗ. ಆದರೆ, ಆ ಚೆಲುವೆ ಅವನನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳದೆ ಇನ್ನೊಬ್ಬನನ್ನು ವರಿಸಲು ಸಿದ್ಧಳಾಗುತ್ತಾಳೆ. ಆದರೆ ಆ ಇನ್ನೊಬ್ಬ ಆ ಹುಡುಗಿಯನ್ನೇ ತಿರಸ್ಕರಿಸಿಬಿಡುತ್ತಾನೆ!ತ್ರಿಕೋನ ಪ್ರೇಮಕಥೆಯಿರುವ ಯಾವುದೇ ಕನ್ನಡ ಚಿತ್ರದ ಕಥೆಯಲ್ಲ ಇದು. ಸುವರ್ಣ ಕನ್ನಡ ಟಿವಿ ಚಾನಲ್ಲಿನಲ್ಲಿ ಸ್ವಯಂವರ ಮದುವೆ ಬ್ರೋಕರಿಂಗ್ ಕಾರ್ಯಕ್ರಮದ ಕಳೆದ ವಾರದ ತಾಜಾ ತಾಜಾ ನಮೂನೆ. ಚಿತ್ರನಟಿ ರಕ್ಷಿತಾ ನಡೆಸಿಕೊಡುತ್ತಿರುವ ಈ ರಿಯಾಲಿಟಿ ಶೋದಲ್ಲಿ ರಿಯಾಲಿಟಿ ಎಂಬುದೊಂದು ಬಿಟ್ಟು ಎಲ್ಲಾ ಇದೆ.ಅಂತಿಮ ಹಂತದಲ್ಲಿ ವಧು ಸ್ಥಾನದಲ್ಲಿ ನಿಂತಿದ್ದ ಉತ್ತರ ಕರ್ನಾಟಕದ ಹುಡುಗಿ ಪ್ರಣತಿ ಎಂಬವಳ ಎದುರು ಇದ್ದದ್ದು ಬಿಜಾಪುರ ಮೂಲದ ಬಸವರಾಜ್ ಬಾವಿಕಟ್ಟಿ ಮತ್ತು ಬೆಂಗಳೂರಿನ ಹೈಫೈ ಹುಡುಗ ಕಾರ್ತಿಕ್. ಪ್ರಣತಿ ಎಲ್ಲರ ನಿರೀಕ್ಷೆಯನ್ನು ಧೂಳಿಪಟ ಮಾಡಿ ಬಸವರಾಜ್ ನನ್ನು ಬಿಟ್ಟು ಕಾರ್ತಿಕ್ ನನ್ನು ತನ್ನ ಬಾಳ ಸಂಗಾತಿಯನ್ನಾಗಿ ಆಯ್ದುಕೊಳ್ಳುತ್ತಾಳೆ. ಕಾರ್ತಿಕ್ ಸ್ಟೇಜಿನ ಮಧ್ಯಭಾಗಕ್ಕೆ ಬಂದು ಈ ಹುಡುಗಿ ನನ್ನ ಸಂಗಾತಿಯಾಗಲು ಸಾಧ್ಯವಿಲ್ಲ ಎಂದು ಮಂಗಳ ಹಾಡುತ್ತಾನೆ.ಈ ಸಂದರ್ಭದಲ್ಲಿ ಪ್ರಣತಿಯಿಂದ ತಿರಸ್ಕೃತನಾದ ಬಸವರಾಜ್, ಕಾರ್ತಿಕ್ ಗೆ ಬೇಡವಾದ ಪ್ರಣತಿ, ಜೀವಸಂಗಾತಿ ಹುಡುಕಲು ಯೋಜಿಸಿರುವ ಕಾರ್ಯಕ್ರಮಕ್ಕೆ ಬಂದು ಮದುವೆ ಆಹ್ವಾನವಿದ್ದರೂ ಮದುವೆ ಬೇಡವೆಂದ ಕಾರ್ತಿಕ್ ಮತ್ತು ಸ್ವಯಂವರದ ಕೇಂದ್ರಬಿಂದು ರಕ್ಷಿತಾ... ಇವರೆಲ್ಲಾ ಒಂದು ಕ್ಷಣ ಸ್ವಯಂವರವೆಂಬ ಪ್ರಹಸನದ ಸೂತ್ರದ ಗೊಂಬೆಗಳಿದ್ದಂತೆ ಭಾಸವಾಯಿತು.ಇಲ್ಲಿಯವರೆಗೆ ನಡೆದ ಮೂರ್ನಾಲ್ಕು ವಾರಗಳ ಪ್ರಹಸನದಲ್ಲಿ ಯಾರೂ ಜೋಡಿಯಾಗಿಲ್ಲ. ಮೊದಲ ವಾರದಲ್ಲಿ ಜೋಡಿ ನಕ್ಕಿಯಾದರೂ ತೆರೆಯ ಹಿಂದೆ ಮದುವೆ ಕಾಂಟ್ರಾಕ್ಟನ್ನು ಹುಡುಗಿಯ ತಾಯಿಯೇ ಮುರಿದಿದ್ದಳು. ಮುಂದಿನ ವಾರದಲ್ಲಿ ಹುಡುಗಿ ಯಾರನ್ನೂ ಆಯ್ದುಕೊಳ್ಳಲಿಲ್ಲ. ಕಳೆದ ವಾರದಲ್ಲಿ ಹುಡುಗಿ ಆಯ್ದುಕೊಂಡರೂ ಹುಡುಗ ಬೇಡವೆಂದ.ಕೇವಲ ಟಿ ಆರ್ ಪಿ ಏರಿಸುವ ಉದ್ದೇಶದಿಂದ ಮತ್ತು ಕೇವಲ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಮಾತ್ರ ಈ ಸ್ವಯಂವರ ನಾಟಕವನ್ನು ಆಯೋಜಿಸಲಾಗಿದೆಯೆ? ಎರಡು ವಾರಗಳ ಹಿಂದೆ ರಕ್ಷಿತಾ ಕಣ್ಣೀರು ಸುರಿಸಿದ್ದೂ ಈ ನಾಟಕದ ಒಂದು ಭಾಗವೆ? ಟಿವಿ ಪರದೆಗೆ ಕಣ್ಣು ನೆಟ್ಟು ನೋಡುವ ಪ್ರೇಕ್ಷಕರ ಮೇಲೆ ಸವಾರಿ ಮಾಡಲಾಗುತ್ತಿದೆಯೆ? ಈ ಪ್ರಶ್ನೆಗಳಿಗೆ ಸುವರ್ಣ ಟಿವಿಯೇ ಉತ್ತರ ನೀಡಲಿ.
ಬೆಳ್ಳಿತೆರೆಗೆ ಸುರೇಶ್ ಹೆಬ್ಳೀಕರ್ ಪುತ್ರ ಅಕ್ಷಯ್
ಖ್ಯಾತ ಚಿತ್ರ ನಿರ್ದೇಶಕ, ನಟ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರ ಮಗ ಅಕ್ಷಯ್ ಹೆಬ್ಳೀಕರ್ ಕಡೆಗೂ ಬೆಳ್ಳಿತೆರೆಗೆ ಅಡಿಯಿಡಲು ನಿರ್ಧರಿಸಿದ್ದಾರೆ. ಚಿತ್ರರಂಗಕ್ಕೆ ಅಡಿಯಿಡಿವುದಿಲ್ಲ ಎಂದು ಅಕ್ಷಯ್ ಸುದೀರ್ಘ ಸಮಯದಿಂದ ಪಟ್ಟು ಹಿಡಿದಿದ್ದರು. ಬೆಳ್ಳಿತೆರೆಗೆ ಅಡಿಯಿಡುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಅಕ್ಷಯ್ ಗೆ ಚಿತ್ರರಂಗಕ್ಕಿಂತಲೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ. ಈ ಹಿಂದೆ ಸಾಕಷ್ಟು ಚಿತ್ರಗಳು ಅಕ್ಷಯ್ ಅವರನ್ನು ಹುಡುಕಿಕೊಂಡು ಬಂದಿದ್ದವು. ಆದರೆ ಸಿನಿಮಾ ಎಂದರೆ ಮೂಗು ಮುರಿಯುತ್ತಿದ್ದ ಅಕ್ಷಯ್ ಬಂದ ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಬಹಳಷ್ಟು ಸಿನಿಮಾ ತಾರೆಗಳ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಆದರೆ ಸುರೇಶ್ ಹೆಬ್ಳೀಕರ್ ತಮ್ಮ ಮಗನನ್ನು ಚಿತ್ರರಂಗದಲ್ಲಿ ತೊಡಗಿಕೊಳ್ಳುವಂತೆ ಎಂದೂ ಬಲವಂತ ಮಾಡಿರಲಿಲ್ಲ.'ಬಿಲಿಯನ್ ಡಾಲರ್ ಬೇಬಿ' ಹಾಗೂ 'ಮೈಲಾರಿ' ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಸುರೇಶ್ ಹೆಬ್ಳೀಕರ್ ಗೆ ಅಕ್ಷಯ್ ಸಹಾಯ ಮಾಡುತ್ತ್ತಿದ್ದರು. ಕಡೆಗೆ ಚಿತ್ರರಂಗಕ್ಕೆ ಧುಮುಕಲು ತೀರ್ಮಾನಿಸಿದ್ದಾರೆ. ಕನ್ನಡದ ಜೊತೆಗೆ ಮಲಯಾಳಂ ಚಿತ್ರಗಳ ಬಗೆಗೂ ಅಕ್ಷಯ್ ಗೆ ಆಸಕ್ತಿಯಿದೆ. ನೃತ್ಯ ಹಾಗೂ ತಬಲಾ ಕಲಾವಿದರೂ ಅಗಿರುವ ಅಕ್ಷಯ್ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಕನ್ನ್ನಡದಲ್ಲಿ ಮಾಡಲು ತೀರ್ಮಾನಿಸಿದ್ದಾರೆ.